ವಿದುರಾಶ್ವಥ ಶ್ರೀ ಅಶ್ವತ್ಥ ನಾರಾಯಣ ಸ್ವಾಮಿ ದೇವಸ್ಥಾನ

ದ್ವಾಪರಯುಗಾಂತ್ಯದಲ್ಲಿ ಪಾಂಡವರು ಮತ್ತು ಕೌರವರ ನಡುವೆ ಯುದ್ಧ ನಡೆದು ಕೌರವರನ್ನು ಸೆದೆಬಡೆದ ಪಾಂಡವರು ತಮ್ಮ ರಾಜ್ಯವನ್ನು ಮರಳಿ ಪಡೆಯುತ್ತಾರೆ ಎಂಬುದನ್ನು ನಮ್ಮ ಪುರಾಣ ಗ್ರಂಥವಾದ ಮಹಾಭಾರತದಲ್ಲಿ ಓದಿರುತ್ತೇವೆ. ಆದರೆ ಮಹಾಭಾರತ ಎಂಬುದು ನಡದೇ ಇಲ್ಲ. ಅದೊಂದು ಕಟ್ಟು ಕಥೆ ಎನ್ನುವವರಿಗೆ ಉತ್ತರ ನೀಡುವಂತೆಯೇ ವರಸೆಯಲ್ಲಿ ಧೃತರಾಷ್ಟ್ರನ ತಮ್ಮ ಮತ್ತು ಆತನಿಗೆ ಆಪ್ತಸಲಹೆಗಾರ ಮತ್ತು ಮಂತ್ರಿಯಾಗಿದ್ದ ವಿದುರನು ಕೌರವರ ದುಷ್ಟ ಬುದ್ದಿಗೆ ಬೇಸತ್ತು, ಉತ್ತರ ಭಾರತದಿಂದ ದಕ್ಷಿಣ ಭಾರತ ಅದರಲ್ಲೂ ಕರ್ನಾಟಕದ ಮತ್ತು ಆಂಧ್ರ ಪ್ರದೇಶದ ಗಡಿಯಲ್ಲಿ ಉತ್ತರ ಪಿನಾಕಿನಿ ನದಿಯ ತಟದಲ್ಲಿರುವ ದೊಡ್ಡ ಕುರುಗೋಡಿನಲ್ಲಿ ಮೈತ್ರೆಯೀ ಮುನಿಯ ಆಶ್ರಮದಲ್ಲಿ ಸುಮಾರು ವರ್ಷಗಳ ಕಾಲ ನೆಲಸಿದ್ದಲ್ಲದೇ, ಗುರುಗಳು ಆಶೀರ್ವದಿಸಿಕೊಟ್ಟ ಒಂದು ಅಶ್ವತ್ಥ ವೃಕ್ಷವನ್ನು ನೆಟ್ಟು, ಬೆಳೆಸಿದನೆಂಬ ಪ್ರತೀತಿಯಿರುವ ಕಾರಣ ವಿದುರಾಶ್ವತ್ಥ ಎಂದೇ ಪ್ರಸಿದ್ದವಾಗಿರುವ ಶ್ರೀಕ್ಷೇತ್ರದ ದರ್ಶನವನ್ನು ಮಾಡೋಣ ಬನ್ನಿ.

WhatsApp Image 2022-02-26 at 6.50.53 PM (1)ಬೆಂಗಳೂರು ಮತ್ತು ಹಿಂದೂಪುರ ರಸ್ತೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರೀಬಿದನೂರು ತಾಲ್ಲೂಕ್ಕಿನಿಂದ ಕೇವಲ 7.2 ದೂರದಲ್ಲಿರುವ ವಿಧುರಾಶ್ವತ್ಥ ಶ್ರೀ ಕ್ಷೇತ್ರದಲ್ಲಿರುವ ಅಶ್ವತ್ಥನಾರಾಯಣಸ್ವಾಮಿ ಮತ್ತು ಸುಬ್ರಹ್ಮಣ್ಯಸ್ವಾಮಿಯ ಸನ್ನಿಧಾನವಿರುವ ಪವಿತ್ರಭೂಮಿಯಾಗಿದ್ದು, ವಿಶೇಷವಾಗಿ ಭಕ್ತಾದಿಗಳಿಂದಲೇ ಪ್ರತಿಷ್ಠಾಪನೆ ಮಾಡಲ್ಪಟ್ಟಿರುವ ಸಾವಿರಾರು ನಾಗರ ಕಲ್ಲುಗಳಿಗೆ ಪ್ರಸಿದ್ಧವಾಗಿದೆ.

VID1ನಮಗೆಲ್ಲರಿಗೂ ತಿಳಿದಿರುವಂತೆ ವಿದುರನು ವರಸೆಯಲ್ಲಿ ದೃತರಾಷ್ಟ್ರನಿಗೆ ತಮ್ಮನಗಿದ್ದು. ಧುರ್ಯೋಧನನ ಆಡಳಿತದಲ್ಲಿ ಮಂತ್ರಿಯಾಗಿದ್ದಲ್ಲದೇ, ಆತನಿಗೆ ರಾಜ್ಯಭಾರದಲ್ಲಿ ಸಹಾಯಕನಾಗಿರುತ್ತಾನೆ. ಪಾಂಡವರು ಪಗಡೆಯಾಟದಲ್ಲಿ ಸೋತ ನಂತರ ಒಪ್ಪಂದದಂತೆ 14 ವರ್ಷಗಳ ಕಾಲ ವನವಾಸ ಮತ್ತು 1 ವರ್ಷ ಅಜ್ಞಾತವಾಸ ಮಾಡಿ ಕಳೆದುಕೊಂಡಿದ್ದ ರಾಜ್ಯವನ್ನು ಮರಳಿ ಕೊಡುವಂತೆ ಕೌರವರಲ್ಲಿ ಕೇಳಿಕೊಂಡಾಗಾ, ಮಾತಿಗೆ ತಪ್ಪಿದ ಧುರ್ಯೋಧನ ಯುದ್ದಕ್ಕೆ ಸನ್ನದ್ಧರಾಗಿದ್ದನ್ನು ಸಹಿಸದ ವಿದುರನು ಆಲಿಪ್ತ ನೀತಿ ತಾಳಿ ತೀರ್ಥಯಾತ್ರೆ ಮಾಡುತ್ತಾ ಉತ್ತರ ಪಿನಾಕಿನಿ ನದಿಯ ತಟದಲ್ಲಿದ್ದ ಮೈತ್ರೆಯೀ ಮುನಿಯ ಆಶ್ರಮಕ್ಕೆ ಬಂದು ವಾಸಿಸತೊಡಗುತ್ತಾನೆ. ಋಷಿವರ್ಯರು ವಿದುರನಿಗೆ ಆಶ್ರಮದಲ್ಲಿ ಅಶ್ವಥ ಮರ ನೆಟ್ಟು, ಅದನ್ನು ಬೆಳೆಸಬೇಕೆಂದು ತಿಳಿಸಿ ದೇಶ ಪರ್ಯಟನೆಗೆ ಹೊರಟರಂತೆ. ಮೈತ್ರೇಯ ಮಹಾಮುನಿಗಳು ನೆಟ್ಟ ಬ್ರಹ್ಮ, ವಿಷ್ಣು, ಮಹೇಶ್ವರರು ನೆಲೆಸಿಹ ಅಶ್ವತ್ಥಗಿಡವನ್ನು ಮೂಲತೋ ಬ್ರಹ್ಮರೂಪಾಯ, ಮಧ್ಯತೋ ವಿಷ್ಣು ರೂಪಿಣಿ, ಅಗ್ರತಃ ಶಿವರೂಪಾಯ ವೃಕ್ಷ ರಾಜಾಯತೇ ನಮಃ ಎಂದು ವಿದುರನು ಆ ಆಶ್ವತ ಮರವನ್ನು ಮತ್ತು ಆ ಸುತ್ತ ಮುತ್ತಲಿನ ಪ್ರದೇಶವನ್ನು ನೋಡಿಕೊಂಡದ್ದರಿಂದ ಈ ಸ್ಥಳ ವಿದುರಾಶ್ವಥ ಎಂದೇ ಪ್ರಸಿದ್ದವಾಗಿದೆ.

ಇಲ್ಲಿರುವ ಅಶ್ವತ್ಥ ವೃಕ್ಷವನ್ನು ಪೂಜಿಸಲೆಂದೇ ಪ್ರತಿದಿನವೂ ನೂರಾರು ಭಕ್ತಾದಿಗಳು ಇಲ್ಲಿಗೆ ಬರುತ್ತಾರೆ. ಅದರಲ್ಲೂ ವಿಶೇಷವಾಗಿ ಸಂತಾನವಿಲ್ಲದವರು, ನಾಗದೋಷ ಇರುವವರು ಈ ಮರದ ಕೆಳಗೆ ಪ್ರತಿಷ್ಠಾಪಿಸಿರುವ ಸಾವಿರಾರು ನಾಗರಕಲ್ಲುಗಳಿಗೆ ಪೂಜಿಸಿದರೆ ಅಥವಾ ನಾಗರ ಕಲ್ಲುಗಳನ್ನು ಪ್ರತಿಷ್ಠಾಪನೆ ಮಾಡಿದರೆ ಅವರ ಇಚ್ಛೆಗಳು ಪೂರೈಸುತ್ತದೆ ಎಂಬ ನಂಬಿಕೆ ಇರುವ ಕಾರಣ, ನೆರೆಯ ಆಂಧ್ರಪ್ರದೇಶ ಮತ್ತು ಕರ್ನಾಟಕವಲ್ಲದೇ ದೇಶಾದ್ಯಂತ ಪ್ರತಿದಿನವೂ ನೂರಾರು ಭಕ್ತರು ನಿತ್ಯ ಇಲ್ಲಿಗೆ ಆಗಮಿಸಿ ವೃಕ್ಷವನ್ನು ಹಾಗೂ ಇಲ್ಲಿರುವ ದೇವರುಗಳನ್ನು ಪೂಜಿಸುತ್ತಾರೆ. ದೇವಸ್ಥಾನದ ಇಕ್ಕೆಲಗಳಲ್ಲಿಯೂ ನೂರಾರು ವರ್ಷಗಳಿಂದಲೂ ಸಹಸ್ರಾರು ಭಕ್ತಾದಿಗಳು ಸ್ಥಾಪಿಸಿರುವ ಸಹಸ್ರಾರು ನಾಗಪ್ಪನ ಶಿಲಾಮೂರ್ತಿಗಳಿಂದ ತುಂಬಿದ್ದು ನೋಡಲು ನಯನ ಮನೋಹರವಾಗಿದೆ.

ಸದ್ಯಕ್ಕೆ ದೇವಾಲಯ ಜೀರ್ಣೋದ್ಧಾರ ನಡೆಯುತ್ತಿದ್ದು ಪ್ರತಿನಿತ್ಯವೂ ಉತ್ಸವ ಮೂರ್ತಿಗೆ ಯೋಗ ಮಂಟಪದಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಿದೆ. ದೇವಸ್ಥಾನದ ಪ್ರಮುಖ ಆಕರ್ಷಣೆಯಾದ ಅಶ್ವತ್ಥವೃಕ್ಷದ ಸುತ್ತಲೂ ಪ್ರಾಕರವಿದ್ದು, ದೇವಾಲಯ ಪ್ರವೇಶಿಸುತ್ತಿದ್ದಂತೆಯೇ ಮೊದಲು ಅಭಿಷ್ಟ ಸಿದ್ಧ ಗಣಪತಿ ಮಂಟಪವಿದ್ದು, ಅಮೃತಶಿಲೆಯಿಂದ ಕೆತ್ತಲಾಗಿರುವ ಬಲಮುರಿ ಗಣಪನ ಮೂರ್ತಿ ಸುಂದರವಾಗಿದೆ. ಪಕ್ಕದಲ್ಲೇ ಇರುವ ಅಶ್ವತ್ಥನಾರಾಯಣ ಗುಡಿ ಪ್ರಧಾನವಾದದ್ದು. ಇಲ್ಲಿ ಭವಾನಿಶಂಕರ, ಶ್ರೀರಾಮ, ವೀರಾಂಜನೇಯಸ್ವಾಮಿ, ಶ್ರೀದೇವಿ, ಭೂದೇವಿ ದೇವಾಲಯಗಳೂ ಇವೆ. ದೇವಾಲಯಗಳಿವೆ. ಈ ದೇವಸ್ಥಾನದ ಹಿಂದಿರುವ ತೋಟದಲ್ಲಿ ಪ್ರತಿವರ್ಷ ಚೈತ್ರಮಾಸದ ಹುಣ್ಣಿಮೆಯ ದಿನ ನಡೆಯುವ ದೊಡ್ಡಜಾತ್ರೆಗೆ ಸಾವಿರಾರು ಭಕ್ತಾದಿಗಳು ಆಗಮಿಸುತ್ತಾರೆ. ಕೆಲವರ್ಷಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ಪುರಾಣ ಪ್ರಸಿದ್ಧವಾದ ಅಶ್ವತ್ಥ ಮರದ ಒಂದು ಭಾಗ ಉರುಳಿಹೋಗಿದ್ದು ಈಗ ಇತಿಹಾಸವಾಗಿದೆ.

ದೇವಸ್ಥಾನ ಪ್ರತಿದಿನವೂ ಬೆಳಿಗ್ಗೆ 7 ರಿಂದ ಸಂಜೆ 7ರವರೆಗೆ ತೆರೆದಿರುತ್ತದೆ. ದೇವಸ್ಥಾನದಲ್ಲಿ ನಾಗರ ಕಲ್ಲನ್ನು ಪ್ರತಿಷ್ಠಾಪನೆ ಮಾಡಬಯಸುವವರು ಒಂದೆರಡು ದಿನಗಳ ಮುಂಚಿತವಾಗಿ ತಿಳಿಸಿ, ನಿಗಧಿತವಾದ ಹಣವನ್ನು ಸಂದಾಯ ಮಾಡಿದಲ್ಲಿ, ದೇವಾಲಯದ ಆಡಳಿತ ಮಂಡಳಿ ನಿರ್ವಿಘ್ನವಾಗಿ ನಡೆಸಿಕೊಡುತ್ತಾರೆ. ಭಕ್ತಾದಿಗಳ ಅನುಕೂಲಕ್ಕಾಗಿ ವಸತಿ ಗೃಹಗಳು ಸಹಾ ಲಭ್ಯವಿರುವುದಲ್ಲದೇ, ಪ್ರತಿದಿನ ಮಧ್ಯಾಹ್ನ ದಾಸೋಹದ ವ್ಯವಸ್ಥೆ ಇದ್ದರೆ, ರಾತ್ರಿಯ ಹೊತ್ತು ಫಲಾಹರದ ವ್ಯವಸ್ಥೆಯೂ ಇದೆ.

IMG20220226123057ಈ ಕ್ಷೇತ್ರ ಕೇವಲ ಧಾರ್ಮಿಕವಾಗಿಯಲ್ಲದೇ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿಯೂ ಪ್ರಮುಖ ಪಾತ್ರ ವಹಿಸಿತ್ತು. ಪಂಜಾಬಿನ ಜಲಿಯನ್ ವಾಲಾಭಾಗ್ ನಲ್ಲಿ ನಡೆದ ನರಮೇಧದಂತೆ, ಇಲ್ಲಿಯೂ ಸಹಾ ಬ್ರಿಟಿಷರು ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಗುಂಡು ಹಾರಿಸಿ ಸುಮಾರು 10 ಮಂದಿ ದೇಶಭಕ್ತರನ್ನು ಕೊಂದಿದ್ದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಡಿದವರ ಸ್ಮರಣಾರ್ಥ 1959ರಲ್ಲಿ ಇಲ್ಲಿ ಸರ್ವೋದಯ ಮೆಮೋರಿಯಲ್ ಪ್ರೌಢಶಾಲೆಯನ್ನು ಸ್ಥಾಪಿಸಲಾಗಿದೆಯಲ್ಲದೇ, 1962ರಲ್ಲಿ ಸತ್ಯಾಗ್ರಹಿಗಳ ನೆನಪಿಗಾಗಿ ಇಲ್ಲಿ ಸ್ಮಾರಕ ಸ್ತಂಭವೊಂದನ್ನು ನಿರ್ಮಿಸಲಾಗಿದ್ದು ಇತ್ತೀಚೆಗೆ ವೀರಸೌಧವನ್ನು ಸಹಾ ನಿರ್ಮಿಸಿ ಅಲ್ಲಿ ನೂರಾರು ಸ್ವಾತ್ರಂತ್ಯ ಹೋರಾಟಗಾರರ ಚಿತ್ರಗಳ ಪ್ರದರ್ಶನ ಅದ್ಭುತವಾಗಿದೆ.

ಬೆಂಗಳೂರು ಮತ್ತು ಹಿಂದೂಪುರದ ಹೆದ್ದಾರಿಯ ನಡುವೆ ಇರುವ ಗೌರಿಬಿದನೂರಿಗೆ ಎಲ್ಲೆಡೆಯಿಂದಲೂ ನೇರವಾದ ಬಸ್ ಮತ್ತು ರೈಲಿನ ವ್ಯವಸ್ಥೆ ಇದ್ದು ಅಲ್ಲಿಂದ ಬಸ್ ಇಲ್ಲವೇ ಖಾಸಗೀ ವಾಹನಗಳ ಮೂಲಕ ಶ್ರೀ ಕ್ಷೇತ್ರವನ್ನು ತಲುಪಬಹುದಾಗಿದೆ.

ಇಷ್ಟೆಲ್ಲಾ ಮಾಹಿತಿಗಳನ್ನು ತಿಳಿದ ಮೇಲೆ ಇನ್ನೇಕೆ ತಡಾ ಈ ವಾರಾಂತ್ಯದಲ್ಲಿ ಸಮಯ ಮಾಡಿಕೊಂಡು ಶ್ರೀ ಕ್ಷೇತ್ರಕ್ಕೆ ಬಂದು ಅಶ್ವತ್ಧಸ್ವಾಮಿಯ ಕೃಪಾಶೀರ್ವಾದಕ್ಕೆ ಪಾತ್ರರಾಗ್ತೀರೀ ತಾನೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s