ನಮ್ಮ ಸಂಸ್ಕಾರ ಮತ್ತು ಸಂಪ್ರದಾಯಗಳೇ ಒಂದು ರೀತಿಯ ಆಪ್ಯಾಯಮಾನವಾದದ್ದು. ಅದರ ಬಗ್ಗೆ ಅದೆಷ್ಟು ಹೊಗಳಿದರೂ ಮನಸ್ಸಿಗೆ ತೃಪ್ತಿನೇ ಅಗೋದಿಲ್ಲ. ಮೊನ್ನೆ ವಾರಾಂತ್ಯದಲ್ಲಿ ಸಂಕ್ರಾಂತಿ ಎಳ್ಳು ಬೀರಲು ನಮ್ಮ ಅತ್ತೆ ಅರ್ಥಾತ್ ಸೋದರತ್ತೆ ಮನೆಗೆ ಹೋಗಿದ್ದೆವು. ಒಂದೇ ಊರಿನಲ್ಲಿ ಕೆಲವೇ ಕಿಮೀ ದೂರದಲ್ಲಿಯೇ ಇದ್ದರೂ ಪದೇ ಪದೇ ಅತ್ತೆ ಮನೆಗೆ ಹೋಗಲು ಸಾಧ್ಯವಾಗದಿದ್ದರೂ, ವರ್ಷಕ್ಕೆರಡು ಬಾರಿ ತಪ್ಪದೇ ಅತ್ತೇ ಮನೆಗೆ ಹೋಗಿ ಅವರ ಅದರಾತಿಧ್ಯವನ್ನು ಸವಿದು ಬಂದೇ ಬಿಡುತ್ತೇವೆ. ಒಂದು ಸಂಕ್ರಾಂತಿಗೆ ಎಳ್ಳು ಬೀರುವುದಕ್ಕಾದರೆ, ಎರಡನೆಯದು ಗೌರಿ ಹಬ್ಬಕ್ಕೆ ತವರು ಮನೆಯ ಅರಿಶಿನ ಕುಂಕುಮದ ಬಾಗಿಣ ಕೊಡಲು ತಪ್ಪದೇ ಹೋಗುತ್ತೇವೆ. ಕೌಟುಂಬಿಕವಾಗಿ ಈ ರೀತಿಯ ಸಂಬಂಧಗಳನ್ನು ಬೆಸೆಯಲೆಂದೇ ಸುಂದರವಾಗಿ ಹಬ್ಬ ಹರಿದಿನಗಳನ್ನು ಸಂಪ್ರದಾಯದ ರೂಪದಲ್ಲಿ ರೂಢಿಗೆ ತಂದಿದ್ದಾರೆ ನಮ್ಮ ಹಿರಿಯರು.
ನಮ್ಮ ತಂದೆಯ ಮೊದಲನೇ ತಂಗಿ ಗಿರಿಜಾಂಬ ನಮ್ಮೆಲ್ಲರ ಪ್ರೀತಿಯ ಗಿರಿಜತ್ತೆ ಬಹಳ ನಾಜೂಕಿಗೆ ಪ್ರಖ್ಯಾತಿ. ವಯಸ್ಸು 70+ ಆದರೂ ಚುರುಕಿನಲ್ಲಿ ಇನ್ನೂ 20+ ಹುಡುಗಿಯರೂ ನಾಚಬೇಕು ಎನ್ನುವಷ್ಟು ಸರ ಸರನೇ ಇಂದಿಗೂ ಓಡಾಡುತ್ತಾರೆ. ಆಕೆ ಇದ್ದ ಕಡೆ ಎಲ್ಲವೂ ಅಚ್ಚು ಕಟ್ಟು. ರಂಗೋಲಿ, ಹಾಡು ಹಸೆ ಎಲ್ಲವೂ ಅಮ್ಮನಿಂದ ಅರ್ಥಾತ್ ನಮ್ಮ ಅಜ್ಜಿಯಿಂದ ಬಳುವಳಿ ಪಡೆದು ಕೊಂಡಿರುವುದರಿಂದ ನಮ್ಮ ಮನೆಯ ಬಹುತೇಕ ಸಭೆ ಸಮಾರಂಭಗಳಲ್ಲಿ ಆಕೆಯದೇ ಸಾರಥ್ಯ ಎಂದು ಹೆಚ್ಚಿಗೆ ಹೇಳಬೇಕಿಲ್ಲ. ಸದಾಕಾಲವೂ ನೆನಪಿನಲ್ಲಿ ಇರುವಂತಹ ವಿಭಿನ್ನವಾದ ಉಡುಗೊರೆಗಳನ್ನು ಕೊಡುವುದರಲ್ಲೂ ನಮ್ಮ ಅತ್ತೆ ಎತ್ತಿದ ಕೈ. ಈಗ ಅದನ್ನೇ ಅವರ ಮಕ್ಕಳೂ ಮುಂದುವರೆಸಿಕೊಂಡು ಹೋಗುತ್ತಿರುವುದು ಮೆಚ್ಚಿಗೆಯ ಸಂಗತಿ. ಇನ್ನು ನಮ್ಮತ್ತೆ ಮನೆಗೆ ಹೊದರಂತೂ ಅವರ ಆದರಾತಿಥ್ಯಗಳಿಗೆ ಮಾರುಹೋಗದವರೇ ಇಲ್ಲ. ಇನ್ನು ಅಡುಗೆಯಲ್ಲಂತೂ ಆಕೆ ಸಾಕ್ಷಾತ್ ಅನ್ನಪೂರ್ಣೆಯೇ ಸರಿ.
ಸುತ್ತೀ ಬಳಸೀ ಪೀಠಿಕೆ ಹಾಕುವ ಬದಲು ಈಗ ನೇರವಾಗಿ ಶೀರ್ಷಿಕೆಗೆ ಬಂದು ಬಿಡ್ತೀನಿ. ವರ್ಷವಿಡೀ ಅಯಾಯಾ ಹವಾಗುಣಕ್ಕೆ ಅನುಗುಣವಾಗಿ ನಮ್ಮ ಅತ್ತೆಮನೆಯ ಜಾಡಿಯಲ್ಲಿ ಹುಣಸೇ ತೊಕ್ಕು, ಮಾವಿನಕಾಯಿ, ಹೇರಳೇಕಾಯಿ, ನೆಲ್ಲಿಕಾಯಿ ಕಡೆಗೆ ಯಾವುದೂ ಇಲ್ಲದಿದ್ದರೆ ನಿಂಬೇಕಾಯಿ ಉಪ್ಪಿನಕಾಯಿ ಯಂತೂ ಇದ್ದೇ ಇರುತ್ತದೆ. ಇನ್ನು ನಮ್ಮತ್ತೆ ಮಾಡುವ ನೆಲ್ಲಿಕಾಯಿ ಜಾಮ್ ಮತ್ತು ಮಾವಿನಹಣ್ಣಿನ ಶೀಕರಣೆಯನ್ನು ವರ್ಣಿಸುವುದಕ್ಕಿಂತಲೂ ತಿಂದರೇನೇ ಮಜ. ಅಂತಹ ಅತ್ತೆ ಮನೆಗೆ ಹೋದಾಗಾ ಅವರು ಕೊಡುವ ತಿಂಡಿ, ಬಡಿಸುವ ಊಟ ಎಲ್ಲದರಲ್ಲೂ ಅಚ್ಚು ಕಟ್ಟು. ತಟ್ಟೆಯಲ್ಲಿ ಉಪ್ಪಿಟ್ಟು ಕೊಡಬೇಕಾದರೂ ಅದನ್ನೂ ಒಂದು ಬಟ್ಟಲಿನಲ್ಲಿ ಬೋರಲು ಹಾಕಿ ಅದರ ಮೇಲೆ ಅಲಂಕಾರಿಕವಾಗಿ ಗೋಡಂಬಿ ದ್ರಾಕ್ಷಿ ಇಟ್ಟು,ಕೊತೆಗೆ ಒಂದೆರಡು ತರಹದ ಉಪ್ಪಿನ ಕಾಯಿ, ಇಲ್ಲವೇ ಜಾಮ್ ಹಾಕಿ ಅದರ ಪಕ್ಕದಲ್ಲಿ ಸಣ್ಣಗೆ ಹೆಚ್ಚಿದ ಬಾಳೇ ಹಣ್ಣು ಇಟ್ಟು ಬಹಳ ಅಚ್ಚುಕಟ್ಟಾಗಿ ಜೋಡಿಸಿ ತಿನ್ನುವವರಿಗೆ ಮುದ ನೀಡುವಂತೆ ಕೊಡುವುದು ನಮ್ಮ ಅತ್ತೆಯ ವಿಶೇಷತೆ. ದ್ವಾಪರಯುಗದಲ್ಲಿ ಪಾಂಡವರು ಅರಣ್ಯವಾಸದಲ್ಲಿ ಇದ್ದಾಗ ದ್ರೌಪತಿ ಸೂರ್ಯ ದೇವರನ್ನು ಪ್ರಾರ್ಥಿಸಿ ಅಕ್ಷಯ ಪಾತ್ರೆಯನ್ನು ಪಡೆದು ಎಲ್ಲರಿಗೂ ತೃಪ್ತಿಯಾಗುವಷ್ಟು ಊಟವನ್ನು ಬಡಿಸುತ್ತಿದ್ದಂತೆ ನಮ್ಮ ಆಜ್ಜಿ ಮತ್ತು ನಮ್ಮ ಅತ್ತೆಗೂ ಆ ಕಲೆ ಕರಗತವಾಗಿ ಬಿಟ್ಟಿದೆ. ಅತ್ತೆಯ ಮತ್ತೊಂದು ವಿಶೇಷತೆ ಏನಂದರೆ, ಆಕೆ ತಾನು ಮಾಡಿದ ಅಡುಗೆಯಲ್ಲೇ ಎಷ್ಟು ಜನರಿಗೆ ಬೇಕಾದರೂ ತೃಪ್ತಿಯಾಗಿ ಬಡಿಸುತ್ತಾರೆ. ಅದರಲ್ಲೂ ಮೊಸರಂತೂ ಆಕೆಯ ಕೈಯ್ಯಲ್ಲಿ ಅಕ್ಷಯವಾಗುತ್ತದೆ. ನಮ್ಮ ಮನೆಯಲ್ಲಿ ನಮ್ಮಮ್ಮ ಒಂದು ದೊಡ್ಡ ಪಾತ್ರೆಯಲ್ಲಿ ಮಜ್ಜಿಗೆ ಮಾಡಿಟ್ಟರೂ ಇರುವ ಆರು ಮಂದಿಗೆ ಸಾಕಾಗುವುದಿಲ್ಲ. ಆದರೆ ಅದೇ ನಮ್ಮ ಅತ್ತೆ ಒಂದು ಸಣ್ಣ ಪಾತ್ರೆಯಲ್ಲಿ ಗಟ್ಟಿ ಮೊಸರಿನಲ್ಲಿ ಹತ್ತು ಜನರಿಗೆ ಸಾಕಾಗುವಷ್ಟನ್ನು ಹೇಗೆ ಉಣಬಡಿಸುತ್ತಾರೆ ಎಂಬುದು ಇಂದಿಗೂ ನನಗೆ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಹಾಗಾಗಿ ನಮ್ಮ ಅತ್ತೆ ಮನೆಗೆ ಹೊದಾಗಲೆಲ್ಲಾ ಅತ್ತೆ ಏನೇ ಕೊಟ್ಟರೂ ಅದರ ಜೊತೆ ಒಂದು ಬಟ್ಟಲು ಗಟ್ಟಿ ಮೊಸರನ್ನು ಈ ಸೋದರಳಿಯನಿಗೆ ಕೊಡುವುದನ್ನು ಮರೆಯುವುದೇ ಇಲ್ಲ.
ನಿಜ ಹೇಳಬೇಕು ಎಂದರೆ ನನಗೆ ಮೊಸರನ್ನು ತಿನ್ನಲು ಹೇಳಿ ಕೊಟ್ಟಿದ್ದೇ ನಮ್ಮತ್ತೆ. ಹಾಗಾಗಿ ಇಂದಿನ ಲೇಖನದ ಶೀರ್ಷಿಕೆಗೆ ನಮ್ಮ ಅತ್ತೆಯೇ ಕಾರಣೀಭೂತರು. ನಾನು ಚಿಕ್ಕವನಿದ್ದಾಗ ಹಾಲನ್ನ ತಿನ್ನುವುದು ಮತ್ತು ಮಲಗುವಾಗ ಬಾಯಲ್ಲಿ ಬೆರಳು ಚೀಪಿಕೊಂಡು ನಿದ್ದೆ ಮಾಡುವುದು ನನ್ನ ರೂಡಿಯಾಗಿತ್ತು. ಮನೆಯವರೆಲ್ಲರೂ ಮಜ್ಜಿಗೆ ಇಲ್ಲವೆ ಮೊಸರನ್ನ ಊಟ ಮಾಡಿದರೆ ನನಗೆ ಮಾತ್ರ ಹಾಲನ್ನವೇ ಇರಬೇಕಿತ್ತು. ಆ ಹಾಲನ್ನಕ್ಕೆ ಒಂದು ತೊಟ್ಟು ಮಜ್ಜಿಗೆಯಾಗಲೀ, ಮೊಸರಾಗಲೀ ಸೋಕಿದರೂ ಸಾಕು ನನಗೆ ವಾಂತಿಯೇ ಬರುತ್ತಿತ್ತು. ಆರಂಭದಲ್ಲಿ ಚಿಕ್ಕ ಹುಡುಗ, ದೊಡ್ಡವನಾದ ಮೇಲೆ ಸರಿ ಹೋಗಬಹುದು ಎಂದು ನಮ್ಮ ಪೋಷಕರೂ ಸುಮ್ಮನಾದರೂ, ಕ್ರಮೇಣ ಈ ಎರಡೂ ಚಟಗಳನ್ನು ಬಿಡಿಸಲು ಹರ ಸಾಹಸ ಮಾಡಿದರೂ ಸಾಧ್ಯವಾಗಿರಲೇ ಇಲ್ಲ.
ನನಗೆ ಐದಾರು ವರ್ಷಗಳಿದ್ದಾಗ ನನಗೆ ಅದ್ದೂರಿಯಾಗಿ ಚೌಲ ಮಾಡಿದಾಗ, ಯಥಾ ಪ್ರಕಾರ ನಮ್ಮ ಗಿರಿಜಾ ಅತ್ತೆ ನನಗೊಂದು ಚೆಂದದ ಟ್ರಂಕ್ (ಅಂದೆಲ್ಲಾ ಶಾಲೆಗೆ ಚೀಲದ ಬದಲು ಟ್ರಂಕ್ ತೆಗೆದುಕೊಂಡು ಹೋಗುವುದು ಹೆಮ್ಮೆಯ/ಪ್ರತಿಷ್ಠೆಯ ಸಂಗತಿಯಾಗಿತ್ತು) ಉಡುಗೊರೆಯಾಗಿ ಕೊಟ್ಟು, ನೋಡು ಇಂದು ನಿನಗೆ ಶಾಸ್ತ್ರೋಕ್ತವಾಗಿ ಪೇಜಾವರ ಶ್ರೀಗಳ ಸಮ್ಮುಖದಲ್ಲಿ ಇಷ್ಟೆಲ್ಲಾ ಜನರ ಮಧ್ಯೆ ಅಷ್ಟೋಂದು ಖರ್ಚು ಮಾಡಿ ನಿಮ್ಮ ಅಪ್ಪಾ ಅಮ್ಮಾ ಸಮಾರಂಭ ಏರ್ಪಡಿಸಿ, ಚೌಲ ಮತ್ತು ಅಕ್ಷರಾಭ್ಯಾಸ ಮಾಡಿಸಿದ್ದಾರೆ. ಹಾಗಾಗಿ ನೀನೀಗ ದೊಡ್ಡವನಾಗಿದ್ದೀಯಾ. ಶಾಲೆಗೆ ಈ ಟ್ರಂಕ್ನಲ್ಲಿ ಪುಸ್ತಕ ತೆಗೆದುಕೊಂಡು ಹೋಗಬೇಕಾದರೆ ಶಕ್ತಿ ಬೇಕು. ಕೇವಲ ಹಾಲಾನ್ನ ತಿನ್ನುವುದರಿಂದ ಶಕ್ತಿ ಬರುವುದಿಲ್ಲ ಹಾಗಾಗಿ ಇಂದಿನಿಂದ ನೀನು ಹಾಲನ್ನ ತಿನ್ನುವುದನ್ನು ಬಿಡುವುದರ ಜೊತೆಗೆ, ಮಲಗುವಾಗ ಬೆರಳು ಚೀಪುವುದನ್ನೂ ಬಿಟ್ಟು ಬಿಡಬೇಕು ಎಂದು ಹೇಳಿದ್ದನ್ನು ಕೇಳಿ, ಅಂದು ಅತ್ತೆಯ ಮಾತಿಗೆ ಓಗೊಟ್ಟು ಮಜ್ಜಿಗೆ ಇಲ್ಲವೇ ಮೊಸರನ್ನ ತಿನ್ನುವುದನ್ನು ಅಭ್ಯಾಸ ಮಾಡಿಕೊಂಡಿದ್ದು ಇಂದಿಗೂ ನಿರಂತರವಾಗಿ ಎಲ್ಲಾ ತಿಂಡಿಗಳ ಜೊತೆ ಮೊಸರು ಖಡ್ಡಾಯವಾಗಿ ಇರಲೇ ಬೇಕಾಗಿದೆ. ಅದಕ್ಕಿಂತಲೂ ವಿಪರ್ಯಾಸವೆಂದರೆ, ಈಗ ಅಂದಿಗಿಂತ ತದ್ವಿರುದ್ಧವಾಗಿ ಹಾಲನ್ನ ತಿಂದರೆನೇ ವಾಕರಿಕೆಯೇ ಬರುವಂತಾಗಿದೆ. ಅತ್ತೆಯ ಅಕ್ಕರೆಯ ಮಾತುಗಳು ಮನಸ್ಸಿಗೆ ತಾಕಿ ಹಾಲನ್ನ ತಿನ್ನುವುದನ್ನು ಬಿಟ್ಟರೂ ಹೈಸ್ಕೂಲ್ ಓದುವವರೆಗೂ ಬೆರಳು ಚೀಪುವುದನ್ನು ಮುಂದುವರಿಸಿ ಕಾಲ ಕ್ರಮೇಣ ಬೇಸಿಗೆ ಸಮಯದಲ್ಲಿ ವೇದ ಶಿಬಿರ ಮತ್ತು ಸಂಘದ ಶಿಬಿರಗಳಿಗೆ ವಾರಗಟ್ಟಲೆ ಹೋಗುತ್ತಿದ್ದರಿಂದ ಎಲ್ಲಿ ಆವಮಾನವಾಗುತ್ತದೆಯೋ ಎಂದು ಇಷ್ಟ ಪಟ್ಟು, ಕಷ್ಟ ಪಟ್ಟು ಬೆರಳು ಚೀಪುವ ದುರಾಭ್ಯಾಸವನ್ನು ಬಿಟ್ಟದ್ದು ನೆನಸಿಕೊಂಡಾಗ ಮನಸ್ಸಿನಲ್ಲಿ ಅಪರಾಧಿ ಭಾವ ಕಾಡುವುದರ ಜೊತೆಗೆ ಹಾಗೇ ಹುಳ್ಳನೆ ನಗೆ ಮೂಡುತ್ತದೆ.
ಅರೇ ಎಲ್ಲರ ಮನೆಯಲ್ಲೂ ಇಂತಹ ಅತ್ತೆಯರು ಇರುತ್ತಾರೆ. ಇದರಲ್ಲಿ ಏನು ಮಹಾ ವಿಶೇಷ ಅಂತೀರಾ? ಇಲ್ಲಾ ನಮ್ಮ ಅತ್ತೆಯ ವಿಶೇಷಣಗಳನ್ನು ಹೇಳುತ್ತಾ ಹೋದರೆ ಪುಟಗಟ್ಟಲೇ ಬರೆಯಬೇಕಬಹುದು. ನಮ್ಮದು ಸಂಪ್ರದಾಯಸ್ಥ ಕುಟುಂಬ ಮನೆಯ ತುಂಬಾ ಮಕ್ಕಳು. ಮನೆಯಲ್ಲಿ ಕಿತ್ತು ತಿನ್ನುವ ಬಡತನವಾದ್ದರಿಂದ ಮನೆಯ ಗಂಡು ಮಕ್ಕಳು ಪಟ್ಟಣಗಳಿಗೆ ಹೋಗಿ ವಾರಾನ್ನ ಮಾಡುತ್ತ ತಮ್ಮ ವಿದ್ಯಾಭ್ಯಾಸ ಮುಂದುವರೆಸಿದರೆ, ಮನೆಯ ಹೆಣ್ಣು ಮಗಳಾದ ನಮ್ಮ ಅತ್ತೆಯನ್ನು ಊರಿನಲ್ಲೇ ಲೋಯರ್ ಸೆಕೆಂಡರಿ ಮುಗಿಸಿದಾಗ ಹೈಸ್ಕೂಲಿಗೆ ದೂರದ ಊರಿಗೆ ಹೋಗ ಬೇಕಾದ್ದರಿಂದ ಕಳುಹಿಸದ ಕಾರಣ ಮುಂದೆ ಓದಲಾಗಲಿಲ್ಲ. ಆದರೆ ಮನೆಯಲ್ಲಿಯೇ ಕುಳಿತು ಹಾಡು ಹಸೆ ಸಂಪ್ರದಾಯಗಳನ್ನು ನಮ್ಮ ಅಜ್ಜಿಯರಿಂದ ಕಲಿತುಕೊಂಡಿದ್ದರ ಜೊತೆಗೆ, ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮ, ಭಗವದ್ಗೀತೆ, ವಿವಿಧ ದೇವರುಗಳ ಸುಪ್ರಭಾತಗಳು ಆಕೆಯ ನಾಲಿಗೆ ತುದಿಯಲ್ಲಿದೆ. ನಂತರ ಮದುವೆಯ ವಯಸ್ಸು ಬಂದಾಗ ನೋಡಲು ಸುರದ್ರೂಪವತಿಯಾಗಿದ್ದರೂ ಕಡಿಮೆ ಓದಿನ ನೆಪವೊಡ್ಡಿ ಒಂದೆರಡು ಸಂಬಂಧಗಳು ಕೂಡಿ ಬರುವುದಿಲ್ಲವಾದರೂ, ಆಗಿನ ಕಾಲಕ್ಕೇ ಇಂಜಿನಿಯರಿಂಗ್ ಓದಿದ್ದವರು ಇದೇ ಕಾರಣ ನೀಡಿ ಸಂಬಂಧ ಬೇಡ ಎಂದು ಹೋಗಿದ್ದವರೇ ಪುನಃ ಕೆಲ ತಿಂಗಳುಗಳ ನಂತರ ಬಂದು ಮದುವೆ ಆಗಿದ್ದು ಅಂದಿನ ಕಾಲದಲ್ಲಿ ವಿಶೇಷವಾಗಿತ್ತು.
ಹಾಗೆ ತುಂಬು ಕುಟುಂಬದ ಸೊಸೆಯಾಗಿ ಹೋದ ನಮ್ಮತ್ತೆ ಕೆಲವೇ ದಿನಗಳಲ್ಲಿ ಮಾವನವರಿಗೆ ಮುದ್ದಿನ ಸೊಸೆಯಾಗಿದ್ದಲ್ಲದೇ, ಮಾವನೊಂದಿಗಿನ ಸುಂದರ ದಾಂಪತ್ಯದ ಕುರುಹಾಗಿ ಮುದ್ದಾದ ಮೂರು ಹೆಣ್ಣು ಮಕ್ಕಳ ತಾಯಿಯಾಗುತ್ತಾರೆ. ತಾನು ಹೆಚ್ಚು ಓದದಿದ್ದರೇನಂತೆ, ತನ್ನ ಎಲ್ಲಾ ಆಸೆಗಳನ್ನು ತನ್ನ ಮಕ್ಕಳ ಮೂಲಕ ಆ ಕೊರತೆಯನ್ನು ನೀಗಿಸಲು ಫಣ ತೊಟ್ಟ ಆಕೆ, ಮೊದಲ ಮಗಳನ್ನು ಇಂಜಿನಿಯರ್, ಎರಡನೇ ಮಗಳನ್ನು ಪಿ.ಹೆಚ್.ಡಿ. ಮಾಡಿಸಿದರೆ, ಇನ್ನು ಮೂರನೇಯವಳಿಗೆ ಎಂ.ಎಸ್ಸಿಯ ಜೊತೆ ಸಂಗೀತ ಮತ್ತು ನೃತ್ಯಗಳಲ್ಲಿ ವಿದ್ವತ್ ಮಾಡಿಸುವ ಮೂಲಕ ತಮ್ಮ ಮೂವರು ಮಕ್ಕಳಿಗೂ ನಮ್ಮ ಸತ್ ಸಂಪ್ರದಾಯ ಮತ್ತು ಸಂಸ್ಕಾರಗಳನ್ನು ಕಲಿಸಿ ಅವರ ಮಕ್ಕಳಿಗೆ ಅನುರೂಪವಾದ ಅಳಿಯಂದಿರು ಎನ್ನುವುದಕ್ಕಿಂತಲೂ ಹೆತ್ತ ಮಕ್ಕಳೇ ಎನ್ನುವಷ್ಟು ಜತನದಿಂದ ನೋಡಿಕೊಳ್ಳುವವರೊಂದಿಗೆ ಮದುವೆ ಮಾದಿಕೊಟ್ಟಿದ್ದಾರೆ.
ಈಗ ನಮ್ಮ ಅತ್ತೆಯ ಮಕ್ಕಳೆಲ್ಲಾ ದೇಶ ವಿದೇಶಗಳಲ್ಲಿ ನೆಲೆಸಿರುವ ಕಾರಣ ಅವರ ಮಕ್ಕಳ ಬಾಣಂತನಕ್ಕೆಂದು ಅಮೇರಿಕಾ, ಸಿಂಗಾಪುರಕ್ಕೆ ಹೋಗಿ ಬರಲು ಆರಂಭಿಸಿದ ನಮ್ಮತ್ತೆ ಈಗ ಬೆಂಗಳೂರು ಮೈಸೂರಿಗೆ ಹೋಗುವ ಹಾಗೆ ಮೂರು ತಿಂಗಳು ಸಿಂಗಾಪುರ ಆರು ತಿಂಗಳು ಅಮೇರಿಕಾಗೆ ಹೋಗಿ ಹೋಗಿಬರುವುದನ್ನು ರೂಢಿ ಮಾಡಿಕೊಂಡಿದ್ದಾರೆ. ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎನ್ನುವಂತೆ, ಎಲ್.ಎಸ್. ಓದಿದ ನಮ್ಮತ್ತೆ ಇಂದು ನೋಡಿರದೇ ಇರದ ಪ್ರದೇಶಗಳೇ ಇಲ್ಲಾ ಎಂದರೂ ತಪ್ಪಾಗದು. ಅದಕ್ಕೇ ನಾನು ಅತ್ತೇ ಸಾಮಾನ್ಯವಾಗಿ ನಾವೆಲ್ಲಾ foreign visit ಮಾಡಿದ್ರೇ ನೀವು ಮಾತ್ರಾ INDIA visit ಮಾಡ್ತೀರಿ ಅಂತ ತಮಾಷೆ ಮಾಡ್ತಾ ಇರ್ತೀನಿ. ಹಾಗೆ ಅತ್ತೆ ಮಾವ ದೇಶ ವಿದೇಶಗಳಲ್ಲಿ ಸುತ್ತಾಡುವುದರಿಂದಾಗಿಯೇ ವಿದೇಶಗಳಲ್ಲಿಯೇ ಹುಟ್ಟಿಬೆಳದಿರುವ ಅವರ ಐದೂ ಮೊಮ್ಮಕ್ಕಳು ಕನ್ನಡ ನಾಡಿನಲ್ಲಿ ಹುಟ್ಟಿರುವರಿಗಿಂತಲೂ ಸ್ಪಷ್ಟವಾಗಿ ಕನ್ನಡ ಮಾತನಾಡುವುದಲ್ಲದೇ, ನಮ್ಮ ಸಂಸ್ಕಾರ ಮತ್ತು ಸಂಸ್ಕೃತಿಗಳನ್ನು ರೂಡಿಸಿಕೊಂಡಿರುವುದರಲ್ಲಿ ನಮ್ಮ ಅತ್ತೆಯ ಪಾತ್ರ ಗಣನೀಯವಾಗಿದೆ ಎಂದರೂ ಅತಿಶಯವಲ್ಲ.
ಮೊನ್ನೆಯೂ ಸಹಾ ಒಂದು ವರ್ಷದ ಬಳಿಕ ಅತ್ತೆಯ ಮನೆಗೆ ಹೋದಾಗ, ಬೇಡಾ ಬೇಡಾ ಎಂದರೂ ಯಥಾ ಪ್ರಕಾರ ಅತ್ತೆ ಸುಂದರವಾಗಿ ಜೋಡಿಸಿಕೊಟ್ಟ ಅವಲಕ್ಕಿ ಒಗ್ಗರಣೆ, ಕೇಸರೀಬಾತ್, ಕತ್ತರಿಸ ಇಟ್ಟ ಬಾಳೆಹಣ್ಣನ್ನು ಕೊಟ್ಟಾಗ ಇಲ್ಲಾ ಎನ್ನಲಾಗದೇ ಮರು ಮಾತಿಲ್ಲದೇ ತಿಂದು ತಟ್ಟೆಯನ್ನೂ ತೊಳೆಯುತ್ತಿರುವಾಗ ಅರೇ ಅತ್ತೇ ಮನೆಯ ಮೊಸರೇ ತಿನ್ನದಿರುವುದು ನೆನಪಾಗಿ ಮತ್ತೆ ಅಡುಗೆ ಮನೆಗೆ ಹೋಗಿ, ಏನತ್ತೇ ಮಾತಿನ ಭರದಲ್ಲಿ ಇವತ್ತು ಮೊಸರು ಮತ್ತು ಉಪ್ಪಿನಕಾಯಿ ಹಾಕುವುದನ್ನೇ ಮರೆತು ಬಿಟ್ಟಿದ್ದೀರಲ್ಲಾ ಎಂದು ಹೇಳಿ ಸಂಕೋಚ ಬಿಟ್ಟು ಮತ್ತೊಮ್ಮೆ ಅವಲಕ್ಕಿ ಒಗ್ಗರಣೆ, ಉಪ್ಪಿನ ಕಾಯಿಯ ಜೊತೆಗೆ ಗಟ್ಟಿ ಮೊಸರು ಹಾಕಿಸಿ ಕೊಂಡು ಗಡದ್ದಾಗಿ ಹೊಟ್ಟೇ ಭರ್ತಿ ತಿಂದು ಡರ್ ಎಂದು ತೇಗಿ, ಜೀವಮಾನದಲ್ಲಿ ಎಂದೂ ಮೊಸರನ್ನೇ ಕಂಡಿಲ್ಲವೆಂಬಂತೆ ಬೆರಳನ್ನು ಚೀಪುತ್ತಿರುವುದನ್ನು ನೋಡಿದ ನಮ್ಮಾಕೆ ರೀ ಎಂದಾಗಲೇ, ಅವತ್ತು ಮಧ್ಯಾಹ್ನ ಹೊರಗೆ ಹೋಟೆಲ್ಲಿನಲ್ಲಿ ಅವಳನ್ನು ಊಟಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದು ನೆನಪಾಗಿ ಕಂಠಪೂರ್ತಿ ತಿಂದಿದ್ದ ಭುಕ್ತದ ನಶೆ ಒಂದೇ ಕ್ಷಣದಲ್ಲಿ ಜರ್ ಎಂದು ಇಳಿದು ಹೋದದ್ದು ಸುಳ್ಳಲ್ಲ.
ನಮ್ಮ ಅತ್ತೆಯ ಮನೆಯ ಹಿಂದೆಯೇ ಇರುವ ಅದರಲ್ಲೂ ನನ್ನ ಬರವಣಿಗೆಯ ಶ್ರೇಯೋಭಿಲಾಶಿಯಾಗಿರುವ ಅವರ ಓರಗಿತ್ತಿಯ ಮನೆಗೂ ಹೋಗಿ ಅವರಿಗೂ ಎಳ್ಳನ್ನು ಬೀರಿ, ಮನೆಗೆ ಹಿಂದಿರುಗಲು ಕಾರಿನೊಳಗೆ ಕುಳಿತುಕೊಂಡು ಸುಮ್ಮನೇ ಹಾಗೇ ಬಾಯಿ ಮಾತಿಗೆ, ಸರಿ ಯಾವ ಹೋಟೆಲ್ಲಿಗೆ ಊಟಕ್ಕೆ ಹೋಗೋಣಮ್ಮಾ? ಎಂದು ದೇಶಾವರಿ ನಗೆ ಚೆಲ್ಲಿದಾಗ, ನನ್ನಾಕೆ ಕಲ್ಲೇಟಿಗಿಂತ ಕಣ್ಣೋಟದಿಂದಲೇ ಸುಟ್ಟು ಭಸ್ಕವಾಗುವಂತೆ ನೋಡಿದ ಕಾರಣ ಎರಡು ದಿನ ಏನನ್ನೂ ಬರೆಯಲಾಗದೇ ಇಂದು ಸ್ವಲ್ಪ ಚೇತರಿಸಿಕೊಂಡು ಈಗ ನಮ್ಮತ್ತೆ ಮನೆಯ ರಸವತ್ತಾದ ಮೊಸರಿನ ಸವಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಹೊಟೆಲ್ಲಿಗೆ ಬೇಕಾದ್ರೇ ಇನ್ನೊಂದು ದಿನ ಹೋಗ ಬಹುದು ಅದ್ರೇ ಅತ್ತೆ ಮನೆಯ ಆಳಿಯತನದ ಆತಿಥ್ಯ ಮತ್ತು ಗಟ್ಟಿ ಮೊಸರಿನ ಸವಿಯನ್ನು ಬಿಟ್ಟು ಬಿಡುವುದಕ್ಕೆ ಆಗುತ್ತದೆಯೇ? ನೀವೇ ಹೇಳಿ?
ಏನಂತೀರಿ?
ನಿಮ್ಮವನೇ ಉಮಾಸುತ
ಶ್ರೀ. ಶ್ರೀಕಂಠ ಬಾಲಕಂಚಿ , ರವರೇ , ನಿಜವಾಗಿ ನೀವು ನಿಮ್ಮ ಸೋದರತ್ತೆ ಮನೆಯಲ್ಲಿ , ಅವಲಕ್ಕಿ ಉಪಿಟ್ಟು, ಕೇಸರಿ ಬಾತ್ , ಸಣ್ಣಗೆ ಹೆಚ್ಚಿದ, ಬಾಳೆಹಣ್ಣು, ಗಟ್ಟಿ ಮೊಸರು, ಸೋದರತ್ತೆ ಮನಗೆ ಹೋದಾಗಲೆಲ್ಲ , ಹುಣುಸೆ ತೊಕ್ಕು, ನಲ್ಲಿಕಾಯಿ ಜಾಮ್ , ಮಾವಿನ ಹಣ್ಣಿನ ಶ್ರೀ ಕರಣಿ ತಿಂದಿದ್ದೀರೋ ಬಿಟ್ಟಿದ್ದೀರೋ ನಾನು ಮಾತ್ರ ಬಂದು ನೋಡಿಲ್ಲ , ಇದರ ವಿಶ್ಲೇಷಣೆ ಸೊಗಸಾಗಿ ಮಾಡಿದ್ದು ನನ್ನ ಮಾಯಿನಲ್ಲಿ ನೀರೂರಿದ್ದಂತೂ ನಿಜ
ಇದನ್ನ ನಾನು. ನಿಜವಾಗಿ ಜೋಡಿಗುಬ್ಬಿಗಲ್ಲಿ ಇದ್ದಾಗ ನಮ್ಮಮ್ಮ ಮಾಡುತಿದ್ದ ನಿoಗಾಪುರದ ಮಾವಿನಕಾಯಿ ಉಪ್ಪಿನ ಕಾಯಿ, ಹುಣುಸೆ ತೊಕ್ಕು , ನಲ್ಲಿಕಾಯಿ ಪಚಡಿ, ಗಟ್ಟಿ ಮೊಸರು, ರಾಗಿರೊಟ್ಟಿ , ಹುಚೆಳ್ಳು ಎಣ್ಣೆ, ನಿoಗಾಪುರದ ಮಾವಿನಕಾಯಿ ರಸ , ಸವಿದ ನೆನಪಾಗುತ್ತದೆ ನಿಮ್ಮ ಸೋದರತ್ತೆ , ಮಾಡಿದ, ಮಾವಿನಕಾಯಿ ಉಪಿನಕಾಯಿ , ಕೆರಳೇಕಾಯಿ , ನಿಂಬೆಕಾಯಿ, ಹುಣುಸೆತೊಕ್ಕು , ನೀವು ಎಳ್ಳು ಬೀರಲು ಹೋಗಿದ್ದಾಗ ಮಾಡಿದ ಅವಲಕ್ಕಿ ಉಪಿಟ್ಟು , ರುಚಿ ರುಚಿಯಾಗಿದ್ದು , ಬೇಕಂತಲೇ ಮೊದಲಸಲ, ಗಟ್ಟಿ ಮೊಸರು ಹಾಕಿಸಿಕೊಳ್ಳದ ಅತಿ ತೀಕ್ಷಣ ಬುದ್ದಿಯ ಶ್ರೀಕಂಠ ಬಾಳ ಕಂಚಿ ಎರಡನೇ ಸಲ ರುಚಿ ರುಚಿ ಯಾಗಿ ಮಾಡಿದ್ದ ಸೋದರತ್ತೆ ಕೈ ಅವಲಕ್ಕಿ ಉಪಿಟ್ಟು ತಿನ್ನಲು ಮೊದಲಸಲ ಗಟ್ಟಿ ಮೊಸರು ಹಾಕಿಸಿಕೊಳ್ಳದ ಮಹಾಬುದ್ಧಿವಂತರು ಎರಡನೇ ಸಲ ಅತ್ತೆ ಮರೆತುಹೋಯಿತು ಗಟ್ಟಿ ಮೊಸರೆ ಹಾಕಲಿಲ್ಲವಲ್ಲ ಅತ್ತೆ ಅಂತ ಹೇಳಿ ಎರಡನೇ ಸಲ ರುಚಿ ರುಚಿ ಯಾಗಿ ಮಾಡಿದ್ದ ಅವಲಕ್ಕಿ ಉಪಿಟ್ಟು ಗಟ್ಟಿ ಮೊಸರು ಹಾಕಿಸಿಕೊಂಡು ತಿಂದ ಹೊಟ್ಟೆಬಾಕ ಶ್ರೀಕಂಠ ಬಾಳ ಕoಚಿ
ಒಂದು ಸಲ ನಾನು ಬಂದು ನಿಮ್ಮ ಸೋದರತ್ತೆ ಮಾಡಿರುವ , ಹುಣುಸೆ ತೊಕ್ಕಿನ ,ಮಾವಿನಕಾ ಯಿ ಉಪಿನಕಾಯಿ , ಮತ್ತು ಮಾವಿನ ಉಪ್ಪಿನ ಕಾಯಿ ರಸಡ ಸವಿಯನ್ನು ಸವಿಯಬೇಕು ನಿಮ್ಮ ವಿವರಣೆ ಓದಿದ್ದು ನನ್ನ ಬಾಯಲ್ಲಿ ನೀರೂರಿಸಿದನಂತು ನಿಜ , ನಿಮ್ಮ ಈ ಸೋದರತ್ತೆ ಮನೆಯ ವಿಶ್ಲೇಷಣೆ ಅದ್ಬುತ ನೀವೊಬ್ಬರು ಕವಿಗಳಾಗಬೇಕಿತ್ತು
LikeLiked by 1 person
Good article
LikeLiked by 1 person