ಗಿಡ ಮರಗಳು ಇರಲವ್ವಾ ಮನೆಯ ಸುತ್ತ ಮುತ್ತಾ

babiesಸಾಧಾರಣವಾಗಿ ಹಿಂದಿನಕಾಲದಲ್ಲಿ ಮಕ್ಕಳಿರಲವ್ವಾ ಮನೆ ತುಂಬಾ ಎನ್ನುವ ಗಾದೆ ಮಾತನ್ನು ಸಹಜವಾಗಿ ಕೇಳಿರುತ್ತಿದ್ದೆವು. ಅಂದೆಲ್ಲಾ ಮನೆ ತುಂಬಾ ಹೇಗೆ ಮಕ್ಕಳು ಇರುತ್ತಿದ್ದರೋ ಅದೇ ರೀತಿ ಗಿಡ ಮರಗಳು ಇರಲವ್ವಾ ಮನೆಯ ಸುತ್ತ ಮುತ್ತಾ ಎನ್ನುವುದನ್ನೂ ಅಕ್ಷರಶಃ ಪಾಲಿಸಿಕೊಂಡು ಬರುತ್ತಿದ್ದರು. ಮನೆ ಮುಂದೆ ಅಥವಾ ಕೈ ತೋಟದಲ್ಲಿ ತೆಂಗಿನ ಮರ, ಹೂವು, ಹಣ್ಣುಗಳ ಗಿಡಗಳಿದ್ದರೆ ಮನೆಗೆ ಅದೇನೋ ಶೋಭೆ. ಆ ಮರ ಗಿಡಗಳ ನಿತ್ಯಹರಿದ್ವರ್ಣ ಬಣ್ಣ ಮನೆಗೆ ವಿಶೇಷ ಕಳೆಯನ್ನು ನೀಡುವುದಲ್ಲದೇ, ತರಕಾರಿ ಹೂವು ಹಣ್ಣು ಕಾಯಿಗಳನ್ನು ಕೊಡುವುದರ ಜೊತೆಗೆ ನಮಗೆ ಅತಗ್ಯವಿರುವಷ್ಟು ಆಮ್ಲಜನಕವನ್ನು ಉತ್ಪಾದಿಸಿಕೊಳ್ಳುವ ಮೂಲಕ ನಮ್ಮೆಲ್ಲರ ಆರೋಗ್ಯವನ್ನೂ ಕಾಪಾಡುತ್ತಿತ್ತು. . ಇನ್ನು ವಾಸ್ತುಶಾಸ್ತ್ರದಲ್ಲಿಯೂ ಕೆಲವೊಂದು ಗಿಡಗಳು ಮನೆಯಲ್ಲಿದ್ದರೆ ಅದೃಷ್ಟ ಎಂದೇ ಹೇಳಲಾಗುತ್ತದೆ. ನಾವಿಂದು ಮನೆಯ ಆವರಣದಲ್ಲೇ ಸುಂದರವಾಗಿ ಕೈ ತೋಟ ಮತ್ತು ತಾರಸೀ ತೋಟಗಳನ್ನು ಮಾಡಿಕೊಂಡು ಸಾವಯವ ಕೃಷಿಯಾಧಾರಿತವಾಗಿ ಆರೋಗ್ಯಕರವಾದ ಹೂವು ಹಣ್ಣು ತರಕಾರಿಗಳನ್ನು ಬೆಳೆಯುತ್ತಿರುವವರನ್ನು ನೋಡಿ ಸಂಭ್ರಮಿಸುವುದರ ಜೊತೆಗೆ ಅದರಿಂದ ಪ್ರೇರಿತವಾಗಿ ನಮ್ಮ ಮನೆಗಳಲ್ಲೂ ಗಿಡ ಮರಗಳನ್ನು ನೆಡುವಂತಾಗಲಿ ಎಂಬ ಎಂಬ ಆಶಯದೊಂದಿಗೆ ಈ ವೀಡಿಯೋ ನಿಮ್ಮೆಲ್ಲರಿಗೂ ಸಮರ್ಪಿಸುತ್ತಿದ್ದೇನೆ.

ಹಾಗಾಗಿಯೇ ನಮ್ಮ ಪೂರ್ವಜರು ಮನೆಯ ಮುಂದೆ ತುಳಸೀ ಗಿಡದ ಜೊತೆಗೆ ಒಂದೆರಡು ತೆಂಗಿನ ಮರಗಳನ್ನು ನೆಟ್ಟರೆ, ಮನೆಯ ಹಿಂದೆ ಹಿತ್ತಲಿನಲ್ಲಿ ಮನೆಗೆ ಬೇಕಾಗುವಷ್ಟು ತರಕಾರಿಗಳು, ಬಾಳೇ ಗಿಡ, ಸೊಪ್ಪು, ದೇವರ ಪೂಜೆಗೆ ಬೇಕಾಗುವ ಹೂವುಗಳ ಗಿಡಗಳನ್ನು ಬೆಳಸುತ್ತಿದ್ದದ್ದಲ್ಲದೇ, ಅಡುಗೆ ಮನೆಯಲ್ಲಿ ಪಾತ್ರೆ ತೊಳೆದ ನೀರು ಬಚ್ಚಲು ಮನೆಯಲ್ಲಿ ಸ್ನಾನದ ನೀರು ಎಲ್ಲವೂ ನೇರವಾಗಿ ಈ ಗಿಡಗಳಿಗೇ ಹೋಗಿ ನೀರು ಅನಗತ್ಯವಾಗಿ ಪೋಲಾಗುವುದನ್ನು ತಡೆಗಟ್ಟುತ್ತಿದ್ದದ್ದಲ್ಲದೇ, ಅಂತರ್ಜಲ ಮಟ್ಟ ಸದಾಕಾಲಾವೂ ಸ್ಥಿರವಾಗಿರುವಂತೆ ನೋಡಿಕೊಳ್ಳುತ್ತಿದ್ದರು. ಇನ್ನು ಊಟಕ್ಕೆ ಬಾಳೇ ಎಲೆ ಇಲ್ಲವೇ ಮುತ್ತಗದ ಎಲೆಗಳನ್ನು ಬಳಸಿ ಅವುಗಳನ್ನು ಮನೆಯಲ್ಲಿರುತ್ತಿದ್ದ ಹಸುಗಳಿಗೆ ಆಹಾರವಾಗಿ ತಿನ್ನಿಸುತ್ತಿದ್ದರು ಇಲ್ಲವೇ, ಮನೆಯ ಪಕ್ಕದಲ್ಲೇ ಇರುತ್ತಿದ್ದ ಗೊಬ್ಬರದ ಗುಂಡಿಗಳಿಗೆ ಹಾಕಿ ತಮ್ಮ ಹೊಲಗದ್ದೆಗಳಿಗೆ ಅಗತ್ಯವಿದ್ದ ಸಾವಯವ ಗೊಬ್ಬರಗಳನ್ನು ತಯಾರಿಸಿಕೊಳ್ಳುತ್ತಿದ್ದರು.

ನಗರೀಕರಣ ಹೆಚ್ಚುತ್ತಿದ್ದಂತೆಯೇ ನೈರ್ಮಲ್ಯದ ಹೆಸರಿನಲ್ಲಿ ವಿಶಾಲವಾದ ಸುವ್ಯಸ್ಥಿತ ರಸ್ತೆಗಳು, ಒಳಚರಂಡಿ ವ್ಯವಸ್ಥೆಗಳು ಆರಂಭವಾಗಿದ್ದಲ್ಲದೇ, ಮನೆಯ ಸುತ್ತ ಒಂದು ಚೂರೂ ಜಾಗವನ್ನು ಬಿಡದೇ ದೊಡ್ಡ ದೊಡ್ಡ ಬಂಗಲೆಗಳನ್ನು ಕಟ್ಟಲು ಆರಂಭಿಸುತ್ತಿದ್ದಂತೆಯೇ, ಮನೆಯ ಮುಂದಿನ ಗಿಡಗಳು, ಕೈತೋಟಗಳೆಲ್ಲವೂ ಮಾಯವಾಗಿ ಹೂವು ಹಣ್ಣುಗಳನ್ನು ಬಿಡಿ, ಕರಿಬೇವು, ಪುದೀನ, ಕೊತ್ತಂಬರಿ ಸೊಪ್ಪುಗಳನ್ನೂ ಅಂಗಡಿಯಿಂದಲೇ ತರಬೇಕಾದಂತಹ ಪರಿಸ್ಥಿತಿ ಉಂಟಾಗಿದೆ.

ಮೊನ್ನೆ ಯುಗಾದಿ ಹಬ್ಬಕ್ಕೆಂದು ಮೈಸೂರಿನಲ್ಲಿರುವ ಚಿಕ್ಕಪ್ಪನ ಮನೆಗೆ ಹೋದಾಗ, ಹಬ್ಬದ ಪೂಜೆಗೆ ಮತ್ತು ಅಡುಗೆಗೆ ಬೇಕಾದ ಬಹುತೇಕ ಪರಿಕರಗಲನ್ನು ನಮ್ಮ ಚಿಕ್ಕಪ್ಪನ ಮನೆಯಲ್ಲೇ ಬೆಳೆದದ್ದನ್ನು ಸಂಭ್ರಮದಿಂದ ತೋರಿಸಿದಾಗ ಆದ ಆನಂದವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.

tornaಹಬ್ಬದ ದಿನ ಬಾಗಿಲುಗಳಿಗೆ ತೋರಣ ಕಟ್ಟಲು ಬಳಸಿದ ಮಾವಿನ ಸೊಪ್ಪು ಮತ್ತು ಬೇವಿನ ಸೊಪ್ಪು ಚಿಕ್ಕಪ್ಪನವರೇ ಆಸ್ತೆಯಿಂದ ಬೆಳಸಿದ ಮನೆಯ ಮುಂದಿರುವ ಉದ್ಯಾನದದ್ದಾದರೇ, ಪೂಜೆಗೆ ಅಗತ್ಯವಿದ್ದ ಬಹುತೇಕ ಹೂವುಗಳು ಮನೆಯ ಅಂಗಳದ್ದೇ ಆಗಿತ್ತು. ಇನ್ನು ನೈವೇದ್ಯಕ್ಕೆ, ಅಡುಗೆಗೆ ಮತ್ತು ಒಬ್ಬಟ್ಟಿಗೆ ತೆಂಗಿನ ಕಾಯಿ ಮನೆಯ ಮುಂದಿನ ತೆಂಗಿನ ತೋಟದ್ದಾದರೇ, ಪಲ್ಯಕ್ಕೆ ಬಳಸಿದ್ದ ತೊಂಡೇ ಕಾಯಿ ಸಹಾ ಮನೆಯದ್ದೇ. ಮನೆಯ ಪಕ್ಕದಲ್ಲಿ ಹಾಕಿದ್ದ ತೊಂಡೇಕಾಯಿ ಬಳ್ಳಿ, ಮಹಡಿಯವರೆಗೂ ಹಬ್ಬಿಕೊಂಡು ಪ್ರತೀ ವಾರಕ್ಕೆ ಸುಮಾರು ಒಂದರಿಂದ ಒಂದೂವರೆ ಕೆಜಿ ತಾಜಾ ತಾಜಾ ಸಾವಯವ ತೊಂಡೆಕಾಯಿ ಸಿಗುತ್ತದೆ. ಬಳ್ಳಿಗಳ ಮಧ್ಯೆ ಅಡಗಿ ಕುಳಿತಿರುವ ತೊಂಡೇ ಕಾಯಿಯನ್ನು ಬಿಡಿಸುವುದೇ ಒಂದು ಆನಂದ. ನಾವೆಲ್ಲರೂ ಬಿಡಿಸಿದ ನಂತರವೂ ನಮ್ಮ ಚಿಕ್ಕಪ್ಪನವರು ಇನ್ನೂ 20-30  ತೊಂಡೆಕಾಯಿಗಳನ್ನು ಅದೇ ಬಳ್ಳಿಯಿಂದ ಬಿಡಿಸಿ ನಮಗೆ ತೋರಿಸುತ್ತಾ ದೇಶಾವರಿ ನಗೆ ಚೆಲ್ಲಿದಾಗ, ಅರೇ ನಮ್ಮ ಕಣ್ಣಿಗೆ ಅದು ಹೇಗೆ ಕಾಣಿಸಲಿಲ್ಲ ಎಮ್ಬ ಅಶ್ಚರ್ಯವೂ ಆಯಿತು.

tondekaiತೊಂಡೇಕಾಯಿ ಬಳ್ಳಿಯ ಪಕ್ಕದಲ್ಲೇ ಸೀಮೇಬದನೇ ಕಾಯಿ ಬಳ್ಳಿ ಬೆಳೆಯುತ್ತಿದ್ದು, ಮುಂದಿನ ಬಾರಿ ಚಿಕ್ಕಪ್ಪನ ಮನೆಗೆ ಹೋಗುವಷ್ಟರಲ್ಲಿ ಖಂಡಿತವಾಗಿಯೂ ಹತ್ತಾರು ಸೀಮೇ ಬದನೇಕಾಯಿಗಳು ಸಿಗುತ್ತವೆ. ಇನ್ನು ಒಬ್ಬಟ್ಟು ಮಾಡಲು ಮತ್ತು ಊಟಕ್ಕೆ ಬಳಸಿದ ಬಾಳೇಎಲೆಯೂ ಮನೆಯದ್ದೇ ಆಗಿದ್ದು. ಊಟ ಮಾಡಿದ ನಂತರ ಆ ಎಂಜಿಲು ಬಾಳೇ ಎಲೆಗಳನ್ನು ಹೊರಗೆ ಬಿಸಾಡದೇ ಮನೆಯ ಮುಂದೆ ಬಂದ ಬೀಡಾಡಿ ಹಸುಗಳಿಗೆ ತಿನ್ನಿಸುವ ಮುಖಾಂತರ ಕಸದಿಂದಲೂ ರಸವನ್ನು ತೆಗೆಯುವಂತಹ ಅರ್ಥಪೂರ್ಣ ಆಚರಣೆ ನಿಜಕ್ಕೂ ಅನನ್ಯ ಮತ್ತು ಅನುಕರಣಿಯ.

tt1ಅಯ್ಯೋ ನಮ್ಮ ಮನೆಯಲ್ಲಿ ಜಾಗವೇ ಇಲ್ಲಾ ಇನ್ನು ಗಿಡಗಳನ್ನು ಎಲ್ಲಿ ಬೆಳೆಸುವುದು? ಎಂದು ಹೇಳುವವರಿಗಾಗಿಯೇ ಇತ್ತೀಚೆಗೆ ತಾರಸೀ ತೋಟದ ಪರಿಕಲ್ಪನೆ ಉತ್ತಮವಾಗಿ ಎಲ್ಲೆಲ್ಲಿಯೂ ಕಂಡು ಬರುತ್ತಿದ್ದು, ಕೆಲ ಸಾವಿರ ರೂಪಾಯಿಗಳನ್ನು ವ್ಯಯಿಸಿದರೆ ಅತ್ಯುತ್ತಮವಾಗಿ ಮನೆಯ ಮೇಲೆಯೇ ಸುಂದರವಾದ ತಾರಸೀ ತೋಟವನ್ನು ಬೆಳಸಬಹುದಾಗಿದೆ. ಇದಕ್ಕೆ ಉತ್ತಮ ಉದಾಹರಣೆಯಂತೆ ಕರೋನಾ ಸಮಯದಲ್ಲಿ ಬಹುತೇಕರಿಗೆ ಮನೆಯಿಂದಲೇ ಕೆಲಸ ಮಾಡಬೇಕಾದ ಅನಿವಾರ್ಯತೆ ಇದ್ದ ಕಾರಣ, ಬಹಳಷ್ಟು ಸಮಯ ಸಿಗುತ್ತಿದ್ದದ್ದನ್ನು ಸದ್ಬಳಕೆ ಮಾಡಿಕೊಂಡ ನಮ್ಮ ಮಿತ್ರರೊಬ್ಬರು ಹತ್ತಾರು ಬಗೆಯ ಹೂವುಗಳನ್ನು ಬೆಳಸಿರುವುದಲ್ಲದೇ, ಮನೆಗೆ ಅಗತ್ಯವಿರುವ ಕೊತ್ತಂಬರಿ, ಪುದೀನ, ಬದನೇಕಾಯಿ, ಬೆಂಡೇಕಾಯಿ, ಟೋಮ್ಯಾಟೋ ಮುಂತಾದ ತರಕಾರಿಗಳನ್ನು ಬೆಳಸಿ ಪ್ರತೀ ದಿನವೂ ಮುಖಪುಟದಲ್ಲಿ ಅವುಗಳ ಪೋಟೋವನ್ನು ಹಾಕಿ ನಮ್ಮೆಲ್ಲರ ಹೊಟ್ಟೆ ಉರಿಸಿದ್ದಂತೂ ಸುಳ್ಳಲ್ಲ. ಕೊರೋನ ಲಾಕ್ಡೌನ್ ಸಮಯದಲ್ಲಿ ಆರಂಭಿಸಿದ ಈ ಉತ್ತಮ ಪ್ರಯತ್ನ ಇಂದು ಅವರ ದೈನಂದಿನ ಚಟುವಟಿಕೆಯ ಅವಿಭಾಜ್ಯ ಅಂಗವಾಗಿ ತನ್ಮೂಲಕ ತಮ್ಮ ಸಮಯವನ್ನು ಉತ್ತಮವಾಗಿ ಸದ್ಭಳಕೆ ಮಾಡಿಕೊಳ್ಳುತ್ತಿರುವುದಲ್ಲದೇ, ಮನೆಯ ಪೂಜೆಗೆ ಬೇಕಾದ ಹೂವು ಮತ್ತು ಅಡುಗೆಗೆ ಬೇಕಾದ ಆರೋಗ್ಯಕರವಾದ ತರಕಾರಿಗಳನ್ನು ಬೆಳಸಿಕೊಳ್ಳುತ್ತಿರುವುದು ಅಭಿನಂದನೀಯ ಮತ್ತು ಅನುಕರಣಿಯವೂ ಹೌದು.

ನಮ್ಮ ಪೂರ್ವಜರು ಮಾಡುತ್ತಿದ್ದ ಪ್ರತಿಯೊಂದು ಕಾರ್ಯಗಳ ಹಿಂದೆಯೂ ಒಂದು ವೈಜ್ಞಾನಿಕ ಮತ್ತು ಆರೋಗ್ಯಕರವಾದ ಕಾರಣಗಳಿದ್ದು ಅವುಗಳನ್ನು ಮುಂದುವರೆಸಿಕೊಂಡು ಹೋಗಲು ನಾವು ನೀವು ಸ್ವಲ್ಪ ಮನಸ್ಸು ಮಾಡಿ, ಸ್ಪಲ್ಪ ಸಮಯವನ್ನು ಮೀಸಲಿಡ ಬೇಕಷ್ಟೇ.

flowersಇಷ್ಟೆಲ್ಲಾ ಮಾಹಿತಿಗಳನ್ನು ತಿಳಿದ ಮೇಲೆ ಇನ್ನೇಕೆ ತಡಾ, ಇಂದಿನಿಂದಲೇ ನಿಮ್ಮ ಮನೆಗಳ ಅಂಗಳದಲ್ಲಿಯೋ, ಇಲ್ಲವೇ ಮನೆಯ ತಾರಸಿಯ ಮೇಲೆಯೂ ಅದಾವುದೂ ಸಾಧ್ಯವಾಗದೇ ಹೋದಲ್ಲಿ, ಮನೆಯ ಮುಂದಿನ ರಸ್ತೆಯಲ್ಲಿಯೂ ಒಂದೆರಡು ಗಿಡ ಮರಗಳನ್ನು ಬೆಳಸುವ ಮೂಲಕ  ಉತ್ತಮವಾದ ಆಮ್ಲಜನಕವನ್ನು ಸ್ಥಳೀಯವಾಗಿಯೇ ಉತ್ಪಾದನೆ ಮಾಡಿಕೊಳ್ಳುವುದಲ್ಲದೇ, ಹೆಮ್ಮರವಾಗಿ ಬೆಳೆದ ಮರಗಳು ನೂರಾರು ಪಕ್ಶಿಗಳಿಗೆ ಆಶ್ರಯ ತಾಣವಾಗುವ ಮೂಲಕ ಪರಿಸರವನ್ನು ಕಾಪಾಡ ಬಹುದು ಅಲ್ವೇ? ಕನ್ನಡದಲಿ ಭಿನ್ನಹ ಗೈದರೆ ಹರಿ ವರಗಳ ಮಳೆ ಕರೆಯುವನು ಎಂದು ರಾಷ್ಟ್ರಕವಿ ಕುವೆಂಪುರವರ ಪದ್ಯವೊಂದರಲ್ಲಿ ಹೇಳಿರುವಂತೆ ಮನೆಯಲ್ಲೇ ಬೆಳೆದಿರುವ ಹೂವು ಹಣ್ಣುಗಳಿಂದ ದೇವರನ್ನು ಪೂಜಿಸಿದರೆ, ಹರಿ ಹರ ವರಗಳ ಮಳೆಗರೆಯುವರು ಮತ್ತು ಮನೆಯ ತೋಟದಲ್ಲಿ ಬೆಳೆದ ತರಕಾರಿಗಳಿಂದ ಮಾಡಿದ ಅಡುಗೆ ಮನಸ್ಸಿಗೆ ಮುದು ನೀಡುವುದರ ಜೊತೆಗೆ ಆರೋಗ್ಯಕರವಾಗಿರುವುದಲ್ಲದೇ ರುಚಿಯೂ ಹೆಚ್ಚಾಗಿಯೇ ಇರುತ್ತದೆ ಎನ್ನುವುದಕ್ಕೆ ಈ ಮೇಲಿನವುಗಳೇ ಜ್ವಲಂತ ಉದಾಹರಣೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s