ಆರ್. ಜೆ. ರಚನಾ (ರಚ್ಚು)

ಕೆಲವೊಮ್ಮೆ ಕೆಲವರು ನಮ್ಮ ಜೀವನದಲ್ಲಿ ನಮಗೆ ಅರಿವಿಲ್ಲದಂತೆಯೇ ಬಂದು ಬಿಡುವುದಲ್ಲದೇ ನಮಗೇ ಅರಿವಿಲ್ಲದಂತೆಯೇ ಅವರ ಪ್ರಭಾವಕ್ಕೆ ಒಳಗಾಗಿ ಒಂದು ರೀತಿಯಲ್ಲಿ ಅವರ ಬಗ್ಗೆ ಆತ್ಮೀಯತೆಯೋ ಇಲ್ಲವೇ ಪೂಜ್ಯ ಭಾವವೋ ಬೆಳೆದು ಧನ್ಯಾತಾಭಾವ ಬಂದು ಬಿಟ್ಟಿರುತ್ತದೆ. ಆದರೆ ಇದ್ದಕ್ಕಿದ್ದಂತೆಯೇ ಅವರು ನಮ್ಮನ್ನು ಬಿಟ್ಟು ಅಗಲಿದಾಗ ಆಗುವ ಶೂನ್ಯಭಾವನೆಯನ್ನು ತುಂಬುವುದಕ್ಕೆ ಎಷ್ಟು ಸಮಯ ಬೇಕಾಗುವುದೋ ಖಂಡಿತವಾಗಿಯೂ ಹೇಳಲು ಅಸಾಧ್ಯವೇ ಸರಿ.

rach2ಇಷ್ಟೆಲ್ಲಾ ಸುಳಿವನ್ನು ಕೊಟ್ಟ ಮೇಲೆ ನೀವು ಖಂಡಿತವಾಗಿಯೂ ನೀವು ಅವರನ್ನು ಊಹಿಸಿಯೇ ಇರುತ್ತೀರಿ ಎನ್ನುವುದೇ ನನ್ನ ಭಾವನೆಯಾಗಿದೆ. ಪ್ರತೀ ದಿನ ಬೆಳಿಗ್ಗೆ ಪಟ ಪಟ ಅಂತ ಮಾತನಾಡುತ್ತಾ, ನಮ್ಮ ಇಡೀ ದಿನದ ಮನಸ್ಥಿತಿಯನ್ನು ಉಲ್ಲಾಸಿತವಾಗಿಡುತ್ತಿದ್ದ ಮಾತಿನ ಮಲ್ಲಿ ಸುಮಾರು 39 ವರ್ಷದ ಆರ್ ​​.ಜೆ. ರಚನಾ (Radio Jockey Rachana) 22.02.2022 ಮಂಗಳವಾರ ಮಧ್ಯಾಹ್ನ ತೀವ್ರವಾದ ಹೃದಯಾಘಾತಕ್ಕೆ ಒಳಗಾಗಿ ಅಸುನೀಗುವ ಮೂಲಕ ಲಕ್ಷಾಂತರ ಕನ್ನಡ ಎಘ್. ಎಂ ಕೇಳುಗರ ಕಂಬನಿಗೆ ಕಾರಣರಾಗಿರುವುದು ನಿಜಕ್ಕೂ ದುಃಖಕರವಾದ ವಿಷಯವಾಗಿದೆ.

r6ಬೆಂಗಳೂರಿನ ಚಾಮರಾಜಪೇಟೆಯ ಸಾಂಪ್ರದಾಯಕ ಕುಟುಂಬದಲ್ಲಿ ಜನಿಸಿದ ರಚನಾ ಚಿಕ್ಕಂದಿನಿಂದಲೂ ಆಟ ಪಾಠಗಳ ಜೊತೆ ಸಂಗೀತ ಮತ್ತು ನೃತ್ಯಗಳಲ್ಲೂ ಪ್ರವೀಣೆಯೇ. ಆಕೆ ಶಾಸ್ತ್ರೀಯ ಸಂಗೀತ ಪಾರಂಗತೆಯಾಗಿದ್ದು ಉತ್ತಮವಾದ ಹಾಡುಗಾರ್ತಿಯಗಿದ್ದಳು. ತಮ್ಮ ವಿದ್ಯಾಭ್ಯಾಸ ಮುಗಿದ ತಕ್ಷನ ಐದಾರು ಅಂಕಿಯ ಸಂಬಳ ಗಳಿಸುತ್ತಾ ವಾರಾಂತ್ಯದಲ್ಲಿ ಮೋಜು ಮಸ್ತಿ ಮಾಡುವ ಮನೋಸ್ಥಿತಿಯುಳ್ಳ ಯುವಕ ಯುವತಿಯರೇ ಹೆಚ್ಚಾಗಿರುವಾಗ, ತನ್ನ ವಿದ್ಯಾಭ್ಯಾಸ ಮುಗಿಸಿ ಕೈತುಂಬಾ ಸಂಬಳ ಪಡೆಯುವ ಎಲ್ಲಾ ಅರ್ಹತೆ ಇದ್ದರೂ, ಅವೆಲ್ಲವನ್ನು ಬಿಟ್ಟು ತನ್ನ ಇಚ್ಚೆಯಂತೆ ಆಕೆ ಆಯ್ಕೆ ಮಾಡಿಕೊಂಡಿದ್ದು ದೃಶ್ಯ ಮಾಧ್ಯಮ. ಬಹುತೇಕರಿಗೆ ತಿಳಿಯದಿರುವ ವಿಷಯವೇನೆಂದರೆ, ರಚನ ರೇಡಿಯೋ ಜಾಕಿಯಾಗುವ ಮುನ್ನಾ ಕೆಲವು ಆಂಗ್ಲಭಾಷೆಯ ಛಾನೆಲ್ಲಿನಲ್ಲಿ ನಿರೂಪಕಿಯಾಗಿ ನಂತರ ತೊಂಭತ್ತರ ದಶಕದ ಅಂತ್ಯದಲ್ಲಿ ಬೆಂಗಳೂರಿನಲ್ಲಿ ಆರಂಭವಾದ ಎಫ್.ಎಂ ಛಾನೆಲ್ಲುಗಳು ಆರಂಭದಲ್ಲಿ ಹಿಂದಿ ಮತ್ತ ಇಂಗ್ಲೀಷ್ ಭಾಷೆಗಷ್ಟೇ ಸೀಮಿತವಾಗಿದ್ದು ನಂತರ ಕನ್ನಡದಲ್ಲೂ ಕಾರ್ಯಕ್ರಮಗಳನ್ನು ಆರಂಭಿಸಲು ನಿರ್ಧರಿಸಿದಾಗ ಅರಳು ಹುರಿದಂತ ಪಟ ಪಟನೇ ಅತ್ಯಂತ ಸ್ಪಷ್ಟವಾದ ಕನ್ನಡವನ್ನು ಮಾತನಾಡ ಬಲ್ಲವಳಾಗಿದ್ದ ರಚನಾ ರೇಡಿಯೋ ಜಾಕಿಯಾಗಿ ರೇಡಿಯೋ ಸಿಟಿ ಸೇರಿಕೊಳ್ಳುತ್ತಾಳೆ.

r7ರೇಡಿಯೋ ಸಿಟಿ ಸೇರಿ ಕೊಂಡ ಕೆಲವೇ ದಿನಗಳಲ್ಲಿಯೇ ತಮ್ಮದೇ ಆದ ವಿಶೇಷ ಶೈಲಿಯ ಮಾತಿನಿಂದ ಅಪಾರ ಕೇಳುಗರನ್ನು ಸೆಳೆದುಕೊಳ್ಳುವುದರಲ್ಲಿ ಸಫಲರಾಗಿದ್ದ ರಚನಾ, ಆಕೆಯ ಕಾರ್ಯಕ್ರಮಗಳನ್ನು ಕೇಳಲು ಕೇಳುಗರ ವರ್ಗವೇ ಸೃಷ್ಟಿಯಾಗಿತ್ತು. ಆಕೆಯ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕನ್ನಡ ಚಿತ್ರರಂಗದ ಅನೇಕ ಸ್ಟಾರ್ ನಟ ನಟಿಯರೇ ತುದಿಗಾಲಲ್ಲಿ ನಿಲ್ಲುತ್ತಿದ್ದರು ಎಂದರೆ ಆಕೆಯ ಕಾರ್ಯಕ್ರಮದ ಹಿರಿಮೆ ಗರಿಮೆಯ ಅರ್ಥವಾಗುತ್ತದೆ.

r5ಸುಮಾರು ಮೂರ್ನಾಲ್ಕು ವರ್ಷಗಳ ನಂತರ ರೇಡಿಯೋ ಸಿಟಿ ಬಿಟ್ಟ ನಂತರ ಕೆಲವು ದಿನಗಳ ಕಾಲ ಕನ್ನಡ ಖಾಸಗಿ ವಾಹಿನಿಯಲ್ಲಿ ಸಂಗೀತದ ಅಂತ್ಯಾಕ್ಷರಿ ಕಾರ್ಯಕ್ರಮದ ನಿರೂಪಣೆ ಮಾಡುತ್ತ ತನ್ನ ಗಾಯನ ಸುಧೆಯನ್ನು ಹರಿಸಿದ್ದಳು ರಚನ. ತಮ್ಮ ಮಾತಿನ ಮೂಲಕವೇ ಜನರ ಮನಸ್ಸು ಗೆದ್ದಿದ್ದಲ್ಲದೇ ತಮ್ಮ ಮುದ್ದು ಮುಖದ ಚೆಲವು ಮತ್ತು ಸಾನಿಯಾ ಮಿರ್ಜಾಳಂತೆ ಮೂಗಿಗೆ ದುಂಡನೆಯ ಮೂಗಿನ ರಿಂಗ್ ಹಾಕಿಕೊಂಡು ಮಿಂಚುತ್ತಿದ್ದದ್ದಲ್ಲದೇ, ಆಹಾರ ಮತ್ತು ವ್ಯಾಯಾಮದ ಬಗ್ಗೆ ಅಪಾರವಾದ ಕಾಲಜಿಯುಳ್ಳುಳವಳಾಗಿದ್ದಳು ರಚನಾ. ಹಾಗಾಗಿ ಸದಾಕಾಲವೂ ಬಳುಕುವ ಬಳ್ಳಿಯಂತೆಯೇ ಇದ್ದಳು.

mirchiಮತ್ತೆ ಕೆಲವು ವರ್ಷಗಳ ನಂತರ ರೇಡಿಯೋ ಮಿರ್ಚಿಗೆ ಸೇರಿದ ನಂತರ ಆಕೆಯ ಕಂಠದಲ್ಲಿ Radio Mirchi 98.3 ಸಖತ್ ಹಾಟ್ ಮಗಾ… ಎಂಬ ಟ್ಯಾಗ್ ಲೈನ್ ಅನೇಕ ಪಡ್ಡೇ ಹುಡುಗರ ಹೃದಯವನ್ನು ಹಾಟ್ ಮಾಡಿಸಿತ್ತು ಎಂದರೂ ತಪ್ಪಾಗದು. ಪ್ರತೀ ದಿನ ಬೆಳಿಗ್ಗೆ 7 ರಿಂದ 11 ಗಂಟೆಯ ವೇಳಿಗೆ ಆಕೆ ನಡೆಸಿಕೊಡುತ್ತಿದ್ದ ಕಾರ್ಯಕ್ರಮ ಕಛೇರಿಗೆ ಹೋಗುತ್ತಿದ್ದ ಅನೇಕರ ಕಾರುಗಳಲ್ಲಿ ಬಸ್ಸುಗಳಲ್ಲಿ ಪ್ರತಿಧ್ವನಿಸುತ್ತಿತ್ತು. ಎಫ್. ಎಂ. ರೇಡಿಯೋ ಜಾಕಿಗಳೆಂದರೆ ತಮ್ಮ ಕಂಗ್ಲೀಶ್ ಮುಖಾಂತರ ಕನ್ನಡದ ಸೊಗಡನ್ನು ಹಾಳು ಮಾಡುತ್ತಾರೆ ಎನ್ನುವವರ ಮಧ್ಯೆ ರಚನಾ ಅದಕ್ಕೆ ಅಪರೂಪ ಎನ್ನುವಂತೆ ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳನ್ನು ಅತ್ಯಂತ ಸರಳವಾಗಿ ಮತ್ತು ಅರಳು ಹುರಿದಂತೆ ಸ್ಪಷ್ಟವಾಗಿ ಮಾತಾಡುತ್ತಿದ್ದಳು. ಆಕೆಯ ಧ್ವನಿಗೆ ಮಾರು ಹೋಗಿ ಅಕೆಯ ಅಭಿಮಾನಿಯಾಗಿದ್ದ ಲಕ್ಷಾಂತರ ಜನರಲ್ಲಿ ನಾನೂ ಒಬ್ಬ. ಅಕೆಯ ಅಪ್ಪಟ ಅಭಿಮಾನಿಯಾಗಿದ್ದ ನನ್ನ ಸ್ನೇಹಿತರೊಬ್ಬರಿಗೆ ಹೆಣ್ಣು ಮಗಳು ಹುಟ್ಟಿದಾದ ರಚನಾ ಎಂದು ಹೆಸರಿಟ್ಟು ರಚ್ಚೂ ಎಂದೇ ಪ್ರೀತಿಯಿಂದ ಕರೆಯುತ್ತಿದ್ದರು ಎಂದರೆ ಆಕೆಯ ಖ್ಯಾತಿ ಎಷ್ಟಿತ್ತು ಎಂಬುದರ ಅರಿವಾಗುತ್ತದೆ.

ಕೆಲವು ವಯಕ್ತಿಕ ಕಾರಣಗಳಿಂದ ಪೋಷಕರ ಮನೆಯಿಂದ ಹೊರಬಂದು ತನ್ನದೇ ಆದ ಮನೆಯೊಂದನ್ನು ಮಾಡಿಕೊಂಡಿದ್ದ ರಚನ ಕಳೆದ 7 ವರ್ಷಗಳಿಂದ ರೇಡಿಯೋ ಕೆಲಸವನ್ನು ಬಿಟ್ಟು ಮನೆಯಲ್ಲೇ ಒಬ್ಬಂಟಿಯಾಗಿ ಇರುತ್ತಿದ್ದರು. ಕೆಲವು ವರ್ಷಗಳ ಹಿಂದೆ ಸುನಿ ನಿರ್ದೇಶನದ ರಕ್ಷಿತ್ ಮತ್ತು ಶ್ವೇತಾ ಶ್ರೀವಾಸ್ತವ ನಟಿಸಿದ್ದ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದಲ್ಲೊ ಸಹಾ ರೇಡಿಯೋ ಜಾಕಿಯಾಗಿಯೇ ನಟಿಸಿದ್ದ ರಚನಾ ತನ್ನ ಸಹಜ ಅಭಿನಯದಿಂದಾಗಿ ಜನರ ಮನ ಗೆದ್ದಿದ್ದಳು.

ತಾನಾಯಿತು ತನ್ನ ವ್ಯಾಯಾಮ ಡಯಟ್ ಆಹಾರವಾಯಿತು ಎಂದು ಒಬ್ಬಂಟಿಯಾಗಿಯೇ ಜೆ.ಪಿ. ನಗರದ ಅಪಾರ್ಟ್ಮೆಂಟಿನಲ್ಲಿ ವಾಸಿಸುತ್ತಿದ್ದ ಆಕೆ ಇತ್ತೀಚೆಗೆ ತನ್ನ ಆಪ್ತ ಸ್ನೇಹಿತರ ಕರೆಗಳಿಗೂ ಸರಿಯಾಗಿ ಸ್ಸಂದಿಸದಿರುವಷ್ಟು ಕುಗ್ಗಿ ಹೋಗಿದ್ದಳು ರಚನ. ಬಹುಶಃ ಆಕೆಯ ಏಕಾಂಗಿತನವೇ ಆಕೆಗೆ ಮುಳುವಾಗಿ ಮಾನಸಿಕ ಖಿನ್ನತೆಗೆ ಹೋಗಿ ಅದರಿಂದಲೇ, ನೆನ್ನೆ ಬೆಳಿಗ್ಗೆ ಅದೇ ತೀವ್ರವಾದ ಹೃದಯಾಘಾತಕ್ಕೆ ಒಳಗಾಗಿರ ಬಹುದು ಎಂದೇ ಎಲ್ಲರೂ ನಂಬಿದ್ದಾರೆ.

ದೈಹಿಕ ಸಧೃಡರಾಗಿ ಕಾಣುತ್ತಿದ್ದರೂ ಮಾನಸಿಕವಾಗಿ ಜರ್ಜರಿತವಾಗಿದ್ದ 39 ವರ್ಷ ವಯಸ್ಸಿನ ರಚನ ನೆನ್ನೆ ಬೆಳಿಗ್ಗೆ ತೀವ್ರವಾದ ಎದೆ ನೋವಿನಿಂದ ನರಳಿ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗಲೇ ತೀವ್ರವಾದ ಹೃದಯಾಘಾತವಾಗಿ ದಾರಿಯಲ್ಲೇ ನಿಧನರಾಗಿದ್ದು, ಅವರ ಅಭಿಮಾನಿಗಳಿಗೆ ದಿಢೀರ್ ಎಂಬ ಶಾಕ್ ಅಗಿದೆ ಎಂದರೂ ತಪ್ಪಾಗದು. ತಮ್ಮ ಮಾತು, ಧ್ವನಿಯಿಂದ ಅಪಾರ ಕೇಳುಗ ಅಭಿಮಾನಿಗಳನ್ನು ಸಂಪಾದಿಸಿದ್ದ ರಚನಳ ಆಸೆಯಂತೆ ಆಕೆಯ ಅಂಗಾಂಗವನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿರುವುದು ಶ್ಲಾಘನೀಯವಾಗಿದೆ.

r4ಸದಾ ಡಯೆಟ್​, ವರ್ಕೌಟ್​ ಮಾಡುತ್ತಾ ತಮ್ಮ ದೇಹವನ್ನು ಸಧೃಢವಾಗಿ ಇಟ್ಟುಕೊಂಡಿದ್ದ ಪುನೀತ್ ಕೆಲ ತಿಂಗಳುಗಳ ಹಿಂದೆ ನಿಧನರಾದಂತೆಯೇ ಸೊಪ್ಪು, ಹಣ್ಣು, ತರಕಾರಿಗಳನ್ನೆ ಹೆಚ್ಚಾಗಿ ಸೇವಿಸುತ್ತಾ ಸದಾಕಾಲವೂ ಹಸನ್ಮುಖಿಯಾಗಿರುತ್ತಿದ್ದ ರಚನಾ ಹೃದಯಾಘಾತದಿಂದ ನಿಧನವಾಗಿರುವುದು ಎಲ್ಲರಿಗೂ ಅತೀವ ಬೇಸರ ಮೂಡಿಸಿದೆ. ವಯಕ್ತಿಕವಾಗಿ ಆಕೆ ಯಾರನ್ನೂ ಭೇಟಿಯಾಗದಿದ್ದರೂ ತುಂಬಾ ಸಂವೇದನಾಶೀಲತೆಯಿಂದ ತನ್ನ ಭಾಷಾ ಪ್ರೌಢಿಮೆಯ ಮೂಲಕ ಕಳೆದ ದಶಕದಲ್ಲಿ ಬೆಂಗಳೂರಿಗರಲ್ಲಿ ಮನೆಮಾತಾಗಿದ್ದರು. ತನ್ನ ವಿಶಿಷ್ಟ ಹಾಸ್ಯ ಪ್ರಜ್ಞೆಯೊಂದಿಗೆ ತನ್ನ ವಾಕ್ಚಾತುರ್ಯದಿಂದ ಅಪಾರ ಅಭಿಮಾನಿಗಳನ್ನು ಗಳಿಸಿ ಎಲ್ಲರ ಮನಸ್ಸೂರೆಗೊಂಡಿದ್ದ ರಚನಾ ಇನ್ನು ಮುಂದೆ ಕೇವಲ ನೆನಪಾಗಿ ಹೋದದ್ದು ವಿಷಾಧನೀಯವಾಗಿದೆ. ಆಕೆಯ ಆತ್ಮಕ್ಕೆ ಭಗವಂತನು ಸದ್ಗತಿಯನ್ನು ಕೊಡಲಿ ಎಂದು ನಮ್ಮ ನಿಮ್ಮಂತಹ ಅಭಿಮಾನಿಗಳು ಪ್ರಾರ್ಥಿಸಬಹುದಾಗಿದೆ ಅಲ್ವೇ?

ಏನಂತೀರಿ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s