ಬೆಂಗಳೂರು ಸಿಲಿಕಾನ್ ಸಿಟಿ ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದ್ದು ಆಧುನಿಕತೆಗೆ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಗೆ ಅತ್ಯಂತ ವೇಗವಾಗಿ ಒಗ್ಗಿಕೊಂಡಿರುವ ನಗರವಾದರೂ ಇನ್ನೂ ತನ್ನ ಗ್ರಾಮೀಣ ಸೊಗಡನ್ನು ಹಾಗೆಯೇ ಉಳಿಸಿಕೊಂಡು ಬಂದಿರುವುದು ಮೆಚ್ಚುವಂತಹ ವಿಷಯವಾಗಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯಿಂದ 5-6 ಕಿಮೀ ದೂರದಲ್ಲಿರುವ ಆನೇಕಲ್ ತಾಲ್ಲೂಕಿಗೆ ಸೇರುವ ಹುಸ್ಕೂರು ಗ್ರಾಮದಲ್ಲಿ ಚೋಳ ರಾಜರು ನಿರ್ಮಿಸಿದರು ಎನ್ನಲಾದ ಚಿಕ್ಕದಾದ ಶ್ರೀ ಮದ್ದೂರಮ್ಮ ದೇವಸ್ಥಾನವಿದ್ದು, ದಕ್ಷಿಣ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ಅತ್ಯಂತ ಪ್ರಸಿದ್ಧವಾದ ದೇವಾಲಯವಾಗಿದೆ. ಈ ದೇವಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡಿದರೆ ಆಕೆ ಭಕ್ತರನ್ನು ಎಲ್ಲಾ ರೀತಿಯ ಅಪಾಯಗಳಿಂದ ರಕ್ಷಿಸುತ್ತಾಳೆ ಮತ್ತು ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತಾಳೆ ಎಂಬುದೇ ಬಹುತೇಕ ಭಕ್ತಾದಿಗಳ ನಂಬಿಕೆಯಾಗಿದೆ. ಪ್ರತೀ ವರ್ಷದ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಇಲ್ಲಿ ನಡೆಯುವ ಅದ್ದೂರಿಯ ಜಾತ್ರಾ ಮಹೋತ್ಸವವನ್ನು ಕುಳಿತಲ್ಲಿಂದಲೇ ಕಣ್ತುಂಬಿಸಿಕೊಳ್ಳೋಣ ಬನ್ನಿ.
ಸಾಮಾನ್ಯವಾಗಿ ಎಲ್ಲಾ ಕಡೆಯಲ್ಲೂ ಜಾತ್ರೆ ಎಂದರೆ 60-80 ಅಡಿ ಎತ್ತರದ ಒಂದೋ ಇಲ್ಲವೇ ಎರಡು ರಥಗಳನ್ನು ಎಳೆಯುವುದು ಸಾಮಾನ್ಯವಾದರೆ, ಅಪರೂಪ ಎಂಬಂತೆ ನಂಜನಗೂಡಿನಲ್ಲಿ ಪಂಚರಥೋತ್ಸವ ನಡೆದರೆ ಈ ಊರಿನ ಪುರಾಣ ಪ್ರಸಿದ್ಧ ದೇವಾಲಯದಲ್ಲಿ ಕೇವಲ ಆ ಊರಿನವರಲ್ಲದೇ ಸುತ್ತ ಮುತ್ತಲಿನ ಹತ್ತಾರು ಗ್ರಾಮಗಳ ಭಕ್ತಾದಿಗಳು ಸುಮಾರು 120 -200 ಅಡಿಗಳಷ್ಟು ಎತ್ತರದ ಮರದ ಕಂಬಗಳು, ಮರದ ಹಲಗೆ ಮತ್ತು ಬಣ್ಣ ಬಣ್ಣದ ಬಟ್ಟೆಗಳಿಂದ ಅಲಂಕರಿಸಲ್ಪಟ್ಟ ಕುರ್ಜುಗಳು ಎಂದು ಕರೆಯುವ 10-12 ತೇರುಗಳನ್ನು ಹಿಂದಿನ ದಿನವೇ ತಮ್ಮ ಊರುಗಳಲ್ಲಿ ಪೂಜೆ ಮಾಡಿ ಜಾತ್ರೆಯ ದಿನದಂದು ಹುಸ್ಕೂರಿಗೆ ತಂದು ಪೂಜೆ ಮಾಡುವ ವಿಶಿಷ್ಟ ಆಚರಣೆ ನಿಜಕ್ಕೂ ಅಧ್ಭುತವೇ ಸರಿ.
ಸುಮಾರು 800 ವರ್ಷಕ್ಕೂ ಹೆಚ್ಚು ಇತಿಹಾಸ ಇರುವ ಹುಸ್ಕೂರು ಮದ್ದೂರಮ್ಮ ದೇವಿಯ ಹೆಸರೇ ಹೇಳುವಂತೆ ಈ ದೇವಾಲಯದ ಮೂಲ ದೇವರು ಮಂಡ್ಯ ಜಿಲ್ಲೆಯ ಮದ್ದೂರಿನದ್ದಾಗಿದ್ದು, ಹುಸ್ಕೂರಿನ ಭಕ್ತರೊಬ್ಬರ ಭಕ್ತಿಗೆ ಮೆಚ್ಚಿ ಈ ಊರಿಗೆ ಬಂದು ನೆಲಸಿತೆಂದು ಸ್ಥಳೀಯರ ನಂಬಿಕೆಯಾಗಿದೆ. ಚೋಳರ ಕಾಲದ ದೇವಾಲಯವನ್ನು ಇತ್ತೀಚೆಗೆ ಭಕ್ತಾದಿಗಳ ಸಹಕಾರದಿಂದ ನವೀಕರಿಸಲಾಗಿದ್ದು ಗರ್ಭಗುಡಿಯಲ್ಲಿ ದೊಡ್ಡ ಮದ್ದೂರಮ್ಮ ಮತ್ತು ಚಿಕ್ಕ ಮದ್ದೂರಮ್ಮ ಎಂಬ ಎರಡು ವಿಗ್ರಹಗಳಿವೆ. ಮದ್ದೂರಮ್ಮನನ್ನು ನಂಬಿ ಪೂಜೆ ಸಲ್ಲಿಸಿದರೆ ತಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎನ್ನುವ ನಂಬಿಕೆ ಇರುವ ಕಾರಣ, ಮಂಗಳವಾರ, ಶುಕ್ರವಾರ, ಆಶಾಢ ಮಾಸದ ಸಮಯದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹೊರ ಭಾಗದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.
ಸಂಕ್ರಾಂತಿ ಮುಗಿದು ಬೆಳೆದ ಫಸಲುಗಳನ್ನೆಲ್ಲಾ ಕಟಾವು ಮಾಡಿ ತಮ್ಮ ಮನೆಯ ಅಗತ್ಯಕ್ಕಿಂತಲೂ ಹೆಚ್ಚಿನದ್ದನ್ನು ಮಾರುಕಟ್ಟೆಯಲ್ಲಿ ಮಾರಿ ಕೈಯಲ್ಲಿ ಅಲ್ಪ ಸ್ವಲ್ಪ ಹಣವಿರುವಾಗ, ಯುಗಾದಿ ಹಬ್ಬದ ನಂತರ ಬರುವ ಮಳೆಗಾಲದ ವರೆಗೂ ಯಾವುದೇ ಕೃಷಿ ಚಟುವಟಿಕೆ ಇಲ್ಲದಿರುವ ಸಮಯದಲ್ಲಿ ಈ ಊರಿನಲ್ಲಿ ಅದ್ದೂರಿಯ ಜಾತ್ರೆಯನ್ನು ನಡೆಸಲಾಗುತ್ತದೆ. ಐದು ದಿನಗಳ ಕಾಲ ಅದ್ದೂರಿಯಾಗಿ ನಡೆಯುವ ಹುಸ್ಕೂರಿನ ಮದ್ದೂರಮ್ಮ ಜಾತ್ರೆ ಎಂದರೆ ಇಡೀ ಆನೇಕಲ್ ತಾಲೂಕಿನಲ್ಲಿ ಒಂದು ಹಬ್ಬದ ವಾತಾವರಣ ನಿರ್ಮಾಣವಾಗುವುದಲ್ಲದೇ ಈ ಮೂಲಕ ಯುಗಾದಿ ಹಬ್ಬಕ್ಕೆ ಮತ್ತಷ್ಟು ಮೆರಗು ತಂದು ಕೊಡುತ್ತದೆ. ಹುಸ್ಕೂರಿನ ಸುತ್ತಮುತ್ತಲ ಗ್ರಾಮಗಳಾದ, ಕೊಡತಿ, ಹಾರೋಹಳ್ಳಿ, ಸಿಂಗೇನ ಅಗ್ರಹಾರ, ದೊಡ್ಡ ನಾಗಮಂಗಲ, ಹಾಗೂ ಮುತ್ತನಲ್ಲೂರ್ ಸೇರಿದಂತೆ, ಸುಮಾರು 10-12 ಗ್ರಾಮಗಳಿಂದ ಭಕ್ತಾದಿಗಳು ತಾವೇ ರಥಗಳನ್ನು ನಿರ್ಮಿಸುತ್ತಾರೆ. ಈ 10-12 ಹಳ್ಳಿಗಳಿಂದ 150 ರಿಂದ 200 ಅಡಿ ಎತ್ತರದ ರಂಗು ರಂಗಿನ ಬೃಹತ್ ಗಾತ್ರದ ಕುರ್ಜುಗಳನ್ನು ತಿಂಗಳುಗಳ ಕಾಲ ಶ್ರದ್ಧಾ ಭಕ್ತಿಯಿಂದ ಸಿದ್ಧಪಡಿಸಲಾಗಿರುತ್ತದೆ, ರಂಗುರಂಗಿನ ಬಟ್ಟೆಗಳಿಂದ ವಿಶಿಷ್ಟ ಶೈಲಿಯ ವಿನ್ಯಾಸದ ಚಿತ್ತಾರಗಳನ್ನ ಹೊದಿಕೆಯಾಗಿಸಿಕೊಂಡು ಮರದ ಅಟ್ಟಣಿಗೆಗಳಿಂದ ನಿರ್ಮಿಸಲಾಗುವ ಈ ತೇರುಗಳು ಯಾವ ಯಾವ ಗ್ರಾಮದ ತೇರು ಎಷ್ಟು ಎತ್ತರ ಇರುತ್ತದೆ ಎಂಬ ಪ್ರತಿಷ್ಠೆಯ ಸಂಕೇತವಾಗುವ ಕಾರಣ ಒಂದು ರೀತಿಯ ಅರೋಗ್ಯಕರ ಸ್ಪರ್ಧೆಗೆ ಹುಸ್ಕೂರು ಜಾತ್ರೆ ವೇದಿಕೆಯಾಗಿ ಮಾರ್ಪಡುತ್ತದೆ ಎಂದರೂ ತಪ್ಪಾಗದು.
ಹುಸ್ಕೂರಿನ ಮದ್ದೂರಮ್ಮನಿಗೂ ಶ್ರೀರಂಗಪಟ್ಟಣದ ಟಿಪ್ಪು ಸುಲ್ತಾನನಿಗೂ ನಂಟಿರುವ ಕುತೂಹಲಕಾರಿಯಾದ ಕಥೆಯೊಂದಿದೆ. ಕೇರಳ ಮತ್ತು ತಮಿಳುನಾಡಿನಲ್ಲಿ ತನ್ನ ಸಾಮ್ರಾಜ್ಯ ವಿಸ್ತರಣೆ ಮಾಡಿದ ನಂತರ ಸೇನೆಯ ಸಮೇತ ಶ್ರೀರಂಗಪಟ್ಟಣಕ್ಕೆ ಹಿಂದಿರುಗುವ ಮಾರ್ಗದ ಮಧ್ಯದಲ್ಲಿ ನಡೆಯಲೂ ನಿತ್ರಾಣವಾಗಿದ್ದ ತನ್ನ ಸೇನೆಯ ದಣಿವಾರಿಸಿಕೊಳ್ಳುವ ಸಲುವಾಗಿ ಈ ಹುಸ್ಕೂರಿನ ಬಯಲಿನ ಮದ್ದೂರಮ್ಮ ದೇವಾಲಯದಲ್ಲಿ ರಾತ್ರಿ ಪೂರಾ ಕಳೆದಿದ್ದನಂತೆ. ರಾಮ ರಾವಣರ ಯುದ್ದದಲ್ಲಿ ಹಿಮಾಲಯದಿಂದ ಸಂಜೀವಿನಿ ಪರ್ವತವನ್ನು ಹೊತ್ತು ತಂದ ಹನುಮಂತ ಯುದ್ದದ ಸಮಯದಲ್ಲಿ ಗಾಯಗೊಂಡು ಮೂರ್ಛೆ ಹೋಗಿದ್ದ ಲಕ್ಷ್ಮಣ ಮತ್ತು ನೂರಾರು ಕಪಿ ಸೇನೆಯನ್ನು ರಕ್ಷಿಸಿದಂತೆ, ಮಾರನೇಯ ದಿನ ಬೆಳಗ್ಗೆ ಎದ್ದಾಗ ಹೊಸ ಚೈತನ್ಯದಿಂದ ಕೂಡಿದ ನವೋಲ್ಲಾಸವು ಟಿಪ್ಪು ಸೈನ್ಯದ ಸೈನಿಕರಲ್ಲಿ ಮೂಡಿದ್ದರಿಂದ ಸಂತೋಷಗೊಂಡ ಟಿಪ್ಪು ಇದು ಇಲ್ಲಿಯ ದೇವಿಯ ಮಹಿಮೆ ಎಂದು ನಂಬಿ ಅದರ ಜ್ಞಾಪಕಾರ್ಥವಾಗಿ ವಜ್ರಖಚಿತ ಕಿರೀಟದ ಜೊತೆಗೆ ದೇವಿಗೆ ಚಿನ್ನಾಭರಣಗಳನ್ನು ಅರ್ಪಸಿದ ಎಂಬ ಇತಿಹಾಸವಿದ್ದು, ಆನೇಕಲ್ ಖಜಾನೆಯಲ್ಲಿ ಭದ್ರವಾಗಿರಿಸಿರುವ ವಜ್ರಕಿರೀಟ ಚಿನ್ನಾಭರಣಗಳನ್ನು ಇಂದಿಗೂ ಜಾತ್ರೆಯ ಸಮಯದಲ್ಲಿ ತಂದು ದೇವರಿಗೆ ಮುಡಿಸಿ ಅಲಂಕರಿಸಿ ಸಂಭ್ರಮಿಸಲಾಗುತ್ತದೆ.
ಹುಸ್ಕೂರಿನ ಜಾತ್ರೆಯಲ್ಲಿ ಬೃಹತ್ತಾದ ಈ ತೇರುಗಳೇ ಪ್ರಮುಖ ಆಕರ್ಷಣೆಯಾದರೂ, ಅದರ ಜೊತೆ ವಿವಿಧ ರೀತಿಯ ಜಾನಪದ ಕಲಾಮೇಳಗಳು, ಪಲ್ಲಕ್ಕಿ ಉತ್ಸವ, ಹಾಡು, ನೃತ್ಯಗಳಿಂದ ಕೂಡಿ ಜಾತ್ರೆಯನ್ನು ಮತ್ತಷ್ಟು ಆಕರ್ಷಣಿಯವನ್ನಾಗಿಸುತ್ತದೆ. ತಮ್ಮ ಕೃಷಿಯ ಫಸಲು ಮನೆಗೆ ಬಂದು ಗ್ರಾಮಕ್ಕೆ ಕೆಡುಕು ಆಗದಂತೆ ಗ್ರಾಮ ದೇವರುಗಳಿಗೆ ತೃಪ್ತಿಪಡಿಸುವ ಸಲುವಾಗಿ ದೂರದ ಊರಿನ ನೆಂಟರಿಷ್ಟರನ್ನು ಕರೆಸಿ ಬಾಂಧವ್ಯ ಗಟ್ಟಿಗೊಳಿಸಿಕೊಳ್ಳುವುದು ಈ ಜಾತ್ರೆಯ ವೈಶಿಷ್ಠ್ಯವಾಗಿದೆ.
ಮೊದಲ ದಿನ ರಥೋತ್ಸವದ ವಿಧಿ, ದೀಪಾರತಿಗಳ ಮೆರವಣಿಗೆಯಿಂದ ಆರಂಭವಾಗಿ ಮಾರನೇಯ ದಿನ ಬೆಳಗ್ಗೆ ಹತ್ತಾರು ಎತ್ತುಗಳ ಸಹಾಯದಿಂದ 10-20 ಕಿ. ಮಿ. ದೂರದ ಊರುಗಳಿಂದ ಸಾವಿರಾರು ಭಕ್ತಾದಿಗಳ ಸಹಾಯದೊಂದಿಗೆ ದಾರಿ ಯುದ್ದಕ್ಕೂ ತೇರುಗಳನ್ನು ಎಳೆದು ಸಂಜೆಯೊಳಗೆ ಮದ್ದೂರಮ್ಮನ ಗುಡಿಯ ಮುಂದೆ ತರಲಾಗುತ್ತದೆ. ಎತ್ತುಗಳು ಅಷ್ಟು ದೂರದಿಂದ ಕುರ್ಜುಗಳನ್ನು ಎಳೆದು ದೇವಿಯ ಸಾನ್ನಿಧ್ಯಕ್ಕೆ ಬಂದಾಗ ಮಾತ್ರವೇ ದೇವಿಯು ಸಂತುಷ್ಟಳಾಗುತ್ತಾಳೆ ಎನ್ನುವುದು ಸ್ಥಳೀಯರ ನಂಬಿಕೆಯಾಗಿದೆ. ವರ್ಷವಿಡೀ ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸುವ ಎತ್ತುಗಳಿಗೆ ಈ 2 ದಿನಗಳ ಕಾಲ ಉಲ್ಲಾಸದಿಂದಿರಲೆಂದು ಈ ರೀತಿಯಾಗಿ ರಥವನ್ನು ಎಳೆಯಲಾಗುತ್ತಿದೆ ಎಂದದೂ ಸಹಾ ನಂಬಲಾಗುತ್ತದೆ. ಅಷ್ಟು ಎತ್ತರದ ಮತ್ತು ಅಷ್ಟು ಭಾರವಾದ ರಥಗಳನ್ನು ಅಷ್ಟು ದೂರದಿಂದ ಕಚ್ಚಾ ರಸ್ತೆಗಳ ಮೇಲೆ ಎಳೆದು ತರುವುದು ಖಂಡಿತವಾಗಿ ಸುಲಭದ ಮಾತಲ್ಲ. ಉತ್ಸಾಹ ಭರಿತ ಕೂಗಾಟ ಮತ್ತು ಚೀರಾಟಗಳೊಂದಿಗೆ ಅಂಕು ಡೊಂಕು ಬಳುಕುತ್ತಾ ವಯ್ಯಾರದಿಂದ ಬರುವ ರಥಗಳನ್ನು ನೋಡುವುದಕ್ಕೆ ನಿಜಕ್ಕೂ ಮುದ ನೀಡುತ್ತದೆ. ಸಾಯಂಕಾಲದ ವೇಳೆಗೆ ಒಂದೊಂದೇ ಊರಿನಂದ ಬರುವ ರಥಗಳನ್ನು ಕಣ್ತುಂಬಿಸಿಕೊಳ್ಳುವ ಸಲುವಾಗಿ ಹುಸ್ಕೂರಿನಲ್ಲಿ ಸಾವಿರಾರು ಭಕ್ತರು ನೆರೆದಿರುತ್ತಾರೆ. ಸ್ವಲ್ಪ ವಿಶ್ರಮಿಸಿದ ಬಳಿಕ, ಆ ಎಲ್ಲಾ ರಥಗಳನ್ನು ಮದ್ದೂರಮ್ಮ ದೇವಿಯ ಮಂದಿರದ ಬಳಿ ಎಳೆದು ತಂದಾಗ ಭಕ್ತಾದಿಗಳು ದವನ ಚುಚ್ಚಿದ ಬಾಳೇಹಣ್ಣುಗಳನ್ನು ತೇರಿನ ಮೇಲೆ ಎಸೆಯುತ್ತಾ ಭಕ್ತಿಯಿಂದ ದೇವರನ್ನು ನೆನೆಯುವುದು ಮುಗಿಲು ಮುಟ್ಟುವಂತಿರುತ್ತದೆ. ಜಾತ್ರೆಯ 2 ದಿನ ಇಲ್ಲಿ ಕರಗ ಮಹೋತ್ಸವವೂ ನಡೆಯುತ್ತದೆ.
ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಭಕ್ತಾದಿಗಳ ಹಸಿವನ್ನು ನಿವಾರಿಸಲು, ಅಲ್ಲಲ್ಲಿ ಮಜ್ಜಿಗೆ ಪಾನಕ ಅನ್ನದಾಸೋಹಗಳ ವ್ಯವಸ್ಥೆಯೂ ಇರುವುದರ ಜೊತೆಗೆ ಕಡಲೇ ಪುರಿ ಬೆಂಡು ಬತ್ತಾಸು, ವಿವಿಧ ರೀತಿಯ ಜಾತ್ರೆಯ ಸಿಹಿತಿನಿಸುಗಳ ಸಣ್ಣ ಹೋಟೆಲ್ಲುಗಳು ಇರುತ್ತದೆ. ಇನ್ನು ಮಕ್ಕಳಿಗೆಂದೇ ವಿವಿಧ ರೀತಿಯ ಆಟಿಕೆಗಳು, ಬಣ್ಣ ಬಣ್ಣದ ಬೆಲೂನುಗಳ ಜೊತೆ ಮನೋರಂಜನೆಗಾಗಿ ಬಗೆ ಬಗೆಯ ಗಿರಿಗಿಟ್ಟಲೆಗಳು ಮುದ ನೀಡುತ್ತದೆ. ಜಾತ್ರೆಯ ಪ್ರಯುಕ್ತ ದೇವಾಲಯದಲ್ಲಿ ಮದ್ದೂರಮ್ಮ ತಾಯಿ ಹಾಗೂ ಪರಿವಾರ ದೇವರುಗಳಿಗೆ ವಿಶೇಷ ಪೂಜೆ ಹಾಗೂ ಅಲಂಕಾರವನ್ನು ಮಾಡಲಾಗುತ್ತದೆ.
ಹುಸ್ಕೂರಿನ ಸುತ್ತಮುತ್ತಲಿನ ಹತ್ತಾರು ಊರುಗಳ ರೈತ ಬಾಂಧವರಿಗೆ ತಮ್ಮ ಹೊಲಗಳ ಕಾರ್ಯಗಳು ಮುಗಿದ ಬಳಿಕ, ಸುಗ್ಗಿಕಾಲದಲ್ಲಿ, ಹಿಗ್ಗಿನ ಹಬ್ಬವನ್ನಾಗಿಸುವ ಈ ಮದ್ದೂರಮ್ಮ ದೇವಿಯ ರಥೋತ್ಸವವನ್ನು ಈ ಬಾರಿ ನಮ್ಮ ಛಾನೆಲ್ಲಿನಲ್ಲಿ ನೋಡಿ ಸಂಭ್ರಮಸಿದ್ದೀರಿ. ಮುಂದಿನ ವರ್ಷ ಖಂಡಿತವಾಗಿ ಸ್ವಲ್ಪ ಸಮಯಮಾಡಿಕೊಂಡು ಹುಸ್ಕೂರಿಗೆ ಹೋಗಿ ಈ ಮದ್ದೂರಮ್ಮನ ಜಾತ್ರೆಯಲ್ಲಿ ಪಾಲ್ಗೊಂಡು ವಿಶ್ವದ ಅತ್ಯಂತ ಎತ್ತರದ ತೇರುಗಳನ್ನು ಹತ್ತಿರದಿಂದ ನೋಡಿದ ಅನುಭವವನ್ನು ನಮ್ಮೊಂದಿಗೆ ಹಂಚಿ ಕೊಳ್ತೀರೀ ತಾನೇ?
ಏನಂತೀರೀ?
ನಿಮ್ಮವನೇ ಉಮಾಸುತ