ದಿನವಿಡೀ ಕಛೇರಿಯಲ್ಲಿ ಕೆಲಸ ಮಾಡಿದ ನಂತರ ಸುಸ್ತಾಗಿ ಸಂಜೆ ಮನೆಗೆ ಹೋಗಬೇಕೆಂದು ಬಸ್ ನಿಲ್ದಾಣದಲ್ಲಿ ನಿಂತಿದ್ದೆ. ವಿಪರೀತ ಜನಸಂದಣಿಯಿಂದಾಗಿ ಒಂದೆರಡು ಬಸ್ಸುಗಳು ನಮ್ಮ ನಿಲ್ದಾಣದಲ್ಲಿ ನಿಲ್ಲಿಸದೇ ಹಾಗೇ ಹೊರಟು ಹೋದವು. ಆದಾದ ಕೆಲವು ಸಮಯದ ನಂತರ ಬಂದ ಮೂರನೇ ಬಸ್ಸಿನಲ್ಲಿಯೂ ಸಾಕಷ್ಟು ಜನರಿದ್ದರು. ಅದಾಗಲೇ ಸಾಕಷ್ಟು ಸಮಯವಾಗಿದ್ದರಿಂದ ಮಾತ್ತು ಬಸ್ಸಿಗೆ ಕಾದೂ ಕಾದೂ ಸುಸ್ತಾದ ಪರಿಣಾಮ ವಿಧಿ ಇಲ್ಲದೇ ಹಾಗೂ ಹೀಗೂ ಮಾಡಿಕೊಂಡು ಬಸ್ಸನ್ನೇರಿ ಒಂದು ಕಂಬಕ್ಕೆ ಒರಗಿ ನಿಂತು ಕೊಂಡೆ.
ಅಲ್ಲಿಂದ ಸ್ವಲ್ಪ ದೂರ ಪ್ರಯಾಣಿಸುತ್ತಲೇ ನಿಲ್ದಾಣವೊಂದರಲ್ಲಿ ಬಸ್ ನಿಂತಾಗ ಅದಾಗಲೇ ಸೀಟಿನಲ್ಲಿ ಆಸೀನರಾಗಿದ್ದ ಪ್ರಯಾಣಿಕರೊಬ್ಬರು ಬಸ್ಸಿನಿಂದ ಇಳಿದಾಗ ಆ ಖಾಲಿ ಸೀಟಿನ ಪಕ್ಕದಲ್ಲೇ ನಿಂತಿದ್ದ ವ್ಯಕ್ತಿಯೊಬ್ಬರು ಆ ಸೀಟಿನಲ್ಲಿ ಕುಳಿತುಕೊಳ್ಳದೇ ಅವರ ಪಕ್ಕದಲ್ಲೇ ಕಂಬಕ್ಕೆ ಒರಗಿ ನಿಂತಿದ್ದ ನನಗೆ ಕುಳಿತುಕೊಳ್ಳಲು ಹೇಳಿದಾಗ ನನಗೆ ಆಶ್ಚರ್ಯ ಮತ್ತು ಮುಜುಗರವಾಯಿತಾದರೂ, ಬಹುಶಃ ಅವರು ಮುಂದಿನ ನಿಲ್ಡಾಣದಲ್ಲಿ ಇಳಿಯ ಬಹುದಾದ ಕಾರಣ ನನಗೆ ಸೀಟ್ ನೀಡುತ್ತಿದ್ದಾರೆ ಎಂದು ಭಾವಿಸಿ ನಾನು ಆ ಸೀಟಿನಲ್ಲಿ ಕುಳಿತು, ಧನ್ಯತಾ ಭಾವದಿಂದ ಅವರಿಗೆ ಧನ್ಯವಾದಗಳನ್ನು ಹೇಳಿದೆ. ಅದಕ್ಕೆ ಅವರೂ ಸಹಾ ಸಣ್ಣದಾಗಿ ನಗುತ್ತಲೇ, ಪ್ರತಿವಂದಿಸಿ ಮುಂದಿನ ಸೀಟಿನೆಡೆಗೆ ನಿಂತು ಕೊಂಡರು. ನಾನೂ ಉಸ್ಸಪ್ಪಾ ಎಂದು ಉಸಿರು ಬಿಡುತ್ತಾ, ವಾವ್! ಇದೇ ಅಲ್ಲವೇ ನಮ್ಮ ಸಂಸ್ಕೃತಿ. ಈಗಿನ ಕಾಲದಲ್ಲೂ ಇಂತಹವರು ಇರೋದರಿಂದಲೇ ಈ ದೇಶದಲ್ಲಿ ಇನ್ನೂ ಚೆನ್ನಾಗಿ ಮಳೆ ಬೆಳೆ ಆಗ್ತಾ ಇರೋದು ಎಂದು ಮನಸ್ಸಿನಲ್ಲೇ ಯೋಚಿಸತೊಡಗಿದೆ.
ಮುಂದಿನ ನಿಲ್ದಾಣದಲ್ಲಿಯೂ ಸಹಾ ಅವರು ನಿಂತಿದ್ದ ಸೀಟಿನ ಪಕ್ಕದ ವ್ಯಕ್ತಿಯೊಬ್ಬರು ಬಸ್ಸಿನಿಂದ ಇಳಿದಾಗ, ಯಥಾ ಪ್ರಕಾರ ಆ ವ್ಯಕ್ತಿ ಆ ಖಾಲೀ ಸೀಟಿನಲ್ಲಿ ಕೂರದೇ ತಮ್ಮ ಸ್ಥಾನವನ್ನು ಇನ್ನೊಬ್ಬರಿಗೆ ನೀಡಿದರು. ಹೀಗೆ ಇಡೀ ಪ್ರಯಾಣದಲ್ಲಿ ಮೂರ್ನಾಲ್ಕು ಬಾರಿ ಇದೇ ರೀತಿ ಪುನರಾವರ್ತನೆ ಆದಾಗ ನನಗೆ ಬಹಳ ಕುತೂಹಲವೆನಿಸಿ ಆ ವ್ಯಕ್ತಿಯನ್ನು ಸೂಕ್ಶ್ಮವಾಗಿ ಗಮನಿಸಗೊಡಗಿದೆ.
ಆತ ಗರಿಗೆದರಿದ ಕೂದಲುಗಳು, ಮಾಸಿದ ಬಟ್ಟೆ ಧರಿಸಿಕೊಂಡು, ಸಾಧಾರಣವಾದ ಚಪ್ಪಲಿಯನ್ನು ಕಾಲಿಗೆ ಧರಿಸಿರುವ ಸಾಮಾನ್ಯ ಕೆಲಸಗಾರನಂತೆ ಕಾಣುತ್ತಿದ್ದು ಅವರೂ ಸಹಾ ನನ್ನಂತೆಯೇ ಯಾವುದೋ ಕಛೇರಿಯಲ್ಲಿ ಕಷ್ಟು ಪಟ್ಟು ದುಡಿದು ಬರುತ್ತಿರುವವ ಹಾಗೆ ಕಂಡರು. ಬಸ್ ಕೊನೆಯ ನಿಲ್ದಾಣದಲ್ಲಿ ನಿಂತಾಗಾ ನಾವೆಲ್ಲರೂ ಒಟ್ಟಿಗೇ ಇಳಿಯಲೇ ಬೇಕಾದಾಗ, ಕುತೂಹಲ ತಡೆಯಲಾರದೇ, ಆ ವ್ಯಕ್ತಿಯನ್ನು ಮಾತನಾಡಿಸಿಯೇ ಬಿಟ್ಟೆ.
ನೀವು ಪ್ರತೀ ಬಾರಿಯೂ ನಿಮಗೆ ಸಿಕ್ಕ ಖಾಲಿ ಸೀಟನ್ನು ಮತ್ತೊಬ್ಬರಿಗೆ ಕೊಡುತ್ತಾ ಇದ್ದದ್ದನ್ನು ನಾನು ಸೂಕ್ಷ್ಮವಾಗಿ ಗಮನಿಸಿದೆ. ಆ ರೀತಿಯಾಗಿ ಮಾಡಲು ಕಾರಣವೇನು? ಎಂದು ಕೇಳಿದಾಗ ಅವರ ಉತ್ತರ ನನಗೆ ಆಶ್ಚರ್ಯ ತಂದಿತಲ್ಲದೇ ಮೂಕವಿಸ್ಮಿತನನ್ನಾಗಿ ಮಾಡಿಸಿತು ಎಂದರೂ ಅಚ್ಚರಿಯೇನಲ್ಲ.
ನೋಡೀ ಸ್ವಾಮೀ, ನಾನು ಬಹಳಷ್ಟು ಬಡ ಕುಟುಂಬದಲ್ಲಿ ಜನಿಸಿದ ಕಾರಣ, ಚಿಕ್ಕವಯಸ್ಸಿನಲ್ಲಿ ಹೆಚ್ಚು ಓದಲು ಆಗಲಿಲ್ಲ. ಹಾಗಾಗಿ ನನಗೆ ನಿಮ್ಮಷ್ಟು ವಿದ್ಯಾ ಬುದ್ಧಿ ಇಲ್ಲದ ಕಾರಣ ಸಣ್ಣ ಕಾರ್ಖಾನೆಯೊಂದರೆಲ್ಲಿ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದೇನೆ. ಅದರಲ್ಲಿ ಬರುವ ಹಣದಲ್ಲಿ ಜೀವನ ನಡೆಸುವುದೇ ಕಷ್ಟವಾಗಿರುವಾಗ ನನಗೆ ಯಾರಿಗೂ ಹಣದ ರೂಪದಲ್ಲಿ ಏನನ್ನೂ ಕೊಡಲು ಸಾಧ್ಯವಿಲ್ಲವಲ್ಲಾ ಎಂದು ಬೇಸರವಾಗುತ್ತಿತ್ತು.
ಆದರೆ, ದಿನವಿಡೀ ದುಡಿದ ನಂತರವೂ ಇನ್ನೂ ಹೆಚ್ಚು ಕಾಲ ನಿಂತು ಕೊಳ್ಳುವ ಶಕ್ತಿಯನ್ನು ಭಗವಂತ ನೀಡಿದ್ದಾನೆ. ಅದೊಮ್ಮೆ ಇದೇ ರೀತಿಯಾಗಿ ಬಸ್ಸಿನಲ್ಲಿ ಸೀಟ್ ಸಿಗದೇ ನಿಂತಿದ್ದಾಗ ಖಾಲಿಯಾದ ಸೀಟನ್ನು ಪಕ್ಕದಲ್ಲಿ ಬಹಳ ಆಯಾಸವಾಗಿ ಕಾಣುತ್ತಿದ್ದಂತಹ ವ್ಯಕ್ತಿಯೊಬ್ಬರಿಗೆ ಬಿಟ್ಟು ಕೊಟ್ಟಾಗ ಅವರು ಧನ್ಯತಾ ಪೂರ್ವಕವಾಗಿ ನನಗೆ ಧನ್ಯವಾದಗಳನ್ನು ಹೇಳಿದಾಗ ಆ ಕ್ಷಣದಲ್ಲಿ ನಾನು ಅವರಿಗೆ ಏನನ್ನೋ ಕೊಟ್ಟೇ ಎನ್ನುವ ತೃಪ್ತಿ ನನ್ನ ಮನದಲ್ಲಿ ಮೊದಲ ಬಾರಿಗೆ ಮೂಡಿದ್ದಲ್ಲದೇ ಮುಖದಲ್ಲಿಯೂ ನನಗೇ ಅರಿವಿಲ್ಲದಂತೆಯೇ ಮಂದಹಾಸ ಮೂಡಿದ್ದಲ್ಲದೇ ನಾನು ಮತ್ತಷ್ಟು ದೂರ ನಿಲ್ಲಬಲ್ಲೆ ಎಂಬ ಆತ್ಮ ಸ್ಥೈರ್ಯವನ್ನು ತಂದು ಕೊಟ್ಟಿತು. ಒಂದೆರಡು ದಿನ ಇದೇ ರೀತಿಯಾಗಿ ಮಾಡಿದಾಗ ನನಗೆ ಮತ್ತಷ್ಟು ಮಗದಷ್ಟು ತೃಪ್ತಿ ಸಿಗಲು ಆರಂಭಿಸಿದಾಗ, ಇದನ್ನೇ ಪ್ರತಿ ದಿನವೂ ಮುಂದುವರೆಸಿಕೊಂಡು ಹೊಗಬೇಕೆಂದು ನಿರ್ಧರಿಸಿ ಸುಮಾರು ವರ್ಷಗಳಿಂದ ಪ್ರತಿ ದಿನವೂ ನಾನು ಈ ಕೆಲಸವನ್ನು ಮಾಡುವ ಮೂಲಕ ಸಾವಿರಾರು ಜನರ ಶುಭಹಾರೈಕೆಗಳನ್ನು ಗಳಿಸಿರುವ ಖುಷಿ ಇದೆ ಎಂದಾಗ ಅವರ ಮುಖದಲ್ಲಿ ಆದ ಬದಲಾವಣೆ ನಿಜಕ್ಕೂ ಅನನ್ಯ ಮತ್ತು ಅವರ್ಣನೀಯ.
ಕೈ ತುಂಬಾ ಹಣ, ಬ್ಯಾಂಕಿನ ಖಾತೆಯಲ್ಲಿ ಸಾಕಷ್ಟು ಉಳಿತಾಯ, ಸುಂದರವಾದ ಬಣ್ಣ ಬಣ್ಣ ಬಟ್ಟೆಗಳನ್ನು ಧರಿಸಿ, ದುಬಾರಿಯಾದ ಗ್ಯಾಜೆಟ್‌ಗಳನ್ನು ಧರಿಸಿಕೊಂಡು ಐಷಾರಾಮ್ಯವಾಗಿ ಇರುವವರೋ ಇಲ್ಲವೇ ಹತ್ತು ಹಲವಾರು ಪದವಿಗಳನ್ನು ಪಡೆಯುವ ಮೂಲಕ ಶ್ರೀಮಂತಿಕೆಯಿಂದ ಸಂತೋಷದಿಂದ ಇರಬಹುದು ಎಂದು ಭಾವಿಸುವವರೇ ಹೆಚ್ಚಾಗಿರುವಾಗ, ಪ್ರತಿ ದಿನವೂ ಯಾವುದೇ ಖರ್ಚಿಲ್ಲದೇ ಮತ್ತೊಬ್ಬರನ್ನು ಸಂತೋಷವಾಗಿರಲು ಹೃದಯವೈಶಾಲ್ಯತೆಯಿಂದ ಮಾಡುವ ಈ ಒಂದು ಸಣ್ಣ ಕ್ರಿಯೆಯೇ ನಿಜಕ್ಕೂ ಹೆಚ್ಚಾಗಿ ಶ್ರೀಮಂತಿಕೆಯಾಗಿ ಕಾಣಿಸುತ್ತದೆ ಎಂದೆನಿಸಿದ್ದು ಸುಳ್ಳಲ್ಲ.
ಈ ವ್ಯಕ್ತಿಯ ಈ ರೀತಿಯ ನಿಸ್ವಾರ್ಥ ಸೇವೆ, ತ್ರೇತಾಯುಗದಲ್ಲಿ ರಾಮನಿಗಾಗಿ ಕಾಯುತ್ತಿದ್ದ ಶಬರಿ ತನ್ನ ಎಂಜಿಲು ಹಣ್ಣುಗಳನ್ನು ಕೊಟ್ಟು ರಾಮನ ಹಸಿವನ್ನು ನಿವಾರಿದ್ದಳು.ಬಾಲ್ಯದ ಗೆಳೆಯ ಶ್ರೀಕೃಷ್ಣನ ಬಳಿ ಸಹಾಯ ಕೇಳಿರೆಂದು ಹೆಂಡತಿಯ ಬಲವಂತದಿಂದ ಶಲ್ಯದಲ್ಲಿ ಮೂರು ಹಿಡಿ ಅವಲಕ್ಕಿ ಕಟ್ಟಿಕೊಂಡು ಶ್ರೀಕೃಷ್ಣನ ಮನೆಗೆ ಬಂದು ಅವನ ಆದರಾತಿಥ್ಯಕ್ಕೆ ಮಾರುಹೋಗಿ ಏನನ್ನೂ ಕೇಳದೇ ಹಿಂದಿರುಗಿದ ಕುಚೇಲನನ್ನು ನೆನಪಿಸುವಂತಾಯಿತು.
ಯಾವುದೇ ಪ್ರಶಂಸೆ ಅಥವಾ ಕೃತಜ್ಞತೆಯ ರೂಪದಲ್ಲಿ ಪ್ರತಿ ನಿರೀಕ್ಷೆಯೊಂದಿಗೆ ಮಾಡುವ ಸಹಾಯ ಅಥವಾ ನೀಡುವ ಉಡುಗೊರೆ ಅದು ಸಹಾಯ ಅಥವಾ ಉಡುಗೊರೆ ಎನಿಸಿಕೊಳ್ಳದೇ ಕೊಡು/ತೆಗೆದುಕೋ ಎನ್ನುವ ಶುದ್ಧ ವ್ಯಾಪಾರವಾಗುತ್ತದೆ. ನಮಗೆ ಎಲ್ಲವನ್ನು ಭಗವಂತನೇ ಕೊಟ್ಟಿರುವುದು ಅವನ ಮುಂದೆ ನಮ್ಮದೇನೂ ಇಲ್ಲ. ಅಲ್ಲಿರುವುದು ನಮ್ಮನೆ ಇಲ್ಲಿ ಬಂದಿರುವೆವು ಸುಮ್ಮನೆ ಎಂಬ ಮಾತು ತಿಳಿದಿದ್ದರೂ, ಇಂದಿನವರು ದೇವಾಲಯದಲ್ಲಿ ಒಂದು ಗಂಟೆಯನ್ನೋ, ಇಲ್ಲವೇ ವಿದ್ಯುತ್ ದೀಪವನ್ನೂ ಇಲ್ಲವೇ ಫ್ಯಾನ್ ಕೊಟ್ಟು ಅದರ ಮೇಲೆ ಅಷ್ಟು ದೊಡ್ಡದಾಗಿ ದಾನಿಗಳು ಎಂದು ಬರೆಸಿಕೊಳ್ಳುತ್ತಾರೆ. ಮದುವೆ ಮುಂಜಿ, ನಾಮಕರಣ, ಹುಟ್ಟಿದ ಹಬ್ಬಗಳಿಗೆ ಹೋಗಿ ಸಣ್ಣದಾದ ಉಡುಗೊರೆಯೊಂದನ್ನು ನೀಡಿ ಹೊಟ್ಟೆ ಬಿರಿಯುವಷ್ಟು ತಿನ್ನುವುದಲ್ಲದೇ, ಕಾರ್ಯಕ್ರಮಕ್ಕೆ ಬಂದಿದ್ದಕ್ಕಾಗಿ ಪ್ರತಿ ಉಡುಗೊರೆಯನ್ನಾಗಿ (ರಿಟನ್ ಗಿಫ್ಟ್) ಏನು ಕೊಡುತ್ತಾರೆ ಎಂದು ನಿರೀಕ್ಷೆ ಇಟ್ಟು ಕೊಳ್ಳುವುದನ್ನು ನೋಡಿದಾಗ ಈ ಕೆಳಗಿನ ಶುಭಾಷಿತ ನೆನಪಾಗುತ್ತದೆ.
ಪರೋಪಕಾರಾಯ ಫಲಂತಿ ವೃಕ್ಷಾ:, ಪರೋಪಕಾರಾಯ ವಹಂತಿ ನದ್ಯಃ |
ಪರೋಪಕಾರಾಯ ದುಹಂತಿ ಗಾವ:, ಪರೋಪಕಾರಾರ್ಥಮಿದಂ ಶರೀರಂ ||
ಪರೋಪಕಾರಕ್ಕಾಗಿಯೇ ವೃಕ್ಷಗಳು ಫಲವನ್ನು ನೀಡುತ್ತದೆ. ನದಿಗಳು ಹರಿಯುತ್ತವೆ, ಹಸುವು ಹಾಲನ್ನು ಕೊಡುತ್ತದೆ. ಅದರಂತೆ ಪರೋಪಕಾರಕ್ಕಾಗಿಯೇ ನಮ್ಮೀ ಶರೀರವಿರುವುದು ಎನ್ನುವುದು ಈ ಶುಭಾಷಿತದ ಅರ್ಥ. ಇನ್ನೂ ಸರಳವಾಗಿ ಹೇಳಬೇಕೆಂದರೆ ನಾವು ಮತ್ತೊಬ್ಬರಿಗೆ ಬಲಗೈಯ್ಯಲ್ಲಿ ಕೊಟ್ಟಿದ್ದು ನಮ್ಮ ಎಡಗೈಗೂ ತಿಳಿಯಬಾರದು. ನಾವು ಮಾಡುವ ಪ್ರತಿಯೊಂದು ಕೆಲಸ-ಕಾರ್ಯ, ದಾನ-ಧರ್ಮದಲ್ಲಿ ಮತ್ತೊಬ್ಬರಿಂದ ಯಾವುದೇ ನಿರೀಕ್ಷೆ ಮಾಡದೇ ನಿಸ್ವಾರ್ಥವಾಗಿ ಈ ರೀತಿಯಾಗಿ ಅಗತ್ಯ ಇರುವವರಿಗೆ ಹೃದಯ ಶ್ರೀಮಂತಿಕೆಯಿಂದ ಸಹಾಯ ಮಾಡುವುದೇ ನಿಜವಾದ ಶ್ರೀಮಂತಿಕೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಈ ಲೇಖನ ವಾಟ್ಸಾಪ್ ನಲ್ಲಿ ಒದಿದ ಆಂಗ್ಲ ಸಂದೇಶವೊಂದರ ಭಾವಾನುಭವಾಗಿದೆ.
ಯೋಚಿಸಿ ಅರ್ಥ ಮಾಡಿಕೊಂಡು, ನಿಸ್ವಾರ್ಥ ಸೇವೆಗಳನ್ನು ಹೀಗೆಯು ಮಾಡಬಹುದು ಅನ್ನುವುದನ್ನು ಮಕ್ಕಳೂ ಹಾಗೂ ನಾವೆಲ್ಲರೂ ಕಲಿಯಬಹುದಾದ ಕಲಿಕೆ ಇದು..ಧನ್ಯವಾದಗಳು…
LikeLiked by 1 person