ಸಿನಿಮಾ ಎನ್ನುವುದು ಮನೋರಂಜನೆಯೋ ಇಲ್ಲವೇ ಹಗಲು ದರೋಡೆಯೋ?

ಮನುಷ್ಯ ಸಂಘ ಜೀವಿಯ ಜೊತೆಗೆ ಭಾವುಕ ಜೀವಿಯೂ ಸಹಾ ಹೌದು.  ಅವನು ತನ್ನ ಸುಖಃ ಮತ್ತು ದುಃಖಗಳನ್ನು  ಸಂಭ್ರಮಿಸಲು ಮತ್ತು ಮರೆಯಲು ಯಾವುದಾದರು ಹವ್ಯಾಸಕ್ಕೆ ಮೊರೆ ಹೋಗುತ್ತಾನೆ. ಅದೇ ರೀತಿ ದಿನವಿಡೀ  ಕಷ್ಟ ಪಟ್ಟು ದುಡಿದು ಸಂಜೆ ಮನೆಗೆ ಹಿಂದಿರುಗಿ ವಿಶ್ರಾಂತಿ ಮಾಡುತ್ತಿದ್ದಾಗ ಆತನ ಮನಸ್ಸಿಗೆ ಹಿಡಿಸುವಂತಹ ಸಂಗೀತ, ಸಾಹಿತ್ಯ,  ನೃತ್ಯ, ನಾಟಕ, ಯಕ್ಷಗಾನ ಮುಂತಾದವುಗಳನ್ನು ಕೇಳಿ, ನೋಡಿ ಮನಸ್ಸನ್ನು ಹಗುರು ಮಾಡಿಕೊಳ್ಳುತ್ತಿದ್ದರು. ತಂತ್ರಜ್ಞಾನ ಮುಂದುವರೆದಂತೆಲ್ಲಾ ಮೂಕಿ ಚಲನ ಚಿತ್ರಗಳು, ಟಾಕಿ ಚಲನ ಚಿತ್ರಳು, 3-ಡಿ ಚಲಚಿತ್ರಗಳು ಆರಂಭವಾಗಿ ಜನರನ್ನು ಮನರಂಜಿಸುತ್ತಿವೆ.

ci5ಇತ್ತೀಚಿನವರೆಗೂ ಚಲಚಿತ್ರಗಳಿಗೆ ಹೋಗುವುದೆಂದೆರೆ ಅದೇನೋ ಸಂಭ್ರಮ. ಒಂದೆರಡು ಘಂಟೆಗಳ ಮುಂಚೆಯೇ ಮನೆಯಿಂದ ಯಾರೋ ಒಬ್ಬರು ಥಿಯೇಟರ್ಗೆ ಹೋಗಿ ಸರದಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿ ಮಾಡುತ್ತಿದ್ದರೆ ಸಿನಿಮಾ ಶುರುವಾಗುವ ಸಮಯಕ್ಕೆ ಸರಿಯಾಗಿ ಉಳಿದ ಕುಟುಂಬಸ್ಥರೆಲ್ಲಾ ಅಲ್ಲಿಗೆ ತಲುಪಿ ಒಟ್ಟಿಗೆ ಆನಂದಮಯವಾಗಿ ಸಿನಿಮಾ ನೋಡಿ ಕೊಂಡು ಹಾಗೇ ಬರುವಾಗ ಹೋಟೆಲ್ಲಿಗೆ ಹೋಗಿ ಮಸಾಲೆ ದೋಸೆ ತಿಂದು ಬಿಸಿ ಬಿಸಿ ಕಾಫಿ ಕುಡಿಯುತ್ತಾ ಆಗ ತಾನೇ ನೋಡಿದ ಸಿನಿಮಾದ ಬಗ್ಗೆ ಅವರವರಿಗೆ ತೋಚಿದಂತೆ ವಿಮರ್ಶೆ ಮಾಡುತ್ತಿದ್ದದ್ದು ರೂಡಿಯಾಗಿತ್ತು.

ಇನ್ನು ಹಳ್ಳಿಗಳಲ್ಲಿ ಟೂರಿಂಗ್ ಟಾಕಿಸ್ ಎಂಬ ಟೆಂಟುಗಳಿಗೆ ದೂರ ದೂರದ ಊರಿನಿಂದ ಎತ್ತಿನ ಗಾಡಿಗಳಲ್ಲಿ ಸಕುಟುಂಬ ಸಮೇತರಾಗಿ ಬಂದು ಅಲ್ಲಿ ತಮ್ಮ ನೆಚ್ಚಿನ ನಾಯಕ ನಾಯಕಿಯರ ಸಿನಿಮಾಗಳನ್ನು ನೋಡುತ್ತಾ ಜೋರಾಗಿ ಕೂಗುತ್ತಾ,  ಸೀಟಿ ಹೋಡೆಯುತ್ತಾ, ತಮ್ಮ ನಾಯಕ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಂತೆಯೇ  ಚಿಲ್ಲರೆ ಕಾಸುಗಳನ್ನು ತೂರುತ್ತಾ ಅತ್ಯಂತ ಸಡಗರ ಸಂಭ್ರಮಗಳಿಂದ ಸಿನಿಮಾ ನೋಡಿ ಆನಂದಿಸುತ್ತಿದ್ದರು. ಇನ್ನು ಥಿಯೇಟರ್ ಹೊರೆಗೆ ಭಾರೀ ಗಾತ್ರದ ಸ್ಟಾರುಗಳು, ಕಟೌಟ್ ಗಳನ್ನು ಹಾಕಿ ಕೆಲವೊಂದು ಕಡೆಯಲ್ಲಿ ಅವುಗಳಿಗೆ ಹಾಲಿನ ಅಭಿಷೇಕ ಮಾಡಿದರೆ ಇನ್ನೂ ಕೆಲವೆಡಿ ಕುರಿ ಕೋಳಿಗಳನ್ನು ಕಡಿದು ಸಿನಿಮಾ ಮುಗಿಯುವುದರೊಳಗೆ ಅದರಲ್ಲೇ ಬಿರ್ಯಾನಿ ಮಾಡಿ ಸಿನಿಮಾ ನೋಡಲು ಬಂದಿರುವ ವೀಕ್ಷಕರಿಗೆ ಹಂಚಿರುವ ಉದಾಹರಣೆಗಳೂ ಸಾಕಷ್ಟಿವೆ.

ci1ಆದರೆ ಕಳೆದ 10-15 ವರ್ಷಗಳಲ್ಲಿ ಸಿನಿಮಾ ಮಂದಿರಗಳ ರೂಪುರೇಷೆಗಳೇ ಸಂಪೂರ್ಣವಾಗಿ ಬದಲಾಗಿ ಹೋಯಿತು.  ಒಂದು ಥಿಯೇಟರ್ ಇದ್ದದ್ದನ್ನು ಕೆಡವಿ ಅದೇ ಜಾಗದಲ್ಲೇ ಶಾಪಿಂಗ್ ಮಾಲ್ ಕಟ್ಟಿ ಅದರೊಳಗೆಯೇ  ಮಲ್ಟಿಪ್ಲೆಕ್ಸ್ಗಳನ್ನು ಸೇರಿಸಿ ಅದರಲ್ಲಿ  ಐದಾರು ಪರದೆಯ ಸಿನಿಮಾಗಳನ್ನು ತೋರಿಸಲು ಆರಂಭಿಸುತ್ತಿದ್ದಂತೆಯೇ ಜನರ ಮನರಂಜನೆಯ ಶೈಲಿಯೇ ಬದಲಾಗಿ ಹೋಯಿತು. ಧೂಳು ಭರಿತ, ಸ್ವಚ್ಚವಿಲ್ಲದ ತಿಗಣೆ ಕಾಟದ,  ಸಿಂಗಲ್ ಥಿಯೇಟರ್ ಬದಲು ನೋಡಲು ಸ್ವಚ್ಚವಾದ ಐಶಾರಾಮಿ ಹವಾನಿಯಂತ್ರಿತ ಥಿಯೇಟರ್ಗಳಲ್ಲಿ ಡಾಲ್ಬಿ ಸರೌಂಡ್ ಸಿಸ್ಟಮ್ ಗಳೊಂದಿಗೆ ಸಿನಿಮಾ ನೋಡುವುದೇ ಜೀವನ ಶೈಲಿಯಾಗಿ ಬದಲಾಯಿತು.

ticketಒಂದೊಂದೇ ಸೌಲಭ್ಯಗಳನ್ನು ಕೊಡುತ್ತಾ ಹೋಗುತ್ತಿದ್ದಂತೆಯೇ ಪ್ರೇಕ್ಷಕರ ಅರಿವಿಗೆ ಬಾರದಂತೆಯೇ ಟಿಕೆಟ್ ಬೆಲೆಯನ್ನು ಏರಿಸುತ್ತಲೇ ಹೋದರು. 70-80 ರ ದಶಕದಲ್ಲಿ ಟಿಕೆಟ್ ಬೆಲೆ 10-30 ರೂಪಾಯಿಗಳು ಇದ್ದರೆ 90ರ ದಶಕದಲ್ಲಿ ಬರೋಬ್ಬರಿ ಅರ್ಧ ಶತಕ ದಾಟಿ 2000ದ ಹೊತ್ತಿಗೆ ಶತಕವನ್ನೂ ದಾಟಿ ಧಾಪುಗಾಲು ಹಾಕಿದರೆ ಈಗ 300-900ರ ವರೆಗೂ ತಲುಪಿ  ಥಿಯೇಟರ್ಗಳಲ್ಲಿ ಸಿನಿಮಾ ನೋಡುಲು ಹೋಗುವುದಕ್ಕೇ ಭಯವಾಗುತ್ತಿದೆ. ಇನ್ನು ಸಿನಿಮಾ ಮಧ್ಯಾಂತರದಲ್ಲಿ ಕೈ ಬಾಯಾಡಿಸಲು ಪಾಪ್ ಕಾರ್ನ್, ಚಿಪ್ಸ್, ಸಮೋಸ  ಇನ್ನು ಮುಂತಾದ ಕುರುಕುಲು ತಿಂಡಿಗಳು  ಕಾಫಿ, ಟೀ ಜೊತೆಗೆ ತಂಪಾದ ಪಾನೀಯಗಳ ಬೆಲೆಗಳಂತೂ 300-450 ರೂಗಳಷ್ಟಿದ್ದು ಮೂಗಿಗಿಂತ ಮೂಗಿನ ನತ್ತೇ ಹೆಚ್ಚಿನ ಭಾರ ಎನ್ನುವಂತೆ  ಸಿನಿಮಾದ ಟಿಕೆಟ್ಟಿಗಿಂತಲೂ ದುಬಾರಿಯಾಗಿರುವುದು ನಿಜಕ್ಕೂ  ಅಚ್ಚರಿಯ ಸಂಗತಿಯಾಗಿದೆ. ಸೋಮವಾರದಿಂದ ಗುರುವಾರದ ವರೆಗೆ ಒಂದು ಬೆಲೆಯಾದರೆ, ವಾರಾಂತ್ಯದಲ್ಲಿ ಅದೇ ಸಿನಿಮಾಗೆ ದುಪ್ಪಟ್ಟು ದರ ತೆತ್ತು ನೋಡಬೇಕಾಗಿರುವುದು ಅನಿವಾರ್ಯವಾಗಿದೆ.

cutout8-10 ವರ್ಷಗಳ ಹಿಂದೆ ಹತ್ತಾರು ಥಿಯೇಟರ್ಗಳಲ್ಲಿ ಸಿನಿಮಾ  ಶತದಿನೋತ್ಸವವನ್ನು ಅಚರಿಸಿದಲ್ಲಿ ಮಾತ್ರವೇ ಹಿಟ್ ಎಂದು ಪರಿಗಣಿಸಿ ನಿರ್ಮಾಪಕರ ಜೋಬನ್ನು ತುಂಬಿಸುತ್ತಿದ್ದವು. ಹಾಗಾಗಿಯೇ ಬಹುತೇಕ ಸಿನಿಮಾ ನಟ ನಟಿಯರು, ತಂತ್ರಜ್ಣರು ವರ್ಷಕ್ಕೆ ಮೂರ್ನಾಲ್ಕು ಸದಭಿರುಚಿಯ ಮನೆ ಮಂದೆಯೆಲ್ಲಾ ಕುಳಿತು  ನೋಡುವಂತಹ ಸಿನಿಮಾಗಳನ್ನು ಮಾಡುತ್ತಿದ್ದದ್ದಲ್ಲದೇ ಆ ಸಿನಿಮಾ ಒಂದು ಪ್ರಭಲ ಮಾಧ್ಯಮವಾಗಿರುವ ಕಾರಣ  ತಮ್ಮ ಸಿನಿಮಾದ ಮೂಲಕ ಪ್ರೇಕ್ಷಕರ ಮನಸ್ಸಿಗೆ ನಾಟುವಂತಹ ಸಂದೇಶಗಳನ್ನು ತಲುಪಿಸುತ್ತಿದ್ದರು.  ಕಾಲ ಬದಲಾದಂತೆ ಹಳ್ಳಿಗಳೆಲ್ಲಾ ನಗರೀಕರಣಗೊಂಡು ರಿಯಲ್ ಎಸ್ಟೇಟ್ ಮತ್ತು ಗಣಿಗಾರಿಕೆಗಳ ಮೂಲಕ  ಹಣ ಮಾಡಿದವರೆಲ್ಲರೂ ಶೋಕಿಗಾಗಿ ಸಿನಿಮಾ ಮಾಡಲು ಮುಂದಾದಂತೆ  ಸಿನಿಮಾ ನಿರ್ಮಾಣದ ರೀತಿಯೂ  ಸಂಪೂರ್ಣವಾಗಿ ಬದಲಾಗಿ ಹೋಗಿದ್ದಲ್ಲದೇ ಚಿತ್ರಕ್ಕೆ ಅವಶ್ಯಕತೆ ಇದೆಯೋ ಇಲ್ಲವೋ  ಖಡ್ಡಾಯವಾಗಿ  ಸಿನಿಮಾದ ಹಾಡುಗಳು ವಿದೇಶದಲ್ಲೇ ಚಿತ್ರೀಕರಣವಾಗ ಬೇಕು. ಅದ್ಯಾವುದೋ ಭಾಷೆಯ ನಟಿಗೆ ಒಂದಕ್ಕೆ ನಾಲ್ಕು ಪಟ್ಟು ಹಣ ನೀಡಿ ಆಕೆಯ ಅರೆಬೆತ್ತಲೆಯ ಹಸೀ ಬಸೀ  ಹಾಡನ್ನು ತುರುಕಿ ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡುತ್ತಾ ಸಿನಿಮಾ ಎಂಬುದು ಮನೋರಂಜನೆ ಎನ್ನುವುದಕ್ಕಿಂತಲೂ ವ್ಯಾಪಾರವಾಗಿ ಹೋಯಿತು.

ನಿರ್ಮಾಪಕರೂ ಸಹಾ  ಹತ್ತಿಪ್ಪತ್ತು ಥಿಯೇಟರ್ಗಳಲ್ಲಿ ತಮ್ಮ ಸಿನಿಮಾ ಪ್ರದರ್ಶಿಸಿ  ತಾವು ಹಾಕಿದ ದುಡ್ಡನ್ನು ಹಿಂದಿರುಗಿ ಪಡೆಯಲು ತಿಂಗಳಾನು ಗಟ್ಟಲೇ ಕಾಯುವ ಬದಲು, ಏಕ ಕಾಲಕ್ಕೆ 300-400 ಸಿನಿಮಾ ಮಂದಿರಗಳಲ್ಲಿ ಬಿಡುಗಡೆ ಮಾಡಿ ಮೂರ್ನಾಲ್ಕು ವಾರಗಳಲ್ಲೇ ಹಾಕಿದ ಬಂಡವಾಳ ಪಡೆಯ ತೊಡಗಿದರು. ಇನ್ನು ಜನಪ್ರಿಯ ನಾಯಕರು ಅಥವಾ ನಿರ್ಮಾಪಕರು ಇನ್ನೂ ಒಂದು ಹೆಚ್ಚೆ ಮುಂದು ಹೋಗಿ ಸಿನಿಮಾ ಬಿಡುಗಡೆಯಾಗುವ ಮೊದಲ ಎರಡ್ಮೂರು ವಾರಗಳ ಕಾಲ ಸಿನಿಮಾ ಟಿಕೆಟ್ ಬೆಲೆಯನ್ನು ಏಕಾಏಕಿ 300-1200 ರೂಪಾಯಿಗಳಿಗೆ ಹೆಚ್ಚಿಸುವ ಮೂಲಕ ಹಗಲು ದರೋಡೆಗೆ ಮುಂದಾಗಿರುವುದು ನಿಜಕ್ಕೂ ದೌರ್ಭಾಗ್ಯವೇ ಸರಿ.

ci8ಟಿಕೆಟ್ ದರ ಮತ್ತು ಸಿನಿಮಾ ಮಂದಿರಗಳಲ್ಲಿ ತಿಂಡಿ ತಿನಿಸುಗಳ ಕುರಿತಾಗಿ ಏಕರೂಪವಾಗಿ  ಜನರಿಗೆ ಕೈಗೆಟುಕುವಂತಹ ಬೆಲೆಯನ್ನು ಸರ್ಕಾರವೇ  ನಿಗಧಿ ಪಡಿಸಬೇಕೆಂದು ಐದಾರು ವರ್ಷಗಳಿಂದಲೂ ಬೇಡಿಕೆ ಸಲ್ಲಿಸುತ್ತಿದ್ದರೂ, ಬಂದ ಎಲ್ಲಾ  ಸರ್ಕಾರಗಳೂ ಸಹಾ ಜನರ ಹಿತಕ್ಕಿಂತ ಅವರಿಂದ ಬರುವ ಮನೋರಂಜನೆ ತೆರಿಗೆಗೇ ಆಸೆ ಪಟ್ಟು ಈ ಕುರಿತಂತೆ ಇದುವರೆವಿಗೂ ಯಾವುದೇ ಕ್ರಮ ಕೈಗಳ್ಳದಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

ಪದೇ ಪದೇ ಕನ್ನಡ ಚಿತ್ರಗಳನ್ನು ಅಕ್ಕ ಪಕ್ಕದ ತಮಿಳು ಮತ್ತು ತೆಲುಗು ಸಿನಿಮಾಗಳ ಜೊತೆ ಹೋಲಿಸಿಕೊಂಡು ನೋಡುವವರು  ಆ ರಾಜ್ಯಗಳಲ್ಲಿ ಸರ್ಕಾರವೇ ಮಧ್ಯಸ್ಥಿಕೆ ವಹಿಸಿಕೊಂಡು ನಿಗಧಿ ಪಡಿಸಿರುವ ಟಿಕೆಟ್ ಬೆಲೆಯನ್ನು  ಮಾತ್ರಾ ಹೇಳದೇ ಜಾಣ ಮೌನ ವಹಿಸಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ.

  • ದೇಶದಲ್ಲಿ ಅತಿ ಹೆಚ್ಚು ಚಿತ್ರಗಳು ತಯಾರಾಗುವುದೇ ತೆಲುಗು ಭಾಷೆಯದ್ದಾಗಿದ್ದು, ಆಂಧ್ರ ಮತ್ತು ತೆಲಂಗಾಣದಲ್ಲಿ  ಮುನ್ಸಿಪಲ್ ಕಾರ್ಪೊರೇಷನ್ ನಗರಗಳಲ್ಲಿನ ಮಲ್ಟಿಪ್ಲೆಕ್ಸ್‌ಗಳಲ್ಲಿ ಈ ಹಿಂದೆ ಇದ್ದ 75, 150 ಮತ್ತು 250 ರೂ.ಗಳಿಂದ 125 ಮತ್ತು 250 ರೂ.ಗಳಿಗೆ ಬೆಲೆಗಳನ್ನು ಪರಿಷ್ಕರಿಸಲಾಗಿದೆ. ಅದೇ ರೀತಿ, ಸಣ್ಣ ಸಣ್ಣ ನಗರಗಳಲ್ಲಿ ರೂ 40, ರೂ 60 ಮತ್ತು ರೂ 100 ರಿಂದ ರೂ 70- ರೂ 100 ಕ್ಕೆ ನಿಗದಿಪಡಿಸಲಾಗಿದೆ.
  • ತಮಿಳುನಾಡಿನಲ್ಲಿ ಸಾಮಾನ್ಯ ಥಿಯೇಟರ್ಗಳಲ್ಲಿ  ತಮಿಳು ಚಿತ್ರಗಳಿಗೆ 60.12 ರೂ., ಇತರ ಭಾರತೀಯ ಭಾಷೆಯ ಚಿತ್ರಗಳಿಗೆ 63.72 ಮತ್ತು ಇಂಗ್ಲಿಷ್ ಚಲನಚಿತ್ರಗಳಿಗೆ 66.3 ರೂ.ಗಳಿದ್ದರೆ ಮಲ್ಟಿಪ್ಲೆಕ್ಸ್ ಸಿನಿಮಾಗಳಲ್ಲಿ ರೂ 125-175ನ್ನು ನಿಗಧಿ ಪಡಿಸಲಾಗಿದೆ.
  • ಕೇರಳ ರಾಜ್ಯದಲ್ಲಿ ಚಲನಚಿತ್ರ ಟಿಕೆಟ್‌ನ ಸರಾಸರಿ ಬೆಲೆ 130 ರೂ. ಇದ್ದು ಒಂದು  ಕುಟುಂಬವು ಐದಕ್ಕಿಂತಲೂ ಹೆಚ್ಚಿನ ಟಿಕೆಟ್‌ಗಳನ್ನು ಖರೀದಿಸಿದರೆ,ಟಿಕೆಟ್ ಬೆಲೆ ಕೇವಲ 100 ರೂ. ನಿಗಧಿ ಪಡಿಸುವ ಮೂಲಕ ಹೆಚ್ಚು ಹೆಚ್ಚಿನ ಜನರನ್ನು ಥಿಯೇಟರ್ಗಳಿಗೆ ಬರುವಂತೆ ಆಕರ್ಷಣೆ ಮಾಡಲಾಗುತ್ತಿದೆ.
  • ದುರಾದೃಷ್ಟವಷಾತ್ ಕನ್ನಡ ಚಿತ್ರಗಳ ಟಿಕೆಟ್ ದರ 203 ರೂ ಇದ್ದರೆ, ಕನ್ನಡೇತರ ಚಿತ್ರಗಳ ಗರಿಷ್ಠ ಟಿಕೆಟ್ ದರ 60 ರೂ. ಮನರಂಜನಾ ತೆರಿಗೆ ಮತ್ತಿತರ ಸೇವಾ ತೆರಿಗೆಯೂ ಸೇರಿದಂತೆ 270 ರೂಗಳಿದ್ದು ಮಲ್ಟಿ ಪ್ಲೆಕ್ಸ್ ಗಳಲ್ಲಿ ಅವರ ಇಷ್ಟಕ್ಕೆ ಏರಿಸಿಕೊಳ್ಳುವ ಅನುಕೂಲಗಳನ್ನು  ಮಾಡಿಕೊಟ್ಟಿರುವ ಪರಿಣಾಮ   ಒಂದೇ ಸಿನಿಮಾ ಒಂದೊದು ಮಾಲ್ ನಲ್ಲಿ ಒಂದೊಂದು ಸಮಯಕ್ಕೆ ಬೇರೆ ಬೇರೆ ರೀತಿಯಾದ ದರವಿದೆ. ಇನ್ನು ಬಹುತೇಕರು online ticket booking ಮಾಡಿದರೆ, ಪ್ರತೀ ಟಿಕೆಟ್ಟಿನ ಮೇಲೆ ಅವರ service charge ಎಂದು  ರೂ 40-50 ಸೇರಿ ಟಿಕೆಟ್ ಬೆಲೆ ಅಧಿಕವಾಗುವ ಪರಿಣಾಮ ಕುಟುಂಬ ಸಮೇತ ಸಿನಿಮಾ ಮಂದಿರಕ್ಕೆ ಹೋಗಿ ಸಿನಿಮಾಗಳನ್ನು ನೋಡುವುದು ನಿಜಕೂ  ಕಷ್ಟಕರವಾಗುತ್ತಿದೆ  ಎಂದರೂ ತಪ್ಪಾಗದು.

Supply Chain Management ಯೋಜನೆಯಂತೆ ಗುಣಮಟ್ಟ, ವಿತರಣೆ, ಗ್ರಾಹಕರ ಅನುಭವ ಮತ್ತು ಲಾಭದಾಯಕತೆಯನ್ನು ಗರಿಷ್ಠಗೊಳಿಸಲು ಸರಕು ಅಥವಾ ಸೇವೆಯು ಗ್ರಾಹಕರ ಅಗತ್ಯಗಳಿಗೆ ತಕ್ಕಂತಿದ್ದು ಗ್ರಾಹಕರ ಬೇಡಿಕೆ ಹೆಚ್ಚಾದಂತೆಲ್ಲಾ ಉತ್ಪನ್ನಗಳ ಬೆಲೆಯು ಕಡಿಮೆಯಾಗಬೇಕು ಎಂದಿದೆ. ದುರದೃಷ್ಟವಷಾತ್ ಸರ್ಕಾರ ಮತ್ತು ಸಿನಿಮಾ ನಿರ್ಮಾಪಕರು ಈ ಕುರಿತಂತೆ ಸ್ವಲ್ಪವೂ ಗಮನ ಹರಿಸದೇ, ಕಡಿಮೆ ಬೆಲೆಯಲ್ಲಿ ಉತ್ತಮ ವಿಚಾರಭರಿತ ಸದಭಿರುಚಿಯ ಸಿನಿಮಾ ಮೂಲಕ ಮನೋರಂಜನೆ ಒದಗಿಸುತ್ತಾ ಲಾಭ ಗಳಿಸುವ ಬದಲು ಸಿನಿಮಾ ಹೇಗಿದ್ದರೇನಂತೆ, ಟಿಕೆಟ್ ಬೆಲೆ ಎಷ್ಟಿದ್ದರೇನಂತೇ? ಎಂದು  ಸಿನಿಮಾವನ್ನು ಇತರೇ ವ್ಯಾಪಾರದ ರೀತಿಯಲ್ಲಿ ಹೊಡೀ ಬಡೀ ಕಡೀ ಎಂಬಂತಹ ಸಿನಿಮಾಗಳ ಮೂಲಕ ಇಂದು ಬಂಡವಾಳ ಹಾಕಿ ನಾಳೆಯೇ  ದರ ಹತ್ತು ಪಟ್ಟು ಲಾಭ ಗಳಿಸಬೇಕು ಎನ್ನುವ ನಿಟ್ಟಿನಲ್ಲಿ ಇರುವ ಕಾರಣ ಸಾಮಾನ್ಯ ಮಧ್ಯಮ ವರ್ಗದ  ಕನ್ನಡ ಚಿತ್ರ ರಸಿಕರು ಸಿನಿಮಾ ಮಂದಿರಗಳಿಂದ ದೂರವಿದ್ದು ಸಿನಿಮಾ ಟಿವಿಯಲ್ಲಿ ಬರುವುದನ್ನೇ ಜಾತಕ ಪಕ್ಷಿಗಳಂತೆ ಕಾಯುವಂತಾಗಿದೆ.

ci2ನಮ್ಮ ಅಕ್ಕ ಪಕ್ಕದ ರಾಜ್ಯದಲ್ಲಿ ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಸಿನಿಮಾ ತೋರಿಸಿ ಕೋಟಿ ಕೋಟಿ ಲಾಭ ಗಳಿಸಿ ವರ್ಷಕ್ಕೆ 100-150 ಸಿನಿಮಾಗಳನ್ನು ತಯಾರು ಮಾಡುತ್ತಿದ್ದಲ್ಲಿ ಅದೇ ನೀತಿ ನಿಯಮಗಳನ್ನು ಕರ್ನಾಟಕದಲ್ಲೂ ಕನ್ನಡ ಚಿತ್ರ ಮಂದಿರಗಳಲ್ಲೂ ಅಳವಡಿಸಿ ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ಸಿನಿಮಾ ಮಂದಿರಕ್ಕೆ ಆಕರ್ಷಿಸುವ ಮೂಲಕ ಜನರಿಗೆ ಮನೋರಂಜನೆ ಒದಗಿರುವುದಲ್ಲದೆ  ಅಧಿಕ ಲಾಭವನ್ನೂ ಗಳಿಸಬಹುದಲ್ಲವೇ? ಎನ್ನುವುದೇ ಸಕಲ ಕನ್ನಡಿಗರ  ಅಶಯವಾಗಿದೆ.

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s