ಶ್ರೀ ರಾಮಾನುಜಾಚಾರ್ಯರ ಸಮಾನತೆಯ ಪ್ರತಿಮೆ

Shanakra-01ಏಳನೇ ಶತಮಾನದಲ್ಲಿ ಬೌದ್ಧ ಮತ್ತು ಜೈನಮತಗಳು ಉಚ್ಛ್ರಾಯ ಸ್ಥಿತಿಯಲ್ಲಿದ್ದು ನಾನಾ ಕಾರಣಗಳಿಂದಾಗಿ ಹಿಂದೂಧರ್ಮದ ಅನೇಕರು ಮತಾಂತರಗೊಂಡು ಹಿಂದೂ ಧರ್ಮದ ಅವಸಾನವಾಗಲಿದೇ ಎಂದೇ ಕಳವಳಗೊಂಡಿದ್ದಾಗ,  ಹಿಂದೂ ಧರ್ಮದ ಪುನರುತ್ಥಾನಕ್ಕೆ ಆ ಭಗವಂತನೇ ಶಂಕರಾಚಾರ್ಯರು, ರಾಮಾನುಜಾಚಾರ್ಯರು ಮತ್ತು ಮಧ್ವಾಚಾರ್ಯರು ಎಂಬ ಆಚಾರ್ಯತ್ರಯರ ಮೂಲಕ ಮನುಷ್ಯ ಸ್ವರೂಪವಾಗಿ ಭಾರತದಲ್ಲಿ ಹುಟ್ಟಿ ಬಂದು ಸನಾತನ ಧರ್ಮದ ಬಗ್ಗೆ ಇದ್ದ ತಪ್ಪು ತಿಳುವಳಿಕೆಗಳನ್ನು ಹೋಗಲಾಡಿಸಿ ಸನಾತನಧರ್ಮವನ್ನು ಸರಳೀಕರಿಸಿ ಮತ್ತೆ ನಮ್ಮ ದೇಶದಲ್ಲಿ ಹಿಂದೂ ಧರ್ಮ ತಲೆ ಎತ್ತುವಂತೆ ಮಾಡಿದ ಮಹಾನುಭಾವರು. ಕ್ರಿ.ಶ 788 ರಲ್ಲಿ ಅವತರಿಸಿದ ಶ್ರೀ ಶಂಕರಾಚಾರ್ಯರು ಅಹಂ ಬ್ರಹ್ಮಾಸ್ಮಿ ಎಂದರೆ, ಎಲ್ಲರಲ್ಲೂ ಭಗವಂತನು ಇದ್ದಾನೆ ಎಂಬ ಅದ್ವೈತ ತತ್ವವನ್ನು ಪ್ರತಿಪಾದಿಸಿದರೆ, ಕ್ರಿ.ಶ 1017 ರಲ್ಲಿ ಅವತರಿಸಿದ ರಾಮಾನುಜಾಚಾರ್ಯರು ಹರಿಯೇ ಸರ್ವೋತ್ತಮ ಎಂಬ ವಿಶಿಷ್ಠಾದ್ವೈತವನ್ನು ಪ್ರತಿಪಾದಿಸಿದರೆ, ಕ್ರಿ.ಶ.1238 ರಲ್ಲಿ ಅವತರಿಸಿದ ಮಧ್ವಾಚಾರ್ಯರು ಹರಿ ಸರ್ವೋತ್ತಮ ವಾಯು ಜೀವೋತ್ತಮ ಎಂಬ ದ್ವೈತ ತತ್ವವನ್ನು ಪ್ರತಿಪಾದಿಸುವ ಮೂಲಕ ನಮ್ಮ ದೇಶದಲ್ಲಿ ಹಿಂದೂಧರ್ಮವನ್ನು ಎತ್ತಿ ಹಿಡಿದ ಪ್ರಾಥಃಸ್ಮರಣೀಯ ಮಹಾನುಭಾವರು ಎಂದರೂ ಅತಿಶಯವಲ್ಲ.

r2ಕೆಲ ತಿಂಗಳುಗಳ ಹಿಂದೆ ಕೇದಾರದಲ್ಲಿ ಶ್ರೀ ಶಂಕರಾಚಾರ್ಯರ ಪ್ರತಿಮೆಯನ್ನು ಪ್ರತಿಷ್ಟಾಪನೆ ಮಾಡಿದ್ದರೆ, ದಿ. 05.02.2022 ರ ವಸಂತ ಪಂಚಮಿಯ ಶುಭದಿನದಂದು ತೆಲಂಗಾಣದ ಶಂಷಾಬಾದ್ ನಲ್ಲಿ ಪ್ರಪಂಚದ ಎರಡನೇ ಅತಿ ದೊಡ್ಡ (ಕುಳಿತಿರುವ ಭಂಗಿ)ಯ ಶ್ರೀ ವೈಷ್ಣವ ಧರ್ಮದ ಪ್ರತಿಪಾದಕರಾದ ಶ್ರೀ ರಾಮಾನುಜಾಚಾರ್ಯರ ಸಮಾನತೆಯ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ಈ ಮಂದಿರದ ಒಟ್ಟು ಎತ್ತರ 216 ಅಡಿಗಳಿದ್ದು ನಮಸ್ಕಾರ ಸ್ಥಿತಿಯಲ್ಲಿ ಕುಳಿತಿರುವ ಆಚಾರ್ಯ ಶ್ರೀ ರಾಮಾನುಜರ ವಿಗ್ರಹದ ಎತ್ತರವೇ 108 ಅಡಿಗಳಷ್ಟು ಭವ್ಯ್ವವಾಗಿದೆ.

ಈ ಸಮಾನತೆಯ

ಪ್ರತಿಮೆಯ ವೈಶಿಷ್ಟ್ಯಗಳು ಈ ರೀತಿಯಾಗಿದೆ.

  • ಶ್ರೀ ಚಿನ್ನ ಜೀಯರ್ ಸ್ವಾಮಿಯವರ ಪರಿಕಲ್ಪನೆಯಂತೆ ಹೈದ್ರಾಬಾದ್‍ನ ಮುಚ್ಚಿಂತಲದಲ್ಲಿ ಅವರ ಆಶ್ರಮದ 40 ಎಕರೆ ವಿಸ್ತಾರವಾದ ಆವರಣದಲ್ಲಿ ವಿಶಿಷ್ಟಾದ್ವೈತ ಸಿದ್ಧಾಂತದ ಪ್ರತಿಪಾದಕ ರಾಮಾನುಜಾಚಾರ್ಯರ ಸಹಸ್ರಾಬ್ಧಿಯ (ರಾಮಾನುಜಾಚಾರ್ಯರ 1,000 ವರ್ಷಗಳ ಜಯಂತಿ) ಪ್ರಯುಕ್ತ 216 ಅಡಿ ಎತ್ತರದ ದೇವಾಲಯ ನಿರ್ಮಾಣ ಮಾಡಲಾಗಿದ್ದು ಅದರಲ್ಲಿ ವಿಗ್ರಹದ ಎತ್ತರವೇ 108 ಅಡಿ ಇದ್ದು ಶ್ರೀ ರಾಮಾನುಜರ ಕೈಯಲ್ಲಿರುವ ತ್ರಿದಂಡವೂ ಸೇರಿ 135 ಅಡಿ ಎತ್ತರವಿದೆ.
  • 2017 ರಲ್ಲಿ ಆರಂಭಿಸಲಾದ ಈ ಮಂದಿರದ ನಿರ್ಮಾಣ ನಾಲ್ಕು ವರ್ಷಗಳಲ್ಲಿ ಧ್ಯಾನ ಮುದ್ರೆಯಲ್ಲಿ ಕುಳಿತಿರುವ ರಾಮಾನುಜಾಚಾರ್ಯರು ಪ್ರತಿಮೆಯ ವೇದಿಕೆಯ ಎತ್ತರ 54 ಅಡಿ, ಪದ್ಮಪೀಠದ ಎತ್ತರ 27 ಅಡಿ ಇದ್ದು, ದ್ರಾವಿಡ ರಾಜ್ಯಗಳ ಶಿಲ್ಪಗಳ ಮಾದರಿಯಲ್ಲಿ ವಿಗ್ರಹದ ರಚನೆ ಮಾಡಿದ್ದು ಸುಮಾರು 7 ಸಾವಿರ ಟನ್ ಗಳಷ್ಟು ಬಂಗಾರ, ಬೆಳ್ಳಿ, ತಾಮ್ರ, ಕಂಚು ಮತ್ತು ಸೀಸವೂ ಸೇರಿದಂತೆ ಪಂಚಲೋಹಗಳಿಂದ ಈ ಪ್ರತಿಮೆಯನ್ನು ನಿರ್ಮಿಸಲಾಗಿದೆ.
  • ಈ ಯೋಜನೆಯ ಒಟ್ಟು ವೆಚ್ಚ ಸುಮಾರು ₹1,000 ಕೋಟಿಗಳಾಗಿದ್ದು ವಿಶ್ವಾದ್ಯಂತ ಹರಡಿಕೊಂಡಿರುವ ಅಚಾರ್ಯರ ಭಕ್ತರು ಮತ್ತು ದಾನಿಗಳಿಂದ ನಿಧಿ ಸಂಗ್ರಹಿಸಿ ನಿರ್ಮಿಸಲಾಗಿದೆ.
  • ಭದ್ರವೇದಿ ಎಂಬ ಮೂರು ಅಂತಸ್ತಿನ 54 ಅಡಿ ರಚನೆಯ ಮೇಲೆ ನಿರ್ಮಿಸಲಾದ ಬೃಹತ್ ಕಮಲದ ಮೇಲೆ ಪ್ರತಿಮೆಯನ್ನು ಇರಿಸಲಾಗಿದ್ದು, 63,444 ಚದರ ಅಡಿ ವಿಸ್ತೀರ್ಣವನ್ನು ಹೊಂದಿರುವ ನೆಲ ಮಹಡಿಯು ರಾಮಾನುಜಾಚಾರ್ಯರ ಜೀವನ ಮತ್ತು ಅವರ ತತ್ವಶಾಸ್ತ್ರದ ಹಿರಿಮೆ ಗರಿಮೆಯನ್ನು ಚಿತ್ರಾತ್ಮಕವಾಗಿ ಪ್ರಸ್ತುತಿಪಡಿಸುವಂತಿದೆ.
  • ಎರಡನೇ ಮಹಡಿಯಲ್ಲಿ, ಸುಮಾರು 300,000 ಚದರ ಅಡಿ ಪ್ರದೇಶದಲ್ಲಿ ರಾಮಾನುಜಾಚಾರ್ಯರ ದೇವಸ್ಥಾನವಿದ್ದು, ಅಲ್ಲಿ ಅವರ 120 ಕೆಜಿ ಚಿನ್ನದ ಪ್ರತಿಮೆಯನ್ನು ದೈನಂದಿನ ಪೂಜೆಗಾಗಿ ಸ್ಥಾಪನೆ ಮಾಡಲಾಗಿದೆ.
    14,700 ಚದರ ಅಡಿಯ ಮೇಲಿನ ಮಹಡಿಯಲ್ಲಿ ವೈದಿಕ ಡಿಜಿಟಲ್ ಗ್ರಂಥಾಲಯ ಮತ್ತು ಸಂಶೋಧನಾ ಕೇಂದ್ರವಿದೆ.
  • ಭದ್ರವೇದಿಯ ಹೊರಗೆ, ಪ್ರತಿಮೆಯ ಸುತ್ತಲೂ 34 ಎಕರೆ ಭೂಮಿಯಲ್ಲಿ ಕಲ್ಲಿನಲ್ಲಿ ನಿರ್ಮಿಸಲಾದ 108 ದಿವ್ಯ ಕ್ಷೇತ್ರಗಳ, 108 ಸುಂದರ ವಿಷ್ಣು ದೇಗುಲಗಳಿಂದ ಸುತ್ತುವರಿಯಲ್ಪಟ್ಟಿದೆ.
  • ವಿಶ್ವ ಭ್ರಾತುತ್ವ ಮತ್ತು ವಿಶ್ವ ಸಮಾನತೆಯನ್ನು ಸಾರುವ ನಿಟ್ಟಿನಿಂದ ಪ್ರಪಂಚದ ಎಲ್ಲಾ ದೇಶಗಳ ಧ್ವಜಗಳನ್ನು ಈ ಪ್ರತಿಮೆಯ ಬಳಿ ಸ್ಥಾಪಿಸುವ ಉದ್ದೇಶವನ್ನು ಹೊಂದಿದ್ದು, ನಂಬಿಕೆ, ಜಾತಿ ಮತ್ತು ಪಂಥ ಸೇರಿದಂತೆ ಜೀವನದ ಎಲ್ಲಾ ಅಂಶಗಳಲ್ಲಿ ಶ್ರೀ ರಾಮಾನುಜಾಚಾರ್ಯರು ಪ್ರಚಾರ ಮಾಡಿದ ಸಮಾನತೆಯ ಕಲ್ಪನೆಗೆ ಅನುಗುಣವಾಗಿ ಇದನ್ನು ನಿರ್ಮಿಸಲಾಗಿದೆ.
  • ಮಂದಿರವೂ ಸೇರಿದಂತೆ ಒಟ್ಟು 216 ಅಡಿ ಎತ್ತರದ ಈ ಬೃಹತ್ ಪ್ರತಿಮೆಯು ವಿಶ್ವದ 2ನೇ ಅತೀ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆ ಪಾತ್ರವಾಗಿರುವುದು ಗಮನಾರ್ಹವಾಗಿದೆ.

ರಾಷ್ಟ್ರಪತಿಗಳಾದ ಶ್ರೀ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿಗಳಾದ ಶ್ರೀ ಎಂ ವೆಂಕಯ್ಯ ನಾಯ್ಡು ಮತ್ತು ವಿಶ್ವದ ಎಲ್ಲೆಡೆಯಿಂದಲೂ ಬಂದಿದ್ದ ಹಲವಾರು ಗಣ್ಯರ ಸಮ್ಮುಖದಲ್ಲಿ ಶ್ರೀ ಶ್ರೀ ಶ್ರೀ ಚಿನ್ನ ಜೀಯರ್ ಸ್ವಾಮಿಗಳ ನೇತೃತ್ವದಲ್ಲಿ ಶ್ರೀ ರಾಮಾನುಜಾಚಾರ್ಯರ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ, ರಾಮಾನುಜರ ಜ್ಞಾನ ಇಡೀ ವಿಶ್ವಕ್ಕೆ ವ್ಯಾಪಿಸಲಿದ್ದು, ಮಾನವೀಯ ಶಕ್ತಿಗೆ ಪ್ರೇರೆಪಣೆ ನೀಡಿದೆ. ಮುಂದಿನ ಪೀಳಿಗೆಗೆ ಈ ಪುರಾತನ ಸಂಸ್ಕೃತಿಯನ್ನು ಬಿಂಬಿಸಲು ಈ ಪ್ರತಿಮೆ ದಾರಿ ದೀಪವಾಗಲಿದೆ. ಸಮಾನತೆಯ ಪ್ರತಿಮೆ ಯುವಕರನ್ನು ಸ್ಫೂರ್ತಿಗೊಳಿಸುತ್ತದೆ. ರಾಮಾನುಜಾಚಾರ್ಯರ ಈ ಪ್ರತಿಮೆ ಅವರ ಜ್ಞಾನ, ನಿರ್ಲಿಪ್ತತೆ ಮತ್ತು ಆದರ್ಶಗಳ ಸಂಕೇತವಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಸನಾತನ ಸಂಸ್ಕೃತಿ ಉಳಿವಿಗಾಗಿ ಮತ್ತು ಅಸಮಾನತೆಯನ್ನು ಹೋಗಲಾಡಿಸುವ ಅಲುವಾಗಿ ಸುಮಾರು 120 ವರ್ಷಗಳ ಕಾಲ ಜೀವಿಸಿದ್ದ ಶ್ರೀ ರಾಮಾನುಜಾಚಾರ್ಯರ ಬಗೆ ಹೆಚ್ಚಿನ ಮಾಹಿತಿಯನ್ನು ಈ https://enantheeri.com/2020/04/28/ramanujacharya/ ಲೇಖನದ ಮೂಲಕ ತಿಳಿದು ಕೊಳ್ಳಬಹುದಾಗಿದೆ.

te7ಪಾಶ್ಚಿಮಾತ್ಯ ಅಂಧಾನುಕರಣೆ ಮತ್ತು ಅನ್ಯಮತೀಯರ ನಾನಾರೀತಿಯ ಆಮಿಷಗಳ ಕಾರಣದಿಂದಾಗಿ ಹೆಚ್ಚುತ್ತಿರುವ ಮತಾಂತರದ ಈ ಕಾಲದಲ್ಲಿ ಶ್ರೀ ರಾಮಾನುಜಾಚಾರ್ಯರ ಈ ಬೃಹತ್ ಪ್ರತಿಮೆಯು ಅನಾವರಣಗೊಂಡಿರುವುದು ಇಂದಿನ ಯವಜನತೆಗೆ ನಮ್ಮ ಸನಾತನ ಧರ್ಮದ ಹಿರಿಮೆ ಮತ್ತು ಗರಿಮೆಯ ಬಗ್ಗೆ ಒಲವು ಮೂಡಿಸುವಂತಾಗಲಿ ಎನ್ನುವುದೇ ಎಲ್ಲರ ಆಶಯವಾಗಿದೆ.

ಆಚಾರ್ಯ ದೇವೋಭವ. ಧರ್ಮೋ ರಕ್ಷತಿ ರಕ್ಷಿತಃ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s