ಅದು ಎಪ್ಪತ್ತರ ದಶಕ ನಾನು ಸರ್ಕಾರೀ ಪ್ರಾಥಮಿಕ ಶಾಲೆಯ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದಾಗ, ನಮ್ಮ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದ ರುಕ್ಮಿಣಿಯ ಮಗ ಉಮೇಶ, ನನ್ನ ಕೂದಲು ಕತ್ತರಿಸುತ್ತಿದ್ದ ನವೀನ್ ಸಲೂನ್ ಅಂಗಡಿಯವರ ಮಗ ನವೀನ, ನಾಗರಾಜ ಶೆಟ್ಟರ ಮಗ ರಂಗನಾಥ, ಸೈಕಲ್ ಶಾಪ್ ಶಫಿಯವರ ಮಗ ಅಬ್ದುಲ್ಲಾ ಎಲ್ಲರೂ ಒಟ್ಟಿಗೇ ಒಂದೇ ತರಗತಿಯಲ್ಲಿ ಪಕ್ಕ ಪಕ್ಕದಲ್ಲಿಯೇ ಕುಳಿತುಕೊಂಡು ಓದುತ್ತಿದ್ದೆವು. ಅಮ್ಮಾ ಬಟ್ಟೆ ಹಾಕಿ ಎಣ್ಣೆ ಹಚ್ಚಿ ಬೈತಲೆ ತೆಗೆದು ಕೂದಲು ಬಾಚಿದರೆ ಹೆಗಲ ಮೇಲೊಂದು ಹಡಪ, ಆ ಹಡಪದಲ್ಲಿ ಸ್ಲೇಟು ಬಳಪ, ಮಗ್ಗೀ ಪುಸ್ತಕದ ಜೊತೆ ಓದಲು ಪುಸ್ತಕ ಇಟ್ಟುಕೊಂಡು, ಹುಟ್ಟಿದ ಹಬ್ಬಕ್ಕೆ ಅಪ್ಪಾ ಉಡುಗೊರೆಯಾಗಿ ಕೊಡಿಸಿದ್ದ ಹವಾಯ್ ಚಪ್ಪಲಿ ಹಾಕಿಕೊಂಡು ಸಂತೋಷದಿಂದ ಶಾಲೆಗೆ ಹೋಗುತ್ತಿದ್ದೆ.
ತರಗತಿಯ ಒಳಗೆ ಹೋಗುವ ಮುನ್ನಾ ತರಗತಿಯ ಹೊರಗೆ ಚಪ್ಪಲಿ ಬಿಟ್ಟು ಸಾಲಾಗಿ ಜೋಡಿಸಿಡ ಬೇಕಾಗುತ್ತಿತ್ತು. ತರಗತಿ ಎನ್ನುವುದು ಶಾರದಾ ಮಾತೆಯ ಮಂದಿರ. ಅಲ್ಲಿಗೆ ಚಪ್ಪಲಿ ಹಾಕಿಕೊಂಡು ಹೋಗಬಾರದು ಎನ್ನುವುದನ್ನು ನಮ್ಮ ಶಿಕ್ಷಕರು ಹೇಳುತ್ತಿದ್ದದ್ದು ಇನ್ನೂ ಹಚ್ಚ ಹಸಿರಾಗಿಯೇ ಇದೆ. ಮಧ್ಯಾಹ್ನ ಊಟಕ್ಕೆ ಬಿಟ್ಟಾಗ ಅವರವರ ಮನೆಗೆ ಹೋಗಿ ಊಟ ಮಾಡಿಕೊಂಡು ಮತ್ತೆ ಶಾಲೆಗೆ ಬರುತ್ತಿದ್ದೆವು. ಆಗ ಇವತ್ತಿಗಿಂತಲೂ ಬಡತನವಿತ್ತಾದರು ನಾವೆಲ್ಲರೂ ಶಾಲೆಗೆ ಹೋಗುತ್ತಿದ್ದದ್ದು ಕೇವಲ ವಿದ್ಯಾ ಬುದ್ಧಿಯನ್ನು ಕಲಿಯುವ ಸಲುವಾಗಿ. ನಮ್ಮ ಪಕ್ಕ ಕೂರುತ್ತಿದ್ದ ಹುಡುಗನ ಜಾತಿ, ಮತ, ಕುಲವಾಗಲೀ ಆತ ಹಾಕಿಕೊಳ್ಳುವ ಬಟ್ಟೆಯಾಗಲೀ, ಆತ ಬರೀಗಾಲಿನಲ್ಲಿ ಬಂದರೂ ನಮಗೆ ಯಾವುದೇ ರೀತಿಯ ಭಾವನೆಗಳು ಮೂಡದೇ, ಕೇವಲ ಜ್ಞಾನಾರ್ಜನೆಗೆ ಮಾತ್ರವೇ ಶಾಲೆಗೆ ಹೋಗುತ್ತಿದ್ದವೆಯೇ ಹೊರತು ಬೇರಾವುದೇ ಉದ್ದೇಶಗಳು ಇರಲಿಲ್ಲ.
ಎಂಭತ್ತರ ಆರಂಭದಲ್ಲಿ, ಅಲ್ಲೊಂದು ಇಲ್ಲೊಂದು ಆಂಗ್ಲ ಮಾಧ್ಯಮದ ಖಾಸಗೀ ಶಾಲೆಗಳು ಆರಂಭವಾಗಿ ಮಕ್ಕಳು ಒಂದೇ ರೀತಿಯ ಸಮವಸ್ತ್ರ ಧರಿಸಿ ಟಸ್ ಪುಸ್ ಎಂದು ಇಂಗ್ಲೀಶ್ ಮಾತನಾಡುತ್ತಾ ಅಮ್ಮಾ ಅಪ್ಪಾ ಜಾಗದಲ್ಲಿ, ಡ್ಯಾಡೀ ಮಮ್ಮೀ ಮಾತನಾಡ ತೊಡಗಿದರೋ ಇದ್ದಕ್ಕಿದ್ದಂತೆಯೇ ನಮ್ಮ ರಾಜಕಾರಣಿಗಳಿಗೆ ಸರ್ಕಾರಿ ಶಾಲೆಯ ಮಕ್ಕಳಲ್ಲಿಯೂ ಸಮಾನತೆ ಬರಲಿ ಎನ್ನುವ ಉದ್ದೇಶದಿಂದ ಸಮವಸ್ತ್ರಗಳನ್ನು ಕೊಡಬೇಕು ಎನ್ನುವ ಮನಸ್ಸು ಮೂಡಿದ್ದು ನಿಜಕ್ಕೂ ಸದ್ಭಾವನೆಯಿಂದ ಕೂಡಿತ್ತು. ಆದೇ ರೀತಿ ನೂರಾರು ಮಕ್ಕಳು ಹಸಿದುಕೊಂಡು ಶಾಲೆಗೆ ಬರುತ್ತಾರೆ. ಬಡತನದಿಂದಾಗಿ ಪೌಷ್ಠಿಕ ಆಹಾರ ದೊರೆಯದೇ, ಸೋರಗಿ ಹೋಗಿರುವುದರಿಂದ ಮಕ್ಕಳಿಗೆ ಬಿಸಿ ಊಟ ಕೊಡುವ ಪದ್ದತಿ ಆರಂಭವಾಯಿತು.
ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ನಡೆದುಕೊಂಡು ಹೊಗುತ್ತಿತ್ತು. ಹೇಗೆ ಜೇನುಗೂಡಿನಿಂದ ಜೇನನ್ನು ತೆಗೆದ ನಂತರ ಸೋರುತ್ತಿರುವ ಜೇನುತುಪ್ಪವನ್ನು ನೆಕ್ಕುತ್ತಾರೋ ಅದೇ ರೀತಿ ಇಷ್ಟೊಂದು ಹಣದ ವಹಿವಾಟು ನಡೆಯುವಾಗ ಕೆಲ ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳು ನಿಧಾನವಾಗಿ ಶಾಲಾ ಸಮವಸ್ತ್ರ, ಪುಸ್ತಕ, ಬಿಸಿಯೂಟದಲ್ಲಿಯೂ ಹಣ ಹೊಡೆಯಲು ಆರಂಭಿಸಿದರೋ? ಅಂದಿನಿಂದ ಸಮಾನತೆ ಎನ್ನುವುದು ಗಾಳಿಗೆ ತೂರಿದ್ದಲ್ಲದೇ ಮಕ್ಕಳಿಗೆ ಏನು ಬೇಕು ಬೇಡಾ ಎನ್ನುವುದರ ಹೊರತಾಗಿ ತಮಗೆ ಯಾವುದು ಹೆಚ್ಚಿನ ಆದಾಯ ತರುತ್ತದೆಯೋ ಆಂತಹ ಯೋಜನೆಗಳನ್ನು ಪಕ್ಷಾತೀತವಾಗಿ ಜಾರಿಗೆ ತಂದ ಪರಿಣಾಮವೇ, ಚಿಕ್ಕವಯಸ್ಸಿನ ಮಕ್ಕಳಲ್ಲಿಯೇ ಜಾತಿಯ ವಿಷ ಬೀಜವನ್ನು ಬಿತ್ತಿದ್ದಲ್ಲದೇ, ಒಂದು ಪಂಗಡವರಿಗೆ ಒಂದು ಆಹಾರ ಮತ್ತೊಂದು ಮಕ್ಕಳಿಗೆ ಮತ್ತೊಂದು ರೀತಿಯ ಆಹಾರ ಒಂದು ಪಂಗಡವರಿಗೆ ಪ್ರವಾಸ ಮತ್ತೊಂದು ಮಕ್ಕಳಿಗೆ ಮೋಸ ಮಾಡುವ ಮೂಲಕ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಇಡುವ ಕಾರ್ಯದ ಮುಂದುವರೆದ ರೂಪವೇ ಶಾಲಾಮಕ್ಕಳಿಗೆ ಮೊಟ್ಟೆ ಕೊಡುವ ಕಾರ್ಯಕ್ರಮ ಎಂದರೂ ತಪ್ಪಾಗದು. ಇತ್ತೀಚೆಗೆ ಮೊಟ್ಟೆಯ ಖರೀದಿಯ ವಿಚಾರದಲ್ಲಿ ಅಕ್ರಮವಾಗಿದೆ ಎಂದು ಸಚಿವೆಯೊಬ್ಬರ ಮೇಲೆ ಆರೋಪ ಬಂದಿದ್ದದ್ದು ಅದಕ್ಕೆ ಜ್ವಲಂತ ಉದಾಹರಣೆ.
ಶಾಲೆಯಲ್ಲಿ ಈ ರೀತಿ ಮಕ್ಕಳಿಗೆ ಮೊಟ್ಟೆ ಕೊಡುವುದನ್ನು ಕೆಲ ಮಠಾಧೀಶರು ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ರಾಜ್ಯಾಂದ್ಯಂತ ಇದರ ಪರ ವಿರೋಧಗಳು ವ್ಯಕ್ತವಾಗುತ್ತಿದ್ದಂತಯೇ, ಕೊಪ್ಪಳದ ವಿದ್ಯಾರ್ಥಿನಿಯೊಬ್ಬಳು ತಾನು ವಿಧ್ಯಾರ್ಥಿ ಎನ್ನುವುದನ್ನೇ ಮರೆತು, ರಾಜಕೀಯ ಧುರೀಣೆಯಂತೆ, ನಾವು ಮಠಕ್ಕೆ ಬಂದು ಮೊಟ್ಟೆ ತಿಂತೀವಿ. ನಾವು ಮೊಟ್ಟೆ ತಿಂದರೆ ಬದುಕುತ್ತೇವೆ. ಇಲ್ಲವಾದರೆ ನಾವು ಸಾಯುತ್ತೇವೆ. ನಾವು ಬದುಕುವುದು ಬೇಕಾ? ನಿಮಗೆ ಮೊಟ್ಟೆ ಕೊಡದಿರುವುದು ಬೇಕಾ? ಎಂದು ಮಠಾಧೀಶರಿಗೇ ಸವಾಲನ್ನು ಹಾಕಿದ್ದಾಳೆ.
ಹೌದು ನಿಜ. ಊಟ ತನ್ನಿಷ್ಟ ನೋಟ ಪರರಿಷ್ಟ ಎನ್ನುವ ಗಾದೆಯ ಮಾತಿನಂತೆ ಒಬ್ಬರ ಆಹಾರ ಪದ್ದತಿಯನ್ನು ಮತ್ತೊಬ್ಬರು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಅದರೆ ಇದು ಸಾರ್ವಜನಿಕರ ತೆರಿಗೆಯ ಹಣದಲ್ಲಿ ಸಮಾನತೆಯ ಸಾಕಾರವಾಗಿರಬೇಕಾದ ಸರ್ಕಾರಿ ಶಾಲೆಯಲ್ಲಿ ಅಲ್ಲಾ ಅಲ್ವೇ? ಆಕೆ ತನ್ನ ಹಣದಲ್ಲಿ ತನ್ನ ಮನೆಯಲ್ಲಿ ಮೊಟ್ಟೆ ಮಾಂಸವನ್ನು ತಿಂದಲ್ಲಿ ಅದನ್ನು ಕೇಳುವ ಅಧಿಕಾರ ಯಾರಿಗೂ ಇಲ್ಲ. ಆದರೆ ಶಾಲೆಯಲ್ಲಿ ಸಮಾನತೆಗಾಗಿ ಎಲ್ಲರೂ ಒಂದೇ ರೀತಿ ಬಟ್ಟೆ, ಆಟಾ ಪಾಠಗಳು ಇರುವಾಗ ಈಗ ಆಹಾರದಲ್ಲೇಕೆ ಅಸಮಾನತೆ ತರಬೇಕು? ಎಂದು ಆಕೆಯ ಬಾಯಿಯಲ್ಲಿ ಆಷ್ಟು ದೊಡ್ಡ ಮಾತುಗಳನ್ನು ಆಡಿಸಿರುವ ಆ ಕಾಣದ ಕೈಗಳನ್ನು ಪ್ರಶ್ನಿಸಲೇ ಬೇಕಿದೆ. ಇತ್ತೀಚಿಗೆ ಟಿವಿ ಚಾನೆಲ್ ಗಳ ಮೈಕ್ ಮುಖದ ಮುಂದೆ ಹಿಡಿದ ಕೂಡಲೇ ಹೇಗೇಗೋ ಮಾತನಾಡುವ ಕೆಟ್ಟ ಚಾಳಿ ಆರಂಭವಾಗಿರುವುದು ದೌರ್ಭಾಗ್ಯ. ಇದರ ಬಗ್ಗೆ ಪೋಷಕರು ಈಗಲೇ ಜಾಗೃತಿ ವಹಿಸದೇ ಹೋದಲ್ಲಿ ಮುಂದೇ ಭಾರೀ ಪರಿಣಾಮವನ್ನು ಎದುರಿದಬೇಕಾಬಹುದು.
ಮಕ್ಕಳಿಗೆ ವಿದ್ಯಾರ್ಥಿ ಜೀವನವು ಬಹಳ ಪ್ರಾಮುಖ್ಯವಾಗಿದ್ದು, ಒಬ್ಬ ವಿದ್ಯಾರ್ಥಿಯ ಲಕ್ಷಣಗಳು ಹೇಗಿರಬೇಕು ಎಂಬುದನ್ನು ನಮ್ಮ ಹಿರಿಯರು ಬಹಳ ಸೊಗಸಾಗಿ ಹೇಳಿದ್ದಾರೆ.
ಕಾಕದೃಷ್ಟಿ ಬಕಧ್ಯಾನಂ, ಶ್ವಾನ ನಿದ್ರಾ ತಥೈವಚಾ |
ಅಲ್ಪಾಹಾರೀ ಮಲೀನ ವಸ್ತ್ರಂ ವಿದ್ಯಾರ್ಥಿ ಪಂಚ ಲಕ್ಷಣಂ||
ನೆಲದ ಮೇಲೆ ಬಿದ್ದಿರುವ ಸಣ್ಣ ಸಣ್ಣ ಆಹಾರವನ್ನು ಸೂಕ್ಷ್ಮವಾಗಿ ಗಮನಿಸುವ ಕಾಗೆಯಷ್ಟು ತೀಕ್ಷ್ಣವಾದ ದೃಷ್ಟಿ, ಒಂಟಿ ಕಾಲಿನಲ್ಲಿ ನೀರಿನಲ್ಲಿ ಅಚಲವಾಗಿ ಧ್ಯಾನ ಮಾಡುವಂತೆ ನಿಂತು ಮೀನು ಬಂದ ತಕ್ಷಣ ಲಭಕ್ ಎಂದು ತಿನ್ನುವ ಕೊಕ್ಕರೆಯಂತಹ ಏಕಾಗ್ರತೆಯನ್ನು ವಿದ್ಯಾಭ್ಯಾಸ ಮಾಡುವ ವಿದ್ಯಾರ್ಧಿಗಳು ಹೊಂದಿರಬೇಕು. ಎಂತಹ ನಿದ್ದೆಯಲ್ಲಿದ್ದರೂ ಸಣ್ಣ ಸಪ್ಪಳಕ್ಕೂ ಎಚ್ಚೆತ್ತು ಕೊಳ್ಳುವ ನಾಯಿಯಂತೆ ವಿದ್ಯಾರ್ಥಿ ಸದಕಾಲವೂ ಜಾಗೃತನಾಗಿರಬೇಕು. ಎಲ್ಲದ್ದಕ್ಕಿಂತಲೂ ವಿದ್ಯೆ ಕಲಿಯುವ ವಿದ್ಯಾರ್ಥಿಯು ಮಿತವಾದ ಉದರಕ್ಕೂ, ಮನಸ್ಸಿಗೂ ಹಿತವಾಗುವ ಸಾತ್ವಿಕ ಆಹಾರ ಸೇವಿಸಬೇಕು ಎಂದಿರುವದಲ್ಲದೇ, ವಿದ್ಯಾರ್ಥಿಗಳ ಗಮನ ತಮ್ಮ ವಿದ್ಯಾಭ್ಯಾಸದ ಕಡೆಗೆ ಇರಬೇಕೇ ಹೊರತು, ತನ್ನ ಉಡುಗೆ ತೊಡಿಗೆಗಳಿಗೇ ಹೆಚ್ಚಿನ ಸಮಯ ವ್ಯರ್ಥ ಮಾಡುತ್ತಾ ಅಲಂಕಾರ ಸಿದ್ಧಾರ್ಥಿ ಈ ವಿದ್ಯಾರ್ಥಿ ಎನಿಸಿಕೊಳ್ಳದೇ, ಸರಳವಾದ ಶುಭ್ರವಾದ ವಸ್ತ್ರವನ್ನು ಧರಿಸಬೇಕು ಎನ್ನುತ್ತದೆ ಈ ಶ್ಕೋಕ.
ಖಂಡಿತವಾಗಿಯೂ ಈ ಐದು ನಿಯಮಗಳನ್ನು ಪಾಲಿಸುವ ವಿದ್ಯಾರ್ಥಿಯು ಸಫಲತೆಯನ್ನು ಪಡೆಯುತ್ತಾನೆ ಎನ್ನುವುದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ ಎನ್ನುವುದರ ಅರಿವಿದ್ದರೂ ದುರಾದೃಷ್ಟವಷಾತ್ ಇಂದಿನ ಬಹುತೇಕ ವಿದ್ಯಾರ್ಥಿಗಳು ಈ ಐದೂ ಗುಣಗಳಿಗೆ ಎಳ್ಳೂ ನೀರು ಬಿಟ್ಟು ಈ ರೀತಿ ಹಾದಿ ಬೀದಿಯಲ್ಲಿ ಯಾರದ್ದೂ ಕುಮ್ಮಕ್ಕಿನಿಂದ ಪ್ರತಿಭಟನೆ ಮಾಡುತ್ತಾ ತಮ್ಮ ಅಮೂಲ್ಯವಾದ ವಿದ್ಯಾರ್ಥಿ ಜೀವನವನ್ನು ಹಾಳು ಮಾಡುಕೊಳ್ಳುತ್ತಿರುವುದು ಈ ದೇಶದ ವಿಪರ್ಯಾಸವೇ ಸರಿ.
ವಿದ್ಯಾ ದದಾತಿ ವಿನಯಂ, ವಿನಯಾದ್ ಯಾತಿ ಪಾತ್ರತಾಂ
ಪಾತ್ರತ್ವಾದ್ ಧನಮಾಪ್ನೋತಿ, ಧನಾದ್ ಧರ್ಮಂ, ತತಃ ಸುಖಮ್ ॥
ವಿದ್ಯೆ ಸರಿಯಾಗಿ ಕಲಿತಲ್ಲಿ ವಿನಯ ಬರುತ್ತದೆ, ವಿನಯವಿದ್ದಲ್ಲಿ ಸಮಾಜದಲ್ಲಿ ಗೌರವ ದೊರೆಯುತ್ತದೆ. ಅದೇ ಗೌರವದಿಂದ ರಾಶಿ ರಾಶಿ ಧನ ಲಾಭವಾಗಿ ಅದರಿಂದ ಸುಖಃವಾಗಿರಬಹುದು ಎನ್ನುತ್ತದೆ ಮತ್ತೊಂದು ಶ್ಲೋಕ.
ಹಾಗಾಗಿ ಆ ಪುಟ್ಟ ಹುಡುಗಿ ವಯಸ್ಸಿಗೆ ತಕ್ಕಂತೆ ಮೊದಲು ಓದಿನ ಕಡೆ ಗಮನ ಕೊಡಬೇಕೇ ಹೊರತು, ದಿಢೀರಾಗಿ ಪುಕ್ಸಟ್ಟೇ ಪ್ರಚಾರ ಸಿಗುತ್ತದೆ ಎಂದು ಸಮಾಜಕ್ಕೆ ಮಠ ಮಾನ್ಯಗಳ ಕೊಡುಗೆಯ ಅರಿವಿಲ್ಲದೇ ಬಾಯಿಗೆ ಬಂದಂತೆ ಬಡಬಡಾಯಿಸಬಾರದು,
ವಿದ್ಯಾತುರಾಣಾಂ ನ ಸುಖಂ ನ ನಿದ್ರಾ ಎನ್ನುವ ಮತ್ತೊಂದು ಶ್ಲೋಕವೊಂದಿದೆ ಅದರ ಪ್ರಕಾರ ವಿದ್ಯೇ ಕಲಿಯಲು ಬಯಸುವರು ಸುಖಾ ಮತ್ತು ನಿದ್ರೆಯನ್ನು ತ್ಯಜಿಸಬೇಕು ಎನ್ನುವುದು ಇದರ ಅರ್ಥವಾಗಿದೆ ಹಾಗಾಗಿ ಶಾಲೆಯಲ್ಲಿ ಕಲಿಕೆಗಷ್ಟೇ ಸೀಮಿತಗೊಳಿಸಿ ಅಕಸ್ಮಾತ್ ತಿನ್ನಲು ಕೊಟ್ಟಲ್ಲಿ ಅದು ಎಲ್ಲರೂ ಒಟ್ಟಿಗೆ ಯಾವುದೇ ಬೇಧಭಾವವಿಲ್ಲದೇ ಕುಳಿತು ಕೊಟ್ಟಿದ್ದು ತಿಂದುಕೊಂಡು ಶಿಕ್ಷಣದ ಕಡೆ ಗಮನ ಹರಿಸು ಎಂದು ಆಕೆಯ ಪೋಷಕರು ಮತ್ತು ಗುರು ಹಿರಿಯರು ತಿದ್ದಿ ಹೇಳಬೇಕಾಗಿದೆ.
ಜಾತಿ, ಭಾಷೆಯ ಹೆಸರಿನಲ್ಲಿ ಈಗಾಗಲೇ ಜನರನ್ನು ಒಡೆದದ್ದಾಗಿದೆ. ಈಗ ತಮ್ಮ ರಾಜಕೀಯ ತೆವಲುಗಳಿಗೆ ಆಹಾರ ಪದ್ದತಿಯಲ್ಲಿ ದೇಶ ಒಡೆಯುವ ಹುನ್ನಾರ ನಡೆಸಿದ್ದಾರೆ. ಒಟ್ಟಿನಲ್ಲಿ ಕೆಲವು ಪಟ್ಟ ಭದ್ರಹಿತಾಸಕ್ತಿಗಳಿಗೆ ಈ ದೇಶ ಒಗ್ಗಟ್ಟಿನಲ್ಲಿ ಇರಬಾರದಷ್ಟೇ ಎನ್ನುವ ಧೋರಣೆಯನ್ನು ಒಕ್ಕೊರಲಿನಿಂದ ಖಂಡಿಸಲೇ ಬೇಕು.
ಎಲ್ಲದ್ದಕ್ಕಿಂತಲೂ ಹೆಚ್ಚಾಗಿ ಶಾಲೆಗೆ ಪಾಠ ಕಲಿಯೋದಿಕ್ಕೆ ಹೋಗಬೇಕೇ ಹೊರತು ತಿನ್ನೋದಕ್ಕಲ್ಲ. ಆ ಹುಡುಗಿಗೆ ಪೌಷ್ಟಿಕಾಂಶದ ಬಗ್ಗೆ ಅಷ್ಟು ಕಾಳಜಿ ಇದ್ದಲ್ಲಿ ಮನೆಯಲ್ಲೇ ಮೊಟ್ಟೆ ತಿಂದು ಬರಲಿ. ಅದೂ ಅಲ್ಲದೇ ಮೊಟ್ಟೆಯ ಹೊರತಾಗಿಯೂ ಎಲ್ಲರೂ ಸಮಾನತೆಯಿಂದ ಸೇವಿಸುವಂತಹ ಸಸ್ಯಾಹಾರದಲ್ಲೂ ಪೌಷ್ಠಿಕಾಂಷವಿದೆ ಎನ್ನುವುದನ್ನು ಅಷ್ಟು ಚಿಕ್ಕವಯಸ್ಸಿನ ಹೆಣ್ಣುಮಗುವಿನ ಬಾಯಲ್ಲಿ ಅಷ್ಟು ದೊಡ್ಡ ಮಾತುಗಳನ್ನು ಆಡಿಸುತ್ತಿರುವ ಆ ಕಾಣದ ಕೈಗಳಿಗೆ ತಿಳಿಸಿ ಕೊಡುವ ಮೂಲಕ ಶಾಲೆಯಲ್ಲಿ ಸಮಾನತೆಯನ್ನು ಕಾಪಾಡ ಬೇಕಾಗಿದೆ
ಶಾಲೆಗಳು ವಿದ್ಯೆಗಷ್ಟೇ ಮೀಸಲಾಗಿರ ಬೇಕೇ ಹೊರತು ಅದು ಕಣ್ಣಿಗೆ ಕಾಣದ ಕೆಲ ಗಂಜೀ ಗಿರಾಕಿಗಳ ಗಂಜೀ ಕೇಂದ್ರವಾಗಬಾರದು ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ವಿದ್ಯೆ ಇಂದು ಮಾರಾಟದ ವಸ್ತುವಾಗಿದ್ದಲ್ಲದೆ, ರಾಜಕೀಯಪ್ರೇರಿತ ದುಷ್ಟಶಕ್ತಿಗಳ ಆಟ ಹೆಚ್ಚಾಗುತ್ತಿರುವುದು ತೀವ್ರ ಕಳವಳಕಾರಿ ಅಂಶವಾಗಿದೆ. ನಿಮ್ಮಲೇಖನ ಮುಖ್ಯವಾಹಿನಿಯಲ್ಲಿ ಪ್ರಕಟವಾದರೆ ಸಂತೋಷ.
LikeLiked by 1 person
ಧನ್ಯೋಸ್ಮಿ
LikeLike
ಹಿಂದಿನಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಮಕಳಿಗೆ ಮಧ್ಯಾಹ್ನದ ವೇಳೆ ಉಪ್ಪಿಟ್ಟು ಹಾಲು ಕೊಡುವ ಪದ್ಧತಿ ಇತ್ತು. ನಂತರ ಮಧ್ಯಾಹ್ನ ಬಿಸಿ ಊಟ ಕೊಡುವ ಪದ್ಧತಿ ಬಂತು. ಈಗ ಪೌಷ್ಠೊಕ ಆಹಾರ ಎಂದು ಮೊಟ್ಟೆಯನ್ನು ಕೊಡುವ ಪದ್ಧತಿ ಜಾರಿಗೆ ತಂದಿದ್ದಾರೆ. ಸಸ್ಯಾಹಾರಿಗಳು ಮೊಟ್ಟೆ ತಿನ್ನಲ್ಲ. ಪೌಷ್ಠಿಕ ಆಹಾರ ಎನ್ನುವ ನೆಪದಲ್ಲಿ ಇವತ್ತು ಮೊಟ್ಟೆ ಕೊಡಬಹುದು. ನಂತರ ಚಿಕನ್, ಮಟನ್ ಕೂಡ ಪೌಷ್ಠಿಕ ಆಹಾರ ಎಂದು ಕೊಟ್ಟರೂ ಆಶ್ಚರ್ಯವಿಲ್ಲ. ಇದರಲ್ಲಿ ಮಕ್ಕಳಲ್ಲಿ ಬೇಧಭಾವ ಉಂಟಾಗುತ್ತದೆ. ಮಾಂಸಾಹಾರಿಗಳು ಸಸ್ಯಾಹಾರವನ್ನೂ ಸೇವಿಸುತ್ತಾರೆ. ಆದರೆ ಸಸ್ಯಾಹಾರಿಗಳು ಮಾಂಸಾಹಾರವನ್ನು ಸೇವಿಸಲ್ಲ. ಆದ್ದರಿಂದ ಸಾರ್ವಜನಿಕವಾಗಿ ಕೊಡುವಾಗ ಹಿಂದೆ ಕೊಡುತ್ತಿದ್ದಂತೆ ಸಸ್ಯಾಹಾರಿ ಆಹಾರವನ್ನೇ ಕೊಡಬೇಕು. ಬೇಕಾದರೆ ಹಾಲು, ಹಣ್ಣು ಕೊಡಲಿ. ಆಗ ಗೊಂದಲವೇ ಇರುವುದಿಲ್ಲ.
ಎಸ್.ದ್ವಾರಕಾನಾಥ್
LikeLiked by 1 person
ಸರಿಯಾಗಿ ಹೇಳಿದ್ರೀ
LikeLike