ಮದುವೆ ಎನ್ನುವುದು ಕೇವಲ ಗಂಡು ಹೆಣ್ಣಿನ ಒಗ್ಗೂಡಿಸುವಿಕೆಯಲ್ಲದೇ ಅದು ಆ ಎರಡು ಕುಟುಂಬಗಳ ನಡುವೆ ಸಂಬಂಧವನ್ನು ಬೆಸೆಯುವುದಲ್ಲದೇ ಆ ಎರಡೂ ಕುಟುಂಬಗಳ ಮುಂದಿನ ಗುಣ ನಡುವಳಿಕೆಗಳನ್ನು ಮುಂದಿನ ತಲಮಾರಿಗೂ ಮುಂದುವರೆಸಿಕೊಂಡು ಹೋಗುವ ಸುಂದರವಾದ ಸಂದರ್ಭವಾಗಿದೆ. ಮದುವೆ ಎನ್ನುವುದು ಉಚ್ಚರಿಸಲು ಕೇವಲ ಮೂರೇ ಅಕ್ಷರಗಳಾದರೂ ಅದರ ಹಿಂದಿರುವ ಕಷ್ಟವನ್ನು ಅರಿತೇ ಮದುವೇ ಮಾಡಿ ನೋಡು, ಮನೆ ಕಟ್ಟಿ ನೋಡು ಎಂಬುವ ಗಾದೆಯನ್ನೇ ನಮ್ಮ ಹಿರಿಯರು ಮಾಡಿದ್ದಾರೆ. ಸುಮಾರು 53ವರ್ಷಗಳ ಹಿಂದೇ ಇದೇ ದಿನ ಎಲ್ಲಾ ಎಡರು ತೊಡರುಗಳನ್ನೂ ಮೀರಿ ನಡೆದ ಸುಂದರ ಮದುವೆಯೊಂದರ ಚಿತ್ರಣ ಇದೋ ನಿಮಗಾಗಿ
ಸರಿ ಸುಮಾರು 1969ನೇ ಇಸ್ವಿ, ಹಾಸನ ಮೂಲದ ಗಮಕಿಗಳು ಮತ್ತು ಖ್ಯಾತ ಹರಿಕಥಾ ವಿದ್ವಾಂಸರೊಬ್ಬರು ಅಂದಿನ ದಿನಗಳಲ್ಲೇ ಸಾಕಷ್ಟು ಪ್ರಖ್ಯಾತವಾಗಿದ್ದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಕಾರ್ಖಾನೆಯಲ್ಲಿ ಅದಾಗ ತಾನೇ ಉದ್ಯೋಗಿಯಾಗಿದ್ದ ತಮ್ಮ ಜೇಷ್ಠ ಪುತ್ರನಿಗೆ ವಧುವನ್ನು ಹುಡುಕುತ್ತಿರುತ್ತಾರೆ. ಹಲವಾರು ಕಡೆ ನಾನಾ ರೀತಿಯ ಕೆಲಗಳನ್ನು ಮಾಡಿ ಕಟ್ಟ ಕಡೆಯದಾಗಿ ಬಿಇಎಲ್ ಕಾರ್ಖಾನೆಗೆ ಸೇರಿಕೊಂಡಿದ್ದ ಅವರ ಮಗನಿಗೆ ಅದಾಗಲೇ ವಯಸ್ಸು ಮೂವತ್ತು ದಾಟಿರುತ್ತದೆ.
ಇನ್ನು ಮೂಲತಃ ಬೆಳ್ಳೂರಿನವರಾದರೂ, ತಮ್ಮ ತಂದೆ ತಾಯಿಯವರ ಕಾಲವಾದ ನಂತರ ಸೋದರತ್ತೆಯ ಆಶ್ರಯದಲ್ಲಿ ಬೆಳೆದು, ಕರ್ನಾಟಕದಿಂದ ಅಂದಿನಕಾಲದಲ್ಲೇ ಉತ್ತರ ಪ್ರದೇಶದ ವಾರಣಾಸಿಗೆ (ಕಾಶೀ) ಹೋಗಿ ಅಲ್ಲಿ ವಿದ್ಯಾಭ್ಯಾಸ ಮಾಡಿಕೊಂದು ಕೆಲಸವನ್ನು ಅರೆಸುತ್ತಾ, ಕೋಲಾರದ ಚಿನ್ನದ ಗಣಿಯಲ್ಲಿ ಅತ್ಯುನ್ನತ ಹುದ್ದೆಯನ್ನು ಪಡೆದಿದ್ದಂತಹ ಹಿರಿಯರೊಬ್ಬರು, ಮೆಟ್ರಿಕ್ಯುಲೇಷನ್ ವರೆಗೂ ಓದಿ, ತಕ್ಕ ಮಟ್ಟಿಗೆ ಹಾಡು, ಹಸೆ, ಅಡಿಗೆ ಕಲಸಗಳನ್ನು ಕಲಿತಿದ್ದ ಅತ್ಯಂತ ರೂಪವತಿ ಮತ್ತು ಬಹುಭಾಷೆ ಪಂಡಿತೆಯಾಗಿದ್ದ ತಮ್ಮ ಮುದ್ದಿನ ಜೇಷ್ಠಪುತ್ರಿಗೂ ಒಳ್ಳೆಯ ಸಂಬಂಧ ಹುಡುಕುತ್ತಿರುತ್ತಾರೆ.
ಒಂದು ಗಂಡಿಗೆ ಒಂದು ಹೆಣ್ಣು ಎಂದು ಸೃಷ್ಟಿ ಕರ್ತ ಬ್ರಹ್ಮ ಹುಟ್ಟಿಸುವಾಗಲೇ ನಿರ್ಧರಿಸಿರುತ್ತಾನಂತೆ ಎಂಬಂತೆ ಮದುವೆ ಎಂಬುದು ಸ್ವರ್ಗದಲ್ಲಿಯೇ ನಿರ್ಧಾರಿವಾಗಿ ಇಲ್ಲಿ ಗಂಡು ಹೆಣ್ಣು ಹುಡುಕುವುದು ನೆಪ ಮಾತ್ರ ಎನ್ನುವಂತೆ ಅದೊಮ್ಮೆ ಗಮಕಿಗಳು ತಮ್ಮ ಕಾರ್ಯಕ್ರಮವೊಂದನ್ನು ನಡೆಸಿಕೊಡುವ ಸಲುವಾಗಿ ಬೆಂಗಳೂರಿನ ಮಲ್ಲೇಶ್ವರದ ಪೈಪ್ ಲೈನ್ ರಸ್ತೆಯ ಆರಂಭದಲ್ಲೇ ಇರುವ ದತ್ತಾತ್ರೇಯ ದೇವಸ್ಥಾನಕ್ಕೆ ಹೋಗಿರುತ್ತಾರೆ. ಆ ಕಾರ್ಯಕ್ರಮವನ್ನು ಕೇಳಲು ಬಂದಿದ್ದಂತಹ ಸ್ಥಳೀಯರೊಬ್ಬರು ಕಾರ್ಯಕ್ರಮ ಮುಗಿದ ನಂತರ ಗಮಕಿಗಳೊಂದಿಗೆ ಪರಿಚಯ ಮಾಡಿಕೊಳ್ಳುತ್ತಾ ಉಭಯ ಕುಶಲೋಪರಿಯನ್ನು ವಿಚಾರಿಸುತ್ತಿದ್ದಂತಹ ಸಂಧರ್ಭದಲ್ಲೇ, ಎಲ್ಲಿ ಉಳಿದುಕೊಂಡಿದ್ದೀರೀ? ಎಂದು ವಿಚಾರಿಸಿದಾಗ, ಇಲ್ಲೇ ನನ್ನ ಮಗನ ಮನೆಯಲ್ಲಿ ಉಳಿದುಕೊಂಡಿದ್ದೇವೆ. ಮಗನಿಗೂ ಮದುವೆಯ ವಯಸ್ಸಾಗಿದ್ದು ಹುಡುಗಿ ಹುಡುಕುತ್ತಿದ್ದೇವೆ ಎಂದಾಗ, ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು ಎನ್ನುವಂತೆ ಅಯ್ಯೋ ನನ್ನ ಮೊಮ್ಮಗಳಿಗೂ ಗಂಡು ಹುಡುಕುತ್ತಿದ್ದೇವೆ ಎಂದು ಆರಂಭವಾದ ಮಾತು ಕತೆ ನೋಡ ನೋಡುತ್ತಿದ್ದಂತೆಯೇ ಮುಂದುವರೆದು ಮಾರನೇ ದಿನವೇ ಅದೇ ಪೈಪ್ ಲೈನ್ ನಲ್ಲಿ ಇದ್ದ ಅವರ ಮನೆಯಲ್ಲೇ ಹುಡುಗಿ ನೋಡುವ ಶಾಸ್ತ್ರವೆಲ್ಲವೂ ಮುಗಿದು ಮದುವೆಯೂ ನಿಶ್ಚಯವಾಗಿಯೇ ಬಿಡುತ್ತದೆ.
ಗಂಡಿನ ಮನೆಯವರು ಹಾಸನದ ಮೂಲದವರು, ಹೆಣ್ಣಿನ ಮನೆಯವರು ಇರುವುದು ಕೋಲಾರದ ಚಿನ್ನದ ನಾಡಿನಲ್ಲಿ ಇಬ್ಬರಿಗೂ ಸರಿಯಾಗಲಿ ಎಂದು ಮಧ್ಯ ಭಾಗವಾದ ಬೆಂಗಳೂರಿನಲ್ಲಿ ಮದುವೆ ಮಾಡಿಕೊಡಲು ಗಂಡಿನ ಮನೆಯವರು ಕೇಳಿಕೊಳ್ಳುತ್ತಾರಾದರೂ, ಹುಡುಗಿಯ ಪೋಷಕರು, ಬೆಂಗಳೂರಿನಲ್ಲಿ ಮದುವೆ ಮಾಡಿಕೊಡಲು ತಮ್ಮ ಅಸಹಾಯಕತೆಯನ್ನು ತೋರಿ, ಪರಿಚಯಸ್ಥರೇ ಇರುವ ಕೆಜಿಎಫ್ ನಲ್ಲಿಯೇ ಮದುವೆ ಮಾಡಿದರೆ ತಮಗೆ ಎಲ್ಲಾ ರೀತಿ ಅನುಕೂಲವಾಗುತ್ತದೆೆ ಎಂದಿದ್ದಲ್ಲದೇ, ವರನ ಊರಿನಿಂದ ಮದುವೆಗೆ ಬಂದು ಹೋಗುವ ಖರ್ಚನ್ನು ಭರಿಸಲು ಒಪ್ಪಿಕೊಂಡಾಗ, ಹುಡುಗನಿಗೆ ಲೋಕಾರೂಢಿಯಂತೆ ವಾಚು ಉಂಗುರ ಸೂಟು ಬೂಟಿನ ಹೊರತಾಗಿ ಇನ್ನಾವುದೇ ಬೇಡಿಕೆ ಇಲ್ಲದೇ ಮಾತು ಕಥೆ ಎಲ್ಲವೂ ಸುಗಮವಾಗಿ ಮುಗಿದು ಮೇ 3-4 ರಂದು ಕೆಜಿಎಫ್ ರಾಬರ್ಟ್ಸನ್ ಪೇಟೆಯಲ್ಲಿರುವ ವೆಂಕಟರಮಣ ಸ್ವಾಮಿ ದೇವಾಲಯದ ಎದುರಿಗಿರುವ ಇರುವ ಮದ್ದಯ್ಯ ಕಲ್ಯಾಣ ಮಂಟಪದಲ್ಲಿ ನೆರೆವೇರಿಸಲು ನಿರ್ಧರಿಸಲಾಗುತ್ತದೆ
ಹಾಸನದ ಕಡೆಯ ವರನ ಕುಟುಂಬವನ್ನು ಹೊತ್ತ ಬಸ್ ಕೋಲಾರದತ್ತ ಬರುತ್ತಿದ್ದಾದಾಗಲೇ, ಧುತ್ ಎಂದು ಆಕಾಶವಾಣಿಯಲ್ಲಿ ಭಾರತದ ಮೂರನೇ ರಾಷ್ಟ್ರಪತಿಗಳಾಗಿದ್ದ ಶ್ರೀ ಝಾಕಿರ್ ಹುಸೇನ್ ಖಾನ್ 3 ಮೇ 1969 ರಂದೇ ನಿಧನರಾಗಿ ದೇಶಾದ್ಯಂತ ಶೋಕಚರಣೆ ಜಾರಿಯಾದ ಸುದ್ದಿ ತಿಳಿಯುತ್ತಿದ್ದಂತೆಯೇ, ಕೋಲಾರದ ಸುತ್ತ ಮುತ್ತಲೂ ಅವರ ಬಂಧು ಬಾಂಧವರೇ ಇರುವ ಕಾರಣ ಅಲ್ಲಲ್ಲಿ ಸಣ್ಣ ಗಲಭೆಗಳು ನಡೆದು ಬಸ್ ಕೆಲವು ಗಂಟೆಗಳ ಕಾಲ ಮಾರ್ಗದ ಮಧ್ಯದಲ್ಲೇ ತಡೆ ಹಿಡಿಯಲ್ಪಟ್ಟಾಗ, ಆರಂಭದಲ್ಲಿಯೇ ಈ ರೀತಿಯ ಅಪಶಕುನವಾದರೇ, ಇನ್ನು ಮದುವೆ ಹೇಗೆ ನಡೆಯುತ್ತದೆಯೋ ಎನ್ನುವ ಆತಂಕ ಗಂಡಿನ ಮನೆಯವರದ್ದಾದರೆ, ಬೆಳಿಗ್ಗೆ ಹೊರಟ ಬಸ್ ಮಧ್ಯಾಹ್ನವಾದರೂ ಬಾರದೇ ಹೋದ್ದದ್ದಕೆ ಹೆಣ್ಣಿನ ಕಡೆಯವರಲ್ಲಿ ಆತಂಕ ಮನೆ ಮಾಡಿತ್ತಾದರೂ, ಅದೃಷ್ಟವಷಾತ್ ಮದುವೆಯ ದಿಬ್ಬಣ ಎಂದು ಬಸ್ಸನ್ನು ಅನುವು ಮಾಡಿಕೊಟ್ಟ ಪರಿಣಾಮ ಮತ್ತು ಕೆಜಿಎಫ್ ನಲ್ಲಿ ಆದರ ಅಷ್ಟಾಗಿ ಗಲಭೆ ಇರದ ಕಾರಣ, ವರನ ಮನೆಯೆವರೆಲ್ಲರೂ ಸುರಕ್ಷಿತವಾಗಿ ಮದುವೆ ಮಂಟಪ ತಲುಪುವಷ್ಟರಲ್ಲಿ ಸಂಜೆಯಾಗಿ, ಅವರನ್ನು ಸಂಭ್ರಮದಿಂದ ಸ್ವಾಗತ ಮಾಡಲು ಹಾಕಿದ ಲೌಡ್ ಸ್ಪೀಕರಿನಲ್ಲಿ ಇದ್ದಕ್ಕಿದ್ದಂತೆಯೇ ತಮಿಳು ಹಾಡು ಮೊಳಗುತ್ತಿದ್ದಂತೆಯೇ, ಮಧುಮಗನ ಮನೆಯವರೆಲ್ಲರಿಗೂ ಕಸಿವಿಸಿ. ಅರೇ ಇದೇನು ಹುಡುಗಿ ಕಡೆಯವರು ತಮಿಳುನವರಾ? ಎಂಬ ಗುಲ್ಲು. ಇದನ್ನು ತಕ್ಷಣವೇ ಅರಿತ ವಧುವಿನ ಸಹೋದರ ಕೂಡಲೇ ಲೌಡ್ ಸ್ಪೀಕರ್ ಆರಿಸಿ ಮುಂದೆ ನಡೆಯಬಹುದಾಗಿದ್ದ ಆತಂಕವನ್ನು ಕಡಿಮೆ ಮಾಡಿ, ಹಾಗೂ ಹೀಗೂ ಮಾಡಿ ಮದುವೆಯ ಈ ಬಂಧ ಅನುರಾಗದ ಅನುಬಂಧ ಎಂಬ ಹಾಡಿನ ರೆಕಾರ್ಡ್ ತಂದು ಎಲ್ಲರಿಗೂ ಕೇಳಿಸಿ ಸಂತೋಷ ಪಡಿಸಿ ಪರಿಸ್ಥಿತಿಯನ್ನು ನಿಭಾಯಿಸಿದರೆ, ಅದೇ ಹಾಡು ಆರಂಭವಾಗುವ ಶುಭಾಶಯ, ಶುಭಾಶಯ ಪದಗಳನ್ನು ಕೇಳಿದ ಸ್ಥಳೀಯರೊಬ್ಬರು ಇದ್ಯಾರು ಸುಬ್ಬಾ ಜಯಾ? ಮದುವೆ ಗಂಡು ಎಣ್ಣಿನ ಎಸ್ರೂ, ಸಿವಾ, ಮಣಿ ಅಲ್ವಾ? ಎಂದಾಗ ನೆರೆದಿದ್ದವರೆಲ್ಲಾ ಗೊಳ್ ಎಂದು ನಕ್ಕಿದ್ದರು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ವವೇ?
ವರಪೂಜೆ ಸುಸೂತ್ರವಾಗಿ ಮುಗಿದು ಊರು ಸುತ್ತು ಹಾಕಲು ಹೊರ ಬಂದವರಿಗೆ ವ್ಯವಹರಿಸಲು ಭಾಷಾ ಸಮಸ್ಯೆ ಎದುರಗಿತ್ತು. ಹೇಳಿಕೊಳ್ಳಲು ಕರ್ನಾಟಕದ ಅವಿಭಾಜ್ಯ ಅಂಗವಾದರೂ ಇಡೀ ಊರಿಗೆ ಊರೇ ತಮಿಳುಮಯವಾಗಿದ್ದ ಕಾರಣ, ಕೆಲವು ನೆಂಟರಿಷ್ಟರಿಗೆ ಇದೇನೂ ಅಪ್ಪಟ ಕನ್ನಡಿಗರಾಗಿ ತಮಿಳು ಹುಡುಗಿಯನ್ನು ಮದುವೆ ಮಾಡಿಕೊಳ್ಳುತ್ತಿದ್ದಾರಾ? ಎಂಬ ಸಂದೇಹ ಮತ್ತೊಮ್ಮೆ ಮೂಡಿ ಅದನ್ನು ನಿವಾರಿಸಲು ಹುಡುಗನ ಮನೆಯವರು ಪಟ್ಟ ಪರಿಶ್ರಮ ಅಷ್ಟಿಷ್ತಲ್ಲಾ. ಮಾರನೇ ದಿನ ಕಾಶೀ ಯಾತ್ರೆ ಮುಗಿದು, ಜೀರಿಗೆ ಧಾರಣೆಯಾಗಿ ವರ-ವಧುವಿನ ತಾಳಿಗೆ ಮೂರು ಗಂಟು ಹಾಕಿ ನಿರ್ವಿಘ್ನವಾಗಿ ಧಾರೆಯೂ ಮುಗಿದು ಬಂದಿದ್ದವರೆಲ್ಲರೂ ವಧು ವರರಿಗೆ ಅಕ್ಷತೆ ಹಾಕಿ ಆಶೀರ್ವದಿಸಿ ಮದುವೆ ಮುಗಿದು, ಊಟಕ್ಕೆ ಕುಳಿತುಕೊಳ್ಳ ಬೇಕು ಎಂದು ಊಟದ ಮನೆಗೆ ಧಾವಿಸಿದರೆ ಆದಾಗಲೇ ಊಟದ ಮನೆಯಲ್ಲಿ ಸ್ಥಳಿಯ ನೂರಾರು ಜನರಿಂದ ತುಂಬಿ ತುಳುಕುತ್ತಿದ್ದು ನೋಡಿ ಹೌರಾರಿದ್ದಂತೂ ಸುಳ್ಳಲ್ಲ.
ರಾಮಾಯಣ ಕಾಲದಲ್ಲಿದ್ದ ಮಂಥರೆಯಂತೆ, ಎಲ್ಲಾ ಮದುವೆ ಮನೆಗಳಲ್ಲೂ ಸಮಯಕ್ಕೆ ತಕ್ಕಂತೆ ಹುಟ್ಟಿಕೊಳ್ಳುವ ಕೆಲ ಮಂಥರೆಯರೂ ಸಹಾ ಇದೇ ಸಂದರ್ಭವನ್ನು ಬಳಸಿಕೊಂಡು, ಅರೇ ಇದೇನು? ಗಂಡಿನ ಮನೆಯವರನ್ನು ಹೀಗಾ ನೋಡಿಕೊಳ್ಳೋದು? ನಾವೇನು ಊಟಕ್ಕೆ ಗತಿ ಕೆಟ್ಟು ಅಷ್ಟು ದೂರದಿಂದ ಬಂದಿದ್ದೇವಾ? ಈ ಪರಿಯಾಗಿ ನೋಡಿಕೊಳ್ಳುವುದಕ್ಕಾ 220 ಕಿಮೀ ದೂರದ ಹೆಣ್ಣನ್ನು ತರಬೇಕಿತ್ತಾ? ಗಂಡಿನ ಮನೆಯವರಿಗಲ್ಲವೇ ಮೊದಲು ಊಟ ಹಾಕೋದು? ಎಂದು ಅಲ್ಲೊಂದು ಸಣ್ಣದಾದ ಅಸಮಧಾನವನ್ನು ಹುಟ್ಟು ಹಾಕಲು ಪ್ರಯತ್ನಿಸಿದರಾದರೂ, ವರನ ತಂದೆಯವರ ಸಮಯೋಚಿತ ತಾಳ್ಮೆಯಿಂದಾಗಿ ನಡೆಯಬಹುದಾಗಿದ್ದ ಎಲ್ಲಾ ಅವಗಢಗಳನ್ನೂ ಅರಂಭದಲ್ಲೇ ಚಿವುಟಿ ಹಾಕಿದ್ದು ವಧುವಿನ ತಂದೆಯವರಿಗೆ ತುಸು ನೀರಾಳವನ್ನು ನೀಡಿದ್ದಂತೂ ಸುಳ್ಳಲ್ಲ. ಕೂಡಲೇ ಕಲ್ಯಾಣ ಮಂಟಪಕ್ಕೆ ಹೊಂದಿಕೊಂಡೇ ಇದ್ದ ದೇವಸ್ಥಾನಕ್ಕೆ ಹೋಗಿ ಅಲ್ಲಿ ಪರಿಚಯಸ್ಥರನ್ನು ಕೇಳಿಕೊಂಡು ಅಲ್ಲೇ ಇದ್ದ ಮತ್ತೊಂದು ಪ್ರಾಂಗಣದಲ್ಲಿ ಗಂಡಿನ ಮನೆಯವರೆಲ್ಲರನ್ನೂ ಕೂಡಿಸಿ ಸಾಂಗೋಪಾಂಗವಾಗಿ ಊಟೋಪಚಾರಗಳನ್ನು ಮಾಡಿಸಿದರೂ ಮಂಥರೆಯರ ಮನಸ್ಸಿನಲ್ಲಿ ಮೂಡಿದ್ದ ಜ್ವಾಲೆ ಆರದೇ ಸಣ್ಣ ಪುಟ್ಟದಾಗಿ ಪಿಸುಧನಿಯಲ್ಲಿ ಮಾತನಾಡಿ ಕೊಳ್ಳುತ್ತಿದ್ದದ್ದು ಗುಟ್ಟಾಗೇನು ಉಳಿಯಲಿಲ್ಲ.
ಮದುವೆಯ ಮನೆಯಲ್ಲಿ ಇಷ್ಟೆಲ್ಲಾ ರಂಪ ರಾದ್ಧಾಂತಳು ನಡೆಯುತ್ತಿದ್ದರೂ ಮಧುಮಗ ಮಧುಮಗಳು ಮತ್ತು ಪುರೋಹಿತರಿಗೂ ಇದ್ಯಾವುದರ ಪರಿವೇ ಇಲ್ಲದೇ, ಲಾಜಾ ಹೋಮ, ಎನ್ನರಸ ನನ್ನ ಉಪ್ಪಿನ ಮನೆ ಕೊಡ್ತೀನಿ ನಿಮ್ಮ ಅಕ್ಕಿಯ ಮನೆ ಕೊಡು ಎಂದೋ ಇಲ್ಲವೇ ಆನೆ ಕೊಡು ಎಂದು ಶಾಸ್ತ್ರವನ್ನು ಮುಂದುವರೆಸುತ್ತಾ ಸಪ್ತ ಪದಿಯ ಶಾಸ್ತ್ರದಲ್ಲಿ ಕನ್ಯಾ ಪಿತೃವು ವರನಿಂದ ಮಾಡಿಸಿಕೊಳ್ಳುವಂತಹ ಧರ್ಮೇಚ, ಅರ್ಥೇಚ, ಕಾಮೇಚ, ನಾತಿ ಚರಾಮಿ. ಅಂದರೆ ಧರ್ಮದ ವಿಷಯದಲ್ಲಿ ಹಣ ಗಳಿಸುವ ವಿಷಯದಲ್ಲಿ, ಸಂಭೋಗಾದಿ ವಿಷಯದಲ್ಲಿ ನಿನ್ನ ಒಪ್ಪಿಗೆ ಇಲ್ಲದೆ ಕಾರ್ಯ ಪ್ರವೃತ್ತವಾಗುವುದಿಲ್ಲ ಎಂದರ್ಥ ಬರುವ ಪ್ರತಿಜ್ಞೆಯನ್ನು ಮುಗಿಸಿಕೊಂಡು ಭೂಮದೂಟಕ್ಕೆ ಅಣಿಯಾಗುವಷ್ಟರಲ್ಲಿ ಉಳಿದೆಲ್ಲಾ ವಿಷಯಗಳೂ ಭೂದಿ ಮುಚ್ಚಿದ ಕೆಂಡದಂತೆ ಆರಿರುತ್ತದೆ.
ಮದುವೆಗೆ ಬಂದಿದ್ದ ನೆಂಟರಿಷ್ಟರೆಲ್ಲರೂ ನವದಂಪತಿಗಳು ಒಂದೇ ಎಲೆಯಲ್ಲಿ ಭೂಮದೂಟ ಮಾಡುತ್ತಿರುವುದನ್ನು ನೋಡುವುದಲ್ಲಿ ತಲ್ಲೀನರಾಗಿದ್ದರೆ, ಹುಡುಗಿಯ ತಂದೆ ಮದುವೆಗೆ ನಿರೀಕ್ಷೆಗೂ ಮೀರಿದ ಜನರು ಬಂದಿದ್ದಾರೆ. ಅವರಿಗೆಲ್ಲಾ ಸರಿಯಾದ ಊಟೋಪಚಾರಗಳು ನಡೆಯಿತೇ? ಅಡುಗೆಯವರು ಅವರನ್ನು ಹೇಗೆ ಸಂಭಾಳಿಸಿರಬಹುದು? ತಮ್ಮ ಕೆಲಸ ಮುಗಿಸಿ ಹೊರಡಲು ಅನುವಾದ ಓಲಗದವರಿಗೆ ದಕ್ಷಿಣೆ ನೀಡಬೇಕು? ಎಂಬ ಧಾವಂತದಲ್ಲೇ ಬಾಹ್ಯ ನೋಟಕ್ಕೆ ನಗುತ್ತಿದ್ದರೂ ಅಂತರ್ಮುಖಿಯಾಗಿ ಆತಂಕದಿಂದಲೇ ಒಂದೆರಡು ತುತ್ತನ್ನು ಬಾಯಿಗೆ ಹಾಕಿಕೊಂಡು ಊಟದ ಶಾಸ್ತ್ರವನ್ನು ಮುಗಿಸಿ ಮದುವೆಯ ಜವಾಬ್ಧಾರಿಯನ್ನು ಹೊತ್ತಿದ್ದ ತಮ್ಮ ಮಗನೊಂದಿಗೆ ಮದುವೆ ಮಾರನೆಯ ದಿನದ ಸತ್ಯನಾರಾಯಣ ಪೂಜೆ ಮತ್ತು ಬೀಗರ ಔತಣದ ಉಳಿದ ವ್ಯವಸ್ಥೆಗಳತ್ತ ಗಮನ ಹರಿಸಲು ಎದ್ದು ಬಿಡುತ್ತಾರೆ.
ಸಾವಿರ ಸುಳ್ಳುಗಳನ್ನು ಹೇಳಿ ಒಂದು ಮದುವೆ ಮಾಡು ಎಂಬ ಗಾದೆ ಇದ್ದರೂ, ಎಲ್ಲಾ ಕಡೆಯಲ್ಲೂ ಸತ್ಯಗಳನ್ನೇ ಹೇಳಿದರೂ ಮದುವೆ ಮಾಡುವುದು ಎಷ್ಟು ಕಷ್ಟ ಎಂದು ಹೆಣ್ಣು ಹೆತ್ತವರಿಗೆ ಮಾತ್ರ ಗೊತ್ತು. ಇಷ್ಟೆಲ್ಲಾ ಸಂಕಷ್ಟಗಳನ್ನೂ ದಾಟಿಕೊಂಡು ಹೀಗೆ 53 ವರ್ಷಗಳ ಹಿಂದೆ ನಡೆದದ್ದೇ ನಮ್ಮ ಅಪ್ಪ ಬಾ. ನಂ. ಶಿವಮೂರ್ತಿ(ಶಿವು) ಮತ್ತು ಅಮ್ಮ ( ಉಮಾವತಿ (ಮಣಿ)) ಅವರ ಮದುವೆ. ಇವತ್ತು ಅಪ್ಪಾ ಅಮ್ಮಾ ನಮ್ಮೊಂದಿಗೆ ಇಲ್ಲದಿದ್ದರೂ ಅವರು ನಮಗೆ ಕಲಿಸಿಕೊಟ್ಟ ಆದರ್ಶಗಳು ಮತ್ತು ಅವರ ತದ್ರೂಪುಗಳಾದ ಮೊಮ್ಮಕಳ ಮೂಲಕ ಸದಾ ಕಾಲವೂ ನಮ್ಮೊಂದಿಗೆ ಇದ್ದೇ ಇರುತ್ತಾರೆ. ಮನುಷ್ಯನ ದೇಹಕ್ಕೆ ಅಂತ್ಯವಿದೆಯಾದರು ಮನುಷ್ಯರು ಮಾಡಿದ ಕೆಲಸಗಳಿಗೆ ಎಂದೂ ಅಂತ್ಯವಿರುವುದಿಲ್ಲ ಎನ್ನುವುದಕ್ಕೆ ನಮ್ಮ ಅಪ್ಪಾ ಅಮ್ಮನ ಮದುವೆಯಲ್ಲಿ ನಾನಿಲ್ಲದಿದ್ದರು ತಮ್ಮ ಮದುವೆಯ ಬಗ್ಗೆ ಅವರುಗಳು ಮತ್ತು ಮನೆಯ ಇತರೇ ಸದಸ್ಯರು ಮಾತನಾಡಿಕೊಳ್ಳುತ್ತಿದ್ದದ್ದನ್ನು ಕೇಳಿಸಿಕೊಂಡು ಅದನ್ನೇ ಯಥಾವತ್ತಾಗಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನೇ ಹೇಳಿರುವಂತೆ, ಕರ್ಮಾಣ್ಯೇವಾಧಿಕಾರಸ್ತೇ, ಮಾ ಫಲೇಷು ಕದಾಚನ. ಅಂದರೆ, ನಿನ್ನ ಕೆಲಸಗಳನ್ನು ನೀನು ಅಚ್ಚುಕಟ್ಟಾಗಿ ಮಾಡು ಫಲಾಪಲಗಳನ್ನು ನನ್ನ ಮೇಲೆ ಬಿಡು ಎಂದಿದ್ದಾನೆ. ಹಾಗಾಗಿ ನೆನಪುಗಳೇ ಮಧುರ ಮತ್ತು ಅಮರ ಹಾಗಾಗಿ ನಮ್ಮ ಮನೆಗಳ ಸಭೆ ಸಮಾರಂಭಗಳಲ್ಲಿ ಮಂಥರೆಯರ ಮಾತುಗಳಿಗೆ ಬೆಲೆ ಕೊಡದೇ ಕಾರ್ಯಕ್ರಮವನ್ನು ನಿರ್ವಿಘ್ನವಾಗಿ ನಡೆಸಿಕೊಂಡು ಹೋಗುವುದರ ಮೂಲಕ ಆ ಕಾರ್ಯಕ್ರಮದ ನೆನಪು ಸದಾಕಾಲವೂ ಹಸಿರಾಗಿರುವಂತೆ ನೋಡಿ ಕೊಳ್ಳುವ ಜವಾಬ್ಧಾರಿ ನಮ್ಮ ನಿಮ್ಮದೇ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಮನಮುಟ್ಟುವ ಸುಂದರ ಲೇಖನ .ಅವರ ವೈಯಕ್ತಿಕ ಪರಿಚಯವಿದ್ದ ನನ್ನ ಕಣ್ಣುಗಳು ,ಇಂದು ನಮ್ಮೊಂದಿಗೆ ಇರದ ಅವರ ನೆನಪಿನಲ್ಲಿ,ತೇವವಾಗಿದ್ದು ಸತ್ಯ.
LikeLiked by 1 person
ಧನ್ಯೋಸ್ಮಿ
LikeLike