ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿತ್ಯ ಶಾಖೆಗಳಿಗೆ ಹೋಗುವ ಆಬಾವೃದ್ದರಾದಿಯಾದ ಸ್ವಯಂಸೇವಕರಿಗೆ ಎಂಥ ಸುಮಧುರ ಬಂಧನಾ ಸಂಘಕಿಂದು ಬಂದೆನಾ.. ಹಾಡು ಖಂಡಿತವಾಗಿಯೂ ತಿಳಿದೇ ಇರುತ್ತದೆ. ಈ ಹಾಡಿನ ಪಲ್ಲವಿ ಮತ್ತು ಚರಣಗಳಲ್ಲಿ ಬರುವ ಪ್ರತಿಯೊಂದು ಪದವೂ ಸ್ವಯಂಸೇವಕನ ಬಾಳಿನಲ್ಲಿ ಅಕ್ಷರಶಃ ಸತ್ಯವಾಗಿರುವುದಕ್ಕೆ ನನ್ನಂತಹ ಕೋಟ್ಯಾಂತರ ಸ್ವಯಂಸೇವಕರೇ ಸಾಕ್ಷಿಯಾಗಿದೆ. ಹಾಗಾಗಿ, ವಯಕ್ತಿಕವಾಗಿ ನನಗಂತೂ ಪ್ರತೀ ಬಾರಿ ಈ ಹಾಡು ಹಾಡುವಾಗಲಾಗಲೀ ಇಲ್ಲವೇ ಕೇಳುವಾಗಲೀ ಮೈ ರೋಮಾಂಚನ ಗೊಳ್ಳುತ್ತದೆ.
ಇಷ್ಟೆಲ್ಲಾ ಪೀಠಿಕೆ ಯಾಕಪ್ಪಾ? ಎಂದು ನೀವೆಲ್ಲ ಯೋಚಿಸುತ್ತಿರುವುದಕ್ಕೆ ಕಾರಣವಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣವೊಂದರಲ್ಲಿ ಕನ್ನಡ ಪತ್ರಿರಂಗದಲ್ಲಿ ಅತ್ಯಂತ ಹೆಸರುವಾಸಿಯಾಗಿರುವ ಅದರಲ್ಲೂ ಚಲನಚಿತ್ರ ಪತ್ರಿಕಾರಂಗದಲ್ಲಿ ಪ್ರಖ್ಯಾತವಾಗಿರುವುದಲ್ಲದೇ, ಅವರ ಮಕ್ಕಳು ಸೊಸೆಯಂದಿರಾದಿಯಾಗಿ ಎಲ್ಲರೂ ಕನ್ನಡ ನಾಟಕ ಮತ್ತು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಹಿರಿಯ ಲೇಖಕಿಯೊಬ್ಬರು ತಮ್ಮ ಆತ್ಮಚರಿತ್ರೆಯಲ್ಲಿ ರಾ.ಸ್ವ.ಸಂಘದ ಬಗ್ಗೆ ಬರೆದಿರುವ ಕೆಲವು ಅಪಸವ್ಯಗಳು ನಿಜಕ್ಕೂ ಮನಸ್ಸಿಗೆ ಛೇಧವೆನಿಸಿದರೂ, ವಾಮಪಂತೀಯ ಮನೋಸ್ಥಿತಿಯವರಿಂದ ಇನ್ನೇನು ಬಯಸಲು ಸಾಧ್ಯ ಎಂದೆನಿಸಿದರೂ, ತಮ್ಮ ಆತ್ಮಚರಿತೆಯ ಮಾರಾಟಕ್ಕೆ ಸುಮಾರು 100 ವರ್ಷಗಳ ಇತಿಹಾಸವಿರುವ ಈ ಸಂಘಟನೆಯ ಬಗ್ಗೆ ಈ ಪರಿಯ ಹಸೀ ಸುಳ್ಳುಗಳನ್ನು ಹೇಳುತ್ತಿರುವುದನ್ನು ಕೇಳಿಕೊಂಡು ಸುಮ್ಮನಿರಲಾಗದೇ ಈ ಲೇಖನ ಬರೆಯಬೇಕಾಯಿತು.
ನಡೆಯಲಾರದೆ ತೆವಳುತಿದ್ದೆನು ನಡಿಗೆ ಕಲಿಸಿತು ಸಂಘವು
ನುಡಿಯಲಾರದೆ ತೊದಲುತಿದ್ದೆನು ನುಡಿಯ ಉಲಿಸಿತು ಸಂಘವು
ಎನ್ನುವ ಸಾಲಿನಂತೆ 1950ರ ದಶಕದಲ್ಲಿಯೇ ಸಂಘದ ಸಂಪರ್ಕ ನಮ್ಮ ತಂದೆಯವರಿಗೆ, ಮೈಸೂರು ಮತ್ತು ತುಮಕೂರಿನಲ್ಲಿ ಆದ ನಂತರ ಕ್ರಮೇಣ ನಮ್ಮ ತಂದೆ, ಚಿಕ್ಕಂಪದಿರೂ ಸ್ವಯಂಸೇವಕರಾದ ಕಾರಣ, ನಮ್ಮ ಮನೆ ಅಪ್ಪಟ ಸಂಘದ ಮನೆ. ಹೀಗಾಗಿ ನನಗೆ ಎರಡೂವರೆ ಮೂರು ವರ್ಷವಾಗಿ ನಡೆಯಲು ಮಾತನಾಡಲು ಬರುವಷ್ಟರಲ್ಲಿಯೇ ಬೆಂಗಳೂರಿನ ಶ್ರೀರಾಮ ಪುರದ ಶ್ರೀರಾಂ ಸಾಯಂ ಶಾಖೆಗೆ ನಮ್ಮ ಚಿಕ್ಕಪ್ಪ ಕರೆದುಕೊಂಡು ಹೋದ ಕಾರಣ, ಸಂಘದ ಪ್ರಭಾವ ಶಾರೀರಿಕವಾಗಿ ಮತ್ತು ದೈಹಿಕವಾಗಿ ನನ್ನ ಜೀವನದ ಮೇಲೆ ಪರಿಣಾಮ ಬೀರಿತು.
ಪಡೆದೆ ಉನ್ನತ ಜ್ಞಾನ ಸದ್ಗುಣ ಲಭಿಸಿ ಸಜ್ಜನ ಸಂಗವು || 1 ||
ಗುರಿಯ ಅರಿಯದೆ ತಿರುಗುತ್ತಿದ್ದೆನು ಮರೆತು ತನುವಿನ ಪರಿವೆಯ
ಗುರುವು ದೊರೆಯದೆ ಮರುಗುತಿದ್ದೆನು ಪಡೆದೆ ಸದ್ಗುರು ಭಗವೆಯ
ನನಗೆ ಐದಾರು ವರ್ಷಗಳು ಆಗುವಷ್ಟರಲಿ ನಾವು ನೆಲಮಂಗಲಕ್ಕೆ ಹೋದ ನಂತರವಂತೂ ಸಂಘದ ಸಂಪರ್ಕ ಇನ್ನೂ ಹೆಚ್ಚಾಯಿತು. ನಾನು ಸಾಯಂ ಶಾಖೆ, ಅಪ್ಪಾ ರಾತ್ರಿ ಶಾಖೆಗೆ ನಿತ್ಯವೂ ತಪ್ಪದೇ ಹೋಗುತ್ತಿದ್ದಾಗ ನಿಧಾನವಾಗಿ ಶಾಖೆಯಲ್ಲಿ ಹೇಳಿಕೊಡುತ್ತಿದ್ದ ಹಾಡುಗಳು, ಅಮೃತವಚನ, ಶ್ಲೋಕಗಳಿಂದಾಗಿ ನನ್ನ ಬೌದ್ಧಿಕ ವಿಕಸನವಾಗ ತೊಡಗಿತು.
ತಾಯೇ ಭಾರತೀ ನಿನ್ನ ಮೂರುತೀ.. ಎದೆಯ ಗುಡಿಯಲಿಟ್ಟು ಭಜಿಪೆ ದ್ವಲಿಪನಾರತಿ
ಹಿಮಗಿರಿ ಎಲ್ಲಿನ ಉನ್ನತ ಶಿಖರ ಕನ್ಯಾಕುಮರಿಯ ಹಿಂದು ಸಾಗರ ಹಾಡುಗಳು ನನ್ನಲ್ಲೀ ದೇಶಭಕ್ತಿಯನ್ನು ಮೂಡಿಸ ತೊಡಗಿತು
ಸಾಲವನು ಕೊಂಬಾಗ ಹಾಲೋಗ ರುಂಡಂತೆ, ಸಾಲಿಗನು ಬಂದು ಸೆಳೆವಾಗ ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ ಎಂಬ ಶ್ಲೋಕವನ್ನು ಕೇಳುತ್ತಿದ್ದಂತೆಯೇ ಸಮಾಜದಲ್ಲಿ ಸ್ವಾಭಿಮಾನಿಯಾಗಿ ಹೇಗೆ ಜೀವಿಸಬೇಕು ಎನ್ನುವುದರ ಪಾಠವನ್ನು ಅರಿವಿಲ್ಲದ ಗುರುವಾಗಿ ಸಂಘಸ್ಥಾನದಲ್ಲಿ ಕಲಿತುಕೊಳ್ಳತೊಡಗಿದೆ.
ದಾರಿ ದೀಪದ ತೆರದಿ ಬೆಳಗಿಹ ವೀರಪುರುಷರ ಚರಿತೆಯ || 2 ||
ಶುದ್ಧಶೀಲಕೆ ಬದ್ಧನಾಗಿ ಪ್ರಬುದ್ಧನಾಗಿ ಬೆಳೆದೆನು
ಬುದ್ಧಶಂಕರ ಮಧ್ವ ಬಸವರ ಅಂಶವನು ಮೈ ತಳೆದೆನು
ಕೆಲ ವರ್ಷಗಳ ನಂತರ ಬೆಂಗಳೂರಿನಲ್ಲಿ ಅಪ್ಪನ ಬಿಇಎಲ್ ಕಾರ್ಖಾನೆಯ ಬಳಿಗೆ ಮನೆಯನ್ನು ಬದಲಿಸಿದಾಗ, ಆ ಸಮಯದಲ್ಲಿ ಅಲ್ಲಿ ಸಂಘದ ಶಾಖೆ ಇಲ್ಲದಿದ್ದಾಗ, ಏಳೆಂಟು ವರ್ಷದ ಬಾಲಕನಾಗಿದ್ದ ನಾನೇ ಕೆಲವು ಹುಡುಗರನ್ನು ಜೋಡಿಸಿಕೊಂಡು ಶಾಖೆಯನ್ನು ಆರಂಭಿಸುವಷ್ಟರ ಮಟ್ಟಿಗೆ ನಾಯಕತ್ವದ ಗುಣವನ್ನು ಸಂಘ ಕಲಿಸಿಕೊಟ್ಟಿತ್ತು. ಇದೇ ಸಮಯದಲ್ಲಿ ನನ್ನ ತಂಗಿಯರೂ ಪ್ರತೀ ದಿನವೂ ನನ್ನ ಜೊತೆಗೇ ಸಂಘಸ್ಥಾನಕ್ಕೆ ಬರುತ್ತಿದ್ದ ಕಾರಣ, ಅವರಿಗೂ ಸಹಾ ಶಾಖೆಯಲ್ಲಿ ಹೇಳಿಕೊಡುತ್ತಿದ್ದ ಏಕಾತ್ಮತಾ ಸ್ತ್ರೋತ್ರ, ಹಾಡು, ಶ್ಲೋಕಗಳು, ಅಮೃತವಚನಗಳು ಕಂಠಸ್ಥವಾಗಿದ್ದಲ್ಲದೇ, ಶಾಖೆಗಳಿಗೆ ಪ್ರವಾಸಕ್ಕೆ ಬರುತ್ತಿದ್ದ ಹಿರಿಯ ಕಾರ್ಯಕರ್ತರುಗಳು ಹೇಳುತ್ತಿದ್ದ ಕಥೆಗಳ ಮೂಲಕ ಪಠ್ಯ ಪುಸ್ತಕಗಳಲ್ಲಿ ಓದಿರದಿದ್ದ ವೀರ ಸಾವರ್ಕರ್, ಆಜಾದ್, ಭಗತ್ ಸಿಂಗ್, ತಿಲಕರಂತಹ ಸ್ವಾತಂತ್ರ್ಯ ಹೋರಾಟಗಾರರ ಪರಿಚಯ ನಮ್ಮೆಲ್ಲರಿಗೂ ಆಗತೊಡಗಿದ್ದಲ್ಲದೇ, ಶ್ಲೋಕ ಮತ್ತು ಅಮೃತವಚನಗಳ ಮೂಲಕ ಆಚಾರತ್ರಯರಾದ ಶಂಕರಾಚಾರ್ಯರು, ಮಧ್ವಾಚಾರ್ಯರು, ರಾಮಾನುಜಾಚಾರ್ಯರುಗಳು ಅಲ್ಲದೇ ಸರ್ವಜ್ಞ, ಬಸವಣ್ಣ, ಅಕ್ಕಮಹಾದೇವಿಯವರ ವಚನಗಳು ಕಂಠಸ್ಥವಾಗುವ ಮೂಲಕ ಅವರ ಆದರ್ಶಗಳು ನಮ್ಮ ಜೀವನದ ಮೇಲೆ ಪ್ರಭಾವ ಬೀರತೊಡಗಿದವು.
ಜನುಮ ಜನುಮದ ಮೌಢ್ಯ ಭ್ರಾಂತಿಯ ಕಲುಷವೆಲ್ಲವ ತೊಳೆದೆನು || 3 ||
ದೇಶಕಾರ್ಯವೆ ಈಶ ಕಾರ್ಯವು ಎನುವ ತತ್ವವು ಶಾಶ್ವತ
ಪೂಜ್ಯ ಕೇಶವ ಪೂಜ್ಯ ಮಾಧವ ಚರಣವಿರಚಿತ ಸತ್ಪಥ
ನಾಶವಾಯಿತು ಮೋಹಪಾಶವು ಮಾತೆಗೆಲ್ಲ ಸಮರ್ಪಿತ
ಇನ್ನು ಶಾಖೆಯಲ್ಲಿ ಯಾವುದೇ ಜಾತಿ ಮತಗಳ ಬೇಧವಿಲ್ಲದೇ ಎಲ್ಲರೂ ಕೂಡಿ ಅಟವಾಡುವುದು, ವ್ಯಾಯಾಮ ಮಾಡುವುದು, ಒಟ್ಟಿಗೆ ಒಂದೇ ಗಣವೇಶ ಧರಿಸಿಕೊಂಡು ಹೆಗಲು ಹೆಗಲು ಹೆಜ್ಜೆ ಹೆಜ್ಜೆ ಜೋಡಿಗೂಡಿ ನಡೆಯುವಾ ಯುಗದ ಹಣೆಯ ಬರಹ ತಿದ್ದಿ ಹಗೆಯಕುಲವ ತೊಡೆಯುವಾ … ಎನ್ನುವಂತೆ ಹೊರಟಿದೋ ಅಜಿಂಕ್ಯ ಸೇನೆ ರಾಷ್ಟ್ರಕಿದುವೇ ರಕ್ಷಣೆ ಎನ್ನುವಂತೆ ಶಿಸ್ತಿನಿಂದ ಪಥಸಂಚಲನ ಮಾಡುವ ಮೂಲಕ ನಾವೆಲ್ಲಾ ಹಿಂದೂ, ನಾವೆಲ್ಲಾ ಒಂದು ಎಂಬ ಘೋಘಣೆಗೆ ಅನ್ವರ್ಥವಾಗಿ ಸಾಮರಸ್ಯತೆಯಿಂದ ನಡೆಯುವಂತಾಯಿತು.
ಸಾಮಾನ್ಯವಾಗಿ ಸಂಘದಲ್ಲಿ ಯಾರೂ ಸಹಾ ಎಂದೂ ಸಹಾ ನೀನು ಅದು ಮಾಡು ನೀನು ಇದು ಮಾಡು ಎಂದು ಹೇಳುವುದನ್ನು ಕೇಳಿಯೇ ಇಲ್ಲ. ಅಲ್ಲಿ ನಾವೆಲ್ಲರೂ ಹೀಗೆ ಮಾಡೋಣ, ನಾವೆಲ್ಲರು ಹಾಗೆ ಮಾಡೋಣ ಎನ್ನುವ ಮೂಲಕ ಸಂಘದ ಅನುಶಾಸನಕ್ಕೆ ಸಂಘಸ್ಥಾನದಲ್ಲಿ ಇರುವವರೆಲ್ಲರೂ ಬದ್ಧರಾಗುರಾಗುತ್ತಾರೆ ಎನ್ನುವುದುನಮಗೆ ಅರಿವಿಲ್ಲದಂತೆಯೇ ರಕ್ತಗತವಾಗಿ ಹೋಗುತ್ತದೆ. ಹಾಗಾಗಿಯೇ, 14-16 ವರ್ಷದ ಮುಖ್ಯ ಶಿಕ್ಷಕ್ ಕೊಟ್ಟ ಆಜ್ಞೆಗೆ 70ವರ್ಷದ ಸಂಘದ ಸರಸಂಘಚಾಲಕರ ಆದಿಯಾಗಿ ಪ್ರತಿಯೊಬ್ಬರೂ ಸ್ಪಂದಿಸುವ ಗುಣ ಬಹುಶಃ ಸಂಘದಲ್ಲಿ ಅಲ್ಲದೇ ಬೇರೆಲ್ಲೂ ಕಾಣಲಾಗದು ಎಂದರೆ ಅತಿಶಯವೆನಿಸದು.
ಇನ್ನು ತರುಣಾವಸ್ಥೆಗೆ ಬರುವಷ್ಟರಲ್ಲಿ ಸಂಘ ಶಿಕ್ಷಾವರ್ಗ ಮತ್ತು ವಿವಿಧ ಶಿಬಿರಗಳಲ್ಲಿ ಭಾಗವಹಿಸುವ ಮೂಲಕ ಯಾವ ಶಾಲಾ ಕಾಲೇಜಿನಲ್ಲಿಯೂ ಕಲಿಸಿಕೊಡದಂತಹ ನಮಗೆ ಅರಿವಿಲ್ಲದಂತೆಯೇ ಸ್ವಾವಲಂಭಿಗಳಾಗಿ ನಮ್ಮ ಕೆಲಸಗಳನ್ನು ನಾವು ಮಾಡುವುದನ್ನು ಕಲಿತುಕೊಳ್ಳುವುದಲ್ಲದೇ, ಬೇರೆ ಬೇರೆ ಊರುಗಳಿಂದ ಬಂದಿರುವವರೊಂದಿಗೆ ಸುಲಭವಾಗಿ ಒಗ್ಗೂಡುವ ಗುಣ, ಸಂಘಸ್ಥಾನದಲ್ಲಿ ದೇಸೀ ಆಟಗಳನ್ನು ಆಡುವಾಗ ಮತ್ತು ಆಟಗಳನ್ನು ಆಡಿಸುವಾಗ ತೆಗೆದುಕೊಳ್ಳುವ ನಿರ್ಧಾರ ಮೂಲಕ ನಾಯಕತ್ವದ ಗುಣ ತಂಡದ ನಿರ್ವಹಣೆ, ಸಂವಹನ ಕಲೆ, ಇನ್ನು ಬೌದ್ಧಿಕ್ ಮತ್ತು ಬೌಠಕ್ ಗಳ ಭಾಷಣ ಕಲೆಯ ಜೊತೆಗೆ ಉತ್ತಮ ಮಾತುಗಾರಿಕೆ ಕಲೆ ನಮಗೆ ಕರಗತವಾಗಿ ಹೋಗುತ್ತದೆ. ಇನ್ನು ನಮಗೆ ಸಂಗೀತದ ಕಡೆ ಆಸಕ್ತಿ ಇದ್ದಲ್ಲಿ, ಸಂಘದ ಘೋಷ್ ವಿಭಾಗದಲ್ಲಿ ನಮ್ಮ ಅಭಿರುಚಿಗೆ ತಕ್ಕಂತೆ ತಾಳವಾದ್ಯ, ಶಂಖ, ವಂಶಿ ಹೀಗೆ ಹತ್ತು ಹಲವಾರು ವಾದ್ಯಗಳನ್ನು ಕಲಿತುಕೊಂಡು ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕರಾಗಿರುವ ಎಷ್ಟೋ ಸ್ವಯಂಸೇವರಿದ್ದಾರೆ
ಸಂಘದಲ್ಲಿ ಕಲಿಯುವ ಸಮಯ ಪ್ರಜ್ಞೆ, ಶಿಸ್ತು, ಸಂಯಮ ಸಮಾಜ ಸೇವೆ ದೇಶಭಕ್ತಿಗಳ ಬಗ್ಗೆ ಒಂದೆರಡು ಉದಾಹರಣೆಯನ್ನು ಹೇಳಲೇ ಬೇಕು.
ದೇಶದ ಯಾವುದೇ ಮೂಲೆಯಲ್ಲಿ ಯಾವುದೇ ರೀತಿಯ ಅವಘಡಗಳು ಸಂಭವಿಸಿದಲ್ಲಿ ಸರ್ಕಾರೀ ಸೇವೆಗಳು ಆಲ್ಲಿ ಆರಂಭವಾಗುವುದಕ್ಕೂ ಮುನ್ನವೇ ಸಂಘದ ಸ್ವಯಂಸೇವಕರು ಸದ್ದಿಲ್ಲದೇ ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುವ ಎನ್ನುವಂತೆ ಸೇವಾ ನಿರತರಾಗಿರುವುದನ್ನು ಮಾಧ್ಯಮಗಳಲ್ಲಿ ತೋರಿಸದಿದ್ದರು ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ನೋಡ ಬಹುದಾಗಿದೆ
- ಅದೊಂದು ಬಡಾವಣೆಯಲ್ಲಿ ಸಾಯಂ ಶಾಖೆ ಪ್ರತೀ ನಿತ್ಯವೂ 5:30ಕ್ಕೆ ಆರಂಭವಾಗುತ್ತಿತ್ತು. ಸಂಘಸ್ಥಾನದ ಎದುರಿಗೇ ಇದ್ದ ವಯೋವೃದ್ಧ ದಂಪತಿಗಳು 5:30ಕ್ಕೆ ಮುಖ್ಯ ಶಿಕ್ಷಕ್ ಸೀಟಿ ಹಾಕಿದಾಗ ತಮ್ಮ ಮನೆಯ ಹೊರಗಡೆ ಖುರ್ಚಿಯಲ್ಲಿ ಕುಳಿತು ಶಾಖೆಯಲ್ಲಿ ಆಡುತ್ತಿದ್ದ ಮಕ್ಕಳನ್ನು ನೋಡುತ್ತಿದ್ದರಂತೆ. ಅದೊಮ್ಮೆ ಸೀಟಿಯನ್ನು ಮನೆಯಿಂದ ತರಲು ಮರೆತಿದ್ದ ಮುಖ್ಯಶಿಕ್ಷಕ್ ಆಜ್ಞೆಗಳ ಮೂಲಕಕವೇ ಶಾಖೆ ಆರಂಭಿಸಿದ್ದ. ಇದೇನಿದೂ ಇಷ್ಟು ಹೊತ್ತಾದರೂ ಶಾಖೆಯ ಸೀಟಿಯೇ ಕೇಳಿಸಲಿಲ್ಲವಲ್ಲಾ ಎಂದು ಸಂಘಸ್ಥಾನಕ್ಕೆ ಆ ವೃದ್ಧರು ಸೀಟಿ ಹಾಕದ ಕಾರಣವನ್ನು ವಿಚಾರಿಸಿಕೊಂಡು ಹೋಗಿ, ನೀವು ಸಮಯಕ್ಕೆ ಸರಿಯಾಗಿ ಹಾಕುವ ಸೀಟೀಯಿಂದಲೇ ನಾನು ಮಧ್ಯಾಹ್ನದ ನಿದ್ದೆಯಿಂದ ಎದ್ದು ಶಾಖೆ ನಡೆಯುವುದನ್ನು ನೋಡಿ ಸಂತೋಷ ಪಡುತ್ತೇವೆ ಎಂದಿದ್ದರಂತೆ.
- ಕೆಲವರ್ಷಗಳ ಹಿಂದೆ ಹೊಸದಾಗಿ ಕೆಲಸಕ್ಕೆ ಸೇರಿಕೊಂಡಿದ್ದ ಸಮಯದಲ್ಲಿಯೇ ಗಣರಾಜ್ಯೋತ್ಸವವನ್ನು ಆಚರಿಸಿ ಅದರಲ್ಲಿ ಧ್ವಜಾರೋಹಣ ಮಾಡಿ ಕೆಲವು ಹಿಂದೀಹಾಡುಗಳನ್ನು ಹಾಡುವ ಮತ್ತು ಅದಕ್ಕೆ ನೃತ್ಯವನ್ನು ಮಾಡಿ ಕಾರ್ಯಕ್ರಮವನ್ನು ಮುಗಿಸಿದ್ದನ್ನು ನೋಡಿ ಅರೇ ಭಾರತಮಾತೆಗೆ ಒಂದು ಘೋಘಣೆಯೇ ಇಲ್ಲವಲ್ಲಾ ಎಂಬ ಜಾಗೃತಿ ನನ್ನಲ್ಲಿ ಮೂಡಿ ಎಂದಿನಂತೆ ಬೋಲೋ….. ಭಾರತ್…… ಮಾತಾ….ಕೀ…ಎಂದು ಘೋಷಣೆ ಹಾಕಿದಕ್ಕೆ ಜೈ … ಎಂದು ನೆರೆದಿದ್ದವರೆಲ್ಲರೂ ಪ್ರತಿಸ್ಪಂದನೆ ನಡೆಸಿದ್ದಲ್ಲದೇ ಕಾರ್ಯಕ್ರಮ ಮುಗಿದ ಕೆಲವೇ ಸೆಕೆಂಡುಗಳಲ್ಲಿ ಮೂರ್ನಾಲ್ಕು ಸಹೋದ್ಯೋಗಿಗಳು ಬಂದು ನೀವು ಸ್ವಯಂ ಸೇವಕರು ಎಂದು ಗೊತ್ತೇ ಇರ್ಲಿಲ್ಲಾ ಎಂದರು. ನಾನು ಸ್ವಯಂಸೇವಕ ಎಂದು ನಿಮಗೆ ಹೇಗೆ ತಿಳಿಯುತು? ಎಂದು ಕೇಳಿದಾಗ, ಅರೇ ಇದೇನ್ ಸಾರ್ ಹೀಗೆ ಹೇಳ್ತೀರಿ? ಭಾರತ ಮಾತೆಗೆ ಜೈ ಮತ್ತು ವಂದೇ ಮಾತರಂನ್ನು ಸಂಘದವರು ಬಿಟ್ಟರೆ ಮತ್ತಾರು ಹೇಳುವುದಿಲ್ಲ ಎಂದಾಗ ಆಶ್ಚರ್ಯ ಮತ್ತು ಖೇದ ಎರಡೂ ಒಟ್ಟಿಗೆ ಮೂಡಿತು.
- ಕೆಲ ತಿಂಗಳುಗಳ ಹಿಂದೆ ರಾಮಜನ್ಮಭೂಮಿ ನಿಧಿ ಸಂಗ್ರಹಣಕ್ಕೆ ಮನೆ ಮನೆಗಳಿಗೆ ಹೋಗಿದ್ದಾಗ, ಅದೊಂದು ಮನೆಯಲ್ಲಿದ್ದ ವಯೋವೃದ್ಧ ಅಜ್ಜಿಯೊಬ್ಬರು ನಾವು ಸಂಘದ ಕಡೆಯಿಂದ ರಾಮ ಮಂದಿರ ಕಟ್ಟಲು ನಿಧಿ ಸಂಗ್ರಹಕ್ಕೆ ಬಂದಿದ್ದೇವೆ ಎಂದು ಕೇಳಿ ಸಂತೋಷದಿಂದ ತಮ್ಮ ಕಿವಿಯಲ್ಲಿದ್ದ ಚಿನ್ನದ ಓಲೆಗಳನ್ನು ಮತ್ತು ದೇವರ ಮನೆಯಲ್ಲಿದ್ದ ಬೆಳ್ಳಿಯ ಬಟ್ಟಲೊಂದನ್ನು ತಮ್ಮ ಸೊಸೆಯ ಮೂಲಕ ನಮಗೆ ಕೊಡಿಸಿ ಇದನ್ನು ಮಾರಿ ಇದರಿಂದ ಬರುವ ಹಣವನ್ನು ರಾಮ ಮಂದಿರದ ನಿಧಿ ಸಂಗ್ರಹಕ್ಕೆ ಅರ್ಪಿಸಿಕೊಳ್ಳಬೇಕೆಂದು ಕೋರಿದರು. ಅಜ್ಜೀ ನಾವು ಹಣವಲ್ಲದೇ ಬೇರೇ ಏನನ್ನೂ ತೆಗೆದುಕೊಳ್ಳುವುದಿಲ್ಲ. ಹೀಗೆ ಯಾರು ಬಂದರೂ ಈ ರೀತಿಯಾಗಿ ಕೊಡಬೇಡಿ ಎಂದು ಹೇಳಿದಾಗ, ನಮ್ಮನ್ನೊಮ್ಮೆ ದುರುಗುಟ್ಟಿ ನೋಡಿದ ಅಜ್ಜಿ ನಾನು ಕೊಡ್ತಾ ಇರೋದು ಸಂಘದ ಸ್ವಯಂಸೇಕರಿಗೆ. ಸಂಘದ ಸ್ವಯಂಸೇವರೆಂದೂ ಮೋಸ ಮಾಡಲಾರರು ಎನ್ನುವುದು ನನಗೆ ಚೆನ್ನಾಗಿ ಗೊತ್ತಿದೆ. ಏಕೆಂದರೆ ನಮ್ಮ ಮನೆಯವರೂ 50-60ರ ದಶಕದಿಂದಲೂ ಶಾಖೆಗೆ ಹೋಗುತ್ತಿದ್ದರು. ನಮ್ಮದು ಸಂಘದ ಮನೆ ಎಂದಾಗ ನಮಗೆಲ್ಲರಿಗೂ ಆಶ್ವಯವಾಗಿತ್ತು.
- ಕೆಲ ವಾರಗಳ ಹಿಂದೆ ಬಾಲಗೋಕುಲವೊಂದರಲ್ಲಿ ಸಣ್ಣ ಮಕ್ಕಳಿಗೆ ಬೌದ್ಧಿಕ್ ಮಾಡಲು ಕರೆದಿದ್ದರು. ಸಭಾಂಗಣದ ಹೊರಗೆ ಸುಮಾರು 50-60 ಮಕ್ಕಳು ಸಾಲಾಗಿ ಶಿಸ್ತಿನಲ್ಲಿ ಚಪ್ಪಲಿಗಳನ್ನು ಜೋಡಿಸಿದ್ದನ್ನು ನೋಡಿ ಸಂತೋಷದಿಂದ ಬೌದ್ಧಿಕ್ ಮೊದಲು ಇದರ ಕುರಿತಂತೆ ಕೇಳಿದಾಗ ಮೂರ್ನಾಲ್ಕು ವಾರಗಳ ಹಿಂದಿನ ಬೌದ್ಧಿಕ್ಕಿನಲ್ಲಿ ಅನುಶಾಸನದ ಬಗ್ಗೆ ಹೇಳಿಕೊಟ್ಟಿದ್ದನ್ನು ಯಥಾವತ್ತಾಗಿ ಆ ಮಕ್ಕಳು ಜಾರಿಗೆ ತಂದಿದ್ದಲ್ಲದೇ, ಅದೇ ಪದ್ದತಿಯನ್ನು ತಮ್ಮ ಮನೆಗಳಲ್ಲಿಯೂ ಅಳವಡಿಸಿಕೊಂಡಿದ್ದೇವೆ ಎಂದು ತಿಳಿಸಿದಾಗ ಎಂಥ ಸುಮಧುರ ಬಂಧನಾ ಸಂಘಕಿಂದು ಬಂದೆನಾ.. ಹಾಡು ನೆನಪಾಗಿದ್ದಂತೂ ಸುಳ್ಳಲ್ಲ.
ಹೀಗೆ ಸಂಘದ ಬಗ್ಗೆ ಹೇಳುತ್ತಾ ಹೋದಲ್ಲಿ ಪುಟಗಟ್ಟಲೇ ಬರೆಯಬಹುದೇನೋ? ಈ ದೇಶಕ್ಕೆ ಸಂಘದ ಕೊಡುಗೆ ಏನು? ಎಂದು ಕೇಳಿದವರಿಗೆ ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ಈ ದೇಶದ ರಾಷ್ಟ್ರಪತಿಗಳು, ಉಪರಾಷ್ತ್ರಪತಿಗಳು, ಪ್ರಧಾನ ಮಂತ್ರಿಗಳು, 20ಕ್ಕೂ ಹೆಚ್ಚಿನ ರಾಜ್ಯದ ಮುಖ್ಯಮಂತ್ರಿಗಳು, 300 ಕ್ಕೂ ಹೆಚ್ಚಿನ ಸಾಂಸದರು, ವಿವಿಧ ರಾಜ್ಯಗಳ ಸಾವಿರಾರು ಶಾಸಕರು, ನಗರ ಸಭಾ ಸದಸ್ಯರುಗಳು, ಗ್ರಾಮ ಪಂಚಾಯಿತಿ ಸದಸ್ಯರನ್ನು ನೀಡಿದೆ ಎಂದು ಗೌರವದಿಂದ ಅಷ್ಟೇ ಗರ್ವದಿಂದ ಹೇಳಿಕೊಳ್ಳಬಹುದು. ಇದಲ್ಲದೇ ಸಂಘದ ಸ್ವಯಂಸೇವಕರಿಂದು ದೇಶ ವಿದೇಶಗಳಲ್ಲಿ ವಿವಿಧ ಸ್ಥರಗಳಲ್ಲಿ ಅತ್ಯಂತ ದೊಡ್ಡ ಹುದ್ದೆಗಳನ್ನು ಜವಾಬ್ಧಾರಿಯುತವಾಗಿ ನಿಭಾಯಿಸುತ್ತಿದ್ದಾರೆ.
ತಿಳಿದೋ ತಿಳಿಯದೋ ಸಂಘದ ಸ್ವಯಂಸೇವಕರು ವಯಕ್ತಿಕ ಕಾರಣಗಳಿಂದ ತಪ್ಪುಗಳನ್ನು ಮಾಡಿರಬಹುದು ಆದರೆ ಸಂಘದ ಸ್ವಯಂಸೇವಕರೆಂದೂ ದೇಶದ್ರೋಹಿಯಾಗಿಲ್ಲ ಮತ್ತು ಆಗುವುದೂ ಇಲ್ಲಾ ಎನ್ನುವುದು ಸೂರ್ಯಚಂದ್ರರಷ್ಟೇ ಸತ್ಯ ಎನ್ನುವುದನ್ನು ಸಂಘವನ್ನು ದ್ವೇಷಿಸುವವರೂ ಒಪ್ಪಿಕೊಳ್ಳುತ್ತಾರೆ.
ಈ ಮೇಲೆ ತಿಳಿಸಿದ್ದೆಲ್ಲವೂ ನನ್ನ 50 ವರ್ಷಗಳ ಸ್ವಂತ ಅನುಭವವಾಗಿದ್ದು ನನ್ನಂತಹ ಕೋಟ್ಯಾಂತರ ಸ್ವಯಂಸೇವಕರನ್ನು ಕಳೆದ 96 ವರ್ಷಗಳಿಂದಲು ಸಂಘ ಈ ದೇಶಕ್ಕೆ ತಯಾರು ಮಾಡಿಕೊಟ್ಟಿದೆ. ಹಾಗಾಗಿ ಇನ್ನು ಮುಂದೆ ಯಾರೇ ಆಗಲೀ ಸಂಘದ ಬಗ್ಗೆ ಪೂರ್ವಾಗ್ರಹ ಪೀಡಿತರಾಗಿ ಏನೇನೋ ಬಡಬಡಿಸುವ ಮುನ್ನಾ ದಯವಿಟ್ಟು ಕೆಲ ದಿನಗಳ ಕಾಲ ಸಂಘಕ್ಕೆ ಬಂದು ಸಂಘದ ಚಟುವಟಿಕೆಗಳನ್ನು ನೋಡಿ ಆನಂತರ ಅದರ ಬಗ್ಗೆ ಮಾತನಾಡುವುದು ಒಳಿತು ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ನಿಮ್ಮ ಮಾತು ಸತ್ಯ. ಅಜ್ಞಾನಿಗಳು ಪೂರ್ವಾಗ್ರಹ ಪೀಡಿತರು ಜಾತ್ಯಾತೀತ ಗೊ ಮುಖ ವ್ಯಾಘ್ರರಿಂದ ಇನ್ನೇನು ನಿರೀಕ್ಷಿಸಲು ಸಾದ್ಯ? ಇಂತಹ ಅಜ್ಞಾನಿಗಳಿಂದಲೇ ದೇಶದ್ರೋಹಿಗಳ ಸಂಖ್ಯೆ ಉಲ್ಬಣ ಗೂಳ್ಳುತ್ತಲಿದೆ. ಹಿಂದು ಜಾತ್ಯಾತೀತ ಭ್ರಮೆಯಿಂದ ಹೊರ ಬಂದಾಗಲೇ ನಮ್ಮ ಸನಾತನಧರ್ಮ ದೇಶದ ಉಳಿವು.
LikeLiked by 2 people
[…] ಎಂಥ ಸುಮಧುರ ಬಂಧನಾ ಸಂಘಕಿಂದು ಬಂದೆನಾ.. […]
LikeLike