ಕಾಶೀ ಶ್ರೀ ವಿಶ್ವನಾಥ

vish1ನಮ್ಮ ಭಾರತ ದೇಶದ ಅತ್ಯಂತ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದ ಕಾಶಿ, ವಾರಣಾಸಿ, ಬನಾರಸ್ ಎಂಬೆಲ್ಲಾ ಹೆಸರುಗಳಿಂದ ಕರೆಸಿಕೊಳ್ಳುವ ಈ ಶ್ರೀಕ್ಷೇತ್ರ ಹಿಂದೂಗಳ ಆಧ್ಯಾತ್ಮ ಕೇಂದ್ರವಲ್ಲದೇ ಮೋಕ್ಷದ ಹಾದಿಯೂ ಆಗಿದೆ. ಕಾಶಿಗೆ ಹೋಗಿ ಬಂದವರಿಗೆ ಮೋಕ್ಷ ಸಿಗುವುದಲ್ಲದೇ ಕಾಶೀಯಲ್ಲಿ ದೇಹತ್ಯಾಗ ಮಾಡುವರಿಗೆ ಶಾಶ್ವತವಾದ ಸದ್ಗತಿ ದೊರೆಯುತ್ತದೆ ಎಂಬ ನಂಬಿಕೆ ಇದೆ. ಗಂಗಾನದಿಯ ತಟದಲ್ಲಿ ೬೪ ಘಾಟ್ ಗಳಿರುವ ಈ ಶ್ರೀಕ್ಷೇತ್ರದಲ್ಲಿ ವಿಶ್ವಪ್ರಸಿದ್ಧ ಕಾಶಿ ವಿಶ್ವನಾಥ ದೇವಾಲಯವಿದ್ದು ಶಿವರಾತ್ರಿಯ ಈ ಪವಿತ್ರದಿನದಂದು ಶ್ರೀಕ್ಷೇತ್ರದ ದರ್ಶನವನ್ನು ಪಡೆಯೋಣ ಬನ್ನಿ.

ಕಾಶಿಯ ಶ್ರೀ ವಿಶ್ವೇಶ್ವರ ಸ್ವಾಮಿಯು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದ್ದು ಸಮಸ್ತ ಹಿಂದೂಗಳ ಅತ್ಯಂತ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿದ್ದು ಬಹಳ ಪ್ರಾಚೀನವಾಗಿರುವುದಲ್ಲದೆ ಸಂಸ್ಕೃತಿಯಲ್ಲಿ ಅತ್ಯಂತ ಶ್ರೀಮಂತವಾಗಿದೆ. ಭೂಮಿಯು ರೂಪುಗೊಂಡ ನಂತರ ಸೂರ್ಯನ ಮೊದಲ ಕಿರಣ ಬಿದ್ದಿದ್ದು ಇದೇ ಕಾಶಿಯ ಮೇಲೆಯೇ ಎಂಬ ನಂಬಿಕೆಯೂ ಇದೆ. ಇಲ್ಲಿನ ವಿಶ್ವನಾಥ ಮಂದಿರದಲ್ಲಿ ಶಿವನು ಕೆಲ ಕಾಲ ನೆಲಸಿದ್ದಲ್ಲದೇ, ಇಂದಿಗೂ ಇಡೀ ನಗರದ ಕಾವಲಾಗಿ ಶಿವ ನಿಂತಿದ್ದಾನೆ ಎಂಬ ನಂಬಿಕೆಯಿಂದಲೇ ಕಾಶಿಯನ್ನು ಶಿವ್ ಕಿ ನಗ್ರಿ ಎಂದೇ ಸ್ಥಳೀಯರು ಕರೆಯುತ್ತಾರೆ.

ಈ ಕಾಶಿ ವಿಶ್ವೇಶ್ವರನ ದರ್ಶನ ಮಾಡುವವರು ಮೊದಲು ದಕ್ಷಿಣ ಭಾರತದ ತುತ್ತತುದಿಯಲ್ಲಿರುವ ರಾಮೇಶ್ವರಕ್ಕೆ ಬಂದು ಅಲ್ಲಿಯ ದರ್ಶರನ ಪಡೆದು ಅಲ್ಲಿಂದ ಪವಿತ್ರವಾದ ಮರಳನ್ನು ತೆಗೆದುಕೊಂಡು ಬಂದು ವಿಶ್ವನಾಥನ ಸನ್ನಿದಿಯಲ್ಲೇ ಹರಿಯುವ ಅತ್ಯಂತ ಪವಿತ್ರ ನದಿಯೆಂದೇ ಹೆಸರು ಪಡೆದಿರುವ ಗಂಗೆಯಲ್ಲಿ ಸ್ನಾನ ಮಾಡಿ ಮರಳನ್ನು ವಿಸರ್ಜಿಸಿ, ಕಾಶೀ ವಿಶ್ವನಾಥನ ದರ್ಶನವನ್ನು ಪಡೆದು ನಂತರ ಇಲ್ಲಿಂದ ಪವಿತ್ರ ಗಂಗಾಜಲವನ್ನು ತೆಗೆದುಕೊಂಡು ಮತ್ತೆ ರಾಮೇಶ್ವರಕ್ಕೆ ಹೋಗಿ ಅಲ್ಲಿ ಸ್ವಾಮಿಗೆ ಆ ಜಲದಿಂದ ಅಭೀಷೇಕ ಮಾಡಿದಲ್ಲಿ ತೀರ್ಥಯಾತ್ರೆ ಸಂಪೂರ್ಣವಾಗುತ್ತದೆ ಎನ್ನುವುದು ಹಿಂದೂಗಳ ನಂಬಿಕೆಯಾಗಿದೆ.

ಗಂಗಾ ನದಿಯಲ್ಲಿ ಮುಂದು ಶುಚಿರ್ಭೂತರಾಗಿ ದೇವಾಲಯದ ಅಕ್ಕ ಪಕ್ಕದಲ್ಲೇ ಇರುವ ಅಂಗಡಿಗಳಿಂದ ಹೂವು, ನೈವೇದ್ಯಕ್ಕೆ ಪ್ರಸಾದ ಮತ್ತು ಅಭಿಷೇಕಕ್ಕೆ ಹಾಲಿನ ಗಿಂಡಿಯನ್ನು ತೆಗೆದುಕೊಂಡು ಭಕ್ತಾದಿಗಳಿಂದ ಸದಕಾಲವೂ ತುಂಬಿರುವ ಈ ದೇವಾಲಯದ ಸರತಿಯಲ್ಲಿ ನಿಂತು ಸಣ್ಣದಾಗಿರುವ ಗರ್ಭಗುಡಿಯಲ್ಲಿರುವ ಬೆಳ್ಳಿಯ ಅಂಕಣದ ಮೇಲಿರಿಸಲಾಗಿರುವ ವಿಶ್ವನಾಥನಿಗೆ ಅಭಿಷೇಕವನ್ನು ಮಾಡುವುದರಿಂದ ಮನಸ್ಸು ಮುದಗೊಳ್ಳುತ್ತದೆ, ಸರ್ವ ಪಾಪಗಳೂ ನಿವಾರಣೆಯಾಗುವುದಲ್ಲದೇ ಈ ಮೊದಲೇ ತಿಳಿಸಿದಂತೆ ಮೋಕ್ಷವು ಸಹಾ ಲಭಿಸಲಿದೆ ಎನ್ನುವ ನಂಬಿಕೆ ಆಸ್ತಿಕರದ್ದಾಗಿದೆ. ಹೀಗೆ ಶ್ರದ್ಧಾ ಭಕ್ತಿಗಳಿಂದ ವಿಶ್ವನಾಥನ ದರ್ಶನ ಪಡೆದಲ್ಲಿ ಸವ೯ ಅಭೀಷ್ಟಗಳೂ ನೆರವೇರುವುದಲ್ಲದೇ, ಜೀವನವೂ ಸಾರ್ಥಕವಾಗುತ್ತದೆ ಮತ್ತು ಜೀವನ್ಮುಕ್ತಿ ದೊರೆಯುತ್ತದೆ ಎನ್ನುವುದು ಹಿಂದೂಗಳ ನಂಬಿಕೆಯಾಗಿದೆ.

kashi2ಮೊಘಲರ ಆಳ್ವಿಕೆಯಲ್ಲಿ ಬಹುಶಃ ಕಾಶಿ ವಿಶ್ವನಾಥ ದೇವಾಲಯದಷ್ಟು ದಾಳಿಗೊಳಗಾಗಿ ಹಾನಿಗೊಳಗಾದಷ್ಟು ಬೇರಾವ ದೇವಾಲಯವೂ ಆಗಿಲ್ಲ ಎನ್ನುವುದು ದುಃಖಕರವಾದ ವಿಷಯವಾಗಿದೆ. ಮೊಹಮ್ಮದ್ ಗೋರಿಯ ಆದೇಶದಂತೆ ಕುತುಬುದ್ದೀನ್ ಐಬಕ್ ದೇವಾಲಯವನ್ನು ಕೆಡವಿದಾಗ ಅದನ್ನು ರಾಜಾ ಮಾನ್‌ಸಿಂಗ್‌ ಈ ದೇವಾಲಯ ಪುರನಿರ್ಮಾಣ ಮಾಡಿದ್ದರೆ, ಅಕ್ಬರನ ಮರಿಮಗ ಔರಂಗಜೇಬ್ ತನ್ನ ಆಳ್ವಿಕೆಯ ಕಾಲದಲ್ಲಿ ಈ ದೇವಾಲಯವನ್ನು ಉರುಳಿಸಿದಾಗ ದೇವಾಲಯದ ಪ್ರಧಾನ ಅರ್ಚಕರು ಶಿವಲಿಂಗವನ್ನು ಉಳಿಸುವ ಸಲುವಾಗಿ ಶಿವಲಿಂಗದೊಂದಿಗೆ ಬಾವಿಗೆ ಹಾರಿದ್ದರಂತೆ. ಆ ಬಾವಿಯು ದೇವಾಲಯ ಹಾಗೂ ಮಸೀದಿಯ ಅವಶೇಷಗಳ ನಡುವೆ ಈಗಲೂ ಕಾಣಬಹುದಾಗಿದೆ. ದೇವಸ್ಥಾನ ಉರುಳಿಸಿದ ಜಾಗದಲ್ಲೇ ಔರಂಗಜೇಬ್ ಮಸೀದಿಯನ್ನು ನಿರ್ಮಿಸಿದ್ದು ಅದನ್ನು ಇಂದಿಗೂ ಗ್ಯಾನವಾಪಿ ಮಸೀದಿ ಎಂದೇ ಕರೆಯಲಾಗುತ್ತದೆ.

ahalya1ಔರಂಗಜೇಬನಿಂದ ನಾಶವಾದ 111 ವರ್ಷಗಳ ನಂತರ ಅವಳು 1780 ರಲ್ಲಿ ಇಂಧೋರ್‌ನ ರಾಣಿ ಅಹಲ್ಯಾ ಬಾಯಿ ಹೋಲ್ಕರ್ ಳಿಗೆ ಶಿವನು ಕನಸಿನಲ್ಲಿ ಬಂದು ಆದೇಶ ನೀಡಿದ ನಂತರ ರಾಣಿಯು ಕಾಶಿಗೆ ಬಂದು ಅದರ ಗಥವೈಭವವನ್ನು ಮರಳಿಸಬೇಕೆಂದು ನಿರ್ಧರಿಸಿ ಅದರ ಪುನರ್ನಿರ್ಮಾಣಕ್ಕೆ ಲಕ್ಷಾಂತರ ದೇಣಿಗೆ ನೀಡಿದಳು. ನಂತರ ಇಂಧೋರ್‌ನ ಮಹಾರಾಜ ರಂಜಿತ್ ಸಿಂಗ್ ಕೂಡಾ ಈ ದೇವಾಲಯದ 4 ಚಿನ್ನದ ಕಂಬಗಳಿಗಾಗಿ ಸುಮಾರು 10 ಟನ್‌ನಷ್ಟು ಬಂಗಾರವನ್ನು ನೀಡಿ ದೇವಾಲಯವನ್ನು ಪುನರ್ನಿಮಾಣ ಮಾಡಿದರು.

ದೇವಾಲಯದ ಮೇಲ್ಭಾಗದಲ್ಲಿ ಹಾಸಿರುವ ಚಿನ್ನ ಕಳಸಕ್ಕೆ ಶಿವಲಿಂಗದಷ್ಟೆ ಪ್ರಾಮುಖ್ಯತೆ ಇದ್ದು, ದೇವರ ದರ್ಶನ ಮಾಡಿ ಪ್ರಾರ್ಥನೆ ಸಲ್ಲಿಸಿ ನಂತರ ದೇವಾಲಯದ ಕಳಸವನ್ನು ನೋಡಿದಲ್ಲಿ ಭಕ್ತರ ಎಲ್ಲಾ ಅಭೀಪ್ಸೆಗಳು ಈಡೇರುತ್ತದೆ ಎನ್ನುವುದು ಭಕ್ತರ ನಂಬಿಕೆಯಾಗಿದೆ.

shiva_Trishulaಮತ್ತೊಂದು ಐತಿಹ್ಯದ ಪ್ರಕಾರ ಕಾಶಿಯು ಅತಿ ಪುರಾತನ ನಗರಗಳಲ್ಲೊಂದಾಗಿದ್ದು, ಇಡೀ ವಿಶ್ವ ಪ್ರಳಯದಿಂದ ಮುಳುಗಿದಾಗ ಶಿವನು ತನ್ನ ತ್ರಿಶೂಲದ ತುದಿಯಲ್ಲಿ ಕಾಶಿಯನ್ನು ಎತ್ತಿ ಹಿಡಿದು ರಕ್ಷಿಸಿದನಂತೆ ಹಾಗಾಗಿ ಶಿವನ ಈ ಕ್ರಿಯೆ ಊರ್ಧ್ವಾಮ್ನಾಯ ಎಂದು ಹಿಂದೂ ಪುರಾಣಗಳಲ್ಲಿ ತಿಳಿಸಲಾಗಿರುವ ಕಾರಣ, ಇಲ್ಲಿನ ಪ್ರತಿಯೊಂದು ಕಲ್ಲು ಕಲ್ಲುಗಳೂ ಕೂಡಾ ವಿಶ್ವನಾಥನಷ್ಟೇ ಪವಿತ್ರ ಎಂದೇ ಭಾವಿಸಲಾಗುತ್ತದೆ.

ಇಲ್ಲಿ ಹರಿಯುವ ಗಂಗಾ ನದಿಗೆ 64 ಸ್ನಾನದ ಘಟ್ಟಗಳಿವೆ ಅವುಗಳಲ್ಲಿ ಹರಿಶ್ಚಂದ್ರ ಘಾಟ್ ಪೌರಾಣಿಕ ಪ್ರಸಿದ್ಧಿ ಹೊಂದಿದ್ದು ಈ ಘಟ್ಟದ ಪಕ್ಕದಲ್ಲೇ ಇರುವ ಸ್ಮಶಾನದಲ್ಲೇ ಸತ್ಯ ಹರಿಶ್ಚಂದ್ರನ್ಯು ಮೃತದೇಹಗಳನ್ನು ಸುಡುವ ಕಾಯಕವನ್ನು ಮಾಡಿದ್ದ ಕಾರಣ, ಇಂದಿಗೂ ಇಲ್ಲಿ ಹೆಣಗಳನ್ನು ಸುಡುವುದನ್ನು ಕಾಣಬಹುದಾಗಿದೆ. ಇತ್ತೀಚಿನ ಕೆಲವು ವರ್ಷಗಳಿಂದ ಪ್ರತೀ ದಿನ ಸಂಜೆ ಇಲ್ಲಿ ನಡೆಯುವ ಗಂಗಾರತಿ ಬಹಳ ಪ್ರಸಿದ್ಧವಾಗಿದ್ದು ಅದನ್ನು ಕಣ್ತುಂಬಿಸಿಕೊಳ್ಳಲೆಂದೇ, ಸಹಸ್ರಾರು ಭಕ್ತಾದಿಗಳು ಇಲ್ಲಿಗೆ ಬರುವಂತಾಗಿದೆ.

vata
ವಿಶ್ವನಾಥನ ಗರ್ಭಗೃಹದ ಎದುರುಗಡೆ ಗಣಪತಿ ವಿಗ್ರಹವಿದೆ. ವಿಶ್ವೇಶ್ವರನ ಎದುರು ಇರಬೇಕಾದ ನಂದಿ ವಿಗ್ರಹ ಹೊರಗಡೆ ಇದ್ದು ಅದು ಪಕ್ಕದಲ್ಲಿರುವ ಮಸೀದಿಯ ಕಡೆ ನೋಡುತ್ತಿರುವುದು ಮೂಲ ಮಂದಿರವನ್ನು ಕೆಡವಿ ಮಸೀದಿಯನ್ನು ಕಟ್ಟಿರುವುದಕ್ಕೆ ಜ್ವಲಂತ ಸಾಕ್ಷಿಯಾಗಿದೆ. ದೇವಾಲಯದ ಆವರಣ ದೇವಸ್ಥಾನದ ಸುತ್ತಲೂ ಆಂಜನೇಯ, ಗಣಪತಿ, ದುರ್ಗಾ, ಹಾಗೂ ನೂರಾರು ಶಿವಲಿಂಗಗಳಿವೆ. ಆವರಣದಲ್ಲಿ ಒಂದು ಪುರಾತನ ವಟವೃಕ್ಷವಿದೆ. ಮನಸ್ಸಿನಲ್ಲಿ ಬೇಕಾದ ಕೋರಿಕೆಯನ್ನು ಸಂಕಲ್ಪಸಿಕೊಂಡು ಅದಕ್ಕೆ ದಾರ ಕಟ್ಟಿದರೆ ಆಸೆ ಕೈಗೂಡುವುದೆಂದು ಹೇಳುತ್ತಾರೆ ಹಾಗಾಗಿ ಇಲ್ಲಿಗೆ ಬರುವ ಹಲವಾರು ಭಕ್ತಾದಿಗಳು ಭಕ್ತಿಯಿಂದ ಕಟ್ಟುವ ದಾರಗಳಿಂದಾಗಿ ಲಕ್ಷಾಂತರ ದಾರಗಳು ಈ ವೃಕ್ಷವನ್ನು ಸುತ್ತಿಕೊಂಡಿವೆ.

ಅಲ್ಲಿಂದ ಸಣ್ಣ ಸಣ್ಣ ಗಲ್ಲಿಗಳಲ್ಲಿ ಸುತ್ತಿಕೊಂಡೇ ವಿಶಾಲಾಕ್ಷಿ ಅಮ್ಮನವರ ದೇವಾಲಯಕ್ಕೆ ಹೋಗದಲ್ಲಿ ಅತ್ಯಂತ ಸಣ್ಣದಾದ ದೇವಾಲಯ ಮತ್ತು ಸರಳವಾದ ಅಲಂಕಾರದ ವಿಶಾಲಾಕ್ಷಿಯ ದರ್ಶನ ಪಡೆದು, ಅಲ್ಲಿಂದ ಮುಂದೆ ಹೋದಲ್ಲಿ ಸ್ವಲ್ಪ ವಿಶಾಲವಾದ ಅನ್ನಪೂರ್ಣೇಶ್ವರೀ ದೇವಾಲಯ ತಲುಪಬಹುದಾಗಿದೆ. ನಗುಮುಖದ ಅನ್ನಪೂರ್ಣೇಶ್ವರಿ ಅಭಯ ಹಸ್ತ ಹೊಂದಿದ್ದು ಭಕ್ತರಿಗೆ ಬೇಡಿದ್ದನ್ನೆಲ್ಲಾ ಕೊಡುವಳೆಂಬ ನಂಬುಗೆ ಇದೆ. ಭಕ್ತರು ದೇವಿಗೆ ಉಡಿ ತುಂಬುತ್ತಿರುತ್ತಾರೆ. ಇಲ್ಲಿಂದ ಸ್ವಲ್ಪ ಅಕ್ಕಿಯನ್ನು ತೆಗೆದುಕೊಂಡು ಹೋಗಿ ಮನೆ ಅಕ್ಕಿ ಡಬ್ಬಕ್ಕೆ ಹಾಕಿದರೆ ಮನೆಯಲ್ಲಿ ದವಸ ಧಾನ್ಯ ಅಕ್ಷಯವಾಗುತ್ತದೆ ಎಂಬ ನಂಬಿಕೆ ಇದೆ. ತಾಯಿ ವಿಶಾಲಾಕ್ಷಿ ಅನ್ನಪೂರ್ಣೇಶ್ವರಿ ಹಾಗೂ ಕಾಳ ಭೈರವನ ದರ್ಶನ ಮಾಡಿದಲ್ಲಿ ಮಾತ್ರವೇ, ವಿಶ್ವನಾಥನ ದರ್ಶನ ಮಾಡಿದ ಪುಣ್ಯ ಲಭಿಸುತ್ತದೆ ಎನ್ನುವ ನಂಬುಗೆ ಇದೆ.

ಆಲ್ಲಿಂದ ಮುಂದೆ ಕಾಶಿಯ ಕಾಳಭೈರವ ಭವ್ಯ ಮೂರ್ತಿಯನ್ನು ದರ್ಶನ ಪಡೆದು ಇಲ್ಲಿಂದಲೇ ಪ್ರಸಾದ ರೂಪದಲ್ಲಿ ಕಾಶಿದಾರ ಎಂಬ ಕಪ್ಪು ದಾರವನ್ನು ಭಕ್ತಾದಿಗಳು ತೆಗೆದುಕೊಂಡು ಹೋಗುತ್ತಾರೆ. ಈ ಕಾಶೀ ದಾರವನ್ನು ಕಾಳಭೈರವನ ತಲೆಕೂದಲು ಎಂದೇ ನಂಬಲಾಗಿದ್ದು ಇದು ಕೈಗೆ ಕಟ್ಟಿಕೊಂಡಲ್ಲಿ. ಸರ್ವ ದೋಷಗಳು ನಿವಾರಣೆಯಾಗುತ್ತದೆ ಎನ್ನುವ ಕಾರಣಕ್ಕಾಗಿ ಕಾಶೀ ಸಮಾರಾಧನೆಯಂದು ಬಂಧು ಮಿತ್ರರಿಗೆ ಗಂಗಾಜಲದ ಜೊತೆ ಕಾಶೀದಾರವನ್ನು ಕೊಡುವ ಸಂಪ್ರದಾಯವಿದೆ. ಈ ಪ್ರಮುಖ ದೇವಾಲಯಗಳಲ್ಲದೇ ದುರ್ಗಾ ಬಾಯಿ ಮಂದಿರ, ಕಾಶಿ ನಗರದ ಆರಾದ್ಯ ದೈವವಾದ ಕವಡೀಬಾಯಿ ಮಂದಿರ, ತುಳಸೀ ಮಾನಸ ಮಂದಿರ ಹೀಗೆ ಕಾಶಿಯಲ್ಲಿ ಇನ್ನೂ ಸಾವಿರಾರು ಮಂದಿರಗಳಿವೆ.

ಇಷ್ಟು ಹೊತ್ತು ವಿವರಿಸಿದ್ದೆಲ್ಲವೂ ಕೆಲವರ್ಷಗಳ ಹಿಂದಿನ ಮಾತಾಗಿದ್ದು, ನರೇಂದ್ರ ಮೋದಿಯವರು ಈ ಕ್ಷೇತ್ರದಿಂದ ಸಾಂದರಾಗಿ ಆಯ್ಕೆಯಾಗಿ ಪ್ರಧಾನ ಮಂತ್ರಿಗಳಾದ ನಂತರ ಗಲ್ಲಿಗಲ್ಲಿಗಳಿಂದ ಕೂಡಿದ್ದ ಇಡೀ ದೇವಾಲಯವನ್ನು ಸಂಪೂರ್ಣವಾಗಿ ಬದಲಿಸಿ ಅತ್ಯಂತ ದೊಡ್ಡದಾದ ನಯನ ಮನೋಹರವಾದ ದೇವಾಲಯಗಳ ಸಂಕೀರ್ಣವನ್ನು ನಿರ್ಮಾಣ ಮಾಡಿದ್ದಲ್ಲದೇ, ನಮಾಮಿ ಗಂಗೆ ಯೋಜನೆಯಡಿ ಅಲ್ಲಿನ ಗಂಗಾ ಸ್ನಾನದ ಘಟ್ಟಗಳನ್ನೂ ಶುದ್ಧೀಕರಿಸಿರುವುದು ಅತ್ಯಂತ ಶ್ಲಾಘನೀಯವಾಗಿದೆ. ಈ ಮಹತ್ಕಾರ್ಯ ಮಾಡುವ ಸಮಯದಲ್ಲಿ ನೂರಾರು ದೇವಾಲಯಗಳನ್ನು ಒತ್ತರಿಸಿಕೊಂಡು ಮನೆಗಳನ್ನು ಕಟ್ಟಿದ್ದು ಕಂಡು ಬಂದಿದೆ. ಶಿವರಾತ್ರಿಯ ಅಂಗವಾಗಿ ಇಡೀ ಗರ್ಭಗುಡಿಗೆ ಚಿನ್ನದ ರೇಕನ್ನು ಹಾಕುವ ಮೂಲಕ ಮತ್ತಷ್ಟು ಮೆರಗನ್ನು ತಂದಿದ್ದಾರೆ.

ಇಷ್ಟೆಲ್ಲಾ ಮಾಹಿತಿಗಳನ್ನು ತಿಳಿದ ನಂತರ ಇನ್ನೇಕೆ ತಡಾ ಸ್ವಲ್ಪ ಸಮಯ ಮಾಡಿಕೊಂಡು ಹೊಸದಾಗಿ ನಿರ್ಮಾಣವಾಗಿರುವ ಕಾಶೀವಿಶ್ವನಾಥನ ದೇವಾಲಯದ ಸಂಕೀರ್ಣಕ್ಕೆ ಬಂದು ಕಾಶೀ ವಿಶ್ವನಾಥ, ಕಾಶಿ ವಿಶಾಲಾಕ್ಷಿ, ಅನ್ನಪೂರ್ಣೆ ಮತ್ತು ಕಾಲ ಭೈರವನ ದರ್ಶನ ಪಡೆದು ಇಲ್ಲಿಗೆ ಬಂದ ನೆನಪಿಗಾಗಿ ಮನೆಯ ಹೆಣ್ಣು ಮಕ್ಕಳಿಗೆ ಪ್ರಸಿದ್ಧವಾದ ಬನಾರಸ್ ರೇಷ್ಮೆ ಸೀರೆಗಳನ್ನು ಖರೀಸಿ ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?

ಏನಂತೀರಿ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s