ನಮ್ಮ ದೇಶದಲ್ಲಿ ಪ್ರತಿಯೊಬ್ಬರ ಹೆಸರಿನೊಂದಿಗೆ ಇರುವ ಉಪನಾಮಗಳು ಇಲ್ಲವೇ ಅವರ ಊರಿನ ಹೆಸರು ಒಂದೊಂದು ಇತಿಹಾಸವನ್ನು ಹೇಳುತ್ತವೆ. ದುರಾದೃಷ್ಟವಷಾತ್ ನಾವು ಆ ಊರಿನ ಹೆಸರು ಮತ್ತು ಇತಿಹಾಸವನ್ನು ತಿಳಿದುಕೊಳ್ಳದೇ ಅವುಗಳನ್ನು ಬದಲಾಯಿಸಲು ಮುಂದಾಗಿರುವುದು ವಿಪರ್ಯಾಸವೆನಿಸುತ್ತದೆ. ಇತ್ತೀಚೆಗೆ ನನಗೆ ಪರಿಚಿತರಾದ ಗೆಳೆಯರೊಬ್ಬರ ಹೆಸರಿನೊಂದಿಗೆ ಮೃಗವಧೆ ಎಂದಿದ್ದದ್ದನ್ನು ಕೇಳಿದಾಗ ನನ್ನ ಕಿವಿಗಳು ಚುರುಕಾಗಿ ಅವರ ಊರಿನ ಬಗ್ಗೆ ಸ್ವಲ್ಪ ಅಧ್ಯಯನ ಮಾಡಿದಾಗಲೇ ನಮ್ಮ ದೇಶದಲ್ಲಿ ನಡೆದ ಮತ್ತು ಈಗ ಅವುಗಳನ್ನು ಕಥೆಗಳ ರೂಪದಲ್ಲಿ ಓದುತ್ತಿರುವ ರಾಮಾಯಣ ಮತ್ತು ಮಹಾಭಾರತದ ಬಗ್ಗೆ ಬಹಳ ಗೌರವ ಮೂಡಿದ್ದಲ್ಲದೇ, ರಾಮಾಯಣ ಮತ್ತು ಮಹಾಭಾರತಗಳು ಈ ದೇಶದಲ್ಲಿ ನಡದೇ ಇಲ್ಲಾ ಅವುಗಳೆಲ್ಲವು ಕಟ್ಟು ಕಥೆ ಎನ್ನುವವರಿಗೆ ಮುಟ್ಟಿ ನೋಡಿಕೊಳ್ಳುವಂತಹ ಐತಿಹ್ಯ ಆ ಊರಿನಲ್ಲಿತ್ತು. ನಾವಿಂದು ಅಂಥಹ ಕುತೂಹಲಕಾರಿ ಊರಾದ ಮೃಗವಧೆಯ ಸ್ಥಳ ಪುರಾಣ ಮತ್ತು ಐತಿಹ್ಯವನ್ನು ತಿಳಿಯೋಣ ಬನ್ನಿ.
ಮೃಗವಧೆ ಎಂಬ ಹೆಸರು ಕೇಳಿದ ಕೂಡಲೇ ಥಟ್ ಅಂತಾ ಹೊಳೆಯುವುದೇ ಅಲ್ಲಿ ಯಾವುದೋ ಪ್ರಾಣಿಯ ವಧೆಯಾಗಿರಬೇಕು ಎಂಬುದಾಗಿರುತ್ತದೆ. ಪ್ರಾಣಿ ವಧೆ ಎಂದು ಕೇಳಿದ ತಕ್ಶಣವೇ ನಿಮ್ಮ ಕಣ್ಮುಂದೆ ರಾಮಾಯಣ ಕಾಲದಲ್ಲಿ ಪ್ರಭು ಶ್ರೀರಾಮ 14 ವರ್ಷ ವನವಾಸವನ್ನು ಮಾಡುತ್ತಿರುವಾಗ ಸೀತಾ ದೇವಿಯ ಕೋರಿಕೆಯಂತೆ ಮಾಯಾ ಚಿನ್ನದ ಜಿಂಕೆಯನ್ನು ವಧಿಸಿದ ಕಥೆ ಮೂಡಿದಲ್ಲಿ ಖಂಡಿತವಾಗಿಯೂ ನಿಮ್ಮ ಊಹೆ ಸರಿಯಾಗಿದೆ.
ಹಾಗೆಂದ ಮಾತ್ರಕ್ಕೆ ಇದು ಕೇವಲ ರಾಮಾಯಣಕ್ಕೆ ಸೀಮಿತವಾಗಿರದೇ, ರಾಮಾಯಣಕ್ಕೂ ಮುಂಚೆ ಶಿವ ಪಾರ್ವತಿಯರ ಕಾಲಘಟ್ಟಕ್ಕೂ ಈ ಊರಿನ ಐತಿಹ್ಯ ಬೆರೆತುಕೊಂಡಿದೆ. ಅದೊಮ್ಮೆ ಶಿವ ಪಾರ್ವತಿಯರಿಬ್ಬರೂ ಏಕಾಂತದಲ್ಲಿ ಸಂಬೋಧಿಸುತ್ತಿರುವಾಗ, ಇದ್ದಕ್ಕಿದ್ದಂತೆಯೇ ಪಾರ್ವತಿಯು ತಾನು ಹೆಚ್ಚೋ ಇಲ್ಲವೇ ಸರಸ್ವತಿ ಹೆಚ್ಚೋ ಎಂದು ಶಿವನಲ್ಲಿ ಕೇಳಿದಾಗ, ಪರಶಿವನು ಥಟ್ ಎಂದು ಸಕಲ ವೇದಗಳು ಮತ್ತು ವಿದ್ಯೆಗೆ ಅಧಿದೇವತೆಯಾದ ವಾಣಿಯೇ ಶ್ರೇಷ್ಠ ಎಂದು ಹೇಳಿದ್ದನ್ನು ಕೇಳಿ ಬೇಸರಗೊಂಡ ಪಾರ್ವತಿಯು ಶನಿ ಬಳಿ ಹೋಗಿ ತನ್ನ ಗಂಡನಿಗೆ ಕಾಡಬೇಕೆಂದು ಕೋರಿಕೊಳ್ಳುತ್ತಾಳೆ. ಶಿವನನ್ನು ಕೆಣಕಲು ಹೋಗಿ ಶಿವನ ಮೂರನೇ ಕಣ್ಣಿನಿಂದ ಸುಟ್ಟು ಹೋದ ಮನ್ಮಥನ ಪ್ರಸಂಗವನ್ನು ಉದಾಹರಿಸಿ ತನ್ನಿಂದ ಈ ಕೆಲಸ ಅಸಾಧ್ಯ ಎಂದಾಗ, ಶಿವನಿಂದ ಯಾವುದೆ ತೊಂದರೆ ಆಗದಂತೆ ನಿನ್ನನ್ನು ಕಾಯುವುದು ನನ್ನ ಕೆಲಸ ಎಂದು ಪಾರ್ವತೀ ದೇವಿ ಅಭಯ ನೀಡಿದ ನಂತರ ಶನಿಯ ದೃಷ್ಟಿ ಶಿವನ ಮೇಲೆ ಬಿದ್ದು ಸಾಕ್ಷಾತ್ ಪರಶಿವನಿಗೂ ಶನಿಯ ಕಾಟ ಆರಂಭವಾಗುತ್ತದೆ. ಇದರ ಪರಿಣಾಮ ಶಿವನು ಚತುರ್ಮುಖ ಬ್ರಹ್ಮನಲ್ಲಿ ಅಹಂಕಾರದ ದ್ಯೋತಕವಾಗಿ ಮೂಡಿದ್ದ ಐದನೇ ತಲೆಯನ್ನು ಚ್ಛೇಧಿಸಿ ಬಹ್ಮನ ಕಪಾಲವನ್ನು ಹಿಡಿದುಕೊಂಡು ಮೂರು ಲೋಕದಲ್ಲಿಯೂ ಭಿಕ್ಷಾಟನ ಮಾಡತೊಡಗುತ್ತಾನೆ. ಹೀಗೆ ಕೈಲಾಸದಲ್ಲಿ ಬಹಳ ಕಾಲ ಶಿವನು ಇಲ್ಲದೇ ದುಃಖಿತಳಾದ ಪಾರ್ವತಿಯು ತನ್ನ ಪತಿಯಿಂದ ಶನಿಪ್ರಭಾವವನ್ನು ಹೊರದೋಡಿಸುವ ಸಲುವಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಸಂಚರಿಸುತ್ತಾ ಅಂತಿಮವಾಗಿ ಮೃಗವಧೆಯ ಕ್ಷೇತ್ರದಲ್ಲಿ ಐದು ಹೋಮಕುಂಡಗಳನ್ನು ಮಾಡಿ ಅಲ್ಲೊಂದು ಲಿಂಗಕ್ಕೆ ಈಶ್ವರನನ್ನು ಆಹ್ವಾವನೆ ಮಾಡಿ ಸದ್ಯೋಜಾತಾದಿ ಐದು ಮಂತ್ರಗಳಿಂದ ಭಕ್ತಿಯಿಂದ ಪೂಜಿಸಿ ಶನಿಯು ಪರಶಿವನಿಗೆ ಮುಕ್ತಿ ಕೊಡದೇ ಹೋದಲ್ಲಿ ತಾನು ಹೋಮಕುಂಡಕ್ಕೆ ಬಿದ್ದು ಆತ್ಮಾಹುತಿ ಮಾಡಿಕೊಳ್ಳುವುದಾಗಿ ಘೋಷಿಸುತ್ತಾಳೆ. ಐದು ಯಾಮಗಳಲ್ಲಿ ಆಕೆ ಪೂಜೆಮಾಡುತ್ತಿದ್ದಾಗ ಐದು ಪ್ರಾಣಿಗಳ ರೀತಿಯಲ್ಲಿ ಕೂಗಿ ಶ್ರೀ ನರಸಿಂಹಸ್ವಾಮಿಯು ಆಕೆಯ ತಪಸ್ಸನ್ನು ಪರೀಕ್ಷೇ ಮಾಡುತ್ತಾರೆ.
ಪೂಜೆ ಎಲ್ಲವೂ ಮುಗಿದು ಇನ್ನೇನು ಪಾರ್ವತಿಯು ಅಗ್ನಿ ಕುಂಡವನ್ನು ಪ್ರವೇಶಿಸಬೇಕು ಎನ್ನುವಷ್ಟರಲ್ಲಿ ಶಿವನು ಶನಿದೋಷದಿಂದ ಮುಕ್ತನಾಗಿ ಅಲ್ಲಿ ಪ್ರತ್ಯಕ್ಷನಾಗಿ ಪಾರ್ವತಿಯ ಕೈ ಹಿಡಿಯುವುದಲ್ಲದೇ, ಯಾರು ಶನಿಯನ್ನು ಪೂಜಿಸಿ ಇಲ್ಲಿನ ಶನೈಶ್ವರನನ್ನು ಭಕ್ತಿಯಿಂದ ಪೂಜಿಸುತ್ತಾರೋ ಅಂತಹವರಿಗೆ ಶನಿದೋಷ ಕಾಡಕೂಡದು ಎಂದು ಶನಿಗೆ ಪರಶಿವನು ಆಜ್ಞಾಪಿಸುತ್ತಾನೆ. ಅದೇ ರೀತಿ ನರಸಿಂಹಸ್ವಾಮಿಗೂ ತ್ರೇತಾಯುಗದಲ್ಲಿ ರಾಮನ ಅವತಾರದಲ್ಲಿ ಮಾರೀಚನೆಂಬ ರಾಕ್ಷಸನನ್ನು ವಧಿಸಿ ಇದೇ ಕ್ಷೇತ್ರದಲ್ಲಿ ನನ್ನನ್ನು ಪ್ರತಿಷ್ಠಾಪನೆ ಮಾಡಬೇಕು ಎಂದು ಮಹಾವಿಷ್ಣುವಿಗೆ ಶಿವನು ಹೇಳುತ್ತಾನೆ ಎಂಬುದು ಇಲ್ಲಿನ ಸ್ಥಳ ಪುರಾಣವಾಗಿದೆ. ಹಾಗಾಗಿ ಅಂದಿನಿಂದ ಈ ಕ್ಷೇತ್ರ ಗೌರ್ಯಾಶ್ರಮ ಎಂದು ಪ್ರಖ್ಯಾತವಾಗಿತ್ತು ಹಾಗಾಗಿಯೇ ಇಲ್ಲಿ ಶ್ರೀ ಶನೈಶ್ಚರ ಸ್ವಾಮಿಯ ದೇವಸ್ಥಾನವೂ ಆಕರ್ಷಣೆಯ ಕೇಂದ್ರವಾಗಿದ್ದು, ಈ ಗ್ರಾಮಕ್ಕೆ ಬರುವ ಭಕ್ತಾದಿಗಳು ಮೊದಲು ಶನೈಶ್ಚರನ ದರ್ಶನದ ಮಾಡಿದ ನಂತರವೇ ಉಳಿದೆಲ್ಲಾ ದೇವಸ್ಥಾನಗಳ ದರ್ಶನ ಪಡೆಯುವುದು ಇಲ್ಲಿ ನಡೆದುಕೊಂಡು ಬಂದಿರುವ ಪದ್ದತಿಯಾಗಿದೆ. ಶ್ರಾವಣ ಮಾಸದ ಶನಿವಾರಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಈ ಶನೈಶ್ವರ ದೇವಾಲಯಕ್ಕೆ ಆಗಮಿಸಿ ಭಗವಂತನ ಕೃಪಾಶೀರ್ವಾದಕ್ಕೆ ಪಾತ್ರರಾಗುತ್ತಾರೆ.
ಮುಂದೆ ತ್ರೇತಾಯುಗದಲ್ಲಿ ಸೂರ್ಯವಂಶದ ದಶರಥನ ಮಗ ರಾಮನಾಗಿ ಅವತರಿಸಿದ ಮಹಾವಿಷ್ಣುವು ತನ್ನ ತಂದೆಯ ಅಜ್ಞೆಯನ್ನು ಪಾಲಿಸುವ ಸಲುವಾಗಿ 14 ವರ್ಷಗಳ ಕಾಲ ವನವಾಸವನ್ನು ಮಾಡಲು ಹೊರಟಾಗ ಆತನ ಜೊತೆ ಸಹಾಯಕ್ಕಾಗಿ ಅವನ ತಮ್ಮ ಲಕ್ಷಣ ಮತ್ತು ಮಡದಿ ಸೀತಾ ದೇವಿಯೂ ಸಹಾ ಸಿದ್ಧರಾಗುತ್ತಾರೆ. ಅವರು ಹೀಗೆಯೇ ಕಾಡಿನಲ್ಲಿ ಒಂದೊಂದು ಪ್ರದೇಶದಲ್ಲಿ ಕೆಲವೊಂದು ಕಾಲ ನೆಲೆಸಿದ್ದಾಗ ರಾವಣ ತಂಗಿ ಶೂರ್ಪಣಖಿಯ ಪ್ರಸಂಗದಲ್ಲಿ ಲಕ್ಷಣನಿಂದ ಮೂಗನ್ನು ಕತ್ತರಿಸಿಕೊಂಡು ಅವಮಾನಿತಳಾಗಿ ತನ್ನ ಅಣ್ಣನಾದ ರಾವಣನ ಬಳಿ ಇಲ್ಲ ಸಲ್ಲದ ಚಾಡಿಯನ್ನು ಹೇಳಿ ಆ ಅವಮಾನಕ್ಕೆ ಪ್ರತೀಕಾರವನ್ನು ತೆಗೆದುಕೊಳ್ಳಲು ಒತ್ತಾಯಿಸಿದಾಗ ತಂಗಿಯ ಕೋರಿಕೆಯನ್ನು ಮನ್ನಿಸಿ ಕಾಡಿಗೆ ಬಂದ ರಾವಣ ಸೀತೆಯನ್ನು ನೋಡಿ ಆಕೆಯಲ್ಲಿ ಮೋಹಿತನಾಗಿ (ಸೀತಾ ಸ್ವಯಂವರದಲ್ಲಿ ರಾವಣನೂ ಪಾಲ್ಗೊಂಡು ಶಿವಧನಸ್ಸನು ಎತ್ತಲಾಗದೇ ಹೋದದ್ದು ಇಲ್ಲಿ ಗಮನಾರ್ಹ) ಅಕೆಯನ್ನು ಹೇಗಾದರೂ ಮಾಡಿ ಪಡಯಲೇ ಬೇಕೆಂದು ಯೋಚಿಸಿದಾಗಲೇ ಆತನಿಗೊಂದು ಉಪಾಯ ಹೊಳೆಯುತ್ತದೆ.
ತನ್ನ ಆಸೆಯನ್ನು ಈಡೇರಿಸಿಕೊಳ್ಳುವ ಸಲುವಾಗಿ ತನ್ನ ಸೋದರಮಾವ ಮತ್ತು ಪರಮ ಶಿವಭಕ್ತನಾದ ಮಾರೀಚನ ಸಹಾಯವನ್ನು ಕೇಳುತ್ತಾನೆ. ಅದರ ಪ್ರಕಾರ ಮಾರೀಚನು ಮಾಯಾ ಜಿಂಕೆಯ ವೇಷ ಧರಿಸಿ, ಸೀತೆಯು ಅದರಿಂದ ಆಕರ್ಷಿತಳಾಳಾಗುವಂತೆ ಮಾಡಿ, ಶ್ರೀ ಶ್ರೀರಾಮನನ್ನು ಸೀತೆಯಿಂದ ಬೇರ್ಪಡಿಸಿ ಆತನನ್ನು ದಾರಿ ತಪ್ಪಿಸುವಂತೆ ಮಾಡಿ ತಾನು ಸೀತೆಯನ್ನು ಅಪಹರಿಸುತ್ತೇನೆ ಎಂದು ಹೇಳುತ್ತಾನೆ. ಇದಕ್ಕೆ ಒಪ್ಪದ ಮಾರೀಚನು ಶ್ರೀರಾಮನಿಗೆ ಮೋಸ ಮಾಡುವ ಸ್ಸಾಹಸಕ್ಕೆ ಕೈಹಾಕಬೇಡ ಆತನ ಬಾಣದ ರುಚಿಯನ್ನು ಆತ ಚಿಕ್ಕವನಿರ ಬೇಕಾದಾಗಲೇ ನಾನು ಅನುಭವಿಸಿದ್ದಲ್ಲದೇ ನನ್ನ ತಮ್ಮ ಸುಬಾಹುವನ್ನು ಕಳೆದುಕೊಂಡಿದ್ದೇನೆ ಎಂದು ಪರಿ ಪರಿಯಾಗಿ ತಿಳಿ ಹೇಳಿದರು ಅದಕ್ಕೆ ರಾವಣನು ಒಪ್ಪದಿದ್ದಾಗ, ವಿಧಿಯಿಲ್ಲದೆ ಮಾರೀಚನು ರಾವಣನ ಆಜ್ಞೆಯಂತೆ ಮಾಯಾ ಜಿಂಕೆಯ ವೇಷಧಾರಿಯಾಗಿ ಕಾಡಿಗೆ ಬರುತ್ತಾನೆ.
ಆ ಮಾಯಾಜಿಂಕೆಯನ್ನು ನೋಡಿ ಆಕರ್ಷಿತಳಾದ ಸೀತಾ ದೇವಿಯ ಆ ಜಿಂಕೆಯನ್ನು ಹಿಡಿದುಕೊಂಡು ಬರಲು ರಾಮನನ್ನು ಕೋರಿಕೊಂಡಾಗ, ಸೀತೆಯ ಕೋರಿಕೆಯಂತೆ ಚಿನ್ನದಜಿಂಕೆಯನ್ನು ಹಿಡಿಯುವ ಸಲುವಾಗಿ ಅದನ್ನು ಬೆನ್ನಟ್ಟಿ ಕೊಂಡು ಹೋಗಿ ಕಡೆಗೆ ಜಿಂಕೆರೂಪದಲ್ಲಿ ಬಂದಿದ್ದ ಮಾಯವಿ ಮಾರೀಚನು ರಾಮನ ಬಾಣಕ್ಕೆ ಹತನಾಗುತ್ತಾನೆ. ಈ ಸಂಪೂರ್ಣ ಘಟನೆಯು ನಡೆದ ಸ್ಥಳವೇ ಮೃಗವಧಾ ಎಂಬ ಹೆಸರಿನಿಂದ ಪ್ರಖ್ಯಾತಿಯಾಗಿದ್ದು ಪ್ರಸ್ತುತ ಅದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಿಂದ ಕೇವಲ 27 ಕಿಮೀ ದೂರದಲ್ಲಿದೆ.
ಮಾರೀಚನನ್ನು ಕೊಂದು ಬ್ರಹ್ಮ ಹತ್ಯೆಯ ದೋಷಕ್ಕೆ ಒಳಗಾಗಿ ಆ ಕಳಂಕದಿಂದ ಪಾರಾಗಲು ರಾಮನು ಮಾರೀಚನ ದೇಹದಲ್ಲಿದ್ದ ಬಾಣಲಿಂಗವನ್ನು ಅಲ್ಲಿಯೇ ಹರಿಯುತ್ತಿದ್ದ ಬ್ರಾಹ್ಮಿ ನದಿ ತೀರದ ಮೇಲೆ ಪ್ರತಿಷ್ಠಾಪಿಸಿದನಂತೆ. ಆ ಲಿಂಗವನ್ನು ಮೊದಲು ಮಲಹಾನಿಕರೇಶ್ವರ ಎಂಬ ಮೂಲ ಹೆಸರಿನ ಕರೆಯುತ್ತಿದ್ದು ನಂತರ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನವೆಂದು ಪ್ರಸಿದ್ಧಿ ಪಡೆದಿದೆ. ಸುಮಾರು ನಾಲ್ಕೂವರೆ ಅಡಿ ಎತ್ತರದ ಬೃಹತ್ ಆಗಮ ಲಿಂಗ ಇಲ್ಲಿನ ವೈಶಿಷ್ಟ್ಯವಾಗಿದೆ. ಚಾಲುಕ್ಯರ ಕಾಲದ ಶಿಲ್ಪ ಕಲೆಯನ್ನು ಒಳಗೊಂಡಿರುವ ಈ ದೇವಸ್ಥಾನವನ್ನು ಚಾಲುಕ್ಯ ಅರಸ ತ್ರಿಭುವನಮಲ್ಲನು 1060ರಲ್ಲಿ ನಿರ್ಮಿಸಿದನು. ಕಾಲಾನಂತರ ಅವಸಾನದ ಹಂತದಲ್ಲಿದ್ದ ದೇವಾಲಯವನ್ನು ಕೆಳದಿ ಸೋಮಶೇಖರ ನಾಯಕನ ಕಾಲದಲ್ಲಿ ಪುನರುತ್ಥಾನ ಮಾಡಿಸಿದ ಎನ್ನುವ ಶಾಸನಗಳು ಅಲ್ಲಿ ಕಾಣಬಹುದಾಗಿದೆ.
ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಸುತ್ತಲೂ ಪಂಜುರ್ಲಿ, ಧೂಮಾವತಿ, ಕ್ಷೇತ್ರಪಾಲ ಸೇರಿದಂತೆ ಈಶ್ವರನ ಸಮಸ್ತ ಗಣಗಳನ್ನು ಕಾಣಬಹುದಾಗಿದೆ. ಪ್ರತಿದಿನವೂ ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಹೀಗೆ ತ್ರಿಕಾಲವೂ ಬಲಿಹರಣ, ಆಗಮೋಕ್ತಿ, ಹಗಲು ದೀವಟಿಗೆ,ಅಷ್ಟಾವಧಾನ ಸೇವೆಗಳಿಂದ ಸ್ವಾಮಿಯನ್ನು ಪೂಜಿಸಲಾಗುತ್ತದೆ. ಕಾರ್ತಿಕ ಮಾಸದ ದೀಪೋತ್ಸವವು ಅತ್ಯಂತ ವೈಭವವಾಗಿ ನಡೆದರೆ, ಪ್ರತೀ ವರ್ಷದ ಫಾಲ್ಗುಣ ಮಾಸದ ಬಹುಳದ ಮೊದಲ ಐದು ದಿನಗಳು ಮಲ್ಲಿಕಾರ್ಜುನ ಸ್ವಾಮಿಯ ರಥೋತ್ಸವ ಬಹಳ ವೈಭವದಿಂದ ನಡೆಸಲಾಗುತ್ತದೆ. ಇದರ ಜೊತೆ ಈಗಾಗಲೇ ತಿಳಿಸಿದಂತೆ ಶ್ರೀ ಶನೈಶ್ವರ ಶಂಕರೇಶ್ವರ, ಉಗ್ರ ನರಸಿಂಹ ಮತ್ತು ಆಂಜನೇಯ ದೇವರುಗಳ ಚಿಕ್ಕ ದೇವಾಲಯಗಳನ್ನೂ ಈ ಊರಿನಲ್ಲಿ ಕಾಣಬಹುದಾಗಿದೆ.
ಇನ್ನು ಐತಿಹಾಸಿಕವಾಗಿ ನೋಡಿದರೆ ಮೃಗವಧೆಯಿಂದ ಕೇವಲ 2 ಕಿಮೀ ದೂರದಲ್ಲೇ ಇರುವ ಮಲ್ಲಾಪುರ ಎಂಬ ಊರಿನಲ್ಲಿ ಶಿಲಾಯುಗದ ಪಳಿಯುಳಿಕೆಯಾಗಿ ಹಳೆಯ ಕಾಲದ ನಿವೇಶನ, ಬಂಡೆ ಮೇಲಿನ ಅಪರೂಪದ ರೇಖಾಚಿತ್ರಗಳು ದೊರೆತಿದೆ. 3ನೇ ಶತಮಾನದ್ದು ಎಂದು ಅಂದಾಜಿಸಲಾಗಿರುವ ಶಾತವಾಹನರ ಕಾಲದ ಶಾಸನವು ಅಲ್ಲಿ ಸಿಕ್ಕಿರುವ ಮೂಲಕ ಅಲ್ಲೊಂದು ದೊಡ್ಡದಾದ ದೇವಸ್ಥಾನವಿತ್ತು ಎಂಬುದಾಗಿ ಇಲ್ಲಿ ಸಂಶೋಧನೆ ನಡೆಸಿದವರ ಅಭಿಪ್ರಾಯವಾಗಿದೆ. 10ನೇ ಶತಮಾನಕ್ಕೆ ಸೇರಿದ ನಂದಿಕಲ್ಲು ಶಾಸನ ಕಾಲದಲ್ಲೂ ಅಲ್ಲಿನ ದೇವಸ್ಥಾನಗಳ ಉಲ್ಲೇಖವಿದೆ. ಅದೇ ಅಲ್ಲದೇ ಈ ಹಿಂದೆ ಅಲ್ಲೊಂದು ಭವ್ಯವಾದ ಅರಮನೆ ಮತ್ತು ಅಗ್ರಹಾರಗಳಿಂದ ಕೂಡಿದ್ದ ದೊಡ್ಡದಾದ ಸುಸಜ್ಜಿತವಾದ ನಗರವಾಗಿತ್ತು ಎಂಬುದಕ್ಕೆ ಪುರಾವೆ ಎನ್ನುವಂತೆ 1 x 1 ಅಗಲದ 6 ಇಂಚುಗಳ ದಪ್ಪದ ಸಾವಿರಾರು ವರ್ಷಗಳ ಹಿಂದಿನ ಇಟ್ಟಿಗೆಗಳು ಅಲ್ಲಿ ದೊರೆತಿದ್ದು ಇಂದಿಗೂ ಅದನ್ನು ಭಾರವಾದ ಆಯುಧಗಳಿಂದಲೂ ಭಿನ್ನಮಾಡಲಾಗಷ್ಟು ಗಟ್ಟಿಮುಟ್ಟಾಗಿದೆ. ಈಗ ಆ ಪ್ರದೇಶಗಳಲ್ಲಿ ಒಂದಷ್ಟು ಮನೆಗಳು ಇದ್ದರೆ ಉಳಿದ ಪ್ರದೇಶದವು ಅರಣ್ಯವಾಗಿದ್ದು ಸರಿಯಾಗಿ ಉತ್ಖನ ಮಾಡಿದಲ್ಲಿ ಭೂಗತವಾಗಿರಬಹುದಾದ ದೇವಸ್ಥಾನ ಮತ್ತು ನಗರದ ಹೆಚ್ಚಿನ ವಿಷಯಗಳು ತಿಳಿದು ಬರಬಹುದು ಎಂದು ಸ್ಥಳೀಯರು ಮತ್ತು ಮೃಗವಧೆ ಊರಿನ ಬಗ್ಗೆ ಕಾಳಜಿಯುಳ್ಳ ಶ್ರೀ ಅಭಿನಂದನ್ ಭಟ್ ಮೃಗವಧೆ ಅವರು ತಿಳಿಸಿದರು.
ತೀರ್ಥಹಳ್ಳಿಯಿಂದ 27 ಮತ್ತು ಕೊಪ್ಪದಿಂದ 17 ಕಿಮೀ, ರಾಷ್ಟ್ರಕವಿ ಕುವೆಂಪು ಅವರ ಜನ್ಮಸ್ಥಳವಾದ ಕುಪ್ಪಳ್ಳಿಯಿಂದ 25 ಕಿಮೀ ದೂರದಲ್ಲಿರುವ ಈ ಮೃಗವಧೆಗೆ ಬರಲು ಖಾಸಗಿ ಮತ್ತು ಸರ್ಕಾರಿ ವಾಹನಗಳ ಸೌಕರ್ಯವಿದ್ದು, ದೂರದ ಊರಿನಿಂದ ಬರುವ ಭಕ್ತಾದಿಗಳಿಗೆಂದೇ ಪ್ರತೀ ದಿನ ಮಧ್ಯಾಹ್ನ ದಾಸೋಹದ ವ್ಯವಸ್ಥೆಯೂ ಮೃಗವಧೆ ಮಲ್ಲಿಕಾರ್ಜುನ ದೇವಸ್ಥಾನದಲ್ಲಿದೆ.
ಇಷ್ಟೆಲ್ಲಾ ಮಾಹಿತಿಗಳು ದೊರೆತ ಮೇಲೆ ಇನ್ನೇಕೆ ತಡಾ ಸ್ವಲ್ಪ ಸಮಯ ಮಾಡಿಕೊಂಡು ಮಲೆನಾಡಿನ ಕಡೆ ಪ್ರಯಾಣ ಬೆಳಸಿ ಮೃಗವಧೆಯ ಬ್ರಾಹ್ಮಿ ನದಿಯಲ್ಲಿ ಮಿಂದೆಂದು ಶ್ರೀ ಶನೈಶ್ವರ ಮತ್ತು ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ದರ್ಶನ ಪಡೆದು ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ತಾನೇ?
ಏನಂತೀರೀ?
ನಿಮ್ಮವನೇ ಉಮಾಸುತ