ಅದು 19ನೇ ಶತಮಾನ. ನಮ್ಮ ದೇಶದಲ್ಲಿ ಅಸ್ಪೃಷ್ಯತೆ, ಬಾಲ್ಯ ವಿವಾಹ, ಸತಿ ಸಹಗಮನ ಪದ್ದತಿಯ ಜೊತೆಗೆ ಹೆಣ್ಣು ಮಕ್ಕಳಿಗೆ ಶಿಕ್ಷಣವೆಂಬುದೇ ಗಗನ ಕುಸುಮವೆನಿಸಿದ್ದ ಸಮಯದಲ್ಲಿ, ಮಹಾರಾಷ್ಟ್ರದಲ್ಲಿ ತಮ್ಮ ಸತ್ಯಶೋಧಕ ಚಳವಳಿಯ ಮೂಲಕ ಮಹಿಳಾ ಸಾಮಾಜಿಕ ಪಿಡುಗುಗಳ ವಿರುದ್ಧ ದೇಶದಲ್ಲೇ ಪ್ರಪ್ರಥಮ ಬಾರಿಗೆ ಮಹಿಳಾ ಸೇವಾ ಮಂಡಳಿಯೊಂದನ್ನು ಆರಂಭಿಸಿ ಮಹಿಳಾ ಶಿಕ್ಷಣದ ಜೊತೆಗೆ ಮಹಿಳಾ ಸಬಲಿಕರಣಕ್ಕೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದ, ಭಾರತದ ಮೊದಲ ಮಹಿಳಾ ಶಿಕ್ಷಕಿ ಎಂದೇ ಹೆಸರುವಾಸಿಯಾಗಿದ್ದ, ಶ್ರೀಮತಿ ಸಾವಿತ್ರಿಬಾಯಿ ಫುಲೆಯವರ ವ್ಯಕ್ತಿ ಮತ್ತು ವ್ಯಕ್ತಿತ್ವದ ಪರಿಚಯದ ಜೊತೆಗೆ ಅವರ ಸಾಹಸಮಯ ಯಶೋಗಾಥೆಯನ್ನು ಸವಿವರವಾಗಿ ತಿಳಿಯೋಣ ಬನ್ನಿ.
ಜನವರಿ 3, 1831ರಲ್ಲಿ ಮಹಾರಾಷ್ಟ್ರದ ನೈಗಾಂವ್ ಹಳ್ಳಿಯ ಅತ್ಯಂತ ಹಿಂದುಳಿದ ಮಾಲಿ ಸಮುದಾಯದ ರೈತ ಕುಟುಂಬದಲ್ಲಿ ಸಾವಿತ್ರಿಬಾಯಿಯವರ ಜನನವಾಗುತ್ತದೆ. ಅಮ್ಮನ ಎದೆ ಹಾಲು ಕುಡಿದ ತುಟಿಗಳು ಇನ್ನೂ ಆರುವ ಮುನ್ನವೇ ಕೇವಲ 9ನೆಯ ವಯಸ್ಸಿಗೇ 13 ವರ್ಷದ ಜ್ಯೋತಿರಾವ್ ಫುಲೆ (ಜ್ಯೋತಿಬಾ) ಅವರೊಂದಿಗೆ ಬಾಲ್ಯ ವಿವಾಹವಾದಾಗ ಆಕೆಗೆ ಓದುವ ಅವಕಾಶವೇ ಸಿಕ್ಕಿರಲಿಲ್ಲ. ಆದರೆ, ಶಿಕ್ಷಣದ ಮೂಲಕವೇ ಸಾಮಾಜಿಕ ಅಸಮಾನತೆಯನ್ನು ತೊಡೆದುಹಾಕ ಬಹುದು ಎಂದು ಬಲವಾಗಿ ನಂಬಿದ್ದ ಪತಿ ರಾಯರು ಮೊದಲು ತಮ್ಮ ಪತ್ನಿಗೆ ಶಿಕ್ಷಣವನ್ನು ಕಲಿಸಲು ಮುಂದಾದರು. ಮನೆಯಲ್ಲಿ ಕಲಿಸಲು ಅಸಾಧ್ಯ ಎಂಬುದನ್ನು ಗಮನಿಸಿ, ತಾವು ಹೊಲದಲ್ಲಿ ಕೆಲಸ ಮಾಡುವಾಗ ಬುತ್ತಿ ಹೊತ್ತು ತರುತ್ತಿದ್ದ ಪತ್ನಿಗೆ ಅಲ್ಲಿಯೇ ಮರದ ನೆರಳಿನಲ್ಲಿ ವಿದ್ಯಾಭ್ಯಾಸ ಮಾಡಿಸತೊಡಗಿದರು. ಈ ವಿಷಯವನ್ನು ತಿಳಿದ ಅವರ ಪೋಷಕರು ಮನೆಯಿಂದಲೇ ಹೊರಗೆ ಹಾಕುವ ಬೆದರಿಕೆ ಹಾಕಿದರೂ ಅದಕ್ಕೆ ಜಗ್ಗದೇ, ಮಹಿಳೆಯರಿಗೆ ಶಿಕ್ಷಣ ಕೊಡಿಸುವುದರ ಜೊತೆಗೆ ದಲಿತರ ಏಳ್ಗೆಗೆ ಪಣತೊಟ್ಟರು.
ಮದುವೆಯ ನಂತರವೂ ಜ್ಯೋತಿಬಾ ಅವರು ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿದ್ದಲ್ಲದೇ, ಮನೆಯಲ್ಲಿ ತಮ್ಮ ಪತ್ನಿಗೆ ಆರಂಭಿಕ ಶಿಕ್ಷಣವನ್ನು ಸ್ವತಃ ನೀಡಿದ ನಂತರ ಅವರ ಪತ್ನಿಯನ್ನು 1847ರಲ್ಲಿ ಪುಣೆಯಲ್ಲಿದ್ದ ನಾರ್ಮನ್ ಶಿಕ್ಷಕ ತರಬೇತಿ ಸಂಸ್ಥೆಗೆ ಸೇರಿಸಿ, ಕೇವಲ 17 ವರ್ಷದೊಳಗೆ ಶಿಕ್ಷಕಿ ತರಬೇತಿಯನ್ನು ಪಡೆದ ನಂತರ ಸಾವಿತ್ರಿಬಾಯಿಯವರು ಪುಣೆಯ ಮಹರವಾಢದಲ್ಲಿ, ತಮ್ಮ ಚಿಕ್ಕಮ್ಮ ಸಗುಣಾಬಾಯಿಯೊಂದಿಗೆ ಜೊತೆಗೂಡಿ ಮನೆಯಲ್ಲಿಯೇ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಲು ಆರಂಭಿಸಿ ದೇಶದ ಪ್ರಪ್ರಥಮ ಮಹಿಳಾ ಶಿಕ್ಷಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕೇವಲ 9 ಹೆಣ್ಣು ಮಕ್ಕಳಿಂದ ಆರಂಭವಾದ ಆ ಪಾಠಶಾಲೆ ನಂತರದ ದಿನಗಳಲ್ಲಿ ಹಂತ ಹಂತವಾಗಿ ವಿದ್ಯಾರ್ಥಿನಿಯರ ಸಂಖ್ಯೆ ಏರುತ್ತಾಹೋಗಿ 25ರ ಸಂಖ್ಯೆಯನ್ನು ತಲುಪಿದಾಗ ಅದರಿಂದ ಪ್ರೇರಿತವಾಗಿ 1848ರಲ್ಲಿ ಮತ್ತೆ ಸಗುಣಾಬಾಯಿ ಅವರ ಜೊತೆಗೂಡಿ, ಭೀಡೆವಾಡದಲ್ಲಿ ಭಾರತದ ಪ್ರಥಮ ಬಾಲಕಿಯರ ಶಾಲೆಯನ್ನು ಸ್ಥಾಪಿಸಿ ದಾಖಲೆಯನ್ನು ನಿರ್ಮಿಸಿದರು. ನಂತರದ ದಿನಗಳಲ್ಲಿ ಬಾಲಕಿಯರಿಗಾಗಿಯೇ ಪುಣೆಯಲ್ಲಿ ಮೂರು ಶಾಲೆಗಳನ್ನು ಆರಂಭಿಸಿದಾಗ ಅಂದಿನ ಕಾಲದಲ್ಲಿಯೇ ಸುಮಾರು 150 ವಿದ್ಯಾರ್ಥಿನಿಯರು ಈ ಶಾಲೆಗೆ ದಾಖಲಾಗಿದ್ದದ್ದು ಗಮನಾರ್ಹವಾಗಿತ್ತು.
ಉಳಿದೆಲ್ಲಾ ಶಾಲೆಗಳಿಗಿಂತಲೂ ಇವರ ಶಾಲೆಗಳಲ್ಲಿ ಪಠ್ಯ ಮತ್ತು ಬೋಧನಾ ಕ್ರಮ ವಿಭಿನ್ನವಾಗಿದ್ದು, ಹೆಣ್ಣು ಮಕ್ಕಳನ್ನು ಶಾಲೆಗೆ ಆಕರ್ಷಿಸುವ ಸಲುವಾಗಿ ಅವರಿಗೆ ವಿದ್ಯಾರ್ಥಿನಿ ವೇತನ ನೀಡುವ ಮೂಲಕ ಆರ್ಥಿಕವಾಗಿ ಹಿಂದುಳಿದವರೂ ಸಹಾ ಶಾಲೆಗೆ ಸೇರಲಾರಂಭಿಸಿದರು. ಇದರ ಜೊತೆಗೆ ಅಂದಿನ ಕಾಲದಲ್ಲಿ ಅಸ್ಪ್ರಷ್ಯರೆಂದು ಪರಿಗಣಿಸಲ್ಪಟ್ಟ ಮಾಂಗ್ ಮತ್ತು ಮಹರ್ ಜಾತಿಯ ಮಹಿಳೆಯರು ಮತ್ತು ಅವರ ಮಕ್ಕಳನ್ನೂ ತಮ್ಮ ಶಾಲೆಗೆ ಸೇರಿಸಿಕೊಂಡಿದ್ದರು. ಶಿಕ್ಷಣದ ಮಹತ್ವದ ಬಗ್ಗೆ ಪೋಷಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪೋಷಕ-ಶಿಕ್ಷಕರ ಸಭೆಗಳನ್ನು ನಡೆಸುತ್ತಿದ್ದದ್ದಲ್ಲದೇ, ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದರ ಜೊತೆಗೆ ಇಂಗ್ಲಿಷ್ ಭಾಷೆಯನ್ನು ಕಲಿಸುವುದಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತು. ಈ ಮಹತ್ತರ ಬದಲಾವಣೆಯಿಂದಾಗಿ ಇವರ ಶಾಲೆಯಲ್ಲಿ ಕಲಿಯುತ್ತಿದ್ದ ಹುಡುಗಿಯರ ಸಂಖ್ಯೆ ಆ ಕಾಲದಲ್ಲಿ ಪುಣೆಯ ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದ ಹುಡುಗರ ಸಂಖ್ಯೆಗಿಂತಲೂ ಹೆಚ್ಚಾಗಿತ್ತು ಎಂದರೆ ಅವರ ಶಾಲೆಯ ಮಹತ್ವದ ಅರಿವಾಗುತ್ತದೆ.
ಮಹಿಳೆಯರಿಗೆ ಮತ್ತು ಕೆಳಜಾತಿಯವರಿಗೆ ಶಿಕ್ಷಣ ನೀಡುತ್ತಿದ್ದ ಫುಲೆ ದಂಪತಿಗಳ ಪ್ರಯತ್ನ ಸವರ್ಣೀಯರ ಕೆಂಗಣ್ಣಿಗೆ ಗುರಿಯಾಗಿ ಇವರ ಬಗ್ಗೆ ವಯಕ್ತಿಕವಾಗಿ ಅಪಪ್ರಚಾರವನ್ನು ಆರಂಭಿಸಿದರು. ಸಾವಿತ್ರಿಬಾಯಿ ವಿದ್ಯೆ ಕಲಿತಿದ್ದರಿಂದ ಅವಳ ಗಂಡ ಅಕಾಲಿಕ ಮರಣ ಹೊಂದುತ್ತಾನೆ. ಅವಳು ಮಾಡಿರುವ ಈ ಪಾಪದಿಂದಾಗಿ ಅವಳು ತಿನ್ನುವ ಅನ್ನ ಹುಳುಗಳಾಗಿ ಮಾರ್ಪಡುತ್ತದೆ. ವಿದ್ಯೆ ಕಲಿತ ಹೆಣ್ಣು ಮಕ್ಕಳು ಮನೆಯವರ ಹಿಡಿತಕ್ಕೆ ಸಿಗದೇ ಹೋಗುತ್ತಾರೆ ಎಂಬ ಆರೋಪಗಳನ್ನು ಮಾಡಿದರೂ, ಈ ಎಲ್ಲಾ ಗೊಡ್ಡು ಬೆದರಿಕೆಗಳಿಗೆ ಸಾವಿತ್ರಿಬಾಯಿಯವರು ಮಣಿಯದಿದ್ದಾಗ, ಅವರನ್ನು ಅತ್ಯಂತ ಕೆಟ್ಟ ಭಾಷೆಗಳಲ್ಲಿ ನಿಂದಿಸುತ್ತಿದ್ದರಲ್ಲದೇ, ಹಲವಾರು ಬಾರಿ ದೈಹಿಕ ಹಲ್ಲೆಯನ್ನೂ ಮಾಡಲಾಗಿತ್ತು.
ಇದರ ಮುಂದುವರೆದ ಭಾಗವಾಗಿ ಸಾವಿತ್ರ ಬಾಯಿ ಶಾಲೆಗೆ ಹೋಗುತ್ತಿದ್ದಾಗ ಆಕೆಯ ಮೇಲೆ ಸಗಣಿ, ಮೊಟ್ಟೆ, ಟೊಮ್ಯಾಟೋ ಮತ್ತು ಕಲ್ಲುಗಳನ್ನು ಎಸೆದು ಅಪಹಾಸ್ಯ ಮಾಡುತ್ತಿದ್ದಾಗ ಮಾನಸಿಕವಾಗಿ ಕುಗ್ಗಿಹೋಗಿದ್ದ ಆಕೆಗೆ ಅವರ ಪತಿರಾಯರಾದ ಜ್ಯೋತಿಬಾ ಅವರು ಇನ್ನು ಮುಂದೆ ಶಾಲೆಗೆ ಹೋಗುವಾಗ ಚೀಲದಲ್ಲಿ ಒಂದು ಹೆಚ್ಚುವರಿ ಸೀರೆಯನ್ನು ತೆಗೆದುಕೊಂಡು ಹೋಗಲು ಸೂಚಿಸಿದ್ದಲ್ಲದೇ, ಈ ರೀತಿಯಾಗಿ ದಾರಿಯಲ್ಲಿ ಮೇಲ್ಜಾತಿಯ ಸಂಪ್ರದಾಯವಾದಿಗಳು ಅವರ ಮೇಲೆ ಹಲ್ಲೆ ಮಾಡಿದಾಗ ಶಾಲೆಗೆ ಹೋಗಿ ಕೊಳಕಾದ ಸೀರೆಯನ್ನು ಬದಲಿಸಿಕೊಂಡು ಕೆಲಸವನ್ನು ಮುಂದುವರೆಸಬೇಕೆಂದು ಧೈರ್ಯವನ್ನು ತುಂಬುತ್ತಿದ್ದರು.
ಈ ರೀತಿಯ ಆಕ್ರಮಣಕ್ಕೆ ಆರಂಭದಲ್ಲಿ ಹೆದರುತ್ತಿದ ಸಾವಿತ್ರಿಬಾಯಿಯವರು ನಂತರದ ದಿನಗಳಲ್ಲಿ ತಮ್ಮನ್ನು ಅವಮಾನಿಸುತ್ತಿದ್ದವರಿಗೆ ನಿಮ್ಮೀ ಪ್ರತಿಭಟನೆ ನನಗೆ ಮತ್ತಷ್ಟು ಸ್ಫೂರ್ತಿಯನ್ನು ತುಂಬುತ್ತಿರುವ ಕಾರಣ, ನಿಮಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಹೇಳಿದಾಗ ಆದಕ್ಕೂ ಜಗದ್ದೇ ಹೋದಾಗ, ದಂಡ ದಶಗುಣಂ ಎಂಬಂತೆ ಅದೊಮ್ಮೆ ಪುಣೆಯಲ್ಲಿ ತಮಗೆ ತೊಂದರೆ ಕೊಟ್ಟವನೊಬ್ಬನಿಗೆ ಸಾವಿತ್ರಿ ಬಾಯಿಯವರು ಕಪಾಳ ಮೋಕ್ಷ ಮಾಡಿದ ನಂತರವೇ ಅವರಿಗೆ ತೊಂದರೆ ಕೊಡುವುದು ನಿಂತಿತು.
ಆದರೆ, ಇಷ್ಟಕ್ಕೇ ಸುಮ್ಮನಾಗದ ಈ ಸಂಪ್ರದಾಯವಾದಿಗಳು ಜ್ಯೋತಿಬಾ ಮಾಡುತ್ತಿರುವ ಈ ಸಾಮಜಿಕ ಸುಧಾರಣೆಗಳು ಶಾಸ್ತ್ರದ ವಿರುದ್ದವಾಗಿದೆ ಎಂಬ ನೆಪವೊಡ್ಡಿ ಅವರ ಪೋಷಕರ ಮೇಲೆ ಒತ್ತಡ ಹೇರಿ ಆ ದಂಪತಿಗಳನ್ನು ಮನೆಯಿಂದ ಹೊರಗೆ ಹಾಕುವುದರಲ್ಲಿ ಸಫಲಾದರು. ಹೀಗೆ ಮನೆಯಿಂದ ಹೊರತಳ್ಳಲ್ಪಟ್ಟ ದಂಪತಿಗಳಿಗೆ ಅವರ ಸ್ನೇಹಿತರಾಗಿದ್ದ ಉಸ್ಮಾನ್ ಶೇಕ್ ಕುಟುಂಬ ಆಶ್ರಯ ನೀಡಿತು. ಶೇಖ್ ಅವರ ಸಹೋದರಿ ಫಾತಿಮಾ ಬೇಗಂ ಅವರೂ ಸಹಾ ಸಾವಿತ್ರಿಬಾಯಿಯೊಂದಿಗೆ ಶಿಕ್ಷಕ ತರಬೇತಿಗೆ ಸೇರಿಕೊಂಡು, ಇಬ್ಬರೂ ಒಟ್ಟಿಗೆ ಪದವಿ ಪಡೆಯುವ ಮೂಲಕ ಫಾತಿಮಾ ಅವರು ಭಾರತದ ಮೊದಲ ಮುಸ್ಲಿಂ ಮಹಿಳಾ ಶಿಕ್ಷಕಿ ಎಂಬ ಹೆಗ್ಗಳಿಕೆ ಪಾತ್ರರಾದರು. ನಂತರದ ದಿನಗಳಲ್ಲಿ ಅವರಿಬ್ಬರು ಸೇರಿಕೊಂಡು ಉಸ್ಮಾನ್ ಶೇಕ್ ಮನೆಯಲ್ಲಿಯೇ ಶಾಲೆಯನ್ನು ಆರಂಭಿಸಿದ್ದರು. 1848ರಿಂದ 1852ರಷ್ಟರಲ್ಲಿ ಈ ದಂಪತಿಗಳು ಮಹಿಳೆಯರಿಗಾಗಿ ಒಟ್ಟು 18 ಶಾಲೆಗಳನ್ನು ಆರಂಭಿಸಿದ್ದರು.
1852ರಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಇಂತಹ ಮಹತ್ತರ ಸಾಧನೆಯನ್ನು ಸಲ್ಲಿಸಿದ್ದದ್ದನ್ನು ಗುರುತಿಸಿದ ಅಂದಿನ ಬ್ರಿಟಿಷ್ ಸರ್ಕಾರ ಜ್ಯೋತಿಬಾರವರವನ್ನು ಸನ್ಮಾನಿಸಿದಾಗ, ಅವರು ತಮ್ಮ ಪತ್ನಿಯವರನ್ನು ವೇದಿಕೆ ಮೇಲೆ ಕರೆದು, ನಿಜ ಹೇಳ ಬೇಕೆಂದರೆ, ಈ ಅಭಿನಂದನೆಗೆ ನನಗಿಂತ ನೀನೇ ಅರ್ಹಳು. ನಾನು ಹಲವಾರು ಕಡೆ ಶಾಲೆಗಳನ್ನು ಪ್ರಾರಂಭಿಸಲು ಕಾರಣಕರ್ತನಾದರೂ, ಆ ಎಲ್ಲಾ ಶಾಲೆಗಳ ಬೆಳವಣಿಗೆಯ ಹಾದಿಯಲ್ಲಿ ಎದುರಾದ ಎಲ್ಲಾ ಸಂಕಷ್ಟಗಳನ್ನು ನೀನು ಧೈರ್ಯದಿಂದ ಎದುರಿಸಿದ್ದಲ್ಲದೇ ಆ ಶಾಲೆಗಳಿಗೆ ಹೊಸ ರೂಪ ಮತ್ತು ಚೈತನ್ಯವನ್ನು ತುಂಬಿರುವೆ. ಹಾಗಾಗಿ ಇದು ನನ್ನ ಮನಃಪೂರ್ವಕ ಅಭಿನಂದನೆಗಳು ಎನ್ನುತ್ತಾ ತಮಗೆ ಗೌರವದಿಂದ ಸಮರ್ಪಿಸಿದ್ದ ಶಾಲನ್ನು ತಮ್ಮ ಮಡದಿಗೆ ಹೊದಿಸಿದಾಗ ಇಡೀ ಸಭೆಗೆ ಸಭೆಯೇ ಎದ್ದು ನಿಂತು ಕರತಾಡನದೊಂದಿಗೆ ಆ ದಂಪತಿಗಳಿಗೆ ಗೌರವ ಸೂಚಿಸಿತ್ತು. ಅದೇ ಸಮಾರಂಭದಲ್ಲಿಯೇ ಸಾವಿತ್ರಿಬಾಯಿಯವರೂ ಸಹಾ ಅತ್ಯುತ್ತಮ ಶಿಕ್ಷಕಿಯೆಂಬ ಎಂಬ ಗೌರವಕ್ಕೆ ಪಾತ್ರರಾಗಿದ್ದರು.
ಮುಂದೆ, ಈ ದಂಪತಿಗಳು ಶಿಕ್ಶಣ ವಂಚಿತ ಕೃಷಿಕ ಮತ್ತು ಕಾರ್ಮಿಕ ವರ್ಗದ ಮಹಿಳೆಯರು ಮತ್ತು ಅವರ ಮಕ್ಕಳಿಗಾಗಿ 1855ರಲ್ಲಿ ರಾತ್ರಿ ಶಾಲೆಯನ್ನು ಆರಂಭಿಸಿದ್ದಲ್ಲದೇ, ಆರ್ಥಿಕವಾಗಿ ಸಬಲರಲ್ಲದವರಿಗೂ ಶಿಕ್ಷಣಕ್ಕೆ ಉತ್ತೇಜನ ಕೊಡಲು ಮಹಾರಾಷ್ಟ್ರದಾದ್ಯಂತ ಒಟ್ಟು 52 ಉಚಿತ ವಸತಿ ನಿಲಯಗಳನ್ನು ಸ್ಥಾಪಿಸಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮೂಡಿಸಿದ್ದರು ಎಂದರೂ ತಪ್ಪಾಗದು.
ಆರಂಭದಲ್ಲಿ ಶಿಕ್ಷಣದೊಂದಿಗೆ ತಮ್ಮ ಕೆಲಸವನ್ನು ಆರಂಭಿಸಿದ ಈ ದಂಪತಿಗಳು ನಂತರದ ದಿನಗಳಲ್ಲಿ ಸಾಮಾಜಿಕ ಪರಿವರ್ತನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಸೆಪ್ಟೆಂಬರ್ 24, 1873ರಲ್ಲಿ ಸತ್ಯಶೋಧಕ ಸಮಾಜವೆಂಬ ಸಂಸ್ಥೆಯನ್ನು ಆರಂಭಿಸಿ ಅದರ ಮೂಲಕ ಎಲ್ಲ ಜಾತಿ, ಧರ್ಮ ಮತ್ತು ವರ್ಗದವರನ್ನು ಸದಸ್ಯರನ್ನಾಗಿಸಿ, ಸಮಾಜ ಸುಧಾರಣೆಗೆ ನಾಂದಿ ಹಾಡಿದರು. ಈ ಸಂಸ್ಥೆಯ ಮೂಲಕ ಸತ್ಯಶೋಧಕ ಮದುವೆಯನ್ನು ಆರಂಭಿಸಿ, ತನ್ಮೂಲಕ ವರದಕ್ಷಿಣೆ ಇಲ್ಲದೇ, ಪುರೋಹಿತರ ಸಾರಥ್ಯವಿಲ್ಲದೆ, ಮದುವೆಯಾಗುವ ದಂಪತಿಗಳು ಶಿಕ್ಷಣ ಮತ್ತು ಸಮಾನತೆಯ ಪ್ರತಿಜ್ಞೆಯನ್ನು ತೆಗೆದುಕೊಳ್ಳುವಂತಹ ಪದ್ದತಿಯನ್ನು ರೂಢಿಗೆ ತಂದರು. ಅನೇಕರ ವಿರೋಧಗಳ ನಡುವೆಯೂ, ವಿಧವೆಯರ ವಿವಾಹವನ್ನು ಆಯೋಜಿಸಿದ್ದಲ್ಲದೇ ಸರಳ ವಿವಾಹಕ್ಕೆ ಪ್ರೇರಣೆಯಾದರು. ತಮ್ಮ ಸಂಸ್ಥೆಯ ಮೂಲಕ ವಿಧವೆಯರ ಮಕ್ಕಳನ್ನು ದತ್ತು ಪಡೆದದ್ದಲ್ಲದೇ, ವಿಧವೆಯರಿಗೆ ಮತ್ತು ಅನಾಥ ಮಕ್ಕಳಿಗಾಗಿ ಆಶ್ರಮ ತೆರೆದರು., ವಿಧವೆಯರ ಕೇಶ ಮುಂಡನದ ವಿರುದ್ಧ ಕ್ಷೌರಿಕರಿಂದಲೇ ಬಹಿಷ್ಕಾರವನ್ನು ಮಾಡಿಸುವ ಮೂಲಕ ವಿಶಿಷ್ಟವಾದ ಪ್ರತಿಭಟನೆಯನ್ನು ನಡೆಸಿದ್ದರು. ಅದೇ ಸಮಯದಲ್ಲಿ ಅಸ್ಪ್ರಶ್ಯರಿಗೆ ಸಾರ್ವಜನಿಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದನ್ನು ಗಮನಿಸಿ ತಮ್ಮ ಮನೆಯಂಗಳದಲ್ಲಿಯೇ ಬಾವಿ ತೋಡಿಸಿ ಅವರಿಗೆ ನೀರಿನ ವ್ಯವಸ್ಥೆ ಕಲ್ಪಿಸಿದ್ದರು.
ಇಷ್ಟೆಲ್ಲಾ ಕೆಲಸ ಕಾರ್ಯಗಳಲ್ಲಿ ನಿರತಾಗಿದ್ದ ಫುಲೆ ದಂಪತಿಗಳಿಗೆ ಮಕ್ಕಳಿಲ್ಲದಿದ್ದ ಕಾರಣ, ಆ ದಂಪತಿಗಳು ಒಬ್ಬ ವಿಧವೆಗೆ ಜನಿಸಿದ ಯಶವಂತ ರಾವ್ ಎಂಬ ಬಾಲಕನನ್ನು ದತ್ತು ಪಡೆದು, ಅವನಿಗೆ ಒಳ್ಳೆಯ ವಿದ್ಯಾಭ್ಯಾಸ ಓದಿಸಿ ವೈದ್ಯನನ್ನಾಗಿಸಿದರು. ಮುಂದೆ ಯಶವಂತ್ ಸಹಾ ಅಂತರ್ಜಾತಿಯ ವಿವಾಹವಾಗುವ ಮೂಲಕ ತಮ್ಮ ಸತ್ಯಶೋಧಕ ಸಂಸ್ಥೆಯ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋದನು. 1890ರಲ್ಲಿ ಜ್ಯೋತಿಬಾ ಅವರು ನಿಧನರಾದಾಗ, ಎಲ್ಲರ ವಿರೋಧಗಳ ನಡುವೆಯೂ ತಮ್ಮ ಪತಿಯ ಚಿತೆಗೆ ಸ್ವತಃ ತಾವೇ ಅಗ್ನಿಸ್ಪರ್ಶ ಮಾಡಿ ಒಂದು ಅಪರೂಪದ ನಿದರ್ಶನಕ್ಕೆ ಕಾರಣೀಭೂತರಾದದ್ದಲ್ಲದೇ, ಸತ್ಯಶೋಧಕ ಸಮಾಜದ ಸಂಪೂರ್ಣ ಮೇಲ್ವಿಚಾರಣೆಯನ್ನು ಸಾವಿತ್ರಿಬಾಯಿಯವರೇ ವಹಿಸಿಕೊಂಡರು.
1892ರಲ್ಲಿ ಇಡೀ ಮಹಾರಾಷ್ಟ್ರ ಕ್ಕೆ ಪ್ಲೇಗ್ ಮಹಾಮಾರಿ ಆವರಿಸಿದಾಗ ಅದಕ್ಕೆ ತಕ್ಷಣವೇ ಸ್ಪಂದಿಸಿದ ಸಾವಿತ್ರಿಯವರು ತಮ್ಮ ವೈದ್ಯ ಮಗನೊಂದಿಗೆ ಒಂದು ಆಸ್ಪತ್ರೆ ಪ್ರಾರಂಭಿಸಿ ಅಲ್ಲಿನ ರೋಗಿಗಳ ಆರೈಕೆಗೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಲ್ಲದೇ, ರೋಗಿಗಳಲ್ಲದೇ ಅವರ ಕುಟುಂಬವರ್ಗದವರು ಸೇರಿದಂತೆ ಪ್ರತಿ ದಿನ ಸುಮಾರು 2000 ಜನರಿಗೆ ಉಚಿತ ಊಟದ ವ್ಯವಸ್ಥೆ ಮಾಡಿಸಿದ್ದರು. ತನ್ಮೂಲಕ ಕ್ಷಾಮದ ಸಂದರ್ಭದಲ್ಲಿ ಹೆಣ್ಣು ಮಕ್ಕಳು ತಮ್ಮ ದೇಹ ಮಾರಿಕೊಳ್ಳುವುದನ್ನು ತಪ್ಪಿಸಿ ಘನತೆಯಿಂದ ಬದುಕಲು ದಾರಿಗಳನ್ನು ಹುಡುಕಿಕೊಟ್ಟರು. ಇದೇ ಕಾರ್ಯದಲ್ಲಿ ನಿರತರಾಗಿದ್ದಾಗ ಅದೊಂದು ದಿನ, 10 ವರ್ಷದ ಪ್ಲೇಗ್ ಪೀಡಿತ ಮಗುವವೊಂದನ್ನು ಆಸ್ಪತ್ರೆಗೆ ಸ್ವತಃ ಎತ್ತಿಕೊಂಡು ಹೋಗುವಾಗ ಸಾವಿತ್ರಿಯವರಿಗೂ ಸೋಂಕು ತಾಕಿ, ಚಿಕಿತ್ಸೆ ಪರಿಣಮಕಾರಿಯಾಗದೇ, 1897ರ ಮಾರ್ಚ್ 10ರಂದು ಸಾವಿತ್ರಿಬಾಯಿಯವರು ನಿಧನರಾದರು.
ಸ್ವತಃ ಕವಯಿತ್ರಿಯಾಗಿದ್ದ ಸಾವಿತ್ರಿಬಾಯಿ ಫುಲೆಯವರು ಕಾವ್ಯ ಫುಲೆ ಮತ್ತು ಭವನ್ ಕಾಶಿ ಸುಭೋದ್ ರತ್ನಾಕರ್ ಎಂಬ ಎರಡು ಕಾವ್ಯಸಂಗ್ರಹವನ್ನು ಪ್ರಕಟಿಸಿದ್ದದಲ್ಲದೇ, ತಮ್ಮ ಪತಿ ಜ್ಯೋತಿಬಾ ಅವರ ಭಾಷಣಗಳ ಸಂಗ್ರಹವನ್ನು ಸಂಪಾದಿಸಿ ಪ್ರಕಟಿಸುವ ಮೂಲಕ ತಮ್ಮ ಬದುಕಿನ ಕೊನೆಯಗಳಿಗೆಯವರೆಗೆ ಜನ ಪರ ಕೆಲಸ ಕಾರ್ಯಗಳಿಗೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು.
ಶಿಕ್ಷಣ ಕ್ಷೇತ್ರದಲ್ಲಿ ಅಪಾರವಾದ ಸೇವೆಯನ್ನು ಸಲ್ಲಿಸಿದ್ದ ಸಾವಿತ್ರಿಬಾಯಿ ಫುಲೆಯವರ ಸ್ಮರಣಾರ್ಥ ಪುಣೆ ವಿಶ್ವವಿದ್ಯಾಲಯವನ್ನು 2015ರಲ್ಲಿ ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಿದ್ದಲ್ಲದೇ ಮಾಡಲಾಯಿತು. ಅವರ ಜನ್ಮ ದಿನವಾದ ಜನವರಿ 3 ಬಾಲಿಕಾ ದಿನ್ ಎಂದು ಮಹಾರಾಷ್ಟ್ರಾದ್ಯಂತ ಆಚರಿಸುವುದನ್ನು ಜಾರಿಗೆ ತರಲಾಯಿತು. ಮಹಿಳಾ ಹಕ್ಕಿನ ಗಂಧಗಾಳಿಯೂ ಗೊತ್ತಿಲ್ಲದ ದಿನಗಳಲ್ಲಿ ಸಮಾಜ ಸುಧಾರಕರಾಗಿದ್ದ ತಮ್ಮ ಪತಿಯವರೊಂದಿಗೆ ಮಹಿಳೆಯರ ಸ್ಥಿತಿಗತಿಯನ್ನು ಸುಧಾರಿಸಿ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿದ ಶ್ರೀಮತಿ ಸಾವಿತ್ರಿಬಾಯಿ ಫುಲೆಯವರು ಖಂಡಿತವಾಗಿಯೂ ಪ್ರಾಥಃಸ್ಮರಣೀಯರೇ ಸರಿ.
ಏನಂತೀರೀ?
ನಿಮ್ಮವನೇ ಉಮಾಸುತ