ನಮ್ಮ ಸನಾತನ ಧರ್ಮದಲ್ಲಿ ತಂದೆ, ತಾಯಿ, ಸೂರ್ಯ ಮತ್ತು ಚಂದ್ರರಂತಹ ಪ್ರತ್ಯಕ್ಷ ದೇವರುಗಳ ಹೊರತಾಗಿ ಶ್ರದ್ಧಾ ಭಕ್ತಿಗಳಿಂದ ಪೂಜಿಸುವುದೇ ಗುರು ಪರಂಪರೆ. ನಮ್ಮ ಸನಾತನ ಧರ್ಮದ ಮೂಲ ಅಡಗಿರುವುದೇ ಗುರು ಪರಂಪರೆಯಾಗಿದ್ದು ಈ ದೇಶದಲ್ಲಿ ಈಗಾಗಲೇ ಲಕ್ಷಾಂತರ ಗುರುಗಳು ಮತ್ತು ಅವಧೂತರುಗಳು ಬಂದು ಹೋಗಿದ್ದಾರೆ. ಅವಧೂತ ಎಂಬುದು ಸಂಸ್ಕೃತದಿಂದ ಬಂದ ಪದವಾಗಿದ್ದು, ಭಾರತೀಯ ಧರ್ಮಗಳಲ್ಲಿ ಅಹಂಕಾರ-ಪ್ರಜ್ಞೆ, ದ್ವಂದ್ವತೆ ಮತ್ತು ಸಾಮಾನ್ಯ ಲೌಕಿಕ ಕಾಳಜಿಗಳನ್ನು ಮೀರಿದ ಮತ್ತು ಪ್ರಮಾಣಿತ ಸಾಮಾಜಿಕ ಶಿಷ್ಟಾಚಾರವನ್ನು ಪರಿಗಣಿಸದೆ ವರ್ತಿಸುವ ಒಂದು ರೀತಿಯ ಅತೀಂದ್ರಿಯವಾದ ಜ್ಞಾನ ಹೊಂದಿರುವ ಸಂತರನ್ನು ಸೂಚಿಸುತ್ತದೆ.
ನಾವಿಂದು ಅಂತಹದೇ, ನಾನು ದೇವನು ಅಲ್ಲಾ ದೇವ ಮಾನವನೂ ಅಲ್ಲಾ ನಾನೊಬ್ಬ ನಿಮ್ಮಂತೆಯೇ ಸಾಮಾನ್ಯ ಮನುಷ್ಯ ಎಂದೇ ಹೇಳುತ್ತಲೇ ಲಕ್ಷಾಂತರ ಭಕ್ತರನ್ನು ಹೊಂದಿದ್ದಂತಹ ಬೆಲಗೂರಿನ ಬಿಂದು ಮಾಧವ ಶರ್ಮಾ ಅವಧೂತರ ಬಗ್ಗೆ ತಿಳಿದುಕೊಳ್ಳೋಣ. ಬೆಲಗೂರು ಎನ್ನುವುದು ಅರಸೀಕೆರೆ ಮತ್ತು ಹೊಸದುರ್ಗದ ನಡುವೆ ಇರುವ ಸಣ್ಣ ಗ್ರಾಮವಾಗಿದ್ದು 70ರ ದಶಕದ ವರೆಗೂ ಸ್ಥಳೀಯರ ಹೊರತಾಗಿ ಕರ್ನಾಟಕದ ಉಳಿದ ಭಾಗದ ಜನರಿಗೆ ಪರಿಚಯವೇ ಇರಲಿಲ್ಲ. ಸುಮಾರು 750 ವರ್ಷಗಳಿಗಿಂತಲೂ ಹಳೆಯದಾದ ವೀರ ಪ್ರತಾಪ ದೇವಾಲಯದ ಅರ್ಚಕರ ವಂಶದದಲ್ಲಿ ಏಪ್ರಿಲ್ 30, 1947ರಲ್ಲಿ ಜನಿಸಿದ ಶ್ರೀ ಬಿಂಧು ಮಾಧವರವರು ತಮ್ಮ 17ನೇ ವಯಸ್ಸಿನಲ್ಲಿ ಅವರಿಗಾದ ಅಭೂತಪೂರ್ವವಾದ ದೈವಾನುಭವದಿಂದಾಗಿ ಅವಧೂತರಾಗಿ ಬೆಳೆಯಲ್ಪಟ್ಟು ಅವರ ಮಾರ್ಗದರ್ಶನದಲ್ಲಿ ತಮ್ಮ ಊರನ್ನು ಪ್ರಪಂಚದ ಇತಿಹಾಸದ ನಕ್ಷೆಯಲ್ಲಿ ಶಾಶ್ವತವಾಗಿ ಇರಿಸಿದ್ದಾರೆ ಎಂದರೂ ತಪ್ಪಾಗದು.
ಬೆಲಗೂರಿನಲ್ಲಿ ಸುಮಾರು 750 ವರ್ಷಗಳ ಹಿಂದೆ ಋಷಿ ವ್ಯಾಸರಾಯರು ಸ್ಥಾಪಿಸಿದರು ಎನ್ನಲಾಗುವ ಮುಖ್ಯ ದೇವರು ವೀರ ಪ್ರತಾಪ ಆಂಜನೇಯ ಸ್ವಾಮಿಯ ದೇವಾಲಯವನ್ನು ಕಳೆದ ಮೂವತ್ತು ವರ್ಷಗಳ ಅವಧಿಯಲ್ಲಿ ಅವಧೂತರು ಜೀರ್ಣೋದ್ಧಾರ ಮಾಡಿದ್ದಲ್ಲದೇ ಆ ಊರಿನ ಗ್ರಾಮ ದೇವತೆ ಮತ್ತು ಇತರೇ ದೇವಾಲಯಗಳನ್ನು ಸಹಾ ಬೇಲೂರಿನ ದೇವಾಲಯಗಳಂತೆ ಭರಪೂರ ಶಿಲ್ಪಕಲೆಗಳಿಂದ ತುಂಬಿ ತುಳುಕುವಂತೆ ಮಾಡಿ ಬೆಲಗೂರಿಗೆ ದೇಶ ವಿದೇಶಗಳಿಂದ ಪ್ರತೀ ದಿನವೂ ನೂರಾರು ಭಕ್ತಾದಿಗಳು ಭೇಟಿ ನೀಡುವಂತಹ ಆಧ್ಯಾತ್ಮಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಿರುವುದು ನಿಜಕ್ಕೂ ಶ್ಲಾಘನೀಯ.
ಆಂಜನೇಯ, ಶಿವ ಮತ್ತು ವಿಷ್ಣುವಿನ ಮೂರು ದೇವಾಲಯಗಳನ್ನು ಆಧುನಿಕತೆಗೆ ತಕ್ಕಂತೆ ವೈಭವೋಪೇತವಾಗಿ ಜೀರ್ಣೋದ್ಧಾರ ಮತ್ತು ಪುನರ್ನಿರ್ಮಾಣ ಮಾಡುವುದರ ಜೊತೆಗೆ, ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ತಂಗಲು ವಿಶಾಲವಾದ ಕೊಠಡಿಗಳನ್ನು ನಿರ್ಮಿಸಿದ್ದಾರೆ. ಪ್ರತಿ ಪೂರ್ಣಿಮೆಯ ದಿನದಂದು ಹೋಮವಾದ ನಂತರ ಸಾವಿರಕ್ಕೂ ಹೆಚ್ಚು ಜನರಿಗೆ ಅನ್ನಸಂತರ್ಪಣೆ ಮಾಡುವುದು ನಿಜಕ್ಕೂ ಅಭಿನಂದನಾರ್ಹವಾಗಿದೆ.
ಅವಧೂತರು ಯಾವುದೇ ಔಪಚಾರಿಕ ಶಿಕ್ಷಣವನ್ನು ಪಡೆದಿಲ್ಲವಾದರೂ, ತಾಯಿ ಸರಸ್ವತಿ ದೇವಿಯು ಅವರ ನಾಲಿಗೆಯ ಮೇಲೆ ಸದಾಕಾಲವೂ ನೆಲೆಸಿದ್ದ ಕಾರಣ, ವೇದ ಮತ್ತು ಉಪನಿಷತ್ತುಗಳು ಅವರ ಬಾಯಿಯಿಂದ ಸರಾಗವಾಗಿ ಹರಿಯುತ್ತಿದ್ದವು. ಸ್ವಾಮೀಜಿಗಳ ಪವಾಡದಿಂದ ಅನೇಕ ಭಕ್ತರಿಗೆ ಅವರ ಮೇಲಿನ ನಂಬಿಕೆ ಹೆಚ್ಚಾಗಿದ್ದಲ್ಲದೇ, ಅನೇಕ ಕಠಿಣಾತೀತ ನಾಸ್ತಿಕರನ್ನು ಸಹಾ ಆಸ್ತಿಕರನ್ನಾಗಿ ಪರಿವರ್ತನೆ ಮಾಡಿದ ಉದಾಹಣೆಯೂ ಸಾಕಷ್ಟಿತ್ತು.
ವೀರ ಪ್ರತಾಪ ಆಂಜನೇಯನ ಪರಭಕ್ತರಾದ ಅವಧೂತರು ಭಕ್ತರೊಳಗೆ ಭಕ್ತರಾಗಿ ಭಕ್ತಿಯ ಮಾರ್ಗವನ್ನೇ ಅನುಸರಿಸುತ್ತಿದ್ದರೂ, ಪ್ರತೀ ಅರ್ಥದಲ್ಲಿಯೂ ಭಗವಂತನೊಂದಿಗೆ ಒಂದಾಗಿದ್ದರು ಎಂದರೂ ತಪ್ಪಾಗದು. ಆಧ್ಯಾತ್ಮಿಕ ಋಷಿ ಪರಂಪರೆಗೆ ಋಣಿಯಾಗಿರುವ ಈ ದೇಶದಲ್ಲಿ ಮಹಾನ್ ಋಷಿಗಳ ದೀರ್ಘ ಸಾಲಿಗೆ ಈ ಅವಧೂತರೂ ಸಹಾ ಒಬ್ಬರಾಗಿದ್ದು, ಸಂಕಷ್ಟದ ಕಾಲದಲ್ಲಿ ಧರ್ಮದ ಮರುಸ್ಥಾಪನೆಗಾಗಿ ದೈವತ್ವದ ಅಂಶವಾಗಿ ಶ್ರೀಕೃಷ್ಣನ ಪ್ರತಿರೂಪದಂತೆ ಮಾನವನ ರೂಪದಲ್ಲಿ ಅವಧೂತರು ಅವತರಿಸಿದ್ದಾರೆ ಎಂದೇ ಅವರ ಭಕ್ತರ ನಂಬಿಕೆಯಾಗಿತ್ತು.
ಆಧ್ಯಾತ್ಮಿಕ ಆಚರಣೆಗಳನ್ನು ಬಿಂದು ಮಾಧವ ಅನುಸರಿಸಿದರಾದರೂ ಅವರು ಯಾವುದೇ ಆಧ್ಯಾತ್ಮಿಕ ಅಭ್ಯಾಸಗಳನ್ನು ಅನುಸರಿಸಲಿಲ್ಲ. ದೀರ್ಘ ಧ್ಯಾನಕ್ಕೆ ಕುಳಿತುಕೊಳ್ಳುತ್ತಿದ್ದ ಅವಧೂತರು, ಆಂಜನೇಯನ ದೇವಸ್ಥಾನದಲ್ಲಿ ನಿರಾಹಾರಿಗಳಾಗಿ 7 ರಿಂದ 10 ದಿನಗಳವರೆಗೆ ಧ್ಯಾನಕ್ಕಾಗಿ ಕುಳಿತ ಉದಾಹಣೆಯೂ ಇತ್ತು. ಬ್ರಾಹ್ಮಣ ಅಂದರೆ ಬ್ರಹ್ಮ ಜ್ಞಾನಿ, ಸಮಾಜದಲ್ಲಿ ಜಾತಿ ನಿರ್ಮೂಲನೆಯಾಗಬೇಕು ಮತ್ತು ಎಲ್ಲರನ್ನೂ ಸಮಾನವಾಗಿ ಕಾಣುವಂತವನೇ ನಿಜವಾದ ಬ್ರಾಹ್ಮಣ ಎನ್ನುತ್ತಿದ್ದರು. ಹಾಗಿಯೇ ಕಳೆದ 30-40 ವರ್ಷಗಳಲ್ಲಿ, ನಿರಂತರವಾಗಿ ಭಕ್ತರುಗಳು ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಿಕೊಳ್ಳುವ ಸಲವಾಗಿ ಬೆಲಗೂರಿಗೆ ಬರುತ್ತಿದ್ದರು. ಹಾಗೆ ಬಂದ ಎಲ್ಲಾ ಭಕ್ತ ಸಮೂಹವನ್ನು ಬಹಳ ಪ್ರೀತಿಯಿಂದ ಒಮ್ಮೆ ದಿಟ್ಟಿಸಿ ನೋಡಿದರೆ ಇಲ್ಲವೇ ಅವರ ಮೇಲೆ ಕೈ ಹಾಕಿ ಆಶೀರ್ವದಿಸಿದರೂ ಸಾಕು ಹಲವರಿಗೆ ಅವರ ಸಮಸ್ಯೆಯ ಪರಿಹಾರವಾಗಿರುವ ಉದಾಹರಣೆಗಳೆಷ್ಟೋ. ತಮ್ಮನ್ನು ಕಾಣಲು ಬರುವ ಪ್ರತಿಯೊಬ್ಬ ಭಕ್ತರಿಗೂ ಆಧ್ಯಾತ್ಮಿಕ ಮತ್ತು ಸಾತ್ವಿಕ ಆಹಾರವನ್ನು ಉಣಬಡಿಸುವುದರಲ್ಲಿ ಸ್ವಾಮಿಗಳು ಎತ್ತಿದ ಕೈ. ಶ್ರೀ ಕ್ಷೇತ್ರದ ಅಡುಗೆ ಮನೆ ಅಕ್ಷಯ ಪಾತ್ರೆ ಎಂದಿಗೂ ಬರಿದಾಗದೇ, ಬರುವ ಭಕ್ತಾದಿಗಳು ಹಸಿವಿನಿಂದ ಎಂದೂ ಹಿಂದಿರುಗಿದ ಪ್ರಮೇಯವೇ ಬಂದಿರಲಿಲ್ಲ. ಸ್ವಾಮೀಜಿಯವರ ಪಾಕಶಾಲೆಯಲ್ಲಿ ಯಾವುದೇ ಪಂಗಡ, ಜಾತಿ, ಪಂಥದ ಭೇದವಿಲ್ಲದೆ ಎಲ್ಲ ಭಕ್ತರಿಗೂ ಸದಾ ಕಾಲವೂ ತೆರೆದಿರುತ್ತದೆ.
ಭಕ್ತರ ಜೊತೆಯಲ್ಲಿಯೇ ಭಜನೆ ಮಾಡುವುದು, ಭಕ್ತರ ಭಜನೆಯಲ್ಲಿ ಸುಶ್ರಾವ್ಯವಾಗಿ ಕೊಳಲನ್ನು ನುಡಿಸುವುದು ಇಲ್ಲವೇ ಪಕ್ಕವಾದ್ಯಗಾರರಾಗಿ ತಬಲ ನುಡಿಸುವುದೋ ಇಲ್ಲವೇ ಭಕ್ತಿಯ ಪರವಶರಾಗಿ ಅವರೊಂದಿಗೆ ನರ್ತನ ಮಾಡುತ್ತಾ ಸಾಮಾನ್ಯರಾಗಿಯೇ ಬೆರೆಯುತ್ತಿದ್ದದ್ದು ನಿಜಕ್ಕೂ ಅನನ್ಯವಾಗಿತ್ತು.
ಸಾಮಾನ್ಯವಾಗಿ ಎಲ್ಲಾ ದೇವಾಲಯಗಳಲ್ಲೂ ವಿಶೇಷ ಸಂದರ್ಭಗಳಿಗಾಗಿ ರಥ ಇದ್ದೇ ಇರುತ್ತದೆ. ಆದರೆ ಸ್ವಾಮಿಗಳ ಸಾರಥ್ಯದಲ್ಲಿ ನಿರ್ಮಾಣವಾದ ಈ ಊರಿನ ಮತ್ತೊಂದು ಪ್ರಾಚೀನವಾದ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿರುವ ಭಾರತ ಮಾತ ರಥ ಅತ್ಯಂತ ವಿಶೇಷವಾಗಿದೆ. ಈ ರಥದಲ್ಲಿ ಸುಮಾರು 210 ಸಾಧಕರ ಉಬ್ಬು ಚಿತ್ರಗಳ ಮೂಲಕ ಕೆತ್ತಲಾಗಿದ್ದು ಇದರಲ್ಲಿ ದೇಶಕ್ಕಾಗಿ ಹೋರಾಡಿದ ಹೋರಾಟಗಾರರು, ಸಿನಿಮಾ ಸಾಧಕರು, ಕವಿಗಳು, ವಿಜ್ಞಾನಿಗಳು, ಋಷಿ ಮುನಿಗಳ ಚಿತ್ರಗಳನ್ನು ಕೆತ್ತಿಸುವ ಮೂಲಕ ಭಾರತಾಂಬೆಗೆ ಗೌರವವನ್ನು ಗುರುಗಳು ಸಲ್ಲಿಸಿರುವುದು ನಿಜಕ್ಕೂ ಅಚ್ಚರಿಯನ್ನು ಮೂಡಿಸುತ್ತದೆ.
ಸಾಧಾರಣವಾಗಿ ರಥದ ಮೇಲೆ ತಳಿರು ತೋರಣಗಳ ವಿನ್ಯಾಸದ ಜತೆಗೆ ಸಾಲು ಸಾಲು ದೇವರ ಪ್ರತಿಮೆಗಳನ್ನು ಕೆತ್ತಿಸಿದರೆ, ಈ ಬೆಲಗೂರಿನಲ್ಲಿ ರಥದಲ್ಲಿ ಅಡಿಯಿಂದ ಮುಡಿಯವರೆಗೆ, ದೇಶಕ್ಕಾಗಿ ಜೀವ– ಜೀವನವನ್ನೇ ಮುಡುಪಾಗಿಟ್ಟವರ ಶಿಲ್ಪಗಳನ್ನು ಕೆತ್ತಿಸಿದ್ದಾರೆ. ಚಕ್ರದ ಮೇಲ್ಭಾಗದಿಂದ ಹಿಡಿದು, ನಡು ಭಾಗದ ಸುತ್ತ ಹಾಗೂ ಶಿಖರದವರೆಗೂ ಈ ಶಿಲ್ಪಗಳನ್ನು ಕೆತ್ತಿಸಿದ್ದಾರೆ. ಮಾರುತಿಪೀಠದ ಅವಧೂತ ಬಿಂದುಮಾಧವ ಶರ್ಮ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ, ಉಡುಪಿಯ ಶಿಲ್ಪಿ ರಾಜಶೇಖರ್ ಹೆಬ್ಬಾರ್ ಮತ್ತವರ 40 ಮಂದಿಯ ತಂಡದೊಂದಿಗೆ ಸುಮಾರು 59 ಅಡಿ ಎತ್ತರವಿರುವ 21 ಅಡಿ ಅಗಲವಿರುವ, ಸುಮಾರು 75 ಸಾವಿರ ಕೆ.ಜಿ ತೂಕವಿರುವ ಈ ರಥವನ್ನು ಸಾಗುವಾನಿ, ಹೊನ್ನೆ ಮತ್ತು ಕಿರಾಲುಬೋಗಿ ಮರಗಳನ್ನು ಉಪಯೋಗಿಸಿ ಸರಿಸುಮಾರು ₹ 3.5 ಕೋಟಿ ವೆಚ್ಚದಲ್ಲಿ ತಯಾರಿಸಲಾಗಿದೆ.
ನಮ್ಮನ್ನು ನಾದಲೋಕಕ್ಕೆ ಕರೆದೊಯ್ದು ನಮ್ಮಲ್ಲಿ ಕರ್ಣಾನಂದ, ಆತ್ಮಾನಂದ, ಬ್ರಹ್ಮಾನಂದ, ಜ್ಞಾನಾನಂದವನ್ನುಂಟು ಮಾಡುವ ಎಲ್ಲರನ್ನೂ ಕೂಡ ರಥದಲ್ಲಿ ತೋರಿಸಲಾಗಿದೆ. ಮನುಷ್ಯನಲ್ಲಿ ದೈವತ್ವವನ್ನು ಗುರುತಿಸಿ, ಮುಂದಿನ ಪೀಳಿಗೆಗೆ ಅವರ ಸಾಧನೆಯನ್ನು ತೋರಿಸಬೇಕೆನ್ನುವ ಉದ್ದೇಶದಿಂದ ಈ ರಥವನ್ನು ನಿರ್ಮಾಣ ಮಾಡಲಾಗಿದೆ. ಇದನ್ನು ಲಕ್ಷ್ಮಿನಾರಾಯಣ ಸ್ವಾಮಿಗೆ ಅರ್ಪಿಸಿದ್ದರೂ, ದೇಶದ ಮಹಾನ್ ನಾಯಕರ ಶಿಲ್ಪಗಳು ಇದರಲ್ಲಿ ಅಡಕವಾಗಿರುವ ಕಾರಣ ಇದನ್ನು ಭಾರತಾಂಬೆ ರಥ ಅಥವಾ ಭಾರತ ಮಾತಾ ರಥ ಎಂದೂ ಕರೆಯುವುದೇ ಸೂಕ್ತವೆನಿಸುತ್ತದೆ.
ಈ ರಥದಲ್ಲಿ ಒಟ್ಟು 4 ದ್ವಾರಗಳಿದ್ದು, ಮೊದಲನೆಯದರಲ್ಲಿ ಲಕ್ಷ್ಮೀನಾರಾಯಣ, ಎರಡನೆಯದರಲ್ಲಿ ಭಾರತಾಂಬೆ, ಮೂರನೆಯದರಲ್ಲಿ ಸೀತಾ,ರಾಮ, ಲಕ್ಷ್ಮಣ, ಆಂಜನೇಯ ಹಾಗೂ ನಾಲ್ಕನೆಯದರಲ್ಲಿ ಬಿಂದು ಮಾಧವಶರ್ಮ ಅವಧೂತರ ವಿಗ್ರಹಗಳಿವೆ. ಈ ರಥದಲ್ಲಿ ಒಂದು ಪ್ರಧಾನ ಕಳಶದ ಜೊತೆ, 33 ಉಪ ಕಳಶ, 2 ಗುಮ್ಮಟ, 12 ಆನೆಗಳು, 24 ಕಂಬಗಳು, 365 ಗಂಟೆಗಳು ಇದ್ದು ಈ ಬೃಹತ್ ರಥವನ್ನು ಎಳೆಯಲು ಸರಿ ಸುಮಾರು 1 ಸಾವಿರ ಜನರ ಸಹಾಯವಿದೆ. ಪ್ರತೀ ವರ್ಷ ಚೈತ್ರ ಮಾಸದಲ್ಲಿ ಈ ಊರಿನಲ್ಲಿ ಲಕ್ಷ್ಮೀ ನಾರಾಯಣ ದೇವಾಲಯ ಮತ್ತು ವೀರ ಪ್ರತಾಪ ಆಂಜನೇಯ ದೇವಾಲಯಗಳ ಬ್ರಹ್ಮ ರಥೋತ್ಸವ ಒಟ್ಟಾಗಿ ನಡೆಸುವುದು ಇಲ್ಲಿನ ವಿಶೇಷವಾಗಿದೆ.
ಈ ದೇವಾಲಯದಲ್ಲಿ ರಾಮಸೇತುವಿನಲ್ಲಿ ಬಳಸಲಾಗಿರುವ ತೇಲುವ ಕಲ್ಲನ್ನು ಒಂದು ಅಗಲವಾದ ಪಾತ್ರೆಯ ನೀರನಲ್ಲಿ ಇಟ್ಟಿದ್ದು, ಸದಾ ಕಾಲವೂ ತೇಲುತ್ತಾ ಇರುವ ಈ ಕಲ್ಲನ್ನು ಪ್ರತಿಯೊಬ್ಬ ಭಕ್ತರಿಗೂ ಮುಟ್ಟಿ ನೋಡಿ ಆನಂದವನ್ನು ಅನುಭವಿಸುವ ಭಾಗ್ಯವನ್ನು ಒದಗಿಸಲಾಗಿದೆ.
ಸದಾ ಕಾಲವೂ ಭಕ್ತರೊಂದಿಗೆ ಕಾಲ ಕಳೆಯುತ್ತಿದ್ದ ಬಿಂಧು ಮಾಧವ ಅವಧೂತರು ತಮ್ಮ 75ನೇ ವಯಸ್ಸಿನಲ್ಲಿ ನವೆಂಬರ್ 27 2020ರಂದು ಇಹಲೋಕವನ್ನು ತ್ಯಜಿಸಿದಾಗ ಕರೋನ ಮಹಾ ಮಾರಿ ಇದ್ದ ಕಾರಣ ಸರಳವಾಗಿ ನಡೆದ ಅವರ ಅಂತ್ಯಕ್ರಿಯೆಯಲ್ಲಿ ಅಂತಿಮ ದರ್ಶನ ಪಡೆಯದೇ ಇದ್ದದ್ದಕ್ಕಾಗಿ ದುಃಖಿಸಿದ ಭಕ್ತ ಸಮೂಹಕ್ಕೆ ಕಡಿಮೇ ಏನಿಲ್ಲ. ಅದೇ ರೀತೀಯಲ್ಲಿ 2021 ರಲ್ಲಿಯೂ ಕರೋನಾ ಲಾಕ್ಡೌನ್ ಮುಂದುವರೆದು ಈಗ 2022 ರಂದು ಸ್ವಲ್ಪ ಕಡಿಮೆ ಆಗಿರುವ ಕಾರಣ, ಸ್ವಾಮಿಗಳ ಹೆಸರಿನಲ್ಲಿ ಧಾರ್ಮಿಕ ಟ್ರಸ್ಟ್ ನಿರ್ಮಾಣ ಮಾಡಿಕೊಂಡು 28.4.2022 ಗುರುವಾರದಂದು ಅವಧೂತರ ಅಮೃತಶಿಲೆಯ ಮೂರ್ತಿಯನ್ನು ಲೋಕಾರ್ಪಣೆ ಮಾಡಿರುವುದಲ್ಲದೇ, ಏಪ್ರಿಲ್ 30 ರಂದು ಅವರ ಜಯಂತಿ ಮಹೋತ್ಸವದ ಜೊತೆ ಮೇ 2, ಕೋಟಿ ಗಾಯತ್ರಿ ಜಪ ಸಾಂಗತ ಹೋಮದ ಪೂರ್ಣಾಹುತಿಯನ್ನು ಮಾಡುವ ಮೂಲಕ ಬಹಳ ಅದ್ದೂರಿಯಿಂದ ಗುರುಗವಂದನೆಯನ್ನು ಅವರ ಭಕ್ತಾದಿಗಳು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮಕ್ಕಾಗಿ ಈಗಾಗಲೇ ದೇಶವಿದೇಶಗಳಿಂದ ಸಾವಿರಾರು ಭಕ್ತಾದಿಗಳು ಶ್ರೀಕ್ಷೇತ್ರಕ್ಕೆ ಆಗಮಿಸಿದ್ದು ಇನ್ನೂ ಸಹಸ್ರಾರು ಭಕ್ತಾದಿಗಳು ಹೋಮದ ಕಡೆಯ ದಿನ ಬರುವ ನಿರೀಕ್ಷೆ ಇದೆ.
ಚಿರಂಜೀವಿ ಆಂಜನೇಯನ ಪರಮಭಕ್ತರಾಗಿದ್ದ, ಭಕ್ತರ ಪಾಲಿಗೆ ಸಾಕ್ಷಾತ್ ಆಂಜನೇಯ ಸ್ವರೂಪಿ ಮತ್ತು ನಡೆದಾಡುವ ಮಾರುತಿ ಎಂದೇ ಖ್ಯಾತರಾಗಿದ್ದ ನಾವು ದೇವರನ್ನು ಮನುಷ್ಯರಲ್ಲೇ ಕಾಣಬೇಕು. ಸಾಯುವರಾರೂ ದೇವರಾಗುವುದಿಲ್ಲ. ಸತ್ತು ಬದುಕಿದವನು ಮಾತ್ರ ದೇವರಾಗುತ್ತಾನೆ ಎಂದು ಹೇಳುತ್ತಿದ್ದ ಶ್ರೀ ಬಿಂಧು ಮಾಧವ ಶರ್ಮ ಅವಧೂತರು ಇಂದು ಬೆಲಗೂರಿನ ಶ್ರೀ ಕ್ಷೇತ್ರದಲ್ಲಿ ಭೌತಿಕವಾಗಿ ಇಲ್ಲದಿದ್ದರೂ, ಭಾವನಾತ್ಮಕವಾಗಿ ಶ್ರೀಕ್ಷೇತ್ರಕ್ಕೆ ಬರುವ ಎಲ್ಲಾ ಭಕ್ತರ ಭವರೋಗಗಳನ್ನು ನಿವಾರಿಸಲು ಸದಾಕಾಲವೂ ಇರುವುದರಿಂದ ಸ್ವಲ್ಪ ಸಮಯ ಮಾಡಿಕೊಂಡು ಬೆಂಗಳೂರಿನಿಂದ ಅರಸೀಕೆರೆಗೆ ಬಸ್ ಇಲ್ಲವೇ ರೈಲು ಮುಖಾಂತರ ತಲುಪಿ ಅಲ್ಲಿಂದ 48.4 ಕಿ.ಮೀ. ದೂರದಲ್ಲಿರುವ ಬೆಲಗೂರಿಗೆ ಬಂದು ಅವಧೂತರ ಕೃಪೆಗೆ ಪಾತ್ರರಾಗ್ತೀರೀ ತಾನೇ?
ಏನಂತೀರೀ?
ನಿಮ್ಮವನೇ ಉಮಾಸುತ