ಹಿರಣ್ಯಕಷಿಪುವಿನ ಮಗ ಮಗ ಪ್ರಹ್ಲಾದ ಭಗವಾನ್ ವಿಷ್ಣು ಸರ್ವಾಂತರ್ಯಾಮಿ. ಆತ ಎಲ್ಲೆಡೆಯಲ್ಲಿಯೂ ಇದ್ದಾನೆ ಎನ್ನುತ್ತಾನೆ. ಆಗ ಕೋಪಗೊಂಡ ಹರಿಯ ವೈರಿ ಹಿರಣ್ಯಕಶಿಪು ಆ ನಿನ್ನ ಹರಿ ಇಲ್ಲಿರುವನೇ? ಅಲ್ಲಿರುವನೇ, ಆಕಾಶದಲ್ಲಿ ಇರುವನೇ, ಭೂಮಿಯಲ್ಲಿ ಇರುವನೇ ನೀರಿನಲ್ಲಿ ಇರುವನೇ? ಎಂದು ಕೇಳಿದಾಗ ಹೌದು ತಂದೆ ಆ ಹರಿ ಎಲ್ಲೆಲ್ಲೂ ಇದ್ದಾನೆ ಎಂದಾಗ ಸಿಟ್ಟಿನಲ್ಲಿ ತನ್ನ ಅರಮನೆಯ ಕಂಬವನ್ನು ತೋರಿಸಿ ಇಲ್ಲಿರುವನೇ ನಿನ್ನ ಹರಿ ಎಂದು ಆ ಕಂಭಕ್ಕೆ ಹೊಡೆದಾಗ ಆ ಕಂಬದಿಂದ ಹರಿ ನರಸಿಂಹಾವತಾರದಲ್ಲಿ ಬಂದು ಹಿರಣ್ಯಕಶಿಪುವನ್ನು ಸಾಯಿಸಿದ ಕಥೆ ನಮಗೆಲ್ಲಾ ಗೊತ್ತಿದೆ. ಆವರಿಬ್ಬರ ಸಂಭಾಷಣೆಯಲ್ಲಿ ಬರುವ ಆ ನಿನ್ನ ಹರಿಯು ನೀರಿನಲ್ಲೂ ಇರುವನೇ ಎಂಬುದಕ್ಕೆ ಜ್ವಲಂತ ಉದಾಹರಣೆಯಂತೆ ಕಾರವಾರದ ಅರಬ್ಬಿ ಸಮುದ್ರದ ಮಧ್ಯದಲ್ಲಿ ಇರುವ ಕೂರ್ಮಗಢದ ನರಸಿಂಹಸ್ವಾಮಿಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ,
ಕಾರವಾರ ಬಂದರಿನಿಂದ ಸುಮಾರು 6 ಕಿ.ಮೀ.ಗಳ ದೂರದಲ್ಲಿ ವಿಶಾಲವಾದ ಅರಬ್ಬೀ ಸಮುದ್ರದಲ್ಲಿ ನೂರು ಹೆಕ್ಟೇರ್ ಗಿಂತಲು ಅಧಿಕ ವಿಸ್ತೀರ್ಣದ ದ್ವೀಪವೊಂದಿದ್ದು ಅದಉ ನೋಡಲು ಆಮೆಯ ಆಕರ ಇರುವುದರಿಂದ ಅದನ್ನು ಕೂರ್ಮಗಢ ಎಂದು ಕರೆಯಲಾಗುತ್ತದೆ. ಈ ಕೂರ್ಮಗಢದಲ್ಲಿ ಪುರಾಣ ಪ್ರಸಿದ್ಧ ಶ್ರೀ ನರಸಿಂಹಸ್ವಾಮಿಯ ಗುಡಿಯೂ ಇರುವುದರಿಂದ ಈ ದ್ವೀಪಕ್ಕೆ ನರಸಿಂಹಗಡ ಎಂದೂ ಕರೆಯಲಾಗುತ್ತದೆ. ಸಮುದ್ರದ ತಡದಿಂದ ಸಾವಿರಾರು ಮೀಟರ್ ಎತ್ತರದಲ್ಲಿರುವ ದ್ವೀಪವನ್ನು ಹತ್ತಲು ಕಲ್ಲುಬಂಡೆಗಳ ಮಧ್ಯದಲ್ಲಿಯೇ ಕಾಲುದಾರಿಯನ್ನು ಕೊರೆಯಲಾಗಿದೆ.
ಈ ಕೂರ್ಮಗಡದಲ್ಲಿ ನರಸಿಂಹ ದೇವರ ಗುಡಿಯ ಪ್ರತಿಷ್ಟಾಪನೆಯ ಹಿಂದೆ ಪೌರಾಣಿಕದ ಐತಿಹ್ಯವಿದೆ. ಕಾರವಾರ ಮತ್ತು ಕೈಗಾ ನಡುವಿನಲ್ಲಿ ಕಡವಾಡ ಎಂಬ ಪ್ರದೇಶವಿದ್ದು ಅಲ್ಲಿನ ಗುಡಿಯೊಂದಕ್ಕಿ ಸಾಧುವೊಬ್ಬರು ಅರ್ಚಕರಾಗಿ ಬರುತ್ತಾರೆ. ಅದೊಮ್ಮೆ ಅವರು ದೇವಸ್ಥಾನಕ್ಕೆ ನಡೆದುಕೊಂಡು ಬರುವಾಗ ಅವರಿಗೊಂದು ಸಾಲಿಗ್ರಾಮ’ (ಅಂದರೆ ವಿಷ್ಣುವಿನ ಅವತಾರದ ಒಂದು ಚಿನ್ಹೆ) ಸಿಗುತ್ತದೆ, ಅದನ್ನು ಭೋವಿ ಸಮುದಾಯಕ್ಕೆ ಸೇರಿದವನೊಬ್ಬನಿಗೆ ನೀಡಿ ಅದನ್ನು ಕೂರ್ಮಗಡದಲ್ಲಿ ಪ್ರತಿಷ್ಠಾಪಿಸುವಂತೆ ಹೇಳುತ್ತಾರೆ. ಆ ವ್ಯಕ್ತಿಯು ಆ ಸಾಲಿಗ್ರಾಮವನ್ನು ಕೂರ್ಮಗಡದಲ್ಲಿ ಪ್ರತಿಷ್ಠಾಪಿಸಿದ ನಂತರ ನೀರಿಗೆ ಧುಮುಕಿದವರು ಮತ್ತೆಂದೂ ಹಿಂದಿರುಗಿ ಬರಲಿಲ್ಲವಂತೆ. ಆತ ಹಾಗೆ ಸ್ಥಾಪಿಸಿದ ಗುಡಿಯೇ ಇಂದಿನ ಶ್ರೀ ನರಸಿಂಹಸ್ವಾಮಿ ದೇವಾಲಯ. ಅಂದಿನಿಂದ ಆಲ್ಲಿನ ಸ್ಥಳೀಯರಿಗೆ ಮತ್ತು ಮೀನುಗಾರರಿಗೆ ಆ ನರಸಿಂಹನೇ ಪ್ರಮುಖ ದೇವರು. ಪ್ರತೀ ವರ್ಷ ಪುಷ್ಯ ಮಾಸದ ಹುಣ್ಣಿಮೆಯ ದಿನದಂದು ಇಲ್ಲಿ ಅತ್ಯಂತ ವಿಜೃಂಭಣೆಯಿಂದ ಜಾತ್ರೆಯನ್ನು ನಡೆಸಲಾಗುತ್ತದೆ,
ಕೇವಲ ಸ್ಥಳೀಯರಲ್ಲದೇ ಕರಾವಳಿ, ಉತ್ತರಕನ್ನಡದ ಕೆಲವು ಪ್ರದೇಶಗಳ ಜನರಲ್ಲದೇ ಅಕ್ಕ ಪಕ್ಕದ ರಾಜ್ಯಗಳಾದ ಗೋವಾ, ಮತ್ತು ಮಹಾರಾಷ್ಟ್ರಗಳಿಂದಲೂ ಬಂದು ಬಹಳ ಭಕ್ತಿಯಿಂದ ಈ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಹೀಗೆ ಜಾತ್ರೆಯಲ್ಲಿ ಭಗವಂತನನ್ನು ದರ್ಶನ ಮಾಡಲು ಬರುವವರು ಖಡ್ಡಾಯವಾಗಿ ಬಾಳೇಗೊನೆಯನ್ನು ದೇವರಿಗೆ ನೈವೇದ್ಯವಾಗಿ ತೆಗೆದುಕೊಂಡು ಬರುವುದು ಇಲ್ಲಿನ ಸಂಪ್ರದಾಯವಾಗಿದೆ. ಹೀಗೆ ದೇವರಿಗೆ ಬಾಳೇ ಗೊನೆಯನ್ನು ಅರ್ಪಿಸಿದಲ್ಲಿ ಭಗವಂತನು ಅವರಿಗೆ ಒಲಿದು ಇಡೀ ವರ್ಷ ಸುಭಿಕ್ಷವಾಗಿರುತ್ತದಲ್ಲದೇ ಹೆಚ್ಚಿನ ಮೀನು ಸಿಗುತ್ತದೆ ಎಂಬ ನಂಬಿಕೆ ಸ್ಥಳೀಯರದ್ದಾಗಿದೆ. ಆ ವರ್ಷ ಯಾರಿಗೆ ಹೆಚ್ಚಿನ ಮೀನು ದೊರೆತಿರುತ್ತದೆಯೋ ಅವರು ಒಂದಕ್ಕಿಂತಲು ಹೆಚ್ಚಿನ ಬಾಳೇ ಗೊನೆಯನ್ನು ನೈವೇದ್ಯಕ್ಕೆ ಅರ್ಪಿಸುವುದು ಅಲ್ಲಿನ ನಡೆದುಕೊಂಡು ಬಂದಿರುವ ರೂಢಿಯಾಗಿದೆ.
ಜಾತ್ರೆಯ ದಿನ ಕಡವಾಡದ ನರಸಿಂಹ ದೇವರನ್ನು ಬೆಳಗ್ಗೆಯೇ ಪಲ್ಲಕ್ಕಿ ಮೆರವಣಿಗೆಯಲ್ಲಿ ಕರೆತಂದು ಆನಂತರ ಅಲಂಕೃತ ದೋಣಿಯಲ್ಲಿ ಕೂರ್ಮಗಡಕ್ಕೆ ತಂದು ಆ ದ್ವೀಪದ ಕಟ್ಟೆಯ ಮೇಲಿಟ್ಟು ಅದಕ್ಕೆ ಶೋಡಶೋಪಚಾರ ಪೂಜೆಯನ್ನು ಮಾಡಿ, ಕಡವಾಡಕ್ಕೆ ಬಂದ ಭಕ್ತಾದಿಗಳೇ ಆಲ್ಲೇ ಅಡುಗೆಯನ್ನು ತಯಾರಿಸಿ ಬಾಳೇಹಣ್ಣಿನ ಜೊತೆ ಮಾಡಿದ ಅಡುಗೆಯನ್ನು ನೈವೇದ್ಯವನ್ನು ಮಾಡಿ ಎಲ್ಲರಿಗೂ ಪ್ರಸಾದವನ್ನು ಹಂಚುತ್ತಾರೆ. ಮಾರನೇಯದಿನ ಮತ್ತದೇ ದೋಣಿಯಲ್ಲಿ ಕಡವಾಡದ ದೇವಸ್ಥಾನಕ್ಕೆ ಮರಳಿ ತರುವುದರ ಮೂಲಕ ಜಾತ್ರೆ ಸಂಪನ್ನವಾಗುತ್ತದೆ,
2019ರಲ್ಲಿ ಈಜಾತ್ರೆಗೆ ಬಂದು ದೇವರ ದರ್ಶನ ಮಾಡಿ ಹಿಂದಿರುಗುವಾಗ ನಡೆದ ದೋಣಿ ದುರಂತದಲ್ಲಿ ಅನೇಕ ಜನರ ಸಾವು ನೋವು ಸಂಭವಿಸಿದ ನಂತರ ಈ ಜಾತ್ರೆಯಂದು ಬಹಳ ಎಚ್ಚರಿಕೆಯನ್ನು ವಹಿಸಲಾಗುತ್ತಿದೆ. ಈ ಕಹಿ ಘಟನೆಯ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡ ಉತ್ತರ ಕನ್ನಡ ಜಿಲ್ಲಾಡಳಿತವೂ ಕೇವಲ ಬೈತ್ಕೋಲ್ ಮೀನುಗಾರಿಕಾ ಬಂದರು ಮತ್ತು ಕಡವಾಡದ ಮೂಲಕ ಮಾತ್ರ ಬೋಟ್ ವ್ಯವಸ್ಥೆ ಮಾಡಿದೆ. ಹೀಗಾಗಿ ಭಕ್ತರಿಗೆ ಆಗುತ್ತಿದ್ದ ಅನಾನೂಕೂಲವನ್ನು ಕಂಡ ಸ್ಥಳೀಯ ಮೀನುಗಾರರು ಕಾರವಾರದ ಬೈತ್ಕೋಲ್ ಮೀನುಗಾರರು ತಮ್ಮ ಬೋಟ್ಗಳ ಮೂಲಕ ಭಕ್ತರಿಗೆ ಉಚಿತ ಸೇವೆ ಸಲ್ಲಿಸುತ್ತಿದ್ದಾರೆ.
ಕಾರವಾರದ ಬಂದರಿನಿಂದ 6 ಕಿ.ಮೀ., ಕೋಡಿಭಾಗದಿಂದ 2 ಕಿ.ಮೀ. ದೇವಭಾಗದಿಂದ ಒಂದು ಕಿ.ಮೀ.ದೂರದಲ್ಲಿರುವ ಈ ದ್ವೀಪವು ಕಲ್ಲುಬಂಡೆಗಳಿಂದ ರೂಪುಗೊಂಡಿದ್ದರೂ ಮರಳಿನ ತೀರವಿರುವ ಕಾರಣ ಪ್ರವಾಸಕ್ಕೆ ಹೇಳಿಮಾಡಿಸಿದ ಸ್ಥಳವಾಗಿದೆ. ಕೂರ್ಮಗಡದಲ್ಲಿ ಕಡಿದಾದ ಗುಡ್ಡವನ್ನು ಏರಿದರೂ ಅಲ್ಲಿನ ಪ್ರಶಾಂತವಾದ ವಾತವರಣ ಮನಸ್ಸಿಗೆ ಮುದನೀಡುತ್ತದೆ. ಪ್ರವಾಸಿಗರ ಅನುಕೂಲಕ್ಕೆಂದೇ ಇಲ್ಲಿ ರೆಸಾರ್ಟ್ ಕೂಡ ಇದ್ದು ಊಟ-ತಿಂಡಿಯ ವ್ಯವಸ್ಥೆ ಅಚ್ಚುಕಟ್ಟಾಗಿದೆ. ಈ ಭಾಗಕ್ಕೆ ಪ್ರವಾಸ ಕೈಗೊಳ್ಳಲು ಸೆಪ್ಟೆಂಬರ್ನಿಂದ ಮಾರ್ಚ್ ತಿಂಗಳುಗಳ ಮಧ್ಯೆ ಸೂಕ್ತ ಸಮಯವಾಗಿದೆ. ಜಾತ್ರೆ ಸಮಯದಲ್ಲಿ ಇಲ್ಲಿಗೆ ಬರ ಬೇಕೆಂದರೆ, ಜಾತ್ರೆಯ ದಿನ ಬೆಳ್ಳಂಬೆಳಗ್ಗೆ ಕಾರವಾರದಿಂದ ಗೋವಾ ಮಾರ್ಗದಲ್ಲಿನ ಕಾಳಿ ನದಿ ಸೇತುವೆ ಬಳಿ ಬಂದು ಅಲ್ಲಿಂದ ದೋಣಿಗಳ ಮೂಲಕ ಕೂರ್ಮಗಡವನ್ನು ತಲುಪಬಹುದಾಗಿದೆ.
ಇಷ್ಟೆಲ್ಲಾ ಮಾಹಿತಿ ತಿಳಿದ ಮೇಲೆ ಇನ್ನೇಕೆ ತಡಾ ಸಮಯ ಮಾಡಿಕೊಂಡು ಕೂರ್ಮಗಡಕ್ಕೆ ಬೇಟಿ ನೀಡಿ ಶ್ರೀ ನರಸಿಂಹ ಸ್ವಾಮಿಯ ದರ್ಶನ ಮಾಡಿ ಕೃತಾರ್ಥರಾಗಿ ನಿಮ್ಮ ಸುಂದರವಾದ ಅನುಭವವನ್ನು ನಮ್ಮೊಂದಿಗೆ ಹಂಚ್ಕೊತೀರೀ ತಾನೇ?
ಏನಂತೀರಿ?
ನಿಮ್ಮವನೇ ಉಮಾಸುತ
ಅದ್ಭುತವಾಗಿದೆ, ನಿಮ್ಮ ಬರವಣಿಗೆ ಓದುವ ಮೂಲಕ ಒಮ್ಮೆ ದೇವರ ದರ್ಶನ ಮಾಡುವ ಬಯಕೆ.
ಹರೇ ಕೃಷ್ಣ.
LikeLike
ಸದ್ಯಕ್ಕೆ ವೀಡಿಯೋ ಮೂಲಕ ದೇವರ ದರ್ಶನ ಮಾಡಿ ಬಿಡಿ. ಆಮೇಲೆ ಸಮಯ ಮಾಡಿಕೊಂಡು ಖುದ್ದಾಗಿ ದರ್ಶನ ಮಾಡಿ. 🙏🙏
LikeLike