ಕೋತಿ ರಾಜ್ ಉರ್ಫ್ ಜ್ಯೋತಿರಾಜ್

ಜೀವಶಾಸ್ತ್ರದಲ್ಲಿ ನಾವೆಲ್ಲರೂ ಓದಿದಂತೆ ಮಂಗನಿಂದ ಮಾನವನಾಗಿ ಪರಿವರ್ತನೆಯಾದ ಎಂದು ಕೇಳಿದ್ದೇವೆ. ಅದಕ್ಕೆ ಪುರಾವೆ ಎನ್ನುವಂತೆ ಇಲ್ಲೊಬ್ಬ ಮನುಷ್ಯ ಅಕ್ಷರಶಃ ಮಂಗನಂತೆ ಚಂಗನೆ ಒಂದು ಕೆಡೆಯಿಂದ ಮತ್ತೊಂದು ಕಡೆಗೆ ಹಾರುತ್ತಾ ಎತ್ತೆರತ್ತರದ ಯಾವುದೇ ಅಸರೆ ಇಲ್ಲದ ಬಂಡೆಗಳನ್ನು ಯಾವುದೇ ಅಥವಾ ಯಾರದ್ದೇ ಸಹಾಯವಿಲ್ಲದೇ ಏರುತ್ತಾ ಇಳಿಯುತ್ತಾ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಾಧನೆಗಳನ್ನು ಮಾಡಿರುವ ಕೋತಿರಾಜ್ ಅಲಿಯಾಸ್ ಜ್ಯೋತಿರಾಜ್ ಅವರ ಬಗ್ಗೆ ನಾವಿಂದು ತಿಳಿಯೋಣ ಬನ್ನಿ.

ಸಂದರ್ಶನವೊಂದರಲ್ಲಿ ಜ್ಯೋತಿರಾಜ್ ಅವರೇ ಹೇಳಿದಂತೆ ಅವರು ಮೂಲತಃ ತಮಿಳುನಾಡಿನವರು. 1988 ಆಗಸ್ಟ್ 15 ರಂದು ಜನಿಸಿದವರು. ತಮಿಳುನಾಡು ಮಧುರೆ ಜಿಲ್ಲೆಯ ತೇನಿ ಗ್ರಾಮದ ಜ್ಯೋತಿರಾಜ್ ಅವರಿಗೆ ಕೇವಲ ೩ ವರ್ಷದ ವಯಸ್ಸಾಗಿರುವಾಗ ತಮ್ಮ ಊರಿನ ಹತ್ತಿರದ ಜಾತ್ರೆಯೊಂದರರಲ್ಲಿ ತಮ್ಮ ಪೋಷಕರಿಂದ ತಪ್ಪಿಸಿಕೊಂಡು ತಮಿಳು ಮೂಲದವರೇ ಆದರೂ ಬಾಗಲಕೋಟೆಯಲ್ಲಿ ಬೇಕರಿಯೊಂದನ್ನು ನಡೆಸುತ್ತಿದ್ದ ದಂಪತಿಗಳ ಕೈಗೆ ಸಿಕ್ಕಿ ಅವರ ಆಶ್ರಯದಲ್ಲೇ ಸುಮಾರು 10-12 ವರ್ಷಗಳ ಕಾಲ ಬೆಳೆಯುತ್ತಾರೆ. ಅವರ ಮನೆಯಲ್ಲಿ ಕೊಡುತ್ತಿದ್ದ ಕಾಟವನ್ನು ತಾಳಲಾರದೇ, ಹೇಗಾದರೂ ಮಾಡಿ ಬೆಂಗಳೂರಿಗೆ ಹೋಗಿ ಯಾವುದಾದರೂ ಕೆಲಸ ಗಿಟ್ಟಿಸಿಕೊಂಡು ಜೀವನವನ್ನು ನಡೆಸಿಕೊಂಡು ಹೋಗಬಹುದು ಎಂದು ನಿರ್ಧರಿಸಿ ಬಾಗಲಕೋಟೆಯ ಬೇಕರಿಯಿಂದ ಓಡಿ ಬೆಂಗಳೂರಿಗೆ ಬರುವ ದಾರಿಯಲ್ಲಿ ಚಿತ್ರದುರ್ಗದ ಬಳಿ ಮಹದೇವಪ್ಪ ಎಂಬುವರ ಪರಿಚಯವಾಗಿ ಅವರ ಮನೆಯಲ್ಲೇ ಕೆಲ ವರ್ಷಗಳಿದ್ದು ಅವರ ಜೊತೆಯಲ್ಲೇ ಕಟ್ಟಡ ಕೆಲಸದ ಕೂಲೀ ಕಾರ್ಮಿಕನಾಗಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿರುತ್ತಾರೆ.

ಅದೊಮ್ಮೆ ಅದಾವುದೋ ವಯಕ್ತಿಕ ಕಾರಣಗಳಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಜ್ಯೋತಿರಾಜ್ ಸಾಯಲು ನಿರ್ಧರಿಸಿ, ಮೊತ್ತ ಮೊದಲ ಬಾರಿಗೆ ಚಿತ್ರದುರ್ಗದ ಏಳು ಸುತ್ತಿನ ಕಲ್ಲಿನ ಕೋಟೆಗೆ ಬಂದು ದಿನವಿಡೀ ಕೋಟೆಯೆಲ್ಲಾ ಸುತ್ತಾಡಿ ಸಂಜೆ ಹೊತ್ತಿಗೆ ಅಲ್ಲಿಯ ಗುಡಿಯೊಂದರ ಹಿಂದೆ ಸುಮಾರು ಅರ್ಧಲೀಟರ್ ಕೀಟನಾಶಕವನ್ನು ಕುಡಿದು ಸತ್ತೇ ಹೋದನೆಂದು ಭ್ರಮಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುತ್ತಾರೆ. ಆಯಸ್ಸು ಗಟ್ಟಿಗಿದ್ದರೆ ಯಾರೂ ಏನೂ ಮಾಡಲಾಗುವುದಿಲ್ಲ ಎನ್ನುವಂತೆ ಮಾರನೇಯ ದಿನ ಬೆಳಿಗ್ಗೆ ಸಹಜವಾಗಿ ಎಚ್ಚರವಾಗಿ ತಾನು ಸತ್ತಿಲ್ಲದಿರುವುದನ್ನು ಖಚಿತಪಡಿಸಿಕೊಂಡು ಅಲ್ಲಿಂದ ಗೋಪಾಲಸ್ವಾಮಿ ಹೊಂಡದಲ್ಲಿ ಬಿದ್ದು ಸಾಯಲು ಪ್ರಯತ್ನಿಸಿದರಾದರೂ ಸರಾಗವಾಗಿ ಈಜು ಬರುತ್ತಿದ್ದ ಕಾರಣ ಅಲ್ಲಿಯೂ ಸಾಯಲಾಗದೇ ಅಂತಿಮವಾಗಿ ಅಲ್ಲಿಯೇ ಇದ್ದ ಸುಮಾರು 80-100 ಅಡಿ ಎತ್ತರದ ಹಂಸಗೀತೆ ಎಂಬ ಹೆಬ್ಬಂಡೆ ಏರಿ ಆ ಬಂಡೆಯಿಂದ ಕೆಳಗೆ ಬಿದ್ದು ಸಾಯ ಬಹುದು ಎಂದು ನಿರ್ಧರಿಸಿ ನೋಡ ನೋಡುತ್ತಿದ್ದಂತೆಯೇ ಯಾವುದೇ ಸಹಾಯವಿಲ್ಲದೇ ಚಕ ಚಕನೆ ಆ ಬಂಡೆಯನ್ನು ಏರಿ ಕೆಳಗೆ ನೋಡಿದ್ದಲ್ಲಿ ದುರ್ಗವನ್ನು ನೋಡಲು ಬಂದಿದ್ದ ಪ್ರವಾಸಿಗರು ಜೋರಾಗಿ ಚಪ್ಪಾಳೆ ತಟ್ಟುತ್ತಾ ಸಿಳ್ಳೇ ಹೊಡೆಯುತ್ತಾ ಅಲ್ನೋಡ್ರೋ ಕೋತಿ ಮನುಷ್ಯ ಎಂದು ಕೂಗಿಹೇಳೀದ್ದೇ ಅವರ ಜೀವನದಲ್ಲಿ ಭಾರೀ ಬದಲಾವಣೆ ತರುತ್ತದೆ.

kothiದುರ್ಗದ ಕೋಟೆಯಲ್ಲಿದ್ದ ಕೋತಿಗಳು ಅಷ್ಟು ಸಲೀಸಾಗಿ ಮರದಿಂದ ಮರಕ್ಕೆ, ಬಂಡೆಯಿಂದ ಬಂಡೆಗೆ ಹೇಗೆ ಹಾರುತ್ತವೆ ಎಂಬುದನ್ನು ಗಮನಿಸಿ, ತಾನೂ ಅದೇ ರೀತಿ ಬೃಹತ್ ಬಂಡೆಗಲ್ಲುಗಳನ್ನು ಹತ್ತುವ ಸಾಹಸಿ ಗುಣವನ್ನು ಮೈಗೂಡಿಸಿಕೊಂಡ ಜ್ಯೋತಿರಾಜ್ ಅಲ್ಲಿಂದ ಕೋತಿರಾಜ್ ಆಗಿ ಬದಲಾವಣೆಯಾಗುತ್ತಾರೆ. ಕೋಟೆಯ ವೀಕ್ಷಣೆಗೆ ಬರುವ ರಾಜ್ಯ, ಹೊರರಾಜ್ಯ, ವಿದೇಶಿ ಪ್ರವಾಸಿಗರ ಮುಂದೆ ತನ್ನ ಈ ಸಾಹಸವನ್ನು ಪ್ರದರ್ಶಿಸಿ ಅವರು ಕೊಡುವ ಅಷ್ಟಿಷ್ಟು ಹಣದಿಂದಲೇ ಜೀವನವನ್ನು ನಡೆಸಿಕೊಂಡು ಹೋಗುತ್ತಿರುವಾಗಲೇ ಅವರ ಈ ಸಾಹಸ ಒಬ್ಬರಿಂದ ಮತ್ತೊಬ್ಬರಿಗೆ ತಿಳಿಯುತ್ತಾ ಹೋಗಿ ದೇಶ ವಿದೇಶದ ಮಾಧ್ಯಮದವರು ಆವರನ್ನು ಸಂದರ್ಶಿಸಿದ್ದಲ್ಲದೇ, ಆತನ ಸಾಹಸ ಕುರಿತಂತೆ ಕತೆಗಳು, ಡಾಕ್ಯೂಮೆಂಟರಿಗಳನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಿ ಬಿಡುವ ಮೂಲಕ ಜ್ಯೊತಿರಾಜ್ ಅಲಿಯಾಸ್ ಕೋತಿರಾಜ್ ಪ್ರಖ್ಯಾತಿಯನ್ನು ಹೊಂದುತ್ತಾರೆ. ಈತನ ಜನಪ್ರಿಯತೆಯನ್ನು ಬಳಸಿಕೊಂಡು ಹಣ ಮಾಡಬಹುದೆಂದು ಈತನನ್ನು ನಾಯಕತ್ವದಲ್ಲಿ ಜ್ಯೋತಿ ಅಲಿಯಾಸ್ ಕೋತಿರಾಜ ಕನ್ನಡ ಚಿತ್ರವೊಂದು ಬಿಡುಗಡೆಯಾಗಿ ನಿರೀಕ್ಷಿತ ಯಶಸ್ಸು ಕಾಣದಿದ್ದರೂ ಕೋತಿರಾಜ್ ನ ಸಮಗ್ರ ಪರಿಚಯ ನಾಡಿಗೆ ಆಗುತ್ತದೆ.

kothi3ತಮಿಳು ಭಾಷೆಯ ವೃತ್ತ ಪತ್ರಿಕೆಯಲ್ಲಿ ಕೋತಿರಾಜ್ ಬಗ್ಗೆ ಬಂದಿದ್ದ ವಿಷಯವನ್ನು ಓದಿ ತಿಳಿದ ಆತನ ನಿಜವಾದ ತಂದೆ ವಂಡಿಕಾರನ್ ಈಶ್ವರನ್ ಅವರು ಆತ ತನ್ನ ಮಗ ಎಂದು ತಿಳಿದು ಮಗನನ್ನು ಹುಡುಕಿಕೊಂಡು ಚಿತ್ರದುರ್ಗಕ್ಕೆ ಬಂದು 90ರ ದಶಕಲ್ಲಿ ವೀರಪಾಂಡಿ ಜಾತ್ರೆಯಲ್ಲಿ ತಾವು ಕಳೆದು ಕೊಂಡ ಮಗ ಈತನೆಂದೇ ಗುರುತಿಸುತ್ತಾರೆ. ನಂತರ ಆತನನ್ನು ಸಾಕಿ ಬೆಳಿಸಿದ್ದ ಬಾಗಲಕೋಟೆಯ ಬೇಕರಿ ಕುಟುಂಬದ ಮಧ್ಯಸ್ಥಿಕೆಯಲ್ಲಿ ಎಲ್ಲವೂ ನಿರ್ಧಾರವಾಗಿ ಜ್ಯೋತಿರಾಜ್ ತನ್ನ ಹುಟ್ಟೂರಿಗೆ ಹೋದಾಗ ಅದೇ ಜಾತ್ರೆಯ ಸಮಯವಾಗಿದ್ದು ಕಳೆದು ಹೋದ ತನ್ನ ಮಗ ಸಿಕ್ಕ ಸಂತೋಷದಲ್ಲಿ ಆತನ ತಂದೆ ಸುಮಾರು 10-12 ಹೋತಗಳನ್ನು ಕಡಿಸಿ ಭೂರಿ ಭೋಜನವನ್ನು ತಯಾರಿಸಿ ಇಡೀ ಊರಿಗೇ ಊಟಹಾಕಿಸುತ್ತಾರೆ. ಈತನ ಸಾಹಸವನ್ನು ಕಂಡ ತಮಿಳುನಾಡು ಸರ್ಕಾರವೂ ಆತನಿಗೆ ಬೇಕಾದ ಸಹಾಯ ಮಾಡಲು ಮುಂದಾದರೂ, ತಾನು ಹುಟ್ಟಿದ್ದು ತಮಿಳುನಾಡಾದರು ನನ್ನ ಕರ್ಮ ಭೂಮಿ ಕರ್ನಾಟಕ ಅದರಲ್ಲೂ ಚಿತ್ರದುರ್ಗ. ಹಾಗಾಗಿ ನಾನು ಎಂದೆಂದೂ ಕನ್ನಡಿಗನೇ ಮತ್ತು ನಾನು ಸಾಯುವುದೂ ಕನ್ನಡಿಗನಾಗಿಯೇ ಎಂದು ಹೆಮ್ಮೆಯಿಂದ ನುಡಿದು ಮತ್ತೆ ಚಿತ್ರದುರ್ಗಕ್ಕೆ ಹಿಂದಿರುಗುತ್ತಾನೆ.

discoveryಅದೇ ಸಮಯಕ್ಕೆ ಈತನ ಸಾಹಸದ ಬಗ್ಗೆ ತಿಳಿದ ಡಿಸ್ಕವರಿ ಛಾನೆಲ್ ತಮ್ಮ ಸೂಪರ್ ಹೀಮ್ಯಾನ್ ಸರಣಿಗೆ ಈತನನ್ನು ಸಂಪರ್ಕಿಸಿ ಚಿತ್ರೀಕರಣಕ್ಕೆ ವಿದೇಶಕ್ಕೆ ಬರಲು ಸೂಚಿಸುತ್ತಾರೆ. ಅಷ್ಟು ದೊಡ್ಡ ಮಾಧ್ಯಮವು ತನಗೆ ಅವಕಾಶವನ್ನು ಕೊಟ್ಟಿದ್ದಕ್ಕಾಗಿ ಸಂತೋಷವಾದರೂ, ತನ್ನ ಪ್ರತಿಭೆಯನ್ನು ಪ್ರೋತ್ಸಾಹಿಸಿ ತನಗೆ ಈ ಪರಿಯಾದ ಬೆಂಬಲವನ್ನು ನೀಡಿರುವ ಚಿತ್ರದುರ್ಗದಲ್ಲಿ ಚಿತ್ರೀಕರಿಸಿದಲ್ಲಿ ಮಾತ್ರವೇ ತಾನು ಒಪ್ಪಿಕೊಳ್ಳುವುದಾಗಿ ಷರತ್ತನ್ನು ಹಾಕುತ್ತಾನೆ. ಆರಂಭದಲ್ಲಿ ಛಾನೆಲ್ ಅವರು ಅದಕ್ಕೊಪ್ಪದೇ ಹೋದರೂ ನಂತರದ ದಿನಗಳಲ್ಲಿ ಅದಕ್ಕೊಪ್ಪಿ ಚಿತ್ರದುರ್ಗಕ್ಕೆ ಬಂದು ಈತನ ಸಾಹಸಗಳನ್ನೆಲ್ಲಾ ನೋಡಿ ಅಚ್ಚರಿಗೊಂಡು ಕಡೆಗೆ ದುರ್ಗದ ಬಳಿಯೇ ಇರುವ ಚಂದವಳ್ಳಿ ತೋಟದಲ್ಲಿದ್ದ ಕಡಿದಾದ ಯಾವುದೇ ಹಿಡಿತವೂ ಸಿಗದಿದ್ದಂತಹ ಬಂಡೆಯೊಂದನ್ನು ಏರಲು ಸೂಚಿಸುತ್ತಾರೆ. ಅವರ ಸವಾಲನ್ನು ಸ್ವೀಕರಿಸಿದ ಕೋತಿರಾಜ್ ಅವರು ಊಹಿಸಿದ್ದಕ್ಕಿಂತಲೂ ಕಡಿಮೆ ಸಮಯದಲ್ಲಿ ಆ ಬಂಡೆಯನ್ನು ಏರುವ ಮೂಲಕ ತಾನು ಕೇವಲ super he man ಮಾತ್ರವಾಗಿರದೇ, super super he man ಎಂದು ಸಾಭೀತು ಮಾಡಿ ತೋರಿಸುವ ಮೂಲಕ ಜಗದ್ವಿಖ್ಯಾತರಾಗುತ್ತಾರೆ.

ಚಿತ್ರದುರ್ಗದ ಬೆಟ್ಟವಲ್ಲದೇ ಕನ್ಯಾಕುಮಾರಿಯಿಂದ ಕಾಶ್ಮೀರದ ವರಗೆ, ಅಟಕ್ ನಿಂದ ಕಟಕ್ ವರೆಗೆ ದೇಶಾದ್ಯಂತ ಇರುವ ನಾನಾ ಸಾಹಸ ಬಂಡೆಗಳನ್ನು ಏರುವುದರ ಜೊತೆಗೆ ಭಾರತದ ಸ್ಪೈಡರ್ಮ್ಯಾನ್ ಎಂದೇ ಪ್ರಖ್ಯಾತಿ ಪಡೆಯುತ್ತಾರೆ. ಬರಿಗೈಯಲ್ಲಿಯೇ ಕಡಿದಾದ ಬಂಡೆಗಳನ್ನು ಸುಲಭವಾಗಿ ಏರುವ ಕರ್ನಾಟಕದ ಈ ಪ್ರತಿಭಾವಂತ ಪರ್ವತಾರೋಹಿ ಜ್ಯೋತಿರಾಜ್ ತನ್ನೀ ವಿದ್ಯೆಯನ್ನು ಹತ್ತಾರು ಹುಡುಗರಿಗೆ ಕಲಿಸಿಕೊಡಬೇಕು ಎಂದು ನಿರ್ಧರಿಸಿದ್ದಲ್ಲದೇ, ಈ ವಿದ್ಯೆಯಿಂದ ನಾಲ್ಕಾರು ಜೀವ ಉಳಿಸುವ ಕೆಲಸಕ್ಕೆ ಬಳಸಿಕೊಂಡು ಸಾರ್ಥಕತೆ ಪಡೆಯಲು ನಿರ್ಧರಿಸಿ, ದೂರದ ಅಮೇರಿಕಾದಲ್ಲಿ ಬೆಟ್ಟ ಗುಡ್ಡಗಳಲ್ಲಿ ಸಿಲುಕಿಕೊಂಡವರನ್ನು ಪಾರುಮಾಡುವುದರ ಕುರಿತಂತೆ ತರಭೇತಿಯನ್ನೂ ಪಡೆದು ಬಂಡೆಗಳ ಮಧ್ಯೆ ಸಿಲುಕಿ ಕೊಂಡಿದ್ದ ಹತ್ತು ಹಲವಾರು ಜನರ ಪ್ರಾಣವನ್ನು ಉಳಿಸಿದ್ದಾರೆ. ಈಗಾಗಲೇ ಅವರಿಂದ ತರಭೇತಿ ಪಡೆದ ಅನೇಕರು ಸೇನೆ ಮತ್ತು ಪೋಲೀಸ್ ಕೆಲವನ್ನು ಗಿಟ್ಟಿಸಿಕೊಂಡಿದ್ದರೆ, ಇಂದಿಗೂ ಸುಮಾರು 8-10 ಹುಡುಗರ ಸಂಪೂರ್ಣ ಜವಾಬ್ಧಾರಿಯನ್ನು ಜ್ಯೋತಿ ರಾಜ್ ನಿಭಾಯಿಸುತ್ತಿರುವುದು ಅತ್ಯಂತ ಶ್ಲಾಘನಿಯವಾಗಿದೆ.

ಫೆಬ್ರವರಿ 28, 2018 ರಂದು ವಿಶ್ವವಿಖ್ಯಾತ ಜೋಗದ ಜಲಪಾತಕ್ಕೆ ಬಂದಿದ್ದ ಯುವಕರ ತಂಡವು ಕಾಲು ಜಾರಿ ಜೋಗದ ಪ್ರಪಾತಕ್ಕೆ ಬಿದ್ದು ಹೋದಾಗ, ಅವರ ಶವದ ಪತ್ತೆಗಾಗಿ ಪೋಲಿಸರು ಜ್ಯೋತಿರಾಜ್ ಅವರ ಸಹಾಯವನ್ನು ಕೇಳಿಕೊಳ್ಳುತ್ತಾರೆ. ಸುಮಾರು800-1000 ಅಡಿಗಳಷ್ಟು ಎತ್ತರವಿರುವ ಜೋಗದ ಜಲಪಾತವನ್ನು ಅದಾಗಲೇ ೬-೮ ಬಾರಿ ಹತ್ತಿ ಇಳಿದಿದ್ದ ಕೋತಿರಾಜ್ ಅದಕ್ಕೆ ಒಪ್ಪಿಕೊಂಡು ಆ ಕೆಲಸದಲ್ಲಿ ನಿರತನಾಗಿ ಆ ಹುಡುಗನ ಶವವನ್ನು ಪತ್ತೆ ಹಚ್ಚಿ ತನ್ನ ಹೆಗಲಮೇಲೆ ಹಾಕಿಕೊಂಡು ಮೇಲೇರುತ್ತಿರುವಾಗ ಸಡಿಲವಾಗಿದ್ದ ಬಂಡೆ ಕಲ್ಲೊಂದು ಜ್ಯೋತಿರಾಜ್ ತಲೆಯ ಮೇಲೆ ಬಿದ್ದು ಎಲ್ಲರೂ ನೋಡ ನೋಡುತ್ತಿದ್ದಂತೆಯೇ ಕೈ ಜಾರಿ ಜ್ಯೋತಿರಾಜ್ ಪ್ರಪಾತಕ್ಕೆ ಜಾರಿ ಬೀಳುವ ಮೂಲಕ ಎಲ್ಲರೂ ಜ್ಯೋತಿರಾಜ್ ಸತ್ತನೆಂದೇ ಭಾವಿಸಿದ್ದಾಗ ಅಷ್ಟೆಲ್ಲಾ ಅಪಘಾತಗಳ ನಡುವೆಯೂ ಬದುಕುಳಿದ ಜ್ಯೋತಿರಾಜ್ ನನ್ನು ಚಿಕಿತ್ಸೆಗಾಗಿ ಆಸ್ಪತೆಗೆ ಸೇರಿಸಲಾಗುತ್ತದೆ. ಸುಮಾರು 9 ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಕಳೆದ 57 ಕೆಜಿ ತೂಕವಿದ್ದ ಜ್ಯೋತಿರಾಜ್, ಆಸ್ಪತ್ರೆಯಿಂದ ಹೊರಬರುವಷ್ಟರಲ್ಲಿ 96 ಕೆಜಿಯಷ್ಟು ದಪ್ಪವಾಗಿರುತ್ತಾರೆ.

ತನ್ನ ಕರ್ಮಭೂಮಿ ಚಿತ್ರದುರ್ಗದ ಕೋಟೆಯನ್ನು ಸರ್ಕಾರ ಅಭಿವೃದ್ಧಿ ಮಾಡುತ್ತಿಲ್ಲವ್ವಾದರಿಂದ ಅದಕ್ಕಾಗಿ ತನ್ನಿಂದೇನಾದರೂ ಸಹಾಯ ಮಾಡಲೇ ಬೇಕೆಂದು ನಿರ್ಧರಿಸಿ ದುಬೈನಲ್ಲಿರುವ ಪ್ರಪಂಚದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾ ಮತ್ತು ಅಮೆರಿಕಾದ ವೆನೆಜುಲ್ಲಾದಲ್ಲಿರುವ ಈ ಏಂಜಲ್ ಫಾಲ್ಸ್ ರುದ್ರ ರಮಣೀಯವಾದ ಮತ್ತು ಜಗತ್ತಿನ ಅತ್ಯಂತ ಕಡಿದಾದ ಜಾರುವ ಬಂಡೆಗಳಿರುವ ಜಲಪಾತವನ್ನು ಏರುವ ಮೂಲಕ ಬರುವ ಹಣದಲ್ಲಿ ಚಿತ್ರದುರ್ಗದ ಅಭಿವೃದ್ಧಿ ಮಾಡುತ್ತೇನೆೆ ಎಂಬ ಸಾಹಸಕ್ಕೆ ಕೈ ಹಾಕಿದ್ದರು. ದುರಾದೃಷ್ಟವಷಾತ್ ಅವರ ದೇಹದ ತೂಕ ಹೆಚ್ಚಾಗಿರುವ ಕಾರಣ ಈ ಸಾಹಸದಲ್ಲಿ ಪಾಲ್ಕೊಳ್ಳುವುದು ಪ್ರಾಣಕ್ಕೆ ಅಪಾಯ ಎಂದು ಅಲ್ಲಿನ್ನವರು ಸೂಚಿಸಿರುವ ಕಾರಣ ದೇಹದ ತೂಕವನ್ನು ಇಳಿಸಿ ಎಲ್ಲವೂ ಸುಗಮ ಎಂದು ಕೊಳ್ಳುತ್ತಿರುವಾಗಲೇ ಕೊರೋನಾ ಮಹಾಮಾರಿ ವಕ್ಕರಿಸಿ ಅವರ ಆಸೆಗೆ ತಣ್ಣಿರೆರೆಚಿದೆ.

azadಆಯುರ್ವೇದದ ಚಿಕಿತ್ಸೆ ಮತ್ತು ವ್ಯಾಯಾಮಗಳ ಮೂಲಕ ತೂಕ ಇಳಿಸಿಕೊಂಡು ಖಂಡಿತವಾಗಿಯೂ ಎಂಜಲ್ ಫಾಲ್ಸ್ ಏರಿಯೇ ತೀರುತ್ತೇನೆ ಎಂಬ ಭರವಸೆಯೊಂದಿಗೆ ತಮ್ಮ ಶಿಷ್ಯಂದಿರಿಗೆ ಪ್ರತಿದಿನವೂ ತರಭೇತಿ ನೀಡುತ್ತಾ ಪ್ರತೀ ಭಾನುವಾರ ದುರ್ಗದ ಪ್ರವಾಸಿಗರಿಗೆ ತಮ್ಮ ಸಾಹಸವನ್ನು ತೋರಿಸುತ್ತಾ ಅವರು ಕೊಡುವ ಅಲ್ಪ ಸ್ವಲ್ಪ ಹಣದಲ್ಲಿ ತಾವೂ ಮತ್ತು ತಮ್ಮ ಶಿಷ್ಯಂದಿರ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಸುದೀಪ್ ದರ್ಶನ್, ಶಾರೂಖ್ ಖಾನ್ ಅವರುಗಳು ಕೇವಲ ಸಿನಿಮಾದ ಹೀರೋಗಳಷ್ಟೇ. ಭಗತ್ ಸಿಂಗ್ ಮತ್ತು ಚಂದ್ರಶೇಖರ ಆಜಾದ್ ಅವರಂತಹವರು ಈ ದೇಶದ ನಿಜವಾದ ಹೀರೋಗಳಾಗಿದ್ದು ಅವರೇ ನನ್ನ ಸ್ಪೂರ್ತಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಜ್ಯೋತಿರಾಜ್ ನನ್ನ ಜೀವಮಾನದಲ್ಲಿ ಖಂಡಿತವಾಗಿಯೂ ತನ್ನ ತಾಯ್ನಾಡಾದ ಭಾರತಕ್ಕೂ ಮತ್ತು ತನಗೆ ಆಶ್ರಯ ನೀಡಿದ ಕರ್ನಾಟಕ ಮತ್ತು ತನ್ನ ಕರ್ಮ ಭೂಮಿ ಚಿತ್ರದುರ್ಗಕ್ಕೆ ಕೀರ್ತಿ ತಂದೇ ತರುತ್ತೇನೆ ಎಂದು ಹೇಳುವಾಗ ಅವರ ದಿಟ್ಟ ನುಡಿಗಳು ಮತ್ತು ಹೊಳೆಯುವ ಕಣ್ಗಳು ನಿಜಕ್ಕೂ ನಮ್ಮ ನಿಮ್ಮಂತಹವರಿಗೆ ಪ್ರೇರಣೆ ನೀಡುತ್ತದೆ.

koti_jogಸುಮಾರು 830 ಅಡಿ ಎತ್ತರವಿರುವ ಕರ್ನಾಟಕದ ಅತಿ ದೊಡ್ಡದಾದ ಜೋಗ ಜಲಪಾತವನ್ನು ನೀರಿನ ಹರಿವಿಗೆ ವಿರುದ್ಧವಾಗಿ ಏರಿದ ಏಕೈಕ ವ್ಯಕ್ತಿ. ಯಾವುದೇ ಸಾಧನಗಳನ್ನು ಬಳಸದೇ ಕೇವಲ 15 ಸೆಕೆಂಡುಗಳಲ್ಲಿ ಹುಬ್ಬಳ್ಳಿಯ ಮೂರುಸಾವಿರ ಮಠದ ಗಡಿಯಾರ ಗೋಪುರವನ್ನು ಹತ್ತಿದಂತಹ ಅಂತಾರಾಷ್ಟ್ರೀಯ ರಾಕ್ಕ್ಲೈಂಬರ್ ಸಿ.ಎಂ.ಪ್ರವೀಣ್ರಿಂದ ತರಬೇತಿ ಪಡೆದಿರುವಂತಹ ಸಾಹಸಿ ಕೋತಿರಾಜ್ ಅವರು ಅತೀ ಶೀಘ್ರದಲ್ಲಿಯೇ ವೆನಿಜ್ಯೂವೆಲಾದ ಏಂಜಲ್ ಫಾಲ್ಸ್ ಏರುವ ಮೂಲಕ ಅವರಿಗೆ ಅಂತರಾಷ್ಟ್ರೀಯ ಮನ್ನಣೆ ಸಿಗುವ ಮೂಲಕ ಭಾರತದ ವಿಜಯ ಪತಾಕೆ ವಿಶ್ವಾದ್ಯಂತ ಹರಡಲಿ ತನ್ಮೂಲಕ ಜ್ಯೋತಿರಾಜ್ ಅವರ ಕನಸೆಲ್ಲಾ ನನಸಾಗಲಿ ಮತ್ತು ನಮ್ಮ ಇಂದಿನ ಯುವಜನತೆಗೆ ಪ್ರೇರಣೆಯಾಗಲಿ ಎಂದು ಹಾರೈಸೋಣ ಅಲ್ಲವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s