ವಿಧುರಾಶ್ವಥ, ದಕ್ಷಿಣ ಭಾರತದ ಜಲಿಯನ್ ವಾಲಾ ಭಾಗ್

vs4

ಏಪ್ರಿಲ್ 13 1919 ಅಂದರೆ ಇಂದಿಗೆ ಸರಿಯಾಗಿ 103 ವರ್ಷಗಳ ಹಿಂದೆ ಪಂಜಾಬಿನ ಜಲಿಯನ್ ವಾಲಾ ಎಂಬ ಉದ್ಯಾನದಲ್ಲಿ ಸಂಭ್ರಮದಿಂದ ಭೈಸಾಖಿ ಹಬ್ಬವನ್ನು ಆಚರಿಸಲು ಸೇರಿದ್ದ ಸಹಸ್ರಾರು ದೇಶಭಕ್ತರ ಮೇಲೆ ಏಕಾ ಏಕಿ ಗುಂಡಿನ ಸುರಿಮಳೆಯನ್ನು ಸುರಿಸಿದ ಬ್ರಿಟಿಷರು ನೂರಾರು ಜನರ ಹತ್ಯೆಗೆ ಕಾರಣವಾಗಿ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ಎಂದೇ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಹಿ ಅಧ್ಯಾಯವಾಗಿರುವಂತೀಯೇ, ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರೀಬಿದನೂರಿನ ತಾಲ್ಲೂಕಿಗೆ ಸೇರಿರುವ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರವಾದ ವಿದುರಾಶ್ವತ್ಥದಲ್ಲೂ ಸಹಾ ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ವಿರುದ್ಧ ಪ್ರತಿಭಟನೆ ನಡೆಸಿ ಸುಮಾರು 30 ಕ್ಕೂ ಹೆಚ್ಚು ಜನರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿ ಸ್ವಾತ್ರಂತ್ಯ ಸಂಗ್ರಾಮದ ಚರಿತ್ರೆಯ ಪುಟಗಳಲ್ಲಿ ದಕ್ಷಿಣ ಭಾರತದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ಎಂದೇ ಶಾಶ್ವತ ಸ್ಥಾನವನ್ನು ಪಡೆದ ರಕ್ತ ಸಿಕ್ತ ನರಮೇಧದ ಸಂಪೂರ್ಣ ಕಥೆ-ವ್ಯಥೆ ಇದೋ ನಿಮಗಾಗಿ.

ವಿದುರಾಶ‍್ವತ್ಥ ಕ್ಷೇತ್ರ ಮಹಾಭಾರತದ ಕಾಲದಿಂದಲೂ ಪುರಾಣ ಪ್ರಸಿದ್ಧವಾಗಿದೆ. ವರಸೆಯಲ್ಲಿ ಪಾಂಡವರು ಮತ್ತು ಕೌರವರಿಗೆ ಚಿಕ್ಕಪ್ಪನಾಗಬೇಕಾದ ವಿಧುರನು ರಾಜ್ಯಕ್ಕಾಗಿ ತನ್ನ ಅಣ್ಣಂದಿರ ಮಕ್ಕಳು ಯುದ್ಧವನ್ನು ಮಾಡುವುದನ್ನು ನೋಡಲಾಗದೇ ಅಲಿಪ್ತ ನೀತಿಯನ್ನು ತಾಳಿ ಮನಃಶಾಂತಿಗಾಗಿ ದಕ್ಷಿಣದ ಕಡೆ ಬಂದು ಉತ್ತರ ಪಿನಾಕಿನಿ ನದಿಯ ತಟದಲ್ಲಿದ್ದ ಮೈತ್ರೆಯೀ ಮುನಿಯ ಆಶ್ರಮಕ್ಕೆ ಬಂದು ವಾಸಿಸತೊಡಗುತ್ತಾನೆ. ಆ ಋಷಿವರ್ಯದಿಂದ ಕೊಟ್ಟ ಅಶ್ವತ್ಧಮರವನ್ನು ವಿದುರನು ನೆಟ್ಟಿ ಬೆಳಸಿದ ಕಾರಣ, ಆ ಊರಿಗೆ ವಿಧುರಾಶ್ವತ್ಧ ಎಂಬ ಹೆಸರು ಬಂದು ಅಲ್ಲಿ ಶ್ರೀ ಅಶ್ವತ್ಥ ನಾರಾಯಣ ಸ್ವಾಮಿ ಮತ್ತು ಸುಬ್ರಹ್ಮಣ್ಯ ಸ್ವಾಮಿಯ ಸನ್ನಿಧಾನದ ಪವಿತ್ರ ಕ್ಷೇತ್ರವಾಗಿದೆ. ಈ ಶ್ರೀಕ್ಷೇತ್ರದಲ್ಲಿ ನಾಗರ ಪ್ರತಿಷ್ಠೆ ಮಾಡಿ ಪೂಜಿಸಿದರೆ, ಸರ್ಪ ದೋಷ ಅಥವಾ ನಾಗ ದೋಷ ನಿವಾರಣೆಯಾಗಿ, ಸಂತಾನವಿಲ್ಲದ ದಂಪತಿಗಳಿಗೆ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ಅಪಾರ ನಂಬಿಕೆ ಇರುವ ಕಾರಣ ಇಂದಿಗೂ ಅಲ್ಲಿ ಲಕ್ಷಾಂತರ ನಾಗರ ಪ್ರತಿಮೆಗಳನ್ನು ನೋಡಬಹುದಾಗಿದ್ದು ಪ್ರತೀ ವರ್ಷ ಫಾಲ್ಗುಣ ಮಾಸದಲ್ಲಿ ಅತ್ಯಂತ ವೈಭವೋಪೇತವಾಗಿ ನಡೆಯುವ ರಥೋತ್ಸವಕ್ಕೆ ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ಸ್ವಾಮಿಯ ಕೃಪಾಶೀರ್ವಾದಕ್ಕೆ ಪಾತ್ರರಾಗುತ್ತಾರೆ.

1938 ರ ಏಪ್ರಿಲ್ 22 ರಿಂದ 25 ರ ವರೆಗೆ ಅಲ್ಲಿ ಅದ್ದೂರಿಯಾಗಿ ಜಾತ್ರೆ ನಡೆಯುತ್ತಿದ್ದಂತಹ ಸಮಯದಲ್ಲಿ ಸಾವಿರಾರು ಭಕ್ತಾದಿಗಳು ನೆರೆದಿದ್ದ ಸಂಧರ್ಭವೇ ಸೂಕ್ತ ಎಂದು ಭಾವಿಸಿದ ಅಲ್ಲಿಯ ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕಾಂಗ್ರೆಸ್ ಸಮಿತಿಯು ಜಾತ್ರೆಯ ಕಡೆಯ ದಿನವಾದ 1938 ರ ಏಪ್ರಿಲ್ 25 ರಂದು ದೇವಸ್ಥಾನದ ಹಿಂಭಾಗದಲ್ಲೇ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳುತ್ತದೆ. ಸ್ವಾಮಿ ಕಾರ್ಯ ಮತ್ತು ದೇಶಕಾರ್ಯ ಎರಡೂ ಆಗುತ್ತದೆ ಎಂದ ಭಾವಿಸಿದ ಗೌರಿಬಿದನೂರು ಸೇರಿದಂತೆ ಸುತ್ತಲಿನ ಗ್ರಾಮಗಳ ಜನರು ವಿದುರಾಶ್ವತ್ಥಕ್ಕೆ ಬಂದಿರುತ್ತಾರೆ. ಈ ವಿಷಯವನ್ನು ತಿಳಿದ ಅಂದಿನ ಬ್ರಿಟೀಷ್ ಸರ್ಕಾರ ಅಲ್ಲಿ ನಿಷೇಧಾಜ್ಞೆ ಹೇರುವುದಲ್ಲದೇ, ಶತಾಯಗತಾಯ ಈ ಧ್ವಜಾರೋಹಣವನ್ನು ತಡೆಯಬೇಕೆಂದು ನೂರಾರು ಪೋಲೀಸರನ್ನು ನಿಯುಕ್ತಿ ಮಾಡಿರುತ್ತಾರೆ.

1934 ರಲ್ಲಿ ಸ್ಥಾಪನೆಗೊಂಡ ಮೈಸೂರು ಪ್ರಜಾಪಕ್ಷವು ಪೂರ್ಣ ಸ್ವರಾಜ್‍ಗೆ ಬೇಡಿಕೆಯೊಂದಿಗೆ, ಗಾಂಧಿ ಅವರಿಂದ ಪ್ರೇರಿತಗೊಂಡ ದೇಶ ಪ್ರೇಮಿಗಳು, ಸ್ವಾತಂತ್ರ್ಯ ಯೋಧರು ಮತ್ತು ಜಾತ್ರೆಗೆ ಸೇರಿದ್ದ ಭಕ್ತಾದಿಗಳು ಸೇರಿದಂತೆ ಶ್ರೀ ಎನ್. ಸಿ ತಿಮ್ಮಾರೆಡ್ಡಿ, ಎನ್. ಸಿ ನಾಗಯ್ಯರೆಡ್ಡಿ, ಟಿ. ರಾಮಾಚಾರ್, ಶ್ರೀನಿವಾಸ ರಾವ್ ಮುಂತಾದವರ ಮುಂದಾಳತ್ವದಲ್ಲಿ ಸುಮಾರು ಜನರು ಶಾಂತಿಯುತವಾಗಿ ಹೆಜ್ಜೆ ಹಾಕುತ್ತಾ ಬಯಲು ದೇವಾಲಯದ ಆವರಣಕ್ಕೆ ತಲುಪಿ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂಬ ಘೋಘಣೆ ಕೂಗುತ್ತಾ ಅದಾಗಲೇ ಸಿಧ್ಹ ಪಡಿಸಿದ್ದ ಧ್ವಜಸ್ಥಂಭದ ಕಡೆ ಏಕಾ ಏಕಿ ನುಗ್ಗಿ ಕಾಂಗ್ರೆಸ್ ನ ರಾಷ್ಟ್ರೀಯ ಧ್ವಜವನ್ನು ಆರೋಹಣ ಮಾಡಲು ಪ್ರಯತ್ನಿಸಿದರು.

ಬ್ರಿಟೀಷ್ ಸರ್ಕಾರದ ಆಜ್ಞೆಯಂತೆ ಆ ಸಮಯದಲ್ಲಿ ಪೋಲೀಸ್ ಅಧಿಕಾರಿಗಳಾಗಿದ್ದ ನಂಜೇಗೌಡರು ನೆರೆದಿದ್ದ ಸ್ವಾತ್ರಂತ್ರ್ಯ ಹೋರಾಟಗಾರರನ್ನು ಚದುರುವಂತೆ ಕೇಳಿಕೊಂಡರೂ ಜಗ್ಗದಿದ್ದಾಗ ಅವರ ಮೇಲೆ ಲಾಠಿ ಛಾರ್ಜ್ ಮಾಡಲು ಆಜ್ಣೆ ನೀಡಿದರು. ಪೋಲೀಸರ ಲಾಠಿ ಏಟಿಗೂ ಜಗ್ಗದಷ್ಟು ಜನರು ಅಲ್ಲಿ ಸೇರಿದ್ದ ಕಾರಣ ಜನರನ್ನು ಚದುರಿಸಲು ಗತ್ಯಂತರವಿಲ್ಲದೇ ಬಂದೂಕನ್ನು ಚಲಾಯಿಸಲು ಆಜ್ಞಾಪಿಸಿದಾಗ, ಪೋಲಿಸರ ಸತತ ಗುಂಡಿನ ದಾಳಿಗೆ ಸುಮಾರು 30 ಕ್ಕೂ ಹೆಚ್ಚು ಜನರು ಮೃತ ಪಟ್ಟಿದ್ದಲ್ಲದೇ, ಹಲವರು ಗಾಯಗೊಂಡರು. ಹೀಗೆ ದೇಶಕ್ಕಾಗಿ ನಿಸ್ವಾರ್ಥವಾಗಿ ಬಲಿದಾನ ಮಾಡಿದವರ ಕೇವಲ 10 ದೇಹಗಳು ಮಾತ್ರ ಅಲ್ಲಿ ಪತ್ತೆಯಾಗಿ ಉಳಿದ ಹೆಣಗಳು ಪಕ್ಕದಲ್ಲೇ ಹರಿಯುತ್ತಿದ್ದ ಉತ್ತರ ಪಿನಾಕಿನಿ ನದಿಯಲ್ಲಿ ತೇಲಿ ಹೋಗಿರಬಹುದು ಎಂಬ ಸಂದೇಹ ಮೂಡಿತು. ಅಂದಿನಿಂದ ಈ ಹೋರಾಟ ದಕ್ಷಿಣ ಭಾರತದ / ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದೇ ಖ್ಯಾತಿ ಪಡೆಯಿತು,

ದೇಶದ ಸ್ವಾತಂತ್ರ್ಯಕ್ಕಾಗಿ ಅಹಿಂಸಾತ್ಮಕವಾಗಿ ಹೋರಾಟ ಮಾಡುತ್ತಿದ್ದ ಸತ್ಯಾಗ್ರಹಿಗಳ ಮೇಲೆ ಈ ರೀತಿಯಾಗಿ ನಡೆದ ಹೇಯ ಕೃತ್ಯವನ್ನು ಮಹಾತ್ಮ ಗಾಂಧೀಜಿಯವರು ಸಹಾ ತೀವ್ರವಾಗಿ ಖಂಡಿಸಿದ್ದಲ್ಲದೇ, ಮೈಸೂರು ಸಂಸ್ಥಾನದ ಅಂದಿನ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರಿಗೆ ಪತ್ರ ಬರೆದು, ಸರ್ಕಾರವು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದ್ದಲ್ಲದೇ, ಸರ್ದಾರ್ ವಲ್ಲಭಬಾಯಿ ಪಟೇಲ್ ಮತ್ತು ಆಚಾರ್ಯ ಕೃಪಲಾನಿ ಅವರನ್ನು ಮೈಸೂರಿನ ಸರ್ಕಾರ ಮತ್ತು ಮಿರ್ಜಾ ಇಸ್ಮಾಯಿಲ್ ಅವರನ್ನು ಭೇಟಿ ಮಾಡಿ ಪರಿಸ್ಥಿತಿಯ ಸಂಪೂರ್ಣ ವಿವರವನ್ನು ಪಡೆದು ಶಾಂತಿಯನ್ನು ಕಾಪಾಡಿಕೊಂಡು ಹೋಗುವಂತೆ ಸೂಚಿಸಲು ಕಳುಹಿಸಿಕೊಟ್ಟಿದ್ದರು. ವಿಧುರಾಶ್ವಥದಂತಹ ಸಣ್ಣ ಗ್ರಾಮದಲ್ಲಿ ನಡೆದ ಈ ನರಮೇದ ಅಂದಿನ ಬಿಬಿಸಿ ಹಾಗೂ ಇತರ ಬ್ರಿಟಿಷ್ ಮಾಧ್ಯಮಗಳಲ್ಲಿ ಪ್ರಕಟವಾದ ಫಲವಾಗಿ 1939 ರ ಮೇ ತಿಂಗಳಿನಲ್ಲಿ ಪಟೇಲ್ ಮತ್ತು ಮಿರ್ಜಾ ಅವರ ನಡುವೆ ಒಪ್ಪಂದವೊಂದು ಏರ್ಪಟ್ಟು ಅದರ ಪ್ರಕಾರ ಸಾರ್ವಜನಿಕವಾಗಿ ಕಾಂಗ್ರೆಸ್ ರಾಷ್ಟ್ರೀಯ ಧ್ವಜವನ್ನು ಹಾರಿಸಲು ಇದ್ದಂತಹ ನಿರ್ಬಂಧವನ್ನು ತೆಗೆದು ಹಾಕಲಾಯಿತು.

ಈ ಪರಿಯಾಗಿ ಸ್ವಾತಂತ್ರ್ಯ ಹೋರಾಟಗಾರರಿಗೆ ಸಿಕ್ಕ ಜಯದ ಪ್ರತೀಕವಾಗಿ, 1939 ರ ಮೇ ತಿಂಗಳಿನಲ್ಲಿ, ಎರಡನೇ ಕಾಂಗ್ರೆಸ್ ಅಧಿವೇಶನವನ್ನು ಮಹಾತ್ಮಾ ಗಾಂಧಿಯವರ ಅಧ್ಯಕ್ಷತೆಯಲ್ಲೇ ವಿದುರಾಶ್ವತ್ಥದಲ್ಲಿ ಏರ್ಪಡಿಸಲಾಗಿತ್ತು. ಅಧಿವೇಶನಕ್ಕೆ ಬಂದಿದ್ದ ಗಾಂಧಿಯವರು ಈ ದುರ್ಘಟನೆಯ ಬಗ್ಗೆ ಚರ್ಚಿಸಿದ್ದಲ್ಲದೇ, ಸತ್ಯಾಗ್ರಹಿಗಳಿಗೆ ಉತ್ಸಾಹವನ್ನು ತುಂಬಿ ಮತ್ತಷ್ಟು ಶಾಂತಿಯುತವಾಗಿ ಹೋರಾಟವನ್ನು ನಡೆಸುವಂತೆ ಹುರಿದುಂಬಿಸಿದರು. ಇದೇ ಸಮಯದಲ್ಲಿಯೇ ಗಿರಿಧಾಮವಾದ ನಂದಿ ಬೆಟ್ಟಕ್ಕೂ ಭೇಟಿ ನೀಡಿ ಒಂದೆರದು ದಿನ ಅಲ್ಲಿ ತಂಗಿ ಅಲ್ಲಿನ ರಮಣೀಯವಾದ ಪ್ರಕೃತಿ ಸೌಂದರ್ಯವನ್ನು ಆಹ್ಲಾದನೆ ಮಾಡಿದ್ದದ್ದು ಈಗ ಇತಿಹಾಸವಾಗಿದೆ.

vs1

ಸ್ವಾತಂತ್ರ್ಯಾ ನಂತರ ಈ ಪ್ರಕರಣದ ನೆನಪಿನಾರ್ಥವಾಗಿ ಸ್ಥಳೀಯ ಫ್ರೌಡಶಾಲೆಗೆ Satyagraha Memorial High School ಎಂದು ನಾಮಕರಣ ಮಾಡಲಾಗಿದೆ. ಈ ಘಟನೆ ನಡೆದ ಸ್ಥಳದಲ್ಲಿ ವೀರ ಮರಣ ಹೊಂದಿದ ಹುತಾತ್ಮರ ಗೌರವಾರ್ಥಕವಾಗಿ 1973 ರಲ್ಲಿ ಸ್ಮಾರಕವನ್ನು ನಿರ್ಮಿಸಿ ಅದರ ಪಕ್ಕದ ಫಲಕದಲ್ಲಿ ಹುತಾತ್ಮರಾದವರ ಹೆಸರುಗಳನ್ನು ಕೆತ್ತಿಸುವ ಮೂಲಕ ನಮ್ಮ ಮುಂದಿನ ಪೀಳಿಗೆಯವರಿಗೂ ಅವರ ಹೆಸರುಗಳನ್ನು ಶಾಶ್ವತವಾಗಿ ತಿಳಿಯುವಂತೆ ಮಾಡಲಾಗಿದೆ, ಮುಂದೇ 2004 ರಲ್ಲಿ ಅಲ್ಲೊಂದು ಪ್ರಶಾಂತವಾದ ಮತ್ತು ಅಷ್ಟೇ ಸುಂದರವಾದ ಉದ್ಯಾನವನವೊಂದನ್ನು ನಿರ್ಮಾಣ ಮಾಡಿ ಅದರ ಮಧ್ಯದಲ್ಲೇ ಭೌವ್ಯವಾದ ವೀರ ಸೌಧವನ್ನು ನಿರ್ಮಿಸಲಾಗಿದೆ. ಈ ವೀರ ಸೌಧದಲ್ಲಿ ಸ್ವಾತಂತ್ರ್ಯ ಚಳವಳಿಗೆ ಸಂಬಂಧಿಸಿದಂತಹ ಅದ್ಭುತವಾದ ಫೋಟೋ ಗ್ಯಾಲರಿಯನ್ನು ಸ್ಥಾಪಿಸುವ ಮೂಲಕ ಭಾರತದ ಸ್ವಾತ್ರಂತ್ಯ ಹೋರಾಟಕ್ಕೆ ಲಕ್ಷಾಂತರ ಹೋರಾಟಗಾರರು ನಡೆಸಿದಂತಹ ಹೋರಾಟವನ್ನು ಕಣ್ಣ ಮುಂದೆ ಬರುವಂತೆ ಜೋಡಿಸಿರುವುದು ನಿಜಕ್ಕೂ ಅನನ್ಯ, ಅಧ್ಭುತ ಮತ್ತು ಅಭಿನಂದನಾರ್ಹವೇ ಸರಿ. ಈ ಫೋಟೋ ಗ್ಯಾಲರಿ ಭಾರತದ ಸ್ವಾತಂತ್ರ್ಯ ಹೋರಾಟದ ಇಡೀ ಕಾಲಘಟ್ಟವನ್ನು ಪರಿಚಯಿಸುವ ಗ್ಯಾಲರಿಯಾಗಿದ್ದು ಇತಿಹಾಸವನ್ನು ಅಧ್ಯಯನ ಮಾಡಲು ಇಚ್ಚಿಸುವ ನೂರಾರು ಜನರಿಗೆ ಇದರ ಸದ್ಭಳಕೆಯನ್ನು ಮಾಡಿಕೊಳ್ಳಲು ಅನುವು ಮಾಡಿಕೊಟ್ಟಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಇಲ್ಲಿರುವ ಸಿಬ್ಬಂಧಿ ವರ್ಗದವರೂ ಸಹಾ ಕೇವಲ ಹೊಟ್ಟೇಪಾಡಿನ ಕೆಲಸ ಎಂದು ಭಾವಿಸದೇ ಅತ್ಯಂತ ಗ್ಯಾಲರಿಗೆ ಬರುವ ವೀಕ್ಷಕರೊಂದಿಗೆ ಅತ್ಯಂತ ಪ್ರೀತಿಯಿಂದ ವ್ಯವಹರಿಸುವುದಲ್ಲದೇ, ಇತಿಹಾಸದ ಕುರಿತಂತೆ ಅನೇಕ ಮಾಹಿತಿಗಳನ್ನು ಒದಗಿಸುವುದು ನಿಜಕ್ಕೂ ಸ್ತುಸ್ಥ್ಯಾರ್ಹವೇ ಸರಿ.

vs5

ಇದೇ ಭವನದ ಪಕ್ಕದ ಕೊಠಡಿಯಲ್ಲಿ ಒಂದು ಸುಂದರವಾದ ಬೃಹತ್ತಾದ ಗ್ರಂಥಾಲಯವನ್ನು ಸ್ಥಾಪಿಸಲಾಗಿದ್ದು ಇತಿಹಾಸಕ್ಕೆ ಸಂಬಂಧಿಸಿದಂತೆ ನೂರಾರು ಗ್ರಂಥಗಳಿದ್ದು ಅವುಗಳನ್ನು ಅಲ್ಲೇ ಓದ ಬಹುದಾದ ವ್ಯವಸ್ಥೆಯನ್ನು ಮಾಡಲಾಗಿದೆ. ಅದೇ ಕೊಠಡಿಯಲ್ಲಿ ವೀಡಿಯೋ ಥಿಯೇಟರ್ ಸಹಾ ನಿರ್ಮಿಸಲಾಗಿದ್ದು ಇಲ್ಲಿ ವಿಧುರಾಶ್ವಥದ ರೈತರ ಹತ್ಯಾಕಾಂಡದ ಮಾಹಿತಿಯ 20 ನಿಮಿಷಗಳ ಚಿತ್ರವೂ ಸೇರಿದಂತ ಇನ್ನೂ ಹತ್ತು ಹಲವು ಸ್ವಾತ್ರಂತ್ರ್ಯ ಹೋರಾಟದ ಸಣ್ಣ ಸಣ್ಣ ಚಲನಚಿತ್ರಗಳು ನಿಜಕ್ಕೂ ರೋಮಂಚನಗೊಳಿಸುತ್ತದೆ. ಕೇವಲ ಇತಿಹಾಸವನ್ನು ವಿಶೇಷವಾಗಿ ಅಧ್ಯಯನ ಮಾಡುತ್ತಿರುವವರು ಮತ್ತು ಶಾಲಾ ಕಾಲೇಜಿನ ವಿದ್ಯಾರ್ಥಿಗಳಲ್ಲದೇ, ಪ್ರತಿಯೊಬ್ಬ ಭಾರತೀಯರೂ ಇಲ್ಲಿಗೆ ಭೇಟಿ ಕೊಡಲೇ ಬೇಕಾದ ಸ್ಥಳವಾಗಿದೆ ಎಂದರು ಅತಿಶಯವೇನಲ್ಲ. ಈ ವೀರ ಸೌಧದ ಕುರಿತಾದ ವರ್ಣಮಯ ಪುಸ್ತಕವೊಂದನ್ನು ಹೊರತಂದಿದ್ದು ಪ್ರತಿಯೊಬ್ಬರೂ ಕೊಂಡು ಓದಲೇ ಬೇಕಾದ ಪುಸ್ತಕವಾಗಿದೆ.

vs7

ಇಷ್ಟೆಲ್ಲಾ ಮಾಹಿತಿಗಳನ್ನು ತಿಳಿದ ಮೇಲೆ ಇನ್ನೇಕೆ ತಡಾ, ಸ್ವಲ್ಪ ಸಮಯ ಮಾಡಿಕೊಂಡು ಈ ವಾರಾಂತ್ಯದಲ್ಲಿ ವಿಧುರಾಶ್ವಥಕ್ಕೆ ಭೇಟಿ ನೀಡಿ ಶ್ರೀ ಅಶ್ವತ್ಥ ನಾರಾಯಣ ಮತ್ತು ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆಯುವುದರ ಜೊತೆಗೆ ದೇವಾಲಯದ ಹಿಂದೆಯೇ ಇರುವ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕಕ್ಕೂ ನಮ್ಮ ಗೌರವ ಸಲ್ಲಿಸಿ ಅಲ್ಲೇ ಇರುವ ವೀರಸೌಧಲ್ಲಿರುವ ಪೋಟೋ ಗ್ಯಾಲರೀ ಮತ್ತು ವೀಡಿಯೋಗಳನ್ನು ನೋಡಿಕೊಂಡು ನಿಮ್ಮ ಅನುಭವಗಳನ್ನು ನಮಗೆ ತಿಳಿಸ್ತೀರೀ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s