ವಿಜಯನಗರದ ಶ್ರೀ ಕೃಷ್ಣದೇವರಾಯ

WhatsApp Image 2022-01-17 at 8.13.07 AMಶ್ರೀ ಕೃಷ್ಣದೇವರಾಯ. ಈ ಹೆಸರು ಕೇಳಿದೊಡನೆಯೇ ನಮ್ಮ ಕಣ್ಣ ಮುಂದೆ ಬರುವುದು ದಕ್ಷಿಣ ಭಾರತದ ಕ್ಷಾತ್ರ ತೇಜದ ಸಮರ್ಥ ಅಡಳಿತಗಾರ. ಸಾವಿರಾರು ಧಾರ್ಮಿಕ ಕ್ಷೇತ್ರಗಳ ಪುನರುಜ್ಜೀವನಗೊಳಿಸಿದ ಮಹಾನ್ ನಾಯಕ, ಮುತ್ತು ರತ್ನ ಪಚ್ಚೆ ಹವಗಳನ್ನು ರಸ್ತೆಯ ಬದಿಯಲ್ಲಿ ಬಳ್ಳ ಬಳ್ಳಗಳಲ್ಲಿ ಮಾರುತ್ತಿದ್ದಂತಹ ಸುವರ್ಣಯುಗದ ಸೃಷ್ಟಿಸಿದ್ದ ರಾಜ.  16 ನೇ ಶತಮಾನದಲ್ಲಿ ಬಿಜಾಪುರ ಸುಲ್ತಾನರು, ಬಹಮನಿ ಸುಲ್ತಾನರನ್ನು ಬಗ್ಗು ಬಡಿದಿದ್ದಲ್ಲದೇ, ಉತ್ತರದ ಮೊಘಲರ  ಅಧಿಪತಿ ಬಾಬರನಿಗೂ ಹುಟ್ಟಿಸಿದ ಕರ್ನಾಟಕದ ಕೆಚ್ಚೆದೆಯ ಹಿಂದೂ ಹುಲಿಯಷ್ಟೇ ಅಲ್ಲದೇ ವಿದೇಶಿಗರೊಂದಿಗೆ ಉತ್ತಮವಾದ ವ್ಯಾಪಾರ ಮತ್ತು ರಾಜಕೀಯ ಸಂಬಂಧಗಳನ್ನು ಬೆಳಸಿಕೊಂಡು  ಯುರೋಪ್ ಮತ್ತು ಏಷ್ಯಾದ ಶ್ರೇಷ್ಠ ಚಕ್ರವರ್ತಿಗಳೊಂದಿಗೆ  ಸರಿ ಸಾಟಿಯಾಗಿ ಸ್ಥಾನ ಪಡೆದ ಭಾರತದ ಹಿಂದೂ ಹೃದಯ ಸಾಮ್ರಾಟ. ಅಂತಹ ಧೀರರ ಜನ್ಮ ದಿನದಂದು ಅವರ ಯಶೋಗಾಥೆಯನ್ನು ಮೆಲುಕು ಹಾಕೊಣ.

ಯಾವುದೇ ಒಂದು ದೇಶ ಜಾಗತಿಕವಾಗಿ ಮುಂದುವರೆಯ ಬೇಕಾದಲ್ಲಿ ಅಂತಹ ದೇಶದ ಜನರಿಗೆ ಮೊದಲು ತಮ್ಮ ದೇಶದ ಇತಿಹಾಸದ ಅರಿವಿರಬೇಕು.  ತಮ್ಮ ದೇಶದ ಇತಿಹಾಸ ಅರಿವಿದ್ದಲ್ಲಿ ಮಾತ್ರವೇ ತಮ್ಮ ದೇಶವನ್ನು ಕಟ್ಟಲು ಮತ್ತು ತಮ್ಮ ಸಂಸ್ಕೃತಿಯನ್ನು ಉಳಿಸಲು ತಮ್ಮ ಪೂರ್ವಜರು  ಎಂತಹ ತ್ಯಾಗ ಬಲಿದಾನಗಳನ್ನು ಮಾಡಿದ್ದಾರೆ ಎಂಬುದರ ಅರಿವಾಗುತ್ತದೆ. ಈ ದೇಶದಲ್ಲಿ ಹಿಂದೂಗಳು ಇನ್ನೂ  ಅಸ್ತಿತ್ವಕ್ಕೆ ಇದ್ದಾರೆಂದರೆ ಅದಕ್ಕೆ ಮೂಲ ಕಾರಣವೇ ವಿಜಯನಗರದ ಹೈಂದವೀ ಸಾಮ್ರಾಜ್ಯ ಎಂದರೂ ತಪ್ಪಾಗದು.  ಅರಬ್ ದೇಶದ ಕಡೆಯಿಂದ ನಮ್ಮ ದೇಶಕ್ಕೆ ದಂಡೆತ್ತಿ ಬಂದು ತಮ್ಮ ದಬ್ಬಾಳಿಕೆ ಮತ್ತು ಲೂಟಿಕೋರ ತನದಿಂದ ಬಹುತೇಕ ಉತ್ತರ ಭಾರತವನ್ನು ಆಕ್ರಮಿಸಿ ದಕ್ಷಿಣ ಭಾರತದೆಡೆ ಭರದಿಂದ ನುಗ್ಗುತ್ತಿದ್ದಾಗ, ಗುರುಗಳಾದ ಶ್ರೀ ವಿದ್ಯಾರಣ್ಯರು ಹಕ್ಕ-ಬುಕ್ಕ ಎಂಬ ಇಬ್ಬರು ಕ್ಷಾತ್ರ ತೇಜದ ಯುವಕರುಗಳ ಸಹಾಯದಿಂದ ದಕ್ಷಿಣ ಭಾರತದಲ್ಲಿ ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸಿ ಸುಮಾರು 330 ವರ್ಷಗಳ ಅತ್ಯಂತ ವೈಭವೋಪೇತವಾಗಿ ಆಳ್ವಿಕೆ ನಡೆಸಿದ ಅಂತಹ ವಿಜಯನಗರ ಸಾಮ್ರಾಜ್ಯದ ಅತ್ಯಂತ ಪ್ರಮುಖದೊರೆ ಎನಿಸಿದವರೇ ಶ್ರೀ ಕೃಷ್ಣದೇವರಾಯರು.

ಜನವರಿ 17, 1471ರಲ್ಲಿ ಹಂಪೆಯ ಸಾಳುವ ನರಸದೇವರಾಯನ ಸೇನೆಯಲ್ಲಿ ಅಧಿಕಾರಿಯಾಗಿದ್ದ ನರಸನಾಯಕ ಮತ್ತು ನಾಗಲಾಂಬಿಕೆ ದಂಪತಿಗಳ ಮಗನಾಗಿ ಕೃಷ್ಣದೇವರಾಯರ ಜನನವಾಗುತ್ತದೆ.  ನಾಯಕ ಜನಾಂಗಕ್ಕೆ ಸೇರಿದ ತುಳುವ ನರಸ ನಾಯಕರು ಸಂಪೂರ್ಣ ರಾಜ್ಯವನ್ನು ತನ್ನ ವಶಕ್ಕೆ ತೆಗೆದುಕೊಂಡು ತುಳುವ ಸಾಮ್ರಾಜ್ಯವನ್ನು ಸ್ಥಾಪಿಸಿದ ನಂತರ 1509ರ  ಕೃಷ್ಣಜನ್ಮಾಷ್ಟಮಿಯಂದು ಶ್ರೀ ಕೃಷ್ಣದೇವರಾಯರು ಪಟ್ಟಕ್ಕೇರುತ್ತಾರೆ. ಆತ  ವಿಜಯನಗರ ಸಾಮ್ರಾಜ್ಯದ ಪಟ್ಟಕ್ಕೇರಿದಾಗ ಅಂದಿನ ರಾಜಕೀಯ ಸ್ಥಿತಿಯು ಬಹಳ ದುಸ್ತಿತಿಯಲ್ಲಿತ್ತು.

timmarasuಒರಿಸ್ಸಾದ ದೊರೆಗಳು ನೆಲ್ಲೂರಿನವರೆಗೆ ವಶಪಡಿಸಿಕೊಂಡಿದ್ದರೆ, ಬಿಜಾಪುರದ ಸುಲ್ತಾನರೂ ಸಹಾ ತನ್ನ ರಾಜ್ಯದ ಗಡಿಯನ್ನು ವಿಸ್ತರಿಸಲು ಹೊಂಚು ಹಾಕುತ್ತಿದ್ದನು.  ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಶ್ರೀ ಕೃಷ್ಣದೇವರಾಯರಿಗೆ ತಂದೆಯ ಸ್ಥಾನದಲ್ಲಿ ನಿಂತು  ರಾಯರಿಗೆ ಸಕಲ  ರೀತಿಯಲ್ಲೂ ಬೆಳೆಯಲು ಬೆಂಗಾವಲಿನಂತೆ ನಿಂತು ಬೆಳಸಿದ ಕೀರ್ತಿ ಶ್ರೀ ತಿಮ್ಮರಸು ಅವರದ್ದಾಗಿದೆ. ರಾಯರು ಪಟ್ಟವೇರಲು ಕಾರಣೀಭೂತನಾಗಿದ್ದಷ್ಟೇ ಅಲ್ಲದೇ ಅವರ ಪ್ರಧಾನಮಂತ್ರಿಯಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದು ಅತ್ಯಂತ ಶ್ಲಾಘನಿಯವಾಗಿದೆ.

ಶ್ರೀಕೃಷ್ಣದೇವರಾಯ ಮೊದಲಿಗೆ ವಿಜಯನಗರದ ವಿರುದ್ಧ ಹೊಂಚುಹಾಕುತ್ತಿದ್ದ  ಡೆಕ್ಕನ್ನ ಮುಸ್ಲಿಂ ಆಡಳಿತಗಾರರ ಕಡೆಗೆ ಗಮನ ಹರಿಸಿ, ತನ್ನ ಯೋಜಿತ ಧಾಳಿಯ ಮೂಲಕ, 1512 ರಾಯಚೂರನ್ನು ವಶಪಡಿಸಿಕೊಂಡ  ನಂತರ ಭುವನಗಿರಿಯ ವೇಲಮನ ಮೇಲೆ ಆಕ್ರಮಣ ಮಾಡಿ ಗೆದ್ದು, ತನ್ನ ರಾಜ್ಯವನ್ನು ಕೃಷ್ಣಾ ನದಿಯವರೆಗೂ ವಿಸ್ತರಿಸಿ ಕೃಷ್ಣ ಮತ್ತು ತುಂಗಭದ್ರೆಯ  ಸಂಪೂರ್ಣ ಪ್ರದೇಶವು ಶ್ರೀ ಕೃಷ್ಣದೇವರಾಯನ ನಿಯಂತ್ರಣಕ್ಕೆ ಒಳಪಟ್ಟಿತು. ತದನಂತರ  ಗುಲ್ಬರ್ಗದ ಬಹಮನಿ ಸಾಮ್ರಾಜ್ಯವನ್ನೂ ವಶಪಡಿಸಿಕೊಂಡು ಅಲ್ಲಿಯೇ ಕಾನೂನು ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದ  ಮುಹಮ್ಮದ್ ಶಾನನ್ನು ತನ್ನ ಸಾಮಂತನಾಗಿಸಿದ. ನಂತರ ಕಾವೇರಿ ದಡದಲ್ಲಿ ನಡೆದ ಯುದ್ಧದಲ್ಲಿ ಉಮ್ಮತ್ತೂರಿನ ದೊರೆ ವೀರನಂಜರಾಜೇ ಒಡೆಯರ್ (ಗಂಗರಾಜ)ರನ್ನು ಸೋಲಿಸಿದಾಗ, 1512ರಲ್ಲಿ ಗಂಗರಾಜರು  ಕಾವೇರಿನದಿಯಲ್ಲಿ ಮುಳುಗಿ ಅಸುನೀಗಿದರು ಹೀಗೆ ಶಿವಸಮುದ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಅದನ್ನು ಶ್ರೀರಂಗಪಟ್ಟಣ ಪ್ರಾಂತ್ಯದ ಒಂದು ಭಾಗವನ್ನಾಗಿಸಿದ. 1516-17ಲ್ಲಿ ಶ್ರೀ ಕೃಷ್ಣದೇವರಾಯನ ರಾಜ್ಯ ದ ಗಡಿಯು ಗೋದಾವರಿ ನದಿಯನ್ನು ದಾಟಿತ್ತು ಎಂದರೆ ಅತನ ವೀರ ಪರಾಕ್ರಮದ ಅರಿವಾಗುತ್ತದೆ.

kalinga1512-1518ರ ಮಧ್ಯೆ ಶ್ರೀಕೃಷ್ಣದೇವರಾಯರು ಒಡಿಸ್ಸಾ ದೊರೆಗಳ ವಿರುದ್ಧ ಐದು ಅಭಿಯಾನಗಳ  ಕಳಿಂಗ ಯುದ್ಧವನ್ನು ಆರಂಭಿಸಿದರು. ಆ ಸಮಯದಲ್ಲಿ  ಸೂರ್ಯ ವಂಶದ ಒಡೆಯರಾಜು ಕ್ಷತ್ರಿಯ ಮನೆತನದ ಗಜಪತಿಗಳ ರಾಜ್ಯ ವಿಶಾಲವಾಗಿದ್ದು ಇಂದಿನ ಆಂಧ್ರ ಮತ್ತು ತೆಲಂಗಾಣ ಪ್ರದೇಶದ ಜೊತೆಗೆ ಸಂಪೂರ್ಣ ಒರಿಸ್ಸಾವನ್ನು ಒಳಗೊಂಡಿತ್ತು. ಕ್ಷತ್ರಿಯ ಗಜಪತಿ ಪ್ರತಾಪ ರುದ್ರದೇವನ ಸ್ವಾಧೀನದಲ್ಲಿದ್ದ ತೆಲಂಗಾಣ ಪ್ರದೇಶದತ್ತ ತನ್ನ ದೃಷ್ಟಿಯನ್ನು ಆ ದೊರೆಗಳು ಆಕ್ರಮಿಸಿಕೊಂಡಿದ್ದ ನೆಲ್ಲೂರು ಜಿಲ್ಲೆಯ ಅಜೇಯ ಕೋಟೆ ಎಂದೇ ಪರಿಗಣಿಸಲಾಗಿದ್ದ ಉದಯಗಿರಿ ಕೋಟೆಯ ಮೇಲೆ  1512ರಲ್ಲಿ ಆಕ್ರಮಣ ಮಾಡಿ ಕೋಟೆಯನ್ನು ಸುಮಾರು ಒಂದು ವರ್ಷದವರೆಗೂ ಮುತ್ತಿಗೆಯನ್ನು ಹಾಕಿದರು. ಕೋಟೆಯಿಂದ ಹೊರಬರಲಾರದೇ,  ಗಜಪತಿಯ ಸೈನ್ಯ ಹಸಿವಿನಿಂದ ಶಿಥಿಲವಾಗ ತೊಡಗಿತು. ಒಂದು ವರ್ಷಗಳ ಕಾಲ  ಕೋಟೆಗೆ ಲಗ್ಗೆ ಹಾಕಿ ಸುಮ್ಮನೆ ಕೂರಬೇಕಾಗಿ ಬಂದ ವಿಜಯನಗರ ಸೈನ್ಯವೂ ಯುದ್ದದಿಂದ ವಿಮುಖರಾಗ ತೊಡಗಿದಾಗ, ಮಂತ್ರಿ ತಿಮ್ಮರಸು ಕಾವಲಿಲ್ಲದ ಪೂರ್ವದ ದ್ವಾರದ ರಹಸ್ಯ ಒಳದಾರಿಯನ್ನು ಕಂಡು ಹಿಡಿದು ಅದರ ಮೂಲಕ  ವಿಜಯನಗರದ ಸೇನೆಯನ್ನು ಕೋಟೆ ಒಳಗೆ ಒಳನುಗ್ಗಿಸಿ  ಆ ಕಾಲದ ಅತಿ ಸಮರ್ಥ ಕತ್ತಿ ವರಸೆಗಾರ ಎಂದು ಹೆಸರಾಗಿದ್ದ ಪ್ರತಾಪರುದ್ರದೇವನ ಮಗ, ಯುವರಾಜ ವೀರಭದ್ರನನ್ನು ಸೆರೆಹಿಡಿಯುವ ಮೂಲಕ  1513ರಲ್ಲಿ ಕೋಟೆಯನ್ನು ವಶಪಡಿಸಿಕೊಂಡ ನಂತರ ಮಂತ್ರಿ ತಿಮ್ಮರಸುವಿನನ್ನು ಕೊಂಡವೀಡು ಪ್ರಾಂತದ ಮಾಂಡಲೀಕನಾಗಿ ನೇಮಕ ಮಾಡಲಾಯಿತು.

ಈ ಜಯದಿಂದ ಉತ್ಸುಕನಾಗಿ ಉತ್ಕಲ-ಕಳಿಂಗದ ಮೇಲೆ ನೇರ ಧಾಳಿ ಮಾಡಿ ವಶಪಡಿಸಿಕೊಳ್ಳ ಬೇಕೆಂದು ಹವಣಿಸುತ್ತಿದ್ದ ಕೃಷ್ಣದೇವರಾಯನ ರಣತಂತ್ರಕ್ಕೆ ಪ್ರತಿಯಾಗಿ ಪ್ರತಾಪರುದ್ರ ದೇವನು ಸಹಾ ವಿಜಯನಗರದ ಸೇನೆಯನ್ನು ಹೀನಾಯವಾಗಿ ಸೋಲಿಸುವ ಪ್ರತಿ ಯೋಜನೆ ಹಾಕಿಕೊಂಡ ಪರಿಣಾಮ  ಆ ಎರಡೂ ಸೇನೆಗಳು ಕಳಿಂಗಾ ನಗರದಲ್ಲಿ ಪರಸ್ಪರ ಯುದ್ಧ ಮಾಡಬೇಕಾದ  ಸಂದರ್ಭ  ಎದುರಾಗಿತ್ತು. ಆದರೆ ಈ ಮಾಹಿತಿಯನ್ನು  ಪ್ರತಾಪರುದ್ರದೇವನ ಪಕ್ಷ ತ್ಯಜಿಸಿದ ತೆಲುಗು ಭಾಷಿಕನೊಬ್ಬನಿಗೆ ಲಂಚ ಕೊಟ್ಟು ಚಾಣಾಕ್ಷ ತಿಮ್ಮರಸು ಸಂಪಾದಿಸಿದ  ಕಾರಣ, ಪ್ರತಾಪರುದ್ರನ ಯೋಜನೆ ಎಲ್ಲವೂ ತಲೆಕೆಳಗಾಗಿ ಕೊನೆಗೂ ಆತ ವಿಜಯನಗರ ಸೇನೆಗೆ ಶರಣಾಗಿ, ತನ್ನ ಮಗಳನ್ನು ಕೃಷ್ಣದೇವರಾಯನಿಗೆ ಮದುವೆ ಮಾಡಿ ಕೊಡುವ ಮೂಲಕ ಸ್ನೇಹ ಸಂಬಂಧವನ್ನು ಬೆಳಸಿ ಕೊಂಡು  ಭಾರತದ ಎರಡು ಪ್ರಬಲ ಹಿಂದೂ ಸಾಮ್ರಾಜ್ಯಗಳ ನಡುವೆ ಶಾಂತಿ ಸಾಮರಸ್ಯ ನೆಲೆಸಿ ಸನಾತನ ಧರ್ಮ ಸುರಕ್ಷಿತವಾಗಿದ್ದಲ್ಲದೇ ಮತ್ತಷ್ಟೂ ಪ್ರಜ್ವಲಿಸುವಂತಾಯಿತು.

ಇವಿಷ್ಟೂ ಕೃಷ್ಣದೇವರಾಯರ ಸಾಮ್ರಾಜ್ಯ ವಿಸ್ತರಣೆಯ ವಿಷಯವಾದರೆ, ತನ್ನ  ರಾಜ್ಯದ ಒಳಿತಿಗಾಗಿ ಮತ್ತು ರಕ್ಷಣೆಗಾಗಿ ವಿದೇಶಿಗರೊಂದಿಗೆ  ಸ್ನೇಹ ಸಂಬಂಧಗಳನ್ನು ಬೆಳೆಸಿದನು.  1510 ರಲ್ಲಿ ಗೋವಾದಲ್ಲಿ ಪ್ರಾಭಲ್ಕಯಕ್ಕೆ ಬಂದಿದ್ದ ಪೋರ್ಚುಗೀಸ್ ವ್ಯಾಪಾರಿಗಳಿಂದ ಬಂದೂಕು ಮತ್ತು ಅರಬ್ಬೀ ಕುದುರೆಗಳನ್ನು ಕೊಂಡು ತನ್ನ ಸೇನೆಯನ್ನು ಬಲ ಪಡಿಸಿದ್ದಲ್ಲದೇ, ಪೋರ್ಚುಗೀಸರ ಪರಿಣತಿಯನ್ನು ಉಪಯೋಗಿಸಿಕೊಂಡು ವಿಜಯನಗರ ನಗರಕ್ಕೆ ನೀರು ಸರಬರಾಜು ಯೋಜನೆಯ ಸುಧಾರಣೆನ್ನೂ ತಂದರು.

ಇಷ್ಟೆಲ್ಲಾ ಹೋರಾಟದ ಬದುಕಿನಲ್ಲಿ ಆತ ಹೋದ ಕಡೆಗಳಲೆಲ್ಲಾ ಪಾಳು ಬಿದ್ದಿದ್ದ ಹಿಂದೂ ದೇವಾಲಯಗಳ ಜೀರ್ಣೋದ್ಧಾರ ಮಾಡಿಸಿದ್ದಲ್ಲದೇ,  ಲಕ್ಷಾಂತರ ದೇವಾಲಯಗಳಲ್ಲಿ ನಿತ್ಯ ಪೂಜೆ ಪುನಸ್ಕಾರಗಳು ಯಥಾವತ್ತಾಗಿ ನಡೆಯುವಂತಾಗಲು ಧಾರ್ಮಿಕ ದತ್ತಿ ಮತ್ತು ಉಂಬಳಿಗಳನ್ನು ನೀಡಿದ್ದದ್ದು ಅತ್ಯಂತ ಗಮನಾರ್ಹವಾಗಿದೆ.

krish1ಇದೇ ಸಮಯದಲ್ಲಿ ಕೃಷ್ಣದೇವರಾಯನು ಪತ್ನಿಯರಾದ ತಿರುಮಲಾ ದೇವಿ ಮತ್ತು ಚಿನ್ನಮ ದೇವಿಯರೊಂದಿಗೆ ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನ ಮಾಡಿದ್ದಲ್ಲದೇ ಸ್ವಾಮಿಗೆ ವಜ್ರಖಚಿತ ಕಿರೀಟಗಳಿಂದ ಹಿಡಿದು ಚಿನ್ನದ ಖಡ್ಗಗಳವರೆಗೆ ಬೆಲೆಬಾಳುವ ಮೌಲ್ಯದ ಹಲವಾರು ವಸ್ತುಗಳನ್ನು ನೀಡಿ  ವಿಜೃಂಭಿಸಿದರು. ಇದರ ಕುರುಹಾಗಿಯೇ  ಇಂದಿಗೂ ಸಹಾ ತಿಮ್ಮಪ್ಪನ ದೇವಾಲಯದ ಸಂಕೀರ್ಣದಲ್ಲಿ ಕೃಷ್ಣದೇವರಾಯ ಮತ್ತು ಅವರ  ಇಬ್ಬರು ಪತ್ನಿಯರೊಂದಿಗೆ ತಿರುವ ಪ್ರತಿಮೆಯನ್ನು ಸ್ಥಾಪಿಸಿ  ಗೌರವ  ಸಲ್ಲಿಸುತ್ತಿರುವುದು ಗಮನಾರ್ಹ. ಅದೇ ರೀತಿಯಲ್ಲಿ ರಾಜಮಂಡ್ರಿಯನ್ನು ವಶಪಡಿಸಿಕೊಂಡಾಗ, ಶ್ರೀಕೃಷ್ಣದೇವರಾಯರು ಸಿಂಹಾಚಲಕ್ಕೆ ತೆರಳಿ ನರಸಿಂಹ ಸ್ವಾಮಿಗೆ ನಮನ ಸಲ್ಲಿಸಿ  ಅಲ್ಲಿಯೂ ದಾನ ಧರ್ಮಗಳನ್ನು ಮಾಡಿದ ನಂತರ ಪೊಟ್ನೂರಿನಲ್ಲಿ ತಮ್ಮ ವಿಜಯಗಳ ಸ್ಮರಣಾರ್ಥ ವಿಜಯದ ಸ್ತಂಭವನ್ನು ಸ್ಥಾಪಿಸಿದರು.

ಶ್ರೀ ಕೃಷ್ಣದೇವರಾಯರು ತಮ್ಮ ಅಗಾಧವಾದ ಶಕ್ತಿ ಸಾಮರ್ಥ್ಯದೊಂದಿಗೆ, ಬಹುಮುಖ ಪ್ರತಿಭೆ, ಸಮರ್ಥ ಆಡಳಿತಗಾರ ಮತ್ತು ಕಲೆ ಮತ್ತು ಸಾಹಿತ್ಯದ ಉದಾರವಾದಿ ಪೋಷಕರಾಗಿ ದಕ್ಷಿಣ ಭಾರತದಲ್ಲಿ ತಮ್ಮದೇ ಆದ  ವಿಶಿಷ್ಟ ರೀತಿಯ ಛಾಪು ಮೂಡಿಸುವ ಮೂಲಕ ದಂತಕಥೆಯಾಗಿದ್ದರು.  ಕೃಷ್ನದೇವರಾಯರರ ಕುರಿತು ಇಂದಿಗೂ  ಸಹಾ ಮಕ್ಕಳು ಮತ್ತು ಅನಕ್ಷರಸ್ಥ ಗ್ರಾಮಸ್ಥರು ಸಹ ಅವರ ಸಾಹಸಗಳನ್ನು ಲಾವಣಿಗಳ ಮೂಲಕ  ನೆನಪಿಸಿಕೊಳ್ಳುವುದಲ್ಲದೇ, ಕರ್ನಾಟಕದ ವಿಜಯನಗರದ ರಾಜನಾಗಿದ್ದರೂ,  ಆಂಧ್ರಪ್ರದೇಶದ ನೈಋತ್ಯ ಭಾಗದಲ್ಲಿರುವ ಐದು ಜಿಲ್ಲೆಗಳಾದ ರಾಯಲಸೀಮಾ ಭಾಗವನ್ನು ಇಂದಿಗೂ  ಶ್ರೀ ಕೃಷ್ಣದೇವರಾಯನ ಭೂಮಿ ಎಂದೇ ಕರೆಯಲಾಗುತ್ತದೆ.

ಕಲೆ ಮತ್ತು ತೆಲುಗು ಸಾಹಿತ್ಯದ ಪೋಷಕರಾಗಿ ಶ್ರೀಕೃಷ್ಣದೇವರಾಯರು ಅಪ್ರತಿಮರಾಗಿದ್ದರು. ಅವರ ಕಾಲದಲ್ಲಿ ತೆಲುಗು ಸಾಹಿತ್ಯದ ಸುವರ್ಣಯುಗ ಎಂದೇ ನೆನೆಯಲಾಗುತ್ತದೆ. ಅಷ್ಟದಿಗ್ಗಜರೆಂದು ಹೆಸರಾದ ಎಂಟು ಜನ ಸಾಹಿತ್ಯದ ದಿಗ್ಗಜರು ಇವರ ಆಸ್ಥಾನವನ್ನು ಅಲಂಕರಿಸಿದರು. ಅವರಲ್ಲಿ ಮನು ಚರಿತ್ರಮು ಗ್ರಂಥದ ಕರ್ತೃ ಅಲ್ಲಸಾನಿ ಪೆದ್ದಣ ಶ್ರೇಷ್ಠರು. ಅವರನ್ನು ಆಂಧ್ರ ಕವಿತಾ ಪಿತಾಮಹ ಎಂದು ಕರೆಯಲಾಗುತ್ತಿತ್ತು. ವಿಕಟಕವಿ ಮತ್ತು ಅತ್ಯಂತ ಚಾಣಾಕ್ಷ ಮಂತ್ರಿ ಎಂದೇ ಖ್ಯಾತರಾಗಿದ್ದ ತೆನಾಲಿ ರಾಮಕೃಷ್ಣರಿಗೂ ಆಶ್ರಯವನ್ನು ನೀಡಿದ್ದು ಇದೇ  ಕೃಷ್ಣದೇವರಾಯರು.  ಸ್ವತಃ ಉತ್ತಮ ಕವಿ ಎನಿಸಿಕೊಂಡಿದ್ದ ಕೃಷ್ಣದೇವರಾಯರು ತೆಲುಗು ಭಾಷೆಯಲ್ಲಿ ಕೆಲವು ಕೃತಿಗಳನ್ನು ರಚಿಸಿರುವುದು ಗಮನಾರ್ಹವಾಗಿದೆ.

hampe templeಶ್ರೀ ಕೃಷ್ಣದೇವರಾಯರೊಬ್ಬರು ದೂರದೃಷ್ಣಿಯ  ಮಹಾನ್ ವ್ಯಕ್ತಿಯಾಗಿದ್ದಲ್ಲದೇ, ಹಿಂದೂ ಧರ್ಮದ ಪರಮ ಸಹಿಷ್ಣುವಾಗಿದ್ದಕ್ಕೆ ಕುರುಹಾಗಿ  ಹಜಾರ ರಾಮ ದೇವಸ್ಥಾನ ಅಲ್ಲದೇ, ಹಂಪೆಯ ವಿಠ್ಥಲಸ್ವಾಮಿಯ ದೇವಸ್ಥಾನದ ನಿರ್ಮಾಣದ ಸಂಪೂರ್ಣ ಶ್ರೇಯ ಇವರಿಗೆ ಸಲ್ಲುತ್ತದೆ. ತನ್ನ ತಾಯಿಯ ಗೌರವಾರ್ಥವಾಗಿ ಅವರು ನಾಗಲಾಪುರಂ ಎಂಬ ಹೊಸ ನಗರವನ್ನು ನಿರ್ಮಿಸಿದ್ದರು.

ಇಷ್ಟೆಲ್ಲಾ ಬಲಿಷ್ಠನಾಗಿದ್ದ ಚಕ್ರವರ್ತಿಯ ಕೊನೆಯ ದಿನಗಳು ಸಂತೋಷವಾಗಿರಲಿಲ್ಲ. ತನ್ನ ಉತ್ತರಾಧಿಕಾರಿಯಾಗಿ ತನ್ನ ಚಿಕ್ಕ ಮಗ ತಿರುಮಲದೇವನನ್ನು ನೇಮಿಸಿದ್ದರೆ ಆತ  ಅನುಮಾನಾಸ್ಪದವಾಗಿ ನಿಧನರಾದನು. ತನ್ನ ಮಗನ ಸಾವಿಗೆ  ತನ್ನ ಪರಮಾಪ್ತರು ಮತ್ತು ತಂದೆಯ ಸಮಾನರದಂತಹ ಮಂತ್ರಿಗಳದ ತಿಮ್ಮರಸುವಿನ ಮಗನೇ ಕಾರಣ ಎಂದು  ಯಾರೋ ತಿಳಿಸಿದ್ದನ್ನು ಕೇಳಿ ತಿಮ್ಮರಸು ಮತ್ತು ಅವರ ಮಗನನ್ನು ಬಂಧಿಸಿ ಸೆರೆಮನೆಯಲ್ಲಿ ಕೂಡಿ ಹಾಗಿ ಅವರಿಬ್ಬರ ಕಣ್ಣುಗಳನ್ನು ತೆಗೆಸಿದ ನಂತರ ಕೃಷ್ಣದೇವರಾಯನ ಮನಸ್ಸು ವಿಲವಿಲ ಒದ್ದಾಡಿತ್ತು.  ಈ ಎಲ್ಲಾ ಘಟನೆಗಳ ನಂತರ ಬಹಳವಾಗಿ ನೊಂದಿದ್ದ ರಾಯರು, ತನ್ನ ಮಲಸಹೋದರ ಅಚ್ಯುತ ದೇವರಾಯನನ್ನು ತನ್ನ ಉತ್ತರಾಧಿಕಾರಿಯಾಗಿ ಮಾಡಿ, 1529 ರಲ್ಲಿ ಹಂಪೆಯಲ್ಲಿ ನಿಧನರಾಗುವ ಮೂಲಕ ಕರ್ನಾಟಕದ ಅತ್ಯಂತ ಪ್ರಭಲ ದೊರೆಯ ಅಂತ್ಯವಾಯಿತು.

WhatsApp Image 2022-01-17 at 9.02.54 AMಶ್ರೀ ಕೃಷ್ಣದೇವರಾಯರು ಗತಿಸಿ ಇಂದಿಗೆ ಐದಾರು ಶತಮಾನಗಳು ಕಳೆದು ಹೋಗಿದ್ದರೂ,  ಬಸವಣ್ಣನವರ ವಚನದಲ್ಲಿ ಹೇಳಿರುವಂತೆ ಇವನಾರವ ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆನಿಸಯ್ಯಾ ಎಂದು ಕನ್ನಡಿಗರು, ತೆಲುಗರು, ತುಳುವರು, ತಮಿಳರು, ಒರಿಸ್ಸಾದವರು  ಹೀಗೆ ದೇಶದ ಬಹುತೇಕರು  ಈತ ನಮ್ಮ ಹೆಮ್ಮೆಯ ರಾಜ ಎಂದು ಹೇಳಿಕೊಂಡು ಸಂಭ್ರಮ ಪಡುತ್ತಿದ್ದಾರೆ  ಎಂದರೆ,  ಒಬ್ಬನ ಉಪಸ್ಥಿತಿಗಿಂತ ಆತನ  ಅನುಪಸ್ಥಿತಿಯಲ್ಲಿಯೂ ಅತನನ್ನು ನೆನಸಿಕೊಳ್ಳುತ್ತಿದ್ದಾರೆ ಆತ ಶ್ರೇಷ್ಠನಾಗಿರಲೇ ಬೇಕಲ್ಲವೇ?  ಹೌದು ನಿಸ್ಸಂದೇಹವಾಗಿ, ಶ್ರೀಕೃಷ್ಣದೇವರಾಯರು ಕೇವಲ ವಿಜಯನಗರ ಸಾಮ್ರಾಜ್ಯದ  ಶ್ರೇಷ್ಠ ಚಕ್ರವರ್ತಿಯಲ್ಲದೇ ಬಹುಶಃ ಈ ಜಗತ್ತು ಕಂಡ ಮಹಾನ್ ಚಕ್ರವರ್ತಿಗಳಲ್ಲಿ ಒಬ್ಬರು ಎಂದರೂ ಅತಿಶಯವಲ್ಲ ಅಲ್ವೇ?

ಏನಂತೀರೀ?

ನಿಮ್ಮವನೇ ಉಮಾಸುತ

One thought on “ವಿಜಯನಗರದ ಶ್ರೀ ಕೃಷ್ಣದೇವರಾಯ

  1. ಶ್ರೀ ಕೃಷ್ಣದೇವರಾಯ ಜೀವನ ಹಾಗೂ ಆಡಳಿತ ಬಗ್ಗೆ ಮಾಹಿತಿ ಅದ್ಭುತವಾಗಿದೆ ಸರ್. ಧನ್ಯವಾದಗಳು 🙏🙏🙏

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s