ವಿಧಾನ ಪರಿಷತ್ತು ಚಿಂತಕರ ಚಾವಡಿಯೋ? ಕುಟುಂಬ, ರಾಜಕೀಯ ನಿರಾಶ್ರಿತರ ತಾಣವೋ?

ಇತ್ತೀಚೆಗೆ ನಡೆದ ವಿಧಾನ ಪರಿಷತ್ತಿನ ಚುನಾವಣೆಯ ಫಲಿತಾಂಶ ನೆನ್ನೆ ಪ್ರಕಟವಾಗಿ ಬೆಜೆಪಿ ಮೇಲ್ನೋಟಕ್ಕೆ 11 ಸ್ಥಾನ ಪಡೆದು ಬಹುಮತ ಗಳಿಸಿದೆ ಎನಿಸಿದರೂ ಕಳೆದ ಬಾರಿಗಿಂತಲೂ ಹೆಚ್ಚಿನ ಸ್ಥಾನವನ್ನು ಗಳಿಸಿ ಆಡಳಿತ ಪಕ್ಷದೊಡನೆ 11 ಸ್ಥಾನ ಪಡೆದು ಸಮಬಲ ಸಾಧಿಸಿದ್ದೇವೆ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಂಡು ಬೀಗುತ್ತಿದೆ. ಇನ್ನು6 ಸ್ಥಾನಗಳಲ್ಲಿ ಮಾತ್ರವೇ ಸ್ಪರ್ಧಿಸಿ ಕನಿಷ್ಟ ಪಕ್ಷ 3 ಸ್ಥಾನಗಳಲ್ಲಿ ಗೆದ್ದೇ ತೀರುತ್ತೇವೆ ಎಂದು ತೊಡೆ ತಟ್ಟಿದ್ದ ಜೆಡಿಎಸ್ ಯಥಾ ಪ್ರಕಾರ ಕೇವಲ 2 ಸ್ಥಾನವನ್ನು ಗಳಿಸಿದ್ದಲ್ಲಿ ಅಚ್ಚರಿಯಾಗಿ ಒಬ್ಬ ಪಕ್ಷೇತರ ಆರಿಸಿ ಬಂದಿದ್ದಾರೆ. ಫಲಿತಾಂಶವನ್ನು ಸ್ವಲ್ಪ ಕೂಲಂಕಶವಾಗಿ ನೋಡಿದರೆ ಪಕ್ಷಾತೀತವಾಗಿ ಕುಟುಂಬ ರಾಜಕಾರಣ ಢಾಳಾಗಿ ಕಣ್ಣಿಗೆ ರಾಚುವಂತಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಶರ ವಸಾಹತುವಾಗಿದ್ದ ನಮ್ಮ ದೇಶ ಸುಮಾರು 550+ ಸಣ್ಣ ಪುಟ್ಟ ರಾಜ್ಯಗಳಾಗಿ ವಿಭಜಿತವಾಗಿ ವಂಶಪಾರಂಪರ್ಯ ರಾಜರುಗಳು ಆಡಳಿತದಲ್ಲಿತ್ತು. ಸ್ವಾತಂತ್ರ್ಯಾ ನಂತರ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ದಿಟ್ಟತನದಿಂದಾಗಿ ಈ ಎಲ್ಲಾ ರಾಜ್ಯಗಳನ್ನೂ ಒಗ್ಗೂಡಿಸಿ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೊಸ್ಕರವೇ, ಪ್ರಜೆಗಳೇ ಆರಿಸಿ ಕಳುಹಿಸುವಂತಹ ಪ್ರಜಾಪ್ರಭುತ್ವವದ ಆಡಳಿತದ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು.

neh

ಆರಂಭದಲ್ಲಿ ಎಲ್ಲವೂ ಚನ್ನಾಗಿದೆ ಎನಿಸಿದ್ದಲ್ಲದೇ, ಭಾರತ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವದ ದೇಶ ಎಂದು ಹೆಮ್ಮೆಯಿಂದ ಬೀಗ ತೊಡಗಿತು. ಆದರೆ ಪ್ರಜಾಪ್ರಭುತ್ವದ ಅಡಿಯಲ್ಲಿಯೇ ನಿಧಾನವಾಗಿ ಕುಟುಂಬ ರಾಜಕಾರಣಕ್ಕೆ ದೇಶದ ಪ್ರಥಮ ಪ್ರಧಾನಿ ನೆಹರು ಅವರೇ ನಾಂದಿ ಹಾಡಿದರು ಎಂದರೂ ತಪ್ಪಾಗದು. ತಮ್ಮ ನಂತರ ತಮ್ಮ ಉತ್ತರಾಧಿಕಾರಿಯಾಗಿ ತಮ್ಮ ಮಗಳು ಇಂದಿರಾಗಾಂಧಿಯವರೇ ಇರಬೇಕೆಂದು ಬಯಸಿ ನಿಧಾನವಾಗಿ ಪಕ್ಷದ ನಿಷ್ಥಾವಂತ ಕಾರ್ಯಕರ್ತರನ್ನು ಬದಿಗೊತ್ತಿ ತಮ್ಮ ಮಗಳನ್ನು ಮುಂಚೂಣಿಯಲ್ಲಿ ತಂದಿದ್ದಲ್ಲದೇ ನೆಹರು ಅವರ ನಿಧನನದ ನಂತರ ಅವರ ಚೇಲಾಗಳ ಒತ್ತಡದ ನಡುವೆಯೂ ಉಳಿದ ಕಾಂಗ್ರೇಸ್ಸಿಗರ ಒತ್ತಾಯದ ಮೇರೆಗೆ ಲಾಲ ಬಹದ್ದೂರ್ ಶಾಸ್ತ್ರಿಗಳು ಈ ದೇಶದ ಅಧಿಕಾರದ ಚುಕ್ಕಾಣಿ ಹಿಡಿದರೂ, ಕೇವಲ 20 ತಿಂಗಳುಗಳ ಕಾಲ ಪ್ರಧಾನಿಯಾಗಿ ರಷ್ಯಾದ ತಾಷ್ಕೆಂಟಿನಲ್ಲಿ ಪಾಕ್ ಜೊತೆ ಒಪ್ಪಂದದ ನಂತರ ವಿವಾದಾತ್ಮಕವಾಗಿ ನಿಧನ ಹೊಂದಿದ ನಂತರ ಅಧಿಕಾರಕ್ಕೆ ಬಂದ ಇಂದಿರಾ, ಆಕೆಯ ಎರಡನೆಯ ಪುತ್ರ ಸಂಜಯ್ ಗಾಂಧಿ ಪುಂಡಾಟಿಕೆಗಳನ್ನು ಈ ದೇಶ ಸಹಿಸಿಕೊಳ್ಳಬೇಕಾಗಿ ಬಂದದ್ದು ದುರಾದೃಷ್ಟಕರ

ಇಂಡಿಯಾ ಎಂದರೆ ಇಂದಿರಾ ಎನ್ನುವಷ್ಟರ ಮಟ್ಟಿಗಿನ ಭಟ್ಟಂಗಿಗಳ ನಡುವೆ ಆಕೆಯೇ ಸಾಕಿ ಸಲಹಿದ್ದ ಖಲೀಸ್ಥಾನ್ ಬೆಂಬಲಿಗರಾದ ಆಕೆಯ ಅಂಗರಕ್ಷಕರಿಂದಲೇ ಹತ್ಯೆಗೊಳಗಾಗಿ 24 ಗಂಟೆ ಕಳೆಯುವುದರೊಳಗೆ ಸಾಂಸದನಾಗುವುದು ಬಿಡಿ, ಯಾವುದೇ ರಾಜಕೀಯದ ಹುದ್ದೆಯ ಅನುಭವವಿಲ್ಲದೇ ವಿಮಾನ ಚಾಲಕನಾಗಿದ್ದ ಇಂದಿರಾ ಅವರ ಮೊದಲನೇ ಮಗ ರಾಜೀವ್ ಗಾಂಧಿಯನ್ನು ರಾತ್ರೋರಾತ್ರಿ ಪ್ರಧಾನಮಂತ್ರಿ ಮಾಡಿದಾಗಲೇ ಪ್ರಜಾಪ್ರಭುತ್ವ ಸಂಪೂರ್ಣವಾಗಿ ನೆಲಕಚ್ಚಿತ್ತು.

ಕೇಂದ್ರದ ಹಿರಿಯ ನಾಯಕರುಗಳೇ ಕುಟುಂಬ ರಾಜಕಾರಣದಲ್ಲಿ ಮುಳುಗಿ ತೇಲುತ್ತಿರುವಾಗ ಇನ್ನು ರಾಜ್ಯಗಳನ್ನು ಕೇಳಬೇಕೇ? ಇಂದಿರಾಗಾಂಧಿ ನಿಧನರಾದ ನಂತರ, ರಾಜ್ಯಗಳಲ್ಲಿ ಕುಟುಂಬ ಕೇಂದ್ರೀಕೃತ ಪ್ರಾದೇಶಿಕ ಪಕ್ಷಗಳು ಉದಯಿಸಿದವು. ಹಾಗಾಗಿಯೇ ಕೇಂದ್ರದಲ್ಲಿ ಅಪ್ಪನಿದ್ದರೆ, ರಾಜ್ಯದಲ್ಲಿ ಮಗ, ಜಿಲ್ಲಾ ಪಂಚಾಯತ್ ನಲ್ಲಿ ಹೆಂಡತಿ ಇಲ್ಲವೇ ಕುಟುಂಬದ ಇತರೇ ಸದಸ್ಯರುಗಳೇ ಅಧಿಕಾರವನ್ನು ಅನುಭವಿಸತೊಡಗಿದರು. ಮೇವು ಹಗರಣದಲ್ಲಿ ಲಾಲೂ ಪ್ರಸಾದ್ ಯಾದವ್ ಸೆರೆಮನೆಗೆ ಹೋಗುವ ಸಂಧರ್ಭ ಎದುರಾದಾಗ, ಕೇವಲ ಮಕ್ಕಳನ್ನು ಹೆರುವ ಯಂತ್ರದಂತೆ ಗೃಹಿಣಿಯಾಗಿದ್ದ ಅನಕ್ಷರಸ್ಥೆ ರಾಬ್ಡಿ ದೇವಿಯನ್ನು ಮುಖ್ಯಮಂತ್ರಿಯಾಗಿಸಿ ಸೆರೆಮನೆಯಿಂದಲೇ ಬಿಹಾರವನ್ನು ಆಳ್ವಿಕೆ ನಡೆಸಿದ ಉದಾಹರಣೆಯೂ ಇದೆ.

devegowda

ಇನ್ನು ರಾಜ್ಯದ ರಾಜಕಾರಣದಲ್ಲಿಯೂ ಕುಟುಂಬ ರಾಜಕಾರಣ ಪ್ರಖರವಾಗಿದ್ದು ದೇವೇಗೌಡರು ಮುಂಚೂಣಿಯಲ್ಲಿ ಮುನ್ನಡೆಸುತ್ತಿದ್ದಾರೆ. ಅಪ್ಪಾ, ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು, ಬೀಗರು, ಸಂಬಂಧಿಗಳೇ ಶಾಸಕರು, ಸಾಂಸದರು, ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದಾರೆ. ಹಾಗೆಂದ ಮಾತ್ರಕ್ಕೆ ಕುಟುಂಬ ರಾಜಕಾರಣ ಕೇವಲ ಅದೊಂದೇ ಪಕ್ಷದಲ್ಲಿ ಇದೆ ಎಂದರೆ ತಪ್ಪಾದೀತು. ನೆನ್ನೆ ಪರಿಷತ್ತಿನ ಚುನಾವಣೆಯಲ್ಲಿ ಗೆದ್ದು ಬಂದಿರುವ ಅಭ್ಯರ್ಥಿಗಳನ್ನು ನೋಡಿದಲ್ಲಿ, ಡಿ.ಕೆ. ಶಿವಕುಮಾರ್ ಅವರ ಬಂಧುಗಳಾದ ರವಿ, ಸುಜಾ ಕುಶಾಲಪ್ಪ ಅವರ ಒಬ್ಬ ಸಹೋದರ ಶಾಸಕನಾಗಿದ್ದಲ್ಲಿ ಮತ್ತೊಬ್ಬರು ನಿರ್ಗಮಿತ ಎಂಎಲ್ಸಿ. ಪ್ರದೀಪ್ ಶೆಟ್ಟರ್ ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಶಾಸಕ ಜಗದೀಶ್ ಶೆಟ್ಟರ್ ಅವರ ಸಹೋದರ, ಮಾಜೀ ಪರಿಷತ್ತಿನ ಸಭಾಪತಿಗಳಾಗಿದ್ದ ಡಿ.ಹೆಚ್. ಶಂಕರ ಮೂರ್ತಿಗಳ ಮಗ ಡಿ ಎಸ್ ಅರುಣ್ ಶಿವಮೊಗ್ಗದಿಂದ ಬಿಜೆಪಿ ಪಕ್ಷದಿಂದ ಗೆದ್ದಿದ್ದಾರೆ. ಜೆಡಿಎಸ್ ನಿಂದ ಹೊಳೇನರಸೀಪುರದ ಶಾಸಕ ರೇವಣ್ಣನವರ ಪುತ್ರ ಸೂರಜ್ ಗೆಲುವು ಸಾಧಿಸಿದ್ದಾರೆ. ಇನ್ನು ಬೆಳಗಾವಿ ಜಿಲ್ಲೆಯಂತೂ ಕತ್ತಿ, ಕೋರೆ, ಜಾರಕೀಹೊಳೆ ಕುಟುಂಬದ್ದೇ ರಾಜಕಾರಣವಾಗಿ ಅವರ ಕಿರಿಯ ಸಹೋದರ ಲಖನ್ ಈ ಬಾರಿಯ ಪರಿಷತ್ ಚುನಾವಣೆಯಲ್ಲಿ ಗೆದ್ದಿದ್ದರೆ, ಈಗ ಲಕ್ಷ್ಮೀ ಹೆಬ್ಬಾಳ್ಕರ್ ಅವರ ತಮ್ಮ ಚನ್ನರಾಜ್ ಹಟ್ಟಿಹೊಳಿ ಆಯ್ಕೆಯಾಗುವ ಮೂಲಕ ಜಿಲ್ಲೆಯಲ್ಲಿ ನಾಲ್ಕನೇ ಕುಟುಂಬ ರಾಜಕಾರಣ ಆರಂಭವಾಗಿದೆ. ಹೀಗೆ ಪಕ್ಷಾತೀತವಾಗಿ ಎಲ್ಲಾ ಪಕ್ಷಗಳೂ ಕುಟುಂಬ ರಾಜಕಾರಣ ಮಾಡತೊಡಗಿದಲ್ಲಿ ಪ್ರಜಾಪ್ರಭುತ್ವಕ್ಕೆ ಬೆಲೆಯಾದರೂ ಹೇಗೆ ಬರುತ್ತದೆ? ಕುಟುಂಬದವರನ್ನೇ ಬೆಳೆಸುತ್ತಾ ಹೋದಲ್ಲಿ, ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಪಾಡೇನು? ಎಂಬ ಪ್ರಶ್ನೆ ಕಾಡುತ್ತದೆ.

parishat

ವಿಧಾನಸಭೆಯನ್ನು ಕೆಳಮನೆ ಎಂದು ಕರೆದರೆ, ವಿಧಾನ ಪರಿಷತ್ತನ್ನು ಶಾಸಕಾಂಗದ ಮೇಲ್ಮನೆ ಎಂದು ಕರೆಯಲಾಗುತ್ತದೆ. ಹೆಮ್ಮೆಯ ವಿಷಯವೇನೆಂದರೆ, ಭಾರತದಲ್ಲಿ ಸಂವಿಧಾನ ಜಾರಿಗೆ ಬರುವ ಮೊದಲೇ 1907ರಲ್ಲಿಯೇ ಚಿಂತಕರ ಚಾವಡಿ ಎಂದು ಮೈಸೂರು ಸಂಸ್ಥಾನದಲ್ಲಿ ಮೇಲ್ಮನೆ ಸ್ಥಾಪನೆಯಾಗಿತ್ತು. ಇದೇ ಮುಂದೆ ರಾಷ್ಟ್ರ ಮಟ್ಟದಲ್ಲಿ ರಾಜ್ಯಸಭೆ ಸ್ಥಾಪನೆಗೂ ಸ್ಫೂರ್ತಿಯಾಗಿತ್ತು.

parh2

ಶಾಸನ ನಿರೂಪಣೆ ಮತ್ತು ಆಡಳಿತ ವಿಚಾರಗಳಲ್ಲಿ ಸರ್ಕಾರಕ್ಕೆ ಸಹಕಾರಿಯಾಗಲೆಂಬ ಉದ್ದೇಶದಿಂದ ಕರ್ನಾಟಕ ವಿಧಾನ ಪರಿಷತ್ತು ಅಸ್ತಿತ್ವಕ್ಕೆ ಬಂತು. ಈ ವಿಧಾನ ಪರಿಷತ್ತಿನಲ್ಲಿ ವಿವಿಧ ಕ್ಷೇತ್ರಗಳಲ್ಲಿನ ತಜ್ಞರು, ಅನುಭವಿಗಳು ನೇರ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಲು ಸಾಧ್ಯವಾಗದೇ ಇರುವನ್ನು ವಿಧಾನಸಭೆಯಿಂದ, ಸ್ಥಳೀಯ ಸಂಸ್ಥೆಗಳಿಂದ, ಶಿಕ್ಷಕರ ಕ್ಷೇತ್ರ ಮತ್ತು ಪದವೀಧರರ ಕ್ಷೇತ್ರಗಳಿಂದ ಆಯ್ಕೆ ಮಾಡಿದರೆ, ಕೆಲವು ಸದಸ್ಯರನ್ನು ರಾಜ್ಯಪಾಲರು ನಾಮಕರಣ ಮಾಡುತ್ತಾರೆ. ಶ್ರೀ ಕೆ.ಟಿ.ಭಾಷ್ಯಂ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಎಂ.ಪಿ.ಎನ್.ಶಾಸ್ತ್ರಿ, ಬಸವರಾಜ ಕಟ್ಟೀಮನಿಮುಂತಾದ ಅನೇಕ ಮಹನೀಯರು ಪರಿಷತ್ತಿನ ಸದಸ್ಯರಾಗಿದ್ದರು. ಆರಂಭದಲ್ಲಿ ಯಾವುದೇ ರಾಜಕೀಯ ಪಕ್ಷಗಳ ದಾಕ್ಷಿಣ್ಯದಿಂದ ಮುಕ್ತರಾದ, ಪೂರ್ವಗ್ರಹ ಪೀಡಿತರಾಗದ ಈ ರೀತಿಯ ಹಿರಿಯರು ಹಾಗೂ ತಜ್ಞರ ಸಲಹೆ-ಸೂಚನೆಗಳು ಸಿಗಬೇಕೆಂಬುದು ಮೇಲ್ಮನೆ ರಚನೆಯ ಉದ್ದೇಶವಾಗಿತ್ತು. ಆನಂತರ ನಿಧಾನವಾಗಿ ಪರಿಷತ್ತಿನಲ್ಲಿಯೂ ರಾಜಕೀಯದ ಗಂಧಗಾಳಿ ಬೀಸ ತೊಡಗಿ, ಪಂಚಾಯತ್ ರಾಜ್ ವ್ಯವಸ್ಥೆಯನ್ನು ಪರಿಚಯಿಸಿದ ನೀರ್ ಸಾಬ್ ಎಂದೇ ಖ್ಯಾತರಾಗಿದ್ದ ಅಬ್ದುಲ್ ನಜೀರ್ಸಾಬ್, ವೈಕುಂಠ ಬಾಳಿಗಾ, ಮೊದಲ ಬಾರಿ ಮುಖ್ಯಮಂತ್ರಿಯಾದಾಗ ರಾಮಕೃಷ್ಣ ಹೆಗಡೆ, ಪ್ರಚಂಡ ವಿರೋಧಪಕ್ಷದ ನಾಯಕ ಎಂದೇ ಖ್ಯಾತಿ ಪಡೆದಿದ್ದ ಬಿಜೆಪಿಯ ಎ.ಕೆ.ಸುಬ್ಬಯ್ಯ ಮಳ್ಳೂರು ಆನಂದರಾವ್ ಮುಂತಾದ ಮಹನೀಯರುಗಳು ಮೇಲ್ಮನೆ ಸದಸ್ಯರಾಗಿದ್ದ ಕಾರಣ, ಪರಿಷತ್ತಿನಲ್ಲಿ ಗಂಭೀರ ಚರ್ಚೆಗಳು ನಡೆದು ಉತ್ತಮವಾದ ಕಾನೂನುಗಳು ರೂಪಿತಗೊಂಡವು.

pari3

90ರ ದಶಕದಿಂದ ಈಚೆಗಂತೂ, ವಿಧಾನ ಸಭೆಯಲ್ಲಿ ಸೋತವರು, ಜನರಿಂದ ನೇರವಾಗಿ ಆಯ್ಕೆಯಾಗಲಾಗದ ನಾಯಕರುಗಳು ಪರಿಷತ್ತಿಗೆ ಹಿಂಬಾಗಿಲಿನಿಂದ ಆಯ್ಕೆಯಾಗುವ ಮೂಲಕ ಪರಿಷತ್ತು ರಾಜಕೀಯ ನಾಯಕರುಗಳ ನಿರಾಶ್ರಿತ ತಾಣವಾಗಿರುವುದು ವಿಪರ್ಯಾಸವೇ ಸರಿ. ಈಗಂತೂ ವಿಧಾನ ಪರಿಷತ್ತಿನ ಶಾಸಕತ್ವ ಒಂದು ರೀತಿಯ ವ್ಯಾಪಾರವಾಗಿ ವಿವಿಧ ರಾಜಕೀಯ ಪಕ್ಷಗಳು ಹಣಕ್ಕಾಗಿ ಪರೋಕ್ಷವಾಗಿ ಶಾಸಕತ್ವವನ್ನು ಮಾರಾಟ ಮಾಡುವ ಮಟ್ಟಿಗೆ ಇಳಿದು ಬಿಟ್ಟಿವೆ. ಹಾಗಾಗಿ ಕೋಟ್ಯಾಂತಹ ಹಣವನ್ನು ಖರ್ಚು ಮಾಡಿ ಪರಿಷತ್ತಿ ಆಯ್ಕೆಯಾಗಲು ನೂರಾರು ಜನರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಈ ಬಾರಿಯಂತೂ ಮತಗಳು ಲಕ್ಷ ಲಕ್ಷ ರೂಪಾಯಿಗಳಿಗೆ ಬಿಕರಿಯಾಗಿ, ಹಣ ಕೊಟ್ಟವರು ಧರ್ಮಸ್ಥಳ ಮಂಜುನಾಥಸ್ವಾಮಿ ಮತ್ತು ತಿರುಪತಿ ತಿಮ್ಮಪ್ಪನ ಫೋಟೋದ ಮೇಲೆ ಆಣೆ ಮಾಡಿಸಿಕೊಳ್ಳುವ ಮಟ್ಟಕ್ಕೆ ಇಳಿದಿದ್ದರು ಎನ್ನುವ ಸುದ್ದಿಯೂ ಹರಿದಾಡುತ್ತಿತ್ತು ನಿಜಕ್ಕೂ ಛೇದದ ಸಂಗತಿಯಾಗಿದೆ.

ಹೀಗೆ ಹಣ ಕೊಟ್ಟು ಆಯ್ಕೆಯಾದವರು ಪಕ್ಷ ಸಿದ್ಧಾಂತ ಈ ರೀತಿ ಯಾವುದೇ ಕಟ್ಟು ಪಾಡುಗಳಿಗೆ ಬದ್ಧರಾಗದೇ, ಗಾಳಿ ಬಂದಾಗ ತೂರಿಕೋ ಎನ್ನುವಂತೆ ಪಕ್ಷದಿಂದ ಪಕ್ಷಕ್ಕೆ ಹಾರುವ ಹಕ್ಕಿಗಳಾಗಿ ಇಂದಿನ ರಾಜಕೀಯದಲ್ಲಿ ಯಾವುದೇ ನೈತಿಕತೆಯು ಉಳಿದಿಲ್ಲದೇ, ಲಾಭದಾಯಕ ವ್ಯವಹಾರವಾಗಿ ಅಧಿಕಾರಕ್ಕಾಗಿ ತಮ್ಮ ಕುಟುಂಬದ ಸದಸ್ಯರನ್ನೇ ಕರೆತಂದು ತಮ್ಮ ವ್ಯಾಪಾರ ಸಾಮ್ರಾಜ್ಯದ ವಿಸ್ತರಣಾವಾದಿಗಳಾಗಿದ್ದಾರೆ. ಹಾಗಾಗಿಯೇ ಕಾಂಗ್ರೇಸ್ಸಿನ ಸಿದ್ದರಾಮಯ್ಯ ಮತ್ತು ಅವರ ಪುತ್ರ ಶಾಸಕರಾಗಿದ್ದರೆ, ಇನ್ನು ದೇವೇಗೌಡರ ಇಡೀ ಕುಟುಂಬವೇ ಸಕ್ರೀಯ ರಾಜಕಾರಣದಲ್ಲಿದೆ. ಮಾಜಿ ಮುಖ್ಯಮಂತ್ರಿಗಳಾದ ಬಿಜೆಪಿಯ ಯಡಿಯೂರಪ್ಪನವರ ಇಬ್ಬರು ಪುತ್ರರೂ ರಾಜಕೀಯದಲ್ಲಿದ್ದಾರೆ. ಡಿ.ಕೆ. ಶಿವಕುಮಾರ್ ಶಾಸಕರಾದರೆ, ಡಿ.ಕೆ. ಸುರೇಶ್ ಸಾಂಸದರು. ಇನ್ನೂ ಹೇಳ ಬೇಕೆಂದರೆ, ಪ್ರಸಕ್ತ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರೂ ಮಾಜೀ ಸಿಎಂ ಅವರ ಪುತ್ರರೇ. ಹಾಗಾಗಿ ಈಗ ಕುಟುಂಬ ರಾಜಕಾರಣಕ್ಕೆ ಯಾವುದೇ ಪಕ್ಷವೂ ಹೊರತಾಗಿಲ್ಲ. ದೇಶದಲ್ಲಿ ಕುಟುಂಬ ರಾಜಕಾರಣ ಹೀಗೆಯೇ ಮುಂದು ವರೆದಲ್ಲಿ ಪ್ರಜಾಪ್ರಭುತ್ವದ ಉದ್ದೇಶಕ್ಕೆ ಮಾರಕವಾಗುತ್ತದೆ.

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಪ್ರಭುಗಳು ಎನ್ನುವ ಮಾತಿದೆ ಹಾಗಾಗಿ ಇನ್ನು ಮುಂದೆಯಾದರೂ ಧರ್ಮ, ಜಾತಿ, ಪಕ್ಷ, ಸಿದ್ಧಾಂತ ಹಣ, ಹೆಂಡ ಎಲ್ಲವನ್ನು ಮರೆತು ನಿರ್ಧಾಕ್ಷಿಣ್ಯವಾಗಿ ಕುಟುಂಬ ರಾಜಕಾರಣಿಗಳನ್ನು ಧಿಕ್ಕರಿಸಿದಾಗಲೇ ಇದಕ್ಕೊಂದು ಶಾಶ್ವತವಾದ ಪರಿಹಾರವನ್ನು ತರಬಹುದು ಅಲ್ಲವೇ?

ಏನಂತೀರೀ?

ನಿಮ್ಮವನೇ ಉಮಾಸುತ

One thought on “ವಿಧಾನ ಪರಿಷತ್ತು ಚಿಂತಕರ ಚಾವಡಿಯೋ? ಕುಟುಂಬ, ರಾಜಕೀಯ ನಿರಾಶ್ರಿತರ ತಾಣವೋ?

  1. ಪ್ರಸ್ತುತ ರಾಜಕೀಯ ಸನ್ನಿವೇಶ, ನೆಲೆಗಟ್ಟಿನಲ್ಲಿ ನೋಡುವುದಾದರೆ, ಈ ಕೌಟುಂಬಿಕ ರಾಜಕಾರಣ ದೇಶದಾದ್ಯಂತ ವೈರಾಣುವಿನಂತೆ ಹಬ್ಬಿ ಬಿಟ್ಟಿದೆ.
    ಹಾಗಾಗಿ ಸದ್ಯದಲ್ಲಿ ಇದರಿಂದ ಹೊರಬರುವ ಯಾವ ಲಕ್ಷಣಗಳೂ ಇಲ್ಲ..ರಾಜಕೀಯವನ್ನು ಸೇವೆ ಎಂದು ಇಂದು ಯಾವ ರಾಜಕಾರಣಿಯೂ ತಿಳಿದಿಲ್ಲ ಅದನ್ನು ಲಾಭದಾಯಕ ಉದ್ಯಮದಂತೆ ಬಳಸಿ, ಬೆಳೆಸಿ ಮುನ್ನಡೆಯುತ್ತಿರುವ ಕಾರಣ ಮುಂಬರುವ ದಿನಗಳಲ್ಲಿ ನೈಜ ಪ್ರಜಾ ಪ್ರಭುತ್ವಕ್ಕೂ ದೊಡ್ಡಮಟ್ಟದ ಹೋರಾಟವೇ ನಡೆಯಬಹುದೇನೋ???

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s