ಸಿಂಧೂ ತಾಯಿ ಸಪ್ಕಾಲ್, ಅನಾಥ ಮಕ್ಕಳ ಅಕ್ಕರೆಯ ಆಯಿ

ಮಹಾರಾಷ್ಟ್ರದಲ್ಲಿ ಸಿಂಧೂ ತಾಯಿ ಎಂದರೆ ಅನಾಥರ ಪಾಲಿನ ಆಯಿ ಎಂದೇ ಖ್ಯಾತಿ ಪಡೆದಿದ್ದವರು. ಸುಮಾರು 50 ವರ್ಷಗಳಿಂದಲೂ  ಅನಾಥ ಮಕ್ಕಳಿಗೆ ಆಶ್ರಯ ನೀಡುವ ಮೂಲಕ ದಿಕ್ಕು ದೆಸೆ ಇಲ್ಲದ ಸಾವಿರಾರು ಅನಾಥ ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡಿ ಅವರಿಗೆ ಸೂಕ್ತವಾದ ವಿದ್ಯಾಭ್ಯಾಸವನ್ನು ನೀಡಿ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನು ಮಾಡಿರುವ ಕಾರಣ ಆಕೆ ತನಗೆ  207 ಅಳಿಯಂದಿರು ಮತ್ತು 36 ಸೊಸೆಯರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು.

ನವೆಂಬರ್ 14, 1948 ರಂದು ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯಲ್ಲಿ ಜನಿಸಿದ ಸಿಂಧು ಸಪ್ಕಾಲ್ ಸಿಂಧು ತಾಯಿ ಆಗಿ ರೂಪುಗೊಂಡಿದ್ದೇ ಒಂದು ರೋಚಕ ಕತೆ. ತನ್ನೂರಿನಲ್ಲೇ ಪ್ರಾಥಮಿಕ ವಿದ್ಯಾಭ್ಯಾಸದ ಅಂಗವಾಗಿ ತನ್ನ 4 ನೇ ತರಗತಿ ಮುಗಿಸಿ ಓದನ್ನು ಮುಂದುವರೆಸಬೇಕು ಎಂದು ಆಲೋಚಿಸುತ್ತಿರುವ ಸಮಯದಲ್ಲೇ ಆಕೆಯನ್ನು ಅದಾಗಲೇ 32 ವರ್ಷದ ವ್ಯಕ್ತಿಯೊಂದಿಗೆ  ಮದುವೆಯನ್ನು ಮಾಡಲಾಯಿತು.  ಆಕೆಗೆ ಕೇವಲ 19 ವರ್ಷದಗಳಾಗುವಷ್ಟರಲ್ಲಿ  ಮೂರು ಗಂಡುಮಕ್ಕಳ ತಾಯಿಯಾಗಿದ್ದಳಲ್ಲದೇ ನಾಲ್ಕನೇ ಮಗು ಹೊಟ್ಟೆಯಲ್ಲಿತ್ತು.

ಜೀವನೋಪಾಯಕ್ಕಾಗಿ ಅವರ ಊರಿನಲ್ಲಿಯೇ ಕೂಲಿ ಕೆಲಸ ಮಾಡುತ್ತಿದ್ದಾಗ ಅಲ್ಲೊಬ್ಬ ಹೆಣ್ಣುಮಕ್ಕಳನ್ನು ವಿಪರೀತವಾಗಿ ದ್ವೇಷಿಸುತ್ತಿದ್ದ ಕ್ರೂರ ವ್ಯಕ್ತಿಯೊಬ್ಬನಿದ್ದ. ಆತ ಹಳ್ಳಿಯ ಹೆಣ್ಣು ಮಕ್ಕಳಿಂದ ವಿಪರೀತವಾಗಿ ದುದಿಸಿಕೊಳ್ಳುತ್ತಿದ್ದದ್ದಲ್ಲದೇ, ದೈಹಿಕವಾಗಿಯೂ ದಂಡಿಸುತ್ತಾ, ಅವರ ದುಡಿದಕ್ಕೆ  ತಕ್ಕ ಹಣವನ್ನೂ ನೀಡದೇ ಸತಾಯಿಸುತ್ತಿದ್ದ. ಆತನ ಕ್ರೂರತೆಗೆ ಹೆದರಿ ಯಾರೂ ಸಹಾ ಚಕಾರವನ್ನು ಎತ್ತದಿದ್ದನ್ನು ಗಮನಿಸಿದ ಸಿಂಧು ಧೈರ್ಯ ಮಾಡಿ ಆತನ ವಿರುದ್ಧ  ಊರಿನ ಕಲೆಕ್ಟರ್ ಬಳಿ ದೂರು ನೀಡಿದಳು. ಆಗ ಪೊಲೀಸರು ಬಂದು ಆ ಕ್ರೂರಿಯನ್ನು ಕರೆದೊಯ್ಯುವ ಸಮಯದಲ್ಲಿ ಸಿಂಧುವಿನ ಮೇಲಿನ ದ್ವೇಷದಿಂದಾಗಿ,  ಆತ ಸಿಂಧುವಿನ ಪತಿಯ ಬಳಿ ಆಕೆಯ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದಲ್ಲದೇ, ನಿನ್ನ ಹೆಂಡತಿ ನಡತೆಗೆಟ್ಟವಳು. ನನಗೂ ಆಕೆಗೂ ಅಕ್ರಮ ಸಂಬಂಧವಿದ್ದು ಆಕೆಯ ಹೊಟ್ಟೆಯಲ್ಲಿರುವ  ಮಗು ನನ್ನದು ಎಂದು ಹೇಳಿದ್ದನ್ನೇ ನಂಬಿದ ಆಕೆಯ ಪತಿ ತುಂಬಿದ ಗರ್ಭಿಣಿ ಎಂಬುದನ್ನೂ ಪರಿಗಣಿಸಿದೇ, ಕೋಪದಿಂದ  ತನ್ನ ಹೆಂಡತಿಯ ಹೊಟ್ಟೆಗೆ ಜಾಡಿಸಿ ಒದ್ದ.  ಅಚಾನಕ್ಕಾಗಿ ಈ ಪರಿಯ ಏಟಿನಿಂದ ಹತ್ತೊಂಬತ್ತರ ಹರೆಯದ ಹುಡುಗಿ ಪ್ರಜ್ಞಾಹೀನಳಾದಳು. ಆಕೆ ನೆಲದ ಮೇಲೆ ‍ಚಲನೆ ಇಲ್ಲದೇ ಬಿದ್ದಿದ್ದನ್ನು ಗಮನಿಸಿ ಆಕೆ ಸತ್ತು ಹೋಗಿರಬೇಕು ಎಂದು ಭಾವಿಸಿ  ಹಸುಗಳ ತುಳಿತದಿಂದ ಅವಳು ಸತ್ತಳು ಎಂದು  ಜನ ಭಾವಿಸಲಿ ಎಂದು ಆಕೆಯನ್ನು ಹಸುಗಳಿದ್ದ ತನ್ನ ಕೊಟ್ಟಿಗೆಗೆ ಸಾಗಿಸಿ ಪರಾರಿಯಾಗಿದ್ದ.

ಪ್ರಾಣಿಗಳೇ ಗುಣದಲೀ ಮೇಲು ಮಾನವ  ಅದಕಿಂತ ಕೀಳು ಎನ್ನುವ ರಾಜಕುಮಾರ್ ಆವರ ಹಾಡಿನಂತೆ, ಅವಳು ಸಾಕಿದ ಆ ಹಸುಗಳೇ ಆಕೆಗೆ ನೆರಳಾಗಿ ನಿಂತು ಅವಳ ರಕ್ಷಣೆ ಮಾಡಿದ ಕಾರಣ ಆಕೆ ಅಲ್ಲಿಯೇ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಆಕೆ ಬದುಕಿದ್ದಾಳೋ ಇಲ್ಲಾ ಸತ್ತಿದ್ದಾಳೋ ಎಂದು ಪರೀಕ್ಷಿಸಲು ಆಕೆಯ ಮಾವನವರು ಬಂದಾಗ ಆ  ಹಸುಗಳು  ಅವರನ್ನು  ಅಕೆಯ ಹತ್ತಿರಕ್ಕೂ ಬರಲು ಬಿಡಲಿಲ್ಲ. ಸ್ವಲ್ಪ ಹೊತ್ತು ಸುಧಾರಿಸಿಕೊಂಡ ನಂತರ ಇಲ್ಲಿದ್ದರೆ ತನಗೆ ಉಳಿಗಾಲವಿಲ್ಲ ಎಂದು ನಿರ್ಧರಿಸಿ ಹಸುಗೂಸನ್ನು ಎತ್ತಿಕೊಂಡು ಮನೆಯಿಂದ ಹೊರಬಂದು ಹತ್ತಿರದ ರೈಲ್ವೇ ಹಳಿಯ ಮೇಲೆ ತಾನೂ ಮತ್ತು ಹಸುಗೂಸು ಸಾಯಲು ನಿರ್ಧರಿಸಿ ಹಳಿಯ ಮೇಲೆ ಮಲಗಿದ್ದಳು. ಇನ್ನೇನು ಕೆಲವೇ ನಿಮಿಷಗಳಲ್ಲಿ ವೇಗವಾಗಿ ರೈಲು ಬಂದು ಹಳಿಯ ಮೇಲೆ ಮಲಗಿದ್ದ ಆಕೆಯ ಮೇಲೆ ಹರಿದು ಆಕೆಯ ಪ್ರಾಣ ಪಕ್ಷಿ ಹಾರಿ ಹೋಗತ್ತದೆ ಎಂದೇ ಭಾವಿಸಿದ್ದಾಗ, ತಾನೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ ಆಕೆಗೆ ಅಲ್ಲಿ ಯಾರೋ ನರಳುತ್ತಿರುವ ಶಬ್ಧ ಕೇಳಿಸಿತು.

ಕುತೂಹಲದಿಂದ ಹಳಿಯಿಂದ ಎದ್ದು ನರಳುತ್ತಿರುವವರು ಯಾರು? ಎಂದು ನೋಡಿದರೆ ಅಲ್ಲೊಬ್ಬ ಹಣ್ಣು ಹಣ್ಣು ವಯಸ್ಸಿನ ಮುದುಕರೊಬ್ಬರು ಹಸಿವಿನಿಂದ ನರಳುತ್ತಿದ್ದದ್ದು ಆಕೆಯ ಮನಸ್ಸನ್ನು ಬದಲಿಸಿತು. ಆತನಿಗೆ ತಿನ್ನಲು  ಏನನ್ನಾದರೂ ಕೊಡಬಹುದೇ ಎಂದು ಸುತ್ತಮುತ್ತಲೂ ನೋಡಿದಾಗ, ಹತ್ತಿರದಲ್ಲೊಂದು ಸ್ಮಶಾನ ಕಾಣಿಸಿತು ಅಲ್ಲಿಗೆ ಹೋಗಿ ನೋಡಿದಾಗ  ಹೆಣದ ಮೇಲೆ ಚೆಲ್ಲಿದ ಅಕ್ಕಿ ಮತ್ತು  ಗೋಧಿಹಿಟ್ಟನ್ನು ಒಟ್ಟು ಮಾಡಿ, ಹೆಣವನ್ನು ಸುಡುತ್ತಿದ್ದ ಸೌದೆಯನ್ನೇ ಒಟ್ಟು ಮಾಡಿ ಅದರ ಮೇಲೆಯೇ ರೊಟ್ಟಿಯನ್ನು ಮಾಡಿ ಆ ವೃದ್ಧರ ಹಸಿವನ್ನು ನೀಗಿಸಿದಾಗ ಆತನ ಮುಖದಲ್ಲಿ ಮೂಡಿದ ಮಂದಹಾಸ ಆಕೆಗೆ ಶ್ರೀ ಕೃಷ್ಣನಂತೆ ಕಾಣಿಸಿದನಂತೆ. ಆಗ ಆಕೆಗೆ ತನ್ನ ಬದುಕಿನ ಅರ್ಥವಾಯಿತುಸುಮ್ಮನೆ ಸಾಯುವ ಬದಲು ಇಂತಹ ನೆಲೆಯಿಲ್ಲದ ನಿರ್ಗತಿಕರಿಗೆ ತಾಯಿಯಾಗಲು ನಿರ್ಧರಿಸಿ ಅದೇ ಊರಿನ ಸುತ್ತ ಮುತ್ತ ಇರುವ ನಿರ್ಗತಿಕರು ಮತ್ತು ಅನಾಥ ಮಕ್ಕಳನ್ನು ಗುರುತಿಸಿ ಅವರನ್ನು ಪೋಷಿಸಲಾರಂಭಿಸಿದಳು.

ಚಿಕ್ಕವಯಸ್ಸಿನಲ್ಲಿ ಅಮ್ಮನಿಂದ ಕಲಿತಿದ್ದ ಹಾಡುಗಳು ಆಕೆಗೆ ಉಪಯೋಗಕ್ಕೆ ಬಂದಿತು. ಸುಶ್ರಾವ್ಯವಾಗಿ ಬೀದಿ ಬೀದಿಯಲ್ಲಿ ಹಾಡುತ್ತಾ ಭಿಕ್ಷೆ ಎತ್ತಿ ಮಕ್ಕಳಿಗೆ ಆಹಾರ ಮತ್ತು ರಕ್ಷಣೆ ನೀಡತೊಡಗಿದಳು. ದಿನೇ ದಿನೇ  ಅನಾಥ ಮಕ್ಕಳ ಸಂಖ್ಯೆ ಏರತೊಡಗಿತು. ಆಕೆಯ ಈ ಪರಿಶ್ರಮವನ್ನು ಗಮನಿಸಿದ ಆ ಊರಿನ ಆನೇಕರು ಸಹಾಯ ಮಾಡಿದ ಪರಿಣಾಮ ಮಹಾರಾಷ್ಟ್ರದ ಹಡಪ್ಸಾರ್ ಎಂಬ ಸ್ಥಳದಲ್ಲಿ ‘ಸನ್ಮತಿ ಬಾಲನಿಕೇತನ್’ಎಂಬ ಮೊದಲ ಬೀದಿಯ ಮಕ್ಕಳ ಸುಂದರವಾದ ಅನಾಥಾಶ್ರಮ ನಿರ್ಮಾಣವಾಯಿತು. ನೋಡ ನೋಡುತ್ತಿದ್ದಂತೆಯೇ ಆ ಆಶ್ರಮದಲ್ಲಿನ ಮಕ್ಕಳ ಸಂಖ್ಯೆ ಒಂದೂವರೆ ಸಾವಿರವನ್ನೂ ಮೀರಿತ್ತು. ಆಶ್ರಮದ ಮಕ್ಕಳಿಗೆ ಪ್ರೀತಿಯಲ್ಲಿ ಪಕ್ಷಪಾತದ ನೆರಳು ಬೀಳಬಾರದು ಎಂಬ ಕಾರಣಕ್ಕೆ ತನ್ನ ಸ್ವಂತ ಮಗಳಾದ ಮಮತಾಳನ್ನು ಬೇರೆಯ ಅನಾಥಾಶ್ರಮಕ್ಕೆ ಸೇರಿಸುತ್ತಾರೆ. ಸರ್ಕಾರದ ಯಾವುದೇ ಅನುದಾನಕ್ಕೂ ಕೈ ಚಾಚದೇ, ಕೇವಲ ಸೇವಾಸಕ್ತ ದಾನಿಗಳ ನೆರವಿನಿಂದ ಈ ಅನಾಥಾಶ್ರಮವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.  ಎಲ್ಲರಿಗೂ ಉತ್ತಮವಾದ ವಿದ್ಯಾಭ್ಯಾಸವನ್ನು ನೀಡುವ ಜವಾಬ್ಧಾರಿಯನ್ನು ಆಕೆಯೇ ತೆಗೆದುಕೊಂಡ ಪರಿಣಾಮ ಆಕೆಯ ಆಶ್ರಮದಲ್ಲಿ ಓದಿ ಬೆಳೆದವರು ಹಲವರು ವೈದ್ಯರು, ಕೃಷಿಕರು, ದೇಶ ವಿದೇಶಗಳಲ್ಲಿ ಉದ್ಯೋಗಿಗಳಾಗಿದ್ದೂ ಎಲ್ಲರೂ ಆಕೆಯನ್ನು ತಮ್ಮ ಹೆತ್ತಮ್ಮನಿಗಿಂತಲೂ ಪ್ರೀತಿಯಾಗಿ ನೋಡಿಕೊಳ್ಳುತ್ತಿದ್ದಾರೆ.

ಹೀಗಿರುವಾಗ ಅದೊಮ್ಮೆ ಸಿಂಧೂ ತಾಯಿ ಆಶ್ರಮದ ಮುಂದೆ  ಅನಾರೋಗ್ಯ ಪೀಡಿತ ವ್ಯಕ್ತಿ ಬಸವಳಿದು ಬಂದು  ನಿಂತು ಅಕೆಯ ಆಶ್ರಮದಲ್ಲಿ ಆಶ್ರಯ ಕೋರಿದ. ಬಹಳ ನಿತ್ರಾಣರಾಗಿದ್ದ ಆತನನ್ನು ಆಶ್ರಮಕ್ಕೆ ಕರೆತಂದು ವಿಕಾರವಾಗಿ  ಬೆಳೆದು ನಿಂತಿದ್ದ ಕೂದಲು ಮತ್ತು ಗಡ್ಡವನ್ನು ಕತ್ತರಿಸಿ ಆತನಿಗೆ ಸ್ನಾನ ಮಾಡಿಸಿ ಹೊಸದಾದ ಬಟ್ಟೆಯನ್ನು ತೊಡಿಸಿ ಆಶ್ರಮದಲ್ಲೇ ಇದ್ದ ವೈದ್ಯೆಯ ಬಳಿ ಚಿಕಿತ್ಸೆ ಕೊಡಿಸಿ ಆತನನ್ನು ಸೂಕ್ಷ್ಮವಾಗಿ ಗಮನಿಸಿದಾಗ ಆಕೆಗೇ ಅಚ್ಚರಿ ಮೂಡಿಸಿತು. ಆಕೆಯ ಬಳಿ ಆಶ್ರಯ ಪಡೆಯಲು ಬಂದವ ಬೇರಾರೂ ಆಗಿರದೇ ತನ್ನನ್ನು ಕೊಲ್ಲಲು ಮುಂದಾಗಿದ್ದ ಆಕೆಯ ಪತಿಯಾಗಿದ್ದ.  ಅವರಿಬ್ಬರ ನಡುವೆ ಗಂಡ ಹೆಂಡತಿಯ ಸಂಬಂಧ ಎಂದೋ ಮುಗಿದು ಹೋಗಿದ್ದ ಅಧ್ಯಾಯವಾಗಿದ್ದ ಕಾರಣ, ಆತ ಇಲ್ಲಿ ಉಳಿದ ಮಕ್ಕಳ ಜೊತೆಗೆ ಮಗುವಾಗಿಯೇ ಇದ್ದಲ್ಲಿ ಮಾತ್ರವೇ ಆತ ಈ ಆಶ್ರಮದಲ್ಲಿ ಇರಬಹುದು ಎಂಬ ಕರಾರು ಒಡ್ದಿ ಆತನಿಗೆ ಆಶ್ರಯ ನೀಡಲಾಯಿತು. ಆತ ಈಗ ಅವಳ ಗಂಡ ಅಲ್ಲ ಮತ್ತು ಆಕೆ ಅವನ ಹೆಂಡತಿ ಅಲ್ಲ. ಬದಲಾಗಿ ಆಕೆ ಅಮ್ಮ ಮತ್ತು ಆತ ಆಕೆಯ ಮಗ. ಇನ್ನು ಆತನಿಗೆ ಚಿಕಿತ್ಸೆ ನೀಡಿ ಆತನನ್ನು ಸಂಪೂರ್ಣವಾಗಿ ಗುಣಮುಖ ಗೊಳಿಸಿದವಳು ಆತನ ಸ್ವಂತ ಮಗಳಾಗಿದ್ದಳು ಎನ್ನುವುದು ಮತ್ತೊಂದು ಗಮನಾರ್ಹವಾದ ಅಂಶವಾಗಿತ್ತು.

ಸಿಂಧೂ ತಾಯಿಯರನ್ನು ಸಂಘ ಸಂಸ್ಥೆಗಳು ಆಹ್ವಾನಿಸಿದಾಗ ಆ ವೇದಿಕೆಗಳಲ್ಲಿ ತನ್ನ ಬದುಕಿನ ಹೋರಾಟದ ಕಥೆಯನ್ನು ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ ವರ್ಣನೆ ಮಾಡುತ್ತಿದ್ದದ್ದಲ್ಲದೇ, ಮಂಜಿಲ್ ಬಹುತ್ ದೂರ ಹೈ. ಜಾನಾ ವಹಾನ್ ಜರೂರಿ ಹೈ! ರಾಸ್ತಾ ಮುಷ್ಕಿಲ್ ಹೈ. ಹಮೆ ಮರನಾ ಮಂಜೂರು ಹೈ ಎಂದು ಹೇಳಿ ಮಾತು ಮುಗಿಸಿ, ಅಲ್ಲಿದ್ದವರ ಮುಂದೆ ತಮ್ಮ ಸೆರಗು ಹಿಡಿದು ಭಿಕ್ಷೆ ಬೇಡುತ್ತಾರೆ. ಹಾಗೆ ಸಂಗ್ರಹವಾದ ಮತ್ತು ಆಕೆಗೆ ಪ್ರಶಸ್ತಿಯ ಜೊತೆಗೆ ದೊರೆಯುವ ಸಂಪೂರ್ಣ ಹಣವನ್ನು ತಮ್ಮ ಆಶ್ರಮಕ್ಕೆ ಬಳಸಿಕೊಳ್ಳುವುದು ಆಕೆಯ ಹೆಗ್ಗಳಿಕೆಯಾಗಿತ್ತು.

ಕೇವಲ 4ನೇ ತರಗತಿ ಓದಿದ್ದ ಹಳ್ಳಿಯ ಸಾಮಾನ್ಯ ಸಿಂಧುವಾಗಿದ್ದವಳು  ಈಗ ಸಿಂಧೂತಾಯಿ ಆಗಿ ಬದಲಾಗಿದ್ದರು. ಆಕೆಯ ಈ ಸಾಧನೆಯನ್ನು ಮೆಚ್ಚಿ ಹತ್ತು ಹಲವಾರು  ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಘ ಸಂಸ್ಥೆಗಳು ಆಕೆಗೆ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿತ್ತು. ರಾಷ್ಟ್ರಪತಿಗಳೇ ಈಕೆಯ ಸಾಧನೆಗೆ ಬೆರಗಾಗಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದರು.  ಕರ್ನಾಟಕ ಸರ್ಕಾರದಿಂದಲೂ ಆಕೆ ಬಸವಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.  ಸುಮಾರು 750 ಕ್ಕೂ ಹೆಚ್ಚು ಗೌರವಗಳನ್ನು ಪಡೆದಿದ್ದರೂ,  ಪ್ರಶಸ್ತಿ ಬಂದಾಗ ಹಿಗ್ಗದೇ ಕಷ್ಟ ಬಂದಾಗ ಕುಗ್ಗದೇ ಕಾಯಕವೇ ಕೈಲಾಸ ಎಂದು ತನ್ನ ಆಶ್ರಮದಲ್ಲೇ ತನ್ನ ಸಾವಿರಾರು ಮಕ್ಕಳು ಮತ್ತು ನೂರಾರು ಮೊಮ್ಮಕ್ಕಳೊಂದಿಗೆ ಇದ್ದ ಅನಾಥ ಮಕ್ಕಳ ಪಾಲಿನ ಆಯಿ ಸಿಂಧುತಾಯಿ ಸಪ್ಕಾಲ್ ಆವರಿಗೆ ತಮ್ಮ 73 ನೇ ವಯಸ್ಸಿನಲ್ಲಿ ವಯೋಸಹಜ ಖಾಯಿಲೆಗಳು ಕಾಣಿಸಿಕೊಂಡಾಗ ಆಕೆಯನ್ನು ಪುಣೆಯ ಖಾಸಗೀ ಆಸ್ಪತ್ರೆಗೆ ಸೇರಿಸಲಾಯಿತು.

ಪುಣೆಯಲ್ಲಿರುವ ಗ್ಯಾಲಕ್ಸಿ ಕೇರ್ ಆಸ್ಪತ್ರೆಯಲ್ಲಿ ಒಂದೂವರೆ ತಿಂಗಳ ಹಿಂದೆ ಹರ್ನಿಯಾ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಚೇತರಿಕೆ ಬಹಳ ನಿಧಾನವಾಗಿತ್ತು.  ಎಲ್ಲಾ ವೈದ್ಯರುಗಳ ಹರಸಾಹವೂ ಹೊಳೆಯಲ್ಲಿ ಹುಣಸೇ ಹಣ್ಣು ತೊಳೆದಂತಾಗಿ  ಆವರು ನೀಡಿದ ಚಿಕಿತ್ಸೆಗೆ ಸಿಂಧು ತಾಯಿಯ ದೇಹ ಸ್ಪಂದಿಸದೇ ಜನವರಿ 4, 2022ರ ರಾತ್ರಿ 8 ಗಂಟೆಯ ಸುಮಾರಿಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಶೈಲೇಶ್ ಪುಂಟಂಬೆಕರ್ ತಿಳಿಸಿದಾಗ ಆಕೆಯ ಆಶ್ರಮದಲ್ಲಿ ಸಾವಿರಾರು  ಅನಾಥ ಮಕ್ಕಳು ನಿಜವಾಗಿಯೂ ಅನಾಥರಾದರು ಎಂದರೂ ಅತಿಶಯವೇನಲ್ಲ.

ಕಡು ಬಡತನದಲ್ಲಿ ಬೆಳೆದು  ಅಪಾರ ಕಷ್ಟಗಳನ್ನು ಅನುಭವಿಸಿಯೂ ಅವೆಲ್ಲವನ್ನೂ ಮೆಟ್ಟಿ ನಿಂತು ಸಾವಿರಾರು ಅನಾಥ ಮಕ್ಕಳಿಗೆ ಅಕ್ಕರೆಯ ಅಯಿಯಾಗಿದ್ದ ಸಿಂಧೂ ತಾಯಿ ಸಪ್ಕಾಲ್ ಎಂದೂ ಯಾರನ್ನೂ ಜಾತಿ, ಧರ್ಮದ ಬೇಧ ಮಾಡಿಲ್ಲ ಮತ್ತು ಯಾರನ್ನೂ ಮತಾಂತರ ಮಾಡಲಿಲ್ಲ ಎನ್ನುವುದು ಗಮನಾರ್ಹವಾಗಿದೆ.

ಆಕೆಯ ಜೀವನ ಅನೇಕರಿಗೆ ಸ್ಫೂರ್ತಿಯಾಗಿರುವುದಲ್ಲದೇ, 2010 ರಲ್ಲಿ, ಆಕೆಯ ಜೀವನವನ್ನೇ ಆಧರಿಸಿದ ಮೀ ಸಿಂಧುತೈ ಸಪ್ಕಲ್  ಎಂಬ ಮರಾಠಿ ಚಿತ್ರವು ಬಿಡುಗಡೆಯಾಗಿದ್ದಲ್ಲದೇ ಅದು 54 ನೇ ಲಂಡನ್ ಚಲನಚಿತ್ರೋತ್ಸವದಲ್ಲಿ ವಿಶ್ವ ಪ್ರಥಮ ಪ್ರದರ್ಶನಕ್ಕೆ ಆಯ್ಕೆಯಾಗಿದ್ದು ಅಕೆಯ ಹೆಗ್ಗಳಿಕೆ. ಸಮಾಜದ ಅಂಚಿನಲ್ಲಿರುವ ಸಮುದಾಯಗಳ ನಡುವೆಯೂ ಸಾಕಷ್ಟು ಕೆಲಸ ಮಾಡಿದ್ದ ಸಿಂಧೂ ತಾಯಿಯವರ ಅಗಲಿಕೆಗೆ ದೇಶದ ಪ್ರಧಾನಿಗಳು ಸೇರಿದಂತೆ, ಮಹಾರಾಷ್ಟ್ರ ದ ಮುಖ್ಯಮಂತ್ರಿಗಳು ಮತ್ತು ದೇಶದ ನಾನಾ ಗಣ್ಯರು ದುಃಖವನ್ನು ವ್ಯಕ್ತಪಡಿಸಿ ಆಕೆಯ ಆಶ್ರಮದ ಸಾವಿರಾರು ಮಕ್ಕಳಿಗೆ ಅವರ ಪ್ರೀತಿಯ ಆಯಿಯ ಅಕಾಲಿಕ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಕೋರಿದ್ದಾರೆ.

ಹೆತ್ತವರಷ್ಟೇ ಅಮ್ಮಯೇನಲ್ಲ ಸಾಕಿ ಸಲಹಿದವರೂ ಅಮ್ಮನೇ. ದೇವಕಿ ಶ್ರೀ ಕೃಷ್ಣನ ಜನ್ಮದಾತೆಯಾದರೂ ಆತನನ್ನು ಸಾಕಿ ಸಲಹಿ ಬೆಳದಿದ ಯಶೋಧೆಯೂ ಆತನಿಗೆ ತಾಯಿಯೇ ಅಲ್ಲವೇ? ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂದು ತನ್ನ ಇಡೀ ಬದುಕನ್ನೇ ಸಮಾಜಕ್ಕಾಗಿ ಮೀಸಲಿಟ್ಟ ಸಿಂಧು ತಾಯಿಯಯವರ ಆತ್ಮಕ್ಕೆ ಸದ್ಗತಿಯನ್ನು ಆ ಭಗವಂತನು ನೀಡಲಿ ಮತ್ತು ಆಕೆಯ ಜೀವನ ಲಕ್ಷಾಂತರ ಜನರಿಗೆ ಪ್ರೇರಣೆಯಗಲಿ ಎಂದು ನಾವೂ ನೀವೂ ಪ್ರಾರ್ಥಿಸೋಣ ಅಲ್ವೇ?

ಏನಂತೀರೀ?

ನಿಮ್ಮವನೇ ಉಮಾಸುತ

2 thoughts on “ಸಿಂಧೂ ತಾಯಿ ಸಪ್ಕಾಲ್, ಅನಾಥ ಮಕ್ಕಳ ಅಕ್ಕರೆಯ ಆಯಿ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s