ಹನುಮದ್ ವ್ರತ

WhatsApp Image 2021-12-14 at 4.02.00 PM (2)

ರಾಮನ ಪರಮ ಭಕ್ತ ಹನುಮಂತನನ್ನು ನೆನೆದರೇ ಸಾಕು ಬುದ್ಧಿ, ಬಲ, ಯಶಸ್ಸು, ಧೈರ್ಯ, ಎಲ್ಲವೂ ಪ್ರಾಪ್ತವಾಗುತ್ತದೆ ಎಂದೇ ಎಲ್ಲಾ ಆಸ್ತಿಕರ ನಂಬಿಕೆಯಾಗಿದೆ. ಹಾಗಾಗಿ ಇಂದು ಮಾರ್ಗಶಿರ ಮಾಸದ ತ್ರಯೋದಶಿ. ಬಹುತೇಕ ಆಸ್ತಿಕರು ಭಾದ್ರಪದ ಮಾಸದ ಶುದ್ಧ ಚತುರ್ದಶಿಯಂದು ಅನಂತವ್ರತವನ್ನು ಆಚರಿಸಿದಂತೆಯೇ ಈ ಮಾರ್ಗಶಿರ ಶುಕ್ಲ ತ್ರಯೋದಶಿಯಂದು ಈ ಹನುಮದ್ ವ್ರತವನ್ನು ಆಚರಿಸುವ ಪದ್ದತಿಯನ್ನು ರೂಢಿಯಲ್ಲಿಟ್ತು ಕೊಂಡಿದ್ದಾರೆ. ಆದರೆ ಈ ದಿನವನ್ನು ಅದೇಕೋ ಏನೋ ಬಹುತೇಕರು ಈ ದಿನವನ್ನು ಹನುಮದ್ ಜಯಂತಿ ಎಂದೇ ಸಂಭೋಧಿಸುತ್ತಾರೆ. ವಾಸ್ತವವಾಗಿ ಹನುಜ್ಜಯಂತಿ ಚೈತ್ರ ಮಾಸದ ಶುಕ್ಲ ಪೂರ್ಣಿಮೆಯಂದು ಆಚರಿಸಲಾಗುತ್ತದೆ.

ಅನಂತ ವ್ರತದಲ್ಲಿ ಯಮುನಾ ಪೂಜೆಯಾದರೆ ಇಲ್ಲಿ ಚಂಪಾ ಪೂಜೆ ಮಾಡಲಾಗುತ್ತದೆ. ಅನಂತನ ವ್ರತದಲ್ಲಿ ಕೆಂಪು ಬಣ್ಣದ ಹದಿನಾಲ್ಕು ಗಂಟುಗಳ ದಾರವನ್ನು ಕಟ್ಟಿಕೊಂಡಲ್ಲಿ ಹನುಮದ್ ವ್ರತದಂದು ಹಳದೀ ಬಣ್ಣದ ಹದಿಮೂರು ಗಂಟುಗಳ ದಾರವನ್ನು ಕಟ್ಟಿಕೊಳ್ಳಲಾಗುತ್ತದೆ.

ಈ ಹನುಮದ್ ವ್ರತದ ಆಚರಣೆಯ ಹಿಂದೆಯೂ ಒಂದು ಕುತೂಹಲಕಾರಿಯಾದ ಕಥೆಯಿದೆ.

ಬಾಲಕ ಹನುಮಂತನು ಕೆಂಪಗೆ ಹೊಳೆಯುತ್ತಿದ್ದ ಸೂರ್ಯದೇವನನ್ನು ಹಣ್ಣು ಎಂದು ಭಾವಿಸಿ ಆತನನ್ನು ತಿನ್ನಲು ಹೋದಾಗ, ಸೂರ್ಯದೇವನು ತನ್ನ ವಜ್ರಾಯುಧವನ್ನು ಬಾಲಕನ ಮೇಲೆ ಪ್ರಹಾರ ಮಾಡಿದಾಗ, ಪೆಟ್ಟು ತಿಂದ ಹನುಮಂತ ಭೂಲೋಕಕ್ಕೆ ಅಪ್ಪಳಿಸುತ್ತಾನೆ. ಸೂರ್ಯನಿಂದ ಮಗನ ಮೇಲೆ ಆದ ಹತ್ಯೆಯಿಂದ ಕೋಪಗೊಂಡ ವಾಯುದೇವರು ತನ್ನ ಮಗ ಹನುಮಂತನನ್ನು ಕರೆದುಕೊಂಡು ಒಂದು ಗುಹೆಯೊಳಗೆ ಅಂತರ್ಮುಖಿಯಾಗುತ್ತಾನೆ. ವಾಯುದೇವರು ಈ ರೀತಿ ಕುಪೀತರಾಗಿ ಅಡಗಿಕೊಂಡ ಪರಿಣಾಮ, ಪ್ರಪಂಚಾದ್ಯಂತ ಉಸಿರಾಟದ ತೊಂದರೆ ಉಂಟಾದಾಗ, ದೇವಾನು ದೇವತಿಗಳು ಬ್ರಹ್ಮದೇವರ ಬಳಿಗೆ ಹೋಗಿ ವಾಯುದೇವರ ಜೊತೆ ಸಂಧಾನ ಮಾಡಬೇಕೆಂದು ಕೋರಿದಾಗ ಅವರೆಲ್ಲರ ಇಚ್ಚೆಯಂತೆ ಬ್ರಹ್ಮನು ವಾಯುದೇವರ ಬಳಿಗೆ ಬಂದು ಹನುಮಂತನಿಗೆ ಚಿರಂಜೀವಿಯಾಗುವಂತ ಹರಸಿದ ದಿನವೇ, ಮಾರ್ಗಶಿರ ಮಾಸದ ಶುದ್ದ ತ್ರಯೋದಶಿ. ಹಾಗಾಗಿ ಅಂದು ಹನುಮದ್ ವ್ರತವನ್ನು ಆಚರಿಸಿದವರಿಗೆ ಸಕಲ ಅಭೀಷ್ಟವೂ ಲಭ್ಯವಾಗುವುದು ಎಂಬ ವರವನ್ನೂ ಕೊಡುತ್ತಾರೆ ಅಂದಿನಿಂದ ಎಲ್ಲರೂ ತಮ್ಮ ಇಚ್ಚೆಯನ್ನು ಸಾದರಪಡಿಸಿ ಕೊಳ್ಳಲು ಹನುಮದ್ವ್ರತವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿಕೊಂಡು ಬರುತ್ತಿದ್ದಾರೆ.

ತ್ರೇತಾಯುಗದಲ್ಲಿ ಸ್ವತಃ ಶ್ರೀ ರಾಮಚಂದ್ರನೇ ಹನುಮದ್ವ್ರತವನ್ನು ಆಚರಿಸಿದ್ದರೆ, ಸುಗ್ರೀವನೂ ಸಹಾ ತನ್ನ ಇಷ್ಟಾರ್ಥ ಸಿದ್ಧಿಗಾಗಿ ಈ ವ್ರತವನ್ನು ಮಾಡಿದ್ದನು. ಅದೇ ರೀತಿ ವಿಭೀಷಣನು ಸಹಾ ಈ ವ್ರತವನ್ನು ಮಾಡಿಯೇ ಲಂಕಾಧಿಪನಾದನು ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

ದ್ವಾಪರ ಯುಗದಲ್ಲಿ ಶ್ರೀ ಕೃಷ್ಣ ಪರಮಾತ್ಮನ ಅನುಜ್ಜೆಯಂತೆ ದ್ರೌಪದಿಯು ಹನುಮದ್ವ್ರತವನ್ನು ಆಚರಿಸಿ ತನ್ನ ಕೈಗೆ ದೋರವನ್ನು ಧರಿಸಿದ್ದಳು. ಈ ದೋರವನ್ನು ಗಮನಿಸಿದ ಅರ್ಜುನನು, ಹನುಮಂತನೊಬ್ಬ ಯಕ್ಕಚ್ಚಿತ್ ಕೋತಿಯಾಗಿದ್ದು ಆತನನ್ನು ತನ್ನ ರಥದ ಮೇಲಿನ ಧ್ವಜದಲ್ಲಿಟ್ಟಿದ್ದೇನೆ ಅಂತಹ ಮಂಗನ ವ್ರತವೇ ಎಂದು ಕುಚೋದ್ಯ ಮಾಡಿದ್ದಲ್ಲದೇ, ದ್ರೌಪದಿಯ ಕೈಯಲ್ಲಿ ಕಟ್ತಿದ್ದ ದೋರವನ್ನು ಕಿತ್ತು ಬಿಸಾಕಲು ಹೇಳಿದನು. ಈ ರೀತಿ ಹನುಮಂತನನ್ನು ಅಪಹಾಸ್ಯ ಮಾಡಿದ್ದರ ಫಲವಾಗಿಯೇ ಪಾಂಡವರು ವನವಾಸಕ್ಕೆ ದ್ಯೂತ ನಿಮಿತ್ತ ಹೋಗಬೇಕಾಯಿತು ಎಂದು ಮತ್ತೊಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

ಶ್ರದ್ಧಾ ಭಕ್ತಿಯಿಂದ ಈ ವ್ರತವನ್ನು ಆಚರಿಸುವುದಾಗಲೀ ಇಲ್ಲವೇ ಹನುಮದ್ ವ್ರತವನ್ನು ಕೇಳುವುದರಿಂದ ಅವರೆಲ್ಲರಿಗೂ ಮಂಗಳಾಕರವಾಗಿ ಅವರ ಇಷ್ಟಾರ್ಥವೆಲ್ಲವೂ ಶೀಘ್ರವಾಗಿ ಫಲ ಪ್ರದವಾಗುತ್ತದೆ ಎಂದೇ ಎಲ್ಲಾ ಆಸ್ತಿಕರ ನಂಬಿಕೆಯಾಗಿದೆ. ಈ ವ್ರತಾಚರಣೆಯಿಂದ ಸಂತಾನಹೀನರು ಸಂತಾನವನ್ನು, ಮೋಕ್ಷಾಪೇಕ್ಷಿಯುಳ್ಳವರು ಭಕ್ತಿಯ ಸಾಧನ ಮಾರ್ಗವನ್ನು ಪಡೆಯುತ್ತಾರೆ. ಇನ್ನೂ ನಾಲ್ಕು ವರ್ಣದವರಾದ, ಬ್ರಾಹ್ಮಣರು ವೇದ ವೇದಾಂತ ಪ್ರಾವೀಣ್ಯತೆ, ಕ್ಷತ್ರಿಯರು ರಾಜ್ಯಲಾಭ, ವೈಶ್ಯರು ಧನ ಲಾಭ ಪಡೆದರೆ,ಶೂದ್ರರು ಉತ್ತಮ ಬೆಳೆ ಪಡೆಯುವರು ಎಂಬುದೇ ಎಲ್ಲರ ನಂಬಿಕೆಯಾಗಿದೆ.

ಹಾಗಾಗಿಯೇ ದೇಶಾದ್ಯಂತ ಇರುವ ಬಹುತೇಕ ಹನುಮಂತನ ದೇವಸ್ಥಾನಗಳಲ್ಲಿ ಅತ್ಯಂತ ಸಡಗರ ಸಂಭ್ರಮಗಳಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ.

WhatsApp Image 2021-12-14 at 4.02.01 PM

ಬೆಂಗಳೂರಿನ ಭೂಪಸಂದ್ರದಲ್ಲಿರುವ ಶ್ರೀ ಆಭಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಆಚರಿಸಲ್ಪಡುವ ಹನುಮ ಜಯಂತಿ ಉತ್ಸವವನ್ನು ವರ್ಣಿಸುವುದಕ್ಕಿಂತಲೂ ಆ ಉತ್ಸವದಲ್ಲಿ ಭಾಗಿಗಳಾದಾಗಲೇ ಅಲ್ಲಿಯ ವೈಭೋಗ ಅರ್ಥವಾಗುತ್ತದೆ. ಈ ಹಿಂದೆ ಕಾಶೀ ವಿಶ್ವನಾಥ ದೇವಸ್ಥಾನವಿದ್ದಂತೆಯೇ ಈ ದೇವಸ್ಥಾನದ ಸುತ್ತಲೂ ಅನ್ಯಕೋಮಿನವರೇ ವಾಸವಾಗಿದ್ದು ಮುಖ್ಯ ರಸ್ತೆಯಿಂದ ಸಣ್ಣ ಸಣ್ಣ ಗಲ್ಲಿಗಳ ಮೂಲಕವೇ ಹಾದು ಹೋಗಬೇಕಾಗುತ್ತದೆ. ಪ್ರತೀ ದಿನದ ಪೂಜಾ ಕೈಕಂರ್ಯಗಳನ್ನು ನಡೆಸುವುದೇ ಬಹಳ ತ್ರಾಸದಾಯಕವಾಗಿರುವಾಗ ಇಂತಹ ದೊಡ್ಡ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುವುದು ನಿಜಕ್ಕೂ ಗಂಡೆದೆಯ ಗುಂಡಿಗೆ ಇರಲೇ ಬೇಕು.

WhatsApp Image 2021-12-14 at 4.02.03 PM

ಶ್ರೀ ಆಭಯ ಆಂಜನೇಯಸ್ವಾಮಿ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ಉತ್ಸಾಹೀ ತರುಣ ಶ್ರೀ ವೆಂಕಟೇಶ್, ಮುಖ್ಯಕಾರ್ಯದರ್ಶಿಗಳಾದ ಶ್ರೀ ಎಸ್. ಎಸ್. ಪಾಟೀಲ್ ಮತ್ತು ಖಜಾಂಜಿಗಳಾದ ಶ್ರೀ ಜಸ್ವಂತ್ ಅವರೊಂದಿಗೆ ನೂರಾರು ಬಿಸಿರಕ್ತದ ರಾಮಭಕ್ತರ ತರುಣರ ತಂಡ ಪ್ರತೀವರ್ಷವೂ ದೇವಸ್ಥಾನದ ಸುತ್ತಮುತ್ತಲೆಲ್ಲಾ ಕೇಸರಿಮಯವಾಗಿಸಿ ಅತ್ಯಂತ ಅರ್ಥಪೂರ್ಣವಾಗಿ ಹನುಮ ಜಯಂತಿಯನ್ನು ಸುಮಾರು ವರ್ಷಗಳಿಂದ ಭಾವೈಕ್ಯತೆಯ ಸಂಕೇತವಾಗಿ ನಡೆಸಿಕೊಂಡು ಹೋಗುತ್ತಿರುವುದು ಅತ್ಯಂತ ಅಭಿನಂದನಾರ್ಹವಾಗಿದೆ.

ಹನುಮದ್ ವ್ರತದ ಬೆಳಿಗ್ಗೆ ಸೂರ್ಯೋದಯದ ಸಮಯದಲ್ಲಿ ಕಳಸ ಹೊತ್ತ ಸುಮಂಗಲಿಯರಿಂದ ಗಂಗಾ ಪೂಜೆ ಮತ್ತು ಗೋಪೋಜೆ ನಡೆದ ನಂತರ ಸುಮಂಗಲೀಯರು ಶ್ರದ್ಧಾ ಭಕ್ತಿಗಳಿಂದ ಹೊತ್ತು ತಂದಿದ್ದ ಕಳಸದ ನೀರಿನಿಂದ ಶ್ರೀ ಆಭಯಾಂಜನೇಯ ಸ್ವಾಮಿ ಮತ್ತು ದುರ್ಗಾ ದೇವಿಗೆ ಅಭಿಷೇಕವನ್ನು ಮಾಡಿ ನಾನಾ ವಿಧದ ಪುಷ್ಪಗಳಿಂದ ಅಲಂಕರಿಸಿ ಶೋಷಡೋಪಚಾರದ ಪೂಜೆಮಾಡುವುದಲ್ಲದೇ, ದೇವಸ್ಥಾನದ ಆವರಣಲ್ಲೇ ಹೋಮ ಹವನಾದಿಗಳ ಜೊತೆಯಲ್ಲಿಯೇ ನೆರೆದಿರುವ ಭಕ್ತಾದಿಗಳ ಸಮ್ಮುಖದಲ್ಲಿ ಶ್ರೀ ಸೀತಾರಾಮ ಕಲ್ಯಾಣೋತ್ಸವವನ್ನು ಅದ್ದೂರಿಯಿಂದ ಶಾಸ್ರೋಕ್ತವಾಗಿ ಮಾಡಿ ಮಹಾಮಂಗಳಾರತಿಯ ನಂತರ ಮಧ್ಯಾಹ್ನ ನರೆದಿರುವ ಸಾವಿರಾರು ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಗುತ್ತದೆ.

ಸಂಜೆ ಭಾಜಾಭಜಂತ್ರಿಯೊಂದಿಗೆ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆಯನ್ನು ಭೂಪಸಂದ್ರದ ಪ್ರಮುಖ ರಸ್ತೆಗಳಲ್ಲಿ ಮಾಡುವ ಮುಖೇನ ಸಾಂಪ್ರದಾಯಿಕವಾಗಿ ಮತ್ತು ಅರ್ಥಪೂರ್ಣವಾಗಿ ಹನುಮದ್ ವ್ರತಕ್ಕೆ ಮಂಗಳವನ್ನು ಹಾಡಲಾಗುತ್ತದೆ.

anjanadri

ಇದೇ ರೀತಿಯಾಗಿ ದೇಶಾದ್ಯಂತ ಇರುವ ಲಕ್ಷಾಂತರ ದೇವಾಲಯಗಳಲ್ಲಿ ಬಹಳ ವೈಭವಯುತವಾಗಿ ಹನುಮ ಜಯಂತಿಯನ್ನು ಆಚರಿಸಲಾಗುತ್ತದೆ. ಹನುಮನ ಜನ್ಮಸ್ಥಳವಾದ ಕರ್ನಾಟಕದ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಲ್ಲಿಯೂ ಹನಮ ಮಾಲಾಧಾರಿಗಳ ಸಮ್ಮುಖದಲ್ಲಿ ಅತ್ಯಂತ ವೈಭವೋಪೇತವಾಗಿ ಹನಮದ್ ವ್ರತ ಆಚರಿಸಲ್ಪಡುತ್ತದೆ. ಮಾರ್ಗಶಿರ ಮಾಸದಲ್ಲಿ ಮಾಡುವ ಎಲ್ಲಾ ಶುಭಕಾರ್ಯಗಳೂ ಅತ್ಯಂತ ಹೆಚ್ಚಿನ ಫಲದಾಯಕ ಎಂಬ ನಂಬಿಕೆ ಇರುವ ಕಾರಣ ಸಮಯ ಮಾಡಿಕೊಂಡು ನಮ್ಮ ನಮ್ಮ ಮನೆಯ ಹತ್ತಿರ ಇರುವ ಹನುಮಂತನ ದೇವಸ್ಥಾನಕ್ಕೆ ಭೇಟಿ ನೀಡಿ ಆಂಜನೇಯನ ಕೃಪಾಶೀರ್ವಾದಕ್ಕೆ ಪಾತ್ರರಾಗೋಣ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s