ಕಳೆದ ಒಂದು ತಿಂಗಳಿನಿಂದ ಉಕ್ರೇನ್ ಮತ್ತು ರಷ್ಯಾ ನಡುವೆ ಯಾದವೀ ಕಲಹ ನಡೆಯುತ್ತಿದ್ದರೆ, ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತೆ ಆ ಯುದ್ಧದ ದುಷ್ಪರಿಣಾಮ ಭಾರತದ ಮೇಲೆ ಆಗುತ್ತಿದೆ. ಯುದ್ಧದಿಂದಾಗಿ ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದ್ದ ಪೆಟ್ರೋಲ್ ಬೆಲೆ ಏರುತ್ತದೆ ಎಂದರೆ ಒಪ್ಪಿಕೊಳ್ಳಬಹುದು ಆದರೆ ಉಕ್ರೇನ್ ನಿಂದ ಸೂರ್ಯಕಾಂತಿಯ ಎಣ್ಣೆ ಭಾರತಕ್ಕೆ ಆಮದು ಆಗ್ತಾ ಇಲ್ಲಾ ಎಂಬ ನೆಪವೊಡ್ಡಿ ಇದ್ದಕ್ಕಿದಂತೆಯೇ ಭಾರತದಲ್ಲಿ ಅಡುಗೆ ಎಣ್ಣೆ ಯದ್ವಾ ತವ್ದಾ ಏರುತ್ತಿರುವುದು ಕಳವಳಕಾರಿಯಾಗಿದೆ.
ಕೊರೋನಾ ಮುಂಚೆ 80-100 ರೂಪಾಯಿ ಆಸುಪಾಸಿನಲ್ಲಿ ಇದ್ದ ಶೇಂಗಾ ಎಣ್ಣೆ, ಸೂರ್ಯಕಾಂತಿ ಎಣ್ಣೆಯ ಬೆಲೆ ದಿಧೀರ್ ಎಂದು 120-140ರ ಆಸುಪಾಸಿಗೆ ಏರಿದಾಗ ಜನರು ಹೌರಾದಿದ್ದಂತೂ ಸುಳ್ಳಲ್ಲಾ. ಸರ್ಕಾರವು ಸಹಾ ಅಮದು ಸುಂಕವನ್ನು ಕಡಿಮೆ ಮಾಡಿ ಅಲ್ಪ ಸ್ವಲ್ಪ ಅಡುಗೆಯ ಎಣ್ಣೆಯ ಬೆಲೆ ಸ್ಥಿರವಾಗಿ ಇರಲು ಪ್ರಯತ್ನ ಪಟ್ಟಿತಾದರೂ ಈಗ ಯುದ್ಧದ ನೆಪದಿಂದಾಗಿ ಅಡುಗೆ ಎಣ್ಣೆಯ ಬೆಲೆ 160 ರಲ್ಲಿದ್ದು 200ಕ್ಕೆ ಏರುತ್ತದೆ ಎಂದು ಅಂಗಡಿಯವೇ ಹೇಳುತ್ತಿದ್ದಾರೆ.
ನಿಜ ಹೇಳಬೇಕೆಂದರೆ ನಮ್ಮ ಕೇರಳಾ ರಾಜ್ಯದಷ್ಟಿರ ಬಹುದಾದ ಚಿಕ್ಕದಾದ ಉಕ್ರೇನ್ ದೇಶ ನಮ್ಮ ಇಡೀ ದೇಶಕ್ಕೆ ಅಗತ್ಯವಿದ್ದಷ್ಟು ಸೂರ್ಯಕಾಂತಿ ಎಣ್ಣೆಯನ್ನು ಸರಬರಾಜು ಮಾಡುತ್ತಿತ್ತು ಎಂದರೆ ನಂಬಲು ಸಾಧ್ಯವೇ? ಅದೂ ಅಲ್ಲದೇ ಅಲ್ಲಿಂದ ಇಲ್ಲಿಗೆ ಎಣ್ಣೆ ಬರಲು ಕನಿಷ್ಟ ಪಕ್ಷ 2-3 ವಾರಗಳದರೂ ಆಗುವ ಸಾಧ್ಯವಿರುವುದರಿಂದ ಬಹುತೇಕರು ಸುಮಾರು 2-3 ತಿಂಗಳಿಗಾಗುವಷ್ಟು ಎಣ್ಣೆಯ ದಾಸ್ತಾನು ನಮ್ಮ ದೇಶದ ಗೋದಾಮಿನಲ್ಲಿ ಇರಬೇಕಲ್ಲವೇ?
ಯುದ್ಧ ಆರಂಭವಾದ ಒಂದು ವಾರದೊಳಗೇ ಎಣ್ಣೆಯ ಸರಬರಾಜು ಆಗುತ್ತಿಲ್ಲವಾದ ಕಾರಣ ಅಡುಗೆ ಎಣ್ಣೆ ದಾಸ್ತಾನು ಇಲ್ಲಾ ಎಂದು ಹೇಳುತ್ತಿರುವುದನ್ನು ಗಮನಿಸಿದಲ್ಲಿ ಇದು ಖಂಡಿತವಾಗಿಯೂ ಕಾಣದ ಕೈಗಳು ಕೃತಕ ಅಭಾವ ಸೃಷ್ಟಿಸಿ, ಅಕ್ರಮ ದಾಸ್ತಾನು ಮಾಡಿ ಜನರನ್ನು ದೋಚುತ್ತಿರುವುದು ಸ್ಪಷ್ಟವಾಗಿರುವುದು ಕಣ್ಣಿಗೆ ಕಾಣಿಸುತ್ತಿದೆ.
ನಿಜ ಹೇಳಬೇಕೆಂದರೆ ಬಗೆ ಬಗೆಯ ಜಾಹೀರಾತುಗಳ ಮೂಲಕ ಜನರನ್ನು ಮರಳು ಮಾಡುತ್ತಾ, ತಮ್ಮದು ಉತ್ಕೃಷ್ಟ ದರ್ಜೆಯೆಂದು, ಕೊಲೆಸ್ಟ್ರಾಲ್ ಮುಕ್ತ(ಕೊಬ್ಬು ಕಡಿಮೆ)ವೆಂದೂ, ಡಬಲ್ ಫಿಲ್ಟರ್ಡ್ ರೀಫೈನ್ಡ್ ಎಣ್ಣೆ ಎಂದು ಹೇಳಿಕೊಳ್ಳುತ್ತಿರುವ ಎಣ್ಣೆ ಎಲ್ಲವು ಕಲಬೆರಕೆ ಎಣ್ಣೆಗಳಾಗಿದ್ದು ಇದರಿಂದಾಗಿಯೇ ಇಂದಿನ ಬಹುತೇಕ ಜನರು ಬೊಜ್ಜು, ಕೀಲುನೋವು, ಧಿಡೀರ್ ಹೃದಯಾಘಾತ, ಕ್ಯಾನ್ಸರ್ ಅಧಿಕ ರತ್ಕದೊತ್ತಡ, ಮಧುಮೇಹ ಮುಂತಾದ ಖಾಯಿಲೆಗಳಿಗೆ ತುತ್ತಾಗುತ್ತಿರುವುದಕ್ಕೆ ಮೂಲ ಕಾರಣವಾಗಿದೆ ಎಂದರೆ ಅಚ್ಚರಿಯಾಗ ಬಹುದು.
ಗಾಣದಲ್ಲಿ ಒಂದು ಕೆಜಿ ಕಡಲೇ ಕಾಯಿ ತಯಾರಿಸಲು ಸುಮಾರು 3 ರಿಂದ 3.5 ಕೆಜಿ ಉತ್ಕೃಷ್ಟ ದರ್ಜೆಯ ಕಡಲೇ ಬೀಜದ ಅವಶ್ಯಕತೆ ಇರುತ್ತದೆ. ಕಡಲೇ ಕಾಯಿಯ ಸದ್ಯದ ಬೆಲೆ ಕೆಜೆ ಒಂದಕ್ಕೆ 100-120 ರೂ ಗಳು ಇದ್ದು 3-3.5 ಕೆಜಿ ಕಡಲೇ ಜೀಜಕ್ಕೇ ಸುಮಾರು 350-440/- ರೂಗಳಾಗುತ್ತದೆ. ಇನ್ನುಗಾಣದ ಬೆಲೆ, ಶುದ್ಧೀಕರಣದ ಬೆಲೆ, ಲಾಭಾಂಶ ಎಲ್ಲವೂ ಸೇರಿಸಿದಲ್ಲಿ ಶುದ್ಧವಾದ ಕಡಲೇಕಾಯಿ ಎಣ್ಣೆ ಕೆಜಿ ಒಂದಕ್ಕೆ 340-450 ಆಗುತ್ತದೆ. ಕೊಬ್ಬರೀ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಸಾಸಿವೆ ಎಣ್ಣೆಗಳ ಉತ್ಪಾದನೆ ಮತ್ತು ಬೆಲೆಯೂ ಇದಕ್ಕಿಂತಲೂ ಭಿನ್ನವಾಗದಿರುವಾಗ, ಈ ಎಲ್ಲಾ ಕಂಪನಿಗಳು ಅದು ಹೇಗೆ ೮೦-೧೨೦ ರೂಗಳಿಗೆ ಕಡಲೇ ಕಾಯಿ ಎಣ್ಣೆಯನ್ನು ಕೊಡಲು ಸಾಧ್ಯ?
ವಿವಿಧ ರಾಸಾಯನಿಕಗಳನ್ನು ಬೆರೆಸಿ ಹಾಲನ್ನು ಕಲಬೆರಕೆ ಮಾಡುವ ದಂಧೆಯಂತೆಯೇ ಇಲ್ಲಿಯೂ ಸಹಾ ಪೇಟ್ರೋಲಿಯಂ ಉತ್ಪನ್ನಗಳ ಸಂಸ್ಕರಣೆ ಮತ್ತು ಶುದ್ಧೀಕರಣ ಮಾಡಿದ ನಂತರ ತ್ರಾಜ್ಯವಾಗಿ ಉಳಿಯುವ ಬಣ್ಣ ಮತ್ತು ವಾಸನೆ ಇರದ ಲಿಕ್ವಿಡ್ ಪ್ಯಾರಾಫಿನ್ ಎಂಬ ಎಣ್ಣೆಯಂತಹ ಜಿಡ್ಡಿನ ಪದಾರ್ಥವನ್ನು ಲೀಟರಿಗೆ 10-20 ರೂಪಾಯಿಗಳಂತೆ ತೈಲ ಕಂಪನಿಗಳಿಂದ ಕೊಂಡುತಂದು ಆ ಜಿಡ್ಡಿಗೆ ಕೃತಕವಾಗಿ ಬಣ್ಣ ಮತ್ತು ಸುವಾಸನೆಯನ್ನು ಬೆರೆಸಿ ಅಲ್ಪ ಸ್ವಲ್ಪ ತಾಳೇ ಎಣ್ಣೆ ಮತ್ತು ಮೂಲ ಕಡಲೇಕಾಯಿ/ಸೂರ್ಯಕಾಂತಿ ಎಣ್ಣೆಯನ್ನು ಬರೆಸಿ, ಅದನ್ನು ಆಕರ್ಷಕವಾಗಿ ಕಾಣುವಂತೆ ಪ್ಯಾಕ್ ಮಾಡಿ ಹೆಸರಾಂತ ನಟ ನಟಿಯರಿಂದಲೋ ಇಲ್ಲವೇ ರೂಪದರ್ಶಿಗಳಿಂದ ಜಾಹೀರಾತು ಮಾಡಿಸಿ ಜನರಿಗೆ ಮರಳು ಮಾಡುವ ಮೂಲಕ ಪ್ರತಿನಿತ್ಯವೂ ವಿಷವನ್ನು ಉಣಿಸುತ್ತಿರುವುದು ಈಗ ಯಾರಿಗೂ ತಿಳಿಯದ ಸಂಗತಿಯೇನಲ್ಲ.
ನಮ್ಮ ಭಾರತೀಯರಿಗೆ ಗುಣಮಟ್ಟ ಮತ್ತು ಬೆಲೆ ಎಂಬುದರ ನಡುವೆ ಆಯ್ಕೆ ಮಾಡಿಕೊಳ್ಳುವಾಗ ದುರಾದೃಷ್ಟವಾಷಾತ್ ಗುಣಮಟ್ಟ ಮತ್ತು ಆರೋಗ್ಯದ ಬಗ್ಗೆ ಗಮನವನ್ನೇ ಹರಿಸದೇ, ಕೇವಲ ಅಗ್ಗಕ್ಕೆ ಮಾರುಹೋಗಿ ನಾನಾ ರೀತಿಯ ಖಾಯಿಲೆಗಳಿಗೆ ತುತ್ತಾಗುತ್ತಿರುವುದು ನಿಜಕ್ಕೂ ವಿಪರ್ಯಾಸವಾಗಿದೆ.
ಹಾಗಾಗಿ ಆಗ್ಗದ ಹಾಳೂ ಮೂಳು ಕಳ ಬೆರಕೆ ಎಣ್ಣೆಯನ್ನು ಸೇವಿಸಿ ಆರೋಗ್ಯ ಹಾಳುಮಾಡಿಕೊಂಡು ಅಸ್ಪತ್ರೆಗೆ ಸೇರಿ ಲಕ್ಷಾಂತರ ಬಿಲ್ ಕಟ್ಟುವ ಬದಲು ನೇರವಾಗಿ ನಮ್ಮ ಅಗತ್ಯಕ್ಕೆ ತಕ್ಕಂತೆ ಬೇಳೇ ಕಾಳುಗಳನ್ನು ಸಗಟು ರೂಪದಲ್ಲಿ ಖರೀದಿಸಿ ಎಲ್ಲೆಡೆಯಲ್ಲಿಯೂ ಇರುವ ಎಣ್ಣೆಯ ಗಾಣದಲ್ಲಿ ನಮ್ಮ ಕಣ್ಣಮುಂದೆಯೇ ಅಸಲೀ ಮತ್ತು ಆರೋಗ್ಯಕರವಾದ ಎಣ್ಣೆಯನ್ನಾಗಿಸಿಕೊಂಡು ಆನರೋಗ್ಯದಿಂದ ಪಾರಾಗುವುದೇ ಉತ್ತಮವಾದ ಮಾರ್ಗವಾಗಿದೆ.
ಇತರರಿಗೆ ಹೇಳುವ ಮುನ್ನ ಬದಲಾವಣೆ ಎಂಬುದು ಮೊದಲು ನಮ್ಮ ಮನ ಮತ್ತು ಮನೆಯಿಂದಲೇ ಆಗಲಿ ಅಲ್ಲವೇ?
ಏನಂತೀರೀ?
ನಿಮ್ಮವನೇ ಉಮಾಸುತ