ನಡುಂಗಮುವ ರಾಜ ಇನ್ನಿಲ್ಲ

ನಡುಂಗಮುವ ರಾಜ ಎನ್ನುವುದು ಶ್ರೀಲಂಕಾದ ಕೊಲಂಬೊವಿನಲ್ಲಿ 07.03.22 ಸೋಮವಾರದಂದು ತನ್ನ 69 ನೇ ವಯಸ್ಸಿನಲ್ಲಿ ನಿಧನವಾದ ಸುಮಾರು 10.5 ಅಡಿ ಎತ್ತರವಿದ್ದ ಏಷ್ಯಾದ ಅತಿದೊಡ್ಡ ಪಳಗಿದ ಆನೆಯ ಹೆಸರಾಗಿದೆ. ಈ ಆನೆಯ ಸುಮಾರು ವರ್ಷಗಳ ಕಾಲ ಕ್ಯಾಂಡಿ ನಗರದಲ್ಲಿ ಪ್ರತೀ ವರ್ಷ ಜುಲೈ ತಿಂಗಳಿನ ಹುಣ್ಣಿಮೆಯ ಸಂದರ್ಭದಲ್ಲಿ ನಡೆಯುವ ಬೌದ್ಧರ ಪ್ರಮುಖ ಧಾರ್ಮಿಕ ಪ್ರದರ್ಶನವಾದ ಎಸಲದ ವಾರ್ಷಿಕ ಮೆರವಣಿಗೆಯಲ್ಲಿ ಭಗವಾನ್ ಬುದ್ಧನ ಪವಿತ್ರ ದಂತಕವಚವನ್ನು ಹೊಂದಿರುವ ಪೆಟ್ಟಿಗೆಯನ್ನು ಹೊತ್ತೊಯ್ಯುವ ಕಾಯಕ ವಹಿಸಿಕೊಂಡಿತ್ತು
.

1985 ರಿಂದಲೂ ಕೊಲಂಬೊದಲ್ಲಿ ಸಬರಗಾಮುವಾ ಮಹಾ ಸಮನ್ ಮತ್ತು ಗಂಪಹಾ ದೇವಾಲಯಗಳ ಮೆರವಣಿಗೆಯಲ್ಲಿ ನಿರಂತರವಾಗಿ ಭಾಗವಹಿಸಿ ಅಲ್ಲಿನ ಪ್ರಮುಖ ಆಕರ್ಷಣೆಯಾಗಿದ್ದ ಈ ರಾಜಾನನ್ನು 2005 ರಲ್ಲಿ ರಾಜಾ ಪ್ರದೀಪ್ ನಿಲಂಗ ದೇಲಾ ಅವರ ಕೋರಿಕೆಯ ಮೇರೆಗೆ ಕ್ಯಾಂಡಿ ಎಸಲ ಪೆರೇಹೆರಾ ವರ್ಗಾಯಿಸಿದ ನಂತರ ಈ ರಾಜಾನನ್ನು ಕಾಳು ಮಾಮಾ ಎಂದು ಜನಪ್ರಿಯವಾಗಿದ್ದ ವಿಲ್ಸನ್ ಕೊಡಿತುವಕ್ಕು ಮತ್ತವರ ಸಹಾಯಕರು ಸುಮಾರು 15 ವರ್ಷಗಳಿಗೂ ಹೆಚ್ಚು ಕಾಲ ಸಾಕಿ ಸಲಹಿದ್ದರು.

raja3ಈ ರೀತಿಯಾಗಿ ಭಗವಂತನ ಸೇವೆಯನ್ನು ಸಲ್ಲಿಸಲು ಎಲ್ಲಾ ಆನೆಗಳೂ ಅರ್ಹತೆಯನ್ನು ಪಡೆಯುವುದಿಲ್ಲ. ಈ ರೀತಿಯ ಗೌರವವನ್ನು ಪಡೆಯುವುದುದಕ್ಕೆ ಅಲ್ಲಿಯ ಸಂಪ್ರದಾಯದ ಪ್ರಕಾರ, ಕೆಲ ನಿರ್ದಿಷ್ಟ ದೈಹಿಕ ಗುಣಲಕ್ಷಣಗಳನ್ನು ಹೊಂದಿರುವ ಆನೆಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ಆ ಆನೆಗಳು ಚಪ್ಪಟೆಯಾದ ಬೆನ್ನನ್ನು ಹೊಂದಿರಬೇಕು, ವಿಶೇಷವಾಗಿ ಬಾಗಿದ ದಂತಗಳನ್ನು ಹೊಂದಿರಬೇಕು ಮತ್ತು ಆನೆಯ ಎಲ್ಲಾ ಏಳು ಬಿಂದುಗಳು ನಿಂತಾಗ – ಅವುಗಳ ನಾಲ್ಕು ಕಾಲುಗಳು, ಸೊಂಡಿಲು, ಶಿಶ್ನ ಮತ್ತು ಬಾಲ – ಎಲ್ಲವೂ ನೆಲವನ್ನು ಸ್ಪರ್ಶಿಸಬೇಕು. ಈ ರೀತಿಯಾಗಿ ಎಲ್ಲಾ ಗುಣಲಕ್ಷಣಗಳನ್ನು ರಾಜ ಹೊಂದಿದ್ದ ಕಾರಣ ರಾಜನಿಗೆ ಅಂಬಾರಿಯನ್ನು ಹೊರುವ ಜವಾಬ್ಧಾರಿಯನ್ನು ಕೊಡಲಾಗಿತ್ತು. ಪ್ರತೀ ವರ್ಷವೂ ಒಂದು ವಾರಗಳ ಕಾಲ ನಡೆಯುವ ಈ ಉತ್ಸವದ ಸಂದರ್ಭಗಳಲ್ಲಿ ರಾಜಾ ಕಾಲ್ನಡಿಗೆಯ ಮೂಲಕ ವೆಲಿವೇರಿಯಾ, ಗಂಪಹಾದಿಂದ ಕ್ಯಾಂಡಿಯವರೆಗೆ ಸುಮಾರು 90 ಕಿ.ಮೀಗಳ ಪ್ರಯಾಣಿಸುತ್ತಾ ಮಾರ್ಗದ ಮಧ್ಯದಲ್ಲಿ ಸಿಗುವ ಎಲ್ಲಾ ಬೌದ್ಧ ದೇವಾಲಯಗಳನ್ನು ಸಂದರ್ಶಿಸಿ ಅಲ್ಲಿ ಪ್ರತಿ ನಿತ್ಯವೂ ತೆಂಗಿನಕಾಯಿ, ಬೆಲ್ಲದ ಜೊತೆಗೆ ವಿವಿಧ ರೀತಿಯ ಹಣ್ಣುಗಳ ಸತ್ಕಾರ ಪಡೆಯುತ್ತಾ ದಾರಿಯನ್ನು ಕ್ರಮಿಸುತ್ತಿದ್ದದ್ದನ್ನು ನೋಡಲು ರಸ್ತೆಯ ಬದಿ ಸಾವಿರಾರು ಭಕ್ತಾದಿಗಳು ನಿಲ್ಲುತ್ತಿದ್ದದ್ದು ವಿಶೇಷ.

raja12015 ರಲ್ಲಿ ರಾಜಾ ದೇವಸ್ಥಾನವೊಂದರ ಸಮಾರಂಭಕ್ಕೆ ಹೋಗುತ್ತಿದ್ದಾಗ ಬೈಕ್ ಸವಾರನೊಬ್ಬ ರಾಜನಿಗೆ ಡಿಕ್ಕಿ ಹೊಡೆದ ನಂತರ ಸರ್ಕಾರವು ಅದನ್ನು ಗಂಭೀರವಾಗಿ ಪರಿಗಣಿಸಿ, ಸೆಪ್ಟೆಂಬರ್ 2015 ರಿಂದ ಸರ್ಕಾರದಿಂದಲೇ ರಾಜನಿಗಾಗಿ ಸಶಸ್ತ್ರ ಭದ್ರತಾ ಬೆಂಗಾವಲು ನೀಡಲಾಗಿತ್ತು ಎನ್ನುವುದು ಗಮನಾರ್ಹವಾಗಿದೆ. ಸುಮಾರು 13 ಬಾರಿ ದೇವಾಲಯದ ಪೆರೆಹೆರದಲ್ಲಿ ಕಳಸವನ್ನು ರಾಜ ಹೊತ್ತಿದ್ದಲ್ಲದೇ, 2021 ರಲ್ಲಿ ಕಡೆಯಬಾರಿಗೆ ರಾಜಾ ಕಳಸವನ್ನು ಹೊತ್ತಿದ್ದ.

jayachamarajendraಇಷ್ಟೆಲ್ಲಾ ಓದುತ್ತಿರುವ ನಿಮ್ಮಲ್ಲರಿಗೂ ಶ್ರೀಲಂಕಾದ ಆನೆಗೂ ನಮಗೂ ಏನು ಸಂಬಂಧ? ಎಂದು ಆಲೋಸಿಸುತ್ತಿದ್ದರೆ ಈ ಆನೆಯು ಮೂಲತಃ ಭಾರತದ್ದಾಗಿದ್ದು ಅದರಲ್ಲೂ ಕರ್ನಾಟಕದ ಮೈಸೂರಿನ ಪ್ರಾಂತ್ಯಕ್ಕೆ ಸೇರಿತ್ತು ಎಂದರೆ ಅಚ್ಚರಿಯಾಗುತ್ತದೆ ಅಲ್ಲವೇ? ಬೆಟ್ಟದ ನೆಲ್ಲಿಕಾಯಿ ಸಮುದ್ರದ ಉಪ್ಪು ಎನ್ನುವಂತೆ 1953 ರಲ್ಲಿ ಮೈಸೂರಿನ ಪ್ರಾಂತ್ಯದಲ್ಲಿ ರಾಜನ ಜನನವಾಗುತ್ತದೆ. ಮೈಸೂರು ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ತಮ್ಮ ಸಂಬಂಧಿಕರ ದೀರ್ಘಕಾಲದ ಅನಾರೋಗ್ಯವನ್ನು ಗುಣಪಡಿಸಿದ ಶ್ರೀಲಂಕದ ಪಿಲಿಯಂಡಲದ ನೀಲಮ್ಮಹರ ದೇವಸ್ಥಾನದ ವೈದ್ಯ ಸನ್ಯಾಸಿಗೆ ಮೆಚ್ಚುಗೆಗಾಗಿ ಉಡುಗೊರೆಯಾಗಿ ನೀಡಿದ ಎರಡು ಆನೆ ಮರಿಗಳಲ್ಲಿ ರಾಜಾ ಒಬ್ಬನಾಗಿದ್ದರೆ ಮತ್ತೊಬ್ಬ ಗಂಗಾರಾಮಯ್ಯನ ನವಂ ರಾಜನಾಗಿದ್ದ.

raja41978 ರಲ್ಲಿ ರಾಜನಿಗೆ 25 ವರ್ಷ ವಯಸ್ಸಿನವನಾಗಿದ್ದಾಗ, ರಾಜಾನನ್ನು ಬಂಡರಾಗಮಾದ ಮಾಜಿ ಸಂಸದ ಹರ್ಬರ್ಟ್ ವಿಕ್ರಮಸಿಂಘೆ ಅವರಿಂದ ರೂ. 75,000. ಆ ಕಾಲದ ಖ್ಯಾತ ಆಯುರ್ವೇದ ವೈದ್ಯರಾಗಿದ್ದ ನಡುಂಗಮುವಾ ಪ್ರದೇಶದ ಧರ್ಮವಿಜಯ ವೇದ ರಾಲಹಾಮಿ ಅವರು ಕೊಂಡು ಕೊಂಡ ನಂತರ ರಾಜ ನಡುಂಗಮುವ ರಾಜಾ ಎಂದೇ ಪ್ರಖ್ಯಾತನಾದ. ರಾಳಹಾಮಿಯವರ ಮರಣದ ನಂತರ ರಾಜನನ್ನು ಆಯುರ್ವೇದ ವೈದ್ಯರೇ ಆಗಿದ್ದ ಅವರ ಮಗ ಹರ್ಷ ಧರ್ಮವಿಜಯ ಅವರು ಕಾಳು ಮಾಮಾ ನೇತೃತ್ವದ ನಾಲ್ವರು ಆರೈಕೆದಾರ ಸುಪರ್ಧಿಗೆ ವಹಿಸಿದ್ದರು.

ane469 ವರ್ಷ ವಯಸ್ಸಿನ, ಕ್ಯಾಂಡಿ ಜಿಲ್ಲೆಯಲ್ಲಿ ನಡೆಯುತಿದ್ದ ಪೆರಹೇರಾ ಉತ್ಸವ ಅಥವಾ ವಾರ್ಷಿಕ ಪ್ರದರ್ಶನದಲ್ಲಿ ಪ್ರಮುಖ ಆಕರ್ಷಣೆಯಾಗಿ ಗೋಪುರದ ಆನೆ ಎಂದೇ ಪ್ರಖ್ಯಾತವಾಗಿದ್ದ ನಡುಂಗಮುವ ರಾಜಾ ಅಚಾನಕ್ಕಾಗಿ 07.03.22 ಸೋಮವಾರದಂದು ನಿಧನವಾದಾಗ, ಆ ಪ್ರದೇಶದ ಮಕ್ಕಳು ಮತ್ತು ಬೌದ್ಧ ಪುರೋಹಿತರು ಸೇರಿದಂತೆ ಹಲವಾರು ಜನರು ರಾಜಾಗೆ ಶ್ರದ್ಧಾಪೂರ್ವವಾಗಿ ಪ್ರಾರ್ಥನೆ ಸಲ್ಲಿಸುವ ಮೂಲಕ ವಿದಾಯವನ್ನು ಹೇಳಿದರು. ರಾಜಾನನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಿದ್ದಲ್ಲದೇ, ಅದನ್ನು ತಮ್ಮ ಮುಂದಿನ ಪೀಳಿಗೆಗೂ ಸಾಕ್ಷಿಯಾಗಿ ಇರುವಂತಾಗಲು ರಾಜಾನ ದೇಹವನ್ನು ಸಂರಕ್ಷಿಸಿಡುವಂತೆ ಶ್ರೀಲಂಕಾದ ಅಧ್ಯಕ್ಷರಾದ ಶ್ರೀ ರಾಜಪಕ್ಸೆ ಅವರು ಅಧಿಕಾರಿಗಳಿಗೆ ಸೂಚಿಸಿದ ಪರಿಣಾಮ, ಸಕಲ ಸರ್ಕಾರೀ ಮರ್ಯಾದೆಯೊಂದಿಗೆ ಬೌದ್ಧ ಧರ್ಮದ ಪ್ರಕಾರ ರಾಜಾನ ಅಂತ್ಯಕ್ರಿಯೆಯ ವಿಧಿಗಳನ್ನು ಅನುಸರಿಸಿದ ನಂತರ ರಾಜಾನನ್ನು ಸರ್ಕಾರೀ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಈ ಹಿಂದೆಯೂ ಮತ್ತೊಂದು ಆನೆಯನ್ನು ಇದೇ ರೀತಿಯ ಮರ್ಯಾದೆಯೊಂದಿಗೆ ಶ್ರೀಲಂಕಾದ ಟೆಂಪಲ್ ಆಫ್ ದಿ ಸೇಕ್ರೆಡ್ ಟೂತ್ ರೆಲಿಕ್ನಲ್ಲಿರುವ ವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಿ ಇಡಲಾಗಿದೆ.

ನೆರೆ ಹೊರೆಯ ರಾಷ್ಟ್ರಗಳು ಪರಸ್ಪರ ಶರಂಪರ ಕಿತ್ತಾಡುತ್ತಿರುವ ಇಂತಹ ಸಂದರ್ಭದಲ್ಲಿ ಭಾರತದಲ್ಲಿ ಜನಿಸಿದ ಆನೆ ಸುಮಾರು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ನೆರೆಯ ಶ್ರೀಲಂಕಾ ದೇಶದಲ್ಲಿ ನೆಲೆಸಿದ್ದ ರಾಜನ ಆಗಲಿಕೆಗೆ ಇಡೀ ದ್ವೀಪ ರಾಷ್ಟ್ರವೇ ಶೋಕಿಸುತ್ತಿದೆಯಲ್ಲದೇ, ನಮ್ಮ ರಾಜಾನನ್ನು ರಾಷ್ಟ್ರೀಯ ಸಂಪತ್ತು ಎಂಬ ಗೌರವವಕ್ಕೆ ಪಾತ್ರರಾಗುವ ಮೂಲಕ ಎರಡು ದೇಶಗಳ ನಡುವಿನ ಭಾವೈಕ್ಯತೆಯನ್ನು ಎತ್ತಿ ಹಿಡಿದಿದೆ ಎಂದರೂ ತಪ್ಪಾಗದು ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s