ಸೌತಡ್ಕ ಶ್ರೀ ಮಹಾಗಣಪತಿ

ಸಾಮಾನ್ಯವಾಗಿ ಒಂದು ಪುರಾತನ ದೇವಸ್ಥಾನ ಎಂದ ತಕ್ಷಣವೇ ನಮ್ಮ ಮನಸ್ಸಿನಲ್ಲಿ ಮೂಡುವುದೇ ವಿಶಾಲವಾದ ಪ್ರದೇಶದಲ್ಲಿ ಎತ್ತರವಾದ ರಾಜಗೋಪುರವನ್ನು ದಾಟಿ ಒಳಗೆ ಹೋಗುತ್ತಿದ್ದಲ್ಲಿ ನೂರಾರು ಸುಂದರವಾಗಿ ನಿಲ್ಲಿಸಿರುವ ಕಲ್ಲುಗಳ ಕಂಬ ಅದರಲ್ಲಿ ಶಿಲ್ಪಿಯ ಕೈ ಚಳಕದಿಂದ ಮೂಡಿರುವ ವಿವಿಧ ಆಕೃತಿಗಳ ಮಧ್ಯದಲ್ಲಿರುವ ಗರ್ಭಗುಡಿ ಇರುವ ದೇವಸ್ಥಾನ. ಇನ್ನು ವಾಸ್ತುಪ್ರಕಾರ ದೇವಸ್ಥಾನವೆಂದರೆ, ಗರ್ಭಾಂಕಣ, ನವರಂಗ, ಮುಖ ಮಂಟಪ, ಪ್ರಾಕಾರ ಮತ್ತು ರಾಜಗೋಪುರಗಳು ಇರಲೇಬೇಕೆಂಬ ನಿಯಮವಿದೆ. ಇಲ್ಲಿನ ದೇವಸ್ಥಾನಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದ್ದರೂ ಇಂದಿಗೂ ಬಯಲು ಮಂದಿರದಲ್ಲೇ ಇರುವ ಸುಂದರ ದೇವಸ್ಥಾನದ ಇತಿಹಾಸವನ್ನು ಕುಳಿತಲ್ಲಿಂದಲ್ಲಿಯೇ ತಿಳಿಯೋಣ ಬನ್ನಿ.

ಇಷ್ಟೆಲ್ಲಾ ಸುಳಿವು ನೀಡಿದ ಮೇಲೆ ನಾವಿಂದು ಹೇಳಲು ಹೊರಟಿರುವ ಪ್ರದೇಶವನ್ನು ಖಂಡಿತವಾಗಿಯೂ ಸರಿಯಾಗಿ ಗುರುತಿಸಿರುತ್ತೀರಿ. ಹೌದು ಪುರಾಣ ಪ್ರಸಿದ್ಧ ಕುಕ್ಕೇ ಸುಬ್ರಹ್ಮಣ್ಯದಿಂದ 40.3 km ದೂರದಲ್ಲಿರುವ ಶ್ರೀಕ್ಷೇತ್ರ ಧರ್ಮಸ್ಥಳದಿಂದ ಕೇವಲ 17.6 km ದೂರದಲ್ಲಿ ಚೊಕ್ಕಡದ ಬಯಲಿನಲ್ಲಿಯೇ ಭಕ್ತರ ಭವರೋಗಗಳನ್ನು ನಿರಾರಿಸುತ್ತಿರುವ ಸೌತಡ್ಕದ ಶ್ರೀ ಮಹಾಗಣಪತಿ ಅತ್ಯಂತ ಪವಿತ್ರವಾದ ಶ್ರೀ ಕ್ಷೇತ್ರವಾಗಿದೆ.

gan2ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಂಡಿ ತಾಲ್ಲೂಕಿಗೆ ಸೇರಿರುವ ಸೌತಡ್ಕದ ಶ್ರೀ ಮಹಾ ಗಣಪತಿ ಕ್ಷೇತ್ರ ಜಿಲ್ಲೆಯ ಅನೇಕ ಸಿದ್ಧಿ ಕ್ಷೇತ್ರಗಳಲ್ಲಿ ಒಂದಾಗಿದ್ದರೂ ಈ ದೇವಾಲಯದ ಅಸ್ತಿತ್ವದ ಬಗ್ಗೆ ಅನೇಕರಿಗೆ ಮಾಹಿತಿಯೇ ಇಲ್ಲದಿರುವುದು ನಿಜಕ್ಕೂ ಅಚ್ಚರಿಯನ್ನು ಮೂಡಿಸುತ್ತದೆ. ಉಳಿದೆಲ್ಲಾ ದೇವಾಲಯಗಳಂತೆ ಗರ್ಭ ಗುಡಿ ಮತ್ತು ದೇವಸ್ಥಾನದ ರಚನೆ ಇಲ್ಲದೇ ಆಕರ್ಷಕವಾಗಿ ಪ್ರಶಾಂತವಾದ ಹಚ್ಚ ಹಸಿರಿನ ನಿತ್ಯಹರಿದ್ವರ್ಣ ಕಾನನದ ಮಧ್ಯೆ, ತೆರೆದ ಮೈದಾನದಲ್ಲಿ ಶ್ರೀ ಮಹಾ ಗಣಪತಿಯ ಪ್ರತಿಷ್ಠಾಪನೆಗೊಂಡಿದ್ದು ದಿನದ 24 ಗಂಟೆಗಳು ಭಕ್ತರಿಗೆ ದರ್ಶನವನ್ನು ನೀಡುವಂತಿದೆ. ಗಣಪತಿ ವಿಗ್ರಹದ ಮುಂಭಾಗದಲ್ಲಿ ಹತ್ತಾರು ಕಮಾನುಗಳನ್ನು ನಿರ್ಮಿಸಲಾಗಿದ್ದು ಆ ಕಮಾನಿನ ಅಕ್ಕ ಪಕ್ಕದಲ್ಲಿ ನಾನಾ ಗಾತ್ರದ ನಾನಾ ನಮೂನೆಯಲ್ಲಿ ವಿಶೇಷವಾಗಿ ನಿರ್ಮಿಸಕಾದ ಘಂಟೆಗಳಿಂದ ಅಲಂಕರಿಸಿರುವುದು ಈ ಸ್ಥಳವನ್ನು ಮತ್ತಷ್ಟು ಆಕರ್ಷಣೀಯವನ್ನಾಗಿಸುತ್ತದೆ. ಹರಕೆ ಹೊತ್ತು ಈ ಸ್ಥಳಕ್ಕೆ ಬಂದು ಈ ದೇವರ ಮುಂದೆ ತಮ್ಮ ಮನೋಭಿಲಾಷೆಳನ್ನು ಶ್ರದ್ಧಾ ಭಕ್ತಿಯಿಂದ ಕೋರಿಕೊಂಡ ಎರಡೇ ತಿಂಗಳುಗಳಲ್ಲಿ ಅವರ ಕೋರಿಕೆಗಳೆಲ್ಲವೂ ಈಡೇರಿದ ನಂತರ ಭಕ್ತಾದಿಗಳೇ ಈ ರೀತಿಯ ವಿವಿಧ ಗಂಟೆಗಳನ್ನು ಈ ದೇವಾಲಯಕ್ಕೆ ಕೊಡುಗೆಯನ್ನಾಗಿ ನೀಡುವುದು ಇಲ್ಲಿನ ವಿಶೇಷವಾಗಿದೆ.

cucumberಈ ಸ್ಥಳಕ್ಕೆ ಸೌತಡ್ಕ ಎಂಬ ಹೆಸರು ಬರುವ ಹಿಂದಿರುವ ಕಥೆ ಅತ್ಯಂತ ರೋಚಕವಾಗಿದೆ. ಸುಮಾರು 800 ವರ್ಷಗಳ ಹಿಂದೆ, ಸ್ಥಳೀಯ ರಾಜಮನೆತನದ ಆಡಳಿತದಲ್ಲಿದ್ದ ಈ ಪ್ರದೇಶದ ಸಮೀಪದ ದೇವಸ್ಥಾನವೊಂದು ಯುದ್ಧದಲ್ಲಿ ನಾಶವಾಗಿ ಕೇವಲ ಗಣೇಶನ ವಿಗ್ರಹವೊಂದೆ ಉಳಿದು ಹೋಗಿದೆ. ಯುದ್ದದಿಂದಾಗಿ ಇಡೀ ಊರಿಗೆ ಊರೇ ಪಾಳು ಬಿದ್ದಕಾರಣ ಅ ಪ್ರದೇಶಕ್ಕೆ ಸುಮಾರು ವರ್ಷಗಳ ಕಾಲ ಜನವಸತಿ ಇಲ್ಲದೇ ಕಾಡು ಮೇಡುಗಳಿಂದ ಆವೃತವಾಗಿ ಹೋಗಿದೆ. ಅದೊಮ್ಮೆ ದನ ಕಾಯುವ ಹುಡುಗರು ತಮ್ಮ ಕಳೆದು ಹೋದ ಹಸುವನ್ನು ಹುಡುಕಿಕೊಂಡು ಹೋಗುತ್ತಿದ್ದ ಸಮಯದಲ್ಲಿ ಈ ಸುಂದರವಾದ ಗಣೇಶನ ವಿಗ್ರಹವನ್ನು ಕಂಡು ಆದಷ್ಟು ಬೇಗೆ ತಮ್ಮ ಕಳೆದು ಹೋದ ಹಸು ಸಿಗುವಂತೆ ಆಶೀರ್ವದಿಸು ಎಂದು ಬೇಡಿ ಕೊಂಡಿದ್ದಾರೆ. ಕಾಕತಾಳೀಯವೋ ಇಲ್ಲವೇ ಆ ದೈವ ಬಲವೋ ಎನ್ನುವಂತೆ ತಕ್ಷಣವೇ ಆ ದನಗಾಹಿಗಳಿಗೆ ಕಳೆದು ಹೋದ ಹಸು ಸಿಕ್ಕ ಸಂತೋಷದಲ್ಲಿ ಅಲ್ಲಿಯೇ ಬೆಳೆದಿದ್ದ ಸೌತೇಕಾಯಿಯನ್ನು ನೈವೇದ್ಯವಾಗಿ ಅರ್ಪಿಸಿದ್ದಲ್ಲದೇ, ಅಲ್ಲಿಂದ ಪ್ರತೀ ದಿನವೂ ಆ ಮುಗ್ಧ ಹುಡುಗರು ಆ ಪ್ರದೇಶದಲ್ಲಿ ಯಥಾ ಶಕ್ತಿ ಪೂಜೆ ಮತ್ತು ಭಜನೆಗಳನ್ನು ಆರಂಭಿಸಿದ್ದಲ್ಲದೇ, ಪ್ರತಿದಿನವೂ ಅವರು ಆ ಗಣೇಶನಿಗೆ ಆ ಪ್ರದೇಶದಲ್ಲಿ ಸುಲಭವಾಗಿ ದೊರಕುತ್ತಿದ್ದ ಸೌತೆಕಾಯಿಯನ್ನು ನೈವೇದ್ಯವಾಗಿ ಅರ್ಪಿಸಿದ ಕಾರಣ ಈ ಪ್ರದೇಶಕ್ಕೆ ಸೌತಡ್ಕ ಎಂದು ಎಂಬ ಹೆಸರಾಯಿತು ಎನ್ನುವುದು ಇಲ್ಲಿನ ಜನರ ನಂಬಿಕೆಯಾಗಿದೆ. ಕನ್ನಡದಲ್ಲಿ ಸೌತೇ ಎಂದರೆ ಅಡುಗೆಯಲ್ಲಿ ಬಳಸುವ ಸೌತೆಕಾಯಿ ಎಂಬ ಪದಾರ್ಥವಾಗಿದ್ದು ಅಡ್ಕಾ ಎಂದರೆ ವಿಶಾಲವಾದ ಬಯಲು ಎಂಬರ್ಥ ಮೂಡುತ್ತದೆ. ಹೀಗೆ ಸೌತೆ + ಅಡ್ಕ ಸೇರಿಕೊಂಡು ಸೌತಡ್ಕವಾಗಿದೆ.

ta2ಕೆಲ ವರ್ಷಗಳ ಹಿಂದೆ ಭಕ್ತಾದಿಗಳು ಮಹಾಗಣಪತಿಗೆ ಭವ್ಯವಾದ ಮಂದಿರವನ್ನು ಕಟ್ಟುವ ಸಲುವಾಗಿ ಜ್ಯೋತಿಷಿಗಳನ್ನು ಕರೆಸಿ ಅಷ್ಟಮಂಗಲ ಪ್ರಶ್ನೆಯಿಟ್ಟಾಗ, ಸ್ವಾಮಿಗೆ ಯಾವುದೇ ರೀತಿಯ ಗುಡಿ ಗೋಪುರ ಕಟ್ಟುವುದು ಮನಸ್ಸಿಲ್ಲವೆಂದೂ, ಯಾವುದೇ ರೀತಿಯ ಬಂಧನಕ್ಕೆ ಅವಕಾಶ, ಶುಭ್ರ ನೀಲಾಕಾಶದ ಅಡಿಯಲ್ಲಿರಮಣೀಯವಾದ ಪ್ರಕೃತಿಯ ತಾಣದ ಮಧ್ಯೆ ಸಕಲ ಜೀವರಾಶಿಗಳಿಗೂ ಸ್ವಇಚ್ಛೆಯಂತೆ ಮುಕ್ತ ಪ್ರವೇಶಕ್ಕೆ ಅವಕಾಶ ಕಾದಿರಿಸಿಕೊಂಡು ಬರತಕ್ಕದ್ದೆಂದು ಎಂಬ ಅಪ್ಪಣೆ ಬಂದ ಕಾರಣ, ದೇವಾಲಯವನ್ನು ಕಟ್ಟುವ ಯೋಜನೆಯನ್ನು ಕೈಬಿಟ್ಟು ಯಾವುದೇ ರೀತಿಯ ಧರ್ಮ, ಜಾತಿಯ ತಾರತಮ್ಯವಿಲ್ಲದೇ ಭಗವಂತನ ಸೇವೆಯನ್ನು ಮಾಡಿಕೊಂಡು ಬರಲಾಗುತ್ತಿದೆ

ಶ್ರೀ ಕ್ಷೇತ್ರದಲ್ಲಿ ಪ್ರತಿದಿನವೂ ತಪ್ಪದೇ ಗಣಹೋಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ಪ್ರತೀ ತಿಂಗಳ ಸಂಕಷ್ಟ ಹರ ಚತುರ್ಥಿಯಂದು ಮತ್ತು ಗಣೇಶನ ಹಬ್ಬದಂದು, 108 ಗಣಹೋಮದೊಂದಿಗೆ 108 ತೆಂಗಿನಕಾಯಿ, 108 ಸಿಯಾಳ ಅಭಿಷೇಕ, ಪಂಚಾಮೃತ, ಅಪ್ಪ ಕಜ್ಜಾಯ, ಪಾಯಸ, ನೈವೇದ್ಯ ಮತ್ತು ಹಣ್ಣುಗಳೊಂದಿಗೆ ಮಹಾಪೂಜೆಯನ್ನು ಸಲ್ಲಿಸಲಾಗುತ್ತದೆ.

prasad3ಇನ್ನು ಮಾಘ ಶುದ್ಧ ಚೌತಿಯಂದು ಶ್ರೀ ಕ್ಷೇತ್ರದಲ್ಲಿ ವಾರ್ಷಿಕ ಹಬ್ಬವಾಗಿ ಆಚರಿಸಲಾಗುತ್ತದೆ. ಈ ಶುಭ ದಿನದಂದು, 108 ನಷ್ಟು ತೆಂಗಿನಕಾಯಿ ಗಣಹೋಮದೊಂದಿಗೆ ಅಥೈವಶೀರ್ಷ ಸಹಸ್ರವರ್ತನ ಅಭಿಷೇಕ, ಪಂಚಾಮೃತ ಅಭಿಷೇಕ, ಗಣಹೋಮ ಕಲಶಾಭಿಷೇಕದೊಂದಿಗೆ ಮಧ್ಯಾಹ್ನ ಸುಮಾರು 12:30 ಕ್ಕೆ ಮಹಾಪೂಜೆ ಸಮಾಪ್ತವಾಗುತ್ತದೆ. ಅಂದು ಸಂಜೆ 07:00 ಗಂಟೆಗೆ, ಮೂಡಪ್ಪ ಸೇವೆ ಮತ್ತು ಮಹಾ ರಂಗಪೂಜೆಯೊಂದಿಗೆ ಧಾರ್ಮಿಕವಾಗಿ ಪೂಜೆ ಆರಂಭವಾಗಿ ಆದಾದ ರಾತ್ರಿ 10:00 ಗಂಟೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಭಕ್ತಾಧಿಗಳಿಗೆ ಮನೋರಂಜನೆಯನ್ನು ಮಾಡಲಾಗುತ್ತದೆ.

ಈ ದೇವಾಲಯದಲ್ಲಿ ನಡೆಸಲಾಗುವ ಅನೇಕ ಸೇವೆಗಳಲ್ಲಿ ಅವಲಕ್ಕಿ ಪಂಚಕಜ್ಜಾಯ ಸೇವೆ (ಅಕ್ಕಿ, ಬೆಲ್ಲ, ತಿಲ (ಎಳ್ಳು), ತೆಂಗಿನಕಾಯಿ, ಜೇನುತುಪ್ಪ ಮತ್ತು ಬಾಳೆಹಣ್ಣುಗಳ ರುಚಿಕರವಾದ ಮಿಶ್ರಣದ ಅಭಿಷೇಕ ಅತ್ಯಂತ ಜನಪ್ರಿಯವಾಗಿದೆ. ಪೂಜೆಯ ನಂತರ ಈ ಪ್ರಸಾದವನ್ನು ಸ್ವಲ್ಪ ಮಾತ್ರವೇ ಸೇವಿಸಿ ಉಳಿದದ್ದನ್ನು ಸುತ್ತಮುತ್ತಲಿನ ಗೋವುಗಳಿಗೆ ಹಂಚುವುದು ಇಲ್ಲಿನ ಸಂಪ್ರದಾಯವಾಗಿದೆ.

ಈ ದೇವಸ್ಥಾನ ಬಯಲಿನಲ್ಲಿ ಇರುವ ಕಾರಣ ಇಲ್ಲಿ ಕೋತಿಗಳ ಸಂಖ್ಯೆ ತುಸು ಹೆಚ್ಚಾಗಿದ್ದು ಭಕ್ತಾದಿಗಳು ತಮ್ಮೊಂದಿಗೆ ತಂದ ಚೀಲದ ಬಗ್ಗೆ ತುಸು ಹೆಚ್ಚಿನ ಗಮನವನ್ನು ವಹಿಸಬೇಕಾಗಿದೆ. ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆಂದು ಪ್ರತೀ ದಿನ ಮಧ್ಯಾಹ್ನ 12:30 ಕ್ಕೆ ಅನ್ನಸಂತರ್ಪಣವನ್ನು ದೇವಾಲಯದವತಿಯಿಂದ ಇದ್ದು ಆಧುನಿಕ ಶೈಲಿಯಲ್ಲಿ ನೈರ್ಮಲ್ಯತೆಯಿಂದ ಅತ್ಯಂತ ಶುಚಿ ರುಚಿಯಾಗಿರುವ ಪ್ರಸಾವನ್ನು ಇಲ್ಲಿ ಸೇವಿಸಬಹುದಾಗಿದೆ.

gan1ಶ್ರದ್ಧಾ ಭಕ್ತಿಯಿಂದ ಈ ವಿದ್ಯಾಗಣಪತಿಯನ್ನು ಪ್ರಾರ್ಥಿಸಿದಲ್ಲಿ. ವಿದ್ಯಾ ಬುದ್ಧಿಗಳು ಪ್ರಾಪ್ತವಾಗುತ್ತದೆ ಎನ್ನುವ ನಂಬಿಕೆ ಇಲ್ಲಿಗೆ ಬರುವ ಭಕ್ತಾದಿಗಳಿಗಿದೆ. ಹಾಗಾಗಿ ಈ ಕ್ಷೇತ್ರದಲ್ಲಿ ಚಿಕ್ಕ ಮಕ್ಕಳಿಗೆ ಮೊದಲ ಬಾರಿಗೆ ಅನ್ನಪ್ರಾಶನ ಮಾಡಿಸುತ್ತಾರೆ. ಹಣದ ಸಮಸ್ಯೆ ಮತ್ತು ದಂಪತಿಗಳಿಗೆ ಸಂತಾನದ ಸಮಸ್ಯೆ ಇದ್ದಲ್ಲಿಯೂ ಸಹಾ ಇಲ್ಲಿ ಭಕ್ತಿಯಿಂದ ಹರಸಿಕೊಂಡಲ್ಲಿ ಹಣದ ಸಮಸ್ಯೆ ಮಾಯವಾಗಿ ಸಂತಾನ ಹೀನರಿಗೆ ಸಂತಾನ ಭಾಗ್ಯ ದೊರೆಯುತ್ತದೆ ಎನ್ನುವುದು ಇಲ್ಲಿನ ಭಕ್ತಾಧಿಗಳ ನಂಬಿಕೆಯಾಗಿದೆ.

ಇಷ್ಟೆಲ್ಲಾ ಮಾಹಿತಿಗಳು ತಿಳಿದ ಮೇಲೆ ಇನ್ನೇಕೆ ತಡಾ ಸ್ವಲ್ಪ ಸಮಯ ಮಾಡಿಕೊಂಡು ಮೊದಲು ಧರ್ಮಸ್ಥಳಕ್ಕೆ ಹೋಗಿ ತಂದೆ ಮಂಜುನಾಥನ ದರ್ಶನವನ್ನು ಪಡೆದುಕೊಂಡು ಹಾಗೇ ಹಿಂದಿರುಗುವ ಮಾರ್ಗದಲ್ಲಿ ಸೌತಡ್ಕದಲ್ಲಿ ಅಣ್ಣ ಗಣೇಶನ ದರ್ಶನ ಪಡೆದು ಅಲ್ಲಿಂದ ಮುಂದೆ ಕುಕ್ಕೆಯಲ್ಲಿ ತಮ್ಮ ಸುಬ್ರಹ್ಮಣ್ಯನ ದರ್ಶನ ಪಡೆದು ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ತಾನೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s