ಆಪರೇಷನ್‌ ಶಕ್ತಿ & ರಾಷ್ಟ್ರೀಯ ತಂತ್ರಜ್ಞಾನ ದಿನ

ಇಡೀ ವಿಶ್ವವನ್ನೇ ನಿಬ್ಬೆರಗಾಗಿಸಿದ 1998 ಮೇ 11 ರಂದು ರಾಜಾಸ್ಥಾನದ  ಪೋಖ್ರಾನ್ ಎಂಬ ಪ್ರದೇಶದಲ್ಲಿ ನಡೆಸಿದ ಅಣ್ವಸ್ತ್ರ ಪರೀಕ್ಷೆಯ ದಿನವನ್ನೇ ರಾಷ್ಟ್ರೀಯ ತಂತ್ರಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದ್ದು, ದೇಶದ ಸರ್ವತೋಮುಖ ಪ್ರಗತಿಯ ನಿಟ್ಟಿನಲ್ಲಿ ಭಾರತದ ಹಿರಿಮೆ, ಗರಿಮೆಗಳನ್ನು ಎತ್ತಿಹಿಡಿಯುತ್ತಿರುವ ಕಾರ್ಯದಲ್ಲಿ ತೊಡಗಿಕೊಂಡಿರುವ ಭಾರತದ ವಿಜ್ಞಾನಿಗಳು ಮತ್ತು ತಂತ್ರಜ್ಞರಿಗೆ ಅಭಾರಿಗಳಾಗಿ ಈ ದಿನವನ್ನು ಅವರಿಗಾಗಿ ಮೀಸಲಾಗಿಟ್ಟಿದೆ.

1998 ಮೇ 11 ಭಾರತದ ಪಾಲಿಗೆ ಅತ್ಯಂತ ಮಹತ್ವದ ದಿನವಾಗಿದ್ದು. ಅಂದು ರಾಜಸ್ಥಾನದ ಪೊಖ್ರಾನ್‌ನಲ್ಲಿ ಭಾರತೀಯ ಸೇನೆಯ ಪರೀಕ್ಷಾ ಶ್ರೇಣಿಯಲ್ಲಿ ಭಾರತವು ಆಪರೇಷನ್‌ ಶಕ್ತಿ ಎಂಬ ಹೆಸರಿನಲ್ಲಿ  ಜಗತ್ತಿನ ಸಮಸ್ಥ ಬೇಹುಗಾರಿಕಾ ಉಪಗ್ರಹಗಳ ಕಣ್ತಪ್ಪಿಸಿ ಡಾ. ಎಪಿಜಿ ಅಬ್ದುಲ್‌ ಕಲಾಂ ಅವರ ನೇತೃತ್ವದಲ್ಲಿ, ಅಂದು  ಪ್ರಧಾನಿಗಳಾಗಿದ್ದ ಶ್ರೀ ಅಟಲ್ ಬಿಹಾರಿ ವಾಜಪೇಯಿ ಮತ್ತು ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್ ಅವರುಗಳ ಸಾರಥ್ಯದಲ್ಲಿ ಮೂರು ಯಶಸ್ವಿ ಪರಮಾಣು ಪರೀಕ್ಷೆಯನ್ನು ನಡೆಸಿದ ನಂತರ ಮೇ 13 ರಂದು ಮತ್ತೇ ಎರಡು ಪರಮಾಣು ಪರೀಕ್ಷೆಗಳನ್ನು  ನಡೆಸುವ ಮೂಲಕ ಭಾರತ ದೇಶವೂ ಸಹಾ ಪ್ರಭಲ ಅಣ್ವಸ್ತ್ರವನ್ನು ಹೊಂದಿರುವ ರಾಷ್ಟ್ರ ಎಂದು  ಇಡೀ ಜಗತ್ತಿಗೇ ಸಾರಿದದ್ದಲ್ಲದೇ, ಅದೇ ದಿನ ಬೆಂಗಳೂರಿನಲ್ಲಿ ಸ್ವದೇಶಿ ನಿರ್ಮಿತ ಹನ್ಸಾ- ಹೆಲಿಕಾಪ್ಟರಿನ ಯಶಸ್ವಿ ಹಾರಾಟ ಮತ್ತು ಸ್ವದೇಶಿ ನಿರ್ಮಿತ ತ್ರಿಶೂಲ್‌ ಕ್ಷಿಪಣಿಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಈ ಎಲ್ಲ ತಾಂತ್ರಿಕ ಸಾಧನೆಗಳ ಹಿನ್ನೆಲೆಯಲ್ಲಿ ವಿಜ್ಞಾನ , ಸಮಾಜ ಮತ್ತು ಇಂಡಸ್ಟ್ರಿಗಳ ಏಕೀಕರಣದ ಸಂಕೇತವಾಗಿ, ವೈಜ್ಞಾನಿಕ ಸಂಶೋಧನೆ ಮತ್ತು ತಾಂತ್ರಿಕ ಸೃಜನಶೀಲತೆಯ ಗೌರವವಾಗಿ 1999ರ  ಮೇ 11 ದಿನದಿಂದ ಮೊದಲ ಬಾರಿಗೆ  ರಾಷ್ಟ್ರೀಯ ತಂತ್ರಜ್ಞಾನ ದಿನ ಎಂದು ಅಂದಿನ ಪ್ರಧಾನಿಗಳಾಗಿದ್ದ ಶ್ರೀ ಅಟಲ್‌ ಬಿಹಾರಿ ವಾಜಪೇಯಿ ಘೋಷಿಸುವ ಮೂಲಕ  ಪ್ರತೀ ವರ್ಷವೂ ಈ ದಿನವನ್ನು ದೇಶಾದ್ಯಂತ ಆಚರಿಸುವ ನಿರ್ಧಾರವನ್ನು ಕೈ ಕೊಳ್ಳಲಾಯಿತು.

ದೇಶದ ಭಧ್ರತೆಯ ದೃಷ್ಟಿಯಿಂದ ಪರಮಾಣು  ಆಧಾರಿತ ಶಸ್ತ್ರಸ್ತ್ರಗಳನ್ನು ಹೊಂದಿರುವುದು ಅತ್ಯವಶ್ಯಕ ಎಂದು ಮನಗಂಡ ಭಾರತ ಸ್ವಾತ್ರಂತ್ರ್ಯ ಪೂರ್ವದಿಂದಲೂ ಈ ಕುರಿತಾಗಿ ಪ್ರಯೋಗಗಳು ನಡೆಯುತ್ತಲೇ ಇದ್ದವು. 1944 ರಲ್ಲಿ  ಪರಮಾಣು ಭೌತಶಾಸ್ತ್ರಜ್ಞ ಹೋಮಿ ಭಾಭಾ ಅವರು ಪರಮಾಣು ಶಕ್ತಿಯ ಬಳಕೆ ದೇಶಕ್ಕೆ ಅತ್ಯಗತ್ಯ ಎಂದು ಮನಗಂಡು  ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (TIFR) ಅನ್ನು ಸ್ಥಾಪಿಸಿದ್ದಲ್ಲದೇ ಅಲ್ಲಿ  ಪ್ರಾಥಮಿಕ ಅಧ್ಯಯನಗಳನ್ನು BARC ನಲ್ಲಿ ನಡೆಸಲಾಯಿತು ಮತ್ತು ಪ್ಲುಟೋನಿಯಂ ಮತ್ತು ಇತರ ಬಾಂಬ್ ಘಟಕಗಳನ್ನು ಉತ್ಪಾದಿಸಲು ಯೋಜನೆಗಳನ್ನು ಅಭಿವೃದ್ಧಿಪಡಿಸಲಾಯಿತು. 1962 ರಲ್ಲಿ, ಭಾರತ ಮತ್ತು ಚೀನಾ ನಡುವೆ ನಡೆದ ಯುದ್ದದ ನಂತರ, 1964 ರಲ್ಲಿ ಚೀನಾದ ಪರಮಾಣು ಪರೀಕ್ಷೆಯನ್ನು ನಡೆಸಿದ ನಂತರ   ಬಾಬಾ ರಿಸರ್ಚ್ ಸೆಂಟರಿನ ಅಂದಿನ ಮುಖ್ಯಸ್ಥರಾಗಿದ್ದ ಶ್ರೀ ವಿಕ್ರಮ್ ಸಾರಾಭಾಯ್  ಅವರು ಅಂದಿನ ಪ್ರಧಾನಿಗಳಾಗಿದ್ದ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿಯವರ ಬಳಿ  ಪರಮಾಣು ಕಾರ್ಯಕ್ರಮದ ಮಿಲಿಟರೀಕರಣದ ಕಡೆಗೆ ಹೆಚ್ಚಿನ  ಒತ್ತು ನೀಡಬೇಕೆಂದು ಕೇಳಿಕೊಂಡಿದ್ದರು

p4ದುರಾದೃಷ್ಟವಷಾತ್ ವಿವಾದಾಸ್ಪದವಾಗಿ ಶಾಸ್ತ್ರೀ ಯವರು ನಿಧನರಾಗಿ ಅವರ ನಂತರ ದೇಶದ ಪ್ರಧಾನಿಗಳಾದ ಶ್ರೀಮತಿ ಇಂದಿರಾ ಗಾಂಧಿಯವರ ಆರಂಭದ ದಿನಗಳಾದ 1967ರಲ್ಲಿ  ಚೀನಾ ಮತ್ತೊಂದು ಪರಮಾಣು ಪರೀಕ್ಷೆಯನ್ನು ನಡೆಸಿದಾಗ ಅಂತಿಮವಾಗಿ ಭಾರತವು  ಪರಮಾಣು ಶಸ್ತ್ರಾಸ್ತ್ರಗಳನ್ನು ನಿರ್ಮಿಸುವ ನಿರ್ಧಾರಕ್ಕೆ ಮುಂದಾಗುವುದು ಅನಿವಾರ್ಯ ಎನಿಸಿದಾಗ ಕನ್ನಡಿಗ ಭೌತಶಾಸ್ತ್ರಜ್ಞ ಶ್ರೀ ರಾಜಾ ರಾಮಣ್ಣ ಅವರ ಪ್ರಯತ್ನದಿಂದಾಗಿ 1974 ರಲ್ಲಿ ಇದೇ ಪೋಖ್ರಾನಿಯಲ್ಲಿಯೇ ಸ್ಮೈಲಿಂಗ್ ಬುದ್ಧ ಎನ್ನುವ ಕಾರ್ಯಕ್ರಮದ ಅಡಿಯಲ್ಲಿ  ತನ್ನ ಮೊದಲ ಪರಮಾಣು ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ನಮ್ಮಲ್ಲಿಯೂ ಪರಮಾಣು ಅಸ್ತ್ರದವಿದೆ ಎಂಬುದನ್ನು ಜಗತ್ತಿಗೆ ತೋರಿಸಿದರೂ ಈ ಪರಮಾಣು ಕಾರ್ಯಕ್ರಮವು ಮಿಲಿಟರಿ ಉದ್ದೇಶಗಳಿಗಾಗಿ ಅಲ್ಲ ಎಂದು ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರು IAEAಗೆ ಸ್ಪಷ್ಟ ಪಡಿಸಿದ್ದರು.

ಭಾರತದಿಂದ ಈ ರೀತಿಯಾದ ಪ್ರಯೋಗಗಳನ್ನಿ ನಿರೀಕ್ಷಿಸಿರದಿದ್ದ ಪರಮಾಣು ಪೂರೈಕೆದಾರರ ಗುಂಪು ಮತ್ತು  ಪ್ರಪಂಚದ ಪ್ರಮುಖ ಪರಮಾಣು ಶಕ್ತಿಗಳು ಭಾರತದ  ಮೇಲೆ ತಾಂತ್ರಿಕ ನಿರ್ಬಂಧವನ್ನು ಹೇರಿದವು. ನವಿಲು  ಕುಣಿದದ್ದನ್ನು ನೋಡಿ ಕೆಂಭೂತವೂ ತನ್ನ ರೆಕ್ಕೆ ಪುಕ್ಕಗಳನ್ನು ತೆರೆದು ಕುಣಿದಂತೆ ಭಾರತದ ಅಣ್ವಸ್ತ್ರ ಪ್ರಯೋಗವನ್ನು ಸಹಿಸದ ನೆರೆಯ ಶತ್ರು ರಾಷ್ಟ್ರ ಪಾಕೀಸ್ಥಾನವು ಸಹಾ ಭಾರತದ ಸಾಧನೆಯ ಸಾಲಿನಲ್ಲಿ ನಿಲ್ಲಲು ತನ್ನದೇ ಆದ ತಾಂತ್ರಿಕ ಪ್ರಯೋಗಗಳನ್ನು ನಡೆಸಿ ಅವೆಲ್ಲವೂ ವಿಫಲವಾದ ನಂತರ ಕೆಲ ವರ್ಷಗಳ ಕಾಲ ಹೆಣಗಾಡಿದ ನಂತರ ಚೀನದಿಂದ ಆಮದು ಮಾಡಿಕೊಂಡ ತಂತ್ರಜ್ಞಾನ ಮತ್ತು ತಾಂತ್ರಿಕ ನೆರವಿನಿಂದ ಕಾಟಾಚಾರದ ಅಣ್ವಸ್ತ್ರ ಪಯೋಗ ನಡೆಸಿತ್ತು.

1975 ರಲ್ಲಿ ದೇಶಾದ್ಯಂತ ತುರ್ತುಪರಿಸ್ಥಿತಿಯನ್ನು ಹೇರಿ ನಂತರ ನಡೆದ ಚುನಾವಣೆಯಲ್ಲಿ ಹೀನಾಮಾನವಾಗಿ   ಸೋತು ಇಂದಿರಾ ಗಾಂಧಿಯವರ ಸರ್ಕಾರದ ಪತನವಾದ ನಂತರ ಮೊರಾರ್ಜೀ ದೇಸಾಯಿಯವರ ನೇತೃತ್ವದಲ್ಲಿ  ಜನತಾಪಕ್ಷ ಸರ್ಕಾರ ಬಂದ ನಂತರ, ಪರಮಾಣು ಕಾರ್ಯಕ್ರಮವನ್ನು ನಿರ್ವಾತದಲ್ಲಿ ಬಿಡಲಾಯಿತು. ಜಲಜನಕ ಬಾಂಬ್ ವಿನ್ಯಾಸದ ಕೆಲಸವು ಮೆಕ್ಯಾನಿಕಲ್ ಇಂಜಿನಿಯರ್ M. ಶ್ರೀನಿವಾಸನ್ ಅವರ ಅಡಿಯಲ್ಲಿ ಆಮೆಗತಿಯಲ್ಲಿ ಮುಂದುವರೆಯಿತಾದರೂ ಹೆಚ್ಚಿನ ಪ್ರಯೋಗವೇನೂ ನಡೆಯದ ಕಾರಣ ಮತ್ತೊಮ್ಮೆ ಭೌತಶಾಸ್ತ್ರಜ್ಞ ರಾಮಣ್ಣ ಅವರಿಗೆ ನೇತೃತ್ವವಹಿಸಿದ ನಂತರ  ಭಾರತದ ಪರಮಾಣು ಕಾರ್ಯಕ್ರಮ ವೇಗವನ್ನು ಹೆಚ್ಚಿಸಿಕೊಂಡಿತು

ಆಂತರಿಕ ಒಳಜಗಳಗಳಿಂದಾಗಿ ಜನತಾ ಸರ್ಕಾರ ಪತನವಾಗಿ 1980 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಇಂದಿರಾ ಗಾಂಧಿಯವರೇ ಆಯ್ಕೆಯಾದರೂ ರಾಜಾ ರಾಮಣ್ಣನವರ  ಪರಮಾಣು ಪರೀಕ್ಷೆಗಳ ಕೋರಿಕೆಯನ್ನು ನಿರಾಕರಿಸುತ್ತಲೇ ಹೋಗಿ ನಂತರದ ದಿನಗಳಲ್ಲಿ ಏರೋಸ್ಪೇಸ್ ಇಂಜಿನಿಯರ್ ಆಗಿದ್ದ ಡಾ. ಅಬ್ದುಲ್ ಕಲಾಂ ಅವರನ್ನು ಜಲಜನಕ ಬಾಂಬ್ ಮತ್ತು ಕ್ಷಿಪಣಿ ಕಾರ್ಯಕ್ರಮದ ಉಡಾವಣೆಯ ಮುಖ್ಯಸ್ಥರನ್ನಾಗಿ ಮಾಡಲಾಯಿತಾದರೂ 1998ರಲ್ಲಿ ಶ್ರೀ ಅಟಲ್ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಗಳಾಗಿ ಅಧಿಕಾರಕ್ಕೆ ಬರುವವರೆಗೂ ದೇಶವನ್ನು ಆಳಿದ ಉಳಿದ ಪ್ರಧಾನ ಮಂತ್ರಿಗಳು ಪರಮಾಣು ಪರೀಕ್ಷೆಗಳನ್ನು ನಡೆಸುವ ಸಾಹಸಕ್ಕೆ ಕೈ ಹಾಕಿರಲಿಲ್ಲ.

p3ದೇಶ ಕಂಡ ಅತ್ಯಂತ ಪ್ರಬುದ್ಧ ಮತ್ತು ನಿಸ್ವಾರ್ಥ ರಾಜಕಾರಣಿಗಳು ಎನಿಸಿಕೊಂಡ ವಾಜಪೇಯಿಯವರು ಪ್ರಧಾನಿಗಳಾಗಿ, ಜಾರ್ಜ್ ಫರ್ನಾಂಡೀಸ್ ರಕ್ಷಣಾಮಂತ್ರಿಗಳಾಗಿದ್ದಂತಹ  ಸಂಧರ್ಭವನ್ನೇ ಬಳಸಿಕೊಂಡ ಡಾ. ಕಲಾಂ  ಅವರಿಬ್ಬರನ್ನೂ ಭೇಟಿ ಮಾಡಿ  ಪ್ರಸಕ್ತ ಸಮಯದಲ್ಲಿ ಅಣ್ವಸ್ತ್ರ ಪರೀಕ್ಷೆಯ ಅನಿವಾರ್ಯತೆಯನ್ನು ಹೇಳಿದಾಗ ಅದಕ್ಕೆ ಪೂರಕವಾಗಿ ಪ್ರತಿಕ್ರಯಿಸಿದ ಪ್ರಧಾನಿಗಳು ಕಲಾಂ ಅವರಿಗೆ ಸಂಪೂರ್ಣ ಸಹಕಾರವನ್ನು ನೀಡಿದ್ದಲ್ಲದೇ,  ಇಡೀ ಪ್ರಯೋಗವನ್ನು ಅತ್ಯಂತ ಗೌಪ್ಯತೆಯಿಂದ ನಡೆಸಬೇಕೆಂದು ತಿಳಿಸಿದರು. ಅದರಂತೆ ಈ ಪರೀಕ್ಷೆಯ  ಪೂರ್ವಾಭ್ಯಾಸವಾಗಿ  ಸುಮಾರು ಒಂದೂವರೆ ವರ್ಷಗಳ ಕಾಲ ಪ್ರತಿಯೊಂದು ನಡೆಯನ್ನು ಕರಾರುವಾಕ್ಕಾಗಿ ಯೋಜಿಸಲಾಗಿತ್ತು.

p1ಭಾರತದಲ್ಲಿ ನಡೆಯುವ ಪ್ರತಿಯೊಂದು ಕೆಲಸ ಕಾರ್ಯಗಗಳನ್ನೂ ಬಾಹ್ಯಾಕಾಶದ ಅತ್ಯಾಧುನಿಕ ಉಪಗ್ರಹಗಳ ಮೂಲಕ ವಿದೇಶಿ ರಕ್ಷಣ ತಂಡ ಮತ್ತು ವಿಜ್ಞಾನಿಗಳು  ನೋಡಬಹುದು ಎಂಬುದನ್ನು ಅರಿತು, ಅವರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಇಡೀ ಕಾರ್ಯಾಚರಣೆಯನ್ನು  ಪರೀಕ್ಷಾ ಸ್ಥಳಗಳಲ್ಲಿ ವಿಜ್ಞಾನಿಗಳು ರಾತ್ರಿಯ ಸಮಯದಲ್ಲಿ ಮಾತ್ರ ಕೆಲಸ ಮಾಡುತ್ತಿದ್ದು ಮುಂಜಾನೆ ಬೆಳಕು ಹರಿಯುತ್ತಿದ್ದಂತೆಯೇ  ಅವುಗಳ ಮೇಲೆ ಮರಳನ್ನು ಮುಚ್ಚಿ ಯಾವುದೇ ಚಟುವಟಿಕೆಗಳು ನಡದೇ ಇಲ್ಲವೇನೋ ಎಂಬಂತೆ ಇಡುತ್ತಿದ್ದದ್ದು ನಿಜಕ್ಕೂ  ಅದ್ಭುತ ಮತ್ತು ಅವರ್ಣನೀಯವೇ ಸರಿ. ಬಹಳಷ್ಟು ಕೆಲಸಗಳು ರಾತ್ರಿಯ ಕತ್ತಲೆಯಲ್ಲೇ ನಡೆಯುತ್ತಿದ್ದ ಕಾರಣ, ವಿದೇಶೀ  ಉಪಗ್ರಹಗಳೂ ಸಹಾ ಸ್ಪಷ್ಟವಾದ ಚಿತ್ರಗಳನ್ನು ಸೆರೆಹಿಡಿಯಲು ಸಾಧ್ಯವಾಗಿರಲಿಲ್ಲ

WhatsApp Image 2022-05-11 at 8.22.47 AMಅಣ್ವಸ್ತ್ರ ಪರೀಕ್ಷೆಗೆ ಸಕಲ ಸಿದ್ಧಿತೆಗಳು  ರಹಸ್ಯವಾಗಿ ಸಿದ್ಧವಾದ ನಂತರ ಮೇ 11, 1998 ರಂದು ಮಧ್ಯಾಹ್ನ 15:45 ಗಂಟೆಗಳಲ್ಲಿ, ಭಾರತವು ರಾಜಸ್ಥಾನದ ಪೋಖ್ರಾನ್‌ನಲ್ಲಿ ಐದು ಬಾಂಬ್‌ಗಳೊಂದಿಗೆ ಭೂಗತ ಪರಮಾಣು ಪರೀಕ್ಷೆಗಳ ಸರಣಿಯನ್ನು ರಹಸ್ಯವಾಗಿ ನಡೆಸುವುದರಲ್ಲಿ ಯಶಸ್ವಿಯಾಗಿ ಆ ದಿನವನ್ನು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ಅತ್ಯಂತ ಸ್ಮರಣೀಯ ದಿನವಾಗಿದೆ. ಪೋಖ್ರಾನ್-II (AKA ಆಪರೇಷನ್ ಶಕ್ತಿ-98) ಒಂದು ಸಮ್ಮಿಳನ ಬಾಂಬ್ ಮತ್ತು ನಾಲ್ಕು ವಿದಳನ ಬಾಂಬ್ಗಳನ್ನು ಒಳಗೊಂಡ  ಸರಣಿ ಪರೀಕ್ಷೆಗಳ ಎಲ್ಲಾ ಐದು ಸಿಡಿತಲೆಗಳೂ ಯಶಸ್ವಿಯಾಗಿ ಸ್ಫೋಟಿಸಿದ ಸ್ವಲ್ಪ ಸಮಯದ ನಂತರ, ಅಂದಿನ ಪ್ರಧಾನಿಗಳಾಗಿದ್ದ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತವನ್ನು ಪೂರ್ಣ ಪ್ರಮಾಣದ ಪರಮಾಣು ರಾಷ್ಟ್ರವೆಂದು ಇಡೀ ವಿಶ್ವಕ್ಕೇ ಘೋಷಿಸಿದ ಕೂಡಲೇ ಅನೇಕ ರಾಷ್ಟ್ರಗಳು  ಬೆಚ್ಚಿಬಿದ್ದವು. ಈ ಹೇಳಿಕೆಯು ಪರಿಣಾಮವಾಗಿ ಅಮೇರಿಕ ಮತ್ತು ಜಪಾನ್ ಭಾರತದ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಿದರೂ ಅದಾವುದಕ್ಕೂ ಪ್ರಧಾನಿಗಳು ಜಗ್ಗದೆ ಕುಗ್ಗದೇ  ದೇಶವನ್ನು ಮುನ್ನಡೆಸಿದ್ದಕ್ಕೆ ಬೆಚ್ಚಿದ ನಿಷೇಧವನ್ನು ಹೇರಿದ್ದ ರಾಷ್ಟ್ರಗಳು  ಸದ್ದಿಲ್ಲದೇ  ನಿರ್ಬಂಧವನ್ನು ಸಡಿಲ ಗೊಳಿಸಿದ್ದು  ಇತಿಹಾಸವಾಗಿ ಸಕಲ ಭಾರತೀಯರ ಮೆಚ್ಚಿಗೆ ಪಾತ್ರವಾಯಿತು.

WhatsApp Image 2022-05-11 at 8.24.51 AMಅಟಲ್ ಬಿಹಾರಿ ವಾಜಪೇಯಿ, ಜಾರ್ಜ್ ಫರ್ನಾಂಡಿಸ್, ಎಪಿಜೆ ಅಬ್ದುಲ್ ಕಲಾಂ, ಆರ್ ಚಿದಂಬರಂ, ಭೈರೋನ್ ಸಿಂಗ್ ಶೇಖಾವತ್ ಮತ್ತು ಪ್ರಮೋದ್ ಮಹಾಜನ್ ಮೇ 11 ಮತ್ತು 13, 1998 ರಂದು  ಯಶಸ್ವೀ ಪರಮಾಣು ಪರೀಕ್ಷೆಯ ನಂತರ ತೆಗೆಸಿಕೊಂಡ ಈ ಫೋಟೋ ಎಲ್ಲಾ ಮಾಧ್ಯಮಗಳಲ್ಲಿಯೂ ಪ್ರಕಟವಾಗುತ್ತಿದ್ದಂತೆಯೇ ಅಮೇರಿಕಾದ ಸೆನೆಟರ್ ರಿಚರ್ಡ್ ಶೆಲ್ಬಿ  ಭಾರತದ  ಈ ಪರೀಕ್ಷೆಯ ಬಗ್ಗೆ ತೀವ್ರವಾಗಿ ಖಂಡಿಸಿದ್ದಲ್ಲದೇ, ಇಂತಹ ಪರೀಕ್ಷೆಯನ್ನು ಗುರುತಿಸಲು ನಮ್ಮ CIA ವಿಫಲವಾಗಿದ್ದು ಇದು ನಮ್ಮ ಗುಪ್ತಚರ ಸಂಗ್ರಹಣಾ ಏಜೆನ್ಸಿಗಳ ದೊಡ್ಡ ವೈಫಲ್ಯ ಎಂದು ಹೇಳಿದ್ದದ್ದು ಭಾರತದ  ವಿಜ್ಞಾನಿಗಳು ಮತ್ತು ರಕ್ಷಣಾ ಸಿಬ್ಬಂಧಿಗಳ ಕುಶಲತೆ ಸಾಕ್ಷಿಯಾಗಿತ್ತು. ವಿದೇಶಗಳು ಭಾರತದ ಪರಮಾಣು ಕಾರ್ಯಕ್ರಮವನ್ನು ಬೆದರಿಕೆಯಾಗಿ ನೋಡುತ್ತಿದ್ದರೂ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಮುಖ್ಯಸ್ಥ ಎಪಿಜೆ ಅಬ್ದುಲ್ ಕಲಾಂ ಪತ್ರಿಕಾಗೋಷ್ಠಿಯಲ್ಲಿ,  ಈ ಪರಮಾಣು ಶಸ್ತ್ರಾಸ್ತ್ರಗಳು ಕೇವಲ ರಾಷ್ಟ್ರೀಯ ಭದ್ರತೆಗಾಗಿಯೇ ಹೊರತು ಮತ್ತಾವುದೇ ರಾಷ್ಟ್ರಗಳ ಮೇಲೆ ಧಾಳಿ ಮಾಡುವುದಕ್ಕಲ್ಲಾ ಎಂದು  ಸ್ಪಷ್ಟಪಡಿಸಿದ್ದರು.

WhatsApp Image 2022-05-11 at 8.24.37 AMಭಾರತದ ಇತಿಹಾಸ ಬಲ್ಲವರಿಗೆ ಅಬ್ದುಲ್ ಕಲಾಂ ಅವರ ಹೇಳಿಕೆ ಅತ್ಯಂತ ಸ್ಪಷ್ಟವಾಗಿತ್ತು. ಏಕೆಂದರೆ ಕಳೆದ  2,500 ವರ್ಷಗಳಲ್ಲಿ ಭಾರತವು ಒಮ್ಮೆಯೂ ಯಾವುದೇ ವಿದೇಶದ ಮೇಲೆ ಧಾಳಿ ಮಾಡಿಲ್ಲ ಬದಲಾಗಿ ಹಲವಾರು ವಿದೇಶಿ ಆಕ್ರಮಣಕಾರರು ನಮ್ಮ ದೇಶದ ಮೇಲೆ ಧಾಳಿ ಮಾಡಿದ್ದನ್ನು ಸಮರ್ಥವಾಗಿ  ಎದುರಿಸಿದೆ ಹಾಗಾಗಿ  ಪರಮ ಸಹಿಷ್ಣು ರಾಷ್ಟ್ರವಾದ ಭಾರತವು ಎಂತಹ ಸಂಧರ್ಭದಲ್ಲೂ ಪರಮಾಣು ಶಸ್ತ್ರಾಸ್ತ್ರಗಳನ್ನು ಮೊದಲಿಗೆ ಪ್ರಯೋಗಿಸುವುದೇ  ಸ್ನೇಹಕ್ಕೆ ಸಿದ್ಧ ಸಮರಕ್ಕೆ ಸಿದ್ದ ಎಂಬ ತತ್ವವನ್ನು ಪಾಲಿಸುವುದರಲ್ಲಿ ಅನುಮಾನವೇ ಇಲ್ಲ.

ಇದಕ್ಕೆ ಸಂಬಂಧಿಸಿದಂತೆ, ಅಂದಿನ ಪ್ರಧಾನಿ ವಾಜಪೇಯಿ ಅವರು ದೂರದರ್ಶನದಲ್ಲಿ ಭಾರತ ಸಾಧಿಸಿದ ಸಾಧನೆಯನ್ನು ಘೋಷಿಸುವವರೆಗೂ ಪರೀಕ್ಷೆಗಳು ನಡೆಯುತ್ತಿವೆ ಅಥವಾ ನಡೆದಿದೆ ಎಂಬುದು ಕೇಂದ್ರ ಸರ್ಕಾರದ ಪ್ರಮುಖ ಮಂತ್ರಿಗಳಾದ  ಲಾಲ್ ಕೃಷ್ಣ ಅಡ್ವಾಣಿ, ಜಾರ್ಜ್ ಫರ್ನಾಂಡಿಸ್, ಪ್ರಮೋದ್ ಮಹಾಜನ್, ಜಸ್ವಂತ್ ಸಿಂಗ್ ಮತ್ತು ಯಶವಂತ್ ಸಿನ್ಹಾರ ಹೊರತಾಗಿ ಉಳಿದವರಿಗೆ  ತಿಳಿದೇ ಇರಲಿಲ್ಲ ಎಂದರೆ ಅದ್ಯಾವ ಪ್ರಮಾಣದಲ್ಲಿ ಗೌಪ್ಯತೆಯನ್ನು ಕಾಪಾಡಿಕೊಂಡು ಈ ಪರೀಕ್ಷೆಯನ್ನು ಸಫಲ ಗೊಳಿಸಿತು ಎಂಬುದರ ಅರಿವಾಗುತ್ತದೆ.

p2ಇಂದು ಭಾರತವು ಅಣುಬಾಂಬ್‌ ಸ್ಫೋಟ, ಕ್ಷಿಪಣಿ ಉಡಾವಣೆ, ವಿಮಾನಗಳ ನಿರ್ಮಾಣ , ಕೃಷಿ, ನೀರಾವರಿ ಸೇರಿದಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಅಪರಿಮಿತ ಸಾಧನೆ ಮಾಡುವ ಮೂಲಕ ಜಗತ್ತಿನ ಸೂಪರ್‌ ಪವರ್‌ ರಾಷ್ಟ್ರವಾಗಿ ಹೊರಹೊಮ್ಮಿದ್ದು, ತಾಂತ್ರಿಕ ಕ್ಷೇತ್ರದಲ್ಲಿ ಎದುರಾಗುವ ಎಲ್ಲ ಅಡ್ಡಿಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಿರುವುದಕ್ಕೆ ಅಂದು ನಡೆಸಿದ ಪ್ರೋಖ್ರಾನ್ ಪರೀಕ್ಷೆಯೇ ಕಾರಣವಾಗಿದೆ ಎಂದರೂ ತಪ್ಪಾಗದು ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s