ಹಾಸನ ಜಿಲ್ಲೆಯ, ಚೆನ್ನರಾಯಪಟ್ಟಣ ತಾಲೂಕಿನ, ಹಿರೀಸಾವೆ ಹೋಬಳಿಯ ಬಳಿಯ ಪುಟ್ಟದಾದ ಹಳ್ಳಿಯೇ ನಮ್ಮೂರು ಬಾಳಗಂಚಿ. ಸದ್ಯಕ್ಕೆ 350-500 ಮನೆಗಳು ಇದ್ದು ಸುಮಾರು ಹಲವರು ಈಗಾಗಲೇ ಕೆಟ್ಟು ಪಟ್ಟಣಕ್ಕೆ ಸೇರು ಎನ್ನುವಂತೆ ದೇಶಾದ್ಯಂತ ವಿವಿಧ ನಗರ ಪ್ರದೇಶಗಳಿಗೆ ವಲಸೆ ಹೋಗಿರುವ ಕಾರಣ, ಸದ್ಯಕ್ಕೆ ಎರಡು ಮೂರು ಸಾವಿರದವರೆಗೂ ಜನಸಂಖ್ಯೆ ಇರುವಂತಹ ಹಳ್ಳಿ. ಹೆಸರಿಗಷ್ಟೇ ಚಿಕ್ಕದಾದರೂ ಇತಿಹಾಸ ಇಣುಕಿ ನೋಡಿದರೆ ಗುರು ವಿದ್ಯಾರಣ್ಯರ ತವರೂರು ಎಂದು ಖ್ಯಾತಿ ಹೊಂದಿದೆ. ಇನ್ನು ಕೆಲವರು ಗುರು ವಿದ್ಯಾರಣ್ಯರು ವಾಸಿಸಿದ ಸ್ಥಳವೆಂದು ಇಲ್ಲವೇ ತಪಸ್ಸನ್ನು ಮಾಡಿದ ಪ್ರದೇಶವೆಂದೂ ಹೇಳುತ್ತಾರೆ. ಈ ಹಳ್ಳಿಯಲ್ಲಿ ಸುಮಾರು ಹತ್ತು ಹದಿನೈದಕ್ಕೂ ಹೆಚ್ಚಿನ ದೇವಾಲಯಗಳಿದ್ದು, ಶ್ರೀ ಸ್ವರ್ಣಾಂಬ ಅಥವಾ ಹೊನ್ನಾದೇವಿ ಎಂಬ ದೇವಿ ಗ್ರಾಮ ದೇವತೆಯಾಗಿದ್ದು, ಪ್ರತೀ ವರ್ಷ ಚೈತ್ರಮಾಸದಲ್ಲಿ ಬಹಳ ವಿಜೃಂಭಣೆಯಿಂದ ಸುಮಾರು ಎರಡು ವಾರಗಳ ಕಾಲ ಊರ ಹಬ್ಬ ನಡೆಸಿಕೊಂಡು ಬರುವ ಪದ್ದತಿ ಇದೆ. ಇದರ ಮೂಲ ಹೆಸರು ಬಾಳ್ಗಚ್ಚು, ಬಾಲಕಂಚಿ ಎಂಬುದಾಗಿದ್ದು ನಂತರದ ದಿನಗಳಲ್ಲಿ ಅದು ಜನರ ಆಡು ಬಾಷೆಯಲ್ಲಿ ಬಾಳಗಂಚಿ ಎಂದಾಗಿದೆ ಎನ್ನುತ್ತಾರೆ ಸ್ಥಳಿಯರು.
ಪ್ರತೀ ವರ್ಷ ಸಂಕ್ರಾಂತಿ ಹಬ್ಬ ಮುಗಿದ ನಂತರ ಬೆಳೆದ ಫಸಲನ್ನು ಹದ ಮಾಡಿ ಮನೆಗೆ ಬೇಕಾದಷ್ಟನ್ನು ಉಳಿಸಿಕೊಂಡು ಹೆಚ್ಚಾಗಿದ್ದನ್ನು ಮಾರಿ ಕೈಯಲ್ಲಿ ಅಲ್ಪ ಸ್ವಲ್ಪ ಹಣವನ್ನು ಇಟ್ಟು ಕೊಂಡಿರುತ್ತಾರೆ. ನಮ್ಮೂರಿನ ಸುತ್ತಮುತ್ತಲಿನ ಹಳ್ಳಿಯ ರೈತರುಗಳಿಗೆ ಸೂಕ್ತವಾದ ನೀರಾವರಿಯ ಸೌಲಭ್ಯವಿಲ್ಲದ ಕಾರಣ ಹೆಚ್ಚಾಗಿ ಮಳೆಯ ನೀರನ್ನೇ ಆಶ್ರಯಿಸಿ ತಮ್ಮ ತಮ್ಮ ಜಮೀನಿನಲ್ಲಿ ಮುಂದಿನ ಬೇಸಾಯಕ್ಕೆ ಹದಗೊಳಿಸಲು ಮಳೆಯನ್ನೇ ಕಾಯುತ್ತಿರುವ ಸಂದರ್ಭದಲ್ಲಿ ತುಸು ವಿಶ್ರಾಂತರಾಗಿರುತ್ತಾರೆ. ಹಾಗಾಗಿ ಯುಗಾದಿ ಹಬ್ಬ ಬಂದ ನಂತರ ಬರುವ ಮಳೆಗಾಗಿ ಕಾಯುತ್ತಾ ಇಂದಿನ ಕಾಲದಂತೆ ಅಂದೆಲ್ಲಾ ದೂರದರ್ಶನ, ಚಲನಚಿತ್ರಗಳಂತಹ ಮನೋರಂಜನೆ ಇಲ್ಲದಿದ್ದ ಕಾಲದಲ್ಲಿ, ನಮ್ಮ ಪೂರ್ವಿಕರು ರಾಮನವಮಿ, ರಾಮಸಾಮ್ರಾಜ್ಯ ಪಟ್ಟಾಭಿಷೇಕ, ಹನುಮ ಜಯಂತಿ ಇಲ್ಲವೇ ಊರ ಹಬ್ಬಗಳ ಮುಖಾಂತರ ಎಲ್ಲರನ್ನೂ ಒಗ್ಗೂಡಿಸಿ ಅವರ ಮನಮುದಗೊಳಿಸುವಂತಹ ಭಜನೆ, ಸಂಗೀತ ಕಾರ್ಯಕ್ರಮಗಳು, ಹರಿಕಥೆ ಮತ್ತು ಪೌರಾಣಿಕ ನಾಟಕಗಳನ್ನು ಏರ್ಪಡಿಸುವ ಸತ್ಸಂಪ್ರದಾಯವಿದೆ.
ಆದರಂತೆಯೇ ನನ್ನೂರು ಬಾಳಗಂಚಿ ಮತ್ತು ಸುತ್ತಮತ್ತಲಿನ ಹೊನ್ನಶೆಟ್ಟ ಹಳ್ಳಿ, ಹೊನ್ನಾದೇವಿಹಳ್ಳಿ, ಬ್ಯಾಡರಹಳ್ಳಿ, ಗೌಡರಹಳ್ಳಿ, ಅಂಕನಹಳ್ಳಿ, ಕಬ್ಬಳಿ, ಮೂಕಿಕೆರೆ ಮುಂತಾದ ಹದಿನಾರು ಊರುಗಳಲ್ಲಿ ಯುಗಾದಿ ಹಬ್ಬ ಕಳೆದ ನಂತರದ ಸುಮಾರು ಮೂರುವಾರಗಳ ಕಾಲ ಹಬ್ಬದ ಸಂಭ್ರಮದ ವಾತಾವರಣ. ಯುಗಾದಿ ಮುಗಿದ ಮೊದಲನೇ ಗುರುವಾರ ಸಾರಣೇ ಹಬ್ಬದ (ಮೊದಲನೇ ಕಂಬ) ಮುಖಾಂತರ ಹಬ್ಬದ ಸಂಭ್ರಮ ಶುರುವಾಗುತ್ತದೆ. ಅಂದಿನ ದಿನ ಊರಿನ ಎಲ್ಲರೂ ತಮ್ಮ ತಮ್ಮ ಮನೆಗಳ ಮುಂದೆ ಶುಚಿಗೊಳಿಸುವುದರ ಮೂಲಕ ಇಡೀ ಊರನ್ನೂ ಶುಚಿಗೊಳಿಸಿ ಊರಿನ ಅಷ್ಟದಿಕ್ಕುಗಳಲ್ಲಿಯೂ ಮಾವಿನ ತಳಿರು ತೋರಣ ಕಟ್ಟುವ ಮೂಲಕ ಊರಿಗೆ ಹಬ್ಬದ ಕಳೆಯನ್ನು ಕಟ್ಟುತ್ತಾರೆ. ಅಂದು ಇಡೀ ಗ್ರಾಮಸ್ಥರು, ಗ್ರಾಮದೇವತೆ ಹೊನ್ನಾದೇವಿ ದೇವಾಲಯದ ಅರ್ಚಕರು ಮತ್ತು ಅರೆ, ಡೊಳ್ಳು. ತಮಟೆ ಮತ್ತು ನಾದಸ್ವರ ವಾದಕರೊಂದಿಗೆ ಊರಿನ ಈಶಾನ್ಯದಿಕ್ಕಿನಲ್ಲಿ ಸಂಪ್ರದಯದಂತೆ ಪೂಜೆ ಮಾಡಿ ಅಲ್ಲಿಂದ ಕೆಮ್ಮಣ್ಣು ತಂದು ಊರಿನ ದೇವಾಯವನ್ನು ಶುಚಿಗೊಳಿಸಿ ಸುದ್ದೆ ಕೆಮ್ಮಣ್ಣು ಸಾರಿಸಿ ಅಲಂಕರಿಸುವ ಮೂಲಕ ಅಧಿಕೃತವಾಗಿ ಊರ ಹಬ್ಬಕ್ಕೆ ನಾಂದಿ ಹಾಡಲಾಗುತ್ತದೆ. ಹಾಗೆ ಅಷ್ಟ ದಿಕ್ಕುಗಳಲ್ಲಿ ತೋರಣ ಕಟ್ಟಿದ ಮೇಲೆ ಊರಿನಲ್ಲಿ ಯಾವುದೇ ಮಡಿ ಮೈಲಿಗೆಗಳು ಆಗದಂತೆ ನೋಡಿಕೊಳ್ಳಲಾಗುತ್ತದೆ ಮತ್ತು ಹಬ್ಬ ಮುಗಿಯುವ ವರೆಗೂ ಇಡೀ ಊರಿನ ಒಳಗೆ ಯಾರೂ ಪಾದರಕ್ಷೆಗಳನ್ನು ಧರಿಸಿ ಓಡಾಡುವಂತಿಲ್ಲ ಮತ್ತು ಮಾಂಸಾಹಾರ ಸೇವಿಸುವಂತಿಲ್ಲ. ಅಂದಿನಿಂದ ಊರ ಹಬ್ಬ ಮುಗಿಯುವವರೆಗೂ ಪ್ರತೀ ದಿನ ಸಂಜೆ, ರಂಗ ಮಂಟಪದ ಹಿಂದೆ ಅಂದರೆ ಊರ ಒಳಗಿನ ಹೊನ್ನಮ್ಮನ ಗುಡಿಯ ಮುಂದೆ ಊರಿನ ಎಲ್ಲಾ ಗಂಡು ಮಕ್ಕಳು ಮತ್ತು ಹಿರಿಯರಾದಿ ತಮಟೆಗಳ ತಾಳಕ್ಕೆ ವಿಶೇಷ ಗತ್ತಿನಿಂದ ತಮ್ಮದೇ ಗ್ರಾಮೀಣ ಶೈಲಿಯಲ್ಲಿ ರಂಗ ಕುಣಿಯುತ್ತಾರೆ. ತಮ್ಮ ಊರಿನ ಗಂಡಸರು ಮತ್ತು ಮಕ್ಕಳು ಕೈಯಲ್ಲಿ ಶಲ್ಯವೋ ಇಲ್ಲವೇ ಹೆಗಲು ಮೇಲಿನ ವಸ್ತ್ರವನ್ನು ಹಿಡಿದುಕೊಂಡು ಅಲ್ಯೋ ಅಲ್ಯೋ ಅಲ್ಯೋ ಎಂದು ರಂಗ ಕುಣಿಯುವುದನ್ನು ನೋಡಲು ಊರ ಹೆಂಗಸರು ಮಕ್ಕಳು ಸುತ್ತುವರಿದಿರುವುದನ್ನು ವರ್ಣಿಸುವುದಕ್ಕಿಂತ ಕಣ್ತುಂಬ ನೋಡಿ ಆನಂದಿಸಬೇಕು.
ಇನ್ನು ಎರಡನೇ ಕಂಬ ಮುಗಿದ ಎರಡು ದಿನ ಕಳೆದ ನಂತರದ ಶನಿವಾರವೇ ಚೋಮನ ಹಬ್ಬ. ಹಬ್ಬಕ್ಕೆ ಎರಡು ದಿನಗಳ ಮುಂಚೆಯೇ ರಂಗ ಮಂಟಪದ ಮೇಲಿನ ಕಳಶವನ್ನು ತೆಗೆದು ಅದನ್ನು ಚೆನ್ನಾಗಿ ಶುಚಿಗೊಳಿಸಲಾಗಿರುತ್ತದೆ. ಚೋಮನ ಹಬ್ಬದ ಸಂಜೆ ಸೂರ್ಯಾಸ್ತಕ್ಕೆ ಸರಿಯಾಗಿ ಬಾಜಾಭಜಂತ್ರಿಯ ಸಮೇತ ಹೊನ್ನಾದೇವಿಯ ಅರ್ಚಕರು ರಂಗ ಮಂಟಪಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಎಲ್ಲರ ಸಮ್ಮುಖದಲ್ಲಿ ರಂಗಮಂಟಪ ಶಿಖರಮೇಲೆ ಕಳಸವನ್ನು ಇಡುವುದರ ಮೂಲಕ ಚೋಮನ ಹಬ್ಬಕ್ಕೆ ಚಾಲನೆ ಕೊಡುತ್ತಾರೆ.
ರಂಗ ಮಂಟಪಕ್ಕೆ ಕಳಶ ಇಡುತ್ತಿದ್ದಂತೆಯೇ, ಹಿಂದೆಲ್ಲಾ ಎತ್ತಿನಗಾಡಿಗಳು ಇರುತ್ತಿದ್ದವು ಈಗ ಟ್ರಾಕ್ಟರ್ ಮೇಲೆ ಪಲ್ಲಕ್ಕಿಯನ್ನು ಕಟ್ಟಲು ಅರಂಭಿಸಿದರೆ, ಊರಿನ ದೊಡ್ಡ ಹಟ್ಟಿಯಲ್ಲಿ ( ಹರಿಜನರ ಕೇರಿಯಲ್ಲಿ ) ಹೆಬ್ಬಾರಮ್ಮ ಮತ್ತು ಚಾವಟಿಯಮ್ಮನ ಪೂಜೆ ಶುರುವಾಗಿರುತ್ತದೆ ಅದೇ ರೀತಿ ಎರಡನೇ ಕಂಬದ ದಿನ ಪಟ್ಟಕ್ಕೆ ಕೂರಿಸಿದ್ದ ಚೋಮನನ್ನು ಹೊರಲು ಊರಿನ ಅಕ್ಕಸಾಲಿಗರ ಕುಟುಂಬದ ಒಬ್ಬ ಸದಸ್ಯ ಮತ್ತು ಮತ್ತೊಂದು ಚೋಮನನ್ನು ಹೊರಲು ಸವಿತಾ ಜನಾಂಗ (ಕ್ಷೌರಿಕರು)ದ ಒಬ್ಬ ಸದಸ್ಯ ಇಡೀ ದಿನ ಮಡಿಯಿಂದ ಹೊಸದಾದ ಶುಭ್ರ ವೇಷಧಾರಿಗಳಾಗಿ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಸಿದ್ದರಾಗಿರುತ್ತಾರೆ. ಊರಿನ ಹೊನ್ನಾದೇವಿಯ ಒಕ್ಕಲಿನ ಪ್ರತೀ ಮನೆಯವರೂ ಶ್ರಧ್ದೆಯಿಂದ ದೇವಸ್ಥಾನಕ್ಕೆ ಬಂದು ಹಣ್ಣು ಕಾಯಿ ಮಾಡಿಸಿಕೊಂಡು ಹೋಗುತ್ತಿರುತ್ತಾರೆ. ಇಷ್ಟೆಲ್ಲಾ ಸಿದ್ಧವಾಗುವ ವೇಳೆಗೆ ಗಂಟೆ ರಾತ್ರಿ ಹನ್ನೆರಡು ಘಂಟೆಯಾಗಿರುತ್ತದೆ . ಅಷ್ಟು ಹೊತ್ತಿಗೆ ಅಕ್ಕ ಪಕ್ಕದ ಊರಿನವರೆಲ್ಲರೂ ಊಟ ಮುಗಿಸಿ ದೇವಸ್ಧಾನದ ಸುತ್ತ ಮುತ್ತ ಸೇರಲಾರಂಭಿಸಿರುತ್ತಾರೆ. ಹೆಂಗಳೆಯರು ಸೋಬಾನೇ ಹಾಡುತ್ತಿದ್ದರೆ ಇನ್ನು ಮಕ್ಕಳು ಜಾತ್ರೆಯ ಬೆಂಡು ಬತ್ತಾಸು ಈಗ ಗೋಬಿ ಮಂಚೂರಿ ತಿನ್ನುವುದರಲ್ಲಿ ಮಗ್ನರಾಗಿರುತ್ತಾರೆ. ಗಂಡು ಮಕ್ಕಳೆಲ್ಲಾ ದೊಡ್ಡ ಹಟ್ಟಿಯ ಮುಂದೆ ಚಾವಟೀ ಅಮ್ಮನ ಬರುವಿಕೆಗಾಗಿಯೇ ಕಾದು ನಿಂತು, ಅಲ್ಯೋ ಅಲ್ಯೋ ಅಲ್ಯೋ ಎಂದು ಹುರಿದುಂಬಿಸುತ್ತಿರುತ್ತಾರೆ. ಅಷ್ಟು ಹೊತ್ತಿಗೆ, ಪಲ್ಲಕ್ಕಿಯ ಅಲಂಕಾರಮುಗಿದು, ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ, ನಾನಾ ರೀತಿಯ ಪುಷ್ಪಾಲಂಕಾರದಿಂದ ಅಲಂಕರಿಸಿ ಮೆರವಣಿಗೆ ಸಿದ್ದಗೊಳಿದ ತಕ್ಷಣ, ಊರಿನ ಮಡಿವಾಳರ ಹಿರಿಯ ಸದಸ್ಯ, ಸರ್ವೇ ಮರದ ತುಂಡಿಗೆ ಬಟ್ಟೆಯನ್ನು ಚೆನ್ನಾಗಿ ಸುತ್ತಿ ಅದನ್ನು ಎಣ್ಣೆಯಡಬ್ಬದಲ್ಲಿ ಅದ್ದಿ ಪತ್ತನ್ನು (ಪಂಜು) ಸಿದ್ದಗೊಳಿಸಿಕೊಂಡು ಉತ್ಸವ ಮೂರ್ತಿಗೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಪತ್ತಿನಿಂದ ಆರತಿ ಬೆಳಗುತ್ತಿದ್ದಂತೆ ಅರ್ಚಕರು ಉತ್ಸವ ಮೂರ್ತಿಗೆ ಮಂಗಳಾರತಿ ಮಾಡುವ ಮೂಲಕ ಉತ್ಸವಕ್ಕೆ ಅಧಿಕೃತವಾಗಿ ಸಿದ್ದತೆ ದೇವರಿಗೆ ಸುಮಾರು ಮಧ್ಯರಾತ್ರಿ ಒಂದು ಗಂಟೆಯ ಹೊತ್ತಿಗೆ ಢಂ ಎಂದು ದೊಡ್ಡ ಹಟ್ಟಿಯ ಹೆಬ್ಬಾರಮ್ಮನ ಗುಡಿಯಿಂದ ಶಬ್ಧ ಬಂದಿತೆಂದರೆ ಸಾಕು ಇಡೀ ಊರು ಊರಿಗೇ ವಿದ್ಯುತ್ ಸಂಚಾರವಾದ ಹಾಗೆ ಆಗಿ ಎಲ್ಲರೂ ದಡಾ ಬಡಾ ಎಂದು ಎದ್ದು ನಿಂತು ಚಾವಟೀ ಅಮ್ಮನ ಬರುವಿಕೆಗಾಗಿ ಸಿದ್ಧರಾಗುತ್ತಾರೆ. ಜ್ವಾಲಾರ ಹೂವಿನಿಂದ ಅಲಂಕೃತಳಾದ ಚಾವಟೀ ಅಮ್ಮನನ್ನು ಎದೆಯ ಮೇಲೆ ಧರಿಸಿರುವ ಪೂಜಾರಿಯನ್ನು ನಾಲ್ಕಾರು ಜನ ಹಿಂದಿನಿಂದ ಗಟ್ಟಿಯಾಗಿ ಹಿಡಿದಿಟ್ಟುಕೊಂಡಿದ್ದರೂ ಕಳೆದ ಹದಿನೈದು ದಿನಗಳಿಂದ ಕೇವಲ ದೇವಸ್ಥಾನದ ಮೂರು ಪಿಡಿಚೆ ಪ್ರಸಾದ ತಿಂದು ಬಹಳ ಶ್ರಧ್ಧಾ ಭಕ್ತಿಯಿಂದ ಇದ್ದರೂ, ಮೈಮೇಲೆ ಧರಿಸಿರುವ ದೇವಿಯ ಪ್ರಭಾವವೋ, ದೋಣ್ ಮತ್ತು ಡೊಳ್ಳಿನ ಶಬ್ಧಕ್ಕೋ ಅಥವಾ ಊರ ಗಂಡು ಮಕ್ಕಳ ಅಲ್ಯೋ ಅಲ್ಯೋ ಅಲ್ಯೋ ಎಂದು ಹುರಿದುಂಬಿಸುವಿಕೆಯ ಪ್ರಭಾವವೋ ಎನೋ? ಕೈಯಲ್ಲಿ ಬೆಳ್ಳಿಯ ರೇಕನ್ನು ಸುತ್ತಿದ ನಾಗರ ಬೆತ್ತವನ್ನು ಹಿಡಿದು ಝಳುಪಿಸುತ್ತಾ ಆರ್ಭಟದಿಂದ ದೊಡ್ಡ ಹಟ್ಟಿ ಬಿಟ್ಟು ಹೊನ್ನಮ್ಮನ ಗುಡಿಯ ಬಳಿ ಬರುತ್ತಿದ್ದರೆ ಎಲ್ಲರೂ ಎದ್ದೆನೋ ಬಿದ್ದೆನೋ ಎಂದು ದಿಕ್ಕಾಪಲಾಗಿ ದೇವಸ್ಥಾನದ ಮುಂದಕ್ಕೆ ಓಡಿ ಹೋಗಿ ಹೊನ್ನಮ್ಮನ್ನ ದೇವಾಲಯದ ಮುಂದೆ ರಪ್ ರಪ್ ರಪ್ ಎಂದು ನೂರಾರು ತೆಂಗಿನ ಕಾಯಿಯ ಈಡುಗಾಯಿ ಹಾಕಿ ಚಾವಟಿ ಅಮ್ಮನನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿದ್ದರೆ, ಉಳಿದವರು ಅಲ್ಯೋ ಅಲ್ಯೋ ಅಲ್ಯೋ ಎಂದು ಮತ್ತಷ್ಟೂ ಹುರಿದುಂಬಿಸಲು ಪ್ರಯತ್ನಿಸುತ್ತಿರುತ್ತಾರೆ. ಹಾಗೆ ಪ್ರೇರೇಪಿತವಾಗಿ ಕೆಲವೊಂದು ಬಾರಿ ಚಾವಟಿ ಅಮ್ಮ ಜನರ ಮೇಲೆ ಏರಿ ಹೋಗಿ ತನ್ನ ಬೆತ್ತದಿಂದ ಬಾರಿಸುವುದೂ ಉಂಟು. ಒಮ್ಮೆ ಹಾಗೆ ಯಾರಿಗಾದರೂ ಚಾವಟಿ ಅಮ್ಮನಿಂದ ಪೆಟ್ಟು ಬಿದ್ದಿತೆಂದರೆ ಆತನೋ ಇಲ್ಲವೇ ಆಕೆಯೋ ಎನೋ ತಪ್ಪು ಮಾಡಿರಬೇಕು ಇಲ್ಲವೇ ಮಡಿ ಮೈಲಿಗೆ ಇಲ್ಲವೇ ಆಚಾರ ವಿಚಾರಗಳಲ್ಲಿ ಲೋಪ ಎಸಗಿರಬೇಕೆಂಬ ಭಾವನೆ ಊರಿನವರಿಗಿದ್ದು ಹಾಗೆ ಪೆಟ್ಟು ತಿಂದವರು ನಂತರ ದೇವರಲ್ಲಿ ಕ್ಷಮಾಪಣೇ ಬೇಡುವ ಪರಿಪಾಠವಿದೆ. ಹಾಗಾಗಿ ಈ ಚಾವಟಿಯಮ್ಮನೇ ಇಡೀ ಚೋಮನ ಹಬ್ಬಕ್ಕೆ ಪ್ರಮುಖ ಅಕರ್ಷಣೆ ಎಂದರೂ ತಪ್ಪಾಗದು.
ಹಾಗೆ ಈಡುಗಾಯಿಯಿಂದ ಶಾಂತವಾದ ಚಾವಟಿ ಅಮ್ಮಾ ಹೊನ್ನಾದೇವಿಯ ಗುಡಿಯ ಮುಂದೆ ನಿಂತು ಆರತಿ ಮಾಡಿಸಿಕೊಂಡು ಅದರ ಮುಂದೆ ಆ ಇಬ್ಬರೂ ಚೋಮನ ವೇಷಧಾರಿಗಳು ಮತ್ತು ಹಸಿರು ಮುಖ ಹೊತ್ತ ಹೊನ್ನಮ್ಮ ಸಹಿತ ಹಿಮ್ಮುಖವಾಗಿ ನಡೆದುಕೊಂಡು ಊರ ಮುಂದಿನ ಅರಳೀ ಕಟ್ಟೆಯತ್ತ ಸಾಗಿದರೆ, ಅದರೆ ಹಿಂದೆಯೇ ಸರ್ವಾಲಂಕೃತವಾದ ಪಲ್ಲಕ್ಕಿ ಸಾಗುತ್ತದೆ. ಊರ ತುಂಬಾ ಬಣ್ಣ ಬಣ್ಣದ ಸೀರಿಯಲ್ ಸೆಟ್ ಮತ್ತು ನಾನಾ ರೀತಿಯ ದೇವಾನು ದೇವತೆಗಳಿಂದ ಕಂಗೊಳಿಸುತ್ತಿರುತ್ತದೆ. ಹಬ್ಬಕ್ಕೆಂದೇ ವಿಶೇಷವಾಗಿ ನುಗ್ಗೇಹಳ್ಳಿಯಿಂದ ಮನೆಯಲ್ಲಿಯೇ ಪಟಾಕಿ ತಯಾರಿಸಿಕೊಂಡು ಬರುವ ಸಾಬರು ನಾನಾ ರೀತಿಯ ಬಾಣ ಬಿರುಸಿಗಳನ್ನು ಗಗನಕ್ಕೇರಿಸುತ್ತಾ , ನಾನಾ ರೀತಿಯ ಬಾಂಬ್ಗಳನ್ನು ಸಿಡಿಸುತ್ತಾ ಊರ ಹಬ್ಬಕ್ಕೆ ಮತ್ತಷ್ಟು ವಿಶೇಷ ಮೆರಗನ್ನು ಬರುತ್ತದೆ.
ಹೀಗೆ ನಿಧಾನವಾಗಿ ತಮಟೆ, ನಾದಸ್ವರದೊಂದಿಗೆ ಊರ ಮುಂದಿನ ಅರಳಿಕಟ್ಟೆಯ ಬಳಿ ತಲುಪಿ ಅಲ್ಲಿ ಮಳೆ ಬೆಳೆ ಶಾಸ್ತ್ರ ಕೇಳುವ ಪರಿಪಾಠವಿದೆ. ಎರಡನೆಯ ಕಂಬದ ದಿನ ದೇವಸ್ಥಾನದಲ್ಲಿ ಮಡಕೆಯಲ್ಲಿ ಬಿತ್ತನೆ ಮಾಡಿದ್ದ ಧವಸ ಧಾನ್ಯಗಳ ಚಿರುರುವಿಕೆಯ ಮೇಲೆ ಆ ವರ್ಷದ ಊರಿನ ಬೆಳೆ ಅವಲಂಭಿವಾಗಿರುತ್ತದೆ ಎಂಬ ನಂಬಿಕೆ ಊರಿನ ಜನರಿಗಿರುತ್ತದೆ. ಅಲ್ಲಿ ಮಳೆ ಬೆಳೆ ಶಾಸ್ತ್ರ ಮುಗಿದು ಡಣ್ ಎಂದು ಶಬ್ಧ ಕೇಳಿಸುತ್ತಿದ್ದಂತೆಯೇ ಹಸಿರು ಮುಖದ ಹೊತ್ತಿರುವ ಹೊನ್ನಮ್ಮನ ಅರ್ಚಕರು, ಅವರ ಪರಿಚಾರಕಾರೂ, ಛತ್ರಿ ಹಿಡಿದ ವೀರಶೈವರೂ ರಭಸವಾಗಿ ಒಲಂಪಿಕ್ಸ್ ಕ್ರೀಡೆಗಿಂತಲೂ ಅಧಿಕ ವೇಗದಿಂದ ಓಡಿ ಬಂದು ಗುಡಿ ಸೇರುವುದನ್ನು ನೋಡುವುದೇ ಚೆಂದ. ನಂತರ ಪಲ್ಲಕ್ಕಿಯ ಮೇಲಿದ್ದ ಉತ್ಸವ ಮೂರ್ತಿಯನ್ನು ರಂಗ ಮಂಟಪದಲ್ಲಿ ಉಯ್ಯಾಲೆಮಣೆಯಲ್ಲಿ ಇಟ್ಟರೆ, ಚಾವಟಿ ಅಮ್ಮಾ ಊರಿನ ಒಳಗಿರುವ ಲಕ್ಷ್ಮೀ ನರಸಿಂಹ, ಶಂಭು ಲಿಂಗ, ಗಾಣಿಗರ ಹಟ್ಟಿಯ ಲಕ್ಷ್ಮೀ ದೇವಿ, ರಂಗ ಮಂಟಪದ ಮುಂದಿನ ಗಣೇಶನ ಗುಡಿಯ ಮಂದೆ ಹೋಗಿ ಆರತಿ ಬೆಳಗಿಸಿಕೊಂಡು ಊರ ಶಾನುಭೋಗರಾದ ನಮ್ಮ ಮನೆಯ ಮುಂದೆ ಬರುವ ಹೊತ್ತಿಗೆ ಶಾಂತ ಸ್ವರೂಪಳಾಗಿರುತ್ತಾಳೆ. ನಮ್ಮ ಮನೆಯ ಹೆಂಗಸರು ಮನೆಯ ಹಿರಿಯ ಮುತ್ತೈದೆಯ ನೇತೃತ್ವದಲ್ಲಿ ಹೆಬ್ಬಾರಮ್ಮ, ಚಾವಟಿಯಮ್ಮ ಮತ್ತು ಚೋಮಗಳಿಗೆ ಆರತಿ ಬೆಳಗಿ ಅವರಿಗೆಲ್ಲರಿಗೂ ಎಳನೀರು ಕೊಟ್ಟು ಈಡುಗಾಯಿ ಹೊಡೆಯುತ್ತಿದ್ದಂತೆ ಚಾವಟಿಯಮ್ಮ ತನ್ನ ಗುಡಿಗೆ ಹೋಗಿ ಸೇರಿಕೊಂಡರೆ, ಚೋಮ ವೇಷಧಾರಿಗಳು ಹೊನ್ನಮ್ಮನ ಗುಡಿಗೆ ಹೋಗಿ ತಮ್ಮ ವೇಷ ಕಳಸಿ ಸ್ವಲ್ಪ ವಿಶ್ರಮಿಸಿಕೊಳ್ಳುತ್ತಾರೆ.
ಇಷ್ಟೆಲ್ಲಾ ಮುಗಿಯುತ್ತಿದ್ದಂತೆಯೇ ರಂಗ ಮಂಟಪದ ಮುಂದೆ ತೆಂಗಿನ ಗರಿಯ ಸೋಗೆಗಳಿಗೆ ಬೆಂಕಿಹಾಕಿ ಚರ್ಮದ ತಮಟೆಗಳನ್ನು ಹದವಾಗಿ ಕಾಯಿಸಿ, (ಈಗೆಲ್ಲಾ ಪಾಲೀಥೀನ್ ತಮಟೆಗಲು ಬಂದಿವೆಯಾದರೂ ಚರ್ಮದ ತಮಟೆಯ ನಾದ ಮುಂದೆ ಇವುಗಳು ಏನು ಇಲ್ಲ ಎನ್ನುವಂತಿದೆ) ಟ್ರಣ ಟ್ರಣ್ ಎನ್ನುತ್ತಿದ್ದಂತೆಯೇ ಅಬಾಲಾ ವೃಧ್ಧರಾದಿಯರೂ ಕೈಯಲ್ಲಿ ಕೈಯಲ್ಲಿ ಶಲ್ಯವೋ ಇಲ್ಲವೇ ಹೆಗಲು ಮೇಲಿನ ವಸ್ತ್ರವನ್ನು ಹಿಡಿದುಕೊಂಡು ಅಲ್ಯೋ ಅಲ್ಯೋ ಅಲ್ಯೋ ಎಂದು ಕಾಲಿಗೆ ಗೆಜ್ಜೆ ಕಟ್ಟಿಕೊಂಡು ರಂಗ ಕುಣಿಯುವುದಕ್ಕೆ ಸಿದ್ದರಾಗಿರುತ್ತಾರೆ. ಸುಮಾರು ಹತ್ತು ಹದಿನೈದು ನಿಮಿಷ ವಿವಿಧ ಗತ್ತಿನಲ್ಲಿ ರಂಗ ಕುಣಿಯುತ್ತಿದ್ದಂತೆಯೇ ಅವರ ಆಯಸವನ್ನು ತಣಿಸಲು ಮತ್ತು ಅವರನ್ನು ಮನರಂಜಿಸಲು ವಿವಿಧ ವೇಷಗಳನ್ನು ಹೊತ್ತು ತಂದು ನಾನಾ ರೀತಿಯ ಹಾಸ್ಯ ಕುಚೇಷ್ಟೆಗಳಿಂದ ಐದು ಹತ್ತು ನಿಮಿಷ ಎಲ್ಲರನ್ನೂ ರಂಜಿಸುತ್ತಾರೆ. ಹಾಗೆ ಹಾಸ್ಯ ಕುಚೇಷ್ಟೆಗಳನ್ನು ಮಾಡುವ ಸಂಧರ್ಭದಲ್ಲಿ ಕೆಲವೊಂದು ಬಾರಿ ಗ್ರಾಮೀಣ ರೀತಿಯ ಅಶ್ಲೀಲಕ್ಕೆ ತಿರುಗಿ ಅಲ್ಲಿರುವ ಹೆಂಗಳೆಯರಿಗೆ ಮುಜುಗರ ತರುವ ಸಂದರ್ಭಗಳು ಉಂಟು ಹೀಗೆ ಸುಮಾರು ಒಂದು ಗಂಟೆಗಳ ಕಾಲ ರಂಗ ಕುಣಿಯುವುದು ಮತ್ತು ಹಾಸ್ಯಗಳನ್ನು ನೋಡುವಷ್ಟರಲ್ಲಿಯೇ ಮೂಡಣದಲ್ಲಿ ಉದಯನ ಆಗಮನದ ಸೂಚನೆಯನ್ನು ಪಕ್ಕದ ಗೌಡರ ಹಟ್ಟಿಯ ಹುಂಜ ಕೊಕ್ಕೊರುಕ್ಕೊ ಎಂದು ಸೂಚ್ಯವಾಗಿ ತೋರಿಸುತ್ತದೆ.
ಬೆಳಗಾಗುವಷ್ಟರಲ್ಲಿ ಊರಿನ ಗುಡಿಗೌಡ, ಶುಚಿರ್ಭೂತನಾಗಿ ಕಂಬಳಿಯನ್ನು ಸೊಂಟಕ್ಕೆ ಕಟ್ಟಿಕೊಂಡು ಮತ್ತು ಹೊದ್ದುಕೊಂಡು ಹಣೆಗೆ ತಿಲಕ, ಕೈ ಕಾಲುಗಳಿಗೆ ಬಾಜೂ ಬಂದಿ, ಗೆಜ್ಜೆಗಳನ್ನು ಕಟ್ಟಿಕೊಂಡು ನೇಗಿಲುಧಾರಿಯಾಗಿ ರಂಗಮಂಟಪದ ಮುಂದೆ ಹೊನ್ನಾರು ಕಟ್ಟಲು ಸಿದ್ಧರಾಗುತ್ತಾರೆ. ಹಾಗೆ ತಂದ ನೇಗಿಲಿಗೆ ಊರಿನ ಬಡಿಗೇರರು ಅಂದರೆ ಮರ ಮುಟ್ಟು ಕೆಲಸ ಮಾಡುವ ಆಚಾರಿಗಳು ನೇಗಿಲನ್ನು ಬಂದೋಬಸ್ತು ಮಾಡಿದರೇ, ಊರಿನ ಕಮ್ಮಾರರು, ಅಂದರೆ ಕುಲುಮೆ ಕೆಲಸಮಾಡುವ ಆಚಾರಿಗಳು ನೇಗಿಲಿನ ತುದಿಯ ಲೋಹದ ಭಾಗವನ್ನು ಮೊನಚು ಮಾಡಿ ಸರಿಯಾದ ಉಳುಮೆಗೆ ಅನುವು ಮಾಡಿಕೊಡುತ್ತಾರೆ. ಇನ್ನು ಹಿಂದಿನ ರಾತ್ರಿ ಚೋಮನನ್ನು ಧರಿಸಿದ್ದವರು ಇಂದು ಮುಖಕ್ಕೆ ಕಪ್ಪು ಬಣ್ಣ ಬಳಿದು ಕೊಂಡು ಎತ್ತಿನ ಸಂಕೇತವಾಗಿ ನೇಗಿಲಿಗೆ ತಮ್ಮ ಹೆಗಲನ್ನು ಕೊಟ್ಟರೆ, ಗುಡಿಗೌಡ ಜೂಲ್ ಜೂಲ್ ಎಂದು ಸಾಂಕೇತಿಕವಾಗಿ ನೆಲವನ್ನು ಉತ್ತಿ ನಂತರ ಉತ್ತ ಜಾಗದಲ್ಲಿ ಲಡರ್ ಬಡರ್, ಲಡರ್ ಬಡರ್ ಎಂದು ಶಬ್ಧಮಾಡುತ್ತಾ ರಾಗಿ, ಬತ್ತ, ಅವರೇ ಕಾಳು ಹುರಳೀ ಕಾಳು ಮುಂತಾದ ಕಾಳುಗಳನ್ನು ಸಾಂಕೇತಿವಾಗಿ ಬಿತ್ತುವ ಮೂಲಕ ಅಧಿಕೃತವಾಗಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ತಮ್ಮ ಮುಂದಿನ ಬೆಳೆಗಾಗಿ ಊಳುಮೆಗೆ ಚಾಲನೆ ನೀಡುತ್ತಾರೆ. ಹೀಗೆ ಗುಡಿ ಗೌಡರಿಂದ ಸಾಂಕೇತಿಕವಾಗಿ ಅಧಿಕೃತವಾಗಿ ಉಳುಮೆಮಾಡಿದ ನಂತರವೇ ಸುತ್ತಮುತ್ತಲಿನ ಹದಿನಾರು ಹಳ್ಳಿಗಳಲ್ಲಿ ಬೇಸಾಯ ಆರಂಭಿಸುವ ಪರಿಪಾಠವಿದೆ.
ಹೊನ್ನಾರು ಕಟ್ಟಿದ ನಂತರ ತಮಟೆ ಮತ್ತು ನಾದಸ್ವರ ವಾದ್ಯಗಳೊಂದಿಗೆ ರಂಗಮಂಟಪಕ್ಕೆ ಮೂರು ಸುತ್ತು ಹಾಕಿ ಹೊನ್ನಮ್ಮನ ಗುಡಿಯಲ್ಲಿ ಮಹಾಮಂಗಳಾರತಿ ನಡೆದು ಪ್ರಸಾದ ವಿನಿಯೋಗದೊಂದಿಗೆ ಚೋಮನ ಹಬ್ಬ ಮುಗಿಸಿ, ಅಕ್ಕ ಪಕ್ಕದ ಊರಿನಿಂದ ಬಂದವರೆಲ್ಲರೂ ತಮ್ಮ ತಮ್ಮ ಊರಿಗೆ ತೆರಳಲು ಅನುವಾದರೆ, ಈ ಉತ್ಸವಕ್ಕಾಗಿ ಮಾಡಿದ ಖರ್ಚು ವೆಚ್ಚಗಳ ಲೆಕ್ಕಹಾಕಿ ಮುಂದಿನ ವರ್ಷ ಮತ್ತಷ್ಟೂ ಅದ್ದೂರಿಯಾಗಿ ಚೋಮನ ಹಬ್ಬವನ್ನು ಆಚರಿಸುವಂತಾಗಲು ಇಂದಿನಿಂದಲೇ ಹಣ ಸಂಗ್ರಹಣ ಮಾಡುವ ಕಾಯಕ ಆರಂಭವಾಗುತ್ತದೆ.
ಇಂದು ಎಲ್ಲರೂ ಊರಿನಲ್ಲಿ ಭಾವೈಕ್ಯತೆ, ಸಾಮರಸ್ಯದ ಬಗ್ಗೆ ಮಾತನಾಡುತ್ತಿದ್ದರೆ, ನಮ್ಮೂರಿನ ಪೂರ್ವಜರು ಬಹಳ ಹಿಂದೆಯೇ ನಮ್ಮ ಊರ ಹಬ್ಬದಲ್ಲಿ ಯಾವುದೇ ಜಾತಿ ಬೇಧವಿಲ್ಲದೆ, ಇಡೀ ಹಬ್ಬದ ಸಮಯದಲ್ಲಿ ಎಲ್ಲಾ ಜಾತಿಯವರಿಗೂ ಒಂದೊಂದು ಜವಾಬ್ಧಾರಿಯನ್ನು ವಹಿಸಿ ಕೊದುವ ಮೂಲಕ ಎಲ್ಲರೂ, ಒಗ್ಗೂಡಿ ನಾಡಿನ ಹಿತಕ್ಕಾಗಿ ಜನರ ಸುಖಕ್ಕಾಗಿ ಹಬ್ಬವನ್ನು ಆಚರಿಸುವ ಪದ್ದತಿಯನ್ನು ನೂರಾರು ವರ್ಷಗಳ ಹಿಂದೆಯೇ ರೂಡಿಯಲ್ಲಿ ತಂದಿರುವುದು ಶ್ಲಾಘನೀಯವೇ ಸರಿ. ಅಂತಹ ಜವಾಬ್ಧಾರಿಯನ್ನು ವಹಿಸಿಕೊಂಡಿರುವ ಬಹುತೇಕರು ಊರಿನಲ್ಲಿ ವಾಸಿಸದೇ ಇದ್ದರೂ ಹಬ್ಬದ ಸಮಯದಲ್ಲಿ ಸರಿಯಾಗಿ ಬಂದು ಊರಿನ ಸಂಪ್ರದಾಯದ ಪ್ರಕಾರ ಎಲ್ಲಾ ಶಾಸ್ತ್ರ ಸಂಪ್ರದಾಯಗಳನ್ನೂ ಚಾಚೂ ತಪ್ಪದೇ ನಡೆಸಿಕೂಂಡು ಹೋಗುತ್ತಿರುವುದು ನಿಜಕ್ಕೂ ಅನನ್ಯ ಮತ್ತು ಅನುಕರಣಿಯವೇ ಸರಿ.
ಇದೇ ಗುರುವಾರ ನಮ್ಮೂರಿನಲ್ಲಿ ದೊಡ ಹಬ್ಬ ಎಂದೇ ಹೆಸರಾಗಿರುವ ಹೊನ್ನಮ್ಮನ ಹಬ್ಬದ ಬಗ್ಗೆ ತಿಳಿಸಿಕೊಡುತ್ತೇನೆ. ಮುಂದಿನ ಬಾರಿ ಸಮಯ ಮಾಡಿಕೊಂಡು ನಮ್ಮೂರಿಗೆ ಖುದ್ದಾಗಿ ಬಂದು ಎಲ್ಲವನ್ನೂ ಕಣ್ಣಾರೆ ನೋಡಿ ಆನಂದಿಸುವುದರ ಜೊತೆಗೆ ಆ ತಾಯಿ ಹೊನ್ನಮ್ಮನ ಕೃಪಾಶೀರ್ವಾದ ನಿಮ್ಮ ಮೇಲೆ ಇರಲಿ. ಮುಂದಿನ ವರ್ಷದ ಚೋಮನ ಹಬ್ಬಕ್ಕೆ ನಿಮ್ಮ ಆಗಮನಕ್ಕಾಗಿ ನಾವು ಕಾಯ್ತಾ ಇರ್ತೀವಿ. ನೀವೆಲ್ಲರೂ ಬರ್ತೀರೀ ತಾನೇ?
ಏನಂತೀರೀ?
ನಿಮ್ಮವನೇ ಉಮಾಸುತ