ಬಾಗಲಕೋಟೆ ಜಿಲ್ಲೆಯಲ್ಲಿ ಪಾರ್ವತೀ ದೇವಿಯ ಅಪರಾವತಾರವಾಗಿ ಸಿಂಹವಾಹಿನಿಯಾಗಿ ತಾಯಿ ಬನಶಂಕರಿಯಾಗಿ ನೆಲೆಸಿರುವ ಶ್ರೀ ಕ್ಷೇತ್ರವೇ ಬದಾಮಿ. ಈ ಮಹಾತಾಯಿಯನ್ನು ಬಾಳವ್ವ, ಬನದವ್ವ, ಸುಂಕವ್ವ, ಶಾಕಾಂಬರಿ, ಶಿರಿವಂತಿ, ಚೌಡಮ್ಮ, ವನದುರ್ಗೆ ಹೀಗೆ ಹತ್ತಾರು ಹೆಸರುಗಳಿಂದ ಭಕ್ತರು ಪೂಜಿಸುತ್ತಾರೆ. ನವದುರ್ಗೆಯರಲ್ಲಿ 6ನೇ ಅವತಾರವೇ ಬನಶಂಕರಿ ಎಂದೂ ಹೇಳಲಾಗುತ್ತದೆ.
ಈ ಪ್ರದೇಶದಲ್ಲಿ ಸರಸ್ವತಿ ಹೊಳೆ ಹರಿಯುವ ಕಾರಣ ಸುಂದರವಾದ ಮತ್ತು ದಟ್ಟವಾದ ಅರಣ್ಯ ಪ್ರದೇಶಗಳಿಂದ ಆವರಸಿದ್ದು, ಎಲ್ಲೆಲ್ಲೂ ತೆಂಗು, ಬಾಳೆ ಮತ್ತು ವಿಳ್ಳೇದೆಲೆ ಹಂಬುಗಳ ತೋಟಗಳ ಮಧ್ಯೆ ಇರುವ ಈ ವನಶಂಕರಿ, ಕಾಡುಗಳ ದೇವತೆ, ಅರ್ಥಾತ್ ಬನಶಂಕರಿ ದೇವಿ ಈ ಪ್ರದೇಶದಲ್ಲಿ ನೆಲೆಗೊಳ್ಳುವುದರದ ಹಿಂದೆ ಒಂದು ಪೌರಾಣಿಕ ಕಥೆಯಿದೆ.
ಬಹಳ ಹಿಂದೆ ದುರ್ಗಮಾಸುರ ಎಂಬ ರಕ್ಕಸನೊಬ್ಬನು ನಾಲ್ಕೂ ವೇದಗಳನ್ನು ವಶಪಡಿಸಿಕೊಳ್ಳಬೇಕು ಎಂದು ನಿರ್ಧರಿಸಿ, ಹಿಮಾಲಯಕ್ಕೆ ಹೋಗಿ ನಿರಾಹಾರನಾಗಿ ಕೇವಲ ಗಾಳಿಯನ್ನು ಸೇವಿಸುತ್ತ ಬ್ರಹ್ಮನ ಕುರಿತು ಘನ ಘೋರವಾದ ತಪಸ್ಸನ್ನು ಮಾಡಿದ. ಅವನ ತಪ್ಪಸ್ಸಿಗೆ ಮೆಚ್ಚಿದ ಬ್ರಹ್ಮ ದೇವರು ಪ್ರತ್ಯಕ್ಷನಾದಾಗ, ವೇದಗಳನ್ನು ವಶಪಡಿಸಿಕೊಳ್ಳುವ ವರವನ್ನು ಕೇಳಿದಾಗ, ಬ್ರಹ್ಮನೂ ಕೂಡಾ ಯಾವುದೇ ಮರು ಮಾತಿಲ್ಲದೇ, ತಥಾಸ್ತು ಎಂದ ಕೂಡಲೇ, ಭೂಲೋಕದಲ್ಲಿ ಅಲ್ಲೋಲ ಕಲ್ಲೋಲ ಏರ್ಪಟ್ಟಿತು. ಪ್ರತಿನಿತ್ಯ ನಡೆಯುತ್ತಿದ್ದ ದೇವತಾ ಕಾರ್ಯಗಳೆಲ್ಲವೂ ನಿಂತು ಹೋಗಿ, ಎಲ್ಲಾ ಋಷಿ ಮುನಿಗಳು, ಸಾಧು ಸಂತರರಿಗೆ ತಾವು ಕಲಿತಿದ್ದ ವೇದ ಮಂತ್ರಗಳೆಲ್ಲವೂ ಮರೆತು ಹೋಗಿ ಯಜ್ಞ ಯಾಗಾದಿಗಳು ಅಕ್ಷರಶಃ ನಿಂತು ಹೋದವು. ಹೀಗೆ ಯಜ್ಞ ಯಾಗಾದಿಗಳು ನಿಂತ ಕಾರಣ, ದೇವತೆಗಳಿಗೂ ಸಿಗುತ್ತಿದ್ದ ಹವಿಸ್ಸು ನಿಂತು ಹೋಗಿ ದೇವತೆಗಳ ಶಕ್ತಿಯೂ ಕ್ರಮೇಣ ಕುಂದತೊಡಗಿದ ಪರಿಣಾಮ ಭೂಲೋಕದಲ್ಲಿ ಅರಾಜಕತೆ ಉಂಟಾಗಿದ್ದಲ್ಲದೇ, ಮಳೆ ಬೆಳೆ ಇಲ್ಲದೇ ಕ್ಷಾಮ ಉಂಟಾಗಿ ತುತ್ತು ಅನ್ನಕ್ಕೂ ಪರಿತಪಿಸಬೇಕಾದ ಪರಿಸ್ಥಿತಿ ಬಂದೊದಗಿತು.
ಭೂಲೋಕದ ಮನುಷ್ಯರು, ಪಶು ಪಕ್ಷಿಗಳು ಹಸಿವು ಮತ್ತು ನೀರಿನಿಂದ ತತ್ತರಿಸಿ ಪ್ರಾಣ ಬಿಡತೊಡಗಿದರೆ, ಆ ರಾಕ್ಷಸನ ವಿರುದ್ಧ ಹೋರಾಡಲೂ ಶಕ್ತಿ ಇಲ್ಲದ ದೇವಾನು ದೇವತೆಗಳೂ ದಿಕ್ಕೇ ತೋಚದೇ ಸಿಕ್ಕ ಸಿಕ್ಕ ಕಡೆ ಅಡಗಿ ಕುಳಿತುಕೊಂಡರು. ಇವೆಲ್ಲವನ್ನೂ ಗಮನಿಸಿದ ಋಷಿ ಮುನಿಗಳು ಒಂದಾಗಿ ತಮ್ಮೆಲ್ಲಾ ಅಳಿದುಳಿದ ಶಕ್ತಿಗಲನ್ನು ಕ್ರೋಢಿಕರಿಸಿ ಹಿಮಾಲಯಕ್ಕೆ ಹೋಗಿ ಸಮಭಾವ ಮತ್ತು ಸಮಚಿತ್ತದಿಂದ ಲೋಕಕಲ್ಯಾಣಕ್ಕಾಗಿ ಶಕ್ತಿ ದೇವಿಯನ್ನು ಕುರಿತು ನಿರಾಹಾರಿಗಳಾಗಿ ಕಠಿಣ ತಪಸ್ಸನ್ನು ಆಚರಿಸಿದರು. ಅವರೆಲ್ಲರ ತಪ್ಪಸ್ಸಿಗೆ ಮೆಚ್ಚಿ ಪಾರ್ವತಿಯು ಪ್ರತ್ಯಕ್ಷಳಾದಾಗ, ಭೂಲೋಕದಲ್ಲಿ ಹಸಿವಿನಿಂದ ಹಲುಬಿ ನರಳುತ್ತಿದ್ದ ನರರು, ಪ್ರಾಣಿ, ಪಶು ಪಕ್ಷಿಗಳ ಯಾತನೆಯನ್ನು ವಿವರಿಸುತ್ತಿದ್ದಾಗ, ತಾಯಿ ಹೃದಯದ ಪಾರ್ವತೀ ದೇವಿಯ ಕರುಳು ಚುರುಕ್ ಎಂದಿದ್ದಲ್ಲದೇ, ಅವಳಿಗೇ ಅರಿವಿಲ್ಲದಂತೆ ಆಕೆಯ ಕಣ್ಣಿನಿಂದ ಅಗಾಧವಾಗಿ ಕಣ್ಣಿರು ಹರಿದು, ಅದೇ ಭೋರ್ಗೆರೆವ ಮಳೆ ರೂಪದಲ್ಲಿ ಭೂಲೋಕದಲ್ಲಿ ಧಾರಾಕಾರವಾಗಿ ಸುರಿದ ಪರಿಣಾಮ ಎಲ್ಲಾ ಕೆರೆ ಕಟ್ಟೆಗಳು ನದಿಗಳು ಮತ್ತೆ ಮೈದುಂಬಿ ಹರಿಯತೊಡಗಿದವು. ಪಾರ್ವತಿ ದೇವಿಯು ಪ್ರಕೃತಿಯ ರೂಪ ಧರಿಸಿ ಎಲ್ಲ ರೀತಿಯ ಸಸ್ಯ ಹಾಗೂ ಹಣ್ಣುಗಳನ್ನು ಚಿಗುರಿಸಿ ಎಲ್ಲರಿಗೂ ಆಹಾರ ನೀಡಿದಳು. ಹೀಗೆ ಪ್ರತಿಯೊಬ್ಬರ ಹಸಿವನ್ನು ನೀಗಿಸಲು ಶಾಕಾಹಾರದ ಆಹಾರವನ್ನು ನೀಡಿದ್ದ ಕಾರಣ ಆ ದೇವಿಗೆ ಶಾಕಾಂಬರಿ ಎಂಬ ಹೆಸರು ಬಂದಿತು ಎನ್ನುತ್ತದೆ.
ಮತ್ತೊಂದು ಪುರಾಣದ ಪ್ರಕಾರ, ಬಹಳ ಹಿಂದೆ ಈ ಪ್ರದೇಶವು ಭಯಂಕರ ಕ್ಷಾಮದಿಂದ ತತ್ತರಿಸಿ, ಪಶು ಪಕ್ಷಿ ಪ್ರಜೆಗಳಾದಿಗಳೆಲ್ಲರೂ ನೀರಿಲ್ಲದೇ ಪರಿತಪಿಸುತ್ತಿದ್ದಾಗ, ದೇವಾನುದೇವತೆಗಳೆಲ್ಲರೂ ಸೇರಿ, ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನ್ನು ಕಂಡು ಈ ಸಮಸ್ಯೆಯಿಂದ ಪಾರು ಮಾಡಲು ಎಂದು ಪ್ರಾರ್ಥಿಸಿದರಂತೆ. ಅದಕ್ಕೆ ಆ ತ್ರಿಮೂರ್ತಿಗಳು ಈ ಸಮಸ್ಯೆಗೆ ಬನಶಂಕರಿದೇವಿ ಮಾತ್ರಾ ಪರಿಹಾರವನ್ನು ನೀಡಬಲ್ಲಳು ಎಂದು ಹೇಳಿ ಎಲ್ಲರೂ ಸೇರಿ ತಿಲಕಾರಣ್ಯ ಪ್ರದೇಶಕ್ಕೆ ಬಂದು ತಾಯಿ ಬನಶಂಕರಿಯನ್ನು ಕುರಿತು ತಾಯಿ, ಈ ಪ್ರದೇಶದಲ್ಲಿ ಮಳೆ ಬೆಳೆಯಿಲ್ಲದೇ, ಯಜ್ಞಯಾಗಾದಿಗಳು ಇಲ್ಲದೇ, ಬದುಕಲು ಬಹಳ ಕಷ್ಟವಾಗಿದೆ. ದಯವಿಟ್ಟು ಈ ಸಮಸ್ಯೆಯಿಂದ ಪಾರು ಮಾಡು ಎಂದು ಪರಿ ಪರಿಯಾಗಿ ಪ್ರಾರ್ಥಿಸುತ್ತಾರೆ. ಅವರೆಲ್ಲರ ಪ್ರಾರ್ಥನೆಯಿಂದ ಪ್ರಸನ್ನಳಾದ ಬನಶಂಕರಿ ದೇವಿ ಪ್ರತ್ಯಕ್ಷಳಾಗಿ ಜನರ ನೀರಿನ ದಾಹವನ್ನು ತೀರಿಸಿದ್ದಲ್ಲದೇ, ತನ್ನ ತನುವಿನ ಶಾಖದಿಂದ ಕಾಯಿಪಲ್ಲೆಗಳನ್ನು ಸೃಷ್ಟಿಸಿ ಜನರ ಸಂಕಷ್ಟಗಳನ್ನು ನೀಗಿಸಿದಳಂತೆ. ಹಾಗಾಗಿ ಈ ದೇವಿಗೆ ಶಾಕಾಂಬರಿ ಎಂದೂ ಕರೆಯಲಾಗುತ್ತದೆ ಎನ್ನುತ್ತದೆ.
ಮುಂದೆಂದೂ ಈ ಪ್ರದೇಶ ನೀರಿಲ್ಲದೇ ಕ್ಷಾಮಕ್ಕೆ ಈಡಾಗಬಾರದೆಂದು ಈ ಪ್ರದೇಶದಲ್ಲಿ ಹರಿದ್ರಾತೀರ್ಥ, ತೈಲತೀರ್ಥ, ಪದ್ಮತೀರ್ಥ, ಕ್ಷಮಾತೀರ್ಥ ಮುಂತಾದ ಅನೇಕ ತೀರ್ಥಕೊಳಗಳನ್ನು ಸೃಷ್ಟಿ ಮಾಡಿದ ಕಾರಣ ಈ ಪ್ರದೇಶ ಸದಾ ನಂದನವನವಾಗಿ ನಿತ್ಯಹದ್ವರ್ಣಗಳಿಂದ ಕಂಗೊಳಿಸುವಂತಾಗಿದೆ.
ನಂತರ ಚಾಲುಕ್ಯರ ವಾಸ್ತುಶಿಲ್ಪ ಶೈಲಿಯಲ್ಲಿದ್ದ ಈ ದೇವಸ್ಥಾನವನ್ನು ಮುಂದೆ 18ನೇ ಶತಮಾನದಲ್ಲಿ ಮರಾಠರ ದಳವಾಯಿಗಳು ಜೀರ್ಣೋದ್ಧಾರ ಮಾಡಿರುವ ಈ ದೇವಾಲಯದಲ್ಲಿ ಗರ್ಜಿಸುತ್ತಿರುವ ಸಿಂಹದ ಮೇಲೆ ವಿರಾಜಮಾನಳಾಗಿರುವ ಬನಶಂಕರಿಯ ವಿಗ್ರಹವಿದ್ದು ಪ್ರತೀ ದಿನವೂ ನೂರಾರು ಭಕ್ತಾದಿಗಳು ಆಕೆಯ ದರ್ಶನ ಪಡೆದು ಪುನೀತರಾಗುತ್ತಾರೆ.
ಪ್ರತಿ ವರ್ಷ ಪುಷ್ಯ ಮಾಸದ ಹುಣ್ಣಿಮೆಯಂದು (ಜನವರಿ ತಿಂಗಳಿನಲ್ಲಿ) ಅಂದರೆ ಬನದ ಹುಣ್ಣಿಮೆಯಂದು ಇಲ್ಲಿ ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ನಡೆಯುವ ಬನಶಂಕರಿ ಜಾತ್ರೆ ಜಗದ್ವಿಖ್ಯಾತವಾಗಿದ್ದು, ಕೇವಲ ಕರ್ನಾಟಕ ಮಾತ್ರವಲ್ಲ್ದೇ ನೆರೆಯ ಮಹಾರಾಷ್ಟ್ರ ಮತ್ತು ದೇಶಾದ್ಯಂತ ಹರಿದು ಹಂಚಿಹೋಗಿರುವ ಆಕೆಯ ಭಕ್ತರು ಈ ಜಾತ್ರೆಗೆ ಬಂದು ತಾಯಿಯ ದರ್ಶನ ಪಡೆದು ಪ್ರಸನ್ನರಾಗುತ್ತಾರೆ.
ಈ ಬನಶಂಕರಿ ಜಾತ್ರೆಯ ಅರಂಭವಾಗುವ ಹತ್ತು ದಿನಗಳ ಮುಂಚಿತವಾಗಿಯೇ ಇಲ್ಲಿ ಸಂಭ್ರಮ ಸಡಗರಗಳು ಪ್ರಾರಂಭವಾಗುತ್ತದೆ. ಈ ಜಾತ್ರೆಯ ಸಮಯದಲ್ಲಿ ದೇವಾಲಯ ಮತ್ತು ಇಡೀ ಬದಾಮಿ ಪಟ್ಟಣವನ್ನು ಬಗೆ ಬಗೆಯ ಎಲೆಗಳು ಮತ್ತು ಹೂವುಗಳಿಂದ ಅಲಂಕರಿಸುವುದು ಇಲ್ಲಿನ ವಿಶೇಷವಾಗಿದೆ. ಈ ರಥೋತ್ಸವದ ಹಿಂದಿನ ದಿನ ಪಲ್ಯದ ಹಬ್ಬ (ಪಲ್ಲೇದ ಹಬ್ಬ) ಅರ್ಥಾತ್ ತರಕಾರಿ ಉತ್ಸವ ಎಂದು ಆಚರಿಸುತ್ತಾರೆ. ಅಂದು ತಾಯಿ ಬನಶಂಕರಿಗೆ 108 ಬಗೆಯ ತರಕಾರಿಗಳಿಂದ ತಯಾರಿಸಿದ ಖಾದ್ಯಗಳನ್ನು ನೈವೇದ್ಯವಾಗಿ ಸಮರ್ಪಿಸುವುದು ಇಲ್ಲಿನ ಸಂಪ್ರದಾಯವಾಗಿದೆ.
ಬಾದಾಮಿಯ ಬನಶಂಕರಿಯ ರಥ ಅರ್ಥಾತ್ ತೇರನ್ನು ಎಳೆಯುವ ಮೂಲಕ ಆರಂಭವಾಗುವ ಅದ್ದೂರಿಯ ಜಾತ್ರೆಯ ಸಂಭ್ರಮ ಸಡಗರಗಳು ಸುಮಾರು ಮೂರು ವಾರಗಳ ಕಾಲ ಯಾವುದೇ ಧರ್ಮ, ಜಾತಿಗಳ ಹಂಗಿಲ್ಲದೇ ತಂಡೋಪ ತಂಡದಲ್ಲಿ ಬಂದು ದೇವಿಯ ದರ್ಶನ ಪಡೆದು ಕೃತಾರ್ಥರಾಗುತ್ತಾರೆ. ಜಾತ್ರೆ ನಡೆಯುವ ಸಂದರ್ಭದಲ್ಲಿ ಭಕ್ತಾದಿಗಳ ಮನರಂಜಿಸಲು ನಾನಾ ವಿಧಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಗರ್ಭಗುಡಿಯಲ್ಲಿ ಗರ್ಜಿಸುತ್ತಿರುವ ಸಿಂಹದ ಮೇಲೆ ವಿರಾಜಮಾನಳಾದ ಸುಮಾರು 5 ಅಡಿ ಎತ್ತರವಿರುವ, ಕಪ್ಪು ಶಿಲೆಯ ದೇವಿಗೆ ಅಷ್ಟ ಭುಜ, ಕೈಗಳಿವೆ. ಬಲಗೈ ನಲ್ಲಿ ಖಡ್ಗ, ಗಂಟೆ, ತ್ರಿಶೂಲ ಹಾಗು ಲಿಪ್ತಿ ಹಾಗೂ ಎಡಗೈಯಲ್ಲಿ ಡಮರು, ಡಾಲು, ರುಂಡ ಮತ್ತು ಅಮೃತ ಪಟೇ ಇವೆ. ಈ ದೇವಿ ತ್ರಿನೇತ್ರೆ. ಬನಶಂಕರಿ ದೇವಿಯನ್ನು ಮಹಾಕಾಳಿ, ಮಹಾಲಕ್ಷ್ಮೀ ಹಾಗು ಮಹಾ ಸರಸ್ವತಿ ಎಂತಲೂ ಕರೆಯುತ್ತಾರೆ. ತಾಯಿಯ ಬಲಗೈಯು ಸುಜ್ಞಾನದ ಸಂಕೇತ ಎಡಗೈಯು ಶೌರ್ಯದ ಸಂಕೇತವಾಗಿದೆ.
ದೇವಸ್ಥಾನದ ಶಿಖರವು ಚೌಕ ಕೋನಾಕಾರವಾಗಿ ಹಂತ ಹಂತವಾಗಿ ಮೇಲೆರುತ್ತಾ ಹೋಗಿದೆ. ಬೇರೆಲ್ಲಾ ದೇವಾಲಯದ ಗೋಪುರದಂತೆ ಇಲ್ಲಿ ಯಾವುದೇ ದೇವರುಗಳ ವಿಗ್ರಹಗಳು ಇಲ್ಲದಿರುವುದು ಇಲ್ಲಿನ ವಿಶೇಷವಾಗಿದೆ ಈ ದೇವಾಲಯಕ್ಕೆ ನಾಲ್ಕೂ ದಿಕ್ಕಿನಲ್ಲಿ ದ್ವಾರಗಳು ಇದ್ದು ದೇವಸ್ಥಾನದ ಆವರಣದಲ್ಲಿ ನಾಲ್ಕು ಸುಂದರವಾಗಿ ವೈಶಿಷ್ಟ್ಯವಾಗಿ ಇರುವ ಎಣ್ಣೆ ಕಂಬ ಎಂದು ಕರೆಯಲಾಗುವ ದೀಪಸ್ತಂಭಗಳು ಭಕ್ತರ ಮನಸ್ಸನ್ನು ಸೆಳೆಯುತ್ತವೆ. ಕಾರ್ತಿಕ ಮಾಸದಲ್ಲಿ ಈ ದೀಪ ಸ್ತಂಭಗಳಲ್ಲಿ ಭಕ್ತರು ದೀಪವನ್ನು ಬೆಳಗುತ್ತಾರೆ.
ದೇಶದ ನಾನಾ ಭಾಗಗಳಿಂದ ಬರುವ ಭಕ್ತಾದಿಗಳು ದೇವಾಲಯದ ಎದುರಿಗಿರುವ 360 ಅಡಿಗಳ ಚಚ್ಚೌಕಾಕಾರದ ಈ ಕಲ್ಯಾಣಿಯ ಸುತ್ತಲೂ ಇರುವ ಅರವಟ್ಟಿಗೆಯಲ್ಲಿ ಬಿಡಾರ ಹೂಡುತ್ತಾರೆ. ಹಬ್ಬದ ದಿನ, ಭಕ್ತಿಯಿಂದ ದೇವಿಯನ್ನು ಪೂಜಿಸುತ್ತಾರೆ. ಶ್ರದ್ಧಾ ಭಕ್ತಿಗಳಿಂದ ಈ ದೇವಿಗೆ ಶರಣಾದಲ್ಲಿ ಅವರ ಸಕಲ ಅಭಿಷ್ಟಗಳೂ ಈಡೇರುತ್ತವೆ ಎಂಬ ನಂಬಿಕೆ ಇರುವ ಕಾರಣ ವರ್ಷಕ್ಕೊಮ್ಮೆ ನಡೆಯುವ ಈ ಜಗದ್ವಿಖ್ಯಾತ ಬನಶಂಕರಿ ಜಾತ್ರೆಗೆ ಲಕ್ಷಾಂತರ ಜನರು ಇಲ್ಲಿಗೆ ಆಗಮಿಸುತ್ತಾರೆ.
ಬಾಗಲಕೋಟೆಯಿಂದ 40 ಕಿ.ಮೀ, ಹುಬ್ಬಳ್ಳಿಯಿಂದ 125 ಕಿ.ಮೀ ಹಾಗೂ ಬೆಂಗಳೂರಿನಿಂದ 495 ಕಿ.ಮೀ ಗಳಷ್ಟು ದೂರದಲ್ಲಿರುವ ಈ ಬಾದಾಮಿಗೆ ಹೋಗಲು, ಬಾಗಲಕೋಟೆ, ಹುಬ್ಬಳ್ಳಿ ಮತ್ತು ಬೆಂಗಳೂರಿನಿಂದ ಸರ್ಕಾರಿ ಬಸ್ಸುಗಳು ಸೇವೆಯಿದೆ. ಅದೂ ಅಲ್ಲದೇ ರಸ್ತೆಯೂ ಸಹಾ ಅತ್ಯುತ್ತಮವಾಗಿರುವ ಕಾರಣ ಬಹುತೇಕ ಭಕ್ತರು ತಮ್ಮ ಸ್ವಂತ ವಾಹನಗಳಲ್ಲಿ ಬಂದು ದೇವಿಯ ದರ್ಶನ ಪಡೆಯುತ್ತಾರೆ.
ಬದಾಮಿಗೆ ಬಂದು ಬನಶಂಕರಿಯ ದರ್ಶನ ಪಡೆದ ನಂತರ ಭಕ್ತರ ಹಸಿವನ್ನು ನೀಗಿಸಲು ಪ್ರಸಾದದ ವಿತರಣೆಯ ವ್ಯವಸ್ಥೆ ಇದ್ದರೂ, ಅವೆಲ್ಲಕ್ಕಿಂತಲೂ ಮಿಗಿಲಾಗಿ ದೇವಸ್ಥಾನದ ಎದುರಿಗಿನ ಕಲ್ಯಾಣಿಯ ತಟದಲ್ಲಿರುವ ಅರವಟ್ಟಿಕೆಗಲ್ಲಿ ಕುಳಿತು ಭಕ್ತರ ಹಸಿವನ್ನು ನೀವಾರಿಸಲು ಕುಳಿತಿರುವ ಈ ಪ್ರೀತಿಯ ಅನ್ನಪೂರ್ಣೆಯಂತಹ ತಾಯಂದಿರ ಅಕ್ಕರೆಯ ಕೈ ಅಡುಗೆಯ ರೊಟ್ಟಿ, ಕಾಯಿ ಪಲ್ಲೆ, ಕಾಳು ಪಲ್ಲೇ, ಅನ್ನಾ ಸಾಂಬಾರ್ ಮೊಸರಿನ ಸವಿಯನ್ನು ಅನುಭವಿಸಿದವರಿಗೇ ಗೊತ್ತು ಅದರ ಮಜ.
ಇನ್ನೇಕೆ ತಡಾ, ನೆನ್ನೆ ತಾನೇ ಬನದ ಹುಣ್ಣಿಮೆಯ ಜಾತ್ರೆ ಆರಂಭವಾಗಿದ್ದು ಇನ್ನೂ ಒಂದೆರಡು ವಾರಗಳ ಕಾಲ ಜಾತ್ರೆಯ ಸಡಗರ ಸಂಭ್ರಮಗಳು ಇರುವುದರಿಂದ ಸಮಯ ಮಾಡಿಕೊಂಡು ತಾಯಿ ಬನಶಂಕರಿಯ ದರ್ಶನ ಪಡೆದು ದೇವಿಯ ಕೃಪಾಶೀರ್ವಾದ ಪಡೆದು ಅದರ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?
ಏನಂತೀರಿ?
ನಿಮ್ಮವನೇ ಉಮಾಸುತ