ಶ್ರೀ ಶಂಕರ ಭಗವತ್ಪಾದರ ಸಂಕ್ಷಿಪ್ತ ಜೀವನ ಚರಿತ್ರೆ

ಅದು ಕ್ರಿ.ಶ, 7ನೇ ಶತಮಾನದಲ್ಲಿ ಅಹಿಂಸಾ ಪರಮೋಧರ್ಮಃ ಎಂದು ಹೇಳುತ್ತಲೇ ಬೌದ್ಧ ಧರ್ಮ ದೇಶ ವಿದೇಶಗಳಲ್ಲೆಲ್ಲಾ ಹರಡಿಯಾಗಿತ್ತು. ಸನಾತನ ಧರ್ಮದ ಕಟ್ಟುಪಾಡು ಮತ್ತು ಅತೀಯಾದ ಆಚಾರ ಮಡಿ ಹುಡಿಗಳಿಂದ ಬೇಸತ್ತವರು ಬೌದ್ಧ ದರ್ಮದ ಕಡೆ ಆಕರ್ಷಿತರಾಗಿದ್ದರೆ, ಮತ್ತೊಂದೆಡೆ, ದೇವರು ಎಂಬುವುದೇ ಇಲ್ಲ ಅದೆಲ್ಲಾ ಕಟ್ಟು ಕಥೆ ಎನ್ನುವಂತಹ ಚಾರ್ವಾಕರ ಹಾವಳಿಯಿಂದಾಗಿ ಒಂದು ರೀತಿಯಲ್ಲಿ ಸನಾತನ ಧರ್ಮ ಅಳಿವಿನಂಚಿಗೆ ತಲುಪಿತ್ತು. ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಸನಾತನ ಧರ್ಮಕ್ಕೆ ಆಶಾಕಿರಣವಾಗಿ ಹುಟ್ಟಿ ಬಂದವರೇ ಶ್ರೀ ಶಂಕರಾಚಾರ್ಯರು.

ಕೇರಳದ ಪೂರ್ಣಾ ನದಿ ತಟದಲ್ಲಿದ್ದ ಸಸಲಂ ನಂತರ ಕಾಲಟಿ ಎಂದು ಪ್ರಸಿದ್ಧವಾದ ಸ್ಥಳದಲ್ಲಿ ವಾಸವಾಗಿದ್ದ ಶ್ರೀ ಕಾಯ್‌ಪಿಳ್ಳೆ ಶಿವಗುರು ನಂಬೂದರಿ ಮತ್ತು ಶೀಮತಿ ಆರ್ಯಾಂಬಾ ಎಂಬ ದಂಪತಿಗಳಿಗೆ ತ್ರಿಶೂರಿನ ವಡಕ್ಕನಾಥ ದೇವರ ಫಲವಾಗಿ ಶ್ರೀ ಶಂಕರರರು ಕ್ರಿ. ಶ. 788 ವೈಶಾಖ ಶುದ್ಧ ಪಂಚಮಿಯಂದು ಜನಿಸುತ್ತಾರೆ.

ಬಹಳ ಸಣ್ಣ ವಯಸ್ಸಿನಲ್ಲಿಯೇ ತಂದೆಯವರನ್ನು ಕಳೆದುಕೊಂಡ ಶಂಕರರಿಗೆ 5 ವರ್ಷದವರಿದ್ದಾಗಲೇ ಅವರ ತಾಯಿ ಉಪನಯನವನ್ನು ನೆರವೇರಿಸುತ್ತಾರೆ. ಆ ಸಣ್ಣ ವಯಸ್ಸಿಗೇ ಅಸಾಧಾರಣ ಮೇಧಾವಿಯಾದ ಶಂಕರರು 8 ವರ್ಷಕ್ಕೆಲ್ಲಾ ನಾಲ್ಕು ವೇದಗಳನ್ನೂ ಕರಗತ ಮಾಡಿಕೊಂಡಿದ್ದಲ್ಲದೇ ಶಾಸ್ತ್ರ ಮತ್ತು ಪುರಾಣಗಳನ್ನು ಅನೇಕ ಗುರುಗಳಿಂದ ಆಭ್ಯಾಸ ಮಾಡಿ ಕೇವಲ 12ನೇ ವರ್ಷಕ್ಕೆಲ್ಲಾ ಸಕಲ ಶಾಸ್ತ್ರ ಪಾರಂಗತರಾಗುತ್ತಾರೆ.

shank3ಇಂತಹ ಬಾಲ ಶಂಕರರು ಲೌಕಿಕಕ್ಕಿಂತಲೂ ಸಂನ್ಯಾಸತ್ವದ ಕಡೆಗೇ ಹೆಚ್ಚಿನ ಒಲವು ಇದ್ದ ಕಾರಣ, ಸನ್ಯಾಸಿಯಾಗಲು ಅಪ್ಪಣೆ ಕೊಡಬೇಕೆಂದು ತಾಯಿಯನ್ನು ಕೋರುತ್ತಾರೆ. ಇರುವ ಒಬ್ಬ ಮಗ ಸನ್ಯಾಸಿಯಾಗಿಬಿಟ್ಟರೆ ಈ ಇಳೀ ವಯಸ್ಸಿನಲ್ಲಿ ತನ್ನನ್ನು ನೋಡಿಕೊಳ್ಳುವವರು ಯಾರೂ ?  ಎಂಬ ಚಿಂತೆಯಿಂದಾಗಿ ಅವರ ತಾಯಿಯವರು ಶಂಕರರಿಗೆ ಸನ್ಯಾಸತ್ವ ಸ್ವೀಕರಿಸಲು ಒಪ್ಪಿಗೆ ಕೊಡುವುದಿಲ್ಲ. ಹೇಗಾದರೂ ಮಾಡಿ ತಾಯಿಯನ್ನು ಒಪ್ಪಿಸಲೇ ಬೇಕೆಂದು ನಿರ್ಧರಿಸಿದ ಶಂಕರಾಚಾರ್ಯರು ಅದೊಂದು ಮುಂಜಾನೆ ಹೊಳೆಯಲ್ಲಿ ಸ್ನಾನಕ್ಕೆ ಇಳಿದಾಗ ಮೊಸಳೆಯೊಂದು ಅವರ ಕಾಲನ್ನು ಹಿಡಿಯುತ್ತದೆ. ಅದರಿಂದ ಬಿಡಿಸಿಕೊಳ್ಳಲು ಎಷ್ಟೇ ಪ್ರಯತ್ನ ಪಟ್ಟರೂ ಆಗದಿದ್ದಾಗ, ಅಮ್ಮಾ, ಹೇಗೂ ಸಾಯುತ್ತಿದ್ದೇನೆ. ಕೊನೆಯ ಹೊತ್ತಿಗಾದರೂ ಸಂನ್ಯಾಸ ಸ್ವೀಕರಿಸಲು ಒಪ್ಪಿಕೋ! ಎಂದು ಕೇಳಿಕೊಳ್ಳುತ್ತಾರೆ. ಮಗನ ಆರ್ತನಾದಕ್ಕೆ ಮರುಗಿ ಅಲ್ಲಿಯೇ ಇದ್ದ ಅವರ ತಾಯಿ ಸನ್ಯಾಸ ಸ್ವೀಕರಿಸಲು ಒಪ್ಪಿಗೆ ನೀಡಿದಾಗ, ಶಂಕರರು ಅಲ್ಲಿಯೇ ಸ್ವಯಂ ಸಂನ್ಯಾಸ ಸ್ವೀಕರಿಸಿದಾಗ ಮೊಸಳೆ ಅವರ ಕಾಲು ಬಿಟ್ಟಿತು. ತಾಯಿಯ ಮನಸ್ಸಿನ ಇಂಗಿತವನ್ನು ಅರಿತಿದ್ದ ಶಂಕರರು ಅಮ್ಮಾ, ನಿಮ್ಮ ಅಂತಿಮ ಕ್ಷಣಗಳಲ್ಲಿ ನಾನು ಎಲ್ಲಿದ್ದರೂ ನಿನ್ನ ಎದುರು ಬಂದು ನಿಲ್ಲುತ್ತೇನೆ ಎಂಬುದಾಗಿ ಮಾತು ನೀಡೀ ತಮ್ಮ ಮುಂದಿನ ವಿದ್ಯಾಭ್ಯಾಸಕ್ಕಾಗಿ ಸೂಕ್ತ ಗುರುಗಳನ್ನು ಅರಸುತ್ತಾ ಉತ್ತರದ ಕಡೆ ಪ್ರಯಾಣಿಸುತ್ತಾರೆ.

shank4ಹಾಗೆ ಗುರುಗಳನ್ನು ಅರಸುತ್ತಿರುವಾಗ ನರ್ಮದಾ ನದಿ ತೀರದಲ್ಲಿ ಬಹು ದೊಡ್ಡ ಜ್ಞಾನಿಗಳಾದ ಗೌಡಪಾದರ ಶಿಷ್ಯರಾದ ಗೋವಿಂದ ಭಗವತ್ಪಾದರನ್ನು ಈ ಗುಹೆಯಲ್ಲಿ ಭೇಟಿಯಾಗಿ ತಮ್ಮನ್ನು ಶಿಷ್ಯನನ್ನಾಗಿ ಸ್ವೀಕರಿಸಿ ಎಂದು ಕೇಳಿಕೊಳ್ಳುತ್ತಾರೆ. ಆಗ ಗೋವಿಂದ ಭಗವತ್ಪಾದರು ನೀನಿನ್ನು ಚಿಕ್ಕಹುಡುಗ. ಸ್ವಲ್ಪ ದೊಡ್ಡವನಾದ ಮೇಲೆ ಬಾ ಎಂದಾಗ, ಛಲ ಬಿಡದ ತ್ರಿವಿಕ್ರಮನಂತೆ ಶಂಕರರು ಅವರ ಹಿಂದೆಯೇ ದುಂಬಾಲು ಬೀದ್ದಾಗ, ಅವರಿಂದ ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬೇಕೆಂಬ ಉದ್ದೇಶದಿಂದ, ಅವರ ಕೈಯ್ಯಿಗೆ ವಿಷ್ಣು ಸಹಸ್ರನಾಮದ ತಾಳೆ ಗರಿ ಕೊಟ್ಟು ಇದಕ್ಕೆ ಭಾಷ್ಯ ಬರೆದರೆ ನಾನು ನಿನ್ನನ್ನು ನನ್ನ ಶಿಷ್ಯನನ್ನಾಗಿ ಸ್ವೀಕರಿಸುತ್ತೇನೆ ಎಂದು ಹೇಳಿ ಸಾಗಹಾಕುತ್ತಾರೆ. ಹೇಗೂ ಈ ಭಾಷ್ಯ ಬರೆಯುವುದಕ್ಕೆ ಕನಿಷ್ಟ ಪಕ್ಷ 2 ವರ್ಷವಾದರೂ ಬೇಕಾಗುತ್ತದೆ ಅಲ್ಲಿಯವರೆಗೆ ಈ ಹುಡುಗನ ಕಾಟ ತಪ್ಪುತ್ತದೆ ಎಂಬುದು ಗೋವಿಂದ ಭಗವತ್ಪಾದರ ಆಶಯವಾಗಿರುತ್ತದೆ ಆದರೆ ದೈವೀ ಸ್ವರೂಪವಾದ ಶಂಕರರು ಮರುದಿನವೇ ಭಾಷ್ಯದ ಸಮೇತ ಗುರುಗಳಿಗೆ ಒಪ್ಪಿಸುತ್ತಾರೆ. ಇಂತಹ ಅದ್ಭುತವನ್ನು ನೋಡಿ ಆನಂದಭರಿತರಾದ ಗೋವಿಂದಪಾದರು. ಅಯ್ಯಾ ನಾನು ನಿನಗೆ ಗುರುವಲ್ಲ. ನೀನೇ ನನಗೆ ಗುರು ಎಂದು ನಮಸ್ಕರಿಸಿ ಮನಸಾರೆ ಅವರನ್ನು ಶಿಷ್ಯರನ್ನಾಗಿ ಸ್ವೀಕರಿಸಿ ಅವರಿಗೆ ಯೋಗ, ವೇದ, ಉಪನಿಷತ್, ವೇದಾಂತಗಳನ್ನು ಕಲಿಸುತ್ತಾರೆ.

ಸಕಲ ವೇದ ಶಾಸ್ತ್ರ ಪಾರಂಗತರಾದ ಶಂಕರರು, ಸನಾತನ ಧರ್ಮದ ಉಳಿವಿಗಾಗಿ ಮತ್ತು ಪುನರುತ್ಥಾನಕ್ಕಾಗಿ ಮನೋವೇಗದಲ್ಲಿ ಕಾಲ್ನಡಿಗೆಯಲ್ಲಿಯೇ ಪ್ರಯಾಣಿಸಿ, ದೇಶದ ನಾಲ್ಕು ದಿಕ್ಕುಗಳಾದ ಉತ್ತರದಲ್ಲಿ: ಬದರಿ ಪೀಠ – ಉತ್ತರ ಜ್ಯೋತಿರ್ ಮಠ, ದಕ್ಷಿಣದಲ್ಲಿ: ಶೃಂಗೇರಿ ಪೀಠ – ದಕ್ಷಿಣ ಶಾರದಾ ಮಠ, ಪೂರ್ವದಲ್ಲಿ: ಪುರಿ ಪೀಠ – ಪೂರ್ವಾ ಗೋವರ್ಧನ ಮಠ ಮತ್ತು ಪಶ್ಚಿಮದಲ್ಲಿ ದ್ವಾರಕಾ ಪೀಠ – ಪಶ್ಚಿಮ ಮಠ ಹೀಗೆ ನಾಲ್ಕು ಶಕ್ತಿ ಪೀಠ ಗಳನ್ನು ಸ್ಥಾಪಿಸಿ, ಪ್ರತಿಯೊಂದು ಪೀಠಕ್ಕೂ ತಮ್ಮ ಒಬ್ಬೊಬ್ಬ ಶಿಷ್ಯರನ್ನು ಪೀಠಾಧಿಪತಿಯನ್ನಾಗಿಸಿ ಅದ್ವೈತ ಸಿದ್ಧಾಂತ ವನ್ನು ಜನಪ್ರಿಯಗೊಳಿಸಿದರು.

shank2ಹೀಗೆ ಕೇವಲ 32 ವರ್ಷಗಳಲ್ಲಿ ದೇಶಾದ್ಯಂತ ಪರ್ಯಟನೆ ಮಾಡಿ ಅವನತಿಯ ಹಾದಿಯಲ್ಲಿದ್ದ ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನ ಮಾಡಿದ್ದಲ್ಲದೇ ಹಲವಾರು ಪಂಡಿತರನ್ನೂ ಶಾಸ್ತ್ರವೇತ್ತರನ್ನೂ ಜಯಿಸಿ, ಸರ್ವಜ್ಞ ಪೀಠವನ್ನೇರಿದರು ಶ್ರೀ ಶಂಕರಾಚಾರ್ಯರು. ಅವರ ಜೀವನದ ಅಂತಿಮ ದಿನಗಳಲ್ಲಿ ಹಿಮಾಲಯಕ್ಕೆ ಪ್ರಯಾಣ ಬೆಳೆಸಿ ಅಲ್ಲಿ ಕೇದಾರ ದೇವಾಲಯದ ಹತ್ತಿರ ತಮ್ಮ ದೇಹದಿಂದ ಮುಕ್ತಿಯನ್ನು ಪಡೆಯುತ್ತಾರೆ. ಅದಕ್ಕೆ ಪ್ರತೀಕವಾಗಿ ಇಂದಿಗೂ ಸಹಾ ಕೇದಾರದ ಕೇದಾರನಾಥ ದೇವಾಲಯದ ಹಿಂಭಾಗದಲ್ಲಿ ಶ್ರೀ ಶಂಕರರ ಸಮಾಧಿ ಇದೆ ಮತ್ತು ಅವರ ಶಿಲಾಪ್ರತಿಮೆಯೂ ಇದೆ.

ಶಂಕರರ ಜೀವನದ ಬಗೆಗೆ ಒಂದು ಸಂಕ್ಷಿಪ್ತ ಶ್ಲೋಕ ಹೀಗಿದೆ

ಅಷ್ಟವರ್ಷೇ ಚತುರ್ವೇದೀ, ದ್ವಾದಶೇ ಸರ್ವಶಾಸ್ತ್ರ ವಿತ್ |
ಷೋಡಶೇ ಕೃತವಾನ್ ಭಾಷ್ಯಂ, ದ್ವಾತ್ರಿಂಶೇ ಮುನಿರಭ್ಯಗಾತ್ ||

ಅಂದರೇ 8 ವರ್ಷಕ್ಕೆ 4 ವೇದಗಳನ್ನು ಕಲಿತವರು, 12ನೇ ವರ್ಷಕ್ಕೆ ಸರ್ವಶಾಸ್ತ್ರಗಳನ್ನು ತಿಳಿದವರು, 16ನೇ ವರ್ಷದಲ್ಲಿ ಭಾಷ್ಯಗಳನ್ನು ಬರೆದವರು 32ನೇ ವರ್ಷದಲ್ಲಿ ಅಭ್ಯಗತರು- ಎಂದರೆ ಕಾಲವಾದರು ಎಂದರ್ಥ.

ಆತ್ಮ ಮತ್ತು ಪರಮಾತ್ಮ ಎಂಬುದು ಎರಡು ಬೇರೆ ಬೇರೆ ಅಂಶಗಳಲ್ಲ. ಎರಡೂ ಒಂದೇ. ಆತ್ಮನೇ ಪರಮಾತ್ಮನು. ಪರಮಾತ್ಮನೇ ಆತ್ಮನು ಎಂದು ಅಹಂ ಬ್ರಹ್ಮಾಸ್ಮಿ ಎಂಬ ಅದ್ವೈತ ಸಿದ್ಧಾಂತ ವನ್ನು ಜಗತ್ತಿಗೆ ತಿಳಿಸಿ ಕೊಟ್ಟವರು.

ಅಳಿವಿನಂಚಿನಲ್ಲಿದ್ದ ಸನಾತಧರ್ಮವನ್ನು ಪುನರುತ್ಥಾನ ಮಾಡಿದ ಆದಿ ಗುರು ಶ್ರೀ ಶಂಕರಾಚಾರ್ಯರ ಸಾಧನೆಗಳನ್ನು ಸದಾಕಾಲವೂ ಭಕ್ತಿ ಪೂರ್ವಕವಾಗಿ ಸ್ಮರಿಸುವ ಮೂಲಕ ಅವರು ಬೋಧಿಸಿದ ತತ್ವ, ವಿಚಾರಗಳನ್ನು ಅರಿಯೋಣ, ಪಾಲಿಸೋಣ‌ ಮತ್ತು ಸನ್ಮಾರ್ಗದಲ್ಲಿ ನಡೆಯೋಣ.

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s