ಕೈದಾಳ ಶ್ರೀ ಚನ್ನಕೇಶವ

ಹೇಳೀ ಕೇಳಿ ಕರ್ನಾಟಕ ಶಿಲ್ಪಕಲೆಗಳ ತವರೂರಾಗಿದೆ. ಬೇಲೂರು ಹಳೇಬೀಡು ಶ್ರವಣ ಬೆಳಗೋಳ ಹಂಪೆಯಂತ ಪುಣ್ಯಕ್ಷೇತ್ರಗಳಲ್ಲಿ ಶಿಲ್ಪಿಗಳು ಕಲ್ಲಿನಲ್ಲಿ ಅರಳಿಸಿರುವ ಕೆತ್ತನೆಗಳು ಜಗತ್ರ್ಪಸಿದ್ಧವಾದರೆ, ಕರ್ನಾಟಕದ ಸಾವಿರಾರು ಊರುಗಳಲ್ಲಿ ಬೆಳಕಿಗೇ ಬಾರದಂತಹ ವೈಶಿಷ್ಟ್ಯತೆಯುಳ್ಳ ದೇವಾಲಯಗಳ ಸಂಖ್ಯೆ ಅಗಣಿತವಾಗಿದೆ. ನಾವಿದು ತುಮಕೂರಿನಿಂದ ಕೇವಲ 7 ಕಿ.ಮೀ ದೂರದಲ್ಲಿ ಅತ್ಯಂತ ಸುಂದರವಾದ ಹೊಯ್ಸಳ ಶೈಲಿಯ ಚನ್ನಕೇಶವನ ದೇವಾಲಯವಿರುವ ಕೈದಾಳದ ದರ್ಶನವನ್ನು ಕುಳಿತಲ್ಲಿಂದಲೇ ಮಾಡೋಣ ಬನ್ನಿ.

ಕಲ್ಪತರು ನಾಡು ತುಮಕೂರಿನಿಂದ ಕುಣಿಗಲ್ ಕಡೆಗೆ ಹೋಗುವ ರಸ್ತೆಯಲ್ಲಿ ಸುಮಾರು 6 ಕಿ.ಮೀ ಪ್ರಯಾಣಿಸಿದಲ್ಲಿ ಎಡಗಡೆಗೆ ಇತಿಹಾಸ ಪ್ರಸಿದ್ದವಾದ ಗಣೇಶನ ದೇವಾಲಯವಿರುವ ಗೂಳೂರು ಸಿಕ್ಕರೆ, ಬಲಗಡೆ 1 ಕಿ.ಮೀ ಪ್ರಯಾಣಿಸಿದಲ್ಲಿ ಅಪರೂಪದ ಕೆತ್ತನೆಯಿಂದ ಕೂಡಿರುವ ಕೈದಾಳದ ಚನ್ನಕೇಶವ ದೇವಾಲಯವನ್ನು ತಲುಪಬಹುದಾಗಿದೆ.

kaidala31150 ವರ್ಷಗಳ ಇತಿಹಾಸ ಹೊಂದಿರುವ ಈ ದೇಗುಲ ದ್ರಾವೀಡ ಶೈಲಿಯಲ್ಲಿದ್ದು 1150-51ರಲ್ಲಿ ಹೊಯ್ಸಳ 1ನೆಯ ನರಸಿಂಹನ ಸಾಮಂತನಾಗಿದ್ದ ಬಾಚಿ ಅಥವಾ ಗುಳೇ-ಬಾಚಿ ಎಂಬವನು ಈ ದೇವಸ್ಥಾನವನ್ನೂ ಇತರ ವಿಷ್ಣು ಜಿನ ದೇವಾಲಯಗಳನ್ನೂ ಕಟ್ಟಿಸಿದನೆಂದು ಅಲ್ಲಿರುವ ಶಾಸನದಿಂದ ತಿಳಿದುಬರುತ್ತದೆ. ಈ ಚನ್ನಕೇಶವ ದೇಗುಲದಲ್ಲಿ ಚನ್ನಕೇಶವ ಮತ್ತು ಗಂಗಾಧರೇಶ್ವರ ಮೂರ್ತಿಯನ್ನು ಪೂಜಿಸಲಾಗುತ್ತದೆ. 12ನೇ ಶತಮಾನಕ್ಕೆ ಸಂಬಂಧಿಸಿದ ಶಿಲಾ ಶಾಸನವನ್ನೂ ಇಲ್ಲಿ ಕಾಣಬಹುದಾಗಿದೆ. ಈ ದೇವಾಲಯವನ್ನು ಹೊರಗಡೆಯಿಂದ ನೋಡಿದಲ್ಲಿ ಕೋಟೆಯಂತಿದ್ದು. ಉಳಿದ ದೇವಾಲಯಕ್ಕಿಂತ ಸ್ವಲ್ಪ ಭಿನ್ನವಾದ ಶೈಲಿಯಲ್ಲಿದ್ದು ಜಕಣಾಚಾರಿಯ ಕೆತ್ತನೆಯ ಶೈಲಿಗೆ ಕನ್ನಡಿ ಹಿಡಿದಂತಿದೆ. ದೇವಾಲಯದ ಒಳಗಡೆ ಒಂದು ವಿಶಾಲವಾದ ಮಂಟಪವಿದೆ. ಈ ನವರಂಗದಲ್ಲಿ ಹೊಯ್ಸಳ ಶೈಲಿಯಲ್ಲಿ ಕೆತ್ತಲಾದ, ಕರಿಕಲ್ಲಿನ, ನಯವಾದ ನಾಲ್ಕು ಕಂಬಗಳಿದ್ದು. ಈ ಕಂಬಗಳ ತಳಭಾಗದ ನಾಲ್ಕು ಪಕ್ಕಗಳಲ್ಲೂ ಶಿವ, ಬ್ರಹ್ಮ, ವಿಷ್ಣು, ಭೈರವ, ಕೃಷ್ಣ, ಗಣಪತಿ, ವೀರಭದ್ರ ಮುಂತಾದ ದೇವತೆಗಳ ಉಬ್ಬು ಚಿತ್ರಗಳನ್ನು ಅತ್ಯಂತ ಸುಂದರವಾಗಿ ಕೆತ್ತಲಾಗಿದೆ. ನವರಂಗದ ಗೋಡೆಗಳ ಹೊರವಲಯ ಆನೆ ಮತ್ತು ಹೂವಿನ ಚಿತ್ರಣಗಳ ಪಟ್ಟಿಕೆಗಳಿಂದ ಅಲಂಕೃತವಾಗಿದೆ. ಇಲ್ಲಿರುವ ಪ್ರತಿಯೊಂದು ಕಂಬಕ್ಕೂ ವಿಶೇಷವಾದ ಕೆತ್ತನೆ ನೀಡಿ ಸಿಂಗರಿಸಿರುವುದು ಈ ದೇಗುಲದ ಕಲೆಯ ಶ್ರೀಮಂತಿಕೆಯನ್ನು ತೋರಿಸುವುದಲ್ಲದೇ, ಇದು ಬೇಲೂರು ಚನ್ನಕೇಶವ ದೇವಾಲಯವನ್ನು ನೆನಪಿಸುತ್ತವೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಈ ದೇಗುಲ ನೋಡಲು ಚಿಕ್ಕದಾದರೂ ಕೆತ್ತನೆ ಹಾಗೂ ವಾಸ್ತುಶಿಲ್ಪಗಳು ಬಹಳ ಅಪರೂಪದ ಶೈಲಿಯಲ್ಲಿದೆ.

kaidala_chennakeshavaಈ ದೇವಾಲಯದ ಮಹಾದ್ವಾರದ ಮೇಲಿನ ಸುಂದರವಾದ ಗೋಪುರ ವಿಜಯನಗರ ಕಾಲದಲ್ಲಿ ನಿರ್ಮಿತವಾದ್ದು ಎನ್ನಲಾಗುತ್ತದೆ. ಗರ್ಭಗುಡಿಯಲ್ಲಿರುವ 5 1/2’ ಎತ್ತರವಿರುವ ಸುಂದರವಾದ ಚನ್ನಕೇಶವನನ್ನು ಸುಮಾರು 2 1/2′ ಎತ್ತರದ ಪೀಠದ ಮೇಲೆ ನಿಲ್ಲಿಸಲಾಗಿದೆ. ವಿಗ್ರಹದ ಪ್ರಭಾವಳಿಯಲ್ಲಿ ದಶಾವತಾರದ ಚಿತ್ರಗಳನ್ನು ಮನೋಹರವಾಗಿ ಕೆತ್ತಲಾಗಿದ್ದು ಈ ಮೂರ್ತಿ ಪಶ್ಚಿಮಾಭಿಮುಖವಾಗಿರುವುದು ಬಹಳ ವಿಶೇಷವಾಗಿದೆ. ಮಹಾದ್ವಾರದ ಬಲಬದಿಯ ಕಂಬವೊಂದರ ಮೇಲೆ ಪತ್ನೀ ಸಹಿತನಾದ ಚೆನ್ನಕೇಶವನನ್ನೂ ಎಡಗಡೆಯ ಕಂಬದ ಮೇಲೆ ಅಂಜಲಿ ಬದ್ಧನೂ ಉತ್ತರೀಯಧಾರಿಯೂ ಖಡ್ಗಭೂಷಿತನೂ ಆದ ಮೂರ್ತಿಯನ್ನು ಚಿತ್ರಿಸಲಾಗಿದೆ. ಇದನ್ನು ಜಕಣಾಚಾರಿಯ ಮೂರ್ತಿಯೆಂದು ಕೆಲವರು ಹೇಳಿದರೆ ಇನ್ನೂ ಕೆಲವರು ಇದು ದೇವಾಲಯವನ್ನು ನಿರ್ಮಿಸಿದ ಬಾಚಿ ಸಾಮಂತನ ಮೂರ್ತಿ ಎನ್ನುತ್ತಾರೆ.

kai7ಸಾಧಾರಣವಾಗಿ ವರ್ಷಕ್ಕೊಮ್ಮೆ ಕೆಲವೊಂದು ದೇವಾಲಯಗಳಲ್ಲಿ ಸೂರ್ಯನ ಕಿರಣಗಳು ಸ್ವಾಮಿಯ ಮೇಲೆ ಬೀಳುವಂತಿದ್ದರೆ ಈ ದೇವಾಲಯದಲ್ಲಿ ಮಾತ್ರ ಪ್ರತಿ ದಿನವೂ ಸೂರ್ಯೋದಯದ ಸಮಯದಲ್ಲಿ ದೇವಾಲಯದ ರಕ್ಷಣಾಗೋಡೆಯ ಕಿಂಡಿಯಿಂದ ಹಾಯ್ದು ಬರುವ ಸೂರ್ಯನ ಕಿರಣಗಳು ಗರುಡನ ಕಿವಿಯ ಮೂಲಕ ಹಾಯ್ದು ದೇವಾಲಯವದ ಕಿಂಡಿಯ ಮೂಲಕ ಪ್ರವೇಶಿಸಿ ಶ್ರೀ ಚನ್ನಕೇಶವ ಸ್ವಾಮಿಯ ಪಾದಗಳನ್ನು ಸ್ಪರ್ಶಿಸುವುದು ಅತ್ಯಂತ ವಿಶೇಷವಾಗಿದೆ.

ಈ ಹಿಂದೆ ಈ ಊರು ಒಂದು ಪುಟ್ಟ ರಾಜ್ಯದ ಮುಖ್ಯ ನಗರವಾಗಿತ್ತೆಂದೂ ಇದಕ್ಕೆ ಕಿರದೀಕಾಪರ, ಕಿರಿದಾನಗರಿ ಕ್ರೀಡಾಪುರವೆಂಬ ಹೆಸರಿದ್ದು ನಂತರ ಅಮರ ಶಿಲ್ಪಿ ಜಗಣಾಚಾರಿಯಿಂದಾಗಿ ಈ ಊರಿಗೆ ಕೈದಾಳ ಎಂಬ ಹೆಸರು ಬಂದಿತು ಎಂಬುದಕ್ಕೆ ಒಂದು ರೋಚಕವಾದ ಕಥೆ. ಇದೆ.

ಈ ಊರು ಪ್ರಸಿದ್ಧ ಶಿಲ್ಪಿ ಜಕಣಾಚಾರಿಯ ಜನ್ಮಸ್ಥಳವಾಗಿದ್ದು ಅತ ಬಹಳ ಚಿಕ್ಕ ವಯಸ್ಸಿನಲ್ಲಿಯೇ ತನ್ನ ಕಲೆಯನ್ನು ಬೆಳೆಸುವುದಕ್ಕೋಕ್ಕೋಸ್ಕರ ಇತರ ಶಿಲ್ಪಿಗಳ ಜೊತೆಗೂಡಿ ತನ್ನ ಹೆಂಡತಿ ಮಕ್ಕಳು, ಮನೆ ಮಠ ಎಲ್ಲವನ್ನೂ ತೊರೆದು ಊರೂರು ಸುತ್ತುತ್ತಿರುವಾಗ ಹೊಯ್ಸಳರ ರಾಜ ಬೇಲೂರು ಮತ್ತು ಹಳೇಬೀಡಿನಲ್ಲಿ ಮಹಾ ದೇವಾಲಯವನ್ನು ನಿರ್ಮಿಸುತ್ತಿರುವ ವಿಷಯ ತಿಳಿದು ಅಲ್ಲಿಗೆ ಅಂದು ಪ್ರಧಾನ ಶಿಲ್ಪಿಯಾಗಿ ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ದೇವಸ್ಥಾನದ ನಿರ್ಮಾಣವನ್ನು ಕೈಗೆತ್ತಿಕೊಂಡು ಅತ್ಯಂತ ಅದ್ಭುತವಾದ ದೇವಾಲಯವನ್ನು ನಿರ್ಮಿಸಿ ಇನ್ನೇನು ಎಲ್ಲಾ ಕೆಲಸಗಳೂ ಮುಗಿಯುವ ಹಂತಕ್ಕೆ ಬಂದಿದ್ದು ಕೇವಲ ಚನ್ನಕೇಶವನ ವಿಗ್ರಹದ ಪ್ರತಿಷ್ಠಾಪನೆ ಮಾತ್ರ ಬಾಕಿ ಇರುತ್ತದೆ. ಅದೇ ಸಮಯಕ್ಕೆ ಅಲ್ಲಿಗೆ ಬಂದು ಯುವ ಶಿಲ್ಪಿಯೊಬ್ಬ ಆ ದೇವಾಲಯವನ್ನೆಲ್ಲಾ ಕೂಲಂಕಶವಾಗಿ ಪರೀಕ್ಷಿಸುತ್ತಾ ಕಡೆಗೆ ಮೂಲ ವಿಗ್ರಹವಾದ ಚನ್ನಕೇಶವನನ್ನು ನೋಡಿ ಇದರಲ್ಲಿ ಒಂದು ನ್ಯೂನತೆ ಇರುವ ಕಾರಣ ಇದು ಪೂಜಿಸಲು ಯೋಗ್ಯವಾಗಿಲ್ಲ ಎಂದು ಹೇಳಿದನಂತೆ.

jakanachariಯಕ್ಕಚ್ಚಿತ್ ಯುವಕನೊಬ್ಬ ಈ ರೀತಿಯಾಗಿ ಹೇಳಿದ್ದನ್ನು ಸಹಿಸಿದ ಜಕಣಾಚಾರಿ ಕೋಪಗೊಂಡು ಮಾತಿನ ಭರದಲ್ಲಿ ಈ ವಿಗ್ರಹದಲ್ಲಿ ಏನಾದರೂ ನ್ಯೂನತೆ ಇದ್ದಲ್ಲಿ ತಾನು ತನ್ನ ಬಲಗೈಯನ್ನು ಕತ್ತರಿಸಿ ಕೊಳ್ಳುವುದಾಗಿ ಆಣೆ ಮಾಡುತ್ತಾನೆ. ಆಗ ಅಲಿದ್ದವರೆಲ್ಲರೂ ಸೇರಿ ಆ ವಿಗ್ರಹವನ್ನು ಪರೀಕ್ಷೆ ಮಾಡುವ ಸಲುವಾಗಿ ಇಡೀ ವಿಗ್ರಹಕ್ಕೆ ಶ್ರೀಗಂಧದ ಲೇಪನವನ್ನು ಹಚ್ಚುತ್ತಾರೆ. ಕೆಲ ಸಮಯದ ನಂತರ ಇಡೀ ವಿಗ್ರಹಕ್ಕೆ ಹಚ್ಚಿದ್ದ ಶ್ರೀಗಂಧವೆಲ್ಲಾ ಒಣಗಿದರೂ ವಿಗ್ರಹದ ಹೊಕ್ಕಳು ಭಾಗ ಮಾತ್ರ ಇನ್ನೂ ಹಸಿಯಾಗಿಯೇ ಉಳಿದಿರುವುದನ್ನು ಗಮನಿಸಿದ ಆ ತರುಣ ಒಂದು ಉಳಿಯಲ್ಲಿ ಹೊಟ್ಟೆಯ ಮೇಲೆ ಒಡೆದಾಗ ವಿಗ್ರಹ ಭಿನ್ನಗೊಂಡು ಹೊಟ್ಟೆಯಿಂದ ನೀರು ಮತ್ತು ಜೀವಂತ ಕಪ್ಪೆಯೊಂದು ಹೊರಬಂದದ್ದನು ಗಮನಿಸಿದ ಜಕಣಾಚಾರಿ ಅವಮಾನ ತಾಳಲಾರದೇ ತಾನು ಪ್ರಮಾಣ ಮಾಡಿದಂತೆ ತನ್ನ ಬಲಗೈಯನ್ನು ಆ ಕೂಡಲೇ ಕತ್ತರಿಸಿ ಕೊಳ್ಳುತ್ತಾನೆ. ಅಂದಿನಿಂದ ಆ ವಿಗ್ರಹ ಕಪ್ಪೇ ಚನ್ನಿಗರಾಯ ಎಂಬ ಹೆಸರಿನಿಂದ ಖ್ಯಾತಿ ಪಡೆದದ್ದು ಇತಿಹಾಸ.

ಆದಾದ ನಂತರ ಆ ತರುಣನ ವೃತ್ತಾಂತವನ್ನು ಕೂಲಕುಂಶವಾಗಿ ವಿಚಾರಿಸಿದಾಗ ಆತ ಬೇರರೂ ಅಗಿರದೇ ಚಗಣಾಚಾರಿ ಊರಿನಲ್ಲಿ ಬಿಟ್ಟು ಬಿಟ್ಟು ಬಂದಿದ್ದ ಅವನ ಮಗ ಡಕಣಾಚಾರಿಯೇ ಆಗಿದ್ದು ಆತ ದೊಡ್ಡವನಾಗಿ, ತನ್ನ ತಂದೆಯಂತೆಯೇ ಶಿಲ್ಪ ಕಲೆಯ ಗೀಳನ್ನು ಹಚ್ಚಿಕೊಂಡು ತಂದೆಯನ್ನು ಅರಸುತ್ತಾ ಬೇಲೂರಿಗೆ ಬಂದಿರುತ್ತಾನೆ. ಇದಾದ ಕೆಲವು ದಿನಗಳ ನಂತರ ಜಕಣಾಚಾರಿಗೆ ಚನ್ನಕೇಶವ ಕನಸಿನಲ್ಲಿ ಬಂದು ಆತನ ಹುಟ್ಟೂರಿನಲ್ಲಿ ದೇವಾಲಯವನ್ನು ಕಟ್ಟಲು ಆಜ್ಞಾಪಿಸುತ್ತಾನೆ. ಭಗವಂತನ ಆದೇಶದಂತೆ ತನ್ನ ಸ್ವಸ್ಥಳಕ್ಕೆ ಹಿಂದಿರುಗಿ ಅಲ್ಲಿ ಈ ಚೆನ್ನಕೇಶವನ ದೇವಾಲಯವನ್ನು ಮಗನ ಸಹಾಯದಿಂದ ಕೇವಲ ಎಡಗೈಯಿಂದಲೇ ನಿರ್ಮಿಸುತ್ತಾನೆ. ಹೀಗೆ ಸುಂದರವಾಗಿ ನಿರ್ಮಾಣ ಗೊಳ್ಳುತ್ತಿದ್ದ ದೇವಾಲದಿಂದ ಸಂತೃಪ್ತನಾದ ಭಗವಂತನು ಅವನು ಕತ್ತರಿಸಿಕೊಂಡಿದ್ದ ಬಲಗೈಯನ್ನು ಮತ್ತೆ ಮರಳಿ ಕೊಟ್ಟನೆಂಬ ಕಾರಣದಿಂದಾಗಿ ಆ ಊರಿಗೆ ಕೈದಾಳವೆಂಬ ಹೆಸರಾಯಿತು ಎಂಬ ಐತಿಹ್ಯವಿದೆ.

ಈ ಕೈದಾಳ ದೇವಸ್ಥಾನವನ್ನು ನಿರ್ಮಿಸುತ್ತಿರುವಾಗಲೇ ಸುಮಾರು 80ಕ್ಕೂ ಹೆಚ್ಚಿನ ವರ್ಷ ವಯಸ್ಸಾಗಿದ್ದ ಜಕಣಾಚಾರಿಯು ವಯೋಸಹಜವಾಗಿ ನಿಧನರಾದ ಕಾರಣ ಈ ದೇವಾಲಯದ ಹೊರ ವಲಯಗಳ ನಿರ್ಮಾಣ ಅರ್ಧದಲ್ಲೇ ನಿಂತಿತಲ್ಲದೇ ದೇಗುಲದ ಗಾತ್ರವೂ ಚಿಕ್ಕದಾಗಿಯೇ ಉಳಿಯಿತು ಎನ್ನಲಾಗುತ್ತದೆ.

ಬೆಂಗಳೂರಿನಿಂದ ಸುಮಾರು 71ಕಿ.ಮೀ ದೂರದಲ್ಲಿರುವ ತುಮಕೂರಿಗೆ ಬಸ್ ,ರೈಲುಗಳ ಮೂಲಕ ಬಂದು ಅಲ್ಲಿಂದ ಕೈದಾಳಕ್ಕೆ ಬಹಳ ಬಸ್ಸುಗಳಿದ್ದು ಕೇವಲ 10 ರಿಂದ 15 ನಿಮಿಷಗಳಲ್ಲಿ ಚನ್ನಕೇಶವ ದೇವಸ್ಥಾನವನ್ನು ತಲುಪಬಹುದಾಗಿದೆ.

ಪ್ರತಿ ದಿನ ಬೆಳಗ್ಗೆ 8.30 ರಿಂದ ಮಧ್ಯಾಹ್ನ 12.30ರ ವರೆಗೆ ಸಂಜೆ 6.30 ರಿಂದ 8.30ರ ವರೆಗೆ ದೇವಾಲಯದಲ್ಲಿ ದರ್ಶನಕ್ಕೆ ಅವಕಾಶವಿದ್ದು, ವಾರದ ರಜೆ ಹಾಗೂ ಸರ್ಕಾರಿ ರಜೆಯ ದಿನದಂದು ಬೆಳಗ್ಗೆ 10.30 ರಿಂದ 2.30ರವರೆಗೆ ಸಂಜೆ 5.30 ರಿಂದ 8.30 ರವರೆಗೆ ತೆರೆದಿರುತ್ತದೆ. ಊಟ ತಿಂಡಿಗಳ ವ್ಯವಸ್ಥೆ ಇಲ್ಲಿ ಇಲ್ಲದಿರುವ ಕಾರಣ ಬರುವಾಗಲೇ ತುಮಕೂರಿನಲ್ಲಿ ಮುಗಿಸಿಕೊಂಡು ಬಂದಲ್ಲಿ ಉತ್ತಮ. ಇನ್ನೂ ಬಾದ್ರಪದ ಮಾಸದಿಂದ ಕಾರ್ತೀಕ ಮಾಸದ ನಡುವಿನಲ್ಲಿ ಇಲ್ಲಿಗೆ ಬಂದಲ್ಲಿ ಭಾದ್ರಪದ ಮಾಸದ ಶುಕ್ಲ ಪಕ್ಷದ ಚೌತಿಯ ದಿನದಂದೇ ಮಣ್ಣಿನಲ್ಲಿ ಗಣೇಶನನ್ನು ತಯಾರಿಸಲು ಆರಂಭಿಸಿ ವಿಜಯದಶಮಿಯ ವೇಳೆಗೆ ಮುಗಿಸಿ, ದೀಪಾವಳಿ ಹಬ್ಬದಿಂದ ನಿತ್ಯ ಪೂಜೆ ನಡೆಸಿ ಕಾರ್ತಿಕ ಮಾಸದ ಅಮಾವಾಸ್ಯೆಯ ನಂತರ ಬರುವ ಭಾನುವಾರದಂದು ವಿಸರ್ಜಿಸುವ ಇತಿಹಾಸ ಪ್ರಸಿದ್ಧ ಗೂಳೂರು ಗಣೇಶನ ದರ್ಶನವನ್ನೂ ಪಡೆಯಬಹುದಾಗಿದೆ. ಅಲ್ಲಿಂದ ಸುಮಾರು 20 ಕಿಮೀ ದೂರದಲ್ಲಿರುವ ಕೂರ್ಮಪೀಠ ಸಹಿತ ಶ್ರೀಚಕ್ರದ ಆಕಾರದಲ್ಲೇ ನಿರ್ಮಿತವಾಗಿರುವು ಪವಿತ್ರ ಕ್ಷೇತ್ರ ಹೆಬ್ಬೂರಿನ ಕಾಮಾಕ್ಷಿ ದೇವಿಯ ದರ್ಶನವನ್ನು ಮಾಡಬಹುದಾಗಿದೆ.

ಇಷ್ಟೆಲ್ಲಾ ಮಾಹಿತಿ ತಿಳಿದ ನಂತರ ಇನ್ನೇಕೆ ತಡಾ. ಈ ವಾರಾಂತ್ಯದಲ್ಲಿ ಸಮಯ ಮಾಡಿಕೊಂಡು ಕೈದಾಳದ ಶ್ರೀ ಚನ್ನಕೇಶವ ಮತ್ತು ಗಂಗಾಧರೇಶ್ವರ ಸ್ವಾಮಿಯ ದರ್ಶನ ಪಡೆದು ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ತಾನೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s