ತಿರುಪತಿ ಬೆಟ್ಟದ ನೈಸರ್ಗಿಕ ಶ್ರೀ ವೆಂಕಟೇಶ್ವರ ಸ್ವಾಮಿ

venk1

ತಿರುಮಲ ತಿರುಪತಿ ಎಂದರೆ ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯವಿರುವ ಸ್ಥಳ ಎಂದಷ್ಟೇ ಬಹುತೇಕರ ಭಾವನೆಯಾಗಿದೆ. ಶ್ರೀ ವೆಂಕಟೇಶ್ವರ ಸ್ವಾಮಿಯ ದೇವಾಲಯವು ಅಲ್ಲಿನ ಪ್ರಧಾನ ಆಕರ್ಷಣೆಯೂ ಹೌದಾದರೂ ಅದರ ಹೊರತಾಗಿಯೂ ತಿರುಮಲ ಬೆಟ್ಟ ಹಾಗೂ ತಿರುಪತಿ ನಗರದ ಸುತ್ತ ಮುತ್ತ ಸಾಕಷ್ಟು ರಮಣೀಯವಾದ ಸ್ಥಳಗಳು ಇದ್ದು ಅವುಗಳಲ್ಲಿ ಬಹುತೇಕರು ಗಮನಿಸದಿರದ ನೈಸರ್ಗಿಕ ವೆಂಕಟೇಶ್ವರ ಸ್ವಾಮಿ ಪ್ರತಿಮೆ ಇದೆ. ನಾವಿಂದು ಕುಳಿತಲ್ಲಿಂದಲೇ ಆ ಸ್ವಾಮಿಯ ದಿವ್ಯ ದರ್ಶನವನ್ನು ಪಡೆಯೋಣ ಬನ್ನಿ.

ಧನುರ್ಮಾಸದಲ್ಲಿ ಕೇವಲ ಒಂದು ದಿನ ವಿಷ್ಣುವಿನನ್ನು ದರ್ಶನ ಮಾಡಿದಲ್ಲಿ ಅದು ಸಾವಿರ ದಿನ ದರ್ಶನ ಮಾಡಿದಷ್ಟು ಪುಣ್ಯ ಬರುತ್ತದೆ ಎಂಬ ನಂಬಿಕೆ ಅಸ್ತಿಕರಲ್ಲಿ ಇರುವ ಕಾರಣ, ಬಹುತೇಕರು ಧನುರ್ಮಾಸದಲ್ಲಿ ತಿರುಪತಿಗೆ ಹೋಗಿ ತಿಮ್ಮಪ್ಪನ ದರ್ಶನ ಮಾಡುತ್ತಾರೆ. ಅದರಲ್ಲೂ ವೈಕುಂಠ ಏಕದಶಿಯ ದಿನವಂತೂ ಕೇಳುವುದೇ ಬೇಡ. ತಿರುಮಲದಲ್ಲಿ ಒಂದು ಸೂಜಿಯಷ್ಟೂ ಜಾಗ ಇರದಂತಾಗಿರುತ್ತದೆ. ಅದೆಷ್ಟೋ ಜನ ವಿವಿಧ ರಾಜ್ಯಗಳಿಂದ ವೈಕುಂಠ ಏಕಾದಶಿಯಂದು ತಲುಪುವ ಹಾಗೆ ಕಾಲ್ನಡಿಗೆಯಲ್ಲಿ ಪ್ರತೀ ವರ್ಷವೂ ತಿರುಪತಿಗೆ ಬರುವ ಸಂಪ್ರದಾಯವನ್ನೂ ಇಟ್ಟುಕೊಂಡಿದ್ದಾರೆ. ನಾವು ಇಂದು ತಿಳಿಸಲು ಹೊರಟಿರುವ ನೈಸರ್ಗಿಕ ಶ್ರೀ ವೆಂಕಟೇಶ್ವರಸ್ವಾಮಿಯ ದರ್ಶನ ವಾಹನಗಳಲ್ಲಿ ಹೋಗುವವರಿಗೆ ಕಾಣಸಿಗದೇ, ಭಕ್ತಿಯಿಂದ ಸ್ವಾಮಿಯ ಬೆಟ್ಟವನ್ನು ಹತ್ತುವ ಭಕ್ತಾದಿಗಳಿಗೆ ಈ ಸ್ವಾಮಿಯ ದರ್ಶನದ ಭಾಗ್ಯ ಕಾಣಸಿಗುತ್ತದೆ.

govinda

ಒಂದೊಂದೇ ಬೆಟ್ಟಗಳನ್ನು ದಾಟುತ್ತಾ ಅರ್ಧ ದಾರಿ ಕ್ರಮಿಸುತ್ತಿದ್ದಂತೆಯೇ ವಿಶಾಲವಾದ ಎತ್ತರೆತ್ತರದ ಬೆಟ್ಟ ಗುಡ್ಡಗಳು ಮತ್ತು ಕಾಡಿನ ಮಧ್ಯದಲ್ಲಿ ಬಂಡೆಗಳಲ್ಲಿ ಯಾರೋ ಸ್ವಾಮಿಯ ಮೂರ್ತಿಯನ್ನು ಕೆತ್ತಿರುವಂತೆ ಭಾಸವಾಗುತ್ತದಾದರೂ ಅದು ನೈಸರ್ಗಿಕವಾಗಿ ನಿರ್ಮಾಣವಾಗಿದೆ ಎನ್ನುವುದು ಸರಿ ಎನಿಸುತ್ತದೆ. ಅತ್ಯಂತ ಕಡಿದಾದ ಬೆಟ್ಟದ ತುದಿಯಲ್ಲಿ ಬೆಳ್ಳಗಿನ ಮೋಡಗಳ ಮಧ್ಯೆ ಇರುವ ಈ ಸ್ವಾಮಿಯ ಬಳಿ ಹೋಗುವುದೇ ಒಂದು ಹರಸಾಹಸವೇ ಸರಿ. ಇಷ್ಟೆಲ್ಲಾ ಕಷ್ಟಗಳ ನಡುವೆಯೂ ಭಕ್ತಾದಿಗಳು ಧೈರ್ಯದಿಂದ ಆ ಪ್ರದೇಶಕ್ಕೆ ಹೋಗಿ, ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಸ್ವಾಮಿಗೆ ಹಾರವನ್ನು ಹಾಕಿ ಹಾಲಿನಿಂದ ಅಭಿಷೇಕ ಮಾಡಿ ಪೂಜಿಸುವುದನ್ನು ನೋಡಿದರೇ ಎದೆ ಘಲ್ ಎನಿಸುವಂತಿರುವಾಗ ನಿಜವಾಗಿಯೂ ಅಲ್ಲಿಗೆ ಹೋಗುವ ಭಕ್ತಾದಿಗಳಿಗೆ ನಿಜಕ್ಕೂ ಒಂದು ದೊಡ್ಡ ನಮಸ್ಕಾರಗಳನ್ನು ಹೇಳಲೇ ಬೇಕು.

ಹಬ್ಬ ಹರಿದಿನ ಮತ್ತು ವಿಶೇಷ ದಿನಗಳಲ್ಲಿ ಅದರಲ್ಲೂ ವೈಕುಂಠ ಏಕಾದಶಿಯಂದು ತಿರುಮಲದಲ್ಲಿ ವೆಂಕಟರಮಣನಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರೆ ಇಲ್ಲಿಯ ನೈಸರ್ಗಿಕ ಸ್ವಾಮಿಗೂ ಸಹಾ ನಾನಾ ವಿಧದಲ್ಲಿ ಅಲಂಕರಿಸಿ ಭಕ್ತಿ ಭಾವಗಳಿಂದ ಪೂಜೆ ಪುನಸ್ಕಾರಗಳನ್ನು ಮಾಡುವುದನ್ನು ವರ್ಣಿಸುವುದಕ್ಕಿಂತಲೂ ನೋಡಿದರೆ ಎದೆ ಝಲ್ ಎನಿಸುವುದಂತೂ ಸುಳ್ಳಲ್ಲಾ. ಇನ್ನು ಅಂತಹ ದುರ್ಗಮ ಪ್ರದೇಶಕ್ಕೆ ಹೋಗಲು ಸಾಧ್ಯವಾಗದವರು ಕೆಳಗಿನಿಂದಲೇ ಸ್ವಾಮಿಗೆ ಭಕ್ತಿಯಿಂದ ಪೂಜೆ ಮಾಡಿ ಸಕಲ ನೈವೇದ್ಯಗಳನ್ನು ಅರ್ಪಿಸಿ ಗೋವಿಂದ ಗೋವಿಂದ ಎಂದು ಭಗವಂತನ ನಾಮಸ್ಮರಣೆ ಮಾಡುವುದು ನಿಜಕ್ಕೂ ಕರ್ಣಾನಂದವೆನಿಸುತ್ತದೆ.

ಹಾಂ!! ಗೋವಿಂದ ಎಂಬ ನಾಮಸ್ಮರಣೆ ಕೇಳಿದಾಗ ಭಗವಾನ್ ವಿಷ್ಣುವಿಗೆ ಗೋವಿಂದೆ ಎಂಬ ಹೆಸರು ಹೇಗೆ ಬಂದಿತು ಎಂಬುದರ ಕುರಿತಾಗಿ ಇತ್ತೀಚೆಗೆ ವ್ಯಾಟ್ಸ್ಯಾಪಿನಲ್ಲಿ ಓದಿದ ಒಂದು ಪ್ರಸಂಗ ನೆನಪಾಗಿ ಅದನ್ನೂ ಹೇಳೇ ಬಿಡ್ತೀನಿ.

ಎಲ್ಲರಿಗೂ ಗೊತ್ತಿರುವಂತೆ ಶಿವ ಅಭಿಷೇಕಪ್ರಿಯನಾದರೆ, ವಿಷ್ಣು ಅಲಂಕಾರ ಪ್ರಿಯ, ಅದೊಮ್ಮೆ ಶಿವ ಮತ್ತು ವಿಷ್ಣು ಹಾಗೇ ಲೋಕಾಭಿರಾಮವಾಗಿ ಹರಟುತ್ತಿರುವಾಗ, ಹೇ ಪರಮೇಶ್ವರ ನಾನು ಅತಲ, ಸುತಲ, ಪಾತಾಳ, ಬ್ರಹ್ಮಾಂಡ, ದೇವಲೋಕ, ಇಂದ್ರಲೋಕ ಎಲ್ಲವನ್ನೂ ನೋಡಿರುವೆನಾದರೂ, ನೀವಿರುವ ಕೈಲಾಸವನ್ನು ಒಮ್ಮೆಯೂ ನೋಡಿಲ್ಲ, ಹಾಗಾಗಿ ನನಗೆ ನಿಮ್ಮ ಕೈಲಾಸ ಪರ್ವತವನ್ನು ನೋಡಬೇಕೆಂಬ ಆಸೆ ಇದೆ ಎಂದು ವಿಷ್ಣು ಮಹೇಶ್ವರನನ್ನು ಕೇಳಿದಾಗ, ಕೇಳಿದವರಿಗೆ ಕೇಳಿದ್ದನ್ನು ಇಲ್ಲಾ ಎಂದು ಕೊಡುವ ಕೊಡುಗೈ ದಾನಿ ಪರಮೇಶ್ವರ ಅರೇ ಅದಕ್ಕೇನಂತೇ, ನಾಳೆಯೇ ನಾಳೆಯೇ ನಮ್ಮ ಕೈಲಾಸವನ್ನು ನೋಡಲು ಬರಬಹುದು ಎಂದು ಆಹ್ವಾನಿಸುತ್ತಾರೆ.

ಅದಾದ ನಂತರ ಪರ ಶಿವನು ಕೈಲಾಸಕ್ಕೆ ಹಿಂದಿರುಗಿ ತನ್ನ ಸೇವಕ ಬೃಂಗಿಯನ್ನು ಕರೆದು ನಾಳೆ ಮಹಾವಿಷ್ಣುವು ನಮ್ಮ ಕೈಲಾಸಕ್ಕೆ ಬರುತ್ತಿದ್ದಾನೆ ಹಾಗಾಗಿ ಕೈಲಾಸವನ್ನು ಸ್ವಲ್ಪ ಸ್ವಚ್ಛಮಾಡಿ ಅಂದ ಚಂದವಾಗಿ ಇಡಲು ಸೂಚಿಸುತ್ತಾನೆ.

ಆದರೆ ಬೆಟ್ಟಗುಡ್ಡಗಳಿಂದ ಆವೃತವಾಗಿರುವ ಆ ಕೈಲಾಸವನ್ನು ಹೇಗೆ ಸ್ವಚ್ಛ ಮಾಡುವುದು ಎಂಬುದನ್ನು ಅರಿಯದೇ, ಏನು ಮಾಡುವುದು ಎಂದು ದಿಗ್ಬ್ರಾಂತನಾಗಿರುವಾಗ, ಗೋಮಾತೆ ಕಾಮಧೇನು ಅಲ್ಲಿ ಸಗಣಿಯನ್ನು” ಹಾಕಿ ಹೋಗುವುದನ್ನು ಗಮನಿಸುತ್ತಾನೆ. ಕೂಡಲೇ ಕೈಲಾಸದಲ್ಲಿರುವ ಹೆಣ್ಣು ಮಕ್ಕಳನ್ನು ಕರೆದು, ಸುತ್ತಮುತ್ತಲೂ ಇದ್ದ ಸಗಣಿಯನ್ನು ಶೇಖರಿಸಿ ಆ ಸಗಣಿಯಿಂದಲೇ ಇಡೀ ಕೈಲಾಸವನ್ನು ಸಾರಿಸಿ ಗುಡಿಸಿ ರಂಗೋಲಿ ಹಾಕಿ ಅಲಂಕರಿಸಿ, ಹೆಬ್ಬಾಗಿಲಿಗೆ ತಳಿರು ತೋರಣದಿಂದ ಸಿಂಗಾರಗೊಳಿಸುತ್ತಾನೆ.

ನಿಶ್ವಯದಂತೆ ಮರುದಿನ ವೈಕುಂಠ ವಾಸಿ ಆಲಂಕಾರ ಪ್ರಿಯ ವಿಷ್ಣು ಕೈಲಾಸಕ್ಕೆ ಬರುವ ಮೊದಲು ಅಷ್ಟೈಶ್ವರ್ಯಗಳನ್ನು ಧರಿಸಿಕೊಂಡು ಸುಗಂಧ ದ್ರವ್ಯಗಳಿಂದ.ಶಂಕು,ಚಕ್ರ ಗದ, ಪುಷ್ಪ, ಹಸ್ತಗಳಿಂದ ವಿರಾಜಿಸುತ್ತ ಗರುಡ ರೂಢನಾಗಿ ಕೈಲಾಸಕ್ಕೆ ಬಂದಿಳಿಯುತ್ತಾನೆ.

ಕೈಲಾಸಕ್ಕೆ ಬಂದ ವಿಷ್ಣುವನ್ನು ಸ್ವಾಗತಿಸಲು ಶಿವನು ತನ್ನ ಗಣದೊಂದಿಗೆ ಬಂದು ಭವ್ಯವಾಗಿ ಸ್ವಾಗತಿಸಲು ಬಂದಾಗ, ಇದ್ದಕ್ಕಿದ್ದಂತೆಯೇ ವಿಷ್ಣುವಿಗೆ ಸುವಾಸನೆಯು ಮೂಗಿಗೆ ಬಡಿದು ಅರೇ, ಇಷ್ಟೊಂದು ಸುಗಂಧವಾದ ಪರಿಮಳ ಎಲ್ಲಿಂದ ಬಂತು ಎಂದು ಆಶ್ಚರ್ಯಚಕಿತನಾಗುತ್ತಾನೆ.

ಆದಕ್ಕೆ ಅಲ್ಲೇ ಇದ್ದ ಬೃಂಗಿಯು ಸ್ವಾಮಿ ಇದು ಸುಗಂಧವಲ್ಲ ಇದು ಗೋವಿನ ವಿಂದಾ ಎನ್ನುತ್ತಾನೆ. ವಿಂದಾ ಅಂದರೆ ಎಂದರೆ ಸಂಸ್ಕೃತದಲ್ಲಿ ಸಗಣಿ ಎಂದು ಅರ್ಥ. ಆ ಕೂಡಲೇ ಅಲ್ಲಿ ನೆರೆದಿದ್ದವರೆಲ್ಲರೂ ಜೋರು ಧ್ವನಿಯಲ್ಲಿ ಗೋವಿಂದಾ- ಗೋವಿಂದಾ- ಗೋವಿಂದ ಎನ್ನಲು ಸಂತೋಷಗೊಂಡ ವೈಕುಂಠ ಪತಿಯಾದ ಶ್ರೀ ಮನ್ನಾರಾಯಣನು ಇದೇ ವೈಕುಂಠ, ಇದೇ ಕೈಲಾಸ ಎಂದು ಅಲ್ಲಿದ್ದ ಜನಗಳಿಗೆ ಆಶೀರ್ವಾದ ಮಾಡುತ್ತಾನೆ.

ಆಗ ಅಲ್ಲಿದ್ದ ಪರಶಿವನು ಇನ್ನು ಮುಂದೆ ನಿನ್ನ ಹೆಸರು ಗೋವಿಂದ ಎಂದಾಗಲಿ ಮತ್ತು ಯಾರು ಗೋವಿಂದ – ಗೋವಿಂದ ಎಂದು ನಿನ್ನನ್ನು ಭಜಿಸುತ್ತಾರೋ ಅವರಿಗೆ ಮುಕ್ತಿ ಸಿಗಲಿ ಎಂದು ಹರಿಸುತ್ತಾನೆ. ಅಂದಿನಿಂದ ದೇವಾನುದೇವತೆಗಳು ಮತ್ತು ಇಡೀ ಜಗತ್ತೇ ತಿರುಪತಿ ತಿಮ್ಮಪ್ಪನ ಪಾದಕ್ಕೆ ಗೋವಿಂದ ಗೋವಿಂದ ಎಂದು ಭಗವಂತನನ್ನು ಕೊಂಡಾಡುತ್ತಿದ್ದಾರೆ

ಹೇಗೋ ಕುಳಿತಲ್ಲಿಂದಲೇ ತಿರುಪತಿಯ ನೈಸರ್ಗಿಕವಾದ ವೆಂಕಟರಮಣಸ್ವಾಮಿಯ ದರ್ಶನವನ್ನು ಮಾಡಿದ್ದಲ್ಲದೇ ಗೋವಿಂದ ಎಂಬ ಹೆಸರು ಹೇಗೆ ಬಂದಿತು ಎಂಬ ಕಧನವನ್ನು ಕೇಳಿಯಾಯ್ತು. ಈಗ ಇನ್ನೇಕೆ ತಡಾ, ಸ್ವಲ್ಪ ಸಮಯ ಮಾಡಿಕೊಂಡು ತಿರುಪತಿಯಿಂದ ತಿರುಮಲಕ್ಕೆ ವಾಹನದಲ್ಲಿ ಹೋಗದೇ ಕಾಲ್ನಡಿಗೆಯಲ್ಲಿ ಮೆಟ್ಟಿಲುಗಳ ಮೂಲಕವೇ ಹೋಗಿ ಮಾರ್ಗದ ಮಧ್ಯದಲ್ಲಿ ಕಾಣಸಿಗುವ ನೈಸರ್ಗಿಕ ವೆಂಕಟರಮಣಸ್ವಾಮಿಯ ದರ್ಶನವನ್ನು ಪಡೆದು ಆದರ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ತಾನೇ?

ಏನಂತೀರಿ?

ನಿಮ್ಮವನೇ ಉಮಾಸುತ

ತಿರುಪತಿ ವೆಂಕಟರಮಣ ಸ್ವಾಮಿ ಪಾದಕ್ಕೆ ಗೋವಿಂದಾ ಗೋವಿಂದಾ….

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s