ಮಾಘ ಸ್ನಾನ

ಅಮ್ಮಾ ಇದ್ದಾಗ  ಸಂಕ್ರಾಂತಿ ಮುಗಿದು ಒಂದೆರಡು ದಿನಗಳು ಕಳೆಯುತ್ತಲೇ ಅಣ್ಣಯ್ಯಾ ಮಾಘ ಮಾಸ ಬಂದಾಯ್ತು. ಮಾಘ ಸ್ನಾನಕ್ಕೆ ಯಾವಾಗ ಕರ್ಕೊಂಡು ಹೋಗ್ತೀಯಾ?  ಅಂತಾ ಕೇಳೋದಿಕ್ಕೆ ಶುರು ಮಾಡ್ತಾ ಇದ್ರು. ನನಗೆ ಮತ್ತು ನಮ್ಮ ಅಪ್ಪನಿಗೆ  ಮಾಘ ಮಾಸದ ಸ್ನಾನದ ನೆಪದದಲ್ಲಿ ಶ್ರೀರಂಗ ಪಟ್ಟಣ, ಟಿ.ನರಸೀಪುರ, ನಂಜನಗೂಡಿಗೆ ಹೋಗಿ ಅಲ್ಲಿಂದ ಸೀದಾ ಮೈಸೂರಿಗೆ ಹೋಗಿ ಅಜ್ಜಿಯನ್ನು ನೋಡಿಕೊಂಡು  ಅಜ್ಜಿಯ ಆರೋಗ್ಯ ಸರಿ ಇದ್ರೇ ಬೆಂಗಳೂರಿನ ನಮ್ಮನೆಗೆ ಒಂದೆರಡು ತಿಂಗಳುಗಳ ಕಾಲ ಕರೆದುಕೊಂಡು ಬರುವ ಆಸೆ. ಒಟ್ನಲ್ಲಿ ದೇವನೊಬ್ಬ ನಾಮ ಹಲವು ಎನ್ನುವಂತೆ ಮಾಘ ಮಾಸದ ನೆಪದಲ್ಲಿ ಅವರವರ ರಹಸ್ಯ ಕಾರ್ಯಸೂಚಿಗಳನ್ನು ನೆರವೇರಿಸಿಕೊಂಡು ಬಿಡುತ್ತಿದ್ದೆವು.

ನಮ್ಮ ಸನಾತನ ಧರ್ಮದಲ್ಲಿ ವರ್ಷದ 365 ದಿನಗಳೂ ಒಂದಲ್ಲಾ ಒಂದು ಪುಣ್ಯ ದಿನಗಳೇ ಸರಿ. ಪುಷ್ಯ ಮಾಸದ ಹುಣ್ಣಿಮೆಯ ದಿನದಿಂದ ಮಾಘ ಮಾಸದ ಹುಣ್ಣಿಮೆಯವರೆಗೂ ಮಾಡುವಂತಹ ಧಾರ್ಮಿಕ ಆಚರಣೆಯೇ ಮಾಘ ಸ್ನಾನ. ಎಲ್ಲಾ ಮಾಸಗಳಲ್ಲಿಯೂ ಕಾರ್ತಿಕ ಮಾಸ ಸರ್ವಶ್ರೇಷ್ಠ ಎಂದರೆ, ಆದಕ್ಕಿಂತಲೂ ಲಕ್ಷಪಟ್ಟು ಶ್ರೇಷ್ಠವಾದ ಮಾಸವಾದ್ದದ್ದು ಮಾಘ ಮಾಸ ಮತ್ತು ಮಾಘ ಮಾಸದ ಸ್ನಾನ ಎಂದು ಹೇಳಲಾಗುತ್ತದೆ. ಹಾಗಾಗಿ ನಾವಿಂದು ಅಂತಹ ಪವಿತ್ರ ಮಾಘ ಸಾನದ ಮಹತ್ವವನ್ನು ತಿಳಿಯೋಣ ಬನ್ನಿ.

s4ಸೃಷ್ಟಿ, ಸ್ಥಿತಿ, ಲಯಕರ್ತರಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಮತ್ತು ಆದಿತ್ಯಾದಿ ದೇವತೆಗಳೆಲ್ಲರೂ ಮಾಘ ಮಾಸದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪುಣ್ಯ ಸ್ನಾನ ಮಾಡುತ್ತಾರೆ ಎಂದು ನಮ್ಮ ಪುರಾಣ ಶಾಸ್ತ್ರಗಳಲ್ಲಿ ಹೇಳಲಾಗಿರುವ ಕಾರಣ,  ಈ ತಿಂಗಳಿನಲ್ಲಿ ಮಾಘ ಸ್ನಾನ ಮಾಡಿದರೆ ಸಕಲ ಪಾಪಕರ್ಮಗಳು ನಿವಾರಣೆಯಾಗುವುದೆಂದು ಸಕಲ ಆಸ್ತಿಕರ ನಂಬಿಕೆಯಾಗಿದೆ.  ಈ ಅವಧಿಯಲ್ಲಿ ಪ್ರತಿಯೊಂದು ಪ್ರಾಕೃತಿಕ ಜಲಮೂಲವೂ ಗಂಗೆಯಂತೆ ಪವಿತ್ರವಾಗುತ್ತದೆ ಎಂಬ ನಂಬಿಕೆ ಇರುವ ಕಾರಣ ಸಕಲ ಆಸ್ತಿಕರು ತಮ್ಮ ಹತ್ತಿರವಿರುವ ಪವಿತ್ರ ಕ್ಷೇತ್ರಗಳಿಗೆ ಭೇಟಿ ಮಾಡಿ ಅಲ್ಲಿನ ಸಮುದ್ರ, ಸರೋವರ, ನದಿಗಳಲ್ಲಿ ಪವಿತ್ರ ಸ್ನಾನ ಮಾಡುವ ಮೂಲಕ ತಮ್ಮ ಪಾಪಗಳನ್ನು ಪರಿಹರಿಸಿಕೊಳ್ಳುತ್ತಾರೆ.

snan1ಮಾಘಮಾಸಾದ್ಯಂತ  ಉತ್ತರ ಭಾರತದ ಪ್ರಯಾಗ, ವಾರಣಾಸಿ, ನೈಮಿಷಾರಣ್ಯ, ಹರಿದ್ವಾರ ಹಾಗೂ ನಾಸಿಕ್, ಷುಷ್ಕರ್ ಸರೋವರದಲ್ಲಿ ಭಕ್ತರು ಮಾಘ ಸ್ನಾನಕ್ಕೆ ಮುಗಿಬಿದ್ದರೆ, ದಕ್ಷಿಣದಲ್ಲಿ ಕನ್ಯಾಕುಮಾರಿ, ರಾಮೇಶ್ವರಂನಲ್ಲಿ ಪವಿತ್ರಸ್ನಾನ ಮಾಡಿದರೆ ಕೋಟಿ ಪುಣ್ಯ ಬರುವುದೆಂಬ ನಂಬಿಕೆ ಇರುವ ಕಾರಣ ಇಲ್ಲಿಯೂ ಸಹ ಭಕ್ತಾದಿಗಳು ದಂಡು ದಂಡಾಗಿ ಬರುತ್ತಾರೆ. ಇನ್ನು ನಮ್ಮ  ರಾಜ್ಯದ ಪುಣ್ಯ ನದಿಗಳಾದ  ಶಿಂಶಾ, ಕಪಿಲ, ಕಾವೇರಿ, ತುಂಗಾ,  ತುಂಗಭದ್ರಾ, ಕೃಷ್ಣಾ ಇತ್ಯಾದಿ ನದಿಗಳಲ್ಲಿಯೂ ಪವಿತ್ರ ಮಾಘ ಸ್ನಾನ ಮಾಡಿ ಪುಣ್ಯವನ್ನು  ಸಂಪಾದಿಸಿಕೊಳ್ಳುತ್ತಾರೆ.

ಈ ಮಾಸದಲ್ಲಿ ತೀರ್ಥಗಳ ರಾಜ ಎಂದೇ ಕರೆಯಲಾಗುವ ಪ್ರಯಾಗ ಮಹಾಕ್ಷೇತ್ರದಲ್ಲಿ ಸ್ನಾನ ಮಾಡಿದವರು ವೈಕುಂಠ ಸೇರುತ್ತಾರೆ  ಎಂಬುದು ಎಲ್ಲರ ನಂಬಿಕೆಯಾಗಿದೆ. ಪುರಾಣದ ಪ್ರಕಾರ ಮಾಘ ಮಾಸದ ಮೊದಲನೇ ದಿನ ಮಾಘ ಸ್ನಾನ ಮಾಡಿದವರಿಗೆ  ಪಾಪಗಳಿಂದ ಬಿಡುಗಡೆ ಹೊಂದುತ್ತಾರೆ. ಎರಡನೇ ದಿನವೂ ಮಾಘಸ್ನಾನ ಆಚರಣೆ ಮುಂದುವರೆಸುವವರು ವಿಷ್ಣು ಲೋಕಸೇರುತ್ತಾರೆ ಹಾಗೂ ಮೂರನೇ ದಿನವೂ ಇದನ್ನು ಮುಂದುವವರಿಗೆ ಯಾವ ಫಲವನ್ನು ಕೊಡಬೇಕೆಂದು ವಿಷ್ಣುವೇ ಯೋಚಿಸುತ್ತಾನೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಸಾಮಾನ್ಯ ದಿನಗಳಲ್ಲಿ ಎಷ್ಟು ಜಪ, ಹಾಗೂ ದಾನದಿಂದ ವಿಷ್ಣು ಪ್ರಸನ್ನನಾಗುತ್ತಾನೋ, ಮಾಘಮಾಸದಲ್ಲಿ ಮಾಘ ಸ್ನಾನ ಮಾಡಿದರೆ ಅದಕ್ಕಿಂತ ಹೆಚ್ಚು ಪ್ರಸನ್ನನಾಗುತ್ತಾನೆ. ಹಾಗಾಗಿ, ಮಾಘಮಾಸದ ಸ್ನಾನ, ದಾನ, ಪೂಜಾಕೈಂಕರ್ಯಗಳಿಗೆ ವಿಶೇಷ ಮಹತ್ವವಾಗಿದೆ.

ಲೈಕಿಕ ಲೋಕದಲ್ಲಿ ಮುಳುಗಿರುವವರಿಗೆ  ಪ್ರತಿನಿತ್ಯವೂ ನದಿಗಳನ್ನು ಹುಡುಕಿಕೊಂಡು ಹೋಗಿ ಮಾಘ ಸ್ನಾನ ಮಾಡುಲು  ಸಾಧ್ಯವಾಗುವುದಿಲ್ಲವಾದ ಕಾರಣ, ಮಾಘಸ್ನಾನ ಮಾಡಿದವರ  ಪಾದಪ್ರಕ್ಷಾಳನ ಮಾಡಿ, ಅವರಿಗೆ  ದಾನ ನೀಡುವುದರಿಂದಲೂ ಮಾಘ ಸ್ನಾನ ಮಾಡಿದ ಫಲಕ್ಕೆ ಭಾಜನರಾಗುತ್ತಾರೆ ಎನ್ನುತ್ತವೆ ಪುರಾಣಗಳು. ಚಳಿಯ ನಡುವೆಯೂ ಮಾಘಮಾಸದಲ್ಲಿ  ಪವಿತ್ರ ಸ್ನಾನ ಮಾಡಿದವರಿಗೆ ನೂರು ಅಶ್ವಮೇಧ ಯಾಗಗಳನ್ನು ಮಾಡಿದ ಪುಣ್ಯಕ್ಕೆ ಮಾಘಸ್ನಾನ ಮಾಡಿದ ಪುಣ್ಯ ಸಮಾನವಾಗಿರುತ್ತದೆ.

ಮಾಘ ಮಾಸದಲ್ಲಿ  ಮನೆಯಲ್ಲಿಯೇ ಬಿಸಿ ನೀರಿನ ಸ್ನಾನ ಮಾಡಿದರೆ 6 ವರ್ಷ ಸ್ನಾನ ಮಾಡಿದ ಫಲ ಲಭಿಸಿದರೆ,  ಮನೆಯಿoದ ಹೊರಗೆ  ಭಾವಿಯ ನೀರಿನಲ್ಲಿ ಸ್ನಾನ ಮಾಡಿದಲ್ಲಿ 12ವರ್ಷ ಸ್ನಾನಮಾಡಿದ ಫಲ ಪ್ರಾಪ್ತವಾಗುತ್ತದೆ. ಕೆರೆ ಕಟ್ಟೆ ಮುಂತಾದ ಮಾನವ ನಿರ್ಮಿತ ತಟಾಕಗಳಲ್ಲಿ  ಸ್ನಾನ ಮಾಡಿದರೆ  ಭಾವಿಯಲ್ಲಿ ಸ್ನಾನ ಮಾಡಿ ಲಭಿಸುವ  ಪುಣ್ಯಕ್ಕಿoತಲೂ ದುಪ್ಪಟ್ಟು ಫಲ ಅಂದರೆ 24ವರ್ಷದ ಸ್ನಾನ ಫಲ ಲಭಿಸುತ್ತದೆ. ಹರಿಯುವ ನದಿಯಲ್ಲಿ ಸ್ನಾನ  ಮಾಡಿದರೆ ನಾಲ್ಕು ಪಟ್ಟು ಎಂದರೆ 48 ವರ್ಷ ಸ್ನಾನ ಫಲ ಪುಣ್ಯ ಫಲವು ಲಭಿಸುತ್ತದೆ ಎಂದರೆ,  ದೇವ ದೇವತೆಗಳು ಜಲಕ್ರೀಡೆಯಾಡುವ  ಪುಷ್ಕರಿಣಿಗಳಲ್ಲಿ ಸ್ನಾನವನ್ನುಮಾಡಿದರೆ  ಹತ್ತು ಪಟ್ಟು  ಅಂದರೆ 120 ವರ್ಷ ಸ್ನಾನಫಲವು ಲಭಿಸುತ್ತದೆ  ಎಂದು ನಂಬಲಾಗುತ್ತದೆ.  ಗಂಗಾ, ಯಮುನ, ಸರಸ್ವತೀ ಮುoತಾದ  ಪವಿತ್ರ ನದಿಗಳು ಸಮುದ್ರವನ್ನು  ನೇರವಾಗಿ ಸೇರುವ ಮಹಾ ನದಿಗಳಲ್ಲಿ ಸ್ನಾನ ಮಾಡಿದರೆ  100ಪಟ್ಟು  ಪುಣ್ಯಫಲ ಅರ್ಥಾತ್ 1200 ವರ್ಷ ಸ್ನಾನಫಲ ದೊರೆತರೆ,  ಮಹಾ ನದಿಗಳ ಸಂಗಮದಲ್ಲಿ  ಪ್ರಯಾಗಾದಿಗಳಲ್ಲಿ  ಸ್ನಾನ ಮಾಡಿದರೆ  ನಾನೂರು ಪಟ್ಟು 4800ವರ್ಷ ಸ್ನಾನಫಲದ  ಪುಣ್ಯವು ಲಭಿಸುವುದು ಎಂಬ ನಂಬಿಕೆ ಇರುವ ಕಾರಣ  ಆವರ ಅನುಕೂಲಕ್ಕೆ ತಕ್ಕಂತಹ ಪ್ರದೇಶಗಳಲ್ಲಿ ಮಾಘ ಸ್ನಾನವನ್ನು ಮಾಡಿ ಯಥಾವತ್ ಪುಣ್ಯಫಲಗಳನ್ನು ಅನುಭವಿಸುತ್ತಾರೆ.

s3ಮಾಘ ಮಾಸದಲ್ಲಿ ಪ್ರತಿದಿನವೂ ಪವಿತ್ರ ಜಲಮೂಲಗಳಲ್ಲಿ ಸ್ನಾನ ಮಾಡಲು ಆಗದೇ ಇದ್ದಲ್ಲಿ, ಕನಿಷ್ಟ ಪಕ್ಷ ಒಂದು ದಿನವಾದರೂ ಮೇಲೆ ತಿಳಿಸಿದ ಸ್ಥಳಗಳಲ್ಲಿ ಸೂರ್ಯೋದಯಕ್ಕೆ ಮುನ್ನ  ಅದರಲ್ಲೂ ಬ್ರಾಹ್ಮೀ ಮುಹೂರ್ತ ಅರ್ಥಾತ್ ನಸುಕಿನ ಜಾವ 3.30ರಿಂದ 4ರವರೆಗೆ ಮಾಘ ಸ್ನಾನ ಮಾಡುವುದರಿಂದ ಎಲ್ಲಾ ಪಾಪಗಳು ನಿವಾರಣೆಯಾಗುವುದೆಂದು ಹೇಳಲಾಗುತ್ತದೆ. ಮಾಘ ಮಾಸದಲ್ಲಿ ಮಾಡುವ ವ್ರತ, ದಾನ ಹಾಗೂ ತಪಸ್ಸಿಗಿಂತ ತೀರ್ಥಸ್ನಾನ ಮಾಡಿದರೆ ಭಗವಾನ್ ಮಹಾವಿಷ್ಣುವು ಪ್ರಸನ್ನನಾಗುತ್ತಾನೆ ಎಂದು ಪದ್ಮ ಪುರಾಣದಲ್ಲಿ ಹೇಳಲಾಗಿರುವ ಕಾರಣ ಆಸ್ತಿಕ  ಬಂಧುಗಳು ಮಾಘಸ್ನಾನಕ್ಕೆ  ಪವಿತ್ರ ಕ್ಷೇತ್ರಗಳಲ್ಲಿ ಮುಗಿ ಬೀಳುತ್ತಾರೆ. ಮಾಘ ಸ್ನಾನ ವ್ರತವನ್ನು ಮಾಡಿ ಶಂಖ, ಚಕ್ರದ ರಂಗೋಲಿ ಬಿಡಿಸಿ ವಿಷ್ಣುವಿಗೆ ಆರ್ಘ್ಯನೀಡಿದವರಿಗೆ  ಯಾವ ಜನ್ಮದಲ್ಲೂ ದಾರಿದ್ರ್ಯ ಬರುವುದಿಲ್ಲವೆಂದು ವಿಷ್ಣು ಪುರಾಣದಲ್ಲಿ ಉಲ್ಲೇಖ ಮಾಡಲಾಗಿದೆ.

s2ಇನ್ನು ವೈಜ್ಞಾನಿಕವಾಗಿ ನೋಡಿದರೆ, ಮಾರ್ಗಶಿರ ಮತ್ತು ಪುಷ್ಯ ಮಾಸಗಳು ಚಳಿಯ ವಾತಾವರಣವು ಹೆಚ್ಚಾಗಿದ್ದು ಶೀತ ವಾತಾವರಣ ಹಾಗೂ ಮಂಜಿನ ಕಾರಣದಿಂದಾಗಿ ಸೂರ್ಯನ ಶಾಖ ಮನುಷ್ಯರ ಮೇಲೆ ಸರಿಯಾಗಿ ಬೀಳದ ಕಾರಣ ಎಲ್ಲರ ಮೈಕೆ ಚರ್ಮಗಳು ಒಡೆಡು ಹೋಗುತ್ತದಲ್ಲದೇ,  ದೇಹವು ದುರ್ಬಲಗೊಳ್ಳುತ್ತದೆ. ಮಾಘ ಮಾಸದಲ್ಲಿ ಸೂರ್ಯ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪಥ ಬದಲಿಸಿದ ನಂತರ ಹಗಲು ಹೆಚ್ಚಾಗಿ ಸೂರ್ಯನ ಕಿರಣಗಳು ಅತ್ಯಂತ ಪ್ರಖರವಾಗಿರುವ ಕಾರಣ,  ನೀರಿನೊಳಗಿರುವ ಬ್ಯಾಕ್ಟೀರಿಯವನ್ನು ನಾಶ ಮಾಡುತ್ತದೆ.  ನಮ್ಮ ದೇಹಕ್ಕೆ ಅಗತ್ಯವಾದ ವಿಟಮಿನ್-ಡಿ ಸಾಕಷ್ಟು ದೊರೆತು ಚರ್ಮವನ್ನು ಶುದ್ಧೀಕರಿಸುತ್ತದೆ. ಸುಮಾರು 45-50 ನಿಮಿಷಗಳ ಕಾಲ ಸಮುದ್ರ ಅಥವಾ ನದಿ ನೀರಿನಲ್ಲಿ ಸ್ನಾನ ಮಾಡುವುದರಿಂದ ನಮ್ಮ ಬಾಹ್ಯ ದೇಹವು ನಮ್ಮನ್ನು ಪುನಶ್ಚೇತನಗೊಳಿಸುವುದೆಂದು ವೈಜ್ಞಾನಿಕವಾಗಿ ಸಾಭೀತಾಗಿರುವ ಕಾರಣ ಮಾಘ ಸ್ನಾನ ಅತ್ಯಂತ ಶ್ರೇಷ್ಟವೆನಿಸಿದೆ.

ಹಾಂ! ಮತ್ತೊಂದು ಮುಖ್ಯವಾದ ವಿಷಯವನ್ನು ಹೇಳಲು ಮರೆತೆ. ಮಾಘ ಸ್ನಾನ ಮಾಡುವ ಸಮಯದಲ್ಲಿ ಉಟ್ಟ ಬಟ್ಟೆಯನ್ನು ನದಿಯಲ್ಲಿ ಹಾಗೆಯೇ ಬಿಟ್ಟಲ್ಲಿ ನಮ್ಮ ಪಾಪಗಳೆಲ್ಲವೂ ಪರಿಹಾರವಾಗುತ್ತದೆ ಎಂದು ನಂಬಿ ಉಟ್ಟ ಬಟ್ಟೆಗಳನ್ನು ನದಿಗಳಲ್ಲಿ ಬಿಡುವುದಲ್ಲದೇ ಪೂಜೆ ಮಾಡುವ ಭರದಲ್ಲಿ ಹೂವು, ಹಣ್ಣು ಕಾಯಿ ಪೂಜಾ ಸಾಮಗ್ರಿಗಳನ್ನು ತೆಗೆದುಕೊಂಡು ಹೋದ ಪ್ಲಾಸ್ಟಿಕ್ ಚೀಲಗಳನ್ನು ನದಿಯ ನೀರಿನಲ್ಲಿಯೇ ಬಿಡುವ ಮೂಲಕ ನಮಗರಿವಿಲ್ಲದಂತೆಯೇ ಜಲಚರಗಳ ಪ್ರಾಣಗಳಿಗೆ ಕುತ್ತು ತರುತ್ತಿರುವುದಲ್ಲದೇ ಪರಿಸರವನ್ನೂ ಹಾಳು ಮಾಡುತ್ತಿದ್ದೇವೆ ಹಾಗಾಗಿ ಇವೆಲ್ಲವುಗಳ ಕಡೆ ಸ್ವಲ್ಪ ಎಚ್ಚರವಹಿಸಿದಲ್ಲಿ ಮಾಘ ಮಾಸದಲ್ಲಿ ದೊರೆಯುವ ಪುಣ್ಯ ಫಲಕ್ಕಿಂತಲು ಅಧಿಕ ಫಲ ಲಭಿಸುತ್ತದೆ.

ಪವಿತ್ರ ಮಾಘ ಮಾಸದ ಕುರಿತಂತೆ ಇಷ್ಟೆಲ್ಲಾ ಮಾಹಿತಿಗಳನ್ನು ತಿಳಿದುಕೊಂಡ ನಂತರ ಇನ್ನೇಕೆ ತಡಾ? ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆಯೂ ಸ್ವಲ್ಪ ಸಮಯ ಮಾಡಿ ಕೊಂಡು ಹತ್ತಿರದ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ಪವಿತ್ರ ಮಾಡುವ ಮೂಲಕ ಮಾಘ ಸ್ನಾನ ಭಗವಂತನ ಅನುಗ್ರಹಕ್ಕೆ ಪಾತ್ರರಾಗೋಣ ಅಲ್ವೇ?

ಏನಂತೀರಿ?

ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s