ಭಾರ್ಗವಿ ನಾರಾಯಣ್

ಕಳೆದ ವಾರವಿನ್ನೂ (ಫೆಬ್ರವರಿ 4) ಅವರ 84ನೇ ವರ್ಷದ ಹುಟ್ಟುಹಬ್ಬಕ್ಕೆ ಭಗವಂತನ ಅನುಗ್ರಹದಿಂದ ಆಯುರಾರೋಗ್ಯ ದೊರೆತು ನಮ್ಮಂತಹವರಿಗೆ ಮಾರ್ಗದರ್ಶಕಿಯಾಗಿರಿ ಎಂದು ಹಾರೈಸಿದ್ದ ಭಾರ್ಗವಿ ನಾರಾಯಣ್ ನೆನ್ನೆ ಸಂಜೆ ಇನ್ನಿಲ್ಲ ಎಂಬ ಸುದ್ದಿಯನ್ನು ಕೇಳಿದ ತಕ್ಷಣ ಥೂ.. ಜನಾ ಯಾಕೆ ಹೀಗೆ ಸುಳ್ಳು ಸುದ್ದಿ ಹರಡಿಸುತ್ತಾರಪ್ಪಾ ಎಂದು ಬೈಯ್ದಾಡುತ್ತಲೇ, ಸಾಮಾಜಿಕ ಜಾಲತಾಣದಲ್ಲಿ ನೋಡಿದಾಗ ಸುದ್ದಿ ಸುಳ್ಳಾಗಿರದೇ ಹೋದದ್ದು ನಿಜಕ್ಕೂ ಬೇಸರವನ್ನು ಮೂಡಿಸಿತು.

ಭಾರ್ಗವಿಯವರು ಬೆಂಗಳೂರಿನ ಬಸವನಗುಡಿ ನಾಮಗಿರಿಯಮ್ಮ ಮತ್ತು ಎಂ. ರಾಮಸ್ವಾಮಿ ದಂಪತಿಗಳಿಗೆ 1938ರ ಫೆಬ್ರವರಿ 4ನೇ ತಾರೀಖಿನಂದು ಜನಿಸಿದರು. ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಭಾರ್ಗವಿಯವರು ಅಮ್ಮ ಮತ್ತು ಅಜ್ಜಿಯ ಆರೈಕೆಯಲ್ಲೇ ಬೆಳೆದರು. ಬಾಲ್ಯದಿಂದಲೂ ಆಟ ಪಾಠಗಳಲ್ಲಿ ಚುರುಕಾಗಿದ್ದ ಭಾರ್ಗವಿಯವರನ್ನು ಗುರುತಿಸಿದ ಅವರ ಶಾಲಾ ಶಿಕ್ಷಕಿ ಶ್ರೀಮತಿ ವಿಮಲರವರು ಹೈಸ್ಕೂಲಿನಲ್ಲಿದ್ದಾಗಲೇ ರಂಗಭೂಮಿಯ ಬಗ್ಗೆ ಆಸಕ್ತಿ ಮೂಡಿಸಿದ್ದಲ್ಲದೇ, ಅವರದ್ದೇ ಆದ ಸಾಂಸ್ಕೃತಿಕ ತಂಡವನ್ನು ಕಟ್ಟಿಕೊಂಡು ತಮ್ಮ ಶಾಲೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದದ್ದಲ್ಲದೇ, ಅನೇಕ ಅಂತರ ಶಾಲಾ ಕಾಲೇಜುಗಳ ನಾಟಕೋತ್ಸವಗಳಲ್ಲಿ ಭಾಗವಹಿಸತೊಡಗಿದರು. ಭಾರ್ಗವಿಯವರ ನಾಟಕ ತಂಡ ಭಾಗವಹಿಸುತ್ತಿದೆ ಎಂದರೆ ಅವರ ತಂಡಕ್ಕೇ ಬಹುಮಾನ ಕಟ್ಟಿಟ್ಟ ಬುತ್ತಿ ಎಂಬುವಂತಾಗಿತ್ತು. ರಾಜ್ಯ ನಾಟಕ ಸ್ಪರ್ಧೆಗಳಲ್ಲಿ ಎರಡು ಬಾರಿ ಉತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದ ಭಾರ್ಗವಿಯವರು, ಮಹಾರಾಣಿ ಕಾಲೇಜಿನಿಂದ ಬಿ.ಎಸ್ಸಿ. ಪದವಿ ಪಡೆದ ನಂತರದಲ್ಲಿ ಇಂಗ್ಲಿಷ್‌ನಲ್ಲಿ ಎಂ.ಎ. ಪದವಿ ಪಡೆದು ಇ.ಎಸ್.ಐ. ಕಾರ್ಪೊರೇಷನ್ನಿನಲ್ಲಿ ಕೆಲಸಕ್ಕೆ ಸೇರಿಕೊಂಡರೂ ರಂಗಭೂಮಿಯ ನಂಟು ಕಡಿಮೆಯಾಗಲಿಲ್ಲ.

gn1

ಇದಕ್ಕೆ ಇಂಬು ಕೊಡುವಂತೆ ಅವರ ಮನೆಯ ಔಟ್ ಹೌಸಿಗೆ ಬಾಡಿಗೆಗೆ ಎಂದು ಬೆಳವಾಡಿ ನಂಜುಡಯ್ಯ ನಾರಾಯಣ ಎಲ್ಲರ ಪ್ರೀತಿಯ ಮೇಕಪ್ ನಾಣಿ ಅವರು ಬಂದ ನಂತರವಂತೂ ಅವರ ಮನೆಯೇ ರಂಗಭೂಮಿಯ ರಿಹರ್ಸಲ್ ತಾಣವಾಗಿ ಹೋಗಿತು. ಆರಂಭದಲ್ಲಿ ಕೇವಲ ಸ್ನೇಹಿತರಾಗಿದ್ದ ಅವರಿಬ್ಬರು ಕ್ರಮೇಣ ಪ್ರೀತಿ ಮೊಳಕೆಯೊಡೆದು ಅಂದಿನ ಕಾಲದಲ್ಲಿ ಕೇವಲ ಸ್ನೇಹಿತರ ಸಮ್ಮುಖದಲ್ಲಿ ಅತ್ಯಂತ ಸರಳವಾಗಿ ಮದುವೆಯಾದದ್ದೇ ಸುದ್ದಿಯಾಗಿತ್ತು. ಅವರಿಬ್ಬರ ಸುಖಃ ದಾಂಪತ್ಯದ ಕುರುಹಾಗಿ ಸುಜಾತಾ, ಪ್ರಕಾಶ್ ಬೆಳವಾಡಿ, ಪ್ರದೀಪ್ ಮತ್ತು ಸುಧಾ ಬೆಳವಾಡಿ ಎಂಬ ನಾಲ್ವರು ಮಕ್ಕಳಿಗೆ ಜನ್ಮನೀಡಿದ್ದರು. ತಮ್ಮ ಮಕ್ಕಳ ಜೊತೆ ಸುತ್ತಮುತ್ತಲ ಹತ್ತಾರು ಮಕ್ಕಳನ್ನು ಸೇರಿಸಿಕೊಂಡು ಅವರೇ ಬರೆದು ನಿರ್ದೇಶಿಸಿದ್ದ ಭೂತಯ್ಯನ ಪೇಚಾಟ ಎಂಬ ಮಕ್ಕಳ ನಾಟಕಕ್ಕೆ 1975ರಲ್ಲಿ ರಾಜ್ಯಮಟ್ಟದ ಪ್ರಶಸ್ತಿಯೂ ಬಂದಿತ್ತು.

bn3

ರಂಗಭೂಮಿಯ ಜೊತೆ ಜೊತೆಯಲ್ಲೇ 1955ರಿಂದಲೂ ಆಕಾಶವಾಣಿಯಲ್ಲಿ ಮೊದಲಿಗೆ ಕಲಾವಿದೆಯಾಗಿ ಆರಂಭಿಸಿ ನಂತರ ಹಲವಾರು ನಾಟಕಗಳನ್ನು ಅವರೇ ಬರೆದು ನಿರ್ದೇಶಿಸುವಷ್ಟರ ಎತ್ತರಕ್ಕೆ ಬೆಳೆದಿದ್ದರು. 70ರ ದಶಕದಲ್ಲಿ ಕನ್ನಡ ಚಿತ್ರರಂಗದ ಹಾಸ್ಯ ಚಕ್ರವರ್ತಿ ಎಂದೇ ಖ್ಯಾತರಾಗಿದ್ದ ದಿ. ನರಸಿಂಹ ರಾಜು ಅವರ ಪ್ರೊಫಸರ್ ಹುಚ್ಚುರಾಯ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ಭಾರ್ಗವಿಯವರು ತಾವು ಅಭಿನಯಿಸಿದ ಮೊದಲ ಚಿತ್ರಕ್ಕೆ ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿ ಲಭಿಸಿತ್ತು. ತಮ್ಮ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಸೈ ಎನಿಸಿ, ತುಂಬು ಕುಟುಂಬ, ಗಂಡ ಮನೆ ಮಕ್ಕಳು ಜೊತೆಗೆ ಕೆಲಸದಲ್ಲೂ ಸೈ ಎನಿಸಿಕೊಂಡು ಉನ್ನತ ಭಡ್ತಿಯನ್ನು ಪಡೆದು ವ್ಯವಸ್ಥಾಪಕರ ಹುದ್ದೆಯ ಮಟ್ಟಕ್ಕೆ ಏರಿ ಕಡೆಗೆ 1990ರಲ್ಲಿ ಸ್ವಯಂ ನಿವೃತ್ತಿ ಪಡೆದರು.

bn2

90 ರ ದಶಕದಲ್ಲಿ ಕನ್ನದ ದೂರದರ್ಶನ ಬಂದ ಮೇಲಂತೂ ಅಲ್ಲೂ ತಮ್ಮ ತಮ್ಮ ಪ್ರತಿಭಾ ಪ್ರದರ್ಶನವನ್ನು ಮುಂದುವರೆಸಿದ ಭಾರ್ಗವಿಯವರು ಆಡು ಮುಟ್ಟದ ಸೊಪ್ಪಿಲ್ಲ ಭಾರ್ಗವಿಯವರು ಮಾಡದ ಪಾತ್ರವಿಲ್ಲ ಎಂದರೂ ಅತಿಶಯವಲ್ಲಾ ಎನಿಸುವಷ್ಟರ ಮಟ್ಟಿಗೆ ಎಲ್ಲಾ ಪಾತ್ರಗಳಲ್ಲೂ ಲೀಲಾಜಾಲವಾಗಿ ಅಭಿನಯಿಸಿದ್ದರು.

bhargavi1

ಭಾರ್ಗವಿಯವರ  ಮಗ ಪ್ರಕಾಶ್ ಬೆಳವಾಡಿ ಪತ್ರಕರ್ತನಾಗಿ, ಅಂಗ್ಲ ನಾಟಕಕಾರನಾಗಿ ನಂತರ ಕನ್ನಡ, ತಮಿಳು, ಹಿಂದೀ ಚಿತ್ರಗಳಲ್ಲಿ ಅತ್ಯಂತ ಯಶಸ್ವಿ ನಟನಾದರೆ, ಬಾಲ ನಟಿಯಾಗಿ ಚಿತ್ರರಂಗಕ್ಕೆ ಪ್ರವೇಶಿಸಿದ ಆವರ ಕಿರಿಯ ಮಗಳು ಸುಧಾ ಬೆಳವಾಡಿ, ಇಂದು ಕನ್ನಡದ ಬಹುತೇಕ ಧಾರಾವಾಹಿಗಳು ಮತ್ತು ಕನ್ನಡ ಚಿತ್ರರಂಗದಲ್ಲಿ ಖ್ಯಾತ ನಾಯಕರುಗಳ ತಾಯಿ, ಅತ್ತೆ, ಅಕ್ಕ, ಅತ್ತಿಗೆ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಅಳಿಯ (ಸುಧಾರವರ ಪತಿ)  M. G. ಸತ್ಯಾ ಹಿಂದಿ ಸ್ವದೇಸ್ ಚಿತ್ರಕ್ಕೆ ಚಿತ್ರಕಥೆ ಬರೆಯುವ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರೆ,  ಮೊಮ್ಮಗಳು ಸಂಯುಕ್ತಾ ಹೊರನಾಡು (ಸುಧಾ ಮತ್ತು ಸತ್ಯಾ ಅವರ ಮಗಳು)  ಕೂಡಾ ಕನ್ನಡದ ನಾಲ್ಕಾರು ಚಿತ್ರಗಳಲ್ಲಿ ನಾಯಕಿಯಾಗಿ ಆಭಿನಯಿಸಿ ಕನ್ನಡ ಚಿತ್ರರಂಗದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದರೆ, ಮತ್ತೊಬ್ಬ ಮೊಮ್ಮಗಳು  ತೇಜು ಬೆಳವಾಡಿ (ಪ್ರಕಾಶ್ ಬೆಳವಾಡಿಯವರ ಮಗಳು) ಅವರು ರೂಪ ರಾವ್ ನಿರ್ದೇಶನದ ಗಂಟುಮೂಟೆ ಚಿತ್ರದಲ್ಲಿ ಅಭಿನಯಿಸಿದ್ದಾರೆ . ಹೀಗೆ ಅವರ ಇಡೀ ಕುಟುಂಬವೇ ಕಲಾ ಪ್ರಪಂಚದಲ್ಲಿ ಸೇವೆ ಸಲ್ಲಿಸುತ್ತಿರುವುದು ಅಭಿನಂದನಾರ್ಹವಾಗಿದೆ.

bn6

ಟಿ. ಎನ್. ಸೀತಾರಾಮ್ ಅವರ ಮಂಥನಾ, ಮುಕ್ತಾ ಸೇರಿದಂತೆ ಬಹುತೇಕ ಧಾರವಾಹಿಗಳಲ್ಲಿ ಭಾರ್ಗವಿ ನಾರಾಯಣ್ ಮತ್ತು ಸುಧಾ ಬೆಳವಾಡಿಯವರು ಅಭಿನಯಿಸುವ ಮೂಲಕ ಸೀತಾರಾಮ್ ಅವರ ಆಸ್ಥಾನ ಕಲಾವಿದರು ಎನಿಸಿಕೊಂಡಿದ್ದಲ್ಲದೇ ಭಾರ್ಗವಿ ಅವರು ಸುಮಾರು 22 ಚಿತ್ರಗಳಲ್ಲಿ ಅಭಿನಯಿಸಿದ್ದರು. ಕನ್ನಡ ನಾಟಕ ಅಕಾಡೆಮಿಯ ಸದಸ್ಯರಾಗಿಯೂ ಕೆಲಸ ಮಾಡಿದ್ದರು. ಧಾರಾವಾಹಿಗಳಲ್ಲಿ ಕೇವಲ ನಟಿಯಾಗಲ್ಲದೇ, ನಿರ್ದೇಶಕಿಯಾಗಿ, ಚಿತ್ರಕಥೆ, ಸಂಭಾಷಣೆಗಳನ್ನು ರಚಿಸಿರುವುದಲ್ಲದೆ, ಕ್ರಿಯಾಶೀಲ ಸಲಹೆ ಮಾರ್ಗದರ್ಶನಗಳನ್ನೂ ನೀಡಿದ್ದಾರೆ. ತಮ್ಮ ಪತಿ ಮೇಕಪ್ ನಾಣಿಯವರ ಕುರಿತಂತೆ ನಾ ಕಂಡ ನಮ್ಮವರು ಎಂಬ ಕನ್ನಡ ಪುಸ್ತಕದ ಮೂಲಕ ಲೇಖಕಿಯಾಗಿ ಖ್ಯಾತಿ ಪಡೆದ ನಂತರ, ನಾನು, ಭಾರ್ಗವಿ ಎಂಬ ತಮ್ಮ ಆತ್ಮಚರಿತ್ರೆಯನ್ನು ಬರೆದಿದ್ದರು ಈ ಎರಡೂ ಪುಸ್ತಕಗಳು ಅಂಕಿತಾ ಪ್ರಕಾಶನದ ಮೂಲಕ ಪ್ರಕಟಗೊಂಡು ಅತ್ಯಂತ ಯಶಸ್ವಿ ಪುಸ್ತಕಗಳು ಎಂಬ ಖ್ಯಾತಿ ಪಡೆದಿತ್ತು.

ಇತ್ತೀಚೆಗೆ ಪುನೀತ್ ರಾಜ್‌ಕುಮಾರ್ ಅವರ ಜೊತೆ ರಾಜಕುಮಾರ ಚಿತ್ರದಲ್ಲೂ ಅಭಿನಯಿಸಿದ್ದ ಭಾರ್ಗವಿಯವರು, ಅದಕ್ಕೂ ಮೊದಲು ಹಾಸ್ಯ ನಟ ಜಗ್ಗೇಶ್ ಅವರ ತಾಯಿಯಾಗಿ ಪ್ರೀಮಿಯರ್ ಪದ್ಮಿನಿ ಚಿತ್ರದಲ್ಲಿನ ಅದ್ಭುತವಾದ ನಟನೆ ಎಲ್ಲರ ಮೆಚ್ಚುಗೆ ಪಾತ್ರವಾಗಿತ್ತು. ಅಷ್ಟು ದೊಡ್ಡ ನಟಿಯಾಗಿದ್ದರೂ ಸದಾ ಕಾಲವೂ ಅತ್ಯಂತ ಸರಳವಾಗಿ ಉಡುಗೆ ತೊಡುಗೆಗಳನ್ನು ತೊಟ್ಟು ಎಲ್ಲರೊಂದಿಗೂ ಆತ್ಮೀಯವಾಗಿ ಮಾತನಾಡಿಸುತ್ತಿದ್ದ ಸಹಜವಾಗಿ ಅಭಿನಯಿಸುತ್ತಿದ್ದ ಕಾರಣ ಕನ್ನಡ ಕಲಾರಸಿಕರ ಅಚ್ಚು ಮೆಚ್ಚಿನ ಅಭಿನೇತ್ರಿಯಾಗಿದ್ದರು ಎಂದರೂ ತಪ್ಪಾಗದು.

ಕಲೆ ಮತ್ತು ಸಾರಸ್ವತ ಲೋಕದಲ್ಲಿನ ಭಾರ್ಗವಿ ನಾರಾಯಣ್ ಅವರ ಸೇವೆಗಾಗಿ ಈ ಕೆಳಕಂಡ ಪ್ರಶಸ್ತಿ ಪುರಸ್ಕಾರಗಳು ಅವರನ್ನರಸಿ ಬಂದಿದ್ದವು.

  • ಕರ್ನಾಟಕ ರಾಜ್ಯ ಚಲನಚಿತ್ರರಂಗದ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ
  • ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ
  • ಮಂಗಳೂರು ಪ್ರತಿಷ್ಠಿತ ಸಂದೇಶ ಪ್ರಶಸ್ತಿ
  • ಆಳ್ವಾಸ್ ನಡಿಸಿರಿ ಪ್ರಶಸ್ತಿ
  • ಕರ್ನಾಟಕ ರಾಜ್ಯ ನಾಟಕ ಸ್ಪರ್ಧೆ – ಅತ್ಯುತ್ತಮ ನಟಿ (ಎರಡು ಬಾರಿ)
  • ಕರ್ನಾಟಕ ರಾಜ್ಯ ಮಕ್ಕಳ ನಾಟಕ ಸ್ಪರ್ಧೆ ಪ್ರಶಸ್ತಿ
  • ಕರ್ನಾಟಕ ಸಂಘ, ಶಿವಮೊಗ್ಗ ಮತ್ತು ಶ್ರೀಮತಿ ಗಂಗಮ್ಮ ಸೊಮಾಪ್ಪ ಬೊಮ್ಮೈ ಪ್ರತಿಷ್ಠಾನದ ಪ್ರಶಸ್ತಿ

ಸರಳ ಅಭಿನಯದ ಮೂಲಕ ಕನ್ನಡಿಗರ ಮನೆ ಮನಗಳಲ್ಲಿ ಪ್ರೀತಿ ಹಂಚಿದ್ದ ಕಿರುತೆರೆಯ ನೆಚ್ಚಿನ ಅಜ್ಜಿಯಾಗಿದ್ದ, ರಂಗಭೂಮಿ, ದೂರದರ್ಶನ ಮತ್ತು ಕನ್ನಡ ಚಿತ್ರರಂಗದಲ್ಲಿ ಮೌಲ್ಯಯುತ ಪಾತ್ರಗಳನ್ನು ನಿರ್ವಹಿಸುತ್ತಾ, ಅನುಭವಿ ಪಾತ್ರಧಾರಿ ಎಂದೇ ಪ್ರಖ್ಯಾತರಾಗಿದ್ದ, ಕನ್ನಡ ಚಿತ್ರರಂಗದ ಹಿರಿಯ ನಟಿ ಭಾರ್ಗವಿ ನಾರಾಯಣ್ ಅವರು ತಮ್ಮ 84ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದಾಗಿ ದಿನಾಂಕ 14.02.2022 ರಂದು ತಮ್ಮ ಪತಿಯವರ ಜೊತೆ ಸೇರಿಕೊಂಡಿದ್ದಾರೆ. ಭಾರ್ಗವಿಯವರ ಕಳೇಬರವನ್ನು ಸಾಂಪ್ರದಾಯಿಕವಾಗಿ ಅಂತ್ಯಸಂಸ್ಕಾರ ಮಾಡದೇ ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ದಾನ‌ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆಯನ್ನು ಎತ್ತಿ ಹಿಡಿದಿರುವುದು ಅನನ್ಯ ಮತ್ತು ಅನುಕರಣೀಯವಾಗಿದೆ.

ಕಲಾವಿದರಿಗೆ ಎಂದೂ ಸಾವಿಲ್ಲ. ಕಲಾವಿದರು ಭೌತಿಕವಾಗಿ ನಮ್ಮನ್ನಗಲಿದರೂ ಅವರ ಅಭಿನಯಿಸಿದ ಧಾರಾವಾಹಿ, ನಾಟಕಗಳು, ಚಲನ ಚಿತ್ರಗಳು ಮತ್ತು ಪುಸ್ತಕಗಳ ಮೂಲಕ ಅಚಂದ್ರಾರ್ಕವಾಗಿ ನಮ್ಮೊಂದಿಗೆ ಇದ್ದೇ ಇರುತ್ತಾರೆ ಎನ್ನುವುದು ಸರ್ವಕಾಲಿಕ ಸತ್ಯವಾಗಿದೆ. ಅಂತಹ ಹಿರಿಯ ನಟಿಗೆ ನಮ್ಮೆಲ್ಲರ ಹೃದಯಪೂರ್ವಕ ಶ್ರದ್ಧಾಂಜಲಿಯನ್ನು ಸಲ್ಲಿಸುವುದಲ್ಲದೇ ಭಗವಂತ ಅವರ ಆತ್ಮಕ್ಕೆ ಸದ್ಗತಿಯನ್ನು ನೀಡಲಿ ಎಂದು ಪ್ರಾರ್ಥಿಸೋಣ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s