ಕಛೇರಿಯ ಮೊದಲ ದಿನದ ಅನುಭವ

ಮಾರ್ಚ್ 11, 2020 ಬುಧವಾರ ಸಂಜೆ ಸುಮಾರು5:30ರ ಸಮಯ ಕಛೇರಿಯ ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದಂತಹ ಸಮಯ. ನಾವು ನಾಲ್ಕೈದು ಜನ ಒಟ್ಟಿಗೆ ಒಂದೇ ಕಾರಿನಲ್ಲಿ (car pool) ಮಾಡುತ್ತಿದ್ದಾಗ ಮೊಬೈಲಿನಲ್ಲಿ ಈ-ಮೇಲ್ ಬಂದ ಶಬ್ಧ ಕೇಳಿ ಯಾರಪ್ಪಾ ಈಗ ಮೇಲ್ ಕಳುಹಿಹಿರುವವರು? ಎಂದು ಮೋಬೈಲ್ ನೋಡುತ್ತಲೇ ಒಂದು ಕ್ಷಣ ಎದೆ ಝಲ್ ಎಂದಿದ್ದಂತೂ ಸುಳ್ಳಲ್ಲ. ನಮ್ಮ ಕಛೇರಿಯ ಹತ್ತಿರವೇ ಇದ್ದ ಕೆಲವು ಸಹೋದ್ಯೋಗಿಗಳು ವಾಸಿಸುತ್ತಿದ್ದಂತಹ ಅಪಾರ್ಟ್ಮೆಂಟಿನ ಕೆಲವರಿಗೆ ಕೊರೋನಾ ಸೋಂಕು ಧೃಢ ಪಟ್ಟಿರುವ ವಿಷಯ ತಿಳಿದು ಮುಂಜಾಗ್ರತಾ ಕ್ರಮವಾಗಿ ನಮ್ಮ ಇಡೀ ಕಛೇರಿಗೆ ಔಷಧ ಸಿಂಪಡಿಸುವ ಕಾರಣ ಗುರುವಾರ ಮತ್ತು ಶುಕ್ರವಾರ ಕಛೇರಿಗೆ ರಜೆ ಘೋಷಿಸಿದ್ದು ಸೋಮವಾರ ಎಂದಿನಂತೆ ಕಛೇರಿಗೆ ಬರ ಬೇಕೆಂದು ತಿಳಿಸಲಾಗಿತ್ತು. ಆ ಸಂದೇಶವನ್ನು ಓದಿದ ಕೂಡಲೇ ಕಾರನ್ನು ಓಡಿಸುತ್ತಿದ್ದವರೊಬ್ಬರನ್ನು ಬಿಟ್ಟು ಉಳಿದವರೆಲ್ಲರೂ ಕಛೇರಿಯಲ್ಲಿದ್ದ ತಮ್ಮ ತಮ್ಮ ಸಹೋದ್ಯೋಗಿಗಳಿಗೆ ಕರೆ ಮಾಡಿ ಅಲ್ಲಿನ ಪರಿಸ್ಥಿತಿಯನ್ನು ತಿಳಿದುಕೊಂಡು ಮುಂದಿನ ದಿನಗಳು ಕೆಲಸವನ್ನು ಹೇಗೆ ಮಾಡಬೇಕೆಂಬ ಚರ್ಚೆ ಮಾಡುತ್ತಿದ್ದಂತಯೇ, ದಾರಿ ಕಳೆದದ್ದೇ ಗೊತ್ತಾಗದೇ ನಮ್ಮ ಮನೆಯ ಬಳಿಗೆ ಬಂದಿದ್ದೆವು.

ಮೊದಲ ಎರಡು ದಿನ ರಜಾ ಇದ್ದದ್ದರಿಂದ ಆರಾಮವಾಗಿ ಕಳೆದಿದ್ದ ನಮಗೆ ಶನಿವಾರ ಸಂಜೆ ಕಛೇರಿಯ ಕಡೆಯಿಂದ ಮತ್ತೊಂದು ಸಂದೇಶ ಬಂದು ಮುಂದಿನ ಒಂದು ವಾರಗಳ ಕಾಲ ಎಲ್ಲರೂ ಮನೆಯಿಂದಲೇ ಕೆಲಸ ಮಾಡಬೇಕೆಂಬ ಸೂಚನೆ ನೀಡಲಾಗಿತ್ತು. ಅದುವರೆವಿಗೂ ಉಳಿದೆಲ್ಲಾ ಕೆಲಸಗಳನ್ನು ಮನೆಯಿಂದಲೇ ಮಾಡಬಹುದಾದರೂ ನಾವು ಮಾಡುತ್ತಿದ್ದ IT support ಕೆಲಸ ಮಾತ್ರಾ on the spot ನಲ್ಲಿಯೇ ಮಾಡಲು ಸಾಧ್ಯ ಎಂದೇ ನಮ್ಮೆಲ್ಲರ ನಂಬಿಕೆಯಾಗಿತ್ತು. ಆದರೆ ಪರಿಸ್ಥಿತಿಗೆ ಅನುಗುಣವಾಗಿ ಸೋಮವಾರದಿಂದ ಎಲ್ಲರೂ ಮನೆಯಿಂದಲೇ ಕೆಲಸ ಮಾಡಬೇಕೆಂಬ ಆಜ್ಞೆ ಬಂದ ಕಾರಣ ನನ್ನ ತಂಡ 30-32 ಜನರು ಮನೆಯಿಂದಲೇ ಕೆಲಸ ಮಾಡುವುದೆಂದು, ತುರ್ತಾದ ಕೆಲಸಕ್ಕಾಗಿ ಕಛೇರಿಯ ಹತ್ತಿರವೇ ವಾಸವಿದ್ದ2-3 ಹುಡುಗರು ಕಛೇರಿಯಿಂದ ಕೆಲಸ ಮಾಡುವುದೆಂದು ತೀರ್ಮಾನಿಸಿ ಎಲ್ಲರಿಗೂ ಅವರವರ ಶಕ್ತಿ ಸಾಮರ್ಥ್ಯದ ಅನುಗುಣವಾಗಿ ಕೆಲಸವನ್ನು ಹಂಚಿ ಮನೆಯಿಂದಲೇ ಕೆಲಸ ಮಾಡಲು ಮಾನಸಿಕವಾಗಿ ಸಿದ್ಧವಾದೆವು. ಇವೆಲ್ಲವೂ ಕೇವಲ ಒಂದು ವಾರದ ಮಟ್ಟಿಗೆ ಎಂದು ಭಾವಿಸಿದ್ದವರಿಗೆ, ಮಾರ್ಚ್ 24, 2020 ರಂದು, ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ರಾಷ್ಟ್ರವನ್ನು ಉದೇಶಿಸಿ ಮಾತನಾಡುತ್ತಾ ವಿಶ್ವಾದ್ಯಂತ ತೀವ್ರವಾಗಿ ಹರಡುತ್ತಿರುವ ಕರೋನಾ ಭಾರತದಲ್ಲಿ ಹರಡಬಾರದೆಂದು ಮುಂಜಾಗ್ರತಾ ಕ್ರಮವಾಗಿ 21 ದಿನಗಳ ಕಾಲ ಇಡೀ ದೇಶಾದ್ಯಂತ ಸಂಪೂರ್ಣವಾಗಿ ಲಾಕ್‌ಡೌನ್ ಮಾಡುತ್ತಿದ್ದು ಅದಕ್ಕೆ ಎಲ್ಲರ ಸಂಪೂರ್ಣ ಸಹಕಾರ ನೀಡ ಬೇಕೆಂದು ಕೋರಿದ ಸುದ್ದಿ ಕೇಳಿ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು.

ಅಂದಿನಿಂದ ಆರಂಭವಾದ ಮನೆಯಿಂದಲೇ ಕೆಲಸ ಮಾಡುವ ಕಾರ್ಯ ಬರೋಬ್ಬರಿ ಸುಮಾರು 2 ವರ್ಷ 2 ತಿಂಗಳುಗಳ ಕಾಲ ಮುಂದುವರೆಯಿತು. ಈ ಮಧ್ಯೆ 2021ರ ಮೇ ತಿಂಗಳಿನಲ್ಲಿ ಕೆಲಸವನ್ನೂ ಸಹಾ ಬದಲಿಸಿ ಅಲ್ಲಿಯೂ ಸಹಾ ಕಛೇರಿಗೇ ಹೋಗದೇ ಕೆಲಸ ಮಾಡಲು ಬೇಕಾದ ಎಲ್ಲಾ ಸೌಲಭ್ಯಗಳನ್ನೂ ಮನೆಯ ಬಾಗಿಲಿಗೇ ತಲುಪಿಸಿ ಹೊಸಾ ಕಂಪನಿ ಹೊಸಾ ಸಹೋದ್ಯೋಗಿಗಳನ್ನು ವಯಕ್ತಿಕವಾಗಿ ಮುಖಃತಹ ಭೇಟಿಯೇ ಆಗದೇ ಎಲ್ಲವೂ online meeting ಮೂಲಕ virtual view ಪ್ರಕಾರ ಆರಂಭವಾಗಿ, ಆರಂಭದಲ್ಲಿ ಸ್ವಲ್ಪ ಕಷ್ಟ ಎನಿಸಿದರೂ ನಂತರದ ದಿನಗಳಲ್ಲಿ ಮಾತು ಬಲ್ಲವನಿಗೆ ಜಗಳವಿಲ್ಲ. ಊಟ ಬಲ್ಲವನಿಗೆ ರೋಗವಿಲ್ಲ ಎನ್ನುವಂತೆ ಎಲ್ಲರೊಂದಿಗೆ ಹಸನ್ಮುಖಿಯಾಗಿ ಮಾತನಾಡಿಸುತ್ತಾ ಎಲ್ಲರ ವಿಶ್ವಾಸಗಳಿಸುತ್ತಾ ಹೊಸಾ ಕಛೇರಿಯಲ್ಲಿ ನಿಧಾನವಾಗಿ ಕೆಲಸವನ್ನು ಮಾಡತೊಡಗಿದ್ದೆ. ಈ ಮಧ್ಯೆ ಅನಿವಾರ್ಯವಾದ ತುರ್ತು ಕೆಲಸಗಳನ್ನು ಕಛೇರಿಯಲ್ಲೇ ಮಾಡಲೇ ಬೇಕಾದ ಕಾರಣ ಹೊಸಾ ಕಛೇರಿಗೆ ಹೋದಾಗ ಹಾಳೂರಿಗೆ ಉಳಿದವನೇ ಗೌಡ ಎನ್ನುವಂತೆ ಇಡೀ ಕಛೇರಿಗೆ ಕೇವಲ ಕಾವಲುಗಾರರು ಮಾತ್ರವೇ ಇದ್ದು ಹೋದ್ಯಾ ಪುಟ್ಟಾ, ಬಂದ್ಯಾ ಪುಟ್ಟಾ ಎನ್ನುವಂತೆ ನನ್ನ ಕೆಲಸ ಕಾರ್ಯಗಳನ್ನು ಮುಗಿಸಿ ಕೊಂಡು ಬಂದಿದ್ದ ಕಾರಣ ಇಡೀ ಕಛೇರಿ ಹೇಗಿದೆ ಎಂಬ ಕಲ್ಪನೆಯೂ ಇರಲಿಲ್ಲ.

nts4

ಕೊರೋನಾ ಮೂರನೇ ಅಲೇ ಎಲ್ಲವೂ ಮುಗಿದು ನಾಲ್ಕನೆಯ ಅಲೆಯ ಪ್ರಭಾವ ಅಷ್ಟೇನೂ ಇಲ್ಲ ಎಂದು ತಿಳಿದು ಎರಡು ಮೂರು ಬಾರಿ ಮುಂದುಡೂತ್ತಲೇ ಅಂತಿಮವಾಗಿ ಮೇ 09, 2022 ಸೋಮವಾರದಿಂದ ಕಛೇರಿ ಆರಂಭವಾಗುತ್ತದೆ. ವಾರಕ್ಕೆ ಎರಡು ಇಲ್ಲವೇ ಮೂರು ದಿನಗಳ ಕಾಲ ಎಲ್ಲರೂ ಕಛೇರಿಯಿಂದಲೇ ಕೆಲಸವನ್ನು ಆರಂಭಿಸಬೇಕು ಎಂಬ ಸಂದೇಶ ಕಛೇರಿಯಿಂದ ಬಂದಾಗ ಒಂದು ರೀತಿಯ ಆನಂದ ಮತ್ತೊಂದು ರೀತಿಯ ಬೇಸರವಾಯಿತು ಎಂದರೂ ಸುಳ್ಳಲ್ಲ. 2 ವರ್ಷಗಳ ಕಾಲ ಮನೆಯಲ್ಲಿಯೇ ಇದ್ದು ಕೆಲಸ ಮಾಡಿ ಯಾವುದೇ ಶಿಸ್ತು ಸಂಯಮವಿಲ್ಲದೇ ಹೊತ್ತು ಗೊತ್ತು ಇಲ್ಲದೇ ಒಂದು ರೀತಿಯ ಜಡ್ಡು ಹಿಡಿದ್ದಿದ್ದ ಜೀವನ ಶೈಲಿಗೆ ಇದ್ದಕ್ಕಿದ್ದಂತಯೇ ಕಛೇರಿಗೆ ಹೋಗಲು ಬೆಳ್ಳಬೆಳ್ಳಿಗ್ಗೆಯೇ ಸಿದ್ದವಾಗಿ ಸರಿಯಾದ ಸಮಯದಲ್ಲಿ ತಿಂಡಿ ಮುಗಿಸಿ ಶಿಸ್ತು ಬದ್ಧವಾಗಿ ಕಛೇರಿಗೆ ಹೇಗಪ್ಪಾ ಹೋಗುವುದು? ಎಂಬ ಆತಂಕವಾದರೆ, ಕಛೇರಿಯಲ್ಲಿ ಎಲ್ಲರನ್ನೂ ಮುಖಃತಹ ಭೇಟಿಯಾಗಬಹುದಲ್ಲಾ ಎಂಬ ಸಂತೋಷವೂ ಇತ್ತು.

ಭಾನುವಾರ ಸಂಜೆಯೇ ಮಾರನೇಯ ದಿನ ಬೆಳಿಗ್ಗೆ 9:30ಕ್ಕೆ ಕಛೇರಿಯ ಕ್ಯಾಬ್ ಬಂದು ಕರೆದುಕೊಂಡು ಹೋಗಲು ಬರುತ್ತದೆ ಎಂಬ ಸಂದೇಶ ಬಂದಕೂಡಲೇ ಒಂದು ರೀತಿಯ ಆತಂಕ. ರಾತ್ರಿಯೆಲ್ಲಾ ಸರಿಯಾಗಿ ನಿದ್ದೆಯನ್ನೇ ಮಾಡದೆ ಎಂದಿಗಿಂತಲೂ ಸ್ವಲ್ಪ ಮುಂಚೆಯೇ ಎದ್ದು ಪ್ರಾರ್ಥವಿಧಿಗಳನ್ನು ಮುಗಿಸಿ ದೈನಂದಿನದ ಕಸರತ್ತುಗಳನ್ನು ಮುಗಿಸಿ ಅಭ್ಯಾಸದಂತೆ ದಿನಪತ್ರಿಯನ್ನೂ ಓದದೇ, ಸೀದ ಸ್ನಾನ ಸಂಧ್ಯಾವಂಧನೆಗಳನ್ನು ಮುಗಿಸಿ, ದೇವರಿಗೆ ವಂದಿಸಿ ನಂತರ ತಿಂಡಿ ತಿನ್ನುತಲ್ಲೇ ದಿನಪತ್ರಿಕೆಯನ್ನೂ ಓದಿ ಮುಗಿಸಿ 2 ವರ್ಷಗಳ ನಂತರ formal shirt & pant ಧರಿಸಿ ಷೂ ಧರಿಸಿ ಕಛೇರಿಯ ಕ್ಯಾಬ್ ಚಾಲಕನ ಕರೆಗೆಂದೇ ಬಕ ಪಕ್ಷಿಯಂತೆ ಕಾಯ ತೊಡಗಿದ್ದೆ. ಆತನ ಕರೆ ಬಂದ ಕೂಡಲೇ ಮನೆಯವರಿಗೆಲ್ಲಾ ಹೋಗಿ ಬರುತ್ತೇನೆ ಎಂದು ಹೇಳಿ ಸಂಭ್ರಮದಿಂದ ಜೀವನದಲ್ಲಿ ಮೊದಲ ಬಾರಿಗೆ ಕೆಲಸಕ್ಕೆ ಹೋಗುತ್ತಿದ್ದೇನೋ ಎನ್ನುವ ಉತ್ಸಾಹದಲ್ಲಿ 9:30ಕ್ಕೆ ಮನೆಯಿಂದ ಹೊರಬಿದ್ದಿದ್ದೆ.

cab2

2 ವರ್ಷಗಳ ಕಾಲ ಮನೆಯಲ್ಲೇ, ಮನೆಯವರನ್ನು ಗೋಳು ಹುಯ್ದು ಕೊಂಡಿರುತ್ತಿದ್ದ ನನ್ನನ್ನು ಕಂಡು ನಮ್ಮ ಮನೆಯವರಿಗೆಲ್ಲರಿಗೂ ಮೊದಲು ಇವರ ಕಛೇರಿ ಆರಂಭವಾಗಿ ಇವರು ಮನೆಯಿಂದ ಹೊರಗೆ ಕೆಲಸ ಮಾಡಲು ಹೋದರೆ ಸಾಕಪ್ಪಾ ಎಂದು ಬಯಸುತ್ತಿದ್ದ ವಿಷಯ ಗುಟ್ಟಾಗಿಯೇನು ಉಳಿದಿರಲಿಲ್ಲ. ಕಛೇರಿಯ ಕ್ಯಾಬಿನಲ್ಲಿ ಕುಳಿತು ಸಂಭ್ರಮದಿಂದ ಮನದೊಡತಿಗೆ ಸಂದೇಶ ಕಳುಹಿಸಿ ಮಾರ್ಗದ ಮಧ್ಯದಲ್ಲಿ ಮತ್ತೊಬ್ಬ ಸಹೋದ್ಯೋಗಿಯನ್ನು ಕಾರಿನಲ್ಲಿ ಹತ್ತಿಸಿ ಕೊಂಡು ಸೋಮವಾರದ ಟ್ರಾಫಿಕ್ಕನ್ನು ತಪ್ಪಿಸಿಕೊಳ್ಳುವ ಸಲುವಾಗಿ ಸಣ್ಣ ಸಣ್ಣದ ಗಲ್ಲಿಗಳಲ್ಲಿ ಪೋಂ ಪೋಂ ಎಂದು ಸದ್ದು ಮಾಡುತ್ತಾ ಕಛೇರಿಯನ್ನು ತಲುಪುವಷ್ಟರಲ್ಲಿ ಗಂಟೆ 11:30 ಆಗಿತ್ತು.

WhatsApp Image 2022-05-11 at 8.48.23 AM (1)

Welcome back to office we’re so glad you’re here. ಕಛೇರಿಗೆ ಮರಳಿ ಬರುತ್ತಿರುವುದಕ್ಕಾಗಿ ಸ್ವಾಗತ. ನಿಮ್ಮನ್ನು ಇಲ್ಲಿ ನೋಡಲು ನಮಗೆ ಬಹಳ ಸಂತೋಷವಾಗುತ್ತಿದೆ ಎಂಬ ಫಲಕದ ಜೊತೆ ಬಣ್ಣ ಬಣ್ಣದ ಬಲೂನುಗಳಿಂದ ನಮ್ಮನ್ನೆಲ್ಲಾ ಸ್ವಾಗತಿಸುವುದನ್ನು ನೋಡುತ್ತಿದ್ದಂತೆಯೇ ಎರಡು ಗಂಟೆಗಳ ಪ್ರಯಾಣದ ಆಯಾಸವೆಲ್ಲವೂ ಮಾಯವಾಗಿತ್ತು. ಕಛೇರಿ ಆರಂಭವಾಗುವುದಕ್ಕಿಂತಲೂ ಒಂದೆರಡು ವಾರಗಳ ಮುಂಚಿನಿಂದಲೂ ನಮಗೆಲ್ಲರಿಗೂ ಸಂಭ್ರಮದ ಸಂತೋಷದ ವಾತಾವರಣವನ್ನು ಕಲ್ಪಿಸಲು ಕಛೇರಿಯ admin team ಹಗಲು ರಾತ್ರಿ ಕೆಲಸ ಮಾಡುತ್ತಿದ್ದ ವಿಷಯ ತಿಳಿದಿದ್ದರೂ ಈ ಪರಿಯಾಗಿ ಅಲಂಕರಿಸಿರುತ್ತಾರೆ ಎಂಬ ಕಲ್ಪನೆ ಇರಲಿಲ್ಲ. ಮೆಟ್ಟಿಲು ಹತ್ತಿ ಸೀದಾ ಕಛೇರಿಯ ಮುಂಬಾಗಿಲಿಗೆ ಹೋಗುತ್ತಿದ್ದಂತೆಯೇ ನಮ್ಮೆಲ್ಲರ ಕೈಗಳಿಗೂ ಒಂದು ಸುಂದರವಾದ ಗುಲಾಬಿಯ ಜೊತೆ ಬಾಯಿ ಸಿಹಿ ಮಾಡಿಕೊಂಡು ಸಂಭ್ರಮಿಸಲು dairy milk silk chocolate ಕೊಟ್ಟು ಸ್ವಾಗತ ಮಾಡುತ್ತಿದ್ದದ್ದು ಸಿರಿವಂತರ ಮನೆಯ ಮದುವೆಯ ಆರತಕ್ಷತೆ ಸಮಯದಲ್ಲಿ ಮಂಟಪದ ಮುಂದೆ ಸುಂದರವಾದ ಹುಡುಗಿಯರು ಸುಗಂಧ ದ್ರವ್ಯಗಳನ್ನು ಸಿಂಪಡಿಸಿ ಕೈಗೊಂದು ಗುಲಾಬಿ ನೀಡಿ ಬಾಯಿ ಚಪ್ಪರಿಸಲು ಸಿಹಿ ಕೊಡುವಂತೆ ಭಾಸವಾಗಿದ್ದಂತೂ ಸುಳ್ಳಲ್ಲ.

nts

ಇಡೀ ಕಛೇರಿಯಲ್ಲಿ ಉರಿಯುತ್ತಿದ್ದ ಹತ್ತಾರು ದೀಪಗಳ ಬೆಳಕು ಬಣ್ಣ ಬಣ್ಣದ ಬಲೂನಿನ ಮೇಲೆ ಬಿದ್ದು ಇಡೀ ಕಛೇರಿಯೇ ಅರತಕ್ಷತೆಯಲ್ಲಿ ಮಿಂಚಲು ಸಿದ್ಧವಾಗಿರುವ ಮಧುಮಗಳಂತೆ ಸಿಂಗರಿಸಿಕೊಂಡಿರುವಷ್ಟು ಸುಂದರವಾಗಿ ಕಾಣಿಸುತ್ತಿದ್ದದ್ದು ಮನಸ್ಸಿಗೆ ಮತ್ತಷ್ಟು ಮುದ ನೀಡಿತು ಎಂದರೂ ಅತಿಶಯವಲ್ಲ.

NTS

ಈ ಹಿಂದೆ ಕತ್ತಲಲ್ಲಿ ನೋಡಿದ್ದು ಇದೇ ಕಛೇರಿಯೇ? ಎನ್ನುವಂತೆ ಮೂಗಿನ ಮೇಲೆ ಬೆರಳಿಟ್ಟು ಕೊಂಡು ನೋಡುವಂತಾಗಿತ್ತು. ಮೊದಲನೇ ದಿನ ಅಲ್ಲೊಬ್ಬ ಇಲ್ಲೊಬ್ಬರು ಕುಳಿತಿದ್ದವರ ಬಳಿ ಹೋಗಿ ನನ್ನ ಪರಿಚಯ ಮಾಡಿಕೊಂಡಾಗ, ಅದುವರೆವಿಗೂ ಕೇವಲ ಮೀಟಿಂಗ್ಗಳಲ್ಲಿ ಅವರ ಭಾವಚಿತ್ರವನ್ನು ನೋಡಿಯೋ ಇಲ್ಲವೇ ಅವರ ಧ್ವನಿಯನ್ನು ಕೇಳಿ ಅವರು ಹೀಗಿರಬಹುದು, ಇವರು ಹಾಗಿರಬಹುದು. ಅವರ ವ್ಯಕ್ತಿತ್ವ ಹೀಗೆ, ಹಾಗೆ ಎಂದು ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಿದ್ದ ನನಗೆ ಕಛೇರಿ ಆರಂಭವಾದ ಮೊದಲನೇ ದಿನವೇ ಅವರನ್ನು ಖುದ್ದಾಗಿ ಭೇಟಿಯಾಗಿ ಅವರ ಬಗ್ಗೆ ಇದ್ದ ಕಲ್ಪನೆಗಳ ವಿರುದ್ಧವಾದ ರೀತಿಯಲ್ಲಿ ಇದ್ದ ಹಲವರನ್ನು ಕಂಡು ಅಚ್ಚರಿಯ ಜೊತೆ ಸೋಜಿಗವೂ ಮೂಡಿದ್ದಲ್ಲದೇ ರಾಮ ಲಕ್ಶ್ಮಣ ಸಿನಿಮಾದ ಕೇಳಿದ್ದೂ ಸುಳ್ಳಾಗಬಹುದು ನೋಡಿದ್ದು ಸುಳ್ಳಾಗಬಹುದು ನಿಧಾನಿಸಿ ಯೋಚಿಸಿದಾಗ ನಿಜವು ಅರಿವುದು ಎಂಬ ಹಾಡು ಥಟ್ ಎಂದು ಮನಸ್ಸಿನಲ್ಲಿ ಮೂಡಿತ್ತು.

food

ನಿಧಾನವಾಗಿ ನನಗಾಗಿ ಮೀಸಲಿರಿಸಿದ್ದ ಜಾಗದಲ್ಲಿ ಕುಳಿತುಕೊಳ್ಳುತ್ತಿದ್ದಂತೆಯೇ ಕಛೇರಿಯ ಹುಡುಗ ಕುಡಿಯಲು ಕೊಟ್ಟ ನೀರನ್ನು ಕುಡಿದು ಕೆಲ ಸಮಯ ಕೆಲಸವನ್ನು ಆರಂಭಿಸುತ್ತಿದ್ದಂತೆಯೇ ಹೊಟ್ಟೆ ಚುರ್ ಚುರ್ ಗುಟ್ಟ ತೊಡಗಿದಾಗ ಗಂಟೆ 1:30 ಆಗಿತ್ತು. ಮನೆಯಿಂದ ಕೆಲಸ ಮಾಡುವಾಗ 10-11 ಗಂಟೆಗೆ ತಿಂಡಿ ತಿಂದು 3-4 ಗಂಟೆಗೆ ಊಟ ಮಾಡುವ ಅಭ್ಯಾಸವಾಗಿದ್ದ ನನಗೆ ಅಂದು ಬೆಳಿಗ್ಗೆ 8:30ಕ್ಕೆಲ್ಲಾ ತಿಂಡಿ ತಿಂದಿದ್ದ ಕಾರಣ ಹೊಟ್ಟೆ ತಾಳ ಹಾಕುವಂತಾಗಿತ್ತು. ಸಹೋದ್ಯೋಗಿಗಳೊಡನೆ 6ನೇ ಮಹಡಿಯಲ್ಲಿದ್ದ ಊಟದ ಆವರಣಕ್ಕೆ ಹೋದರೆ ನಮ್ಮನ್ನು ಸ್ವಾಗತಿಸಲು ನಮ್ಮ ಅಡ್ಮಿನ್ ತಂಡದವರು ಅಲ್ಲಿ ನಿಂತಿದ್ದರೆ, ನಮ್ಮ ಉದರವನ್ನು ತಣಿಸಲು ರುಚಿ ರುಚಿಯಾದ ಅಡುಗೆಗಳೂ ಸಿದ್ಧವಾಗಿದ್ದು ನಮಗೆಷ್ಟು ಬೇಕೋ ಅಷ್ಟನ್ನು ನಾವೇ ಬಡಿಸಿಕೊಂಡು ಹೊಟ್ಟೆಯ ತುಂಬಾ ಊಟ ಮುಗಿಸಿ ಕೈ ತೊಳೆದು ಬರುತ್ತಿದ್ದಂತೆಯೇ ಸರ್, ಊಟಾ ಹೇಗಿತ್ತು? ನಿಮಗೆ ಹಿಡಿಸಿತೇ? ಎಂದು ಕೇಳುತ್ತಿದ್ದದ್ದನ್ನು ನೋಡಿದಾಗ, ಮದುವೆಯ ಮನೆಯಲ್ಲಿ ಹೆಣ್ಣಿನ ಕಡೆಯವರು ಗಂಡಿನ ಕಡೆಯವರನ್ನು ಊಟದ ಸಮಯದಲ್ಲಿ ವಿಚಾರಿಸಿಕೊಳ್ಳುವ ಪರಿ ನೆನಪಿಗೆ ಬಂದಿತು.

IT_room

ಕಛೇರಿ ಆರಂಭವಾಗುವ ಮುನ್ನಾ ಎಲ್ಲ ರೀತಿಯ ಪರೀಕ್ಷೆಗಳನ್ನೂ ನಡೆಸಿ, ನಮ್ಮ ತಂಡದ ಕಡೆಯಿಂದ ಯಾವುದೇ ರೀತಿಯ ತೊಂದರೆಗಳಾಗದಂತೆ ಎಷ್ಟೇ ಮುನ್ನೆಚರಿಕೆಯ ಕ್ರಮಗಳನ್ನು ತೆಗೆದುಕೊಂಡರೂ, 2 ವರ್ಷಗಳ ನಂತರ ಕಛೇರಿಗೆ ಬಂದ ಕೆಲವರಿಗೆ Wifi connection & password reset ಮುಂತಾದ ಸಣ್ಣ ಪುಟ್ಟ ಮಸ್ಯೆಗಳ ಹೊರತಾಗಿ ಮಿಕ್ಕೆಲ್ಲಾ ಕೆಲಸ ಕಾರ್ಯಗಳು ಮೊದಲನೇ ದಿನದಂದು ಸುಗಮವಾಗಿ ನಿರ್ವಿಘ್ನವಾಗಿ ನಡೆದದ್ದು ನಮ್ಮ ಇಡೀ ತಂಡದ ಶ್ರಮಕ್ಕೆ ಸಾರ್ಥಕತೆ ಎನಿಸಿದ್ದಂತೂ ಸುಳ್ಳಲ್ಲ.

ಊಟವಾದ ನಂತರ ಒಂದಷ್ಟು ಸಹೋದ್ಯೋಗಿಗಳನ್ನು ಭೇಟಿ ಮಾಡಿ, ಕೆಲಸದ ಕುರಿತಾಗಿ ಅವರೊಂದಿಗೆ ಕೆಲವಷ್ಟು ಗಹನವಾದ ವಿಚಾರ ವಿನಿಮಯ ಮಾಡಿಕೊಂಡು ಕೆಲವೊಂದು ಸಲಹೆಗಳನ್ನು ಕೊಟ್ಟು/ತೆಗೆದುಕೊಳ್ಳುವುದನ್ನು ಮುಗಿಸಿ ಇನ್ನೂ ಕೆಲವೊಬ್ಬರ ಜೊತೆ ಲೋಕಾಭಿರಾಮವಾಗಿ ಹರಟುವಷ್ಟರಲ್ಲಿ ಸರ್ ನಿಮಗಾಗಿ ನಿಮ್ಮ ಕ್ಯಾಬ್ ಸಿದ್ಧವಾಗಿದೆ ಎಂದು ಟ್ರಾನ್ಸ್ಪೋರ್ಟ್ ಕಡೆಯಿಂದ ಸಂದೇಶ ಬಂದಾಗಲೇ ಗಂಟೆ 7:10 ಆಗಿದೆ ಎಂಬುದರ ಅರಿವಾಗಿತ್ತು. ಲಗು ಬಗೆನೆ ಲ್ಯಾಪ್ಟ್ಯಾಪ್ ಮುಚ್ಚಿಕೊಂಡು ಕ್ಯಾಬಿನಲ್ಲಿ ಕುಳಿತು ಮಾರ್ಗದ ಮಧ್ಯದಲ್ಲೇ ಅದುವರೆಗೂ ಬಂದಿದ್ದ ಈಮೇಲ್ ಗಳಿಗೆ ಉತ್ತರಿಸುತ್ತಿರುವಾಗಲೇ ಆಕಾಶಕ್ಕೇ ತೂತು ಬಿದ್ದಂತೆ ಮಳೆರಾಯ ಧೋ ಎಂದು ಸುರಿಯುವ ಮಳೆಯಲ್ಲಿಯೇ ಎಚ್ಚರಿಕೆಯಿಂದ ಮನೆಗೆ ತಲುಪುವಷ್ಟ್ರಲ್ಲಿ ಗಂಟೆ 9:30 ಆಗಿತ್ತು.

ಒಟ್ಟಿನಲ್ಲಿ ಮೂಗಿಗಿಂತ ಮೂಗಿನ ನತ್ತಿನ ಭಾರವೇ ಹೆಚ್ಚು ಎನ್ನುವಂತೆ ಕಛೇರಿಯಲ್ಲಿ ಕೆಲಸ ಮಾಡುವ ಸಮಯಕ್ಕಿಂತಲೂ ಮೊದಲನೇ ದಿನವೇ ಟ್ರಾಫಿಕ್ಕಿನಲ್ಲೇ ಅಧಿಕ ಸಮಯ ಕಳೆಯುವಂತಾಯಿತಲ್ಲಾ ಎಂದೆನಿಸಿದರೂ ಉದರ ನಿಮಿತ್ತ ಬಹುಕೃತ ವೇಷಂ ಎನ್ನುವಂತೆ ಇಷ್ಟ ಪಟ್ಟು ಸೇರಿಕೊಂಡ ಕೆಲಸಕ್ಕೆ ಕಷ್ಟ ಪಟ್ಟು ಮಾಡಲೇ ಬೇಕು ಎಂದು ನಮ್ಮಮ್ಮ ಹೇಳುತ್ತಿದ್ದದ್ದು ನೆನಪಿಗೆ ಬಂತು. ಸೀದಾ ಬಚ್ಚಲು ಮನೆಗೆ ಕೈ ಕಾಲು ತೊಳೆದು ಕೊಂಡು ಬಟ್ಟೆಯನ್ನು ಬದಲಿಸಿ ಕಛೇರಿಯ ಮೊದಲನೇ ದಿನದ ಅನುಭವಕ್ಕಾಗಿ ಕಾದು ಕುಳಿತ್ತಿದ್ದ ಮನೆಯವರಿಗೆಲ್ಲರಿಗೂ ಇವೆಲ್ಲವನ್ನೂ ಹೇಳಿ ಸ್ವಲ್ಪ ಅಹಾರ ಸೇವಿಸಿ ನಿದ್ದೆಗೆ ಜಾರುವಷ್ಟರಲ್ಲಿ ಗಂಟೆ 11 ಆಗಿತ್ತು.

ಕೊರೋನಾ ಮಹಾಮಾರಿಯಿಂದಾಗಿ ಸರಿ ಸುಮಾರು 2 ವರ್ಷಗಳ ಕಾಲ ಇಡೀ ಪ್ರಪಂಚವೇ ನಲುಗಿ ಹೋಗಿ ಇಡೀ ವಿಶ್ವಾದ್ಯಂತ ವ್ಯಾಪಾರ ವಹಿವಾಟುಗಳೆಲ್ಲವೂ ಒಂದು ರೀತಿ ಕಡಿಮೆ ಆಗಿದ್ದಲ್ಲದೇ ಕಛೇರಿಗಳು ಭಾಗಶಃ ಮುಚ್ಚಿದ್ದ ಕಾರಣ ಅದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಅಕ್ಕ ಪಕ್ಕದ ಅಂಗಡಿ ಮುಗ್ಗಟ್ಟುಗಳು, catering, cab services, house keeping, security, ಇವರೆಲ್ಲರೂ ಅಕ್ಷರಶಃ ಬೀದಿಗೆ ಬೀಳುವಂತಾಗಿತ್ತು. ಕಛೇರಿ ಆರಂಭವಾದ ಮೊದಲನೇ ದಿನವೇ ಕ್ಯಾಬ್ ಚಾಲಕ ಸಂಭಮದಿಂದ ಕರೆ ಮಾಡಿ ಸಾರ್ 9:30ಕ್ಕೆ ನಿಮ್ಮನ್ನು ಪಿಕ್ಕಪ್ ಮಾಡಲು ಬರುತ್ತಿದ್ದೇನೆ ಸಿದ್ಧವಾಗಿರಿ ಎಂದಾಗ ಆತನ ಕರೆಯಲ್ಲೊಂದು ಸಂಭ್ರಮವಿತ್ತು. ಕಛೇರಿಗೆ ಹೋಗುತ್ತಿದ್ದಂತೆಯೇ Good Morning Sir, Welcome back to office ಎಂದು security gaurd ಎಂದು ಸ್ವಾಗತಿಸುತ್ತಿದ್ದಾಗ ಆಲ್ಲೊಂದು ಸಂಭ್ರಮವಿತ್ತು. ಕುಡಿಯಲು water bottle ತಂದು ಕೊಟ್ಟ office boy ಮುಖದಲ್ಲೊಂದು ಸಂತಸದ ನಗೆಯಿತ್ತು. ಮಧ್ಯಾಹ್ನ ಊಟ ಬಡಿಸಲು ಸ್ವತಃ catering company ಮಾಲಿಕರೇ ಅಲ್ಲಿದ್ದು ಅವರಿಗೂ ಕಛೇರಿಯ ಆರಂಭ ಸಂತಸ ತಂದಿತ್ತು. ಇನ್ನು ಊಟವಾದ ನಂತರ ಗೆಳೆಯರೊಡನೆ ಕಛೇರಿಯ ಸಮೀಪವೇ ಇದ್ದ ಸಿಗರೇಟ್ ಮತ್ತು ಪಾನ್ ಬೀಡಾ ಅಂಗಡಿಯ ಕಡೆಗೆ ಹೋದಾಗ ಆ ಆಂಗಡಿಯವರು ನಮ್ಮ ಸಹೋದ್ಯೋಗಿಗಳನ್ನೆಲ್ಲಾ ನೋಡಿ ಸಂಭ್ರಮಿಸಿ, ಎಷ್ಟು ವರ್ಷಗಳಾಯ್ತು ಸರ್ ನಿಮ್ಮನ್ನೆಲ್ಲಾ ನೋಡಿ, ಇವತ್ತಿಂದ ಎಲ್ಲರೂ ಬರ್ತಾರಾ ಸರ್? ಎಂದು ಕೇಳುತ್ತಲೇ 2 ವರ್ಷಗಳ ನಂತರವೂ ಕೊಂಚವೂ ಮರೆಯದೇ, ಅವರವರಿಗೆ ಅವರವರ ನೆಚ್ಚಿನ ಬ್ರಾಂಡ್ ಸಿಗರೇಟುಗಳನ್ನು ಕೊಟ್ಟು ನನ್ನ ಕಡೆಯೊಂದು ಆತ್ಮೀಯ ನಗೆಯೊಂದನ್ನು ಬೀರಿ ಸರ್ ಸಣ್ಣದಾಗಿ ಮಳೆ ಬರ್ತಾ ಇರುವ ಕಾರಣ ನಿಮಗೊಂದು ಬಿಸಿ ಬಿಸಿ ಗ್ರೀನ್ ಟೀ ಕೊಡ್ತೀನಿ ಎನ್ನುವಷ್ಟರ ಮಟ್ಟಿಗಿನ ಆತ್ಮೀಯತೆ ತೋರಿಸಿದ್ದದ್ದು ಎಲ್ಲರ ಮೆಚ್ಚುಗೆ ಪಾತ್ರವಾಗಿತ್ತು. ಹೀಗೆ ನಮ್ಮ ಕಛೇರಿಯ ಪುನರಂಭ ಹತ್ತು ಹಲವಾರು ಜನರಿಗೆ ಸಂತಸದ ಆಶಾಭಾವನೆ ಮೂಡಿಸಿತ್ತು

ಒಂದು ಎರಡು ಬಾಳೆಲೆ ಹರಡು.. ಮೂರು ನಾಲ್ಕು ಅನ್ನ ಹಾಕು…
ಐದು ಆರು ಬೇಒಂದು ಎರಡು ಬಾಳೆಲೆ ಹರಡು.. ಮೂರು ನಾಲ್ಕು ಅನ್ನ ಹಾಕು…
ಐದು ಆರು ಬೇಳೆ ಸಾರು… ಏಳು ಎಂಟು ಪಲ್ಯಕೆ ದಂಟು…
ಒಂಬತ್ತು ಹತ್ತು ಎಲೆ ಮುದುರೆತ್ತು… ಒಂದರಿಂದ ಹತ್ತು ಹೀಗಿತ್ತು…
ಊಟದ ಆಟವು ಮುಗಿದಿತ್ತು… ಎನ್ನುವ ಜಿ.ಪಿ ರಾಜರತ್ನಂ ಅವರ ಪದ್ಯದಂತೆ, ಸುದೀರ್ಘವಾದ 2 ವರ್ಷ, 2 ತಿಂಗಳುಗಳ ನಂತರ ಕಛೇರಿಗೆ ಹೋದ ನನ್ನ ಅನುಭವ ಹೀಗಿತ್ತು. ಪ್ರಪಂಚಾದ್ಯಂತ ಕವಿದಿರುವ ಮಹಾಮಾರಿಯ ಸೋಂಕೆಲ್ಲಾ ಆದಷ್ಟು ಬೇಗ ಕಡಿಮೆಯಾಗಿ ಮತ್ತೆ ಹಿಂದಿನ ಸಂತಸದ ದಿನಗಳು ಮರುಕಳಿಸಲೀ ತನ್ಮೂಲಕ ಎಲ್ಲರ ಬಾಳಿನಲ್ಲಿಯೂ ಮತ್ತೊಮ್ಮೆ ಹರ್ಷ ಮೂಡುವಂತಾಗಲೀ ಎಂದೇ ಕಛೇರಿಗೆ ಮೊದಲದಿನ ಬಂದವರೆಲ್ಲರ ಅನಿಸಿಕೆಯಾಗಿತ್ತು. ನಿಮ್ಮದೂ ಸಹಾ ಇದೇ ಆಶಯ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s