ಪದ್ಮ ಪ್ರಶಸ್ತಿಗಳು ಗಣರಾಜ್ಯೋತ್ಸವದ ಮುನ್ನಾದಿನದಂದು ವಾರ್ಷಿಕವಾಗಿ ಘೋಷಿಸಲ್ಪಡುವ ಭಾರತದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾಗಿದೆ. ಪ್ರಶಸ್ತಿಗಳನ್ನು ಮೂರು ವಿಭಾಗಗಳಲ್ಲಿ ನೀಡಲಾಗುತ್ತದೆ: ಪದ್ಮವಿಭೂಷಣ (ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ), ಪದ್ಮಭೂಷಣ (ಉನ್ನತ ಶ್ರೇಣಿಯ ವಿಶಿಷ್ಟ ಸೇವೆ) ಮತ್ತು ಪದ್ಮಶ್ರೀ (ವಿಶಿಷ್ಟ ಸೇವೆ). ಸಾರ್ವಜನಿಕ ಸೇವೆಯ ಅಂಶ ಒಳಗೊಂಡಿರುವ ಎಲ್ಲಾ ಚಟುವಟಿಕೆಗಳು ಅಥವಾ ವಿಭಾಗಗಳಲ್ಲಿನ ಸಾಧನೆಗಳನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
1954 ರಲ್ಲಿ ಭಾರತ ರತ್ನ ಮತ್ತು ಪದ್ಮವಿಭೂಷಣ ಎಂಬ ಎರಡು ನಾಗರಿಕ ಪ್ರಶಸ್ತಿಗಳನ್ನು ನೀಡಲು ಆರಂಭಿಸಿ, ನಂತರ ಮರು ವರ್ಷವೇ, ಜನವರಿ 8, 1955 ರಂದು ಪದ್ಮ ಪ್ರಶಸ್ತಿಯನ್ನು ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಎಂದು ಮೂರು ಭಾಗಗಳಾಗಿ ವಿಂಗಡನೆ ಮಾಡಲಾಯಿತು.
ಭಾರತ ರತ್ನ ಪ್ರಶಸ್ತಿ
ಭಾರತ ರತ್ನ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ಸಮಾಜದ ಹಿತಕ್ಕಾಗಿ ಯಾವುದೇ ಕ್ಷೇತ್ರದಲ್ಲಿ ಅತ್ಯುನ್ನತ ಶ್ರೇಣಿಯ ಅಸಾಧಾರಣ ಸೇವೆ ಇಲ್ಲವೇ ಕಾರ್ಯನಿರ್ವಹಣೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಪ್ರಶಸ್ತಿಗೆ ದೇಶದ ಪ್ರಧಾನ ಮಂತ್ರಿಗಳು ಭಾರತದ ರಾಷ್ಟ್ರಪತಿಗಳಿಗೆ ಶಿಫಾರಸ್ಸನ್ನು ಮಾಡುತ್ತಾರೆಯೇ ಹೊರತು ಮತ್ತಾವುದೇ ಔಪಚಾರಿಕ ಶಿಫಾರಸುಗಳ ಅಗತ್ಯವಿರುವುದಿಲ್ಲ. ಒಂದು ವರ್ಷದಲ್ಲಿ ಭಾರತ ರತ್ನ ಪ್ರಶಸ್ತಿಗಳ ಸಂಖ್ಯೆಯನ್ನು ಗರಿಷ್ಠ 3 ಕ್ಕೆ ಸೀಮಿತಗೊಳಿಸಲಾಗಿದ್ದು ದೇಶ ಮತ್ತು ವಿದೇಶಿಗರನ್ನೂ ಸೇರಿಸಿಕೊಂಡು ಇದುವರೆವಿಗೂ ಸುಮಾರು 45 ಜನರು ಭಾರತ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪದ್ಮ ಪ್ರಶಸ್ತಿಗಳು
1954 ರಲ್ಲಿ ಸ್ಥಾಪಿಸಲಾದ ಪದ್ಮ ಪ್ರಶಸ್ತಿಗಳನ್ನು 1978 ಮತ್ತು 1979 ಮತ್ತು 1993 ರಿಂದ 1997 ರ ಅವಧಿಯಲ್ಲಿ ಕೆಲವು ರಾಜತಾಂತ್ರಿಕ ಅಡಚಣೆಗಳ ಹೊರತುಪಡಿಸಿ ಪ್ರತಿ ವರ್ಷ ಗಣರಾಜ್ಯೋತ್ಸವದ ಹಿಂದಿನ ದಿನ ಘೋಷಣೆ ಮಾಡಲಾಗುತ್ತದೆ.
ಈ ಪ್ರಶಸ್ತಿಯನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿದೆ.
- ಪದ್ಮವಿಭೂಷಣ : ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ
- ಪದ್ಮಭೂಷಣ : ಉನ್ನತ ಶ್ರೇಣಿಯ ವಿಶಿಷ್ಟ ಸೇವೆಗಾಗಿ
- ಪದ್ಮಶ್ರೀ : ವಿಶಿಷ್ಟ ಸೇವೆಗಾಗಿ
ಯಾವುದೇ ಧರ್ಮ, ಜಾತಿ, ಉದ್ಯೋಗ, ಸ್ಥಾನ ಅಥವಾ ಲಿಂಗ ಭೇದವಿಲ್ಲದೇ ಎಲ್ಲಾ ವ್ಯಕ್ತಿಗಳು ಈ ಪ್ರಶಸ್ತಿಗಳಿಗೆ ಅರ್ಹರಾಗಿರುತ್ತಾರೆ. ಆದರೆ ಕೇಂದ್ರ ಅಥವಾ ರಾಜ್ಯ ಸರ್ಕಾರೀ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವವರು ಈ ಪ್ರಶಸ್ತಿಗೆ ಅರ್ಹರಲ್ಲದಿದ್ದರೂ, ವೈದ್ಯರು ಮತ್ತು ವಿಜ್ಞಾನಿಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.
ಈ ಕೆಳಕಂಡ ಕ್ಷೇತ್ರಗಳಲ್ಲಿ ವಿಶಿಷ್ಟ ಮತ್ತು ಅಸಾಧಾರಣ ಸಾಧನೆಗಳು/ಸೇವೆಗಳನ್ನು ಮಾಡಿದವರು ಈ ಪ್ರಶಸ್ತಿಗಳಿಗೆ ಅರ್ಹರಾಗುತ್ತಾರೆ.
- ಕಲೆ (ಸಂಗೀತ, ಚಿತ್ರಕಲೆ, ಶಿಲ್ಪಕಲೆ, ಛಾಯಾಗ್ರಹಣ, ಸಿನಿಮಾ, ರಂಗಭೂಮಿ ಇತ್ಯಾದಿ)
- ಸಮಾಜ ಕಾರ್ಯ (ಸಮಾಜ ಸೇವೆ, ದತ್ತಿ ಸೇವೆ, ಸಮುದಾಯ ಯೋಜನೆಗಳಲ್ಲಿ ಕೊಡುಗೆ ಇತ್ಯಾದಿ)
- ಸಾರ್ವಜನಿಕ ವ್ಯವಹಾರಗಳು (ಕಾನೂನು, ಸಾರ್ವಜನಿಕ ಜೀವನ, ರಾಜಕೀಯ ಇತ್ಯಾದಿ)
- ವಿಜ್ಞಾನ ಮತ್ತು ಎಂಜಿನಿಯರಿಂಗ್ (ಬಾಹ್ಯಾಕಾಶ ಇಂಜಿನಿಯರಿಂಗ್, ನ್ಯೂಕ್ಲಿಯರ್ ಸೈನ್ಸ್, ಮಾಹಿತಿ ತಂತ್ರಜ್ಞಾನ, ವಿಜ್ಞಾನದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಅದರ ಸಂಬಂಧಿತ ವಿಷಯಗಳು ಇತ್ಯಾದಿ)
- ವ್ಯಾಪಾರ ಮತ್ತು ಕೈಗಾರಿಕೆ (ಬ್ಯಾಂಕಿಂಗ್, ಆರ್ಥಿಕ ಚಟುವಟಿಕೆಗಳು, ನಿರ್ವಹಣೆ, ಪ್ರವಾಸೋದ್ಯಮದ ಪ್ರಚಾರ, ವ್ಯಾಪಾರ ಇತ್ಯಾದಿಗಳನ್ನು ಒಳಗೊಂಡಿದೆ.)
- ಔಷಧ (ವೈದ್ಯಕೀಯ ಸಂಶೋಧನೆ, ಆಯುರ್ವೇದ, ಹೋಮಿಯೋಪತಿ, ಸಿದ್ಧ, ಅಲೋಪತಿ, ನ್ಯಾಚುರೋಪತಿ ಇತ್ಯಾದಿಗಳಲ್ಲಿ ವ್ಯತ್ಯಾಸ/ವಿಶೇಷತೆಯನ್ನು ಒಳಗೊಂಡಿದೆ.)
- ಸಾಹಿತ್ಯ ಮತ್ತು ಶಿಕ್ಷಣ (ಪತ್ರಿಕೋದ್ಯಮ, ಬೋಧನೆ, ಪುಸ್ತಕ ರಚನೆ, ಸಾಹಿತ್ಯ, ಕವನ, ಶಿಕ್ಷಣದ ಪ್ರಚಾರ, ಸಾಕ್ಷರತೆಯ ಪ್ರಚಾರ, ಶಿಕ್ಷಣ ಸುಧಾರಣೆಗಳು ಇತ್ಯಾದಿ)
- ನಾಗರಿಕ ಸೇವೆ (ಸರ್ಕಾರಿ ಸೇವಕರಿಂದ ಆಡಳಿತದಲ್ಲಿ ವ್ಯತ್ಯಾಸ/ಶ್ರೇಷ್ಠತೆ ಇತ್ಯಾದಿ)
- ಕ್ರೀಡೆ (ಜನಪ್ರಿಯ ಕ್ರೀಡೆಗಳು, ಅಥ್ಲೆಟಿಕ್ಸ್, ಸಾಹಸ, ಪರ್ವತಾರೋಹಣ, ಕ್ರೀಡೆಗಳ ಪ್ರಚಾರ, ಯೋಗ ಇತ್ಯಾದಿಗಳನ್ನು ಒಳಗೊಂಡಿದೆ)
- ಇತರೆ (ಮೇಲೆ ಒಳಗೊಂಡಿರದ ಕ್ಷೇತ್ರಗಳು ಮತ್ತು ಭಾರತೀಯ ಸಂಸ್ಕೃತಿಯ ಪ್ರಚಾರ, ಮಾನವ ಹಕ್ಕುಗಳ ರಕ್ಷಣೆ, ವನ್ಯಜೀವಿ ರಕ್ಷಣೆ/ಸಂರಕ್ಷಣೆ ಇತ್ಯಾದಿಗಳನ್ನು ಒಳಗೊಂಡಿರಬಹುದು)
ಸಾಮಾನ್ಯವಾಗಿ ಈ ಪ್ರಶಸ್ತಿಗಳನ್ನು ಜೀವಂತ ಇರುವವರಿಗೆ ನೀಡುವ ಸಂಪ್ರದಾಯವಿದ್ದರೂ, ಕೆಲವೊಮ್ಮೆ ಅರ್ಹವಾದ ಪ್ರಕರಣಗಳಲ್ಲಿ ಮರಣೋತ್ತರವಾಗಿ ಪ್ರಶಸ್ತಿಯನ್ನು ನೀಡಿರುವ ಉದಾಹರಣೆಗಳಿವೆ.
ಸಾಧಾರಣವಾಗಿ ಒಂದು ಪದ್ಮ ಪ್ರಶಸ್ತಿಯಿಂದ ಮತ್ತೊಂದು ಉನ್ನತ ವರ್ಗದ ಪದ್ಮ ಪ್ರಶಸ್ತಿಗೆ ಭಾಜನರಾಗಲು ಕನಿಷ್ಟ ಪಕ್ಷ 5 ವರ್ಷಗಳ ಅವಧಿಯನ್ನು ನಿಗಧಿ ಪಡಿಸಿದ್ದು ಕೆಲವೊಮ್ಮೆ ವಿಶಿಷ್ಟ ಸಂಧರ್ಭದಲ್ಲಿ ಪ್ರಶಸ್ತಿ ಸಮಿತಿಯಿಂದ ಈ ನಿಯಮದ ಸಡಿಲಿಕೆ ಆಗಿರುವುದನ್ನೂ ಕಾಣಬಹುದಾಗಿದೆ.
ಈ ಪ್ರಶಸ್ತಿಗಳನ್ನು ಜನವರಿ ತಿಂಗಳಿನ ಅಂತ್ಯದಲ್ಲಿ ಘೋಷಣೆ ಮಾಡಿ ಸಾಮಾನ್ಯವಾಗಿ ಪ್ರತಿ ವರ್ಷ ಮಾರ್ಚ್/ಏಪ್ರಿಲ್ ತಿಂಗಳಲ್ಲಿ ಭಾರತದ ರಾಷ್ಟ್ರಪತಿಗಳು ಪ್ರಶಸ್ತಿ ಪುರಸ್ಕೃತರಿಗೆ ಅವರು ಸಹಿ ಮಾಡಿದ ಪ್ರಮಾಣಪತ್ರ ಮತ್ತು ಪದಕದೊಂದಿಗೆ ನಗದು ಬಹುಮಾನವನ್ನೂ ಸಹಾ ನೀಡಲಾಗುತ್ತದೆ. ಈ ರೀತಿಯ ಪ್ರಶಸ್ತಿ ಪುರಸ್ಕೃತರು ಆ ಪದಕವನ್ನು ಯಾವುದೇ ವಿಧ್ಯುಕ್ತ/ರಾಜ್ಯ ಸಮಾರಂಭಗಳಲ್ಲಿ ಧರಿಸಬಹುದಾಗಿದೆ.
ಆಯ್ಕೆಯ ವಿಧಾನ
ಪದ್ಮ ಪ್ರಶಸ್ತಿ ಸಮಿತಿಯು ಕ್ಯಾಬಿನೆಟ್ ಕಾರ್ಯದರ್ಶಿಯ ನೇತೃತ್ವದಲ್ಲಿದ್ದು ಅವರ ಜೊತೆ ಗೃಹ ಕಾರ್ಯದರ್ಶಿ, ಅಧ್ಯಕ್ಷರ ಕಾರ್ಯದರ್ಶಿ ಮತ್ತು ನಾಲ್ಕರಿಂದ ಆರು ಗಣ್ಯ ವ್ಯಕ್ತಿಗಳನ್ನು ಒಳಗೊಂಡ ಸದಸ್ಯರ ಮಂಡಲಿಯನ್ನು ಪ್ರತಿ ವರ್ಷವೂ ಪ್ರಧಾನ ಮಂತ್ರಿಯವರು ರಚಿಸುತ್ತಾರೆ. ಈ ಸಮಿತಿಗೆ ದೇಶದ ಎಲ್ಲಾ ರಾಜ್ಯಸರ್ಕಾರಗಳು ತಮ್ಮ ತಮ್ಮ ರಾಜ್ಯದಿಂದ ವಿಶಿಷ್ಟ ಸಾಧನೆಗಳನ್ನು ಮಾಡಿದವರನ್ನು ಶಿಫಾಸರಸ್ಸು ಮಾಡಲು ಕೋರಲಾಗುತ್ತದೆ. ಹಾಗೆ ಪದ್ಮ ಪ್ರಶಸ್ತಿಗಳಿಗಾಗಿ ಸ್ವೀಕರಿಸಿದ ಎಲ್ಲಾ ನಾಮನಿರ್ದೇಶನಗಳನ್ನು ಪದ್ಮ ಪ್ರಶಸ್ತಿ ಸಮಿತಿಯ ಮುಂದೆ ಇರಿಸಿ ಅಲ್ಲಿ ಕೂಲಂಕುಶವಾಗಿ ಅವರ ಸಾಧನೆಗಳನ್ನು ಪರಿಶೀಲಿಸಿದ ನಂತರ ಅರ್ಹರ ಪಟ್ಟಿಯನ್ನು ಅನುಮೋದನೆಗಾಗಿ ಭಾರತದ ಪ್ರಧಾನಿಗಳು ಮತ್ತು ರಾಷ್ಟ್ರಪತಿಗಳಿಗೆ ಸಲ್ಲಿಸಲಾಗುತ್ತದೆ. ಒಂದು ವರ್ಷದಲ್ಲಿ ಒಟ್ಟು ಈ ಪ್ರಶಸ್ತಿಗಳ ಸಂಖ್ಯೆ 120 ಕ್ಕಿಂತ ಹೆಚ್ಚಿರಬಾರದು (ಮರಣೋತ್ತರ ಪ್ರಶಸ್ತಿಗಳನ್ನು ಹೊರತುಪಡಿಸಿ ಮತ್ತು ಎನ್‌ಆರ್‌ಐ/ವಿದೇಶಿಯರು/ಒಸಿಐಗಳಿಗೆ) ಎಂಬ ನಿಯಮವಿದೆ.
ಇಷ್ಟೆಲ್ಲಾ ಲಿಖಿತವಾದ ವಿಧಿ ವಿಧಾನಗಳಿದ್ದರೂ ಇತ್ತೀಚಿನ ವರ್ಷಗಳವರೆಗೂ ಈ ಎಲ್ಲಾ ಪ್ರಶಸ್ತಿಗಳು ಆಡಳಿತ ಪಕ್ಷದ ರಾಜಕೀಯ ಲಾಭಕ್ಕೆ ಮತ್ತುಚಲನಚಿತ್ರ ನಟ/ನಟಿಯರು, ಕ್ರಿಕೆಟ್ ಆಟಗಾರರು, ಕಮ್ಯೂನಿಷ್ಟ್ ಪರವಿರುವ ಮಾಧ್ಯಮದವರು ಹೀಗೆ ಅವರ ಭಟ್ಟಂಗಿಗಳಿಗಷ್ಟೇ ಸೀಮಿತವಾಗಿ ಈ ಪ್ರಶಸ್ತಿಗಳಿಗೆ ಬೆಲೆಯೇ ಇಲ್ಲದಂತಾಗಿದ್ದದ್ದು ವಿಪರ್ಯಾಸ. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಭಾರತದ ಮಾಜೀ ಪ್ರಧಾನಿಗಳಾದ ಶ್ರಿ ಜವಹರ್ ಲಾಲ್ ನೆಹರು ಮತ್ತವರ ಮಗಳು ಇಂದಿರಾಗಾಂಧಿಯವರು ತಾವು ಪ್ರಧಾನ ಮಂತ್ರಿಗಳಾಗಿ ಅಧಿಕಾರದಲ್ಲಿ ಇರುವಾಗಲೇ ತಮಗೆ ತಾವೇ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಿಕೊಂಡು ಈ ಪ್ರಶಸ್ತಿಗೆ ಅವಮಾನ ಮಾಡಿದ್ದ ಇತಿಹಾಸವನ್ನೂ ಕಾಣಬಹುದಾಗಿದೆ. ಅದೇ ರೀತಿ ಗಡಿನಾಡು ಗಾಂಧಿ ಎಂದು ಪ್ರಖ್ಯಾತರಾಗಿದ್ದ ಪಾಕಿಸ್ಥಾನದ ಖಾನ್ ಅಬ್ದುಲ್ ಗಫಾರ್ ಖಾನ್ ಮತ್ತು ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ ಅವರಿಗೂ ನಾನಾ ರೀತಿಯ ಅಂತರಾಷ್ಟ್ರೀಯ ಓಲೈಕೆಯ ರಾಜಕೀಯ ಲೆಖ್ಖಾಚಾರದ ಅಡಿಯಲ್ಲಿ ಭಾರತ ರತ್ನ ಪ್ರಶಸ್ತಿಯನ್ನೂ ನೀಡಿರುವ ಉದಾಹರಣೆಯೂ ಇದೆ.
2014 ರ ನಂತರ ಬಂದ ನರೇಂದ್ರ ಮೋದಿಯವರ ಸರ್ಕಾರ ಈ ಪ್ರಶಸ್ತಿಗಳ ಆಯ್ಕೆಯಲ್ಲಿ ತುಸು ನಿಯಂತ್ರಣವನ್ನು ತಂದಿದ್ದಲ್ಲದೇ, ಎಲ್ಲಾ ರೀತಿಯ ರಾಜಕೀಯ ಒತ್ತಡಗಳನ್ನು ಬದಿಗೊತ್ತಿ, ತಮ್ಮ ವಂಧಿಮಾಗದರನ್ನು ದೂರವಿಟ್ಟು ಎಲ್ಲಾ ರಾಜ್ಯಗಳಿಂದಲೂ ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿದ್ದ ನೂರಾರು ಅರ್ಹರನ್ನು ಹುಡುಕಿ ಅಂತಹವರಿಗೆ ಪದ್ಮ ಪ್ರಶಸ್ತಿಗಳನ್ನು ಕೊಡುವ ಮೂಲಕ ಮತ್ತೆ ಈ ಪ್ರಶಸ್ತಿಗಳ ಮಾನ ಮತ್ತು ಸನ್ಮಾನಗಳನ್ನು ಎತ್ತಿ ಹಿಡಿದಿದ್ದಲ್ಲದೇ ದೇಶವಾಸಿಗಳಲ್ಲದೇ ವಿರೋಧ ಪಕ್ಷಗಳಿಂದಲೂ ಅಭಿನಂದನೆಗೆ ಪಾತ್ರರಾದದ್ದು ಶ್ಲಾಘನೀಯವಾಗಿತ್ತು.
ಕೆಲವೊಮ್ಮೆ ಈ ರೀತಿಯ ಅಭಿನಂದನೆಗಳು ಹೆಚ್ಚಾದಾಗ ಹಿಡಿದ ಕಾರ್ಯದಲ್ಲಿ ಅಲ್ಪ ಸ್ವಲ್ಪ ವಿಚಲಿತರಾಗಿ ಹಳಿ ತಪ್ಪುವ ಸಾಧ್ಯತೆಗಳು ಇವೆ ಎನ್ನುವುದಕ್ಕೆ ಕಳೆದ ಬಾರಿ ಮತ್ತು ಈ ಬಾರಿಯ ಪ್ರಶಸ್ತಿಗಳು ಉದಾಹರಣೆಯಾಗಿದೆ ಎಂದರೂ ಅತಿಶಯವಲ್ಲ. ಹಿಂದಿನ ಸರ್ಕಾರಗಳು ಈ ಪ್ರಶಸ್ತಿಗಳನ್ನು ತಮ್ಮ ಪಕ್ಷ ಮತ್ತು ತಮ್ಮ ಅನುಯಾಯಿಗಳಿಗಷ್ಟೇ ಮೀಸಲಿಟ್ಟಿದ್ದರೆ ಪ್ರಸಕ್ತ ಸರ್ಕಾರ ಅದಕ್ಕಿಂತಲೂ ಒಂದು ಹೆಚ್ಚೆ ಮುಂದೆ ಹೋಗಿ ತಮ್ಮ ರಾಜಕೀಯ ಲಾಭಕ್ಕಾಗಿ ವಿರೋಧ ಪಕ್ಷದವರಿಗೂ ಈ ಪ್ರಶಸ್ತಿಗಳನ್ನು ಕೊಡಲು ಆರಂಭಿಸುವ ಸಂಪ್ರದಾಯವನ್ನು ಹುಟ್ಟು ಹಾಕುವ ಮೂಲಕ ಅಚ್ಚರಿ ಮೂಡಿಸಿದೆ. ಕಳೆದ ಬಾರಿ ಪಶ್ಛಿಮ ಬಂಗಾಳದ ಚುನಾವಣೆಯನ್ನು ಗಮನದಲ್ಲಿಟ್ಟು ಕೊಂಡು ಮೂಲತಃ ಕಾಂಗ್ರೇಸ್ಸಿಗರಾದ ಮಾಜೀ ರಾಷ್ಟ್ರಪತಿ ಪ್ರಣಭ್ ಮುಖರ್ಜಿ ಅವರಿಗೆ ಭಾರತ ರತ್ನ ನೀಡಿದ್ದರೆ ಈ ಬಾರಿ ಕಟ್ಟರ್ ಕಮ್ಯೂನಿಷ್ಟ್ ಕಾಮ್ರೇಡ್ ಆದ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿಗಳಾದ ಬುದ್ದದೇಬ್ ಭಟ್ಟಾಚಾರ್ಯ ಮತ್ತು ಕಾಶ್ಮೀರ ಮೂಲದ ಮಾಜಿ ಮುಖ್ಯಮಂತ್ರಿ ಕಾಂಗ್ರೇಸ್ಸಿಗರಾದ ಮುಸ್ಲಿಂ ಸಮುದಾಯದ ಗುಲಾಮ್ ನಭಿ ಆಝಾದ್ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡುವ ಮೂಲಕ ಬರ್ತಾ ಬರ್ತಾ ರಾಯರ ಕುದುರೆಯೂ ಕತ್ತೆ ಆಯ್ತು ಎನ್ನುವ ಗಾದೆ ಮಾತನ್ನು ನೆನಪಾಗುವಂತೆ ಮಾಡಿದ್ದು ಸುಳ್ಳಲ್ಲ.
ಪ್ರಶಸ್ತಿ ಘೋಷಣೆಯಾದ ಕೂಡಲೇ ಬುದ್ಧದೇಬ್ ಅವರು ಪ್ರಶಸ್ತಿಯನ್ನು ನಿರಾಕರಿಸಿದರೆ, ಸೊನಿಯಾ ಗಾಂಧಿಯವರ ಅತೀ ಆಪ್ತರಲ್ಲೊಬ್ಬರಾದರೂ, ರಾಹುಲ್ ಗಾಂಧಿಯ ಹುಚ್ಚಾಟಗಳಿಂದ ಬೇಸತ್ತು ಅವರುಗಳಿಂದ ತುಸು ಅಂತರ ಕಾಪಾಡಿಕೊಳ್ಳುತ್ತಿರುವ G-23 ತಂಡದ ಸದಸ್ಯರಾಗಿರುವ ಗುಲಾಂ ನಬಿ ಅಜಾದ್ ಅವರು ಪ್ರಶಸ್ತಿಗೆ ಭಾಜನರಾಗಿರುವುದಕ್ಕಾಗಿ ಸ್ವಪಕ್ಷದಿಂದಲೇ ನಿಂದನೆಗೊಳಗಾಗುತ್ತಿದ್ದಾರೆ. ನಬಿಯವರು ಪ್ರಶಸ್ತಿಯನ್ನು ಸ್ವೀಕರಿಸಿ ಗುಲಾಮ್ ಆಗುತ್ತಾರೋ ಇಲ್ಲವೇ ಪ್ರಶಸ್ತಿಯನ್ನು ತಿರಸ್ಕರಿಸಿ ಅಜಾದ್ ಆಗುತ್ತಾರೋ? ಎಂದು ಕ್ರಾಂಗ್ರೇಸ್ ನಾಯಕರುಗಳೇ ಪ್ರಶ್ನಿಸುವಂತಾಗಿರುವುದು ಚರ್ಚಾಸ್ಪದವಾಗಿದೆ.
ಇವರಿಬ್ಬರ ಹೊರತಾಗಿ ಸೈದ್ಧಾಂತಿಕ ವಿರೋಧವೋ ಅಥವಾ ಪದ್ಮ ಪ್ರಶಸ್ತಿಗಿಂತಲೂ ತಾವು ದೊಡ್ಡವರು ಎಂಬು ಭಾವಿಸಿರುವ ಪಶ್ಚಿಮ ಬಂಗಾಳದ ಮತ್ತಿಬ್ಬರು ಪದ್ಮ ಪ್ರಶಸ್ತಿಯನ್ನು ತಿರಸ್ಕರಿಸುವ ಮೂಲಕ ಪ್ರಶಸ್ತಿಗೆ ಅವಮಾನವನ್ನು ಎಸಗಿದ್ದಾರೆ ಎಂದರು ತಪ್ಪಾಗದು.
ಹೀಗಾಗಿ ಇನ್ನು ಮುಂದಾದರೂ ದಯವಿಟ್ಟು ಈ ಪ್ರಶಸ್ತಿಗಳನ್ನು ರಾಜಕೀಯದ ಹೊರತಾಗಿ ಯಾರಿಗೆ ಈ ದೇಶ ಮತ್ತು ಈ ಪ್ರಶಸ್ತಿಗೆ ಮರ್ಯಾದೆಯನ್ನು ಕೊಡುವ ಮನಸ್ಸು ಇರುತ್ತದೆಯೋ ಅಂತಹವರಿಗೆ ಮಾತ್ರವೇ ನೀಡಿದಲ್ಲಿ ಪದ್ಮ ಪ್ರಶಸ್ತಿಗೂ ಮತ್ತು ಪುರಸ್ಕೃತರಿಗೂ ಘನತೆ ಇರುತ್ತದೆ ಅಲ್ವೇ?
ಏನಂತೀರಿ?
ನಿಮ್ಮವನೇ ಉಮಾಸುತ