ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮಿಗಳು

ನಮ್ಮ ಸನಾತನ ಧರ್ಮದಲ್ಲಿ ಮಾತೃದೇವೋಭವ, ಪಿತೃದೇವೋಭವದ ನಂತರದ ಸ್ಥಾನವನ್ನು ಆಚಾರ್ಯದೇವೋಭವ ಎಂದು ಗುರುಗಳಿಗೆ  ಮೀಸಲಾಗಿಟ್ಟಿದ್ದೇವೆ.  ಜನ್ಮ ನೀಡಿದವರು  ತಂದೆ-ತಾಯಿಯರಾದರೇ, ಪ್ರತಿಯೊಬ್ಬರಿಗೂ ವಿದ್ಯಾ ಬುದ್ಧಿಯನ್ನು ಕಲಿಸಿ ಅವರನ್ನು ತಿದ್ದಿ ತೀಡೀ ಸಮಾಜದಲ್ಲಿ ಇಬ್ಬ ಸಭ್ಯ ನಾಗರೀಕರನ್ನಾಗಿ ಮಾಡಿಸುವವರೇ ಗುರುಗಳು ಎಂದರೂ ತಪ್ಪಾಗದು. ಹಾಗಾಗಿ ನಮ್ಮ ಸನಾತನ ಧರ್ಮದಲ್ಲಿ ಗುರುಪರಂಪರೆ ಅತ್ಯಂತ ಮಹತ್ವಪೂರ್ಣ ಪಾತ್ರವನ್ನು ವಹಿಸುತ್ತದೆ. ನಮ್ಮ ಕಾಲಮಟ್ಟದ ಅಂತಹ ಅನೇಕ ಗುರುಗಳಲ್ಲಿ  ಕರ್ನಾಟಕದ ಅತ್ಯಂತ ಪ್ರಸಿದ್ದ ಧಾರ್ಮಿಕ ಕೇಂದ್ರವಾದ ಸಿದ್ದಗಂಗಾ ಮಠದ ಸ್ವಾಮಿಗಳಾಗಿದ್ದ ಭಾರತೀಯ ಆಧ್ಯಾತ್ಮಿಕ ಚಿಂತಕರೂ, ಅತ್ಯಂತ ಮಾನವೀಯ ಹೃದಯವಂತರೂ, ಶಿಕ್ಷಣತಜ್ಞರೂ, ಶತಾಯುಷಿಗಳಾಗಿ ನಡೆದಾಡುವ ದೇವರೆಂದೇ ಪ್ರಖ್ಯಾತರಾಗಿದ್ದ ಪದ್ಮಭೂಷಣ ಶ್ರೀ ಶಿವಕುಮಾರ ಸ್ವಾಮಿಗಳು ಅಗ್ರಗಣ್ಯರು ಎಂದರೆ ಅತಿಶಯವೆನಿಸದು.

ಮಾಗಡಿ ತಾಲೂಕಿನ ವೀರಾಪುರದ ಶ್ರೀಯುತ ಹೊನ್ನೇಗೌಡ ಮತ್ತು  ಗಂಗಮ್ಮ ದಂಪತಿಗಳಿಗೆ  ಎಪ್ರಿಲ್ 1, 1908ರಲ್ಲಿ 13ನೇ ಮಗನಾಗಿ ಜನಿಸಿದ ಶಿವಣ್ಣನವರು  ಮುಂದೆ ಕರ್ನಾಟಕದ ಪ್ರಸಿದ್ಧ ಸಿದ್ದಗಂಗಾ ಮಠದ  ಮಠಾಧಿಪತಿಗಳಾಗಿ  ಮಾರ್ಚ್ 3, 1930ರಲ್ಲಿ ಜವಾಬ್ದಾರಿಯನ್ನು ಹೊತ್ತು  ಶ್ರೀ ಸಿದ್ದಗಂಗ ಎಜುಕೇಶನ್ ಸೊಸೈಟಿಯನ್ನು ಸ್ಥಾಪಿಸಿ ಕೇವಲ  ಒಂದು ಧರ್ಮ ಅಥವಾ ಜಾತಿಗಷ್ಟೇ ಸ್ಥೀಮಿತವಾಗದೇ ಎಲ್ಲ ಧರ್ಮಗಳ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸುತ್ತಾ   ತ್ರಿವಿಧ (ಅನ್ನ, ಅಕ್ಷರ, ಜ್ಞಾನ) ದಾಸೋಹಿಗಳಾಗುವ ಮೂಲಕ 12ನೇ ಶತಮಾನದ ಯುಗಪುರುಷ ಕ್ರಾಂತಿಕಾರಿ ಬಸವಣ್ಣನವರ ಕಾಯಕವೇ ಕೈಲಾಸ ಮತ್ತು ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಪರಿ ನಿಜಕ್ಕೂ ಅನನ್ಯ, ಅಧ್ಭುತ ಮತ್ತು ಅನುಕಣೀಯವೇ ಸರಿ.

ssk1ಪೂರ್ವಾಶ್ರಮದಲ್ಲಿ ಸ್ವಾಮಿಗಳು ತಮ್ಮ ಕುಟುಂಬದಲ್ಲಿ ಅತ್ಯಂತ ಕಿರಿಯರಾಗಿದ್ದಲ್ಲದೇ  ಆಟ ಪಾಠಗಳಲ್ಲಿ ಅತ್ಯಂತ ಚುರುಕಾಗಿದ್ದ  ಕಾರಣ ಎಲ್ಲರಿಗೂ ಅಚ್ಚುಮೆಚ್ಚಿನವರಾಗಿದ್ದರು. ತಮ್ಮ ಹುಟ್ಟೂರು ವೀರಾಪುರದಲ್ಲಿಯೇ ಇದ್ದ ಕೂಲಿಮಠದಲ್ಲಿ ಮರಳಿನ ಮೇಲೆ ಅಕ್ಷರ ತಿದ್ದುವ ಮೂಲಕ ಶಿವಣ್ಣನ ಶೈಕ್ಷಣಿಕ ಜೀವನ ಆರಂಭವಾಗಿ ಪ್ರಾಥಮಿಕ ವಿದ್ಯಾಭ್ಯಾಸ ತಮ್ಮ ಪಕ್ಕದ ಊರಾದ ಪಾಲನಹಳ್ಳಿಯಲ್ಲಾಗಿ ತುಮಕೂರು ಬಳಿಯ  ನಾಗವಲ್ಲಿಯಲ್ಲಿ ಮಾಧ್ಯಮಿಕ ಶಿಕ್ಷಣದ ನಂತರ 1922ರಿಂದ ತುಮಕೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ 1926ರಲ್ಲಿ ಮೆಟ್ರಿಕ್ಯುಲೇಷನ್ ಮುಗಿಸುತ್ತಾರೆ. ಇದೇ ಸಮಯದಲ್ಲಿಯೇ ಅವರಿಗೆ ಅಂದಿನ  ಸಿದ್ದಗಂಗಾ ಶ್ರೀಗಳಾಗಿದ್ದ ಉದ್ದಾನ ಶಿವಯೋಗಿಗಳ ಪರಿಚಯವಾಗಿ ಅವರ ಸಹಾಯದಿಂದಲೇ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿಕೊಂಡಿದ್ದಲ್ಲದೇ ಆಶ್ರಯಕ್ಕಾಗಿ  ಬೆಂಗಳೂರಿನ ರೈಲ್ವೇ ನಿಲ್ದಾಣದ ಪಕ್ಕದಲ್ಲೇ ಇರುವ ರಾವ್ ಬಹದ್ದೂರ್ ಧರ್ಮಪ್ರವರ್ತ ಶ್ರೀ ಗುಬ್ಬಿ ತೋಟದಪ್ಪ ಧರ್ಮ ಛತ್ರದಲ್ಲಿ ಆಗುತ್ತದೆ. ವಿದ್ಯಾಭ್ಯಾಸದ ಜೊತೆಗೆ ಸಿದ್ದಗಂಗಾ ಮಠದೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ.

ssk41930ರಲ್ಲಿ ಉದ್ದಾನ ಶಿವಯೋಗಿಗಳ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರು ಆಕಸ್ಮಿಕವಾಗಿ ಶಿವೈಕ್ಯರಾದಾಗ ಅವರ ಕ್ರಿಯಾ ಸಮಾಧಿ ಕಾರ್ಯಕ್ಕೆ ಆಗಮಿಸಿದ್ದ ಶಿವಣ್ಣನರನ್ನು ಉದ್ಧಾನ ಸ್ವಾಮಿಜಿಗಳು ಎಲ್ಲರ ಸಮ್ಮುಖದಲ್ಲಿ ಮಠದ ಉತ್ತರಾಧಿಕಾರಿ ಎಂದು ಘೋಷಿಸಿ, ಅವರಿಗೆ ಕಾವಿ, ರುದ್ರಾಕ್ಷಿಗಳ ದೀಕ್ಷೆಯನ್ನು ಕೊಟ್ಟು ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲು  ಅನುವು ಮಾಡಿಕೊಡುತ್ತಾರೆ.

ssk5ಮತ್ತೊಂದು ಕುತೂಹಲಕಾರಿ ವಿಷಯವೇನೆಂದರೆ ಮಾಜಿ ಮುಖ್ಯಮಂತ್ರಿಗಳು ಮತ್ತು ಬೆಂಗಳೂರಿನಲ್ಲಿರುವ ವಿಧಾನಸೌಧದ ನಿರ್ಮಾತೃ ಶ್ರೀ ಕೆಂಗಲ್ ಹನುಮಂತಯ್ಯನವರು ಸಹಾ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಶಿವಕುಮಾರ ಸ್ವಾಮಿಗಳ ಸಹಪಾಠಿಯಾಗಿದ್ದನ್ನು ಈ ಪೋಟೋದಲ್ಲಿ ಕಾಣಬಹುದಾಗಿದೆ. ಸನ್ಯಾಸತ್ವದ ರೀತಿ ರಿವಾಜುಗಳನ್ನು ಪಾಲಿಸುತ್ತಲೇ ಪ್ರಥಮ ದರ್ಜೆಯಲ್ಲಿ ತಮ್ಮ  ಪದವಿಯನ್ನು ಮುಗಿಸಿ ಸಿದ್ದಗಂಗಾ ಮಠಕ್ಕೆ  ಶ್ರೀ ಶಿವಕುಮಾರ ಸ್ವಾಮಿಗಳಾಗಿ ಹಿಂದಿರುಗಿದ ಕೆಲವೇ ಸಮಯದಲ್ಲಿ ಹಿರಿಯ ಗುರುಗಳಾದ ಶ್ರೀ ಉದ್ಧಾನ ಶಿವಯೋಗಿಗಳು ಶಿವೈಕ್ಯರಾದ ನಂತರ ಮಠದ ಸಕಲ ಆಡಳಿತ, ಮಠದ ವಿದ್ಯಾರ್ಥಿಗಳ, ಶಿಕ್ಷಣ ಸಂಸ್ಥೆಗಳ ಯೋಗ ಕ್ಷೇಮದ ಜವಾಬ್ದಾರಿಗಳೆಲ್ಲವೂ ಶ್ರೀಗಳವರಿಗೆ ಹಸ್ತಾಂತರವಾದ ನಂತರ  ತಮ್ಮ ಸಂಪೂರ್ಣ ಸಮಯವನ್ನು ಮಠದ ಏಳಿಗೆಗಾಗಿ ಮೀಸಲಿಡುತ್ತಾರೆ.

ss4ಶ್ರೀಗಳು ಮಠದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಾಗ ಮಠದ ಆದಾಯ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿದ್ದು ಮಠದ ಜಮೀನಿನಲ್ಲಿ ಬೆಳೆದು ವಿಧ್ಯಾರ್ಥಿಗಳ ದಾಸೋಹ ಮತ್ತು  ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಅತ್ಯಂತ ಕಷ್ಟದಾಯಕ ಎನಿಸಿದ ಸಂದರ್ಭದಲ್ಲಿ ಶ್ರೀಗಳು ಜೋಳಿಗೆ ಹಿಡಿದು ಮಠದ ಭಕ್ತರ ಮನೆ ಮನೆಗಳಿಗೆ ಪಾದ ಪೂಜೆಗೆಂದು ಹೋಗಿ ಅವರಿಂದ ಧವಸ ಧಾನ್ಯಗಳ ಜೊತೆ ಧನಕನಕ ಕಾಣಿಕೆಗಳನ್ನು ಸ್ವೀಕರಿಸುವ ಮೂಲಕ ಮಠದ ಖಜಾನೆಯನ್ನು ಅಂದು ಭರ್ತಿಮಾಡಿದ್ದು ಮುಂದೆಂದೂ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಕೇವಲ ತುಮಕೂರಿನ ಸುತ್ತಮುತ್ತಲಿಗೇ ಮೀಸಲಾಗಿದ್ದ  ಅವರ ಶಿಕ್ಷಣ ಸಂಸ್ಥೆಗಳನ್ನು ರಾಜ್ಯದ ನಾನಾ ಭಾಗಗಳಿಗೂ ವಿಸ್ತರಿಸಿದ್ದಲ್ಲದೇ ಕಾಲ ಕಾಲಕ್ಕೆ ಅನುಗುಣವಾಗಿ ಹಂತ ಹಂತವಾಗಿ ಆಧುನಿಕ ರೀತಿಯ ಶೈಕ್ಷಣಿಕ ಸಂಸ್ಥೆಗಳನ್ನು ಆರಂಭಿಸುವ ಮೂಲಕ ಸಾವಿರಾರು ಶಿಕ್ಷಕರುಗಳು,  ವೈದ್ಯರುಗಳು, ಇಂಜೀನೀಯರುಗಳನ್ನು ಈ ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ.  ಮಠದ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದವವರ ಪೈಕಿ ಹಲವರು ಇಂದು ದೇಶ ವಿದೇಶಗಳಲ್ಲಿ ವಿಖ್ಯಾತಿ ಪಡೆಯುವಷ್ಟರ ಮಟ್ಟಿಗೆ ಎತ್ತರದ ಸ್ಥಾನಗಳಿಸಿರುವುದು ಮಠದ  ಹಿರಿಮೆ ಮತ್ತು ಗರಿಮೆ ಎನಿಸಿದೆ.

ssk3ಇಷ್ಟೆಲ್ಲಾ ಕೆಲಸಕಾರ್ಯಗಳ ಮಧ್ಯೆಯೂ ಶ್ರೀಗಳು ಪ್ರತಿದಿನವೂ ಬೆಳಿಗ್ಗೆ 4 ಗಂಟೆಗೆ ಎದ್ದು ಸ್ನಾನಮಾಡಿ, ಪೂಜಾಕೋಣೆಯಲ್ಲಿ ಒಂದು ತಾಸಿಗೂ ಹೆಚ್ಚು ಸಮಯ ಧ್ಯಾನ, ಆದಾದ ನಂತರ ತಮ್ಮ  ಇಷ್ಟಲಿಂಗ ಪೂಜೆಯನ್ನು ಮುಗಿಸಿ ನಂತರ ತಮ್ಮ ದರ್ಶನಕಾಗಿ ಬಂದಿರುತ್ತಿದ್ದ ಭಕ್ತರಿಗೆ ತ್ರಿಪುಂಢ್ರ ಭಸ್ಮವನ್ನು ನೀಡಿ ತಾವೂ ಸಹಾ ಧರಿಸುವ ಮೂಲಕ  ಅವರ  ಪೂಜೆ ಸಂಪನ್ನವಾಗುತ್ತಿತ್ತು. ಇದೇ  ಪದ್ದತಿಯನ್ನು ಅವರ ಜೀವಿತಾವಧಿಯ ಪೂರ್ಣ ಚಾಚೂ ತಪ್ಪದೇ ನಡೆದದ್ದಲ್ಲದೇ  ಅವರ ಅಂತಿಮ ದಿನಗಳಲ್ಲಿ ಆಸ್ಪತ್ರೆಯಲ್ಲಿ ಇದ್ದಾಗಲೂ ನಡೆದಿತ್ತು ಎನ್ನುವುದು ಗಮನಾರ್ಹವಾಗಿದೆ.

ss3ತಮ್ಮ ಪೂಜೆಯ ನಂತರ ಬೆಳಿಗ್ಗೆ 6:30 ಗಂಟೆಗೆ. ಒಂದು ಅಕ್ಕಿ-ಇಡ್ಲಿ, ಸ್ವಲ್ಪ ಹೆಸರುಬೇಳೆ-ತೊವ್ವೆ, ಸಿಹಿ ಮತ್ತು ಖಾರ ಚಟ್ನಿಯ ಜೊತೆಗೆ  ಎರಡು ತುಂಡು ಸೇಬನ್ನು ಸೇವಿಸಿ ಬೇವಿನ-ಚಕ್ಕೆಯ ಕಷಾಯ ಸೇವಿಸುವ ಮೂಲಕ ಅಕ್ಷರಶಃ ಯೋಗಿಯಂತೆ ಜೀವನ ನಡೆಸಿದ್ದರು. ತಮ್ಮ ಪ್ರವಾಸ ಹೊರತಾಗಿ ಮಠದಲ್ಲಿ ಇದ್ದ ಅಷ್ಟೂ ದಿನಗಳು ತಪ್ಪದೇ ಮುಂಜಾನೆ ಮತ್ತು ಸಂಜೆ ಮಠದ ಆವರಣದಲ್ಲಿ ಪ್ರಾಥಮಿಕ ಶಾಲೆಯ ಮಕ್ಕಳಿಂದ ಹಿಡಿದು ಪದವಿ ಓದುತ್ತಿರುವ ತರುಣರೆಲ್ಲರೂ ಸೇರಿ ನಡೆಸುತ್ತಿದ್ದ ಪ್ರಾರ್ಥನೆಯಲ್ಲಿ ಶ್ರೀಗಳು ಪಾಲ್ಗೊಳ್ಳುವ ಮೂಲಕ ತಮ್ಮ ಮಠದ ವಿದ್ಯಾರ್ಥಿಗಳೊಂದಿಗೆ ನಿರಂತವಾಗಿ ಸಂಪರ್ಕದಲ್ಲಿರುತ್ತಿದ್ದದ್ದು ಅವರ ಹೆಗ್ಗಳಿಕೆ. ಮಠದ ಆವರಣದ ವಿದ್ಯಾರ್ಥಿ ನಿಲಯದ ಮುಂಭಾಗದ ವಿಶಾಲವಾದ ಬಯಲಿನಲ್ಲಿ ಸಾವಿರಾರು ಮಕ್ಕಳು  ಒಟ್ಟಿಗೆ ಪ್ರಾರ್ಥನೆ ಮಾಡುವುದು ಮಠದ ಪ್ರಮುಖ ಆಕರ್ಷಣೆಯಾಗಿದ್ದಲ್ಲದೇ ಅದನ್ನು ನೋಡುವುದೇ ಒಂದು ಸೌಭಾಗ್ಯ.  ಸಿದ್ದಗಂಗೆಯ ಮಠದ ಪಾಕಶಾಲೆಯಲ್ಲಿ ಅದೆಷ್ಟೋ ವರುಷಗಳಿಂದಲೂ ಹತ್ತಿಸಿದ ಬೆಂಕಿ ಆರಿರುವ ಉದಾಹರಣೆಯೇ ಇಲ್ಲ ಎಂಬ ಖ್ಯಾತಿಯನ್ನು ಪಡೆದಿದೆಯಲ್ಲದೆ, ದಿನದ 24ಗಂಟೆಗಳು, ವರ್ಷದ 365 ದಿನಗಳೂ ಅಲ್ಲಿನ ಭೋಜನ ಶಾಲೆ ಭಕ್ತಾದಿಗಳಿಗೆ ಮತ್ತು ವಿದ್ಯಾರ್ಥಿಗಳ ಸೇವೆಗೆ ಸಿದ್ಧವಾಗಿರುತ್ತದೆ. ಅವರಲ್ಲಿಗೆ ಆಶ್ರಯ ಕೋರಲು ಬರುತ್ತಿದ್ದ ಎಲ್ಲ ಮಕ್ಕಳನ್ನೂ ಸ್ವಾಮೀಜಿಗಳೇ ಖುದ್ದಾಗಿ ಸಂದರ್ಶನ ಮಾಡುತ್ತಾ ಅಗತ್ಯವಿದ್ದವರನ್ನು ತಮ್ಮ ಆಶ್ರಮದಲ್ಲೇ ಉಚಿತ ಊಟ ಮತ್ತು ವಸತಿಯೊಂದಿಗೆ ಯೋಗ್ಯ ಶಿಕ್ಷಣ ಕೊಟ್ಟಿರುವುದು ಶ್ರೀ ಮಠದ ಹೆಗ್ಗಳಿಕೆಯಾಗಿದೆ.

ssk2ಪ್ರಾರ್ಥನೆಯ ನಂತರ ಕಛೇರಿಗೆ ಬರುತ್ತಿದ್ದ  ಶ್ರೀಗಳು ತಪ್ಪದೇ ಅಂದಿನ ದಿನ ಪತ್ರಿಕೆಗಳನ್ನು ಓದುವ ಮೂಲಕ ವರ್ತಮಾನದ ಸುದ್ದಿಗಳನ್ನು ತಿಳಿದುಕೊಳ್ಳುತ್ತಿದ್ದರು. ನಂತರ ತಮ್ಮನ್ನು ಭೇಟಿಯಾಗಲು ಬಂದಿರುತ್ತಿದ್ದ ಭಕ್ತಾದಿಗಳ ಉಭಯ ಕುಶಲೋಪರಿ ವಿಚಾರ, ಗಣ್ಯರ ಭೇಟಿ, ಮಠದ ಆಡಳಿತ ಕಡತಗಳ ಪರಿಶೀಲನೆ, ಪತ್ರ ವ್ಯವಹಾರಗಳವನ್ನೂ ತಾವೇ ಖುದ್ದಾಗಿ ಮಾಡುವ ಮೂಲಕ ತಮ್ಮ ಇಳಿವಯಸ್ಸಿನಲ್ಲೂ ಧಣಿವರಿಯದೇ ಕಾರ್ಯನಿರತರಾಗಿ ಕಾಯಕವೇ ಕೈಲಾಸ ಎಂಬುದನ್ನು ಕೇವಲ ಮಾತಾಗಿರಿಸದೇ ಅದನ್ನು ಕೃತಿಯಲ್ಲಿಯೂ ತೋರಿಸಿದ ಮಹಾಗಣ್ಯರಾಗಿದ್ದರು.

ಮಧ್ಯಾಹ್ನ ಮತ್ತೆ ಮಠದಲ್ಲಿ  ಸ್ನಾನ ಪೂಜೆಯಾದ ಬಳಿಕ, ಒಂದು  ಹೇರಳೇಕಾಯಿ ಗಾತ್ರದಷ್ಟಿನ ಮುದ್ದೆ, ಸ್ವಲ್ಪವೇ ಅನ್ನ, ತೊಗರಿಬೇಳೆಯ ತೊವ್ವೆಯ ಊಟ ಮುಗಿಸಿ ಸ್ವಲ್ಪ  ವಿಶ್ರಾಂತಿಯ ನಂತರ ಸಂಜೆ ೪ ಗಂಟೆಗೆ ಮತ್ತೆ ಭಕ್ತಗಣದ ಬೇಟಿಯಾದ ನಂತರ ಮಠದ ಮಕ್ಕಳ ಅಟ ಪಾಠದ ಕುಶಲೋಪರಿ, ದಾಸೋಹದ ಮಾಹಿತಿ ಇವೆಲ್ಲವೂ ರಾತ್ರಿ 9 ಗಂಟೆಯವರೆವಿಗೂ ನಡೆದ ನಂತರ  ರಾತ್ರಿ 10:30ರ ವರೆಗೆ ಸ್ವಾಮೀಜಿಯವರು ಮಲಗುವ ಮುನ್ನಾ ಸುಮಾರು ಅರ್ಧ ಗಂಟೆಗಳ ಕಾಲ ಪುಸ್ತಕವನ್ನು ಓದಿ ರಾತ್ರಿ 11 ಗಂಟೆಗೆ ನಿದ್ರೆಗೆ ಜಾರಿದರೆ ಮತ್ತೆ ಮುಂಜಾನೆ 4ಕ್ಕೆ ಏಳುವ ಮೂಲಕ ತಮ್ಮ ದೈನಂದಿನ ಚಟುವಟಿಕೆಗಳು ನಡೆಯುತ್ತಿತ್ತು.

  • ಸ್ವಾಮೀಜಿಯವರ ಜಾತ್ಯಾತೀತ, ಧರ್ಮಾತೀತ ಶಿಕ್ಷಣ ಸೇವೆಯನ್ನು ಪರಿಗಣಿಸಿ ಕರ್ನಾಟಕ ವಿಶ್ವವಿದ್ಯಾಲಯವು ಶ್ರೀಗಳಿಗೆ 1965ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿದರೆ,
  • ಪೂಜ್ಯ ಸ್ವಾಮೀಜಿಯವರ 100 ನೇ ವರ್ಷದ ಹುಟ್ಟು ಹಬ್ಬ ಮತ್ತು ಕರ್ನಾಟಕ ಸುವರ್ಣ ಮಹೋತ್ಸವದ ಸಮಯದಲ್ಲಿ ಶ್ರೀಗಳ ಜೀವಮಾನ ಸಮಾಜ ಸೇವೆಯನ್ನು ಪರಿಗಣಿಸಿ ರಾಜ್ಯಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಶ್ರೀಗಳಿಗೆ ನೀಡಿ ಗೌರವಿಸಿತ್ತು,
  • 2015ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತಲ್ಲದೇ, 2017 ರಲ್ಲಿ, ಕರ್ನಾಟಕ ಸರಕಾರ ಮತ್ತು ಅವರ ಭಕ್ತಾದಿಗಳು ಸ್ವಾಮೀಜಿಯವರ  ಸಾಮಾಜಿಕ ಸೇವೆಯು ಎಲ್ಲರಿಗೂ ಆದರ್ಶವಾಗಿರಲಿ ಎನ್ನುವಂತೆ  ಅವರಿಗೆ ಭಾರತ ರತ್ನ ನೀಡಲು ಮನವಿಯನ್ನು ಸಹಾ ಸಲ್ಲಿಸಲಾಗಿತ್ತು.

ಶತಾಯುಷಿಗಳಾಗಿದ್ದರೂ ಅತ್ಯಂತ ಚಟುವಟಿಕೆಗಳಿಂದಿರುತ್ತಿದ್ದ ಸ್ವಾಮಿಗಳು ಭಕ್ತಾದಿಗಳ ಮನೆಗಳಿಗೆ ಭೇಟಿ ನೀಡಿ ಅವರಿಗೆ ಆಶೀರ್ವದಿಸುತ್ತಿದ್ದಂತಹ ಸಂಧರ್ಭವೊಂದರಲ್ಲಿ ನಮ್ಮ ಆತ್ಮೀಯರೊಬ್ಬರ ಹೊಸಾ ಕಾಂಪ್ಲೆಕ್ಶ್ ಉದ್ಘಾಟನೆಗೆ ಬಂದು ಅಲ್ಲಿಯ ಕಾರ್ಯಕ್ರಮವ ಮುಗಿಸಿಕೊಂಡು   ಅಲ್ಲಿಂದ ನೇರವಾಗಿ ತಮಗೆ ಪರಿಚಯವೇ ಇಲ್ಲದಿದ್ದ ಆ ಪ್ರದೇಶದಲ್ಲಿಯೂ ದಾಪುಗಾಲು ಹಾಕುತ್ತಾ ಯಾರದ್ದೇ ನೆರವಿಲ್ಲದೇ ಸೀದಾ ನಮ್ಮ ಆತ್ಮೀಯರ ಮನೆಗೆ ಬಂದು ಪಾದಪೂಜೆಗೆ ಸಿದ್ಧರಾದಾಗ   ಅವರ ಸಮೀಪದ ದರ್ಶನದ ಭಾಗ್ಯ ನಮ್ಮದಾಗಿತ್ತಲ್ಲದೇ, ಅವರನ್ನು ಏಕೆ ನಡೆದಾಡುವ ದೇವರೆಂದು ಕರೆಯುತ್ತಾರೆ ಎಂಬುದರ ಸಾಕ್ಷಾತ್ ಪರಿಚಯವಾಗಿತ್ತು.

ss2ಇಷ್ಟೆಲ್ಲಾ ಬಿಡುವಿಲ್ಲದ ಚಟುವಟಿಕೆಗಳ ಮಧ್ಯೆ ಆಗ್ಗಿಂದ್ದಾಗ್ಗೆ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದಸ್ವಾಮೀಜಿಯವರಿಗೆ  2018ರ ಡಿಸೆಂಬರ್ ನಲ್ಲಿ ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ  ದಾಖಲಿಸಿ ಹೃದಯಕ್ಕೆ ಸ್ಟಂಟ್ ಅಳವಡಿಸುವ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಸ್ವಾಮೀಜಿಗಳು ಮಠಕ್ಕೆ ಹಿಂದಿರುಗಿದರಾದರೂ, ಕೆಲವೇ ದಿನಗಳಲ್ಲಿ ಶ್ವಾಸಕೋಶ ಸೋಂಕಿನಿಂದ ಬಳಲಿದ ಶ್ರೀಗಳು ಒಂದೆರಡು ಬಾರಿ ತುಮಕೂರಿನ ತಮ್ಮದೇ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಾಗಿ ಮತ್ತೆ ಮಠಕ್ಕೆ ಹಿಂದಿರುಗಿದರೂ ಅರೋಗ್ಯ ಸುಧಾರಿಸಿದ ಕಾರಣ 2019 ಜನವರಿ 21 ರಂದು ಬೆಳಗ್ಗೆ ಸಿದ್ಧಗಂಗಾದ ಹಳೆಯ ಮಠದಲ್ಲಿ ಶ್ರೀಗಳು ಲಿಂಗೈಕ್ಯರಾದಾಗ  ಅವರಿಗೆ ಬರೂಬ್ಬರಿ 111 ವರ್ಷ ವಯಸ್ಸಾಗಿತ್ತು ಎನ್ನುವುದು ಗಮನಾರ್ಹವಾಗಿದೆ.

bhara_ratnaನಾವು ನೀವು ಪ್ರತ್ಯಕ್ಷವಾಗಿ ಕಂಡ,  ನಡೆದಾಡುವ ದೇವರು ಎಂದೇ ಪೂಜಿಸಿ ಆರಾಧಿಸಿದ್ದ  ಶ್ರೀ ಶಿವಕುಮಾರ ಸ್ವಾಮಿಗಳು, ಇನ್ನು ನಮ್ಮೊಂದಿಗೆ ಭೌತಿಕವಾಗಿ  ಇಲ್ಲದಿದ್ದರೂ, ಅವರ ಆದರ್ಶಗಳು, ಅವರ ಸರಳ ನಡೆ, ನುಡಿಗಳು  ಮತ್ತು ಆಶೀರ್ವಾದಗಳು, ಸದಾಕಾಲವೂ ನಮ್ಮೊಂದಿಗೆ ಇದ್ದು, ನಮ್ಮನ್ನು ಚಿರಕಾಲವೂ ಕಾಪಾಡುತ್ತಲೇ ಇರುತ್ತಾರೆ.ಕರ್ನಾಟಕದ ಈ ಅನರ್ಘ್ಯರತ್ನಕ್ಕೆ ರಾಜ್ಯ ತ್ತು ಕೇಂದ್ರ ಸರ್ಕಾರ ಕೊಡುವ ಕಾಗದದ ಮರಣೋತ್ತರ ಭಾರತರತ್ನ ಪ್ರಶಸ್ತಿಗಿಂತಲೂ ಈಗಾಗಲೇ ವಿಶ್ವಾದ್ಯಂತ ಜನರುಗಳೇ ತಮ್ಮ ಹೃದಯಾಂತರಾಳದಿಂದ  ಮುಂದಿನ ಸಾವಿರಾರು ವರ್ಷಗಳಿಗೂ ಅಚ್ಚಳಿಯದಂತೆ ನೀಡಿರುವ  ವಿಶ್ವರತ್ನ ಗೌರವವೇ ಹೆಚ್ಚೆನಿಸುತ್ತದೆ ಅಲ್ಲವೇ?

ಏನಂತೀರಿ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s