ಶಿರಸಿ ಮಾರಿಕಾಂಬಾ

ಶಿರಸಿ, ಉತ್ತರ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ತಾಲ್ಲೂಕು ಕೇಂದ್ರವಾಗಿದ್ದು, ಧಾರ್ಮಿಕವಾಗಿ, ಪೌರಾಣಿಕವಾಗಿ ಸಾಂಸ್ಕೃತಿಕವಾಗಿ, ಐತಿಹಾಸಿಕವಾಗಿ ಮತ್ತು ಆರ್ಥಿಕವಾಗಿಯೂ ಕರ್ನಾಟಕದ ಮಲೆನಾಡಿನ ಹೆಬ್ಬಾಗಿಲು ಎಂದೇ ಪ್ರಸಿದ್ಧಿಯಾಗಿದೆ. ಶಿರಸಿ ಎಂದಾಕ್ಷಣ ಪ್ರತಿಯೊಬ್ಬರ ಬಾಯಿಯಲ್ಲಿಯೂ ಉದ್ಘಾರವಾಗುವುದೇ, ಪುರಾಣ ಪ್ರಸಿದ್ಧವಾದ ಶ್ರೀ ಮಾರಿಕಾಂಬ ದೇವಸ್ಥಾನ ಮತ್ತು ಎರಡು ವರ್ಷಕ್ಕೊಮ್ಮೆ ಎಂಟು ದಿನಗಳ ಕಾಲ ನಡೆಯುವ ಶ್ರೀ ಮಾರಿಕಾಂಬ ಜಾತ್ರೆ. ನಾವಿಂದು ಮಾರಿಕಾಂಬ ದೇವಾಲಯ, ಅಲ್ಲಿಯ ಸ್ಥಳ ಪುರಾಣದ ಜೊತೆ ಅಲ್ಲಿಯ ಜಾತ್ರಾ ಮಹೋತ್ಸವವನ್ನು ಕುಳಿತಲ್ಲಿಂದಲೇ ಕಣ್ತುಂಬಿಕೊಳ್ಳೋಣ ಬನ್ನಿ.

emp4ಶಿರಸಿಯ ಮಾರಿಕಾಂಬ ದೇವಾಲಯ ಉಳಿದೆಲ್ಲಾ ದೇವಾಲಯಗಳಿಗಿಂತಲೂ ವಿಭಿನ್ನವಾಗಿದ್ದು ಬಾಹ್ಯ ನೋಟಕ್ಕೆ ಅದೊಂದು ಸುಂದರವಾದ ಅರಮನೆಯಂತೆಯೇ ಭಾಸವಾಗುತ್ತದೆ. ಈ ಪವಿತ್ರ ದೇವಾಲಯವನ್ನು ಪ್ರವೇಶಿಸುತ್ತಿದ್ದಂತೆ ದೇವಾಲಯದ ಇಕ್ಕೆಲಗಳಲ್ಲಿರುವ ಆನೆಗಳ ಮೂರ್ತಿಯು ನಮ್ಮನ್ನು ದೇವಾಲಯದ ಒಳಗೆ ಆಹ್ವಾನಿದರೆ, ಈ ದೇವಾಲಯದ ಪ್ರವೇಶ ದ್ವಾರದಿಂದ ಹಿಡಿದು ಕೊನೆಯವರೆಗೂ ಗೋಡೆಗಳ ಮೇಲೆ ಕೆಂಪು ಬಣ್ಣದಿಂದ ಪುರಾತನ ಕಥೆಗಳನ್ನು ಬರೆಯಲಾಗಿದೆ.

ಪುರಾಣ ಕಥೆಗಳನ್ನು ಓದಿಕೊಂದು ಮುಂದುವರೆಯುತ್ತಾ ದೇವಾಲಯದೊಳಗೆ ಪ್ರವೇಶಿಸುತ್ತಿದ್ದಂತೆ ದೊಡ್ಡ ಸಭಾಭವನವನ್ನು ಪ್ರವೇಶಿಸುತ್ತಿದ್ದಂತೆಯೇ ಎಂಟು ಕೈಗಳ, ಏಳಡಿ ಎತ್ತರದ, ವ್ಯಾಘ್ರನ ಮೇಲೆ ಆಸೀನಳಾದ ತಾಯಿ ಮಾರಿಕಾಂಬೆಯ ದರ್ಶನ ಪಡೆಯುತ್ತಿದ್ದಂತೆಯೇ ನಮ್ಮ ಮೈನಗಳು ರೋಮಾಂಚನಗೊಂಡು ಫುಳಕಿತಗೊಳ್ಳುವುದಲ್ಲದೇ, ಇಂತಹ ಸೌಭಾಗ್ಯ ಪಡೆದ ಜೀವನವೇ ಧನ್ಯ ಎನ್ನುವ ಭಾವನೆ ನಮ್ಮಲ್ಲಿ ಮೂಡಿದರೆ ಅಚ್ಚರಿಯೇನಿಲ್ಲ ದೇವಾಲಯದ ಮುಂಭಾಗದಲ್ಲಿ ಶ್ರೀ ಮಹಾಗಣಪತಿ, ಈಶ್ವರ ಮತ್ತು ಹನುಮಂತನ ಸಣ್ಣ ದೇವಾಲಯಗಳನ್ನು ಆಧುನಿಕ ರೀತಿಯಲ್ಲಿ ಪುನರ್ನಿರ್ಮಿಸಲಾಗಿದೆ.

mari2ಕರ್ನಾಟಕದಲ್ಲಿ ಶೃಂಗೇರಿ ಶಾರದಾಂಬ, ಮೈಸೂರು ಚಾಮುಂಡೇಶ್ವರಿ, ಕೊಲ್ಲೂರು ಮೂಕಾಂಬಿಕೆ ಹೀಗೆ ದೇವಿಯರಿಗೆ ಬಹಳ ಮಹತ್ವವಿದ್ದು, ಶಿರಸಿಯ ಈ ಮಾರಿಕಾಂಬಾ ದೇವಿಯನ್ನು ಕರ್ನಾಟಕದ ಎಲ್ಲಾ ದೇವಿಯರ ದೊಡ್ಡಕ್ಕ ಎಂದೇ ಪರಿಗಣಿಸಲಾಗಿದೆ. ಶ್ರೀ ಮಾರಿಕಾಂಬಾ ದೇವಾಲಯ, ಅಮ್ನೋರ ಗುಡಿ, ಮಾರಿಗುಡಿ, ದೊಡ್ಡಮ್ಮನ ದೇವಸ್ಥಾನ ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುವ ಶಿರಸಿಯ ಮಾರಿಕಾಂಬಾ ದೇವಾಲಯ ಬಹಲ ಶಕ್ತಿಯುತ ದೇವಿ ಎಂದೇ ನಂಬಲಾಗಿದ್ದು. ಆ ತಾಯಿಯ ದರ್ಶನ ಪಡೆದು. ಆಕೆಯ ಬಳಿ ನಮ್ಮೆಲ್ಲಾ ಸಂಕಷ್ಟಗಳನ್ನು ಹೇಳಿಕೊಂಡು ಭಕ್ತಿಯಿಂದ ಆರಾಧಿಸಿದಲ್ಲಿ ಖಂಡಿತವಾಗಿ ಆಕೆ ನಮ್ಮೆಲ್ಲಾ ಕಷ್ಟಗಳನ್ನು ದೂರಾಗಿಸಿ, ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ಕರುಣಿಸುತ್ತಾಳೆ ಎನ್ನುವುದೇ ಸಕಲ ಭಕ್ತರ ನಂಬಿಕೆಯಾಗಿದೆ. ಹಾಗಾಗಿ ಪ್ರತಿದಿನವೂ ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ತಾಯಿಯ ದರ್ಶನವನ್ನು ಪಡೆದು ಪುನೀತರಾಗುತ್ತಾರೆ.

ಶಿರಸಿಯಲ್ಲಿ ಮಾರಿಕಾಂಬೆ ಪ್ರತಿಷ್ಠಾಪನೆ ಆಗುವ ಹಿಂದಿನ ಕಥೆ ಬಹಳ ರೋಚಕವಾಗಿದೆ. ದ್ವಾರರಯುಗದಲ್ಲಿ ವಿರಾಟ ನಗರವಾಗಿತ್ತು ಎಂದೇ ನಂಬಲಾಗಿರುವ ಈಗಿನ ಹಾನಗಲ್ಲಿನಲ್ಲಿ ಧರ್ಮರಾಯನು ಈ ದೇವಿಯನ್ನು ಸ್ತುತಿಸಿದನು ಎಂದು ಮಹಾಭಾರತದಲ್ಲಿ ಹೇಳಲಾಗಿದ್ದರೆ, ಚಾಲುಕ್ಯರ ಕಾಲದ ಶಾಸನದಲ್ಲಿ ಕೂಡ ಇದರ ಉಲ್ಲೇಖವಿದೆ.

ಹಾನಗಲ್ಲಿನಲ್ಲಿ ಜಾತ್ರೆ ಮುಗಿದ ನಂತರ ಆಭರಣಗಳ ಸಮೇತವಾಗಿ ದೇವಿಯನ್ನು ಒಂದು ಪೆಟ್ಟಿಗೆಯಲ್ಲಿ ಹಾಕಿಡುವುದು ಅಲ್ಲಿನ ಸಂಪ್ರದಾಯವಾಗಿರುತ್ತದೆ. ಅದೊಮ್ಮೆ ಕೆಲವು ಕಳ್ಳರು ಆ ಆಭರಣಗಳ ಪೆಟ್ಟಿಗೆಯನ್ನು ಅಪಹರಿಸಿ ಅದನ್ನು ಶಿರಸಿಗೆ ತಂದು, ಆಭರಣಗಳನ್ನು ಹಂಚಿಕೊಂಡ ನಂತರ ಅದರ ಜೊತೆಯಲ್ಲಿದ್ದ ವಿಗ್ರಹವನ್ನು ಅದೇ ಪೆಟ್ಟಿಗೆಯಲ್ಲಿಟ್ಟು ಅಲ್ಲಿದ ಕೆರೆಗೆ ಎಸೆಯುತ್ತಾರೆ. ಹೀಗೆ ದೇವಿ ಇದ್ದ ಕೆರೆ ಮುಂದೆ ದೇವಿಕೆರೆ ಎಂದೇ ಹೆಸರಾಗುತ್ತದೆ.

ಶಿರಸಿಯಲ್ಲಿದ್ದ ಬಸವ ಎಂಬ ಭಕ್ತರೊಬ್ಬರು, ಪ್ರತಿ ವರ್ಷವೂ ತಪ್ಪದೇ ಚಂದ್ರಗುತ್ತಿಯ ಜಾತ್ರೆಗೆ ಹೋಗುವ ಸಂಪ್ರದಾಯವನ್ನು ಮಾಡಿಕೊಂಡಿರುತ್ತಾರೆ. ಅದೊಮ್ಮೆ ಹಾಗೆ ಜಾತ್ರೆಗೆ ಹೊಗುವಾಗ ಕೆಲವರು ಅವರನ್ನು ತಡೆದು ದರೋಡೆ ಮಾಡಿದ್ದರಿಂದ ಬೇಸರಗೊಂಡು ಮುಂದಿನ ವರ್ಷ ಚಂದ್ರಗುತ್ತಿಯ ಜಾತ್ರೆಗೆ ಹೋಗದೆ ಶಿರಸಿಯ ತನ್ನ ಮನೆಯಲ್ಲಿಯೇ ದೇವಿಯ ಆರಾಧನೆ ಮಾಡುತ್ತಾನೆ. ಅಂದಿನ ರಾತ್ರಿ ದೇವಿ ದ್ಯಾಮವ್ವ ಆತನ ಕನಸಿನಲ್ಲಿ ಕಾಣಿಸಿಕೊಂಡು ನಾನು ನಿಮ್ಮೂರಿನ ಕೆರೆಯಲ್ಲಿಯೇ ಇದ್ದೇನೆ. ನನ್ನನ್ನು ಮೇಲೆತ್ತಿ ಪೂಜಿಸಿ ಎಂದು ಹೇಳಿದಂತಾಗುತ್ತದೆ. ಮರು ದಿನ ತಾನು ಕಂಡ ಕನಸನ್ನು ಆ ಊರಿನ ಪ್ರಮುಖರಿಗೆ ತಿಳಿಸಿ, ಅವರ ಸಮ್ಮುಖದಲ್ಲಿಯೇ ಬಸವನು ದೇವಿಯನ್ನು ಭಕ್ತಿಯಿಂದ ಸ್ತುತಿಸುತ್ತಾ ಆ ಕೆರೆಯನ್ನು ಮೂರು ಸುತ್ತು ಪ್ರದಕ್ಷಿಣಿ ಹಾಕುತ್ತಿದ್ದಂತೆಯೇ, ದೇವಿಯಿದ್ದ ಪೆಟ್ಟಿಗೆಯು ಕೆರೆಯಲ್ಲಿ ತೇಲುವುದನ್ನು ಕಂಡು ಅದನ್ನು ತೆರೆದು, ಅದರಲ್ಲಿದ್ದ ಎಲ್ಲಾ ಭಾಗಗಳನ್ನು ಸೇರಿಸಿದಾಗ ಸುಂದರವಾದ ದೇವಿಯ ವಿಗ್ರಹವಾಗುತ್ತದೆ.

ಅಲ್ಲಿನ ಸೋಂದಾ ಸಂಸ್ಥಾನದ ರಾಜರಾಗಿದ್ದ ಮಹಾರಾಜಾ ಸದಾಶಿವರಾವ್-2 ಅವರ ಬಳಿ ನಂದಿಕೇಶ್ವರ ಮಠದ ಸ್ವಾಮಿಗಳು ಆ ದೇವಿಯ ವಿಗ್ರಹವನ್ನು ಶಿರಸಿಯಲ್ಲಿ ಸ್ಥಾಪಿಸಲು ಅನುಮತಿ ಕೋರಿ, ಅವರ ಅಪ್ಪಣೆಯಂತೆ ಕ್ರಿ.ಶ. 1689ರಲ್ಲಿ, ಅರ್ಥಾತ್ ಶಾಲಿವಾಹನ ಶಕೆ 1611ರ ಶುಕ್ಲ ಸಂವತ್ಸರದ ವೈಶಾಖ ಶುದ್ಧ ಅಷ್ಟಮಿ ಮಂಗಳವಾರದಂದು ದೇವಿಯನ್ನು ಪ್ರತಿಷ್ಠಾಪಿಸಿ ಅಲ್ಲೊಂದು ಸುಂದರವಾದ ದೇವಾಲಯವನ್ನು ಕಟ್ಟಲಾಗುತ್ತದೆ.

ಕೆಂಪು ಚಂದನದ ಕಲ್ಪನೆಯಿಂದ ಕಡೆದ ಅಷ್ಟಭುಜವುಳ್ಳ ಏಳು ಅಡಿ ಎತ್ತರದ ಕಲಾಪೂರ್ಣ ವಿಗ್ರಹ, ಕೆಂಪು ಮೈಬಣ್ಣ, ಮಂದಹಾಸದ ಮುಖಾರವಿಂದ, ಶಕ್ತಿ ಮತ್ತು ಹಸ್ತದಲ್ಲಿರುವ ಎಲ್ಲಾ ಆಯುಧಗಳಿಂದಲೂ ದೇವಿ ಪರಿಭೂಷಿತಳು. ಬಲಮುರಿ ಶಂಖವೂ ಮಾರಿಕಾಂಬೆಯ ಬಲಹಸ್ತವೊಂದರದಲ್ಲಿದೆ. ಶಿರಸಿಯ ವೈಭವಕ್ಕೆ ಮತ್ತು ಸಂಪನ್ಮೂಲಕ್ಕೆ ತಾಯಿಯ ಬಲಮುರಿಯೇ ಕಾರಣವೆಂದು ಅಲ್ಲಿನ ಸ್ಥಳೀಯರ ನಂಬಿಕೆಯಗಿದೆ.

mari10ಶಿರಸಿಯಲ್ಲಿ 2 ವರ್ಷಗಳಿಗೊಮ್ಮೆ ಮಾರ್ಚ್ ತಿಂಗಳಿನಲ್ಲಿ ಬಹಳ ಅದ್ದೂರಿಯಿಂದ ೯ ದಿನಗಳ ಕಾಲ ಜಾತ್ರೆಯನ್ನು ಆಚರಿಸಲಾಗುತ್ತದೆ. ಜಾತ್ರೆನಡೆಯುವ ಸಂದರ್ಭದಲ್ಲಿಯೇ ಹೋಳಿಹಬ್ಬ ಬರುವ ಕಾರಣ ಜಾತ್ರೆ ಇದ್ದ ವರ್ಷ ಕಾಮನ ಹುಣ್ಣಿಯೆನ್ನು ಇಲ್ಲಿ ಆಚರಿಸುವುದಿಲ್ಲ. ಈ ಶಿರಸಿ ಜಾತ್ರೆಯನ್ನು ಸ್ಥಳೀಯರು ಮಾರಿ ಜಾತ್ರೆ ಎಂದೇ ಕರೆಯುತ್ತಾರೆ. ಸಾಮಾನ್ಯವಾಗಿ ಉಳಿದೆಲ್ಲಾ ಜಾತ್ರೆಗಳಲ್ಲಿ ಮೂಲ ವಿಗ್ರಹಗಳು ದೇವಾಲಯದಲ್ಲಿಯೇ ಇದ್ದು ಅದರ ಉತ್ಸವ ಮೂರ್ತಿಯನ್ನು ರಥ ಅಥವಾ ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮಾಡಿದರೆ, ಇಲ್ಲಿ ಮಾತ್ರಾ, 7 ಅಡಿ ಎತ್ತರದ ವಿಗ್ರಹವನ್ನೇ ಅಲಂಕಾರ ಸಮೇತ ಮದುವೆ ಮಾಡಿ ಮೆರವಣಿಗೆಯಲ್ಲಿ ಬಿಡಕಿ ಬೈಲಿಗೆ ತಂದು ಭಕ್ತರಿಗೆ ದೇವಿಯ ನಿಕಟ ದರ್ಶನ ನೀಡುವ ಸಂಪ್ರದಾಯ ಇಲ್ಲಿ ರೂಢಿಯಲಿದೆ. ವಜ್ರ, ನವರತ್ನ ಖಚಿತ ಸ್ವರ್ಣರತ್ನ, ಹಾರ, ನೂಪುರ, ಬೆಳ್ಳಿ, ಕಡಗಗಳು, 8 ಕೈಗಳು. ಒಂದೊಂದು ಕೈಗಳಲ್ಲೂ ಒಂದೊಂದು ವಿಶಿಷ್ಟ ಆಭರಣ ಹಿಡುದು ಗದ್ದುಗೆಯಲ್ಲಿ ವಿರಾಜಮಾನಳಾದ ಕೆಂಪು ಮುಖದ ಅರಳಿದ ಕಂಗಳ ಮಹಿಷ ಮರ್ಧಿನಿ ಭಕ್ತಾದಿಗಳ ಹೃನ್ಮನಗಳನ್ನು ಸೆಳೆಯುತ್ತಾಳೆ, 9 ದಿನಗಳ ಅದ್ದೂರಿಯ ಆಚರಣೆ, ಧಾರ್ಮಿಕ ವಿಧಿವಿಧಾನಗಳ ಬಳಿಕ ದೇವಿಯನ್ನು ಪುನಃ ಗುಡಿದುಂಬಿಸಿ ಅಲ್ಲಿನ ಚಪ್ಪರಕ್ಕೆ ಬೆಂಕಿ ಹಚ್ಚಲಾಗುತ್ತದೆ.

mari6ಹೀಗೆ ಚಪ್ಪರಕ್ಕೆ ಬೆಂಕೆ ಹಚ್ಚುವ ಹಿಂದೆಯೂ ಒಂದು ಕಥೆಯಿದ್ದು, ಮಹಿಷಾಸುರನು ಸುಳ್ಳು ಹೇಳಿ ಮಾರಮ್ಮನನ್ನು ವಿವಾಹವಾಗಿರುತ್ತಾನೆ. ಈ ವಿಷಯ್ವನ್ನು ತಿಳಿದ ಆಕೆ ಮಹಿಷಾಸುರನನ್ನು ವಧಿಸಲು ಮುಂದಾದಾಗ, ಆಕೆಯಿಂದ ತಪ್ಪಿಸಿಕೊಳ್ಳಲು ರಾಕ್ಷಸ ಕೋಣದ ದೇಹದ ಒಳಗೆ ಸೇರಿಕೊಳ್ಳುತ್ತಾನೆ. ಆಗ ಕೋಣನ ಕತ್ತನ್ನು ಕಡಿದು ಅದನ್ನು ತನ್ನ ಕೊರಳಿಗೆ ಹಾಕಿಕೊಂಡು ರೋಷಾವೇಶದಿಂದ ತಾಯಿ ಮಾರಿಕಾಂಬೆ ಮಹಿಷಾಸುರನ ಮರ್ಧನ ಮಾಡುತ್ತಾಳೆ. ಅದರ ಸಾಂಕೇತಿಕವಾಗಿಯೇ ಅಂದಿನಿಂದ ಪ್ರತೀವರ್ಷವೂ ಈ ದೇವಾಲಯದ ವತಿಯಿಂದಲೇ ಬಲಿಷ್ಠ ಕೊಣವೊಂದನ್ನು ಸಾಕಿ ಜಾತ್ರೆಯ ಸಮಯದಲ್ಲಿ ಕಡಿದು ದೇವಿಗೆ ಅರ್ಪಿಸುವ ಸಂಪ್ರದಾಯ ನೂರಾರು ವರ್ಷಗಳ ಕಾಲ ರೂಢಿಯಲ್ಲಿತ್ತು. 1963ರಲ್ಲಿ ಸಾಗರದ ಶ್ರೀ ಶ್ರೀಧರ ಸ್ವಾಮಿಗಳು ದೇವಿಯ ಉಗ್ರತೆಯನ್ನು ಕಡಿಮೆ ಮಾಡಿ ಪ್ರಾಣಿ ಬಲಿ ನಿಲ್ಲಿಸಿದ್ದಲ್ಲದೇ, ಮಾರಿಗೆ ಬಿಟ್ಟ ಕೋಣನನ್ನು ಜಾತ್ರೆಗೆ ಮೊದಲು ಊರಿನ ತುಂಬಾ ಸುತ್ತಿಸಿ ಜಾತ್ರೆಯ ಸಮಯಯಲ್ಲಿ ಕೋಣನ ಬಲಿಯ ಬದಲಾಗಿ ಸಾಂಕೇತಿಕವಾಗಿ ಸಾತ್ವಿಕ ಬಲಿರೂಪದಲ್ಲಿ ಬೂದಕುಂಬಳಕಾಯಿಯನ್ನು ನೀಡುವ ಸಂಪ್ರದಾಯವನ್ನು ಜಾರಿಗೆ ತಂದರು ಎಂದು ಸ್ಥಳೀಯರು ಹೇಳಿದರೆ, ಇನ್ನೂ ಕೆಲವರು ಚುಚ್ಚು ಮದ್ದಿನ ಸೂಜಿಯಿಂದ ಮರಿಗೆ ಬಿಟ್ಟ ಕೋಣದ ರಕ್ತವನ್ನು ಹೀರಿ ದೇವಿಗೆ ಅರ್ಪಿಸಲಾಗುತ್ತದೆ ಎಂದೂ ಹೇಳುತ್ತಾರೆ. ಅಂದಿನಿಂದ ಉಳಿದ ದೇವಿಯ ಜಾತ್ರೆಗಳಂತೆಯೇ ಇಲ್ಲಿ ಪ್ರಾಣಿ ಬಲಿ ಸಂಪೂರ್ಣವಾಗಿ ನಿಷೇಧವಾಗಿದೆ.

ಮತ್ತೊಂದು ಜನಪದ ಕಥೆಯಂತೆ ವೇದಾಧ್ಯಯನ ಕಲಿಯುವ ಆಸೆಯಿಂದ ಅನ್ಯಜಾತಿಯ ಹುಡುಗನೊಬ್ಬ ಸುಳ್ಳು ಹೇಳಿ ಮೋಸದಿಂದ ಬ್ರಾಹ್ಮಣ ಹುಡುಗಿಯನ್ನು ಮದುವೆಯಾಗಿ ಸಾತ್ವಿಕವಾಗಿ ಸುಖಃ ಸಂಸಾರವನ್ನು ನಡೆಸುತ್ತಿರುತ್ತನೆ. ಅದೊಮ್ಮ ಜಿಹ್ವಾಹಂಬಲವನ್ನು ಮೀರಲಾಗದೇ, ಮಾಂಸವನ್ನು ತಿನ್ನುವಾಗ ತನ್ನ ಹೆಂಡತಿಯ ಕೈಯಲ್ಲಿ ಸಿಕ್ಕಿ ಬಿದ್ದು ಆಕೆಯಿಂದ ಹತನಾಗುತ್ತಾನೆ. ಇದರ ಸಂಕೇತಿಕವಾಗಿಯೇ, ಜಾತ್ರಾಮಹೋತ್ಸವದ ಆರಂಭದ ಮೊದಲು ದೇವಿಗೆ ರಕ್ತವನ್ನು ತಿಲಕವಾಗಿ ಇಟ್ಟು ನಂತರ ದೇವಿಯನ್ನು ಬಿಡಕಿ ಬೈಲಿನ ಗದ್ದುಗೆಗೆ ತಂದು 9 ದಿನಗಳ ಅದ್ದೂರಿ ಜಾತ್ರಾ ಮಹೋತ್ಸವವನ್ನು ಆಚರಣೆ ಮಾಡುವ ಸಂಪ್ರದಾಯವಿದೆ.

ಜಾತ್ರೆ ಮುಗಿದು 40 ದಿನಗಳ ದೇವಿ ಅಶೌಚಳಾಗಿದ್ದರಿಂದ ದೇವಸ್ಥಾನದ ಬಾಗಿಲನ್ನು ಮುಚ್ಚಲಾಗುವ ಕಾರಣ, ಈ ಸಮಯದಲ್ಲಿ ಭಕ್ತರಿಗೆ ದೇವಾಲಯಕ್ಕೆ ಪ್ರವೇಶವಿರುವುದಿಲ್ಲ. ಆ ಸಮಯದಲ್ಲಿ ವಿಗ್ರಹವನ್ನು ಧಾರ್ಮಿಕ ಆಚರಣೆಯ ಮೂಲಕ ನೀರಿನಲ್ಲಿ ಮುಳುಗಿಸಿಟ್ಟು 40 ದಿನಗಳು ಮುಗಿದು ಸೂತಕ ಕಳೆದ ಮೇಲೆ ಮತ್ತೆ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿ ಎಂದಿನಂತೆ ಪೂಜೆ ಪುನಸ್ಕಾರಗಳನ್ನು ಅದ್ದೂರಿಯಿಂದ ಮಾಡಲಾಗುತ್ತದೆ.

ಶಿರಸಿಯ ಜಾತ್ರೆಗೆ ಕೇವಲ ಸ್ಥಳೀಯರಲ್ಲದೇ, ನೆರೆಯ ಮಹಾರಾಷ್ಟ್ರ, ಗೋವಾ, ತಮಿಳುನಾಡು, ಕೇರಳ ಸೇರಿದಂತೆ ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತಾದಿಗಳು ಆಗಮಿಸಿ ಜಾತ್ರೆಯಲ್ಲಿ ಜನಸಾಗರವನ್ನು ಕಾಣಬಹುದಾಗಿದೆ. ಎಲ್ಲಿ ನೋಡಿದರಲ್ಲಿ ಜನಜಂಗುಳಿ, ಕಣ್ಣು ಕುಕ್ಕುವ ವಿದ್ಯುತ್ ದೀಪಗಳು, ವಿವಿಧ ಪೌರಾಣಿಕ ನಾಟಕಗಳು, ಯಕ್ಷಗಾನ ಪ್ರದರ್ಶನಗಳು ಆಸ್ತಿಕರ ಮನಸ್ಸೆಳ್ಯುತ್ತವೆ. ಇನ್ನು ಜಾತ್ರೆಗೆ ಬರುವ ಮಕ್ಕಳ ಆಕರ್ಷಣೆಗಾಗಿ ವಿವಿಧ ಆಟಿಕೆಗಳು, ಕಡಲೇ ಪುರಿ ಬೆಂಡು ಬತ್ತಾಸು ಬಾಯಿ ಸಿಹಿ ಮಾಡುವ ಮಿಠಾಯಿ, ತರಹೇವಾರಿ ತಿಂಡಿಗಳ ಜೊತೆ ಸರ್ಕಸ್ ಕಂಪೆನಿಗಳು ಮನರಂಜನೆಯನ್ನು ನೀಡಿದರೆ ಹೆಂಗಳೆಯರಿಗಾಗಿಯೇ ಬಳೆ, ಓಲೆ, ಚೌರೀ, ಕುಚ್ಚುಗಳಲ್ಲದೇ ವಿವಿಧ ರೀತಿಯ ಆಭರಣಗಳ ಸಾಲು ಸಾಲು ಅಂಗಡಿಗಳನ್ನು ಅಲ್ಲಿ ಕಾಣಬಹುದಾಗಿರುತ್ತದೆ. ಜಾತ್ರೆಯ ಸಮಯದಲ್ಲಿ ಭಕ್ತಾದಿಗಳ ಹಸಿವನ್ನು ನೀಗಿಸಲು ಖಾನಾವಳಿಗಳು, ದರ್ಶಿನಿಗಳು ಸಹಾ ಅಲ್ಲಿ ಸಿದ್ಧವಾಗಿರುತ್ತದೆ.

ಇಷ್ಟೆಲ್ಲಾ ಮಾಹಿತಿಗಳು ತಿಳಿದ ಮೇಲೆ ಇನ್ನೇಕೆ ತಡಾ, ಬೆಂಗಳೂರಿನಿಂದ ಸುಮಾರು 400 ಕಿಮೀ, ಹುಬ್ಬಳ್ಳಿಯಿಂದ ಕೇವಲ 103 ಕಿಮೀ ಗೋಕರ್ಣದಿಂದ 83 ಕಿಮೀ ದೂರದಲ್ಲಿರುವ ಶಿರಸಿಗೆ ಬಂದು ಶ್ರೀ ಮಾರಿಕಾಂಬೆಯ ದರ್ಶನ ಪಡೆದು ದೊಡ್ಡಮ್ಮನ ಜಾತ್ರೆಯಲ್ಲಿ ಪಾಲ್ಗೊಂಡು ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ತಾನೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s