ಕಲಾತಪಸ್ವಿ ಡಾ. ರಾಜೇಶ್

raj2

ಅರವತ್ತು ಮತ್ತು ಎಪ್ಪತ್ತರ ದಶಕದಲ್ಲಿ ಕನ್ನಡ ಚಲನ ಚಿತ್ರರಂಗ ಎಂದರೆ ಅದು ಕುಮಾರ ತ್ರಯರದ್ದಾಗಿತ್ತು. ರಾಜಕುಮಾರ್, ಉದಯ್ ಕುಮಾರ್ ಮತ್ತು ಕಲ್ಯಾಣ್ ಕುಮಾರ್ ಅವರುಗಳದ್ದೇ ಪ್ರಾಭಲ್ಯವಿದ್ದಾಗ ಅಂತಹ ಪ್ರಭಾವಿಗಳ ಮಧ್ಯೆ ಇತರರು ತಮ್ಮ ಛಾಪನ್ನು ಮೂಡಿಸುವುದು ಸಾಧ್ಯವೇ ಇಲ್ಲಾ ಎನ್ನುವವರೇ ಹೆಚ್ಚಾಗಿರುವಾಗ ಎತ್ತರದ ನಿಲುವಿನ ಸುರದ್ರೂಪಿಯಷ್ಟೇ ಅಲ್ಲದೇ ಅತ್ಯಂತ ಸುಂದರವಾದ ಉಚ್ಚಾರದ ಶಾರಿರವನ್ನು ಹೊಂದಿದ್ದ ನಟನೊಬ್ಬ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಕನ್ನಡಿಗರ ಹೃದಯವನ್ನು ಗೆದ್ದದ್ದಲ್ಲದೇ ಮುಂದಿನ ಮೂರ್ನಾಲ್ಕು ದಶಕಗಳ ಕಾಲ ತಮ್ಮ ನಟನಾ ಸಾಮರ್ಥ್ಯದಿಂದ ಸೈ ಎನಿಸಿಕೊಂಡಿದ್ದಂತಹ ಹಿರಿಯ ನಟ ಶ್ರೀ ರಾಜೇಶ್ ಅವರು ತಮ್ಮ 89 ನೇ ವಯಸ್ಸಿನಲ್ಲಿ ವಯೋಸಹಜ ಖಾಯಿಲೆಗಳಿಂದಾಗಿ ಬೆಂಗಳೂರಿನಲ್ಲಿ ನಿಧನರಾಗಿರುವುದು ನಿಜಕ್ಕೂ ದುಃಖಕರವಾದ ಸಂಗತಿಯಾಗಿದೆ. ನಾವಿಂದು ಅವರ ವ್ಯಕ್ತಿ ಮತ್ತು ವ್ಯಕ್ತಿತ್ವದ ಪರಿಚಯವನ್ನು ಮಾಡಿಕೊಳ್ಳೋಣ.

ರಾಜೇಶ್ ಅವರು ಏಪ್ರಿಲ್ 15,1935 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಅವರ ತಂದೆ ತಾಯಿಯವರು ಅವರಿಗೆ ಮುನಿ ಚೌಡಪ್ಪ ಎಂದು ಹೆಸರಿಟ್ಟಿದ್ದರು. ಚಿಕ್ಕವಯಸ್ಸಿನಿಂದಲೂ ಓದಿನಷ್ಟೇ ನಟನೆಯಲ್ಲಿಯೂ ಆಸಕ್ತಿ ಬೆಳೆಸಿಕೊಂಡ ಮುನಿ ಚೌಡಪ್ಪನವರು ತಮ್ಮ ಮನೆಯ ಬಳಿಯೇ ಇದ್ದ ರಂಗಭೂಮಿಗೆ ತಮ್ಮ ಪೋಷಕರ ಅರಿವಿಗೆ ಬಾರದಂತೆ ಕದ್ದು ಮುಚ್ಚಿ ಹೋಗಿ ಬರುತ್ತಲೇ, ಅಂದಿನ ರಂಗಭೂಮಿ ಕಲಾವಿದರಾದ ತ್ಯಾಗರಾಜ ಭಾಗವತರ್, ಟಿ. ಆರ್. ಮಹಾಲಿಂಗಂ ಅಂತಹ ಕಲಾವಿದರ ಬಗ್ಗೆ ಅಭಿಮಾನಮಾನವನ್ನು ಬೆಳೆಸಿಕೊಂಡ ಕಾರಣ, ಅಲ್ಲಿಯೇ ಇದ್ದ ಸುದರ್ಶನ ನಾಟಕ ಮಂಡಳಿಯನ್ನು ಸೇರಿದ ಮುನಿ ಚೌಡಪ್ಪನವರು ವಿದ್ಯಾಸಾಗರ್ ಎಂಬ ಹೆಸರಿನಿಂದ ಅಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಲು ಆರಂಭಿಸುತ್ತರೆ. ಆದಾದ ನಂತರ ತಮ್ಮದೇ ಆದ ಶಕ್ತಿ ನಾಟಕ ಮಂಡಳಿಯನ್ನು ಕಟ್ಟಿಕೊಂಡು ನಿರುದ್ಯೋಗಿ ಬಾಳು, ಬಡವನ ಬಾಳು, ವಿಷ ಸರ್ಪ, ನಂದಾ ದೀಪ, ಚಂದ್ರೋದಯ, ಕಿತ್ತೂರು ರಾಣಿ ಚೆನ್ನಮ್ಮ ಮುಂತಾದ ನಾಟಕಗಳ ಮೂಲಕ ವಿದ್ಯಾಸಾಗರ್ ಎಲ್ಲರ ಗಮನ ಸೆಳೆಯುತ್ತಾರೆ.

rajjesh

ನಟನೆಯು ಅವರ ಪ್ರವೃತ್ತಿಯಾದರೆ, ಇನ್ನು ಜೀವನ ಸಾಗಿಸಲು ವೃತ್ತಿಯನ್ನು ಮಾಡಲೇ ಬೇಕಾದ ಅನಿವಾರ್ಯವಿದ್ದ ಕಾರಣ, ಸರ್ಕಾರಿ ಕೆಲಸ ಗಿಟ್ಟಿಸಿಕೊಂಡು ಪಿಡಬ್ಲ್ಯೂಡಿ ಇಲಾಖೆಯಲ್ಲಿ ಶೀಘ್ರಲಿಪಿ ಮತ್ತು ಬೆರಳಚ್ಚುಗಾರರಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಅಲ್ಲಿದೇ ನಮ್ಮನೆ ಇಲ್ಲಿ ಬಂದೆ ಸುಮ್ಮನೇ ಎನ್ನುವಂತೆ ನಟರಾಗ ಬೇಕೆಂಬ ಆಸೆಯಿದ್ದರೂ ವಿಧಿಯಿಲ್ಲದೇ ಕೆಲಸಕ್ಕೆ ಸೇರಿದ್ದರೂ, ರಂಗಭೂಮಿಯಲ್ಲಿ ತಮ್ಮ ಪ್ರವೃತ್ತಿಯನ್ನು ಮುಂದುವರೆಸಿಕೊಂಡು ಹೋಗುತ್ತಾರೆ. ವಿದ್ಯಾಸಾಗರ್ ಎಂಬ ಹೆಸರಿನಲ್ಲಿ ಅದಾಗಲೇ ರಂಗಭೂಮಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದನ್ನು ಗಮನಿಸಿದ ಅಂದಿನ ಖ್ಯಾತ ನಿರ್ದೇಶಕರಾಗಿದ್ದಂತಹ ಶ್ರೀ ಹುಣಸೂರು ಕೃಷ್ಣಮೂರ್ತಿಗಳು ತಮ್ಮ ವೀರ ಸಂಕಲ್ಪ ಚಿತ್ರದಲ್ಲಿ ಅವಕಾಶ ಕಲ್ಪಿಸಿದಾಗ, ತಮ್ಮ ಕೆಲಸಕ್ಕೆ 15 ದಿನಗಳ ರಜೆಯನ್ನು ಹಾಕಿ ಮದ್ರಾಸಿಗೆ ಹೋಗಿ ವೀರ ಸಂಕಲ್ಪ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗುತ್ತಾರೆ. ಆ ಚಿತ್ರ ಯಶಸ್ವಿಯಾಗುತ್ತಿದ್ದಂತಯೇ, ವಿದ್ಯಾಸಾಗರ್‌ ಅವರಿಗೆ ಅವಕಾಶಗಳು ಹುಡುಕಿಕೊಂಡು ಬರಲಾರಂಭಿಸಿ, ಶ್ರೀ ರಾಮಾಂಜನೇಯ ಯುದ್ಧ, ಗಂಗೆ ಗೌರಿ ಮುಂತಾದ ಚಿತ್ರಗಳಲ್ಲಿಯೂ ವಿದ್ಯಾಸಾಗರ್ ಅಭಿನಯಿಸುತ್ತಾರೆ.

ಅದಾದ ನಂತರ ಅಂದಿನ ಖ್ಯಾತ ನಿರ್ಮಾಪಕರಾಗಿದ್ದ ಬಿ. ಎಸ್. ನಾರಾಯಣ್ 1968ರಲ್ಲಿ ನಿರ್ಮಿಸಿ, ಸಿ.ವಿ. ಶಿವಶಂಕರ್ ಅವರು ನಿರ್ದೇಶಿಸಿದ ನಮ್ಮ ಊರು ಚಿತ್ರದಲ್ಲಿ ವಿದ್ಯಾಸಾಗರ್ ತಮ್ಮ ಹೆಸರನ್ನು ರಾಜೇಶ್ ಎಂದು ಬದಲಿಸಿಕೊಳ್ಳುತ್ತಾರೆ. ಆ ಚಿತ್ರ ಭರ್ಜರಿ ಯಶಸ್ಸು ಕಂಡಿದ್ದಲ್ಲದೆ ರಾಜೇಶ್ ಅವರಿಗೆ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಈ ಚಿತ್ರದಲ್ಲಿ ನಟ ರಾಜೇಶ್ ಗಾಯಕರಾಗಿಯೂ ಜನಪ್ರಿಯತೆ ಪಡೆದಿದ್ದರು. ಇದಾದ ನಂತರ ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟು ಚಿತ್ರರಂಗದಲ್ಲೇ ಸಂಪೂರ್ಣವಾಗಿ ತೊಡಗಿಕೊಂಡ ನಂತರ ಸುಮಾರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕ ಪ್ರದಾನ ಪಾತ್ರಗಳು ಮತ್ತು ವೈವಿಧ್ಯಮಯ ಪೋಷಕ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.

ನಮ್ಮ ಊರು, ಗಂಗೆ ಗೌರಿ, ಸತೀ ಸುಕನ್ಯ, ಬೆಳುವಲದ ಮಡಿಲಲ್ಲಿ, ಕಪ್ಪು ಬಿಳುಪು, ಬೃಂದಾವನ, ಬೋರೆ ಗೌಡ ಬೆಂಗಳೂರಿಗೆ ಬಂದ, ಮರೆಯದ ದೀಪಾವಳಿ, ಪ್ರತಿಧ್ವನಿ, ಕಾವೇರಿ, ದೇವರ ಗುಡಿ, ಬದುಕು ಬಂಗಾರವಾಯ್ತು, ಸೊಸೆ ತಂದ ಸೌಭಾಗ್ಯ, ಮುಗಿಯದ ಕಥೆ, ಬಿಡುಗಡೆ, ದೇವರದುಡ್ಡು ಮುಂತಾದ ಯಶಸ್ವಿ ಚಿತ್ರಗಳ ನಂತರ ಸಾಲು ಸಾಲು ಚಿತ್ರಗಳು ಸೋಲನ್ನಪ್ಪಿದಾಗ ಚಿಂತಾಕ್ರಾಂತರಗಿದ್ದ ರಾಜಾಚಂದ್ರ ರವರ ನಿರ್ದೇಶನದಲ್ಲಿ ಆರತಿಯವರ ಜೊತೆ ವಯಸ್ಸಾದ ಪಾತ್ರದಲ್ಲಿ ನಟಿಸಿದ ಕಲಿಯುಗ ಚಿತ್ರ ಮತ್ತೊಮ್ಮೆ ರಾಜೇಶ್ ಅವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿದ್ದಲ್ಲದೇ, ಚಿತ್ರರಂಗದಲ್ಲಿ ನಾಯಕನಾಗದೇ, ನಾಯಕ ಅಥವಾ ನಾಯಕಿಯ ಅಣ್ಣ, ತಂದೆ ತಾತ ಮುಂತಾದ ಪೋಷಕ ಪಾತ್ರಗಳಲ್ಲಿ ಅಭಿನಯಿಸಲು ಆರಂಭಿಸಿದಾಗ ಮತ್ತೊಮ್ಮೆ ರಾಜೇಶ್ ಬಹಳಷ್ಟು ಜನಪ್ರಿಯರಾಗಿದ್ದಲ್ಲದೇ, ಪಿತಾಮಹ ಪ್ರತಿಧ್ವನಿ, ದೇವರಗುಡಿ, ಬದುಕು ಬಂಗಾರವಾಯ್ತು ಚಿತ್ರಗಳಲ್ಲಿ ಪೋಷಕನಟನಾಗಿಯೇ ಬಹಳ ಕಾಲ ನೆನಪಿನಲ್ಲುಳಿಯುವಂತಹ ಪಾತ್ರಗಳಲ್ಲಿ ಮಿಂಚುತ್ತಾರೆ. ಕರ್ಣ ಚಿತ್ರದಲ್ಲಿ ಡಾಕ್ಟರ್ ಆಗಿ ಗಾಂಭೀರ್ಯದಿಂದ ನಟಿಸಿದರೂ ಎನ್ನುವುದಕ್ಕಿಂತಲೂ ಪಾತ್ರದಲ್ಲಿ ತಾವಾಗಿಯೇ ಪರಕಾಯ ಪ್ರವೇಶ ಮಾಡಿದಂತಿತ್ತು ಎನ್ನುವುದು ಗಮನಾರ್ಹವಾದ ಸಂಗತಿಯಾಗಿದೆ.

ಈ ಮೊದಲೇ ತಿಳಿಸಿದಂತೆ ರಾಜೇಶ್ ಕೇವಲ ಸುರದ್ರೂಪಿಯಾಗಿರದೇ, ಅವರ ಭಾಷಾ ಉಚ್ಚಾರ, ಭಾವಾಭಿನಯದಿಂದಲೂ ಜನರ ಹೃನ್ಮನಗಳನ್ನು ಗೆದಿದ್ದಲ್ಲದೇ, ಬೆಳುವಲದ ಮಡಿಲಲ್ಲಿ ಬೆವರ ಹನಿ ಬಿದ್ದಾಗಾ.., ನಾನೇ ಎಂಬ ಭಾವ ನಾಶವಾಯಿತೋ, ರವಿವರ್ಮನ ಕುಂಚದ ಕಲೆ, ಈ ದೇಶ ಚೆನ್ನ ಈ ಮಣ್ಣು ಚಿನ್ನ, ಕಂಗಳು ವಂದನೆ ಹೇಳಿವೆ ಮುಂತಾದ ಜನಪ್ರಿಯ ಹಾಡುಗಳನ್ನು ಎಸ್. ಪಿ.ಬಿಯವರು ಹಾಡಿದ್ದರೂ ಆ ಹಾಡುಗಳನ್ನು ನೆನೆದಾಗ ತಟ್ಟನೆ ನಮ್ಮ ಕಣ್ಮುಂದೆ ರಾಜೇಶ್ ಅವರೇ ಬಂದು ನಿಲ್ಲುತ್ತಾರೆ ಎನ್ನುವುದೇ ಅವರ ನಟನೆಯ ತಾಕತ್ತು ಎಂದರೂ ಅತಿಶಯವಲ್ಲ.

ಕಲಿಯುಗ ಚಿತ್ರದ ಅವರ ಅಭಿನಯ ತಮಿಳು ಚಿತ್ರರಂಗದ ಮೇರು ನಟ ಶಿವಾಜಿಗಣೇಶನ್ ಅವರ ಅಭಿನಯವನ್ನು ನೆನಪಿಸುತ್ತಿದ್ದಂತಹ ಕಾರಣ, ಅಂದಿನ ದಿನಗಳಲ್ಲೇ ಅವರಿಗೆ ತಮಿಳು ಚಿತ್ರರಂಗದಿಂದ ಅವಕಾಶಗಳು ಹುಡುಕಿಕೊಂಡು ಬಂದರೂ, ಕನ್ನಡದ ನೆಲದಲ್ಲೇ ಏನನ್ನಾದರೂ ಸಾಧಿಸಬೇಕೆಂಬ ಪ್ರಬಲ ಇಚ್ಛೆಯ ಕಾರಣ ಬಂದಂತಹ ಅವಕಾಶಗಳನ್ನು ನಯವಾಗಿ ನಿರಾಕರಿಸುವ ಮೂಲಕ ದಕ್ಷಿಣಭಾರತದ ಮೇರು ನಟರ ಪಟ್ಟಿಯಲ್ಲಿ ತಮ್ಮ ಹೆಸರನ್ನೂ ಛಾಪು ಮೂಡಿಸ ಬಹುದಾಗಿದ್ದ ಸುವರ್ಣಾವಕಾಶವನ್ನು ತಮ್ಮ ಕೈಯ್ಯಾರೆ ಕಳೆದುಕೊಂಡರು ಎಂದರು ತಪ್ಪಾಗದು. ಕಲಾವಿದರಿಗೆ ಭಾಷೆಯ ಹಂಗಿಲ್ಲ ಎಂದು ಭಾಷಣ ಬಿಗಿಯುತ್ತಲೇ ಭಾಷೆಗಾಗಲಿ, ಸಂಸ್ಕೃತಿಗಾಗಲಿ ಕಿಂಚಿತ್ತೂ ಗಮನ ಹರಿಸದೇ ಹೆಚ್ಚು ಹಣವನ್ನು ಕೊಡುವ ಚಿತ್ರಗಳಲ್ಲಿ ನಟಿಸಲು ಹಾತೊರೆಯುವ ನಟ/ನಟಿಯರ ಮಧ್ಯೆ ರಾಜೇಶ್ ಅತ್ಯಂತ ಅನುರೂಪವಾಗಿ, ಅಪರೂಪವಾಗಿ ಮತ್ತು ಅನನ್ಯವಾಗಿ ಕಾಣುತ್ತಾರೆ.

raj6

ರಾಜೇಶ್ ಅವರಂತೆ ಅವರ ಪುತ್ರಿ ಆಶಾರಾಣಿ ನಾಯಕಿಯಾಗಿ ಶಿವರಾಜ್ ಕುಮಾರ್ ಅಭಿನಯದ ರಥಸಪ್ತಮಿ ಚಿತ್ರದಲ್ಲಿ ಯಶಕಂಡು ನಂತರ ಮೂರ್ನಾಲ್ಕು ಚಿತ್ರಗಳಲ್ಲಿ ನಟಿಸಿದ ನಂತರ ಅಪ್ಪಟ್ಟ ಸುರದ್ರೂಪಿ ಕನ್ನಡಿಗನಾದರೂ ಕನ್ನಡದಲ್ಲಿ ಅವಕಾಶ ಸಿಗದೇ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಉತ್ತುಂಗಕ್ಕೇರಿರುವ ಅರ್ಜುನ್ ಸರ್ಜಾ ಅವರೊಂದಿಗೆ ಮದುವೆಯಾಗಿ ಕನ್ನಡ ಚಿತ್ರರಂಗಕ್ಕೆ ನಾಯಕಿಯೊಬ್ಬರು ತಪ್ಪಿ ಹೋಗುತ್ತಾರೆ. ಈಗ ಆ ದಂಪತಿಗಳ ಮುದ್ದಿನ ಮಗಳು ಐಶ್ವರ್ಯ ಸರ್ಜಾ ಕೂಡ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಗುರುತಿಸಿ ಕೊಳ್ಳುವ ಮೂಲಕ ರಾಜೇಶ್ ಅವರ ಮೂರನೇ ತಲೆಮಾರು ಕನ್ನಡ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.

ಇವೆಲ್ಲರದ ಮಧ್ಯೆ ರಾಜಕೀಯದಲ್ಲೂ ತಮ್ಮ ಭವಿಷ್ಯವನ್ನು ಕಾಣುವ ಸಲುವಾಗಿ ಅಧಿಕೃತವಾಗಿ ಬಿಜೆಪಿ ಪಕ್ಷವನ್ನು ಸೇರುತ್ತಾರಾದರೂ ನಂತರ ದಿನಗಳಲ್ಲಿ ರಾಜಕೀಯದಿಂದ ನಿವೃತ್ತರಾಗಿ ಸಮಾಜಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಅವರು ವಾಸಿಸುತ್ತಿದ್ದ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ತಮ್ಮದೇ ರೀತಿಯ ಸಮಾನ ಮನಸ್ಕರೊಂದಿಗೆ ಪ್ರತೀ ದಿನ ಬೆಳಿಗ್ಗೆ ಜಿಕೆವಿಕೆಗೆ ವಾಯುವಿಹಾರಕ್ಕೆ ಹೋಗುವಾಗ ಎಲ್ಲರೊಂದಿಗೂ ಆತ್ಮೀಯವಾಗಿ ಮಾತನಾಡಿಸುತ್ತಲೇ, ಅವರ ಕುಂದು ಕೊರತೆಗಳನ್ನು ಆಲಿಸಿ ತಮ್ಮ ಪ್ರಭಾವ ಬಳಸಿ ಅವರುಗಳ ಕೆಲಸಕಾರ್ಯಗಳನ್ನು ಮಾಡಿಕೊಡುತ್ತಿದ್ದದ್ದಲ್ಲದೇ, ವಾಕಿಂಗ್ ಜೊತೆಗೆ ಸುಮಾರು ಅರ್ಥಗಂಟೆಗಳ ಕಾಲ ವ್ಯಾಯಾಮವನ್ನು ಮಾಡುವ ಮೂಲಕ ದೇಹವನ್ನು ಇಳಿವಯಸ್ಸಿನಲ್ಲಿಯೂ ತಮ್ಮ ದೇಹವನ್ನು ಸದೃಢವಾಗಿಟ್ಟುಕೊಂಡಿದ್ದರು. ಅದಲ್ಲದೇ ತಮ್ಮ ಸಹವರ್ತಿಗಳಿಗೆ ದೇಹವನ್ನು ಹೇಗೆ ದಂಡಿಸಬೇಕು? ಮತ್ತು ಯಾವಾಗ? ಏನು? ಎಷ್ಟು ತಿಂದಲ್ಲಿ ನಮ್ಮ ದೇಹಕ್ಕೆ ಒಳ್ಳೆಯದು ಎಂಬುದನ್ನು ಸವಿವರವಾಗಿ ಹೇಳಿಕೊಡುತ್ತಿದ್ದದ್ದು ವಿಶೇಷ.

WhatsApp Image 2022-02-19 at 3.43.06 PM

ಗೆಳತನಕ್ಕೆ ಬಹಳ ಒತ್ತು ನೀಡುತ್ತಿದ್ದ ರಾಜೇಶ್ ಅವರ ಗುಣ ನಿಜಕ್ಕೂ ಅನನ್ಯವಾಗಿತ್ತು. ಅವರನ್ನು ಆತ್ಮೀಯವಾಗಿ ಯಾರೇ ಯಾವುದೇ ಸಭೆ ಸಮಾರಂಭಗಳಿಗೆ ಕರೆದರೆ ಎಷ್ಟೇ ದೂರವಾದರೂ ಇಲ್ಲಾ ಎನ್ನದೇ ತಮ್ಮ ಆತ್ಮೀಯರೊಂದಿಗೆ ಆ ಕಾರ್ಯಕ್ರಮಕ್ಕೆ ಹೋಗಿ ಆ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿ ಬರುತ್ತಿದ್ದರು. ಶಿರಡಿ ಸಾಯಿಬಾಬಾನ ಪರಮ ಭಕ್ತರಾಗಿದ್ದ ರಾಜೇಶ್ ಆವರು ವಿದ್ಯಾರಣ್ಯಪುರದಲ್ಲಿ ಅತ್ಯಂತ ಸುಂದರವಾದ ದೇವಾಲಯವು ಅವರ ಸಾರಥ್ಯದಲ್ಲಿ ನಿರ್ಮಾಣಗೊಂಡಿದೆ.

ತಮ್ಮ ಈ ಎಲ್ಲಾ ಅನುಭವಗಳನ್ನು ಮಸ್ತಕದಿಂದ ಪುಸ್ತಕಕ್ಕೆ ಇಳಿಸಿ ತಮ್ಮ ಆತ್ಮಚರಿತ್ರೆಗೆ ಕಲಾತಪಸ್ವಿ ಎಂಬ ಸುಂದರವಾದ ಹೆಸರನ್ನಿತ್ತಿದ್ದರು. ರಾಜೇಶ್ ಅವರ ಕಲಾಸಾಧನೆಗಳಿಗಾಗಿ ಹತ್ತು ಹಲವಾರು ಪ್ರಶಸ್ತಿಗಳನ್ನು ನಾನಾ ಸಂಘ ಸಂಸ್ಥೆಗಳು ನೀಡಿ ಗೌರವಿಸಿವೆ. ಇದಕ್ಕೆಲ್ಲ ಕಳಸ ಪ್ರಾಯದಂತೆ 2012ರಲ್ಲಿ ಧಾರವಾಡ ವಿಶ್ವವಿದ್ಯಾಲಯವು ರಾಜೇಶ್ ಅವರಿಗೆ ಡಾಕ್ಟರೇಟ್ ಗೌರವವನ್ನು ಸಹಾ ನೀಡಿ ಅಭಿನಂದಿಸಿವೆ.

raj3

ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಅವರ ಮತ್ತು ಅವರ ಮನೆಯವರ ಆನಾರೋಗ್ಯದ ಪರಿಣಾಮ ಹೊರಗೆ ಎಲ್ಲೂ ಅಷ್ಟಾಗಿ ಕಾಣಿಸಿಕೊಳ್ಳದಿದ್ದ ಶ್ರೀ ರಾಜೇಶ್ ಅವರು ಕೂರೋನಾ ಬಂದ ಮೇಲಂತೂ ಮನೆಯ ಗೇಟ್ ನಿಂದಲೇ ಹೊರ ಬಂದಿರಲೇ ಇಲ್ಲ. 89 ವರ್ಷ ವಯಸ್ಸಾಗಿದ್ದ ರಾಜೇಶ್ ಅವರಿಗೆ ಕಿಡ್ನಿ ವೈಫಲ್ಯ ಹಾಗೂ ವಯೋಸಹಜ ಕಾಯಿಲೆಯಿಂದ ಸುಮಾರು ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದರೂ ಚಿಕಿತ್ಸೆ ಫಲಕಾರೊಯಾಗದೇ ನಮ್ಮನ್ನು ಅಗಲಿದ್ದಾರೆ.
ರಾಜೇಶ್ ಅವರ ಅಂತಿಮ ಸಂಸ್ಕಾರವನ್ನು ಚಿತಾಗಾರದಲ್ಲಿ ಮಾಡಲು ನಿರ್ಧರಿಸಿತ್ತಾದರೂ, ಅವರ ಸ್ನೇಹಿತರಾದ ಶ್ರೀ ಸಿದ್ದಲಿಂಗಯ್ಯನವರು ನೆಲಮಂಗಲದ ಬಳಿಯ ಗೋವಿಂದಪುರದ ತಮ್ಮ ತೋಟದಲ್ಲಿ 10 ಗುಂಟೆ ಜಾಗವನ್ನು ರಾಜೇಶ್ ಅವರ ಸ್ಮಾರಕಕ್ಕೆ ಉಚಿತವಾಗಿ ನೀಡುವ ಮೂಲಕ ರಾಜೇಶ್ ಅವರನ್ನು ಅಜರಾಮರವಾಗಿಸಿದ್ದಾರೆ.

ರಾಜೇಶ್ ಆವರು ಭೌತಿಕವಾಗಿ ನಮ್ಮನ್ನೆಲ್ಲಾ ಅಗಲಿದರೂ ಅವರ ಚಿತ್ರಗಳು ಮತ್ತು ಅವರ ಸಮಾಜಮುಖೀ ಸಾಧನೆಗಳೊಂದಿಗೆ ನಮ್ಮೊಂದಿಗೆ ಆಚಂದ್ರಾರ್ಕವಾಗಿ ನಮ್ಮೊಂದಿಗೆ ಇದ್ದೇ ಇರುತ್ತಾರಲ್ವೇ?

ಏನಂತೀರಿ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s