ಗುಬ್ಬಚ್ಚಿ

gubbi2ನಾವೆಲ್ಲಾ ಚಿಕ್ಕವರಿದ್ದಾಗ ನಮ್ಮ ಶಾಲೆಗಳಲ್ಲಿ ಕವಿ ಶ್ರೀ ಎ. ಕೆ. ರಾಮೇಶ್ವರ ಅವರು ಬರೆದಿರುವಂತಹ

ಗುಬ್ಬಿ ಗುಬ್ಬಿ ಚಿಂವ್ ಚಿಂವ್ ಎಂದು ಕರೆಯುವೆ ಯಾರನ್ನು?
ಆಚೆ ಈಚೆ ಹೊರಳಿಸಿ ಕಣ್ಣು ನೋಡುವೆ ಏನನ್ನು?
ಮೇಲೆ ಕೆಳಗೆ ಕೊಂಕಿಸಿ ಕೊರಳನು ಹುಡುಕುವೆ ಏನಲ್ಲಿ?
ಕಾಳನು ಹುಡುಕುತ ನೀರನು ನೋಡುತ ಅಲೆಯುವೆ ಏಕಿಲ್ಲಿ?
ಕಾಳನು ಕೊಟ್ಟು ನೀರನು ಕುಡಿಸುವೆ ಆಡಲು ಬಾ ಇಲ್ಲಿ
ಹಣ್ಣನು ಕೊಟ್ಟು ಹಾಲನು ನೀಡುವೆ ನಲಿಯಲು ಬಾ ಇಲ್ಲಿ?
ಎಂಬ ಕವಿತೆಯನ್ನು ಹೇಳಿಕೊಡುತ್ತಿದ್ದರು. ಆಗೆಲ್ಲಾ ನಮ್ಮೆಲ್ಲರ ಮನೆಗಳ ಮುಂದೆ ಗುಬ್ಬಚ್ಚಿ ಸರ್ವೇಸಾಮನ್ಯವಾಗಿ ಹಾರಾಡುತ್ತಿದ್ದರಿಂದ ಅವುಗಳ ಪರಿಚಯ ಮನಗೆ ಚೆನ್ನಾಗಿಯೇ ಇದ್ದ ಕಾರಣ ಆ ಹಾಡು ನಮಗೆ ಬಹಳ ಆಪ್ಯಾಯಮಾನವಾಗುತ್ತಿತ್ತು.

ಇಂದಿಗೂ ಸಹಾ ಅನೇಕ ಶಿಶುವಿಹಾರಗಳಲ್ಲಿ ಅದೇ ಹಾಡನ್ನು ಹೇಳಿಕೊಡುತ್ತಾರಾದರೂ, ಇಂದು ಆ ಹಾಡನ್ನು ಹಾಡುವ ಮಕ್ಕಳಲ್ಲಿ ಅಂದು ನಾವು ಹಾಡುತ್ತಿದ್ದಂತಹ ಉತ್ಸಾಹ ಕಾಣಸಿಗುವುದಿಲ್ಲ.  ವಿಪರೀತವಾದ ನಗರೀಕರಣದಿಂದಾಗಿ ಇಂದಿನ ಕಾಂಕ್ರೀಟ್ ಕಾಡಿನಲ್ಲಿ ಹುಟ್ಟಿ ಬೆಳೆದ ಮಕ್ಕಳು ಕೇವಲ ಪುಸ್ತಕದಲ್ಲಿ ಮಾತ್ರ ಗುಬ್ಬಚ್ಚಿಯನ್ನು ನೋಡಿರುತ್ತಾರೆಯೇ ಹೊರತು, ಜೀವಂತವಾಗಿ ಗುಬ್ಬಿಯ ಅರಿವಿಲ್ಲದಿರುವುದರಿಂದ ಆ ಮಕ್ಕಳಿಗೆ ಗುಬ್ಬಚ್ಚಿಯ ನಡುವೆ ಭಾವನಾತ್ಮಕ ಸಂಬಂಧವೇ ಇಲ್ಲದಿರುವ ಕಾರಣ ಆ ರೀತಿಯ ಭಾವನೆಗಳನ್ನು ನಿರೀಕ್ಷಿಸುವುದು ತಪ್ಪಾದೀತು.

gubbi3ನಾವೆಲ್ಲಾ ಚಿಕ್ಕವರಿದ್ದಾಗ ಬಿಳಿ ಮತ್ತು ಕಪ್ಪು ಬಣ್ಣಗಳು ಮಿಶ್ರಿತವಾಗಿರುವ ಹೆಚ್ಚಾಗಿ ಬೆಳ್ಳಗೇ ಇರುವ, ಗಂಟಲ ಸುತ್ತಲೂ ಕಂದು ಬಣ್ಣದ ಪಟ್ಟೆ ಇರುವ ನೂರಾರು ಗುಬ್ಬಚ್ಚಿಗಳು ಗುಂಪು ಗುಂಪಾಗಿ ನಮ್ಮೆಲ್ಲರ ಮಧ್ಯೆ ಕಾಣಸಿಗುತ್ತಿತ್ತು ಮನೆಯ ಮುಂದೆ ಚಿಲ್ಲಿರುತ್ತಿದ್ದ ಧಾನ್ಯಗಳನ್ನು, ಹುಳು-ಹುಪ್ಪಟೆ ಮತ್ತು ಗಿಡದ ಎಳೆ ಕುಡಿಗಳನ್ನು ಕೊಕ್ಕಿನಲ್ಲಿ ಚುಚ್ಚಿ ತಿನ್ನುತ್ತಾ ಚಿಂವ್ ಚಿಂವ್ ಎನ್ನುತ್ತಾ ಶಬ್ಧ ಮಾಡುತ್ತಿದ್ದದ್ದು ನಮಗೆಲ್ಲಾ ಹಿತವಾಗಿರುತ್ತಿತ್ತು. ಸಾಧಾರಣವಾಗಿ ಮನೆಗಳ ಛಾವಣಿಯ ಜಂತುವಿನಲ್ಲೋ ಇಲ್ಲವೇ ಯಾರೂ ಮುಟ್ಟದಂತಹ ಜಾಗಗಳಲ್ಲಿ ಗೂಡನ್ನು ಕಟ್ಟಿಕೊಂಡು ಅವುಗಳ ಸುಖಃ ಸಂಸಾರ ಫಲವಾಗಿ ಇಡುತ್ತಿದ್ದ ಮೊಟ್ಟೆಗಳನ್ನು ನೋಡುವುದೇ ನಮಗೆ ಆನಂದವಾಗುತ್ತಿತ್ತು. ಆ ಮೊಟ್ಟೆಯೊಡೆದು ಮರಿಗಳಾಗಿ ಅವುಗಳಿಗೆ ಅಮ್ಮ ಆಹಾರವನ್ನು ತಿನ್ನಿಸುವುದನ್ನು ವರ್ಣಿಸುವುದಕ್ಕಿಂತಲು ನೋಡಿ ಅನುಭವಿಸಿದವರಿಗೇ ಗೊತ್ತು ಅದರ ಗಮ್ಮತ್ತು. ಹಾಗಾಗಿಯೇ ಅಂದು ಬಹಳಷ್ಟು ಮನೆಗಳಲ್ಲಿ ತಮ್ಮ ಮುದ್ದಿನ ಮಕ್ಕಳಿಗೆ ಪ್ರೀತಿಯಿಂದ ಗುಬ್ಬೀ ಗುಬ್ಬೀ ಎಂದೇ ಪ್ರೀತಿಯಿಂದ ಸಂಭೋದಿಸುತ್ತಿದ್ದದ್ದೂ ಇದೆ.

WhatsApp Image 2022-02-02 at 9.47.41 PM (1)ದುರದೃಷ್ಟವಷಾತ್ ಇತ್ತೀಚಿನ ವರದಿಗಳ ಪ್ರಕಾರ ಜಗತ್ತಿನಲ್ಲಿ ಅತ್ಯಂತ ಅಪಾಯದ ಅಂಚಿನಲ್ಲಿರುವ ಪಕ್ಷಿಗಳ ಪಟ್ಟಿಯಲ್ಲಿ ನಮ್ಮ ನಿಮ್ಮೆಲ್ಲರ ಅಚ್ಚು ಮೆಚ್ಚಿನ ಗುಬ್ಬಚ್ಚಿಯೂ ಸೇರಿರುವುದು ಅತ್ಯಂತ ಕಳವಳಕರಿಯಾದ ವಿಷಯವಾಗಿದೆ. ಮಕ್ಕಳ ಪ್ರೀತಿಯ, ರೈತರ ಸ್ನೇಹಿ, ಪರಿಸರ ಪ್ರೇಮಿ ಗುಬ್ಬಿಯ ಸಂತತಿ ದಿನೇ ದಿನೇ ಕ್ಷೀಣಿಸುತ್ತಿದ್ದು, ಒಂದು ಅಧ್ಯಯನದ ಪ್ರಕಾರ ಗುಬ್ಬಚ್ಚಿಗಳ ಸಂಖ್ಯೆ ಶೇ 80 ರಷ್ಟು ಇಳಿಕೆಯಾಗಿದೆ.

WhatsApp Image 2022-02-02 at 9.47.41 PMನಿಜ ಹೇಳ ಬೇಕೆಂದರೆ, ಗುಬ್ಬಚ್ಚಿ ರೈತರ ಮತ್ತು ಜನಸಾಮಾನ್ಯರ ಜೀವನದ ಪ್ರಮುಖ ಭಾಗವಾಗಿತ್ತು. ಮನುಷ್ಯರಿಗೆ ತೊಂದರೆ ಕೊಡುತ್ತಿದ್ದ ಸೊಳ್ಳೆಗಳು ಕೀಟಗಳನ್ನು ತಿನ್ನುತ್ತಿದ್ದದ್ದಲ್ಲದೇ ಮನೆಯ ಮುಂದೆ ಕುಟ್ಟಿ, ಬೀಸಿ ಚೆಲ್ಲಿರುತ್ತಿದ್ದ ಧಾನ್ಯಗಳನ್ನು ತಿಂದು ಪರಿಸರವನ್ನು ಸ್ವಚ್ಚಗೊಳಿಸುತ್ತಿದ್ದವು. ಅದೇ ರೀತಿ ಹೊಲದಲ್ಲಿ ಗಿಡಗಳಿಗೆ ಆವರಿಸಿಕೊಂಡಿರುತ್ತಿದ್ದ ಕೀಟಗಳನ್ನು ತಿನ್ನುವ ಮೂಲಕ ರೈತರ ಸ್ನೇಹಿತರಾಗಿದ್ದರು.

gibbi4ನಿಜ ಹೇಳಬೇಕೆಂದರೆ ಮನುಷ್ಯರ ಜೀವನ ಶೈಲಿ ಬದಲಾದ ಕಾರಣದಿಂದಾಗಿಯೇ ಈ ಗುಬ್ಬಚ್ಚಿಗಳು ಅವಸಾನಕ್ಕೆ ತಲುಪಿವೆ ಎಂದರೆ ಅಚ್ಚರಿಯಾದರೂ ಅದು ನಂಬಲೇ ಬೇಕಾದ ವಿಷಯವಾಗಿದೆ. ಆಧುನಿಕ ತಂತ್ರಜ್ಞಾನದಿಂದಾಗಿ ಹಳೆಯ ವಿಶಾಲವಾದ ಹೆಂಚಿನ ಕಟ್ಟಡಗಳ ಜಾಗದಲ್ಲಿ ಎತ್ತಎತ್ತರದ ಸಿಮೆಂಟ್ ಕಟ್ಟಡಗಳು ಎದ್ದ ಕಾರಣ, ಗುಬ್ಬಚ್ಚಿಗಳು ತಮ್ಮ ಆವಾಸಸ್ಥಾನವನ್ನು ಕಂಡುಕೊಳ್ಳದ ಆಕಾರಕ್ಕೆ ಬದಲಾಗಿವೆ. ಇಂದು ಯಾರ ಮನೆಯಲ್ಲಿಯೂ ಅಕ್ಕಿ, ಗೋಧಿ, ಇತರೇ ಆಹಾರ ಧಾನ್ಯಗಳನ್ನು ತಂದು ಕೇರುವುದಾಗಲೀ, ಬೀಸುವುದಾಗಲೀ ಮಾಡದೇ ಎಲ್ಲರೂ ಯಂತ್ರೀಕೃತ ಶುದ್ಧೀಕರಿಸಿದ ಪ್ಯಾಕೆಟ್‌ಗಳಲ್ಲಿ ಸಿಗುವ ವಸ್ತುಗಳನ್ನೇ ಖರೀಧಿಸುವ ಕಾರಣ ಮನೆಯಲ್ಲೂ ಮತ್ತು ಹಳೆಯ ಕಿರಾಣಿ ಅಂಗಡಿಗಳಲ್ಲಿ ಸಿಗುತ್ತಿದ್ದ ಆಹಾರ ಧಾನ್ಯಗಳು ಗುಬ್ಬಚ್ಚಿಗಳಿಗೆ ಸಿಗುತ್ತಿಲ್ಲದ ಕಾರಣ ಆಹಾರ ಅರಸುತ್ತ ನಗರಗಳಿಂದ ಕಾಣೆಯಾಗಿವೆ. ಇದಲ್ಲದೇ ಎಗ್ಗಿಲ್ಲದೇ ಎಲ್ಲೆಂದರಲ್ಲಿ ಮುಗಿಲೆತ್ತರದ ಮೊಬೈಲ್ ಟವರ್ಗಳನ್ನು ಅಳವಡಿಸಿರುವ ಕಾರಣ ಅವುಗಳು ಹೊರಸೂಸುವ ಎಲೆಕ್ಟ್ರೋ ಮ್ಯಾಗ್ನೆಟಿಕ್ ವಿಕಿರಣಗಳು ಸಹ ಗುಬ್ಬಚ್ಚಿಗಳ ಸಂಖ್ಯೆ ಕಡಿಮೆಯಾಗಲು ಮತ್ತೊಂದು ಪ್ರಮುಖ ಕಾರಣವಾಗಿದೆ. ಅಷ್ಟೆ ಅಲ್ಲದೇ ರೈತರೂ ಸಹಾ ಕೀಟಗಳನ್ನು ಕೊಲ್ಲುವುದಕ್ಕಾಗಿ ಶಕ್ತಿಯುತ ಕೀಟನಾಶಕಗಳನ್ನು ಬಳಸುವ ಕಾರಣ, ಆ ಕೀಟನಾಶಕ ಸಿಂಪಡಿಸಿದ ಕೀಟಗಳನ್ನೇ ಗುಬ್ಬಚ್ಚಿಗಳು ತಿನ್ನುವ ಮೂಲಕ ಅವುಗಳ ಅವಸಾನದ ಹಾದಿ ಹಿಡಿದಿವೆ. ಕಾಡುಗಳನ್ನು ನಾಶಪಡಿಸಿ ಆಧುನಿಕ ಕಟ್ಟಡಗಳು, ಮಾಲ್‌ಗಳು, ಕೈಗಾರಿಕೆಗಳು ಇತ್ಯಾದಿಗಳನ್ನು ನಿರ್ಮಿಸುವ ಮೂಲಕ ಅರಣ್ಯದ ನಾಶವೂ ಗುಬ್ಬಚ್ಚಿಗಳ ಸಂಖ್ಯೆ ಕಡಿಮೆಯಾಗಲು  ಕಾರಣವಾಗಿದೆ. 

WhatsApp Image 2022-02-02 at 9.47.41 PM (2)ಒಂದು ಕಾಲದಲ್ಲಿ ಪಟ್ಟಣಗಳಲ್ಲಿ ಮಾತ್ರ ಕಾಂಕ್ರೀಟ್ ಕಟ್ಟಡಗಳ ನಿರ್ಮಾಣ ಸಾಮಾನ್ಯವಾಗಿತ್ತು. ಆದರೆ, ಇತ್ತೀಚೆಗೆ ಹಳ್ಳಿಗಳಲ್ಲಿಯೂ ಇದೇ ಆಧುನಿಕತೆ ಮನೆ ಮಾಡಿ, ಹಳ್ಳಿಯಲ್ಲಾಗಲೀ ದಿಲ್ಲಿಯಲ್ಲಾಗಲೀ, ಹೆಂಚಿನ ಮತ್ತು ಸಾಂಪ್ರದಾಯಿಕ ಮಡಿಗೆ ಮನೆಗಳು ಮಾಯವಾಗಿ ಅವುಗಳ ಪ್ರಾಂಗಣಗಳಲ್ಲಿ ಗುಬ್ಬಿಗಳು ಗೂಡುಕಟ್ಟಿ ಸಂಸಾರ ನಡೆಸುವುದಕ್ಕಾಗದೇ ಹೋಗದಿರುವುದೂ ಸಹಾ ಗುಬ್ಬಚ್ಚಿಯ ಸಂತತಿ ಕ್ಷೀಣಿಸಲು ಮತ್ತೊಂದು ಕಾರಣವಾಗಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

gubbiಕಣ್ಮರೆಯಾಗುತ್ತಿರುವ ಈ ಗುಬ್ಬಚ್ಚಿಗಳನ್ನು ರಕ್ಷಣೆ ಮಾಡುವ ಸಲುವಾಗಿ ನೇಚರ್ ಫಾರ್ ಎವರ್ ಸೊಸೈಟಿಯ ಸಂಸ್ಥಾಪಕ ಮೊಹ್ಮದ್ ದಿಲಾವರ್ ಮತ್ತು ಎಕೊ- ಸಿಸ್ ಆ್ಯಕ್ಷನ್ ಫೌಂಡೇಷನ್ ಫ್ರಾನ್ಸ್ ಸಂಸ್ಥೆಗಳ ಸಹಯೋಗದೊಂದಿಗೆ ಪ್ರತಿವರ್ಷವೂ ಮಾರ್ಚ್ 20 ರಂದು ವಿಶ್ವ ಗುಬ್ಬಚ್ಚಿ ದಿನವನ್ನಾಗಿ ಅಚರಿಸಲು 2010ರಿಂದ ವಿಶ್ವದ ವಿವಿಧ ದೇಶಗಳಲ್ಲಿ ಈ ಆಚರಣೆ ಪ್ರಾರಂಭವಾಯಿತಾದರೂ ಅದು ಕೇವಲ ಅಚರಣೆಯಾಗಿಯೇ ಉಳಿದಿದ್ದು ವಾಸ್ತವಾಗಿ ಯಾವುದೇ ರೀತಿಯ ಬದಲಾವಣೆಯನ್ನು ಕಾಣದಾಗಿದೆ. ಗುಬ್ಬಿ ಸಂತತಿಯ ಬಗ್ಗೆ ಅರಿವು ಮೂಡಿಸಲು ಮತ್ತು ಸಂರಕ್ಷಿಸಲು 2012ರಲ್ಲಿ ದೆಹಲಿಯೂ ಗುಬ್ಬಚ್ಚಿಯನ್ನು ತನ್ನ ರಾಜ್ಯ ಪಕ್ಷಿಯಾಗಿ ಘೋಷಿಸಲಾಗಿದೆ.

gubbi4ಮಿಂಚಿ ಹೋದ ಮೇಲೆ ಚಿಂತಿಸಿ ಫಲವಿಲ್ಲ ಎನ್ನುವಂತೆ, ಇನ್ನೂ ಕಾಲ ಮಿಂಚಿಲ್ಲ.  ನಮ್ಮ ಸುತ್ತಮುತ್ತಲೂ ಅದಷ್ಟೂ ಮರಗಳನ್ನು ಬೆಳೆಸುವ ಮೂಲಕ ಗುಬ್ಬಿಗಳು ಮತ್ತೆ ಅಲ್ಲಿ ಬರುವಂತೆ ಮಾಡಬಹುದಾಗಿದೆ. ಅದೇ ರೀತಿ ರಸ್ತೆಬದಿಯ ಮರಗಳ ಟೊಂಗೆಯಲ್ಲಿ ಆಹಾರ ಮತ್ತು ನೀರನ್ನು ಇಡುವುದು, ನಮ್ಮ ಮನೆಗಳ ತಾರಸಿಯ ಮೇಲೂ ಸಹಾ ನೀರು ಮತ್ತು ಆಹಾರದ ಜೊತೆಗೆ ಚೆಂದನೆಯ ಬೆಚ್ಚನೆಯ ಗೂಡುಗಳನ್ನು ತೂಗು ಹಾಕುವ ಮೂಲಕ ಗುಬ್ಬಿಗಳನ್ನು ಆಕರ್ಷಿಸುವ ಮೂಲಕ ನಮ್ಮ ಮುಂದಿನ ಪೀಳಿಗೆಗೂ ಜೀವಂತ ಗುಬ್ಬಿಯನ್ನು ತೋರಿಸಬಹುದಾಗಿದೇ ಅಲ್ವೇ?

ಏನಂತೀರಿ?
ನಿಮ್ಮವನೇ ಉಮಾಸುತ

3 thoughts on “ಗುಬ್ಬಚ್ಚಿ

  1. ಒಳ್ಳೆಯ ಲೇಖನ. ಎಲ್ಲರೂ ತಾರಸಿಗಳ ಮೇಲೋ ಅಥವಾ ಮನೆಯ ಮುಂದೆಯೋ ಅಂಗಡಿಗಳಲ್ಲಿ ಸಿಗುವ ಪುಟ್ಟ ಗೂಡುಗಳನ್ನಿಟ್ಟು, ಕೇವಲ ಗುಬ್ಬಚ್ಚಿ ತೂರುವಂತಿದ್ದು, ಅದರ ಒಳಗಡೆ ಕಾಳುಗಳು ಮತ್ತು ನೀರನ್ನು ಇಟ್ಟರೆ ಗುಬ್ಬಚ್ಚಿಗಳು ಹುಡುಕಿಕೊಂಡು ಬರುತ್ತವೆ. ನಮ್ಮ ಮನೆಯ ತಾರಸಿ ಮೇಲೆ ದಾಳಿಂಬೆಯ ಗಿಡಗಳಲ್ಲಿ ಕಾಣದಿರುವಂತೆ ಮಧ್ಯದಲ್ಲಿ ಬಂದು ಕೂರುತ್ತವೆ.
    ಅಮೆರಿಕಾದಲ್ಲಿರುವ ಗುಬ್ಬಚ್ಚಿಗಳು ಇಲ್ಲಿನಂತೆ ಪುಟ್ಟದಾಗಿರುವುದಿಲ್ಲ. ಸ್ವಲ್ಪ ದೊಡ್ಡದಾಗಿರುತ್ತವೆ. ಅಲ್ಲಿ ನನ್ನ ಮಗನ ಮನೆಯ ಹಿತ್ತಲಲ್ಲಿ ಗುಬ್ಬಚ್ಚಿ ಗೆಂದು ತಂದಿದ್ದ ಗೂಡು ಸ್ವಲ್ಪ ದೂಡ್ಡದಾಗಿದ್ದುದರಿಂದ, ದೊಡ್ಡ ಪಕ್ಷಿಗಳು ಗುಬ್ಬಚ್ಚಿ ಗಳನ್ನು ಓಡಿಸಿ ತಾವು ಮನೆ ಮಾಡಿಕೂಂಡಿದ್ದವು. ಅದನ್ನು ಕಂಡು ನಂತರದಲ್ಲಿ ಕೇವಲ ಗುಬ್ಬಚ್ಚಿಗಳು ತೂರುವಷ್ಟು ಗೂಡನ್ನು ತಂದು ಹಾಕಿದೆವು. ಕೆಲಸದ ಮಧ್ಯದಲ್ಲಿ ಅವುಗಳ ಚಿಲಿಪಿಲಿ ಶಬ್ದಗಳನ್ನು ಕೇಳುತ್ತಾ ಅವುಗಳನ್ನು ನೋಡುತ್ತಾ ಕೆಲವು ಕ್ಷಣಗಳನ್ನು ಕಳೆಯುವುದು ಮನಸ್ಸಿಗೆ ಆಹ್ಲಾದಕರ.

    Liked by 1 person

  2. ಬದಲಾದ ಜೀವನಶೈಲಿಯ ಕಾರಣ ಗುಬ್ಬಚ್ಚಿಗಳು ಮರೆಯಾಗಿವೆ. ಈ ಪಕ್ಷಿಗಳು ಇದ್ದದ್ದನ್ನು ಮರೆಯುವಷ್ಟು ಮರೆಯಾಗಿವೆ.

    ಅಂತೆಯೇ ನಮ್ಮ ಸಂಸ್ಕೃತಿ, ಕಲೆ, ಮೌಲ್ಯಗಳೂ ಮರೆಯಾಗುವ ಹಂತ ತಲುಪಿರುವುದು ಅಷ್ಟೇ ಆಘಾತಕರ.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s