ಶ್ರೀ ಗುರೂಜಿಯವರ ಸಂಸ್ಮರಣೆ

rssಗಿಡ ನೆಡುವುದು ಸುಲಭದ ಕೆಲಸ ಆದರೆ ಅದೇ ಗಿಡವನ್ನು ಸಾಕಿ ಸಲಹಿ ದೊಡ್ಡದಾದ ಆಳದ ಮರದಂತೆ ಬಿಳಿಲು ಬಿಡುವಂತೆ ನೋಡಿಕೊಳ್ಳುವುದು ನಿಜಕ್ಕೂ ಕಷ್ಟಕರವಾದ ಕೆಲಸ. ಅದೇ ರೀತಿ 1925ರ ವಿಜಯದಶಮಿಯಂದು ಪರಮಪೂಜನೀಯ ಡಾ. ಕೇಶವ ಬಲಿರಾಮ ಹೆಡಗೆವಾರ್ ಎಲ್ಲರ ಪ್ರೀತಿಯ ಡಾಕ್ಟರ್ ಜೀ ಅವರು ನಾಲ್ಕಾರು ಹುಡುಗರನ್ನು ನಾಗಪುರದ ಮೋಹಿತೇವಾಡದ ಮೈದಾನದಲ್ಲಿ ಸೇರಿಸಿಕೊಂಡು ಸಂಘವನ್ನು ಕಟ್ಟಿ ಸಂಘಕ್ಕೆ ಕೇವಲ 15 ವರ್ಷಗಳು ಪೂರ್ಣಗೊಂಡು ಮಹಾರಾಷ್ಟ್ರದ ಹೊರತಾಗಿ ಅಕ್ಕ ಪಕ್ಕ ಹತ್ತಾರು ರಾಜ್ಯಗಳಲ್ಲಿ ಆಗಷ್ಟೇ ಆರಂಭವಾಗುವಷ್ಟರಲ್ಲಿ ಜೂನ್ 21 1940ರಲ್ಲಿ ನಿಧನರಾದ ನಂತರ ಸಂಘದ ಸಂಪೂರ್ಣ ಜವಾಬ್ಧಾರಿಯನ್ನು ತಮ್ಮ ಹೆಗಲಿಗೆ ಹೊತ್ತುಕೊಂಡವರೇ ಪರಮಪೂಜನೀಯ ಮಾಧವ ಸದಾಶಿವ ಗೋಳ್ವಾಲ್ಕರ್ ಎಲ್ಲರ ಪ್ರೀತಿಯ ಗುರೂಜಿ.

guru6ಸ್ವಾತಂತ್ರ್ಯ ಪೂರ್ವದಲ್ಲಿ ಈಗಿನ ಮಧ್ಯಪ್ರದೇಶಕ್ಕೆ ಸೇರಿದ್ದ ನಾಗಪುರದಲ್ಲಿ ಅಧ್ಯಾಪಕವೃತ್ತಿಯಲ್ಲಿದ್ದ ಶ್ರೀ ಸದಾಶಿವರಾವ್ ಗೋಳ್ವಾಲ್ಕರ್ ಮತ್ತು ಲಕ್ಷ್ಮೀಬಾಯಿ ದಂಪತಿಗಳಿಗೆ 1906 ಫೆಬ್ರವರಿ 19ರಂದು ನಮ್ಮ ಹಿಂದೂ ಪಂಚಾಗದ ಪ್ರಕಾರ ಮಾಘ ಮಾಸದ ಬಹುಳ ಏಕಾದಶಿಯಂದು ನಾಗಪುರದಲ್ಲಿ ಮಾಧವ ಅವರ ಜನನವಾಗುತ್ತದೆ. ಬಾಲ್ಯದಿಂದಲೂ ಆಟ ಪಾಠಗಳಲ್ಲಿ ಅತ್ಯಂತ ಚುರುಕಿನ ವಿದ್ಯಾರ್ಥಿಯಾಗಿದ್ದ ಮಾಧವ ಸಹಜವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ. ನೆನಪಿನ ಶಕ್ತಿ ಎನ್ನುವುದು ಮಾಧವ ಅವರಿಗೆ ಜನ್ಮತಃ ಬಂದಿದ್ದ ಒಂದು ವರ ಎನ್ನುವುದಕ್ಕೆ ಕೆಲವೊಂದು ಪ್ರಸಂಗಳನ್ನು ಹೇಳಲೇ ಬೇಕು. ಅದೊಮ್ಮೆ ಅವರ ಶಾಲೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅವರ ಅಣ್ಣ ಅಂಗ್ಲ ಭಾಷಣ ಮಾಡಲು ನಿಶ್ಚಯವಾಗಿರುತ್ತದೆ ಮನೆಯಲ್ಲೇ ಅದರ ತಾಲೀಮು ಮಾಡುತ್ತಿರುತ್ತಾರೆ.  ಹಿಂದಿನ ದಿನ ಅಚಾನಕ್ಕಾಗಿ ಅವರ ಅಣ್ಣನ ಆರೋಗ್ಯದಲ್ಲಿ ಏರುಪೇರಾಗಿ, ಭಾಷಣವನ್ನು ಹೇಗಪ್ಪಾ ಮಾಡುವುದು ಎಂದು ಎಲ್ಲರೂ ಚಿಂತಾಕ್ರಾಂತರಾಗಿದ್ದಾಗ ತಮ್ಮ ಮಾಧವ ಮನೆಯಲ್ಲಿ ಆಟವಾಡುತ್ತಲೇ ಅಣ್ಣ ಭಾಷಣವನ್ನು ಉರು ಹೊಡೆಯುತ್ತಿರುದನ್ನು ಕೇಳಿ ಕೇಳಿಯೇ ಇವರಿಗೂ ಕಂಠ ಪಾಠವಾಗಿ ಹೋಗಿರುತ್ತದೆ. ಎಲ್ಲರ ಮುಂದೆಯೂ ಅಷ್ಟೂ ಭಾಷಣವನ್ನು ಪಟ ಪಟನೆ ಹೇಳಿದ್ದಲ್ಲದೇ ಅಣ್ಣನ ಅನುಪಸ್ಥಿತಿಯಲ್ಲಿ ತಮ್ಮ ಮಾಧವರೇ ಶಾಲೆಯಲ್ಲಿ ಭಾಷಣ ಮಾಡಿ ಎಲ್ಲರ ಮನವನ್ನು ಗೆದ್ದಿರುತ್ತಾರೆ.

guru5ಅವರ ತಂದೆ ಅಧ್ಯಾಪಕರಾಗಿದ್ದ ಕಾರಣ ಪದೇ ಪದೇ ಊರಿಂದ ಊರಿಗೆ ವರ್ಗಾವಣೆಯಾಗುತ್ತಿದ್ದ ಕಾರಣ, ಮಾತೃಭಾಷೆ ಮರಾಠಿಯ ಜೊತೆಗೆ ಕ್ರೈಸ್ತ ಮಿಷನರಿ ಶಾಲೆಯಲ್ಲಿ ಕಲಿತಿದ್ದರಿಂದ ಆಂಗ್ಲಭಾಷೆಯಲ್ಲಿ ಪ್ರಾವೀಣ್ಯ ಪಡೆಯುವುದರ ಜೊತೆಗೆ ಹಿಂದಿ ಭಾಷಾ ಪ್ರದೇಶಗಳಲ್ಲೇ ವಾಸಿಸುತ್ತಿದ್ದರಿಂದ ಹಿಂದಿ ಭಾಷೆಯ ಮೇಲೆಯೂ ಒಳ್ಳೆಯ ಹಿಡಿತವನ್ನು ಚಿಕ್ಕವಯಸ್ಸಿನಲ್ಲೇ ಸಾಧಿಸಿ ಬಿಟ್ಟಿದ್ದರು. 1924 ರಲ್ಲಿ ಆಂಗ್ಲಭಾಷೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಇಂಟರ್ ಮೀಡಿಯೇಟ್ ಪರೀಕ್ಷೆ ಮುಗಿಸಿ 1926 ರಲ್ಲಿ ಬಿ.ಎಸ್ಸಿಯನ್ನೂ ಮುಗಿಸಿ, 1928 ರಲ್ಲಿ ಪ್ರಾಣಿಶಾಸ್ತ್ರದಲ್ಲಿ ಎಂ.ಎಸ್ಸಿ ಮುಗಿಸಿ 1929 ರಲ್ಲಿ ಚೆನ್ನೈನ ಮತ್ಸ್ಯಾಲಯದಲ್ಲಿ ಸಂಶೋಧನೆಯಲ್ಲಿ ತೊಡಗಿಸಿಕೊಂಡರು.

guru3ಕುತೂಹಲಕಾರಿ ಸಂಗತಿ ಏನಂದರೆ ಮಾಧವ ಅವರಿಗೆ 1931ರ ವರೆಗೂ ಸಂಘದ ಪರಿಚಯವೇ ಇರಲಿಲ್ಲ. 1931-1933 ರವರೆಗೆ ಕಾಶೀ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವಾಗ ಭಯ್ಯಾಜಿ ದಾನಿ ಎಂಬ ವಿದ್ಯಾರ್ಥಿಯ ಮೂಲಕ ಗುರೂಜಿಯವರಿಗೆ ಸಂಘದ ಸ್ಥಾಪಕರಾದ ಡಾಕ್ಟರ್​ಜಿಯವರ ಪರಿಚಯವಾದಾಗ ಡಾ.ಜೀ ಅವರು ಮೊದಲ ಪರಿಚಯದಲ್ಲೇ ಮಾಧವ ಅವರಲ್ಲಿನ ವಿಶೇಷ ವ್ಯಕ್ತಿತ್ವ ಮತ್ತು ಸಂಘಟನ ಚತುರತೆಯನ್ನು ಗುರುತಿಸುತ್ತಾರೆ. ಇದೇ ಸಮಯದಲ್ಲಿಯೇ ಕಾಶಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮಾಧವ ಅವರು ಪಾಠ ಮಾಡುವುದರಿಂದ ಸಂತೃಪ್ತರಾಗಿ ಅವರನ್ನು ಪ್ರೀತಿ ಮತ್ತು ಗೌರವದಿಂದ ಶ್ರೀ ಗುರೂಜಿ ಎಂದು ಕರೆಯಲು ಆರಂಭಿಸಿದ ನಂತರ ಮಾಧವ ಸದಾಶಿವ ಗೋಲ್ವಾಲ್ಕರ್ ಅವರ ಹೆಸರೇ ಮರೆತ್ಗು ಹೋಗಿ ಗುರುಜೀ ಎಂದೇ ಪ್ರಖ್ಯತರಾಗುತ್ತಾರೆ. 1935 ರಲ್ಲಿ ಗುರುಜೀ ಅಲ್ಲಿಯೇ ಎಲ್.ಎಲ್.ಬಿ ಪದವಿಯನ್ನು ಮುಗಿಸಿದ ನಂತರ ವಕೀಲಿಕೆಯನ್ನು ಮುಂದುವರಿಸದೇ ರಾಮಕೃಷ್ಣ ಪರಮಹಂಸರ ನೇರ ಶಿಷ್ಯ ಮತ್ತು ಸ್ವಾಮಿ ವಿವೇಕಾನಂದರ ನಿಕಟವರ್ತಿ, ಗುರುಬಂಧುವಾಗಿದ್ದ ಸ್ವಾಮಿ ಅಖಂಡಾನಂದರ ಆಧ್ಯಾತ್ಮಿಕ ಮಾರ್ಗದರ್ಶನದಲ್ಲಿ ಅವರ ಶಿಷ್ಯರಾಗಿ ರಾಮಕೃಷ್ಣ ಮಿಷನ್‌ನ ಆಶ್ರಮದಲ್ಲಿ ಕೆಲಕಾಲ ಇದ್ದು ಸ್ವಾಮಿ ಅಖಂಡಾನಂದರ ಮಹಾಸಮಾಧಿಯ ನಂತರ ಗುರೂಜಿಯವರು ನಾಗಪುರಕ್ಕೆ ಮರಳಿ ಡಾ॥ಹೆಡಗೇವಾರರ ಮಾರ್ಗದರ್ಶನದಲ್ಲಿ ಸಂಘಕಾರ್ಯದಲ್ಲಿ ಪೂರ್ಣಾವಧಿಯ ಸ್ವಯಂಸೇವಕರಾಗಿ ತೊಡಗಿಸಿಕೊಳ್ಳುತ್ತಾರೆ.

guru2ಡಾಕ್ಟರ್ ಜೀ ಅವರು 1940ರ ಜೂನ್ 21ರಂದು ವಿಧಿವಶರಾಗುವ ಮುನ್ನಾ ಗುರುಜಿಯವರಿಗೆ ಸರಸಂಘಚಾಲಕತ್ವದ ಹೊಣೆಯನ್ನು ಹಸ್ತಾಂತರಿಸುತ್ತಾರೆ. ಮುಂದಿನ 33 ವರ್ಷಗಳ ಕಾಲ ಗುರೂಜಿಯವ ಸಾರಥ್ಯದಲ್ಲಿ ಡಾ.ಜೀ ಅವರ ಸಂಪೂರ್ಣ ಕಲ್ಪನೆಯನ್ನು ಸಾಕಾರ ಗೊಳಿಸುವುದಕ್ಕಾಗಿ ತಮ್ಮ ಅವಿಶ್ರಾಂತ ಪರಿಶ್ರಮದ ಮೂಲಕ ಸ್ವಯಂಸೇವಕರಿಗೆ ಮಾರ್ಗದರ್ಶನ ಮಾಡಿದ್ದರು. ನಿಜ ಹೇಳಬೇಕೆಂದರೆ ಇದೇ ಸಮಯದಲ್ಲಿಯೇ ಸಂಘಕ್ಕೆ ಅತ್ಯಂತ ಕಠಿಣವಾದ ಕಾಲವಾಗಿರುತ್ತದೆ. ಸ್ವಾತಂತ್ರ್ಯಾನಂತರ 565 ಸಣ್ಣ ಸಣ್ಣ ರಾಜರುಗಳ ಆಳ್ವಿಕೆಯಲ್ಲಿದ್ದ ಭಾರತ ದೇಶವನ್ನು ಒಗ್ಗೂಡಿಸುವ ಕೆಲಸ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಹೆಗಲ ಮೇಲೆ ಬಿದ್ದಾಗಾ ಹೈದರಾಬಾದಿನ ನಿಜಾಮ, ಅಲಿಘಡ್ ಪ್ರಾಂತ್ಯ ಮತ್ತು ಕಾಶ್ಮೀರದ ರಾಜ ಈ ಮೂವರೂ ಭಾರತದ ಒಕ್ಕೂಟಕ್ಕೆ ಸೇರಲು ಇಚ್ಚಿಸದಿದ್ದಾಗ ಕಾಶ್ಮೀರದ ರಾಜನನ್ನು ಒಲಿಸುವುದಕ್ಕಾಗಿಟೇಲರು ಗುರುಜೀ ಅವರ ಸಹಾಯವನ್ನು ಕೇಳಿಕೊಂಡಾಗ ಸಂತೋಷದಿಂದ ಒಪ್ಪಿದ ಗುರೂಜಿ ಕಾಶ್ಮೀರದ ರಾಜನೊಂದಿಗೆ ಸುದೀರ್ಘವಾದ ಚರ್ಚೆಗಳನ್ನು ನಡೆಸಿ ಭಾರತದೊಂದಿಗೆ ಕಾಶ್ಮೀರ ಸೇರಿಕೊಳ್ಳದೇ ಹೋದರೆ ಆಗಬಹುದಾದ ಸಾಧಕ ಬಾಧಕಗಳನ್ನು ವಿವರಿಸಿ ಪಾಕೀಸ್ಥಾನ ಕಾಶ್ಮೀರವನ್ನು ಹುರಿದು ಮುಕ್ಕಿಬಿಡಬಹುದಾದ ಎಚ್ಚರಿಕೆಯನ್ನು ನೀಡಿ ಭಾರತದೊಂದಿಗೆ ಸೇರಿಕೊಳ್ಳುವ ಒಪ್ಪಂದಕ್ಕೆ ಸಹಿಹಾಕಿಸುವುದರಲ್ಲಿ ಹಿರಿಯ ಪಾತ್ರವಹಿಸುತ್ತಾರೆ.

ದುರಾದೃಷ್ಟವಶಾತ್ ನಾತುರಾಂ ಘೋಡ್ಸೆ ಮಹಾತ್ಮಾ ಗಾಂಧಿಯವರನ್ನು ಹತ್ಯೆ ಮಾಡಿದಾಗ ಘೋಡ್ಸೆ ಮತ್ತು ಸಾವರ್ಕರ್ ಅವರಿಗೆ ಸಂಘದ ಸಂಪರ್ಕವಿದ್ದು ಸಂಘವೇ ಗಾಂಧಿಯವರ ಹತ್ಯೆಗೆ ಕಾರಣ ಎಂದು ಸಂಘದ ಮೇಲೆ ದೇಶಾದ್ಯಂತ ನಿರ್ಭಂಧ ಹೇರಿದ್ದಲ್ಲದೇ ಪೋಲೀಸರಿಂದ ಬಂಧನಕ್ಕೊಳಗಾದರೂ, ಮನೆಯ ಮೇಲೆ ಕಲ್ಲುತೂರಾಟವಾದರೂ, ಸ್ವಯಂಸೇವಕರ ನಿತ್ಯದ ಬದುಕು ದುಸ್ತರವಾದರೂ,ಕೊಂಚವೂ ಕುಗ್ಗದ ಗುರೂಜಿಯವರು ಆ ಕ್ಲಿಷ್ಟಕರ ಪರೀಕ್ಷೆಯನ್ನು ನಿಭಾಯಿಸಿದ ರೀತಿ ಅತ್ಯಪೂರ್ವ. ಬಂಧನದಿಂದ ಬಿಡುಗಡೆಯಾದ ನಂತರ ದೇಶಾದ್ಯಂತ ಪ್ರವಾಸವನ್ನು ಮಾಡಿ ಸ್ವಯಂಸೇಕರಿಗೆ ಸ್ಥೈರ್ಯವನ್ನು ತುಂಬಿದ್ದಲ್ಲದೇ ಕಾನೂನಾತ್ಮಕವಾಗಿ ಹೋರಾಟ ಮಾಡಿ ಗಾಂಧಿಯವರ ಹತ್ಯೆಯಲ್ಲಿ ಸಂಘದ ಪಾತ್ರವಿಲ್ಲ ಎಂಬುದನ್ನು ಸಾಭೀತು ಮಾಡಿ ಸಂಘದ ಮೇಲಿ ಹೇರಿದ್ದ ನಿರ್ಭಂಧವನ್ನು ತೆಗೆಸುವುದರಲ್ಲಿ ಗುರುಜೀಯವರ ಪಾತ್ರ ಅತ್ಯಂತ ಮಹತ್ವದಾಗಿತ್ತು.

ಗುರುಜಿಯವರು ಕೇವಲ ಸಂಘದ ಚಟುವಟಿಕೆಗಳಿಗಷ್ಟೇ ತಮ್ಮನ್ನು ಸೀಮಿತಗೊಳಿಸದೇ, ದೇಶ ಮತ್ತು ಧರ್ಮದ ಬಗ್ಗೆ ಅಪಾರವಾದ ಕಾಳಜಿಯುಳ್ಳವರಾಗಿ ಅಂದಿನ ಬಹುತೇಕ ರಾಜಕೀಯ ನಾಯಕರಿಗಿಂತಲೂ ಅತ್ಯಂತ ದೂರದೃಷ್ಟಿಯುಳ್ಳ ಮುತ್ಸದ್ಧಿಯಾಗಿದ್ದರು ಎಂದರೆ ಅತಿಶಯವಲ್ಲ. ಗೋವುಗಳು ಈ ದೇಶದ ಶ್ರದ್ಥೆಯಲ್ಲದೇ, ಈ ದೇಶದ ನಿಜವಾದ ಸಂಪತ್ತು ಎಂಬುದನ್ನು ಚೆನ್ನಾಗಿಯೇ ಅರಿತಿದ್ದ ಗುರೂಜಿಯವರು, 1954 ರಲ್ಲಿ ಗೋಹತ್ಯಾ ನಿಷೇಧ ಆಂದೋಲನದಲ್ಲಿ ಪಾಲ್ಗೊಂಡಿದ್ದಲ್ಲದೇ, ಅಂದಿನ ರಾಷ್ಟ್ರಪತಿ ಡಾ|| ರಾಜೇಂದ್ರ ಪ್ರಸಾದರಿಗೆ ಸುಮಾರು 1.75 ಕೋಟಿ ಜನರ ಹಸ್ತಾಕ್ಷರಗಳ ನಿವೇದನೆಯನ್ನು ಸಹಾ ಮಂಡಿಸಿದ್ದರು.

guru7ಹಿಂದೂಗಳ ಸಂಘಟನೆಗೆ ಕೇವಲ ಸಂಘ ಒಂದರಿಂದಲೇ ಸಾಧ್ಯವಿಲ್ಲ. ಅದರ ಜೊತೆಯಲ್ಲಿಯೇ ಸಂಘ ಪರಿವಾರವಿದ್ದಲ್ಲಿ ಬಹಳಷ್ಟು ಕಾರ್ಯಗಳನ್ನು ಸಾಧಿಸಬಹುದು ಎಂಬುದನ್ನು ಮನಗಂಡ ಗುರೂಜಿಯವರು, ದೇಶದ ಎಲ್ಲಾ ಧರ್ಮಗುರುಗಳನ್ನು ಒಗ್ಗೂಡಿಸಿ 1964ರ ಶ್ರೀ ಕೃಷ್ಣಜನ್ಮಾಷ್ಟಮಿಯಂದು ಮುಂಬಯಿಯ ಸಾಂದೀಪಿನಿ ಆಶ್ರಮದಲ್ಲಿ ವಿಶ್ವಹಿಂದು ಪರಿಷತ್ತನ್ನು ಸ್ಥಾಪನೆ ಮಾಡಿ ಸಂಘವನ್ನು ಪರೋಕ್ಷವಾಗಿ ಮತ್ತೊಂದು ಮಜಲಿಗೆ ತೆಗೆದುಕೊಂಡು ಹೋದರು. ನಂತರ ವಿವಿಧ ಕ್ಷೇತ್ರಗಳಾದ ಕಾರ್ಮಿಕರಿಗಾಗ ಭಾರತೀಯ ಮಜ್ದೂರ್ ಸಂಘ, ಕೃಷಿಕರಿಗಾಗಿ ಭಾರತೀಯ ಕಿಸಾನ್ ಸಂಘ, ವಿದ್ಯಾರ್ಥಿಗಳಿಗಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಸಕ್ರೀಯ ರಾಜಕಾರಣಕ್ಕಾಗಿ ಜನಸಂಘದ ಸ್ಥಾಪನೆಗೆ ಕಾರಣೀಭೂತರಾಗಿದ್ದಲ್ಲದೇ, ಸಂಘದ ಹಿರಿಯ ಪ್ರಚಾರಕರು ಮತ್ತು ಸ್ವಯಂಸೇವಕರುಗಳನ್ನು ಜನಸಂಘಕ್ಕೆ ಕಳುಹಿಸಿಕೊಟ್ಟರು. ಅಂತಹವರುಗಳಲ್ಲಿ ಪ್ರಮುಖರಾದವರೇ ಶ್ರೀ ಆಟಲ್ ಬಿಹಾರಿ ವಾಜಪೇಯಿ ಮತ್ತು ಶ್ರೀ ಲಾಲ ಕೃಷ್ಣ ಅಡ್ವಾನಿ ಮುಂತಾದವರು ಪ್ರಮುಖರು.

ಸಂಘ ವಿರೋಧಿ ಧೋರಣೆ ಹೊಂದಿದ್ದ ನೆಹರು ಮತ್ತು ಕಾಂಗ್ರೇಸ್ ಪಕ್ಷ ಸಂಘಕ್ಕೆ ಅಷ್ಟೆಲ್ಲಾ ತೊಂದರೆಗಳನ್ನು ಕೊಟ್ಟರೂ ಸಹಾ, ದೇಶದ ವಿಷಯ ಬಂದಾಗ ಗುರೂಜಿಯವರು ಸದಾಕಾಲವೂ ನೆಹರು ಸರ್ಕಾರವನ್ನು ಎಚ್ಚರಿಸಲು ಹಿಂಜರಿಯುತ್ತಿರಲಿಲ್ಲ. ವಿಶ್ವನಾಯಕನಾಗ ಬೇಕು ಎಂಬ ತೆವಲಿನಲ್ಲಿ ನೆಹರು ಅಲಿಪ್ತ ನೀತಿ ಧೋರಣೆಯಿಂದ ಹಿಂದೀ-ಚೀನೀ ಬಾಯಿ ಬಾಯಿ ಎಂದು ಮೈ ಮರೆತಿದ್ದಾಗಲೇ ಚೀನಿಯರು, ಚೀನಿಯರು ನೀವು ಎಣಿಸಿದಷ್ಟು ಒಳ್ಳೆಯವರಲ್ಲಾ ಅವರು ಭಾರತದ ವಿರುದ್ಧ ಕತ್ತಿ ಮಸೆಯಿತ್ತಲೇ ಇರುತ್ತಾರೆ ಎಂದು ನೆಹರು ಸರ್ಕಾರಕ್ಕೆ ಮೊತ್ತ ಮೊದಲಿಗೆ ಎಚ್ಚರಿಸಿದವರೇ ಶ್ರೀ ಗುರುಜಿಯವರು. ಆದರೆ ಅದಕ್ಕೆ ನೆಹರು ಮಣೆ ಹಾಕದಿದ್ದ ಪರಿಣಾಮವಾಗಿಯೇ ಚೀನಿಯರು ಭಾರತದ ಮೇಲೆ ಅಕ್ರಮಣ ಮಾಡಿ ಸಾವಿರಾರು ಕಿಮೀ ಜಾಗವನ್ನು ಆಕ್ರಮಿಸಿ ಕೊಂಡಿದ್ದು ಈಗ ಇತಿಹಾಸ.

ನೆಹರು ಗುರೂಜಿಯವರ ಎಚ್ಚರಿಯನ್ನು ತಳ್ಳಿಹಾಕಿದ್ದರೂ 1962ರ ಯುದ್ಧದ ಸಮಯದಲ್ಲಿ ಗಡಿಯಲ್ಲಿ ಸಂಘ ಸ್ವಯಂಸೇವಕರ ಸೇವೆಯಿಂದ ಪ್ರಭಾವಿತರಾದ ನೆಹರು ಮ್ ರಾಷ್ಟ್ರೀಯತೆಯ ಉತ್ಸಾಹವನ್ನು ತುಂಬಲು 1963ರ ಗಣರಾಜ್ಯೋತ್ಸವದ ಪರೇಡ್‌ಗೆ ಸಂಘದ ಸ್ವಯಂಸೇವಕರನ್ನು ಆಹ್ವಾನಿಸಿದಾಗ ಅದಕ್ಕೆ ಒಪ್ಪಿದ ಗುರೂಜಿಯವರು 3,000 ಕ್ಕೂ ಹೆಚ್ಚು ಸಂಘ ಸ್ವಯಂಸೇವಕರನ್ನು ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸಲು ಕಳಿಸಿಕೊಟ್ಟು ಸಂಘದ ಹೆಮ್ಮೆಯನ್ನು ಎತ್ತರಕ್ಕೇರಿಸಿದ್ದರು.

ಸೇವೆಯ ನಿಜ ಅರ್ಥವೆಂದರೆ ಹೃದಯ ಶುದ್ಧಿ, ಅಹಂಕಾರದ ವಿನಾಶ, ದೈವತ್ವದ ಅನುಭವ ಹಾಗೂ ಸರ್ವತ್ರ ಶಾಂತಿಯ ಪ್ರಾಪ್ತಿ ಎಂಬ ಅವರ ನುಡಿಗಳು ಇಂದಿಗೂ ಸಂಘದ ಸ್ವಯಂಸೇಕವರಿಗೆ ಪ್ರೇರಣೆಯಾಗಿದೆ. ಸಂಘದ ಸಿದ್ಧಾಂತ, ಕಾರ್ಯಪದ್ಧತಿ, ಚರಿತ್ರೆ, ಶಿಸ್ತು, ತರಬೇತಿಯ ಮಾದರಿ ಇವೆಲ್ಲವಕ್ಕೂ ಒಂದು ಮೂರ್ತರೂಪವನ್ನು ನೀಡುವುದರ ಮೂಲಕ ಸಾರ್ವಜನಿಕರಲ್ಲಿ ಸಂಘದ ಬಗ್ಗೆ ಒಳ್ಳೆಯ ಚಿತ್ರಣ ಮೂಡಿಸುವುದರಲ್ಲಿ ಗುರೂಜಿಯವರು ಸಾರ್ಥಕರಾದರೂ ಅಷ್ಟೇ ಪ್ರಮಾಣದ ವಿರೋಧಿಗಳ ತೆಗಳಿಕೆ ಸ್ವಲ್ಪವೂ ತಲೆ ಕೆಡಿಸಿಕೊಳ್ಳದ ಗುರೂಜಿಯವರು ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎನ್ನುವ ಸಂಘದ ಧ್ಯೇಯ ಮಂತ್ರವನ್ನು ಅಕ್ಷರಶಃ ಕಾರ್ಯರೂಪಕ್ಕೆ ಗುರೂಜಿಯವರು ತಂದ್ದಿದ್ದರು ಎಂದರು ತಪ್ಪಾಗದು. ಪ್ರಶಂಸೆಗೆ ಹಿಗ್ಗದೆ, ಟೀಕೆಗಳಿಗೆ ಕುಗ್ಗದೇ ಸಮಸ್ಥಿತಿಯಲ್ಲಿ ಯೋಗಿಗಳಂತೆ ಸ್ಥಿಮಿತವಾಗಿರುವಂತಹ ಶಕ್ತಿಯನ್ನು ಪಡೆದುಕೊಂಡಿದ್ದ ಗುರೂಜಿಯವರು. ಕೇವಲ ಭಾರತಕಷ್ಟೇ ಅಲ್ಲದೇ ಇಡೀ ವಿಶ್ವಕ್ಕೆ ಮಾರ್ಗದರ್ಶನ ನೀಡಬಲ್ಲ ದೃಷ್ಟಿಕೋನ ಹೊಂದಿದ್ದ ಶ್ರೇಷ್ಟ ತತ್ವಜ್ಞ ಚಿಂತಕರಾಗಿದ್ದರು.

guru8ಸ್ವತಂತ್ರ ಭಾರತದ ಅಭಿವೃದ್ಧಿಗೆ ಸ್ವದೇಶಿ-ಸ್ವಭಾಷಾ-ಗೋರಕ್ಷಾ ಎಂಬ ತ್ರಿಸೂತ್ರಗಳ ಆಧಾರದಲ್ಲಿ ನೀಲಿನಕಾಶೆಯನ್ನು ಸಿದ್ಧಪಡಿಸಿ ಅದನ್ನು ಜಾರಿಗೆ ತರಲು ದೇಶದಾದ್ಯಂತ ಪ್ರವಾಸ ಗೈಯ್ದ ವಿವಿಧ ಸಂಘಟೆನೆಗಳನ್ನು ಆರಂಭಿಸಿದ್ದಲ್ಲದೇ ಕೋಟ್ಯಾಂತರ ಸ್ವಯಂಸೇವರನ್ನು ಪ್ರೇರೇಪಿಸಿದ ಪರಿಣಾಮವಾಗಿಯೇ ಇಂದು ದೇಶದ ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು, 10ಕ್ಕೂ ಹೆಚ್ಚಿನ ಮುಖ್ಯಮಂತ್ರಿಗಳು, ಸರಿ ಸುಮಾರು 500ಕ್ಕೂ ಹೆಚ್ಚಿನ ಸಾಂಸದರು, ಸಾವಿರಾರು ಶಾಸಕರುಗಳು ಅವರ ಹಾಕಿಕೊಟ್ಟ ಆದರ್ಶಗಳನ್ನೇ ಪಾಲಿಸಿಕೊಂಡು ಭಾರತವನ್ನು ಮತ್ತೊಮ್ಮೆ ವಿಶ್ವಗುರುವನ್ನಾಗಿ ಮಾಡುವತ್ತಾ ಧಾಪುಗಾಲು ಹಾಕುತ್ತಿರುವುದು ಶ್ಲಾಘನೀಯವಾಗಿದೆ. ಮೂರು ದಶಕಗಳ ಕಾಲ ನಿರಂತರವಾಗಿ ಸಂಘವನ್ನು ಮುನ್ನಡೆಸಿದ ಗುರೂಜಿ ಅವರು ಜೂನ್ 5, 1973 ರಂದು ದೈವಾಧೀನರಾದಾಗ ಭಾರತದ ಧೃವನಕ್ಷತ್ರವೊಂದು ಮರೆಯಾಯಿತು ಎಂದರೂ ಅತಿಶಯವಲ್ಲ.

samagraಭಾರತವನ್ನು ಹಿಂದುತ್ವದ ಏಕಸೂತ್ರದಲ್ಲಿ ಜೋಡಿಸಿದ ಮಾಂತ್ರಿಕ ಅಂದು ಬಿತ್ತಿದ ಬೀಜ ಇಂದು ಫಲಕೊಡುತ್ತಿದೆ. ಸಂಘವೆಂಬ ಹೆಮ್ಮರವಿಲ್ಲದಿದ್ದರೆ ಭಾರತದ ಸ್ಥಿತಿ ಈಗ ಹೇಗಿರುತ್ತಿತ್ತು ಎಂಬುದನ್ನು ಊಹಿಸುವುದೂ ಕಷ್ಟವಾಗಿದೆ. ಸಂಘದ ನಿಜಾರ್ಥದ ಅರಿವಾಗ ಬೇಕಾದರೆ ಗುರೂಜಿಯವರ ಕುರಿತಾದ ಗುರೂಜಿ ಸಮಗ್ರ ಎಂಬ 12 ಸಂಪುಟಗಳ ಪುಸ್ತಕವನ್ನು ಖಂಡಿತವಾಗಿಯೂ ಪ್ರತಿಯೊಬ್ಬ ಭಾರತೀಯರೂ ಅಧ್ಯಯನ ಮಾಡಲೇ ಬೇಕಾದಂತಹ ಪುಸ್ತಕವಾಗಿದೆ. ಗುರುಜೀಯವರು ನಿಧನರಾಗಿ 50 ವರ್ಷಗಳಾಗುತ್ತಾ ಬಂದರೂ ಅವರ ಜನ್ಮ ದಿನವಾದ ಇಂದು ದೇಶಾದ್ಯಂತ ಬೆಳ್ಳಂಬೆಳಿಗ್ಗೆ ಸೂರ್ಯೋದಯಕ್ಕೂ ಮುಂಚೆಯೇ ಸಂಸ್ಮರಣೆಯನ್ನು ಇಂದಿಗೂ ಶ್ರದ್ಧಾ ಭಕ್ತಿಗಳಿಂದ ಮಾಡುತ್ತಾರೆ ಎಂದರೆ ಆ ತಪಸ್ವಿಯ ಆದರ್ಶಗಳು ಇಂದಿಗೂ ಅಷ್ಟಿರ ಮಟ್ಟಿಗೆ ಪ್ರಸ್ತುತವಾಗಿದೆ ಎಂಬರ್ಥವಲ್ಲವೇ?

ಏನಂತೀರಿ?
ನಿಮ್ಮವನೇ ಉಮಾಸುತ

2 thoughts on “ಶ್ರೀ ಗುರೂಜಿಯವರ ಸಂಸ್ಮರಣೆ

  1. ಮಾನ್ಯರೇ,
    ಗುರೂಜಿಯವರ ಬಗ್ಗೆ ನಿಮ್ಮ ಲೇಖನ ತುಂಬಾ ಚೆನ್ನಾಗಿದೆ.ಧನ್ಯವಾದಗಳು
    ರಾಷ್ಟ್ರ ಜಾಗೃತಿಯ ಬಗ್ಗೆ ನಿಮ್ಮಿಂದ ಇನ್ನೂ ಹಲವಾರು ಸತ್ಯಗಳು ಹೊರಬರಲಿ ಎಂದು ಆಶಿಸುತ್ತೇನೆ.

    Liked by 2 people

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s