ಈ ಚಿತ್ರವನ್ನು ನೋಡುತ್ತಿದ್ದಂತೆಯೇ, ನಮ್ಮ ಮನಸ್ಸಿಗೆ ಹೊಳೆಯುವುದು, ಅರೇ ಇದೇನಿದು? ಈ ಸಣಕಲ ದೇಹದ ಮಾವುತನು ಅಷ್ಟು ದೊಡ್ಡ ಆನೆಯನ್ನು ಟ್ರಕ್ಕಿನೊಳಗೆ ದೂಡುತ್ತಿದ್ದಾನಾ? ಎಂದು ಹುಬ್ಬನ್ನು ಹಾರಿಸತ್ತೇವೆ. ಆದರೆ ನಿಜ ಹೇಳಬೇಕೆಂದರೆ, ಅಲ್ಲಿ ಮಾವುತನ ಕೈ ಆಸರೆ ಕೇವಲ ನಿಮಿತ್ತ ಮಾತ್ರವಾಗಿದ್ದು ಆನೆಯ ತನ್ನ ಬಲದಿಂದ ಟ್ರಕ್ಕನ್ನು ಹತ್ತುತ್ತಿರುತ್ತದೆ. ಆನೆಗೆ ತನ್ನ ಸ್ವಸ್ವಾಮರ್ಥ್ಯದ ಮೇಲೆ ನಂಬಿಕೆ ಇರದ ಕಾರಣ, ಮಾವುತನ ಕೈ ತನ್ನ ಬೆನ್ನಿನ ಮೇಲೆಿ ಕೈ ಇಟ್ಟಿರುವ ತನ್ನ ಯಜಮಾನ ಸದಾ ಕಾಲವೂ ತನ್ನ ಸಹಾಯಕ್ಕೆ ಇರುತ್ತಾನೆ ಎಂಬ ನಂಬಿಕೆ ಮತ್ತು ವಿಶ್ವಾಸ ಇಟ್ಟು ಕೊಳ್ಳುವುದರಿಂದ ಆನೆಯು ನಿರ್ಭಯವಾಗಿ ಟ್ರಕ್ಕನ್ನು ಹತ್ತಬಹುದು ಎಂದು ಭಾವಿಸಿ ಸುಲಭವಾಗಿ ಟ್ರಕ್ಕನ್ನು ಹತ್ತುತ್ತದೆ.
ತ್ರೇತಾಯುಗದಲ್ಲೂ ಹನುಮಂತ ಮತ್ತು ಜಾಂಬವಂತನ ನಡುವೆ ನಡೆದ ಇದೇ ರೀತಿಯ ಪ್ರಸಂಗವನ್ನೂ ಇಲ್ಲಿ ಸ್ಮರಿಸಬಹುದಾಗಿದೆ. ವನವಾಸದಲ್ಲಿದ್ದ ಸೀತೆಯನ್ನು ಮಾಯಾ ಜಿಂಕೆಯ ಮೋಹವೊಡ್ಡಿ, ಮೋಸದಿಂದ ರಾವಣ ಕದ್ದೊಯ್ದಿರುತ್ತಾನೆ. ಚಿನ್ನದ ಜಿಂಕೆಯ ಭೇಟೆಯಾದ ನಂತರ ಕಾಡಿನ ತಮ್ಮ ಮನೆಗೆ ಬಂದು ಮಡದಿ ಸೀತಾಮಾತೆ ಕಾಣದಿದ್ದಾಗ, ವೈದೇಹೀ ಏನಾದಳೂ? ಎಂದು ಪರಿತಪಿಸುತ್ತಾ ಆಕೆಯನ್ನು ಹುಡುಕುತ್ತಿರಲು ಅವರಿಗೆ ಕಿಷ್ಕಿಂದೆಯಲ್ಲಿ ಹನುಮಂತನ ಮತ್ತು ಸುಗ್ರೀವನ ಪರಿಚಯವಾಗಿ ನಂತರ ಜಟಾಯುವಿನ ಮೂಲಕ ಸೀತಾ ಮಾತೆಯನ್ನು ರಾವಣನು ಕದ್ದೊಯ್ದಿರುವ ವಿಷಯ ತಿಳಿದು ಸಮಸ್ಥ ಕಪಿ ಸೇನೆ ರಾಮೇಶ್ವರದ ಸಮುದರ ತಟದಲ್ಲಿ ನಿಂತು ಸಾಗರದ ಮಧ್ಯದಲ್ಲಿರುವ ಲಂಕೆಗೆ ಹೇಗೆ ಹೋಗುವುದು ಎಂದು ಯೋಚಿಸುತ್ತಿರುವಾಗ, ಜಾಂಬವಂತನಿಗೆ ಥಟ್ ಎಂದು ಆಲೋಚನೆ ಹೊಳೆದು, ದೂರದಲ್ಲಿ ರಾಮನ ಧ್ಯಾನವನ್ನು ಮಾಡುತ್ತಿದ್ದ ಹನುಮಂತನಿಗೆ ಸಮುದ್ರೋಲಂಘನ ಮಾಡಿ ಸೀತಾಮಾತೆಯನ್ನು ಹುಡುಕಿಕೊಂಡು ಬರಲು ಸೂಚಿಸುತ್ತಾನೆ.
ತನ್ನ ಶಕ್ತಿ ಸಾಮರ್ಥ್ಯದ ಅರಿವಿಲ್ಲದಿದ್ದಂತಹ ಹನುಮಂತ ಈ ಕೆಲಸ ನನ್ನಿಂದಾಗದು ಎಂದು ಹೇಳಿದಾಗ ವಯೋವೃದ್ಧ ಜಾಂಬವಂತ ಹನುಮಂತನ ಶಕ್ತಿ ಸಾಮರ್ಥ್ಯವನ್ನು ಒಂದೊಂದಾಗಿ ವರ್ಣಿಸಿ ಹನುಮಂತನಿಗೆ ತನ್ನ ಸಾಮರ್ಥ್ಯದ ಮೇಲೆ ನಂಬಿಕೆ ಹುಟ್ಟುವಂತೆ ಮಾಡಿದ ನಂತರ ಬೃಹದಾಕಾರವಾಗಿ ಬೆಳೆದ ಅಂಜನೀ ಪುತ್ರ ಆಂಜನೇಯ ಸಮುದ್ರವನ್ನು ದಾಟಿ ಸೀತಾಮಾತೆಯನ್ನು ಹುಡುಕಿ ನಂತರ ಅರ್ಧ ಲಂಕೆಯನ್ನು ದಹನ ಮಾಡಿದ್ದು ಈಗ ಇತಿಹಾಸ.
ಈ ಎರಡೂ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ, ಆನೆ ಮತ್ತು ಹನುಮಂತನಿಗೆ ಶಕ್ತಿ ಸಾಮರ್ಥ್ಯವಿದ್ದರೂ, ಅದರ ಅರಿವೇ ಇಲ್ಲದ ಕಾರಣ ಕಾರ್ಯವನ್ನು ಮಾಡಲು ಹಿಂಜರಿಯುತ್ತಿರುತ್ತಾರೆ. ಆನೆಯ ಬೆನ್ನಿನ ಮೇಲೆ ಕೇವಲ ನಿಮಿತ್ತ ಮಾತ್ರಕ್ಕೆ ಕೈ ಇಟ್ಟ ಮಾವುತನು ಹತ್ತು ಹತ್ತು ಎಂದು ಪ್ರೇರೇಪಿಸಿದರೆ, ಜಾಂಬವಂತನು ಹನುಮಂತನಿಗೆ ಆತನ ಶಕ್ತಿ ಸಾಮರ್ಥ್ಯದ ಅರಿವನ್ನು ಮೂಡಿಸಿ ಸರಳ ರೀತಿಯಲ್ಲಿ ಆದರೆ ಅಷ್ಟೇ ಸ್ಪೂರ್ತಿದಾಯಕವಾಗಿ ಪ್ರೇರಣೆ ನೀಡಿದ ಕಾರಣ ಮುಂದೆಲ್ಲಾ ಕಾರ್ಯಗಳು ಸರಾಗವಾಗಿ ನಡೆಯುತ್ತದೆ.
ನಮ್ಮ ನಿಮ್ಮ ನಡುವೆ ಅದೆಷ್ಟೋ ಈ ರೀತಿಯ ಜನರು ಇದ್ದಾರೆ. ಅವರಿಗೆ ತಮ್ಮ ಶಕ್ತಿ ಸಾಮರ್ಥ್ಯದ ಅರಿವಿಲ್ಲದೆ ಅಥವಾ ತಮ್ಮನ್ನು ಬೆಂಬಲಿಸುವ ಇಲ್ಲವೇ ಪ್ರೇರೇಪಿಸುವವರು ಯಾರೂ ಇಲ್ಲ ಸುಮ್ಮನಾಗಿರುವವರೇ ಹೆಚ್ಚಿನ ಜನರು ಇರುತ್ತಾರೆ. ಇದಕ್ಕೆ ಸಣ್ಣ ಉದಾಹರಣೆ ನೀಡಬೇಕೆಂದರೆ, ದಾರಿಯಲ್ಲಿ ಹೋಗುತ್ತಿರುವಾಗ ಅಚಾನಕ್ಕಾಗಿ ಯಾರಿಗೋ ಅಪಘಾತವಾಗಿ ಜೀವನ್ಮರಣ ಹೋರಾಟದಲ್ಲಿ ಇದ್ದಲ್ಲಿ ಅದನ್ನು ಗಮನಿಸಿದ ಕೆಲವರು ನಮಗೇಕೆ ಉಸಾಬರಿ ಎಂದು ಪಕ್ಕಕ್ಕೆ ತಿರುಗಿಕೊಂಡು ಹೋಗುವವರು ಕೆಲವರಾದರೆ, ಇನ್ನೂ ಹಲವರು ಆ ಪ್ರದೇಶವನ್ನು ಸುತ್ತುವರೆದು ಅದನ್ನೇ ನೋಡುತ್ತಾ ಮಮ್ಮಲ ಮರುಗುವವರಾದರೇ, ಇನ್ನೂ ಕೆಲವರು ಕೂಡಲೇ ತಮ್ಮ ಮೋಬೈಲ್ ತೆಗೆದು ಆದರ ಚಿತ್ರೀಕರಣವನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಸಹಾಯವನ್ನು ಯಾಚಿಸುವುದೂ ಉಂಟು. ಆದರೆ ಅವರಲ್ಲೊಬ್ಬ ಹೃದಯವಂತ ಮನುಷ್ಯ ತಮ್ಮೆಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಮಾನವೀಯತೆಯ ದೃಷ್ಛಿಯಿಂದ ಕೂಡಲೇ ಗಾಯಾಳುವಿನ ಬಳಿ ಧಾವಿಸಿ ಅವರಿಗೆ ನೀರನ್ನು ಕುಡಿಸಲು ಮುಂದಾಗಿದ್ದೇ ತಡಾ, ಹತ್ತಾರು ಮಂದಿಯೂ ತಮ್ಮ ಸಹಾಯವನ್ನು ಮಾಡಲು ಮುಂದಾಗಿ ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡುವುದಲ್ಲದೇ ಸ್ಥಳೀಯ ಆರಕ್ಷಕರಿಗೆ ಕರೆ ಮಾಡಿ ವಿಷಯವನ್ನು ತಿಳಿಸಲು ಮುಂದಾಗುತ್ತಾರೆ.
ಆ ಒಬ್ಬ ಹೃದಯವಂತ ಮನುಷ್ಯ ಸಹಾಯ ಹಸ್ತವನ್ನು ಚಾಚಲು ಮುಂದಾಗುವವರೆಗೂ ಉಳಿದವರೆಲ್ಲರೂ ಬೇರೆಯವರ ಸಹಾಯಕ್ಕೆ ನಿರೀಕ್ಷಿಸುತ್ತಿರುತ್ತಾರೆಯೇ ಹೊರತು, ತಾವೇ ಸಹಾಯ ಹಸ್ತವನ್ನು ಚಾಚಲು ಮುಂದಾಗಿರುವುದಲ್ಲ ಈ ರೀತಿಯಾಗಿ ಬಹುತೇಕರು ಯಾರಾದರೂ ಬೆಂಬಲಿಸಿದರೆ ಅಥವಾ ಪ್ರೇರೇಪಿಸಿದ್ದಲ್ಲಿ ಮಾತ್ರವೇ ಅವರಲ್ಲಿನ ಶಕ್ತಿ ಸಾಮರ್ಥ್ಯಗಳು ಜಾಗೃತವಾಗಿ ಕೆಲವವನ್ನು ಮುಂದುವರೆಸುತ್ತಾರೆ.
ಮುಂದೆ ಸ್ಪಷ್ಟ ಗುರಿ ಮತ್ತು ಹಿಂದೆ ದಿಟ್ಟ ಗುರುವಿದ್ದಲ್ಲಿ ಎಂತಹ ಕೆಲಸವನ್ನೂ ಸುಸೂತ್ರವಾಗಿ ಮಾಡಬಹುದು ಎನ್ನುವುದು ಸರ್ವೇ ಸಾಮಾನ್ಯವಾದರೂ, ಆದರೆ ಜೀವನದಲ್ಲಿ ಎಲ್ಲಾ ಸಮಯದಲ್ಲಿಯೂ ಎಲ್ಲರಿಗೂ ಈ ರೀತಿಯಾಗಿ ಪ್ರೇರಣೆ ನೀಡಬಲ್ಲವರು ಸಿಗುತ್ತಾರೆ ಎಂದು ನಿರೀಕ್ಷಿಸುವುದು ತಪ್ಪಾಗುತ್ತದೆ. ಆದ ಕಾರಣ, ನಮ್ಮ ಶಕ್ತಿ ಸಾಮರ್ಥ್ಯದ ಬಗ್ಗೆ ನಮ್ಮಲ್ಲಿಯೇ ಅರಿವು ಮೂಡಿಸಿ ಕೊಳ್ಳೋಣ. Practice makes man perfect ಎನ್ನುವ ಆಂಗ್ಲ ಉಕ್ತಿಯಂತೆ, ಅರಂಭದಲ್ಲಿ ಒಂದೆರಡು ಬಾರಿ ಸೋಲಾಗಬಹುದು. ಆಗ ಅದೇ ಸೋಲನ್ನೇ ನೆನೆಯುತ್ತಾ ಹತಾಶರಾಗದೇ, ಅದೇ ಸೋಲಿನ ಅನುಭವವನ್ನೇ ಗೆಲುವಿನ ಮೆಟ್ಟಿಲಾಗಿಸಿಕೊಂಡು ಸತತ ಪರಿಶ್ರಮದ ಮೂಲಕ ವಿಜಯವನ್ನು ಸಾಧಿಸಬಹುದಾಗಿದೆ.
ಅದೇ ರೀತಿ ನಮಗೂ ಸಹಾ ಯಾರಾದರೂ ಸಹಾಯ ಮಾಡಿದಲ್ಲಿ ನಾವು ಕೂಡ ಬಲಶಾಲಿಯಾಗಬಹುದು ಅಥವಾ ಇನ್ನೂ ಮೇಲಕ್ಕೆ ಏರಬಹುದಿತ್ತು ಎಂದು ಕೊರಗುವ ಮಂದಿ ಕಾಣಿಸಿದಲ್ಲಿ ಕೂಡಲೇ ಅಂತಹವರಿಗೆ ನಮ್ಮ ಅನುಭವಗಳನ್ನು ಹೇಳುವ ಮೂಲಕ ಅವರಲ್ಲಿನ ಸಾಮಥ್ಯವನ್ನು ಜಾಗೃತಗೊಳಿಸಿ ಅವರ ಸಂಕಷ್ಟದಿಂದ ಪಾರಾಗಿಸ ಬಹುದು. ಸರಳ ಪ್ರೀತಿ, ಸಕಾರಾತ್ಮಕ ಸ್ಪಂದನೆ ಮತ್ತು ಕೆಲವು ಪ್ರೇರಕ ಪದಗಳು ಮತ್ತೊಬ್ಬರ ಜೀವನವನ್ನು ಶಾಶ್ವತವಾಗಿ ಬದಲಾಯಿಸಬಹುದು ಎಂದಾದಲ್ಲಿ ಆ ರೀತಿಯಾಗಿ ನಿಸ್ವಾರ್ಥತೆಯಿಂದ, ಉತ್ಸಾಹ ಮತ್ತು ಬೆಂಬಲ ಸೂಚಿಸುವ ಕೆಲಸವನ್ನು ನಾವೂ ನೀವೇ ಮಾವುತ, ಜಾಂಬವಂತರಂತೆ ಹೃದಯ ಶ್ರೀಮಂತರೇಕಾಗಬಾರದು?
ಏನಂತೀರೀ?
ನಿಮ್ಮವನೇ ಉಮಾಸುತ