ನಿಮಗೆಲ್ಲಾ ಗೊತ್ತಿರುವಂತೆ ನಮ್ಮ ವಿದ್ಯಾರಣ್ಯಪುರದಲ್ಲಿ ಪ್ರತೀ ತಿಂಗಳ 2ನೇ ಮತ್ತು4ನೇ ಭಾನುವಾರ ಸಾವಯವ ಸಂತೆ ಸುಮಾರು 3 ವರ್ಷಗಳಿಂದಲೂ ಯಶಸ್ವಿಯಾಗಿ ನಡೆದುಕೊಂಡು ಹೋಗುತ್ತಿದ್ದು ಲಾಕ್ಡೌನ್ ಸಮಯದಲ್ಲಿ ಅನಿವಾರ್ಯ ಕಾರಣಗಳಿಂದ ನಿಂತು ಹೋಗಿತ್ತು. ಹಂತ ಹಂತವಾಗಿ ಲಾಕ್ದೌನ್ ತೆರೆದ ನಂತರ ಸಂತೆ ಪುನರ್ ಅರಂಭಿಸಿದರೂ ಹಿಂದಿನಷ್ಟು ಜನ ಸಂದಣೆ ಇಲ್ಲದೇ ಹೋದರೂ ಗ್ರಾಹಕರಿಗೂ ಮತ್ತು ವ್ಯಾಪಾರಿಗಳಿಗೂ ಮೆಚ್ಚುವಂತೆ ನಡೆದುಕೊಂಡು ಹೋಗುತ್ತಿತ್ತು. ಎರಡು ವಾರಗಳ ಹಿಂದೆ ವಾರಾಂತ್ಯದ ಕರ್ಫೂ ಇದ್ದರೂ, ಜನರು ಎಂದಿನಂತೆ ಬಂದಿದ್ದ ಕಾರಣ ಈ ವಾರ ಹೇಗೂ ಕರ್ಫೂ ಇಲ್ಲದಿದ್ದ ಕಾರಣ ಜನರು ಇನ್ನೂ ಹೆಚ್ಚಿಗೆ ಬರುತ್ತಾರೆಂಬ ನಿರೀಕ್ಷೆ ಇತ್ತು. ಆದರೆ ಸಂತೆಯ ದಿನ ನಮಗೆಲ್ಲರಿಗೂ ಅಚ್ಚರಿ ಎನ್ನುವಂತೆ ಕಡಿಮೆ ಜನರು ಬಂದಾಗ ನಮ್ಮ ಗುಂಪಿನಲ್ಲಿ ಈ ಕುರಿತಂತೆ ಚರ್ಚಿಸಿದಾಗ ತಿಳಿದು ಬಂದ ವಿಷಯವೇನೆಂದರೆ ಇದೇ ಬುಧವಾರ ಗಣರಾಜ್ಯೋತ್ಸವದ ರಜೆ ಇರುವ ಕಾರಣ ಸೋಮವಾರ, ಮಂಗಳವಾರ ರಜೆ ಹಾಕಿ ಒಟ್ಟಿಗೆ ಶನಿವಾರದಿಂದ ಬುಧವಾರ 5 ದಿನಗಳ ಕಾಲ ಮಜಾ ಮಾಡಲೆಂದು ಹೊರ ಊರುಗಳಿಗೆ ಹೋಗಿದ್ದ ವಿಷಯ ತಿಳಿದು ಆಶ್ಚರ್ಯದ ಜೊತೆಗೆ ಮರುಕವೂ ಆಯಿತು.
ಕಳೆದ ಎರಡು ವರ್ಷಗಳಿಂದ ಇಡೀ ಪ್ರಪಂಚಕ್ಕೇ ವಕ್ಕರಿಸಿಕೊಂಡಿರುವ ಈ ಕೊರೋನ ಮಹಾಮಾರಿಯ ಅಲೆ-1, ಅಲೆ-2 ಈಗ ಅಲೆ-3 ರಿಂದ ತತ್ತರಿಸಿರುವ ಸಂದರ್ಭದಲ್ಲಿ ಸರ್ಕಾರವೂ ಸಹಾ ಇದರ ಬಗ್ಗೆ ಯಾವುದೇ ನಿಲುವು ತೆಗೆದುಕೊಳ್ಳಲಾಗದೇ ರಾತ್ರಿ ಕರ್ಫೂ ವಾರಂತ್ಯದ ಕರ್ಫೂ ಹೇರುತ್ತಾ ಅದಷ್ಟೂ ಜನರು ಸೇರುವುದನ್ನು ನಿರ್ಭಂಧಿಸಲು ಪ್ರಯತ್ನಿಸುತ್ತಿದ್ದಂತೆಯೇ ಬಹುತೇಕರು ಕೊರೋನ ಗಿರೋನಾ ಏನೂ ಇಲ್ಲಾ! ಎಲ್ಲಾ ಬರೀ ಮೆಡಿಕಲ್ ಮಾಫಿಯಾ! ಎಂದು ಪುಂಖಾನು ಪುಂಖದ ಹೇಳಿಕೆಗಳನ್ನು ಕೊಡುತ್ತಿರುವುವದು ಇತ್ತಿಚೆಗೆ ಸಮಾಜಿಕ ಜಾಲತಾಣಗಳಲ್ಲಿ ಸರ್ವೇ ಸಮಾನ್ಯವಾಗಿದೆ. ಜನಸಾಮಾನ್ಯರು ಹೀಗೆ ಹೇಳಿದರೆ ಪರವಾಗಿಲ್ಲ ಎನ್ನಬಹುದು ಅದರೆ ಅದೆಷ್ಟೋ ವೈದ್ಯರು ಮತ್ತು ಸರ್ಕಾರದಲ್ಲಿ ಮಂತ್ರಿಗಳಾಗಿರುವವರೇ ಈ ರೀತಿಯಾಗಿ ಹೇಳಿದಾಗ ಜನರಿಗೆ ಯಾರನ್ನು ನಂಬುವುದು ಮತ್ತು ಯಾರನ್ನು ಬಿಡುವುದು ಎನ್ನುವುದು ನಿಜಕ್ಕೂ ಕಷ್ಟವಾಗಿದೆ.
ನಿಜ ಹೇಳಬೇಕೆಂದರೆ ಕೊರೋನಾದ ಅಸ್ಥಿತ್ವವನ್ನು ಪ್ರಶ್ನಿಸುವುದು ಒಂದು ರೀತಿಯಲ್ಲಿ ಭಗವಂತನ ಅಸ್ಥಿತ್ವವನ್ನು ಪ್ರಶ್ನಿಸಿದಂತೆಯೇ ಎಂದರೂ ಅತಿಶಯವಲ್ಲ. ಭಗವಂತ ಮತ್ತು ಕೋರೋನಾ ಇಬ್ಬರೂ ಕಣ್ಣಿಗೆ ಕಾಣಿಸುವುದಿಲ್ಲವಾದರೂ ಅವರ ಪ್ರಭಾವವಂತೂ ಇದ್ದೇ ಇದೆ ಎನ್ನುವುದಂತೂ ಸತ್ಯ. ಅದರಲ್ಲೂ ಕೊರೋನಾ ಬಂದು ಅದರ ತೀವ್ರತೆಯನ್ನು ಅನುಭವಿಸಿದಂಹವರಿಗೆ ಅದರ ನಿಜವಾದ ಅನುಭವದ ಅರ್ಥವಾಗುತ್ತದೆ.
ಕೊರೋನಾ ಮನೆಯಿಂದ ಹೊರಗೆ ಹೋದಲ್ಲಿ ಮಾತ್ರವೇ ಬರುತ್ತದೆ ಎಂಬ ನಿಯಮವೇನೂ ಇಲ್ಲಾ. ಮನೆಯಲ್ಲಿದ್ದರೂ ಕೊರೋನಾ ಬರಬಹುದು ಎನ್ನುವುದಕ್ಕೆ ನನ್ನ ಸ್ವಂತ ಅನುಭವವೇ ಸಾಕ್ಷಿ. ಕೆಲವೇ ಕೆಲವು ಆತ್ಮೀಯರೊಂದಿಗೆ ನನ್ನ 50ನೇ ಹುಟ್ಟು ಹಬ್ಬ ಮತ್ತು ನನ್ನ ಚೊಚ್ಚಲು ಪುಸ್ತಕದ ಬಿಡುಗಡೆಯನ್ನು ಮಾಡಿ ಸಂಭ್ರಮಿಸಿದ ಎರಡೇ ದಿನಗಳ ನಂತರ ಗಂಟಲು ನೋವು ಸಣ್ಣದಾಗಿ ಕಾಣಿಸಿಕೊಂಡಾಗ ಬಿಸಿನೀರಿಗೆ ಉಪ್ಪನ್ನು ಹಾಕಿಕೊಂಡು ಮುಕ್ಕಳಿಸುತ್ತಿದ್ದ ಸಂದರ್ಭದಲ್ಲೇ, ಮನೆಗೆ ಬಂದಿದ್ದ ಆತ್ಮೀಯರ, ನೆನ್ನೆ ಸಂಜೆ ನನಗೆ ಕೋವಿಡ್ ಸೋಂಕು ತಗುಲಿದೆ ಎಂದು ಧೃಢಪಟ್ಟಿರುವ ಕಾರಣ ನೀವೂ ಒಮ್ಮೆ ಪರೀಕ್ಷೆ ಮಾಡಿಸಿಕೊಳ್ಳಿ ಎಂಬ ಸಂದೇಶ ನೋಡಿದೊಡನೆಯೇ ನನ್ನ ಜಂಘಾಬಲವೇ ಅಡಗಿದ್ದಂತೂ ಸುಳ್ಳಲ್ಲ. ಕೂಡಲೇ ನಮ್ಮ ಕುಟುಂಬ ವೈದ್ಯರನ್ನು ಸಂಪರ್ಕಿಸಿದಾಗ ಜ್ವರ ಏನೂ ಹೆಚ್ಚಾಗಿರದಿದ್ದ ಕಾರಣ ಗಂಟಲು ನೋವಿಗೆ ಔಷಧಿಯನ್ನು ಬರೆದುಕೊಟ್ಟು ಮುಂಜಾಗೃತಾ ಕ್ರಮವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದೊಡನೆಯೇ ಮನೆಯಲೆಲ್ಲ ಗಾಭರಿ. ಆ ರಾತ್ರಿಯಿಂದಲೇ ಮನೆಯಲ್ಲಿ ಮುಟ್ಟಾದ ಹೆಂಗಸರನ್ನು ಮೂಲೆಯಲ್ಲಿಡುವಂತೆ ನನ್ನ ಅನುಭವ.
ಇಡೀ ರಾತ್ರಿ ಆತಂಕದಲ್ಲೇ ಕಳೆದು ಮಾರನೇಯ ದಿನ ಪರೀಕ್ಷೆ ಮಾಡಿಸಿಕೊಂಡು ಸೋಂಕು ತಗುಲಿರುವುದು ಧೃಢಪಟ್ಟ ಕೂಡಲೇ ನನ್ನ ಸಂಪರ್ಕಕ್ಕೆ ಬಂದವರೆಲ್ಲರಿಗೂ ಪರೀಕ್ಷೆ ಮಾಡಿಸಿಕೊಳ್ಳಲು ಸಂದೇಶ ಕಳುಹಿಸಿ ಇಡೀ ಮನೆಯವರೆಲ್ಲರಿಗೂ ಪರೀಕ್ಷೆ ಮಾಡಿಸಿ ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿಯುವಷ್ಟರಲ್ಲಿ ಬಿಬಿಎಂಪಿ ಅವರ ನಿರಂತರ ಕರೆ. ನೀವು ಆಸ್ಪತ್ರೆಗೆ ಸೇರಿಕೊಳ್ಳುತ್ತೀರೋ ಇಲ್ಲವೇ ಮನೆಯಲ್ಲೇ ಪ್ರತ್ಯೇಕವಾಗಿ ಇರುತ್ತೀರೋ ಎಂಬ ಪ್ರಶ್ನೆಗೆ, ಅದಾಗಲೇ ಅಸ್ಪತ್ರೆ ಸಿಗದೇ ಎಲ್ಲೋ ದೂರ ದೂರದ ಆಸ್ಪತ್ರೆಗಳೋ ಇಲ್ಲವೆ ಐಸೋಲೇಷನ್ ಸೆಂಟರ್ ಬಗ್ಗೆ ಕೇಳಿ ತಿಳಿದಿದ್ದ ನನಗೆ. ನಮ್ಮ ಮನೆಯಲ್ಲೇ ಎಲ್ಲಾ ಸೌಲಭ್ಯ ಇರುವ ಕಾರಣ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತೇನೆ ಎಂದು ಹೇಳಿ ಮಗನ ಬಳಿ ಅಗತ್ಯವಿದ್ದ ಔಷಧಗಳನ್ನು ತರಿಸಿಕೊಂಡು ನನ್ನದೇ ಕೋಣೆಯಲ್ಲಿ ಪ್ರತ್ಯೇಕವಾಗಿ 2 ವಾರಗಳ ಕಾಲ ಉಳಿಯಲು ನಿರ್ಧರಿಸಿದೆ.
ಆರಂಭದ ಮೂರ್ನಾಲ್ಕು ದಿನಗಳ ಕಾಲ ಜ್ವರವಿದ್ದು ನಂತರ ನಿಧಾನವಾಗಿ ಜ್ವರ ತಗ್ಗಿತಾದರೂ ವಿಪರೀತವಾದ ಕೆಮ್ಮು ನಿಲ್ಲಲೇ ಇಲ್ಲ. ಪ್ರತೀ ಬಾರಿ ಕೆಮ್ಮಿದಾಗಲೂ ಕರಳು ಕಿತ್ತು ಬರುವಷ್ಟು ಯಾತನೆ. ಕಣ್ಣಿನಲ್ಲಿ ನನಗೇ ಅರಿವಿಲ್ಲದಂತೆ ಧಾರಾಕಾರವಾದ ಕಣ್ಣಿರು. ಬರಗಾಲದಲ್ಲಿ ಅಧಿಕ ಮಾಸ ಎನ್ನುವಂತೆ ಕೋವಿಡ್ ಸಮಯದಲ್ಲಿ ಕೆಲಸ ಕಳೆದುಕೊಂಡ ನತದೃಷ್ಟರಲ್ಲಿ ನಾನೂ ಒಬ್ಬನಾಗಿದ್ದ ಕಾರಣ, ತಿಂಗಳಿನ ಸಂಬಳವನ್ನೇ ನೆಚ್ಚಿಕೊಂಡು ಎಣಿಸಿದ ಕಜ್ಜಾದಂತೆ, ಮನೆ ಸಾಲ, ಕಾರ್ ಸಾಲ, ಮಕ್ಕಳ ಕಾಲೇಜ್ ಫೀ ನಂತರ ಮನೆಯ ನಿರ್ವಹಣೆ ಎಲ್ಲವೂ ನಡೆಯಬೇಕಾದದ್ದು ಈಗ ಏಕಾ ಏಕಿ ಕೆಲಸ ಹೋದ ನಂತರ ಕೂತು ತಿನ್ನುವವನಿಗೆ ಕುಡಿಕೆ ಹೊನ್ನು ಸಾಲದು ಎನ್ನುವಂತೆ ಉಳಿಸಿದ್ದ ಹಣವೆಲ್ಲವೂ ಆರು ತಿಂಗಳಷ್ಟರಲ್ಲಿ ಬರಿದಾಗುತ್ತಿದ್ದಾಗಲೇ ಈ ಕೊರೋನಾ ಮಹಾಮಾರಿ ವಕ್ಕರಿಸಿದ ನಂತರ ಬರುತ್ತಿದ ಕನಸುಗಳು ನಿಜಕ್ಕೂ ಹೇಳಿಕೊಳ್ಳಲಾಗದು.
ಅಷ್ಟರಲ್ಲಾಗಲೇ ಕೋವಿಡ್ ನಿಂದಾಗಿ ಅತೀ ಹತ್ತಿರದ ಬಂಧುಗಳು, ಸ್ನೇಹಿತರನ್ನು ಕಳೆದುಕೊಂಡಿದ್ದರಿಂದ ಎಷ್ಟೇ ಗಟ್ಟಿ ಮನಸ್ಸು ಮಾಡಿಕೊಂಡರೂ ಕಾಡುತ್ತಿದ್ದ ಭಯ ನಿಜಕ್ಕೂ ಭಯಾನಕ. ಜೀವನ ಎಂದರೆ ಇಷ್ಟೇನಾ? ಮಕ್ಕಳು ಇನ್ನೂ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸರ್ಕಾರಿ ಕೆಲಸಕ್ಕೆ ಹೋಗುತ್ತಿದ ಮಡದಿಯನ್ನೂ, ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ಕೆಲಸ ಬಿಡಿಸಿದ್ದೆನೆ. ಕೈಯ್ಯಲ್ಲಿ ಕೆಲಸವಿಲ್ಲ. ಸ್ಥಿರಾಸ್ತಿ ಮಾಡಿದ್ದೇನಾದರು ಸದ್ಯಕ್ಕೆ ಸಿಗುವಂತ ಚರಾಸ್ತಿ ಏನೂ ಉಳಿದಿಲ್ಲ, ನಾನು ಹೋಗಿ ಬಿಟ್ಟರೆ ಮನೆಯವರನ್ನೆಲ್ಲಾ ಯಾರು ನೋಡಿಕೊಳ್ಳುತ್ತಾರೆ? ಮಾಡಿಸಿದ ಜೀವವಿಮೆಗಳನ್ನು ಅವರಿಗೆ ಸಾಲುತ್ತದೆಯೇ? ಆ ವಿಮೆಯನ್ನು ಪಡೆದುಕೊಳ್ಳಲು ಇವರಿಗೆ ಬರುತ್ತದೆಯೇ? ಹೀಗೇ ಎಲ್ಲರೂ ಋಣಾತ್ಮಕ ಚಿಂತನೆಗಳೇ ಮನಸ್ಸಿನಲ್ಲಿ ಮೂಡಿ ಬಾರೀ ಭಯವನ್ನು ಮೂಡಿಸುವ ಮೂಲಕ ಈ ಕ್ಷಣಿಕ ಬದುಕಿನ ಬಗ್ಗೆ ಯೋಚಿಸುವಂತೆ ಮಾಡಿತ್ತು.
ಹೌದು ನಿಜ. ಕೊರೋನಾ ಖಾಯಿಲೆ ಆರಂಭದಲ್ಲಿ ಜನರು ಉಡಾಫೆಯಿಂದ ಆಂಡಲೆದ ಕಾರಣ ಸರ್ಕಾರ ಎಷ್ಟೇ ಕಠಿಣ ಕ್ರಮಗಳನ್ನು ತೆಗೆದುಕೊಂಡರೂ ಸೊಂಕು ಅತಿ ವೇಗವಾಗಿ ಹರಡಿದಾಗ ಮೆಡಿಕಲ್ ಮಾಫಿಯಗಳು ಅದರ ದುರ್ಲಾಭವನ್ನು ಪಡೆದುಕೊಂಡಿದ್ದೂ ಸುಳ್ಳಲ್ಲ.
- ಬೇಕೋ ಬೇಡವೋ ಎಲ್ಲರಿಗೂ ಗಾಭರಿಯನ್ನು ಹುಟ್ಟಿಸಿ ICUಗೆ ತಳ್ಳಿ ಒಂದಕ್ಕೆ ನಾಲ್ಕರಷ್ಟು ಪೀಕಿದ್ದಂತೂ ಸುಳ್ಳಲ್ಲ.
- ಕೆಲವೇ ನೂರು ರುಪಾಯಿಗಳಲ್ಲಿ ದೊರಕುತ್ತಿದ್ದ ಥರ್ಮಾಮೀಟರ್ ಮತ್ತು ಆಕ್ಸಿಮೀಟರ್ಗಳು ಕಾಳ ಸಂತೆಯಲ್ಲಿ ಸಾವಿರಾರು ರೂಪಾಯಿಗಳಿಗೆ ಭಿಕರಿ ಮಾಡಿದ್ದೂ ಸುಳ್ಳಲ್ಲ.
- ಸರ್ಕಾರೀ ಮತ್ತು ಖಾಸಗೀ ಆಸ್ಪತ್ರೆಯಲ್ಲಿ ಹಾಸಿಗೆಗಳ ಕೃತಕ ಅಭಾವ ಸೃಷ್ಟಿಸಿ ಬಿಬಿಎಂಪಿ ನೌಕರರು ಕಾಸು ಮಾಡಿಕೊಂಡಿದ್ದೂ ಸುಳ್ಳಲ್ಲ.
- ಕೊರೋನದಿಂದ ಮೃತಪಟ್ಟವರ ಅಂತಿಮ ಸಂಸ್ಕಾರಕ್ಕೆಂದು ಮಾನವೀಯತೆ ಮರೆತು ಸಾವಿನ ಮನೆಯಲ್ಲೂ ಸಾವಿರಾರು ರೂಪಾಯಿಗಳನ್ನು ಆಂಬುಲೆನ್ಸ್ ಮತ್ತು ಚಿತಾಗಾರದವರು ಹೀರಿದ್ದೂ ಸುಳ್ಳಲ್ಲ.
- ತಮ್ಮ ರಾಜಕೀಯ ಸೈದ್ಧಾಂತಿಕ ವಿರೋಧಕ್ಕಾಗಿ ಸರ್ಕಾರ ಉಚಿತವಾಗಿ ಕೊಡಲಾರಂಭಿಸಿದ ಲಸಿಕೆಯ ವಿರುದ್ಧ ಇಲ್ಲಸಲ್ಲದ್ದನ್ನು ಹೇಳಿ ಜನರ ದಿಕ್ಕು ತಪ್ಪಿಸಿ ಕದ್ದು ಮುಚ್ಚಿ ತಾವು ಲಸಿಕೆ ಹಾಕಿಸಿಕೊಂಡ ನಾಯಕರು ಇದ್ದದ್ದೂ ಸುಳ್ಳಲ್ಲ.
- ಹೀಗೆ ಮಾನವೀಯತೆಯನ್ನು ಮರೆತು ತಾವರೆಲ್ಲರೂ ಸಾವಿರಾರು ವರ್ಷಗಳ ಕಾಲ ಈ ಭೂಮಿಯಲ್ಲಿ ಬದುಕುತ್ತೇವೆಂಬ ಭ್ರಮೆಯಲ್ಲಿ ನಾಮೇಲು ತಾಮೇಲು ಎನ್ನುತ್ತಾ ಒಬ್ಬರಿಗಿಂತ ಮತ್ತೊಬ್ಬರು ಜನರನ್ನು ಲೂಟೀ ಮಾಡಿದ್ದು ಸುಳ್ಳಲ್ಲ.
- ಇವಿಷ್ಟರ ಮಧ್ಯೆ ಮಳೆಗಾಲದಲ್ಲಿ ದೀಪದ ಆಕರ್ಷಣೆಗೆ ಒಳಗಾಗಿ ಅಂತಿಮವಾಗಿ ತಾನೇ ಉದುರಿ ಸಾಯುವ ದೀಪದ ಹುಳದಂತೆ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಅಂಡೆಲೆದ ನಮ್ಮ ನೆಚ್ಚಿನ ಬಂಧುಗಳು, ಸ್ನೇಹಿತರು ಸಹಾ ಸತ್ತದ್ದೂ ಸುಳ್ಳಲ್ಲ.
ಇಷ್ಟೆಲ್ಲಾ ನೋವು ಮತ್ತು ಸಂಕಟಗಳನ್ನು ಅನುಭವಿಸಿದ್ದರೂ ಜನಾ ಜೀವ ಇದ್ದರೆ ಜೀವನ ಎನ್ನುವುದನ್ನೂ ಮರೆತು ಸಮಯ ಸಿಕ್ಕ ತಕ್ಷಣವೇ ಮಹಾಮಾರಿಯೇ ಇಲ್ಲ ಎನ್ನುವಂತೆ ಎಲ್ಲವನ್ನೂ ನಿರ್ಲಕ್ಷಿಸುತ್ತಾ ಸಿಕ್ಕಾ ಪಟ್ಟೆ ಅಲೆದಾಡುವುದು ನಿಜಕ್ಕೂ ಗಾಬರಿಯನ್ನು ಹುಟ್ಟಿಸುತ್ತದೆ.
ಈ ಮಹಾಮಾರಿ ಸಾಂಕ್ರಾಮಿಕ ರೋಗವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಕ್ಷಣ ಮಾತ್ರದಲ್ಲಿ ಹರಡುವ ಕಾರಣ, ದಯವಿಟ್ಟು ಮೂರನೇ ಅಲೆಯ ಬಗ್ಗೆ ಅವಶ್ಯವಾಗಿ ಈ ಕೆಳಕಂಡಂತೆ ಎಚ್ಚರ ವಹಿಸೋಣ.
ಹಬ್ಬ ಹರಿ ದಿನ, ಜಾತ್ರೆ, ಪ್ರವಾಸ ಎಂದು ಆದಷ್ಟೂ ಜನಸಂದಣಿಯಿಂದ ದೂರವಿರೋಣ
- ಅನಿವಾರ್ಯವಾಗಿ ಮನೆಯಿಂದ ಹೊರಗೆ ಹೋಗಲೇ ಬೇಕಾದಲ್ಲಿ, ಮುಖಕ್ಕೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳೋಣ
- ಮನೆಗೆ ಬಂದ ಕೂಡಲೇ, ಸಾಬೂನಿನಿಂದ ಕೈ ಕಾಲುಗಳನ್ನು ತೊಳೆದುಕೊಂಡು ಸ್ವಚ್ಚತೆಯನ್ನು ಕಾಪಾಡಿಕೊಳ್ಳೋಣ
- ಎಲ್ಲದ್ದಕ್ಕಿಂತಲೂ ಹೆಚ್ಚಾಗಿ ಎರಡೂ ಲಸಿಕೆಗಳನ್ನು ಪಡೆದವರಿಗೆ ಮೂರನೇ ಅಲೆಯ ತೀವ್ರತೆ ಕಡಿಮೆ ಇರುವ ಕಾರಣ, ಖಡ್ಡಾಯವಾಗಿ ಲಸಿಕೆಗಳನ್ನು ಹಾಕಿಸಿಕೊಳ್ಳೋಣ.
- ಯಾರಿಗೇ ಆಗಲಿ ಕೆಮ್ಮು ಜ್ಚರ ಗಂಟಲು ನೋವಿನ ಲಕ್ಷಣ ಕಂಡು ಬಂದಲ್ಲಿ ಅದನ್ನು ನಿರ್ಲಕ್ಷಿಸದೇ ಕೂಡಲೇ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಂಡು, ಪೂರಕ ಚಿಕಿತ್ಸೆಯನ್ನು ಪಡೆದುಕೊಳ್ಳೋಣ.
- ಹಿತ ಮಿತವಾದ ಆಹಾರದ ಜೊತೆಗೆ ದೇಹಕ್ಕೆ ಅಗತ್ಯವಿರುವಷ್ಟು ವ್ಯಾಯಾಮ ಇಲ್ಲವೇ ದೀರ್ಘ ನಡಿಗೆ ಮಾಡುತ್ತಾ ಆದಷ್ಟೂ ಲವಲವಿಕೆಯಿಂದ ಇರೋಣ
ಇವೆಲ್ಲದರ ನಡುವೆ ಕೊರೊನಾ ಆರ್ಭಟವೂ ಸಹಾ ಕಡಿಮೆಯಾಗುತ್ತಿದ್ದರೂ, ಹೆಚ್ಚಿನವರಿಗೆ ಈ ಚಳಿಯಲ್ಲಿ ವೈರಲ್ ಜ್ವರ, ನೆಗಡಿ ಕೆಮ್ಮು ಕಾಡುತ್ತಿರುವ ಕಾರಣ ಅದನ್ನೇ ಕೊರೋನ ಎಂದು ಭಾವಿಸಿ ಧೈರ್ಯ ಕಳೆದುಕೊಳ್ಳದೇ, ಹತ್ತಿರದ ಪರಿಚಯದ ವೈದ್ಯರ ಬಳಿಗಾದರೂ ಹೋಗಿ ಪರೀಕ್ಷೆ ಮಾಡಿಸಿಕೊಂಡು ಅದು ಕೋವಿಡ್ ಹೌದೋ ಅಲ್ಲವೋ ಎಂದು ಖಚಿತ ಪಡಿಸಿಕೊಂಡು ಅದಕ್ಕೆ ಸೂಕ್ತವಾದ ಔಷಧೋಪಚಾರಗಳನ್ನು ಪಡೆದುಕೊಂಡು ಗುಣಪಡಿಸಿಕೊಳ್ಳೋಣ.
ಸರ್ಕಾರವೂ ಸಹಾ ಜನರ ಅನುಕೂಲಕ್ಕೆಂದು ಸಾಕಷ್ಟು ಮುಂಜಾಗೃತೆಯನ್ನು ತೆಗೆದುಕೊಂಡಿರುವುದಲ್ಲದೇ, ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ ಈಗ ಬೂಸ್ಟರ್ ಡೋಸ್ ಕೊಡುವುದಕ್ಕೆ ಮುಂದಾಗಿರುವುದು ಶ್ಲಾಘನೀಯವಾಗಿದೆ. ತಲೆ ಗಟ್ಟಿಯಾಗಿದೆ ಎಂದು ಬಂಡೆಗೆ ಚಚ್ಚಿಕೊಂಡರೆ ನಮ್ಮ ತಲೆಗೇ ಏಟಾಗುತ್ತದೆಯೇ ಹೊರತು ಬಂಡೆಗೆ ಏನಾಗುವುದಿಲ್ಲ. ಅದೇ ರೀತಿ ನಾವು ಸಹಾ ಮುಂಜಾಗೃತೆ ವಹಿಸಿದಲ್ಲಿ, ಮತ್ತೇ ಯಾವುದೇ ಮೆಡಿಕಲ್ ಮಾಫಿಯಾದ ಕೈಯಲ್ಲಿ ಸಿಕ್ಕಿಕೊಂಡು ನಮ್ಮ ಹಣ ಮತ್ತು ಆರೋಗ್ಯ ಎರಡನ್ನೂ ಕಳೆದುಕೊಳ್ಳುವುದನ್ನು ತಪ್ಪಿಸಿಕೊಳ್ಳಬಹುದು ಅಲ್ವೇ?
ಏನಂತೀರಿ?
ನಿಮ್ಮವನೇ ಉಮಾಸುತ