ಗೀತಾ ಜಯಂತಿ

pagadeಅದು ದ್ವಾಪರಯುಗ. ದುಷ್ಟರ ಶಿಕ್ಷೆಗಾಗಿ ಮತ್ತು ಶಿಷ್ಟರ ರಕ್ಷಣೆಗಾಗಿ ಭಗವಾನ್ ವಿಷ್ಣುವು ಶ್ರೀ ಕೃಷ್ಣನ ಅವತಾರದಲ್ಲಿ ಈ ಭೂಲೋಕದಲ್ಲಿ ಅವತರಿಸುತ್ತಾನೆ. ಆತನ ಬಂಧುಗಳೇ ಆಗಿದ್ದ ಪಾಂಡವರನ್ನು ಅವರ ದೊಡ್ಡಪ್ಪನ ಮಗನೇ ಆಗಿದ್ದ ಧುರ್ಯೋಧನ ತನ್ನ ಮಾವ ಶಕುನಿಯ ಕುತ್ರಂತ್ರದಿಂದ ಪಗಡೆಯ ಆಟದಲ್ಲಿ ಸೋಲಿಸಿ ಅವರ ರಾಜ್ಯವನ್ನು ಕಿತ್ತುಕೊಂಡು  12 ವರ್ಷಗಳ ಕಾಲ ವನವಾಸ ಮತ್ತು 1 ವರ್ಷಗಳ ಕಾಲ ಅಜ್ಞಾನವಾಸವನ್ನು ಯಶಸ್ವಿಯಾಗಿ ಪೂರೈಸಿದ ನಂತರವೇ ರಾಜ್ಯವನ್ನು ಹಿಂದಿರುಗಿಸುವುದಾಗಿ ವಾಗ್ಧಾನ ಮಾಡಿರುತ್ತಾನೆ. ಒಪ್ಪಂದಂತೆ ವನವಾಸ ಮತ್ತು  ಅಜ್ಞಾತವಾಸವನ್ನು ಯಶಸ್ವಿಯಾಗಿ ಪೂರೈಸಿದ ಪಾಂಡವರು ಶ್ರೀ ಕೃಷ್ಣನ ಮಧ್ಯಸ್ಥಿಕೆಯಲ್ಲಿ ರಾಜ್ಯವನ್ನು ಹಿಂದಿರುಗಿಸಲು ಕೌರವರನ್ನು ಕೇಳಿಕೊಳ್ಳುತ್ತಾರೆ.

kur3ಅಧಿಕಾರದದ ಮಧದಿಂದ  ಒಪ್ಪಂದದಂತೆ ರಾಜ್ಯವನ್ನು ಹಿಂದಿರುಗಿಸಲು ಹಿಂದೇಟು ಹಾಕಿದ್ದಲ್ಲದೇ ಕಡೆಗೆ ಐದು ಗ್ರಾಮಗಳನ್ನಾದರೂ ಕೊಟ್ಟರೆ ಸಾಕು ಎನ್ನುವುದನ್ನು ನಿರಾಕರಿಸಿದಾಗ ವಿಧಿ ಇಲ್ಲದೇ ಪಾಂಡವರು ತಮ್ಮ ಸಹೋದರರ ಮೇಲೆ   ಕುರುಕ್ಷೇತ್ರದಲ್ಲಿ ಯುದ್ಧವನ್ನು ಮಾಡಲು ನಿರ್ಧರಿಸುತ್ತಾರೆ.  ತಮ್ಮ ಬಳಿ ದ್ರೋಣ, ಕರ್ಣ, ಭೀಷ್ಮರಂತಹ ಘಟಾನುಘಟಿಯರಲ್ಲದೇ, ಲಕ್ಷ ಲಕ್ಷ  ಅಕ್ಷೋಹಿಣಿ ಸೈನ್ಯವಿರುವಾಗ  ಪಾಂಡವರು ಯಾವ ಲೆಕ್ಕ ಎಂಬ ಹುಂಬತನ ಕೌರವರಿಗಿದ್ದರೆ,  ಶ್ರೀ ಕೃಷ್ಣ ತಾನು ಈ ಯುದ್ದದಲ್ಲಿ ಕೇವಲ ಅರ್ಜುನನ ಸಾರಥಿಯಾಗಿ ಇರುವನೇ ಹೊರತು ಎಂದಿಗೂ ಶಸ್ತ್ರವನ್ನು ಹಿಡಿಯುವುದಿಲ್ಲ ಎಂದು ವಾಗ್ಧಾನ ಮಾಡಿದರೂ, ಭಗವಂತನ ಸ್ವರೂಪ ಸಾಕ್ಷಾತ್ ಶ್ರೀ ಕೃಷ್ಣನೇ ತಮ್ಮ ಜೊತೆಯಲ್ಲಿ ಇರುವಾಗ  ಉಳಿದವರ ಸಹಾಯ ನಮಗೆ ಅಗತ್ಯವಿಲ್ಲ ಎಂದು ಪಾಂಡವರು ಶ್ರೀ ಕೃಷ್ಣನ ಸಾರಥ್ಯದಲ್ಕಿ ಯುದ್ದಕ್ಕೆ ಸನ್ನದ್ಧರಾಗುತ್ತಾರೆ.

kur1ಯುದ್ದ ಘೋಷಣೆಯಾದ ನಂತರವೂ ಪಾಂಡವರು ಮತ್ತು ಕೌರವರ ನಡುವೆ ಸಾಮರಸ್ಯಕ್ಕಾಗಿ ಹಲವಾರು ಪ್ರಯತ್ನಗಳನ್ನು ನಡೆಸಿ ಅವೆಲ್ಲವೂ ವಿಫಲವಾದ ನಂತರವಷ್ಟೇ ಯುದ್ಧವೇ ಅನಿವಾರ್ಯ ಎಂಬ ಸ್ಥಿತಿಗೆ ಇಬ್ಬರು ತಲುಪುತ್ತಾರೆ. ತನ್ನ ಉತ್ತಮ ಸ್ನೇಹಿತ ಮತ್ತು ಪರಮ ಭಕ್ತನಾದ ಅರ್ಜುನನ ಮೇಲಿನ ಪ್ರಾಮಾಣಿಕ ಮತ್ತು ಪ್ರೀತಿಯಿಂದ, ಶ್ರೀಕೃಷ್ಣನು ಯುದ್ಧದ ಸಮಯದಲ್ಲಿ ಅರ್ಜುನನ ಸಾರಥಿಯಾಗಿ ರಥವನ್ನು ಯುದ್ಧದ ದಿನ ಕುರುಕ್ಷೇತ್ರಕ್ಕೆ ತಂದು ನಿಲ್ಲಿಸಿರುತ್ತಾನೆ.  ಎರಡೂ ತಂಡಗಳ ಸೈನ್ಯಗಳು ಯುದ್ಧಭೂಮಿಯಲ್ಲಿ ಮುಖಾಮುಖಿಯಾಗಿ  ನೂರಾರು ಮೈಲಿಗಳಷ್ಟು ದೂರದ ವರೆಗೂ ನಿಂತು ಕೊಂಡಿರುತ್ತದೆ.

kur2ಪರೀಕ್ಷೆ ಬರೆಯುವ ಮುನ್ನಾ ಪ್ರಶ್ನೆಪತ್ರಿಕೆಯನ್ನು ಒಮ್ಮೆ ಸಂಪೂರ್ಣವಾಗಿ ಓದಿ ನಂತರ  ಉತ್ತರ ಬರೆಯಲು ಆರಂಭಿಸುವ ಉತ್ತಮ ಪದ್ದತಿಯಂತೆ  ಯುದ್ದವನ್ನು ಆರಂಭಿಸುವ ಮುನ್ನ ಶತ್ರುಗಳ ಪಾಳಯದಲ್ಲಿ ಯಾರ್ಯಾರು ಇದ್ದಾರೆ ಎಂದು ಒಮ್ಮೆ ಸಾಗರೋಪಾದಿಯಲ್ಲಿ ನಿಂತಿದ್ದ ಕೌರವರ ಸೇನೆಯತ್ತ ಕಣ್ಣು ಹಾಯಿಸತೊಡಗಿದ ಅರ್ಜುನನಿಗೆ ತನ್ನನ್ನು ಬಾಲ್ಯದಿಂದಲೂ ತುಂಬಾ ಪ್ರೀತಿಯಿಂದ ತನ್ನನ್ನು ಬೆಳೆಸಿದ ಅಜ್ಜ ಭೀಷ್ಮ ಮತ್ತು ತಾನು ಮಹಾನ್ ಬಿಲ್ಲುಗಾರನಾಗಲು ಕಾರಣಭೂತರಾದ ತನ್ನ ಗುರುಗಳಾದ ದ್ರೋಣಾಚಾರ್ಯರನ್ನು ನೋಡಿದ ಕೂಡಲೇ,  ಹೃದಯ ಕರಗಲು ಆರಂಭಿಸ ತೊಡಗುವುದಲ್ಲದೇ, ಆತನ ದೇಹವು ನಡುಗಲು ಪ್ರಾರಂಭಿಸುತ್ತದೆ. ಮನಸ್ಸು  ಗೊಂದಲದ ಗೂಡಾಗಿ  ಚಂಚಲತೆ  ಭಾವನೆ ಮೂಡುತ್ತದೆ. ಕ್ಷಾತ್ರ ತೇಜದ ಕ್ಷತ್ರೀಯನಾಗಿ ತಾನು ಯುದ್ದ ಮಾಡಲು ಬಂದಿರುವುದನ್ನೇ ಒಂದು ಕ್ಷಣ ಮರೆತು  ಅವನಿಗೇ ಅರಿವಿಲ್ಲದಂತೆ ಧಾರಾಕಾರವಾಗಿ  ಕಣ್ಣಿರು ಸುರಿಯಲಾರಂಭಿಸುತ್ತದೆ.

viatಛೇ! ಕೇವಲ ರಾಜ್ಯದ ಆಸೆಗಾಗಿ, ತನ್ನ ಪೂಜ್ಯ ಬಂಧುಗಳು,  ಸಹೋದರರು, ಗುರುಗಳು ಮತ್ತು   ಸ್ನೇಹಿತರ ವಿರುದ್ಧವೇ ಶಸ್ತ್ರಾಸ್ತ್ರ ಎತ್ತುವುದೇ? ಎಂಬ ಜಿಜ್ಞಾಸೆ ಮೂಡತೊಡಗಿ, ಖಿನ್ನತೆಗೆ ಒಳಗಾಗುತ್ತಿದ್ದದ್ದನ್ನು ಸರ್ವವನ್ನೂ ಬಲ್ಲವನಾದ ಸಾರಥಿಯಾಗಿದ್ದ ಶ್ರೀ ಕೃಷ್ಣನಿಗೆ ಅರಿವಾಗುತ್ತದೆ.  ಅಂತಹ ಸಮಯದಲ್ಲಿ ಶ್ರೀ ಕೃಷ್ಣನು, ಇವೆಲ್ಲವೂ ವಿಧಿ ಲಿಖಿತವಾಗಿದ್ದು, ತಮ್ಮ ತಮ್ಮ ಫಲಾ ಫಲಗಳನ್ನು ಅನುಭವಿಸಿಯೇ ತೀರಬೇಕು.   ಕರ್ತವ್ಯ ಎಂದು ಬಂದಾಗ ತನ್ನ ಬಂಧು ಬಾಂಧವರು ಸ್ನೇಹಿತರು ಎಂಬುದನ್ನು ಲೆಕ್ಖಿಸದೇ ಕಾರ್ಯವನ್ನು ನಿಭಾಯಿಸಿ ಉಳಿದದ್ದನ್ನು ಭಗವಂತನ ಮೇಲೆ ಬಿಡಬೇಕು  ಎಂದು ಹೇಳುತ್ತಾ ತನ್ನ ವಿರಾಟ್ ದರ್ಶನವನ್ನು ತೋರಿಸುತ್ತಾನೆ.

ಹೀಗೆ ಶ್ರೀಕೃಷ್ಣ ಮತ್ತು ಅರ್ಜುನರ ನಡುವೆ ನಡೆದ ಸಂಭಾಷಣೆ, ಶ್ರೀಕೃಷ್ಣನ ಸಲಹೆ, ಅರ್ಜುನನಿಗೆ ಸಿಕ್ಕ ಸಂದೇಶಗಳು ಮತ್ತು ಬೋಧನೆಗಳು, ಇವೆಲ್ಲವನ್ನೂ ದೂರದಲ್ಲಿ ಕುಳಿತು ಧುತರಾಷ್ಟ್ರನಿಗೆ ಯುದ್ದದ ವೀಕ್ಷಕವಿವರಣೆಯನ್ನು ನೀಡುತ್ತಿದ್ದ ಸಂಜಯನು ದಾಖಲಿಸಿದ್ದನ್ನೇ  ಭಗವದ್ಗೀತೆ ಎಂದು ಕರೆಯಲಾಗುತ್ತದೆ. ಶ್ರೀ ಕೃಷ್ಣನು ಹೇಳಿದ ಗೀತಾ ಸಾರ ಕೇವಲ ಅರ್ಜುನನಿಗೆ ಮಾತ್ರವಲ್ಲದೇ ಮನುಕುಲದ ಒಳಿತಿಗಾಗಿ ಹೇಳಿದ ಮಾತುಗಳಾಗಿದ್ದು ಅವುಗಳನ್ನು ಅನುಸರಿಸಿದರೆ ಜನರು ಮೋಕ್ಷ ಸಾಧಿಸಬಹುದಾಗಿದೆ.  ಜೀವನದ ಮೌಲ್ಯಗಳ ಮಹತ್ವವನ್ನು ಜನರಿಗೆ ಅರ್ಜುನನ ಮೂಲಕ ವಿವರಿಸಿದ  ಕೃಷ್ಣ ಪ್ರಯತ್ನವಾದ ಈ ಭಗವದ್ಗೀತೆಯನ್ನು ಸನಾತನ ಧರ್ಮದಲ್ಲಿ  ಅತ್ಯಂತ ಪವಿತ್ರ ಗ್ರಂಥವೆಂದು ಪರಿಗಣಿಸಲಾಗುತ್ತದೆ. ಹೀಗೆ ಮಾರ್ಗಶಿರ ಮಾಸದ ಶುದ್ಧ ಏಕದಶಿಯಯ ದಿನದಂದು ಭಗವಾನ್ ಶ್ರೀ ಕೃಷ್ಣನು ಗೀತೆಯನ್ನು ಅರ್ಜುನನಿಗೆ ಹೇಳಿದ ದಿನವಾಗಿದ್ದ ಕಾರಣ ಈ ದಿನವನ್ನು ಗೀತಾ ಜಯಂತಿ ಎಂದು ಎಲ್ಲೆಡೆಯಲ್ಲಿಯೂ ಭಕ್ತಿ ಭಾವನೆಗಳಿಂದ ಆಚರಿಸಲ್ಪಡುತ್ತದೆ.

ಗೀತಾ ಜಯಂತಿಯಂದು ಬಹುತೇಕರು  ಮುಂಜಾನೆಯೇ ಎದ್ದು ತಮ್ಮ ಸ್ನಾನ ಸಂಧ್ಯಾವಂಧನೆ ಮತ್ತು ನಿತ್ಯ ಪೂಜೆಗಳನ್ನು ಭಕ್ತಿ ಭಾವನೆಗಳಿಂದ ಪೂರೈಸಿ, ಅಂದು ಏಕದಶಿಯಾಗಿರುವ ಕಾರಣ ನಿರಾಹಾರಿಗಳಾಗಿ ಗೀತೆಯ ಎಲ್ಲಾ 700 ಶ್ಲೋಕಗಳನ್ನು ದಿನವಿಡೀ ಜಪಿಸುವ ಆಚರಣೆಯನ್ನು ರೂಢಿಯಲ್ಲಿ ಇಟ್ಟುಕೊಂಡಿದ್ದಾರೆ. ಈ ರೀತಿ ಗೀತಾ ಪಠಣದಿಂದ  ದೇಹ ಹಾಗೂ ಮನಸ್ಸಿಗೆ ಬಹಳಷ್ಟು ನೆಮ್ಮದಿ ಸಿಗುತ್ತದೆ. ಇನ್ನೂ ಹಲವು ಕಡೆ ಗೀತಾ ಜಯಂತಿಯ ಉತ್ಸವವನ್ನು ಭವ್ಯವಾಗಿ ಆಚರಿಸುವುದಲ್ಲದೇ,  ಗೀತೆಯನ್ನು ಓದುವ ಆಸಕ್ತಿಯನ್ನು ಉತ್ತೇಜಿಸುವ ಸಲುವಾಗಿ, ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ತೋರಿಸುವ ಸಲುವಾಗಿ ಗೀತಾ ಪಠಣ ಸ್ಪರ್ಧೆಗಳು, ಗೀತೆಗೆ ಸಂಬಂಧಪಟ್ಟ ನಾಟಕಗಳು, ಸಣ್ಣ ವಯಸ್ಸಿನ ಮಕ್ಕಳಿಗೆ  ಕೃಷ್ಣರ್ಜುನರ ರೀತಿಯ ವೇಷ ಭೂಷಣ ಸ್ಪರ್ಥೆಗಳನ್ನು ಏರ್ಪಡಿಸಲಾಗುತ್ತದೆ  ಸಂಜೆ ಭಜನೆ ಮತ್ತು ಪೂಜೆಗಳ ಜೊತೆ ಸಾಧು ಸನ್ಯಾಸಿನಿಯರು ಮತ್ತು ವಿದ್ವಾಂಸರುಗಳು ಗೀತೆಯ ಸಾರದ ಪ್ರವಚನವನ್ನು ಏರ್ಪಡಿಸಲಾಗಿರುತ್ತದೆ. ಇನ್ನೂ ಕೆಲವು ಕಡೆ ಗೀತೆಯ ಸಾರವನ್ನು ಎತ್ತಿ ತೋರಿಸುವ ಪುಸ್ತಕಗಳು ಮತ್ತು ಚಿತ್ರಪ್ರದರ್ಶನಗಳನ್ನು ಏರ್ಪಡಿಸಿದರೆ, ಇನ್ನೂ ಕೆಲವು ಕಡೆ  ಈ ಪವಿತ್ರ ದಿನದಂದು ವಿಶೇಷವಾಗಿ, ಗೀತೆಯ ಉಚಿತ ಪ್ರತಿಗಳನ್ನು  ಸಾರ್ವಜನಿಕರಿಗೆ ವಿತರಿಸುವ ಮೂಲಕ ಜನರಲ್ಲಿ ಗೀತೆಯನ್ನು ಹೆಚ್ಚು ಹೆಚ್ಚು ಓದುವಂತೆ ಪ್ರೇರೇಪಿಸಲಾಗುತ್ತದೆ.

ಮಾರ್ಗಶಿರ ಮಾಸದಲ್ಲಿ ಗಂಗಾ ಸ್ನಾನ ಮತ್ತು ಸತ್ಯನಾರಾಯಣ ದೇವರನ್ನು ಪೂಜಿಸುವ ವಿಶೇಷ ಪದ್ಧತಿಯೂ ಹಲವೆಡೆ ರೂಢಿಯಲ್ಲಿದ್ದು ಈ ಮಾಸದಲ್ಲಿ ಭಗವಾನ್ ವಿಷ್ಣುವನ್ನು ಶ್ರದ್ಧಾಭಕ್ತಿಗಳಿಂದ ಪೂಜಿಸಿದಲ್ಲಿ,  ಅವರು  ಮನಸ್ಸಿನಲ್ಲಿ  ಮಾಡಿಕೊಂಡ ಸಂಕಲ್ಪವು ಈಡೇರುತ್ತದೆ  ಎಂಬ ನಂಬಿಕೆಯಿದೆ. ಹಾಗಾಗಿ ಮಾಸದಲ್ಲಿ ದಾನ ಮತ್ತು ಧರ್ಮಕ್ಕೆ ವಿಶೇಷ ಮಹತ್ವವನ್ನು ನೀಡಲಾಗಿದೆ.  ಈ ತಿಂಗಳಿನಲ್ಲಿ  ಗಾಯತ್ರಿ ಮಂತ್ರವನ್ನು  ಪಠಿಸುವುದರೊಂದಿಗೆ ಸೂರ್ಯದೇವನನ್ನು ಪೂಜಿಸುವ ಸಂಪ್ರದಾಯವೂ ಹಲವು ಕಡೆಯಲ್ಲಿದೆ.

gj ಗೀತಾ ಜಯಂತಿಯನ್ನು ಎಲ್ಲರಿಗೂ ಪರಿಚಯಿಸುವುದಕ್ಕಾಗಿ ಗೀತಾ ಬೋಧನೆ ನಡೆದ ಕುರುಕ್ಷೇತ್ರವು ಇಂದಿನ ಹರ್ಯಾಣ ಪ್ರದೇಶದಲ್ಲಿ  ಇರುವ ಕಾರಣ, ಹರಿಯಾಣ ಸರ್ಕಾರ  2016 ರಿಂದ ಅಂತರರಾಷ್ಟ್ರೀಯ ಗೀತಾ ಮಹೋತ್ಸವವನ್ನು  ಮಾರ್ಗಶಿರ ಮಾಸ (ಡಿಸೆಂಬರ್ ತಿಂಗಳಿನಲ್ಲಿ)  ಆಯೋಜಿಸಿದ್ದಲ್ಲದೇ ಅದನ್ನು ಪ್ರತೀವರ್ಷವೂ ಅದ್ದೂರಿಯಾಗಿ ನಡೆಸಿಕೊಂಡು ಬರುತ್ತಿದೆ.

ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನೇ ಉಪದೇಶಿಸಿರುವಂತೆ,

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ್ ।

ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಘೋ  ಯಸ್ತ್ವಕರ್ಮಣಿ॥

ಯಶಸ್ಸನ್ನು ಬಯಸುವವರು ತಮ್ಮ ಕರ್ಮದ ಕಡೆಗೆ ಗಮನ ಕೊಟ್ಟಾಗಲೇ, ಯಾವುದೇ ವಿಛಿದ್ರ ಶಕ್ತಿಯಿಂದ ವಿಚಲಿತರಾಗದೆ ತಮ್ಮ ಎಲ್ಲಾ ಶಕ್ತಿಯನ್ನು ಕ್ರೂಢೀಕರಿಸಿ ಕರ್ಮವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಅದೇ  ಫಲದ ಆಸೆಯಿಂದ ಕ್ರಿಯೆಗಳನ್ನು ಮಾಡಲು  ಅರಂಭಿಸಿದಲ್ಲಿ, ಆಗ ಗಮನವೆಲ್ಲವೂ ಫಲದ ಮೇಲೆ ಹೆಚ್ಚು ಕೇಂದ್ರೀಕೃತವಾಗಿ ಲಭಿಸಬೇಕಾದ ಯಶಸ್ಸಿನ ಫಲ ಸಿಗದೇ ಹೋಗುವ ಸಂಭವವೇ ಹೆಚ್ಚಾಗಿರುತ್ತದೆ ಎನ್ನುತ್ತದೆ. ಇನ್ನೂ ಸರಳವಾಗಿ ಹೇಳಬೇಕೆಂದರೆ, ನಮ್ಮ ಕೆಲಸವನ್ನು ನಾವು ಶ್ರದ್ಧಾಭಕ್ತಿಗಳಿಂದ ಮಾಡಿದಲ್ಲಿ ಫಲಾ ಫಲಗಳನ್ನು ಭಗವಂನ ಮೇಲೆ ಬಿಟ್ಟಲ್ಲಿ ಆತ ಖಂಡಿತವಾಗಿಯೂ ನಮ್ಮ ಕರ್ಮಕ್ಕೆ ಅನುಸಾರವಾಗಿ ಆಶೀರ್ವಾದವನ್ನು ಮಾಡುತ್ತಾನೆ.

ಇನ್ನು ಗೀತೆಯನ್ನು ಪಠಿಸುತ್ತಾ  ಆದರಲ್ಲಿ ಹೇಳಿದ ಧ್ಯೇಯೋದ್ಧೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ  ಆಗುವ ಲಾಭಗಳನ್ನು ಗೀತೆಯ ಧ್ಯಾನ ಶ್ಲೋಕದಲ್ಲಿ ಅತ್ಯಂತ ಸರಳವಾಗಿ ಹೀಗೆ ಹೇಳಲಾಗಿದೆ.

ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಮ್ |

ಯತ್ಕೃಪಾ ತಮಹಂ ವಂದೇ ಪರಮಾಂದಂ ಮಾಧವಂ ||

ಭಗವಂತನ ಅನುಗ್ರಹವಿದ್ದಲ್ಲಿ  ಮೂಗನೂ ಮಾತಾಳಿಯಾದರೂ ಹೆಳವ (ಕುಂಟ)ನೂ ಬೆಟ್ಟವನ್ನು ದಾಟುವ ಶಕ್ತಿಯನ್ನು ಪಡೆಯುತ್ತಾನೆ  ಎನ್ನುವುದು ಈ ಶ್ಲೋಕದ ಅರ್ಥ. ಹಾಗಾಗಿ  ಹಿಂದೂಗಳ ಪವಿತ್ರ ಗ್ರಂಥವನ್ನು ಕೇವಲ ಗೀತಾ ಜಯಂತಿಗಷ್ಟೇ ಮೀಸಲಾಗಿಡದೇ, ಅದನ್ನು ನಮ್ಮ ನಿತ್ಯವೂ ಪಠಿಸುತ್ತಾ ಜೀವನದಲ್ಲಿ ಸುಖಃ ಶಾಂತಿಯನ್ನು ಕಂಡುಕೊಳ್ಳೋಣ.

ಏನಂತೀರಿ?

ನಿಮ್ಮವನೇ ಉಮಾಸುತ

One thought on “ಗೀತಾ ಜಯಂತಿ

  1. ಪ್ರಿಯ ಶ್ರೀ ಶ್ರೀಕಂಠ ಬಾಳ ಕಂಚಿ ಸರ್, ಗೀತಾ ಜಯಂತಿ ಬಗ್ಗೆ. ಅಧ್ಭುತ ವಾದ ಲೇಖನ ತಮ್ಮಿಂದ ಮೂಡಿಬಂದಿದ್ದು
    ನಿಮಗೆ ಧನ್ಯ ವಾದಗಳು 🙏

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s