ಫೆಬ್ರವರಿ 14 ಎಂದ ತಕ್ಷಣ ಇಂದಿನ ಯುವ ಜನಾಂಗಕ್ಕೆ ನೆನಪಿಗೆ ಬರುವುದೇ ಪ್ರೇಮಿಗಳ ದಿನ ಹಾಗಾಗಿ ಗುಲಾಬಿ ಹಿಡಿದು ತಮ್ಮ ಪ್ರೇಮಿಗಳಿ ಸೆರಗು ಸುತ್ತುವುದರಲ್ಲೇ ಸಮಯ ಕಳೆಯುತ್ತಿದ್ದರೆ, ನಿಜವಾದ ಭಾರತೀಯರಿಗೆ ಮಾತ್ರಾ ಈ ದಿನ ಅತ್ಯಂತ ಕರಾಳ ದಿನವಾಗಿದ್ದು, 2019ರಂದು ಇದೇ ದಿನ ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ, ಭದ್ರತಾ ಸಿಬ್ಬಂದಿಗಳು ಪ್ರಯಾಣಿಸುತ್ತಿದ್ದ ವಾಹನಕ್ಕೆ ಪುಲ್ವಾಮಾ ಜಿಲ್ಲೆಯ ಅವಂತಿಪುರದ ಬಳಿಯ ಲೆಥೋರ್ ಪುರದಲ್ಲಿ ಆತ್ಮಹತ್ಯಾ ಬಾಂಬರ್ ವಾಹನದಿಂದ ನಡೆಸಿದ ದಾಳಿಯಿಂದಾಗಿ ಕೇಂದ್ರ ಮೀಸಲು ಪೊಲೀಸ್ ಪಡೆಯ 40 ಮಂದಿ ಹುತಾತ್ಮರಾದ ದಿನವಾಗಿದೆ.
2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ ಕಾಶ್ಮೀರದ ಉಗ್ರಗಾಮಿಗಳು ಮತ್ತು ಅವರನ್ನು ಬೆಂಬಲಿಸುತ್ತಿದ್ದ ಹುರಿಯತ್ ಕಾನ್ಫರೆನ್ಸ್ ನಾಯಕರ ಓಲೈಕೆಯನ್ನು ನಿಲ್ಲಿಸಿದ್ದೇ ಪಾಕೀಸ್ಥಾನಿ ಉಗ್ರಗಾಮಿಗಳ ಕಿಚ್ಚನ್ನು ಹೆಚ್ಚಿಸಿ, 2015ರ ಆರಂಭದಲ್ಲಿ, ಕಾಶ್ಮೀರದಲ್ಲಿ ಪಾಕಿಸ್ತಾನ ಮೂಲದ ಉಗ್ರಗಾಮಿಗಳು ಭಾರತೀಯ ಭದ್ರತಾ ಪಡೆಗಳ ವಿರುದ್ಧ ಆತ್ಮಹತ್ಯೆ ದಾಳಿ ನಡೆಸಿದ್ದಲ್ಲದೇ, ಜುಲೈ 2015 ರಲ್ಲಿ, ಗುರದಾಸ್ ಪುರದಲ್ಲಿ ಬಸ್ ಮತ್ತು ಪೊಲೀಸ್ ಠಾಣೆಯ ಮೇಲೆ ಮೂರು ಮುಸುಕುಧಾರಿ ಬಂದೂಕುದಾರಿಗಳು ದಾಳಿ ಮಾಡಿದ್ದರು. 2016 ರ ಆರಂಭದಲ್ಲಿ 4-6 ಬಂದೂಕುದಾರಿಗಳು ಪಠಾನ್ ಕೋಟ್ ಏರ್ ಫೋರ್ಸ್ ಸ್ಟೇಷನ್ ಮೇಲೆಯೂ ಆಕ್ರಮಣ ಮಾಡಿದ್ದರು . ಫೆಬ್ರವರಿ ಮತ್ತು ಜೂನ್ 2016 ರಲ್ಲಿ, ಉಗ್ರಗಾಮಿಗಳು ಕ್ರಮವಾಗಿ 9 ಮತ್ತು 8 ಭದ್ರತಾ ಸಿಬ್ಬಂದಿಗಳನ್ನು ಪಾಂಪೋರ್ನಲ್ಲಿ ಕೊಂದಿದ್ದರು. ಸೆಪ್ಟೆಂಬರ್ 2016 ರಲ್ಲಿ, ನಾಲ್ಕು ಆಕ್ರಮಣಕಾರರು ಉರಿ ಯಲ್ಲಿ ಭಾರತೀಯ ಸೈನ್ಯದ ಬ್ರಿಗೇಡ್ ಪ್ರಧಾನ ಕಾರ್ಯಾಲಯದಲ್ಲಿ 19 ಸೈನಿಕರನ್ನು ಕೊಂದ್ದಿದ್ದರು. 2017ರ ಡಿಸೆಂಬರ್ 31 ರಂದು, ಲೆಥ್ಪಾರದಲ್ಲಿನ ಕಮಾಂಡೋ ತರಬೇತಿ ಕೇಂದದಲ್ಲಿ ಉಗ್ರಗಾಮಿಗಳು 5 ಭದ್ರತಾ ಸಿಬ್ಬಂದಿಯನ್ನು ಕೊಲ್ಲುವ ಮೂಲಕ ಪದೇ ಪದೇ ಭಾರತೀಯ ಸೈನಿಕರ ಮೇಲೆ ಧಾಳಿ ನಡೆಸಿ ಸಣ್ಣ ಪ್ರಮಾಣದಲ್ಲಿ ಆತಂಕವನ್ನು ಉಂಟು ಮಾಡುತ್ತಲೇ ಇದ್ದರು.
ಆದರೆ 2019 ರ ಫೆಬ್ರುವರಿ 14 ರಂದು, ಜಮ್ಮುವಿನಿಂದ ಶ್ರೀನಗರಕ್ಕೆ 2,500 ಕ್ಕಿಂತ ಹೆಚ್ಚು ಸೆಂಟ್ರಲ್ ರಿಸರ್ವ್ ಪೋಲಿಸ್ ಫೋರ್ಸ್ (ಸಿಆರ್ಪಿಎಫ್) ಸಿಬ್ಬಂದಿಗಳು 78 ವಾಹನಗಳಲ್ಲಿ ಪ್ರಯಾಣಿಸುತಿದ್ದ ವಿಷಯವನ್ನು ಅರಿತ ಉಗ್ರಗಾಮಿಗಳ ತಂಡ ಮಧ್ಯಾಹ್ನ ಸುಮಾರು 3:15ಕ್ಕೆ ಅವಾಂತಿಪುರ ಬಳಿಯ ಲೆತ್ಪೊರ ದಲ್ಲಿ ಸಾಲು ಸಾಲಾಗಿ ಭದ್ರತಾ ಸಿಬ್ಬಂದಿಗಳು ಹೋಗುತ್ತಿದ್ದ ವಾಹನಕ್ಕೆ ಸ್ಪೋಟಕಗಳನ್ನು ಹೊತ್ತಿದ್ದ ಮಾರುತಿ ಇಕೋ ಕಾರೊಂದು ಏಕಾಏಕೀ ಎಲ್ಲಾ ಭದ್ರತೆಗಳನ್ನು ವಿಭಜಿಸಿಕೊಂಡು ಏಕಾ ಏಕಿ ಗುದ್ದಿದಾಗ ಅದರಲ್ಲಿದ್ದ ಬಾಂಬ್ ಗಳು ಸ್ಪೋಟಗೊಂಡು, 76ಬೆಟಾಲಿಯನ್ ನ 40 ಮೀಸಲು ಪಡೆಯ ಯೋಧರು ಹುತಾತ್ಮರಾದರು.
ಅಚಾನಕ್ಕಾಗಿ ಈ ಪರಿಯ ಯೋಧರನ್ನು ಕಳೆದುಕೊಂಡಿದ್ದಕ್ಕೆ ಇಡೀ ದೇಶವೇ ಒಂದು ಕ್ಷಣ ಧಿಗ್ಭ್ರಮೆಗೆ ಒಳಗಾಗಿದ್ದಲ್ಲದೇ, ಈ ದಾಳಿಗೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಯಿತು. ಪಕ್ಷಭೇದ ಮರೆತು ರಾಜಕೀಯ ನಾಯಕರು, ಸಮಾಜದ ಗಣ್ಯರು ಈ ಘಟನೆಯನ್ನು ಖಂಡಿಸಿದ್ದರು.
ಪ್ರಧಾನಿ ನರೇಂದ್ರ ಮೋದಿಯವರಂತೂ ಈ ದಾಳಿಯನ್ನು ಬಲವಾಗಿ ಖಂಡಿಸಿದ್ದಲ್ಲದೇ, ಈ ದಾಳಿ ನನ್ನ ಹೃದಯದ ರಕ್ತವನ್ನು ಕುದಿಸಿದೆಯಲ್ಲದೇ, ನಾವೂ ಸಹಾ ಅದೇ ರೀತಿಯ ಪ್ರತಿ ದಾಳಿ ಮಾಡಬೇಕೆಂಬ ಆಕ್ರೋಶ ಹೆಚ್ಚುತ್ತಿದೆ ಎಂದಿದ್ದಲ್ಲದೇ, ನಮ್ಮ ಯೋಧರನ್ನು ಕಳೆದುಕೊಂಡ ದುಃಖದ ಕಣ್ಣೀರಿಗೆ ಪ್ರತೀಕಾರವನ್ನು ಖಂಡಿತವಾಗಿಯೂ ತೀರಿಸುತ್ತೇವೆ ಎಂದಿದ್ದರು. ಆದಾದ ನಂತರ ಉಗ್ರಗಾಮಿಗಳು ಮತ್ತು ಶತ್ರುಗಳ ಜೊತೆ ಪ್ರತೀಕಾರ ತೀರಿಸಲು ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದು ಮಹತ್ತರವಾದ ಬದಲಾವಣಿಯಾಗಿತ್ತು.
ಪಾಕಿಸ್ತಾನ ಮೂಲದ ಉಗ್ರಗಾಮಿ ಗುಂಪಾದ ಜೈಶ್-ಎ-ಮೊಹಮ್ಮದ್ ಈ ದಾಳಿಯ ಜವಾಬ್ದಾರಿಯನ್ನು ಹೊತ್ತು ಕೊಂಡಿದ್ದಲ್ಲದದೇ 22 ವರ್ಷದ ಆದಿಲ್ ಅಹ್ಮದ್ ದಾರ್ ಎಂಬ ಹೆಸರಿನ ಸ್ಥಳೀಯ ಯುವಕನನ್ನು ಈ ಆತ್ಮಾಹುತಿ ದಾಳಿಗೆ ಬಳಸಿಕೊಂಡ ವಿಡಿಯೋ ಪ್ರದರ್ಶಿಸಿತ್ತು. ಈ ಪುಲ್ವಾಮ ಧಾಳಿಯನ್ನು ವಿಶ್ವಸಂಸ್ಥೆ ಸೇರಿದಂತೆ ಜಗತ್ತಿನಾದ್ಯಂತ ದೇಶಗಳು ಖಂಡಿಸಿ ಭಾರತಕ್ಕೆ ಉಗ್ರರ ವಿರುದ್ಧ ದಾಳಿಯಲ್ಲಿ ಬೆಂಬಲ ಸೂಚಿಸಿದವು. ಈ ಭೀಕರ ದಾಳಿಯ ರೂವಾರಿಯಾಗಿದ್ದ ಜೆಇಎಂ ಮುಖ್ಯಸ್ಥ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಣೆ ಮಾಡಬೇಕೆಂದು ಭಾರತದ ರಾಜತಾಂತ್ರಿಕ ಪ್ರಯತ್ನಕ್ಕೆ ಸರ್ವರೂ ಬೆಂಬಲಸಿದರೆ, .ಪಾಕಿಸ್ತಾನದ ಮಿತ್ರರಾಷ್ಟ್ರ ಚೀನಾ ಕೂಡ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಈ ನಿರ್ಣಯಕ್ಕೆ ಬೆಂಬಲ ಸೂಚಿಸಿ ಇದೊಂದು ಹೇಡಿ ಕೃತ್ಯ ಎಂದು ಟೀಕಿಸಿತ್ತು.
ಈ ಪುಲ್ವಾಮಾ ದಾಳಿ ನಡೆದು ಸರಿಯಾಗಿ 12 ನೇ ದಿನ ಹುತಾತ್ಮರಾದ ನಂತರ ಆ ಸೈನಿಕರ ಮನೆಗಳಲ್ಲಿ ವೈಕುಂಠ ಸಮಾರಾಧನೆ ಮಾಡಲು ಸಿದ್ದವಾಗಿದ್ದರೆ, 2019ರ ಫೆಬ್ರವರಿ 26ರಂದು ಮುಂಜಾನೆ 3.30ರ ವೇಳೆ ಬಾಲಾಕೋಟ್ ಪ್ರದೇಶದಲ್ಲಿ ಜೈಷ್-ಎ- ಮೊಹಮ್ಮದ್ ಉಗ್ರರ ಶಿಬಿರ ಇದ್ದದ್ದನ್ನು ಖಚಿತ ಪಡಿಸಿಕೊಂಡ ಭಾರತದ ವಾಯುಪಡೆಯ 12 ಜೆಟ್ ಗಳು ಏಕಾ ಏಕಿ ನಡೆಸಿದ ದಾಳಿಯಿಂದಾಗಿ ನಿದೆಯಲ್ಲಿದ್ದ ಸುಮಾರು 250 ಉಗ್ರಗಾಮಿಗಳಿಗೆ ನರಕದ ದಾರಿಯನ್ನು ತೋರಿಸುವ ಮೂಲಕ, ಈ ಕೃತ್ಯದ ಹಿಂದಿದ್ದ ಪಾಪಿ ಪಾಕ್‍ಗೆ ಸರಿಯಾದ ಪ್ರತ್ಯುತ್ತರವನ್ನು ನೀಡಿತ್ತು. ಭಾರತೀಯ ವಾಯುಪಡೆಯ 12 ಮಿರಾಜ್ 2000 ಜೆಟ್ಗಳು ಪಾಕ್ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಬಾಲಕೋಟ್ನಲ್ಲಿದ್ದ ಉಗ್ರಗಾಮಿ ನೆಲೆಗಳ ಯಾವುದೇ ರೀತಿಯ ವೈಮಾನಿಕ ದಾಳಿ ನಡೆಸಿಲ್ಲ ಬದಲಾಗಿ ತಮ್ಮ ದೇಶದ ಸೈನಿಕರೇ 2 ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿ, ಪೈಲಟ್ ಬಂಧನ ಮಾಡಿರುವುದಾಗಿ 27 ಫೆಬ್ರವರಿ 2019 ರಂದು ಪಾಕಿಸ್ಥಾನ ಹೇಳಿಕೊಂಡಿತಾದರೂ, ಭಾರತದ ರಾಜತಾಂತ್ರಿಕ ಒತ್ತಡಕ್ಕೆ ಮಣಿದು ಕೇವಲ ಒಂದೇ ದಿನದಲ್ಲಿ ಅಚಾನಕ್ಕಾಗಿ ಸೆರೆ ಸಿಕ್ಕಿದ್ದ ಪೈಲಟ್ ಅಭಿನಂದನ್ ಅವರನ್ನು ಬಿಟ್ಟು ಕಳಿಸಿದಲ್ಲದೇ, ಪಾಕಿಸ್ಥಾನ ತಮ್ಮ ದೇಶ ಉಗ್ರರತಾಣ ಎಂಬುದನ್ನು ಒಪ್ಪಿಕೊಳ್ಳಲಾಗದೇ, ಭಾರತ ನಡೆಸಿದ ವೈಮಾನಿಕ ಧಾಳಿಯು ಜನ ರಹಿತ ಕಣಿವೆಯಲ್ಲಿ ಆದ ಕಾರಣ ಯಾವುದೇ ಜನರ ಪ್ರಾಣ ಹಾನಿಯಾಗಿಲ್ಲ ಎಂದು ತಿಪ್ಪೇಸಾರಿಸಿತು.
ಪುಲ್ವಾಮ ಧಾಳಿ ನಡೆದು 40 ಸಿಆರ್ಪಿಎಘ್ ಯೋಧರು ಹುತಾತ್ಮರಾದ ನಂತರ ಭಾರತ ಸರ್ಕಾರ ನೀಡಿದ License to attack/kill ಅನುಮತಿಯನ್ನು ಸಮರ್ಥವಾಗಿ ಬಳಸಿಕೊಂಡ ನಮ್ಮ ಸೇನೆ ಮೊದಲಿಗೆ ಬಾಲಾಕೋಟ್ ವೈಮಾನಿಕ ದಾಳಿ ನಡೆಸಿ ಪ್ರತೀಕಾರ ತೀರಿಸಿಕೊಂಡಿದ್ದಲ್ಲದೇ, ಆಗಸ್ಟ್ 5, 2019 ರಿಂದ ನವೆಂಬರ್ 30, 2021 ನಡುವೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸುಮಾರು 366 ಭಯೋತ್ಪಾದಕರನ್ನು ಸೆದೆ ಬಡಿಯುವ ಮೂಲಕ ಕೇಂದ್ರ ಸರ್ಕಾರ ಆರ್ಟಿಕಲ್ 370 ರದ್ದತಿಯನ್ನು ತರಲು ಮುಂದಾಗಿದ್ದಕ್ಕೂ ರೂವಾರಿಯಾಯಿತು ಎಂದರೂ ತಪ್ಪಾಗದು. ಪಾಪೀಸ್ಥಾನ ಸ್ಥಳೀಯರನ್ನು ಬಳಸಿಕೊಂಡು ಗೆರಿಲ್ಲಾ ಮಾದರಿಯ ಹೇಡಿತನದ ಆಂತರಿಕ ಧಾಳಿಯನ್ನು ನಡೆಸಿದರೆ, ಭಾರತೀಯ ಸೇನೆಯು ಸೀಮಾರೇಖೆಯನ್ನು ದಾಟಿ ಶತ್ರುಗಳು ಮುಟ್ಟಿ ನೋಡಿಕೊಳ್ಳುವಂತೆ ಪ್ರತ್ಯುತ್ತರವನ್ನು ನೀಡಬಲ್ಲದು. ಏಕೆಂದರೆ ಈಗ ಸ್ನೇಹಕ್ಕೆ ಬದ್ಧ, ಸಮರಕ್ಕೆ ಸದಾ ಸಿದ್ದವಾಗಿರುವ ಸರ್ಕಾರ ಇರೋದು ತುಸು ನೆಮ್ಮದಿಯಾಗಿದೆ.
ಇನ್ನೇಕೆ ತಡಾ.. ಕುಳಿತಲ್ಲಿಂದಲೇ ಅಂದು ಹುತಾತ್ಮರಾದ 40 ಯೋಧರಷ್ಟೇ ಅಲ್ಲದೇ ದೇಶವನ್ನು ಸುರಕ್ಷಿತವಾಗಿ ಕಾಯತ್ತಿರುವ ಎಲ್ಲಾ ಯೋಧರಿಗೂ ಹೃದಯಪೂರ್ವಕ ನಮನಗಳನ್ನು ಸಲ್ಲಿಸೋಣ ಅಲ್ವೇ?
ಏನಂತೀರೀ?
ಜೈ ಜವಾನ್.. ಬೋಲೋ ಭಾ.. ಭಾರತ.. ಮಾತಾಕೀ… ಜೈ….
ನಿಮ್ಮವನೇ ಉಮಾಸುತ