ಧನ್ಯೋಸ್ಮಿ

ಜೀವನ ಎಂದರೆ ಕೇವಲ ಆಟ, ಪಾಠ, ಕೆಲಸ, ಊಟ, ನಿದ್ದೆಯಷ್ಟೇ ಅಲ್ಲದೇ ಅಭ್ಯಾಸ ಮತ್ತು ಹವ್ಯಾಸಗಳೂ ಸಹಾ ನಮ್ಮ ಜೀವನ ಅವಿಭಾಜ್ಯ ಅಂಗವಾಗಿರುತ್ತದೆ ಎಂದರೆ ತಪ್ಪಾಗದು. ಜೀವನದಲ್ಲಿ ಸುಖಃ ಮತ್ತು ದುಃಖಗಳು ಸಂಭವಿಸಿದಾಗ ಅವುಗಳನ್ನೆಲ್ಲಾ ಸರಿದೂಗಿಸಿಕೊಂಡು ಹೋಗಲು ಹವ್ಯಾಸಗಳು ಹೆಚ್ಚಿನ ಪಾತ್ರ ವಹಿಸುತ್ತವೆ. ಹಾಗಾಗಿಯೇ ಖುಷಿ ಮತ್ತು ದುಃಖಗಳ ಸಮಯದಲೂ ಹಾಡುಗಳನ್ನು ಗುಣುಗುವ ಮೂಲಕವೋ ಇಲ್ಲವೇ ನೃತ್ಯ ಮಾಡುವ ಮೂಲಕವೋ ಇಲ್ಲವೇ ಒಳ್ಳೆಯ ವಿಷಯಗಳನ್ನು ಓದುವ ಇಲ್ಲವೇ ಬರೆಯುವ ಇಲ್ಲವೇ, ಯಾವುದಾದರೂ ಪುಣ್ಯಕ್ಷೇತ್ರಗಳೋ ಇಲ್ಲವೇ ಪ್ರಕೃತಿ ತಾಣಕ್ಕೆ ಭೇಟಿ ನೀಡುವ ಮೂಲಕ ತಮ್ಮ ಮನಸ್ಸಿನ ಭಾವನೆಗಳನ್ನು ಹೊರಗೆ ಹಾಕುವ ಮೂಲಕ ನಿರಾಳತೆಯನ್ನು ತಂದು ಕೊಳ್ಳುವುದು ಸಹಜ ಪ್ರಕ್ರಿಯೆ.

ಇದೇ ರೀತಿ ನಾನೂ ಸಹಾ ಚಿಕ್ಕವಯಸ್ಸಿನಿಂದಲೇ ಓದುವ ಹವ್ಯಾಸವನ್ನು ಬೆಳಸಿಕೊಂಡು ಸಮಯ ಸಿಕ್ಕಾಗಲೆಲ್ಲಾ ಏನಾದರೂ ಒದುತ್ತಲೇ ಹೋದೆ. ಮನೆಗೆ ಪ್ರತಿದಿನವೂ ಬರುತ್ತಿದ್ದ ವೃತ್ತ ಪತ್ರಿಕೆ, ವಾರ ಪತ್ರಿಕೆ ಪಾಕ್ಷಿಕ ಮತ್ತು ಮಾಸಿಕಗಳನ್ನು ಒಂದಕ್ಷರವು ಬಿಡದೇ ಓದಿ ಮುಗಿಸಿದ ಮೇಲೆ ತಾತ ಮತ್ತು ತಂದೆಯವರು ಜತನದಿಂದ ಸಂಗ್ರಹಿಸಿದ್ದ ಪೌರಾಣಿಕ, ಆಧ್ಯಾತ್ಮ ಪುಸ್ತಕಗಳನ್ನೂ ಬಿಡಲಿಲ್ಲ. ಶಾಲೆಯಲ್ಲಿ ಬಿಡಿವಿನ ವೇಳೆಯಲ್ಲಿಯೂ  ಗ್ರಂಥಾಲಯಕ್ಕೆ ಹೋಗಿ ಆರಂಭದಲ್ಲಿ ಎಲ್ಲರಂತೆ ಡಾಬು. ಶೂಜಾ, ಮಜ್ನೂ, ಪುಟ್ಟೀ, ಫ್ಯಾಂಟಮ್, ಬಹದ್ದೂರ್ ಗಳ ಜೊತೆಗೆ ಬಾಲ ಭಾರತಿಯ ದೇಶಭಕ್ತರ ಸಣ್ಣ ಸಣ್ಣ ಪುಸ್ತಕಗಳ ನಂತರ ಅಮರ ಚಿತ್ರಕಥೆ, ಚಂದಾಮಾಮಾ ಬಾಲಮಿತ್ರ, ಬಾಲ ಮಂಗಳ ಓದುತ್ತಿದ್ದವನು ಕ್ರಮೇಣ ಶಾರೀರಿಕವಾಗಿ ಮತ್ತು ಬೌದ್ಧಿಕವಾಗಿ ಬೆಳೆಯುತ್ತಾ ಹೋದಂತೆಲ್ಲಾ ವಾರಪತ್ರಿಕೆಗಳಲ್ಲಿ ಬರುತ್ತಿದ್ದ ಧಾರಾವಾಹಿಗಳಲ್ಲದೇ ಕಾದಂಬರಿಗಳನ್ನು ಸಹಾ ಓದುವ ಮೂಲಕ ಕನ್ನಡದ ಬಹುತೇಕ ಖ್ಯಾತ ಲೇಖಕರ ಕೃತಿಗಳನ್ನು ಓದಿಕೊಂಡಿದ್ದೆ . ಪ್ರೌಢಶಾಲೆ ಮತ್ತು ಕಾಲೇಜಿನಲ್ಲಿ ಕೆಲವು ಪ್ರಬಂಧ ಮತ್ತು ಚರ್ಚಾಸ್ಪರ್ಧೆಗಳಿಗೆ ಅಲ್ಪ ಸ್ವಲ್ಪ ಬರೆಯುತ್ತಿದ್ದೆನಾದರೂ ಬರವಣಿಗೆಯನ್ನು ಎಂದಿಗೂ ಗಂಭೀರವಾಗಿ ಹವ್ಯಾಸವನ್ನಾಗಿಸಿಕೊಳ್ಳುವ ಬಗ್ಗೆ ಯಾವುದೇ ಆಸಕ್ತಿ ಇರಲಿಲ್ಲ.

ನಿಜ ಹೇಳಬೇಕೆಂದರೆ, ಬರಹ ಎನ್ನುವುದು ನಮ್ಮ ಕುಟುಂಬದಲ್ಲಿ ಅನುವಂಶೀಯವಾಗಿ ಬಂದಿದೆ ಎಂದರೆ ತಪ್ಪಾಗಲಾರದು. ನಮ್ಮ ತಾತ ಬಾಳಗಂಚಿ ದಿ. ಗಮಕಿ ನಂಜುಂಡಯ್ಯನವರು ಖ್ಯಾತ ಗಮಕಿಗಳು, ಹೆಸರಾಂತ ಹರಿಕಥಾ ದಾಸರು ಮತ್ತು ಪ್ರಖ್ಯಾತ ವಾಗ್ಗೇಯಕಾರರಾಗಿದ್ದಲ್ಲದೇ, ಅನೇಕ ಪೌರಾಣಿಕ ನಾಟಕಗಳಿಗೆ ಮಟ್ಟುಗಳನ್ನು ಬರೆಯುತ್ತಿದ್ದರಲ್ಲದೇ, ಭಗವದ್ಗೀತೆಯನ್ನು ಕನ್ನಡಕ್ಕೆ ತರ್ಜುಮೆ ಮಾಡಿದ್ದರಲ್ಲದೇ ತಮ್ಮ ಸಾಹಿತ್ಯಿಕ ಚಟುಕವಟಿಕೆಗಳಿಗಾಗಿ ೭೦ ದಶಕದಲ್ಲೇ ರಾಜ್ಯಪ್ರಶಸ್ತಿ ಪುರಸ್ಕೃತರು. ಇನ್ನು ನಮ್ಮ ತಂದೆ. ದಿ. ಶಿವಮೂರ್ತಿಗಳು ಗಮಕಿಗಳು, ಲೇಖಕರು ಮತ್ತು ಮೋಚಿಂಗ್ ಕಲಾವಿದರಾಗಿದ್ದರು. ಹಾಗಾಗಿ ಉತ್ತಮ ಓದನ್ನು ಒಪ್ಪಿಕೊಂಡು ಅಪ್ಪಿಕೊಂಡಿದ್ದೆನಾದರೂ, ಬರೆಯುವ ದುಸ್ಸಾಹಸಕ್ಕೆ ಕೈ ಹಾಕಿರಲಿಲ್ಲ. ಯಾವಾಗ ಸಾಮಾಜಿಕ ಜಾಲತಾಣಗಳು ಪ್ರಸಿದ್ಧಿಗೆ ಬಂದವೋ ಆಗ ಧುತ್ತನೆ ನನ್ನಲ್ಲಿದ್ದ ಬರಹಗಾರ ಜಾಗೃತನಾಗಿ ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಬೇಕೋ ಬೇಡವೋ ಹಲವರೊಡನೆ ಜಿದ್ದಾ ಜಿದ್ದಿಗೆ ಇಳಿದು ವಿತಂಡ ವಾದ ಮಾಡುವುದರೊಂದಿಗೆ ನನ್ನ ಬರವಣಿಗೆ ಆರಂಭವಾಯಿತು. ಇಂತಹ ಪ್ರಚೋದನಕಾರಿ ಬರವಣಿಗೆಯನ್ನೂ ಮೆಚ್ಚಿಕೊಂಡ ಅನೇಕ ಗೆಳೆಯರು ಅದೆಷ್ಟೋ ಗಂಪುಗಳಿಗೆ ನನ್ನನ್ನು ಸೇರಿಸಿ ಸುಖಾ ಸುಮ್ಮನೇ ಯಾವುದೋ ಅನಾವಶ್ಯಕ ವಿಷಯಗಳಿಗೆ ನನ್ನನ್ನು ರೊಚ್ಚಿಗೆಬ್ಬಿಸಿ ಆವೇಶ ಭರಿತ ಲೇಖನಗಳಿಗೆ ನನ್ನನ್ನು ಸೀಮಿತಗೊಳಿಸಿದ್ದರು. ಹಾಗೆ ಬರೆದ ಅನೇಕ ಲೇಖನಗಳಿಂದ ಗಳಿಸಿದ್ದು ಮಿತ್ರತ್ವಕ್ಕಿಂತ ಶತೃತ್ವವೇ ಹೆಚ್ಚು ಎನ್ನುವುದೇ ವಿಪರ್ಯಾಸ. ಇದರ ಜೊತೆಗೆ ಸುಖಾಸುಮ್ಮನೇ ಬೇಡದ ವಿವಾದಗಳನ್ನೂ ಮೈ ಮೇಲೆ ಹೇರಿಕೊಂಡು ಅವೆಲ್ಲವೂ ಕೇವಲ ಸಾಮಾಜಿಕ ಜಾಲತಾಣಕ್ಕೇ ಸೀಮಿತವಾಗದೇ ಮನೆಯವರೆಗೂ ಬಂದು ನಮ್ಮ ತಂದೆ ಮತ್ತು ಮಡದಿ ನನ್ನ ಪರವಾಗಿ ಕ್ಷಮೆಯಾಚಿಸ ಬೇಕಾದಂತಹ ಪರಿಸ್ಥಿತಿಯೂ ನಿರ್ಮಾಣವಾಗಿತ್ತು. ಅದೆಷ್ಟೋ ಬಾರಿ ನನ್ನ ಮಕ್ಕಳ ಸ್ನೇಹಿತರೂ ಸಹಾ ಇದರ ಬಗ್ಗೆ ಕಳಕಳಿಯನ್ನು ವ್ಯಕ್ತ ಪಡಿಸಿದಾಗ ನನ್ನ ಮಕ್ಕಳೂ ಸಹಾ ಅಪ್ಪಾ ನಿಮ್ಯಾಕೆ ಕಂಡೋರ ಉಸಾಬರೀ? ಎಂದು ಗದರಿಸುವ ಮಟ್ಟಕ್ಕೂ ಬಂದಿತ್ತು.

ಇಂತಹ ಸಮಯದಲ್ಲೇ ಅನಿರೀಕ್ಷಿತವಾಗಿ ನಮ್ಮ ತಂದೆಯವರು ಅಕಾಲಿಕವಾಗಿ ನಿಧನರಾದಂತಹ ಸಂಧರ್ಭದಲ್ಲಿ ಅವರಿಗೆ ಶ್ರದ್ಧಾಂಜಲಿ ರೂಪದಲ್ಲಿ ಬರೆದ ಲೇಖನವನ್ನು ಎಲ್ಲರೂ ಮೆಚ್ಚಿಕೊಂಡು, ಪರವಾಗಿಲ್ವೇ, ತಾತ ಮತ್ತು ಅಪ್ಪನ ತರಹ ನೀನೂ ಸಹಾ ಗಂಭೀರವಾಗಿ ಬರೆಯಬಲ್ಲೆ ಎಂದು ಹೇಳಿದಾಗ ಅವರು ನನ್ನನ್ನು ಹೊಗಳುತ್ತಿದ್ದಾರೋ? ಇಲ್ಲವೇ ತೆಗಳುತ್ತಿದ್ದಾರೋ? ಎಂಬುದೇ ತಿಳಿದೇ ಮತ್ತೆ ತೀಕ್ಷ್ಣವಾದ ರಾಜಕೀಯ ಬರಹದತ್ತಲೇ ಹರಿಯುತ್ತಿತ್ತು ಚಿತ್ತ. ಈ ಕುರಿತಂತೆ ನನ್ನ ಮಡದಿ ಮಂಜುಳ ಸದಾಕಾಲವೂ ಎಚ್ಚರಿಸುತ್ತಿದ್ದರೂ ಕೇಳದಿದ್ದ ನನಗೆ, ಅದೊಂದು ದಿನ ನನ್ನ ಗುರುಗಳಾದ ಶ್ರೀ ಮಹಾಬಲೇಶ್ವರ ಅವಧಾನಿಗಳು ತಲೆ ಗಟ್ಟಿ ಇದೇ ಎಂದು ಬಂಡೆಗೆ ಚಚ್ಚಿಕೊಳ್ಳುವುದು ಮೂರ್ಖತನ. ನಿನ್ನ ಬರವಣಿಗೆಯನ್ನು ಬದಲಿಸಿಕೋ ಎಂದು ಪ್ರೀತಿಪೂರ್ವಕದ ಆಜ್ಞೆ ಮಾಡಿದದರು.

Enantheeri_logoಅವರ ಮಾತಿಗೆ ಕಟ್ಟು ಬಿದ್ದು,  ಮೊತ್ತ ಮೊದಲ ಬಾರಿಗೆ ನಮ್ಮ ತಂದೆಯವರ ನೆನಪಿನಲ್ಲೇ ದುಡ್ಡಿನ ಮಹತ್ವ ಎನ್ನುವ ನನ್ನದೇ ಅನುಭವಗಳನ್ನು ಕಥಾ ರೂಪದಲ್ಲಿ ಬರೆದು ಸಾಮಾಜಿಕ ಅಂತರ್ಜಾಲದಲ್ಲಿ ಪ್ರಕಟಿಸಿದಾಗ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅದಾದ ನಂತರ ಒಂದರ ಮೇಲೊಂದು ಲೇಖನಗಳನ್ನು ಬರೆಯುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುತ್ತಾ ಹೋದಂತೆ ಸಮಾನ ಮನಸ್ಕರ ಗೆಳೆಯರ ಗುಂಪು ಬೆಳೆಯ ತೊಡಗಿತು. ಈ ರೀತಿ ಎಲ್ಲೆಲ್ಲೋ ಲೇಖನಗಳನ್ನು ಪ್ರಕಟಿಸುವ ಬದಲು ನಿಮ್ಮದೇ ಒಂದು ಬ್ಲಾಗ್ ಆರಂಭಿಸಿ ಎಂದು ನನ್ನ ಆತ್ಮೀಯ ಗೆಳೆಯ ಶ್ರೀ ವಾಸುದೇವ ಅವರು ಸೂಚಿಸಿದಾಗ 2019ರ ಶಿವರಾತ್ರಿಯಂದು (ಮಾರ್ಚ್ 7, 2019) ಆ ಪರಶಿವನ ಕೃಪಾಶೀರ್ವಾದದಿಂದ ಸಣ್ಣದಾಗಿ ಒಂದು ಬ್ಲಾಗ್ ಆರಂಭಿಸಿ ಈಗಾಗಲೇ ಬರೆದಿದ್ದ ಕೆಲವು ಲೇಖನಗಳನ್ನು ಅದರಲ್ಲಿ ಪ್ರಕಟಿಸಿ ನಿಮ್ಮೆಲ್ಲರ ಮುಂದೆ ಭಕ್ತಿಪೂರ್ವಕವಾಗಿ ನನ್ನೀ ಪ್ರಯತ್ನ ಹೇಗಿದೆ? ಎಂದು ಕೇಳಿದ್ದೆ. ಸ್ವಲ್ಪ ಕಾಲದ ನಂತರ ಅದಕ್ಕೊಂದು https://enantheeri.com ಎಂಬ ನಾಮಕರಣ ಮಾಡಿ ಎಲ್ಲರ(ವ)ನ್ನೂ ಪ್ರಶ್ನಿಸಿ ಮತ್ತು ಪರಿಹರಿಸಿಕೊಳ್ಳಿ ಎಂಬ ಟ್ಯಾಗ್ ಲೈನ್ ನೊಂದಿಗೆ ಏನಂತೀರಿ? ಎಂದು ಪ್ರಶ್ನಿಸಿದ್ದೆ. ಈ ಹವ್ಯಾಸೀ ಬರಹಗಾರನ ಪ್ರಯತ್ನವನ್ನು ನೀವೆಲ್ಲರೂ ಅತ್ಯಂತ ಆದರಾಭಿಮಾನಗಳಿಂದ ಅಪ್ಪಿಕೊಂಡಿರಿ ಮತ್ತು ಕಾಲ ಕಾಲಕ್ಕೆ ಸೂಕ್ತವಾದ ಸಲಹೆ ಮತ್ತು ಮಾಹಿತಿಗಳನ್ನು ನೀಡುವ ಮೂಲಕ ನನ್ನನ್ನು ತಿದ್ದಿ ತೀಡಿದ ಪರಿಣಾಮವಾಗಿಯೇ ಇಂದು ನಮ್ಮ ನಿಮ್ಮೆಲ್ಲರ ಮೆಚ್ಚಿನ ಏನಂತೀರಿ.ಕಾಂ ಬ್ಲಾಗ್ ಮೂರು ವರ್ಷಗಳನ್ನು ದಾಟಿ ಅಮೋಘವಾಗಿ ನಾಲ್ಕನೇ ವರ್ಷಕ್ಕೆ ಕಾಲಿಡುತ್ತಿದ್ದು ನಮ್ಮ ಬ್ಲಾಗಿನ ಅಂಕಿ ಅಂಶಗಳು ಈ ರೀತಿಯಾಗಿವೆ.

Year Total posts Total words Average  words per post Views
2019 269 209,927 780 53292
2020 317 217,934 688 153212
2021 246 191,834 780 188972
2022 40 31,722 793 27624
872 651417 760 423100

ನಮ್ಮ ಬ್ಲಾಗಿನಲ್ಲಿ ಒಟ್ಟು 872 ಲೇಖನಗಳು ಪ್ರಕಟಿತವಾಗಿದ್ದು, ಅದನ್ನು 423100 ಜನರು ಓದಿದ್ದಾರೆ. ಇಡೀ ಲೇಖನಗಳು 651417 ಪದಗಳಿದ್ದು ಪ್ರತೀ ಲೇಖನವೂ ಸುಮಾರು 760 ಪದಳಿಂದ ಕೂಡಿವೆ. ಈ ಮೂರು 3 ವರ್ಷಗಳಲ್ಲಿ ವರ್ಷಕ್ಕೆ ಸರಾಸರಿ 291 ಲೇಖನಗಳಂತೆ ಅಂದರೆ ತಿಂಗಳಿಗೆ 24 ಲೇಖನಗಳನ್ನು ಪ್ರಕಟಿಸುವುದನ್ನೇ ಗಮನಿಸಿ ಬಿಡುವಿಲ್ಲದ ಬರಹಗಾರ ಎಂದು ನನಗೆ ಬಿರುದನ್ನು ಕೊಟ್ಟ ಐಯ್ಯಂಗಾರ್ ಆಹಾರದ ಮಾಲಿಕರೂ, ಕವಿಗಳೂ ಅಪ್ಪಟ ಕನ್ನಡಿಗರಾದ ಸಹೃದಯೀ ಗೆಳೆಯ ಶ್ರೀ ವಿಜಯ್ ಹೆರಗು ಅವರ ಬಿರುದಿಗೆ ಅನ್ವರ್ಥವಾಗಿದ್ದೇನೆ ಎಂಬುದು ಖುಷಿ ಕೊಡುತ್ತದಾದರೂ ಇದರಿಂದ ಹೆಚ್ಚಿದ ಜವಾಬ್ಧಾರಿಯಿಂದಾಗಿ ಕೊಂಚ ಭಯವೂ ಆಗುತ್ತಿದೆ.

enangheeri_statsWhatsApp Image 2022-03-02 at 10.40.24 AMಮೂರು ವರ್ಷಗಳ ಕಾಲ ನಿರಂತರವಾಗಿ ಬರೆಯುತ್ತಾ ಸುಮಾರು  100 ಕ್ಕೂ ಅಧಿಕ ದೇಶಗಳಿಂದ ನಾಲ್ಕು ಲಕ್ಷಕ್ಕೂ ಅಧಿಕ ಓದುಗರ ಅಭಿಮಾನ ಗಳಿಸಿದ್ದು ಒಂದು ಹೆಮ್ಮೆಯ ಮೈಲಿಗಲ್ಲಾಗಿದೆ. ಈ ಪ್ರಯತ್ನಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯೋಸ್ಮಿ ಎಂದು ಹೇಳುವ ಮೂಲಕ ವಂದನೆ ಸಲ್ಲಿಸುವುದರೊಂದಿಗೆ ಸದಾಕಾಲವೂ ನನ್ನೊಂದಿಗೆ ಇದ್ದ ಕೆಲವರನ್ನು ನೆನೆಪಿಸಿಕೊಳ್ಳಲೇ ಬೇಕಾದದ್ದು ನನ್ನ ಆದ್ಯ ಕರ್ತವ್ಯವಾಗಿದೆ.

ಆರಂಭದಲ್ಲಿ ನನಗೆ ಜನ್ಮ ಕೊಟ್ಟಿದ್ದಲ್ಲದೇ ಮನೆಯೇ ಮೊದಲ ಪಾಠ ಶಾಲೇ ತಾಯಿ ತಂದೆಯರೇ ನನ್ನ ಮೊದಲ ಗುರುಗಳು. ಚೌಲದ ಸಮಯದಲ್ಲಿ ಅಪ್ಪಾ ಅಕ್ಷರಭ್ಯಾಸ ಮಾಡಿಸಿದರೆ, ಕಾಪೀ ಪುಸ್ತಕದಲ್ಲಿ, ಸ್ಲೇಟು ಬಳಪಗಳೊಂದಿಗೆ ಅಕ್ಷರಭ್ಯಾಸ ಮಾಡುವ ಸಹಜ ಪದ್ದತಿಯ ಹೊರತಾಗಿ ನಮ್ಮಮ್ಮ ಕೋಡುಬಳೆಯಲ್ಲಿ ಅ ಆ ಇ ಈ… ಮಾಡಿಕೊಟ್ಟು ಅದರ ಮೂಲಕ ವಿಭಿನ್ನವಾಗಿ ಕನ್ನಡವನ್ನು ಕಲಿಸಿದ್ದಲ್ಲದೇ, ಕೇವಲ ಐದು ವರ್ಷಗಳಿರುವಾಗಲೇ ದಿನಪತ್ರಿಕೆ, ವಾರಪತ್ರಿಕೆಗಳ ಮೂಲಕ ಓದುವುದನ್ನು ಅಭ್ಯಾಸ ಮಾಡಿಸಿದ ನಮ್ಮಮ್ಮ ಉಮಾ ಅವರಿಗೆ ಹೇಗೆ ಕೃತಜ್ಞತೆಯನ್ನು ಅರ್ಪಿಸುವುದು? ಎಂದು ಯೋಚಿಸುತ್ತಿರುವಾಗ ಹೊಳೆದದ್ದೇ ಉಮಾಸುತ ಎಂಬ ಅಂಕಿತನಾಮ. ಇನ್ನು ಐತಿಹಾಸಿಕ, ಪೌರಾಣಿಕ, ಹಬ್ಬ ಹರಿದಿನಗಳ ಕುರಿತಾದ ಲೇಖನಕ್ಕೆ ಬೇಕಾದಂತಹ ಎಲ್ಲಾ ಜ್ಞಾನವನ್ನೂ ನನ್ನ ಮಸ್ತಕ್ಕೆ ತುಂಬಿ ಅದನ್ನು ಪುಸ್ತಕರೂಪದಲ್ಲಿ ಪ್ರಕಟಿಸುವ ಶಕ್ತಿಯೇ ನಮ್ಮ ಪೂಜ್ಯ ತಾತ ಮತ್ತು ತಂದೆಯವರು ಹಾಗಾಗಿ ಈ ಮೂವರಿಗೂ ನಾನು ಸದಾಕಾಲವೂ ಚಿರಋಣಿಯಾಗಿರುತ್ತೇನೆ.

ಇನ್ನು ಲೇಖನಗಳನ್ನು ಪ್ರಕಟಿಸಿದ ಕೂಡಲೇ ಅದನ್ನು ತಪ್ಪದೇ ಓದಿ ಅದಕ್ಕೆ ಸಕಾರಾತ್ಮಕ ಪ್ರತಿಕ್ರಿಯ ಜೊತೆಗೆ ಮತ್ತಷ್ಟು ಪೂರಕ ಮಾಹಿತಿಗಳನ್ನು ನೀಡುವ ಮೂಲಕ ಲೇಖನದ ಮೆರಗನ್ನು ಹೆಚ್ಚಿಸಿ ನನ್ನನ್ನು ಪ್ರೋತ್ಸಾಹಿಸುವ ಗೆಳೆಯರಾದ ಹರಿ, ಸುರೇಶ್, ಕನ್ನಡದ ಮೇಷ್ಟ್ರು ಶ್ರೀ ನರಸಿಂಹ ಮೂರ್ತಿಗಳು, ಆತ್ಮೀಯರಾದ ಶ್ರೀ ವೆಂಕಟರಂಗ ಶ್ರೀ ಭರತ್, ಅನಂತಕೃಷ್ಣ, ಜಯಸಿಂಹ, ಅಣ್ಣಾ, ನಮ್ಮ ಪ್ರತೀ ಹಬ್ಬಗಳ ಆಚರಣೆ ಮತ್ತು ಅದರ ವಿಶೇಷತೆಗಳನ್ನೇಕೆ ಓದುಗರಿಗೆ ಸುಲಭವಾಗಿ ಪರಿಚಯಿಸಬಾರದು? ಎಂಬ ಸಲಹೆ ನೀಡಿ ಹಬ್ಬಗಳ ಕುರಿತಾದ ಲೇಖನಗಳನ್ನು ಬರೆಯಲು ಪ್ರೇರಣೆ ನೀಡಿದ ಯುವಾ ಬ್ರಿಗೇಡ್ ಗೆಳೆಯ ನಿತ್ಯಾನಂದ ಗೌಡ, ಆತ್ಮಕಥನಗಳನ್ನೇ ಕಥಾರೂಪದಲ್ಲಿ ಬರೆದಲ್ಲಿ ಹೆಚ್ಚಿನ ಜನರಿಗೆ ತಲುಪುತ್ತದೆ ಎಂದು ಸಲಹೆ ನೀಡಿದ್ದಲ್ಲದೇ ನನ್ನ ಪ್ರತಿ ಲೇಖನದ ಒಂದಕ್ಷರವನ್ನೂ ಬಿಡದೇ ಓದಿ ಪ್ರತಿಕ್ರಿಯಿಸುವ ಶ್ರೀಮತಿ ಉಷಾ ವಾಸು ಇವರೆಲ್ಲರಿಗೂ ಹೃದಯಪೂರ್ವಕ ವಂದನೆಗಳನ್ನು ಹೇಳಲೇ ಬೇಕು.

ನನಗೆ ಬರಹದ ಜೊತೆಗೆ ನಳಪಾಕವೂ ಅಚ್ಚು ಮೆಚ್ಚಿನ ಹವ್ಯಾಸವಾಗಿದೆ. ಅಮ್ಮ ಚಿಕ್ಕಮ್ಮ ಮತ್ತು ಅಜ್ಜಿಯರಿಂದ ಕಲಿತಿದ್ದ ಪಾಕಶಾಸ್ತ್ರವನ್ನೇ ಒಂದೊಂದಾಗಿ ಲೇಖನರೂಪದಲ್ಲಿ ನಳಪಾಕ ವಿಭಾಗದಲ್ಲಿ ಪ್ರಕಟಿಸಿ ಜನಮನ್ನಣೆಗಳಿಸಿದ್ದಾಗ ನನ್ನ ಸಹೋದರಿ ಲಕ್ಷ್ಮೀ ಆನಂದ್, ನನಗೆ ನಮ್ಮ ಅನ್ನಪೂರ್ಣ ಮಾಲಿಕೆಯ ಮೂಲಕ ಪರಿಚಯವಾದ ಶ್ರೀಮತಿ ಮಾಧುರ್ಯ ಮುರಳೀಧರ್ ಮತ್ತು ಶೈಲಾ ಅನಂತ್ (ಹರಿಯ ಚಿಕ್ಕಮ್ಮ) ಅವರೂ ಸಹಾ ಅನೇಕ ಪಾಕಶಾಸ್ತ್ರಗಳನ್ನು ಪ್ರಕಟಿಸಲು ನೆರವಾಗಿದ್ದಾರೆ. ಹಾಗಾಗಿ ಅವರಿಗೂ ಸಹಾ ಹೃತ್ಪೂರ್ವಕ ಧನ್ಯವಾದಗಳು.

ಸಜ್ಜನರ ಸಂಘ, ಹೆಜ್ಜೇನು ಸವಿದಂತೆ ಎನ್ನುವಂತೆ, ತಿಂಗಳ ಅಂಗಳದ ಸಮಾನ ಮನಸ್ಕ ಸಾಹಿತ್ಯಾಸಕ್ತರ ಗುಂಪಿನ ಮೂಲಕ ಪರಿಚಿತರಾಗಿ ನನ್ನನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿಗೆ ಪರಿಚಯಿಸಿದ ವಿಜಯ್ ಭರ್ತೂರ್ ಮತ್ತು ಅಭಾಸಾಪ ಸಂಘಟನೆಯಲ್ಲಿ ನನಗೆ ಪರಿಚಿತರಾದ ಶ್ರೀ ತಿಮ್ಮಣ್ಣ ಭಟ್, ನಾರಾಯಣ ಶೇವಿರೆ, ರಘುನಂದನ್ ಭಟ್, ಪೊ. ಪ್ರೇಮಶೇಖರ್, ರೋಹಿತ್ ಚಕ್ರತೀರ್ಥ ಇವರೆಲ್ಲರ ಒಡನಾಟದಿಂದ ಅವರ ಮಾತುಗಳು ಮತ್ತು ಕೃತಿಗಳೂ ನನ್ನ ಲೇಖನದ ಮೇಲೆ ಪ್ರಭಾವ ಬೀರಿರುವ ಕಾರಣ ಅವರಿಗೂ ಧನ್ಯವಾದಗಳನ್ನು ಅರ್ಪಿಸಲು ಇಚ್ಚಿಸುತ್ತೇನೆ.

ನಮ್ಮೀ ಬ್ಲಾಗಿನಲ್ಲಿ ಪ್ರಕಟವಾಗಿರುವ ಲೇಖನಗಳಲ್ಲಿ ಹೆಚ್ಚಿನವು ಸ್ವಕೃತಿಗಳಾಗಿದ್ದರೆ ಇನ್ನೂ ಕೆಲವು ಸಾಮಾಜಿಕ ಜಾಲತಾಣಗಳಲ್ಲಿನ ಅನುವಾದಿತ ಕೃತಿಗಳಾಗಿವೆ. ಇಡೀ ಬ್ಲಾಗನ್ನು ಗಮನಿಸಿದಲ್ಲಿ ಯಾವುದೇ ಒಂದು ಸಿದ್ಧಾಂತಗಳಿಗೆ ಮತ್ತು ಕಟ್ಟು ಪಾಡುಗಳಿಗೆ ಬೀಳದೆ, ಕನ್ನಡ ನಾಡು, ಭಾಷೆ, ನುಡಿ, ಸಂಸ್ಕೃತಿ ಮತ್ತು ಸಂಪ್ರದಾಯ, ಕ್ರೀಡೆಗಳು, ಪ್ರಚಲಿತ ವಿದ್ಯಮಾನಗಳು, ರಾಜಕೀಯ, ಪ್ರವಾಸ, ಇತಿಹಾಸ, ವ್ಯಕ್ತಿಪರಿಚಯ ನಳಪಾಕವೂ ಸೇರಿದಂತೆ ಸುಮಾರು 26 ವರ್ಗಗಳಿದ್ದು ಓದುಗರಾದ ನಿಮಗೆ ಯಾವುದೇ ರೀತಿಯಲ್ಲಿ ಬೇಸರವಾಗದಂತೆ ಓದಿಸಿಕೊಂಡು ಹೋಗುವ ಲೇಖನಗಳನ್ನು ಬರೆದಿದ್ದೇನೆ ಎನ್ನುವುದಕ್ಕಿಂತ ನಿಮ್ಮೆಲ್ಲರ ಪ್ರೋತ್ಸಾಹದಿಂದ ಬರೆಸಿಕೊಂಡು ಹೋಗಿದ್ದೀರೀ ಎಂದರೆ ತಪ್ಪಾಗಲಾರದು. ಹಾಗಾಗಿ ನಮ್ಮ ಬ್ಲಾಗಿನ ಸಮಸ್ತ ಓದುಗರಿಗೂ ಅನಂತಾನಂತ ಧನ್ಯವಾದಗಳನ್ನು ಅರ್ಪಿಸಲು ಇಚ್ಚಿಸುತ್ತೇನೆ.

ಒಟ್ಟಿನಲ್ಲಿ ಈ ಬ್ಲಾಗಿನ ಮೂಲಕ ನೂರಾರು ಸಾಹಿತ್ಯಾಸಕ್ತ ಗೆಳೆಯರು ಪರಿಚಯವಾಗಿದ್ದಲ್ಲದೇ ಅನೇಕ ಉಪಯುಕ್ತ ಮಾಹಿತಿಗಳನ್ನೂ ತಿಳಿಯುವಂತಾಯಿತು ತನ್ಮೂಲಕ ತಿಳಿಸುವಂತಾಯಿತು. ಈ ಎಲ್ಲಾ ಬೆಳವಣಿಗೆಯನ್ನು ಕಣ್ಣಾರೆ ನೋಡಿ ಸಂಭ್ರಮಿಸಲು ನಮ್ಮ ತಂದೆಯವರು ನಮ್ಮೊಂದಿಗೆ ಇಲ್ಲವಲ್ಲಾ ಎಂಬ ಕೊರಗಿದ್ದರೂ ಅವರ ಜಾಗದಲ್ಲಿ ನಿಮ್ಮಂತಹ ಸಾವಿರಾರು ಹಿತೈಷಿಗಳು ಮತ್ತು ಮಾರ್ಗದರ್ಶಿಗಳು ನನಗೆ ದೊರತದ್ದು ನನ್ನ ಪೂರ್ವ ಜನ್ಮದ ಸುಕೃತವೇ ಸರಿ.

ಕಡೆಯದಾಗಿ ತಮ್ಮೆಲ್ಲರಲ್ಲೂ ನನ್ನದೊಂದು ಸಣ್ಣ ಮನವಿ. ನಮ್ಮ ಬ್ಲಾಗಿನ ಬಗ್ಗೆ ನಿಮ್ಮ ಅಭಿಪ್ರಾಯ ಮತ್ತು ಇದನ್ನು ಮತ್ತಷ್ಟು ಹೇಗೆ ಉತ್ತಮ ಪಡಿಸ ಬಹುದು ಎಂಬದರ ಕುರಿತಾಗಿ ಸೂಕ್ತ ಸಲಹೆಗಳನ್ನು ಈ ಕೂಡಲೇ ನೀಡುವ ಮುಖಾಂತರ ನಿಮ್ಮೀ ಬ್ಲಾಗನ್ನು ಮತ್ತಷ್ಟು ಮಗದಷ್ಟು ಉತ್ತಮ ಸಾಹಿತ್ಯತಾಣವನ್ನಾಗಿ ಮಾಡಬೇಕೆಂದು ಕೋರುತ್ತೇನೆ. ತನ್ಮೂಲಕ ಇದುವರೆಗೂ ನಮ್ಮ ಮಸ್ತಕದಲ್ಲಿ ಇದ್ದದ್ದನ್ನು ಡಿಜಿಟಲ್ ಪುಸ್ತಕ ರೂಪದಲ್ಲಿ ಸಂಗ್ರಹಿಸಿ ನಮ್ಮ ಮುಂದಿನ ಪೀಳಿಗೆಯವರಿಗೂ ಅದನ್ನು ಉಳಿಯುವಂತೆ ಮಾಡುವ ಜವಾಬ್ಧಾರಿ ನಮ್ಮ ನಿಮ್ಮೆಲರ ಮೇಲಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s