ಚಾಪೇಕರ್ ಸಹೋದರರು

chepakar1ಇವತ್ತಿನ ಬಹುತೇಕ ರಾಜಕೀಯ ಪಕ್ಷದ ನಾಯಕರುಗಳು ನಮ್ಮವರು ಈ ದೇಶಕ್ಕಾಗಿ ಇಷ್ಟು ತ್ಯಾಗ ಮಾಡಿದ್ದಾರೆ ಅಷ್ಟು ತ್ಯಾಗ ಮಾಡಿದ್ದಾರೆ ಎಂದು ಪುಂಖಾನು ಪುಂಖವಾಗಿ ಹೇಳುತ್ತಲೇ ಜನರನ್ನು ಮರಳು ಮಾಡುತ್ತಿರುವ ಸಂಧರ್ಭದಲ್ಲಿ ಒಂದೇ ಕುಟುಂಬದ, ಅದರಲ್ಲೂ ಒಂದೇ ತಾಯಿಯ ಮಡಿಲಲ್ಲಿ ಜನಿಸಿದ ಮೂವರು ಅಣ್ಣ ತಮ್ಮಂದಿರಾದ ಚಾಪೇಕರ್ ಸಹೋದರರನ್ನು ಬ್ರಿಟೀಷ್ ಅಧಿಕಾರಿಗಳು ಮತ್ತು ಮಿತ್ರದ್ರೋಹ ಎಸಗಿದ ಸಾಕ್ಷಿಯಾಗಿದ್ದ ಭಾರತೀಯನನ್ನು ಕೊಂಡಿದ್ದಕ್ಕಾಗಿ ಗಲ್ಲು ಶಿಕ್ಷೆಯನ್ನು ವಿಧಿಸಿದಾಗ ಅವರೆಲ್ಲರೂ ಸಂತೋಷದಿಂದ ಭಾರತಮಾತೆಗೆ ತಮ್ಮ ಪ್ರಾಣವನ್ನು ಅರ್ಪಿಸಿದ್ದನ್ನು ನೆನಪಿಸಿಕೊಂಡು ಆ ಸಹೋದರಿಗೆ ಎರಡು ಹನಿ ಅಶ್ರುತರ್ಪಣವನ್ನೂ ಸಲ್ಲಿಸದಲಾಗದಷ್ಟು ಸಮಯವಿಲ್ಲದಷ್ಟು ಕಾರ್ಯ ನಿರತರಾಗಿ ಹೋಗಿದ್ದೇವೆ ಎನ್ನುವುದು ನಿಜಕ್ಕೂ ಆ ದೇಶಭಕ್ತರಿಗೆ ಮಾಡುವ ಅವಮಾನ ಎಂದರೂ ತಪ್ಪಾಗದು.

ಚಾಪೇಕರ್ ಸಹೋದರರ ಪೋಷಕರಾದ ಶ್ರೀ ಹರಿಭಾವು, ಮತ್ತು ಶ್ರೀಮತಿ ಲಕ್ಷ್ಮೀ ಬಾಯಿ ಯವರ ಮನೆತನದ ಮೂಲಸ್ಥಾನ ಪೂನಾ ಬಳಿಯ ಚಿಂಚವಡವಾಗಿತ್ತು. ಮೂಲತಃ ಸಿರಿವಂತರಾಗಿದ್ದು ಕಾಲಾನುಕ್ರಮದಲ್ಲಿ ಅವೆಲ್ಲವನ್ನು ಕಳೆದುಕೊಂಡು ಶ್ರೀ ಹರಿಬಾವು ಅವರು ಅಂದಿನ ಬ್ರಿಟೀಷ್ ಸರ್ಕಾರದಲ್ಲಿ ನೌಕರರಾಗಿ ಕೆಲಕಾಲ ಸೇವೆ ಸಲ್ಲಿಸಿ ಗುಲಾಮಗಿರಿಗಿಂತ ಸ್ವತಂತ್ರ ವೃತ್ತಿಯೇ ಮೇಲೆಂದು ಅವರು ತಮ್ಮ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಹರಿ ಕೀರ್ತನಾಕಾರರಾಗಿ ಭಗವಂತನ ಸ್ಮರಣೆ ಮಾಡುತ್ತಾ ಊರೂರು ಸಂಚರಿಸುತ್ತಿರುತ್ತಾರೆ. ಈ ದಂಪತಿಗಳಿಗೆ 25 ಜೂನ್ 1869ರಲ್ಲಿ ದಾಮೋದರ್ ಹರಿ ಚಾಪೇಕರ್ ಜನಿಸಿದರೆ, 1873ರಲ್ಲಿ ಬಾಲಕೃಷ್ಣ ಹರಿ ಚಾಪೇಕರ್ ಮತ್ತು 1880ರಲ್ಲಿ ಕೊನೆಯವರಾಗಿ ವಾಸುದೇವ ಹರಿ ಚಾಪೇಕರ್ ಎಂಬ ಮೂರು ಪುತ್ರರತ್ನರು ಜನಿಸುತ್ತಾರೆ. ವಂಶಪಾರಂಪರ್ಯವಾಗಿ ತಂದೆಯಿಂದಲೇ ಸ್ವಾತಂತ್ರ್ಯದಾಹ, ಸ್ವಾಭಿಮಾನದ ಕೆಚ್ಚು ಈ ಮೂವರೂ ಸಹೋದರರಲ್ಲೂ ರಕ್ತಗತವಾಗಿರುತ್ತದೆ.

ತಂದೆಯ ಜೊತೆಗೇ ಊರೂರು ಸಂಚರಿಸುತ್ತಾ ತಂದೆಯವರು ಹೇಳುತ್ತಿದ್ದ ಹಾಡು ಮತ್ತು ಕಥೆಗಳನ್ನು ಕೇಳುತ್ತಲೇ ಚಿಕ್ಕವಯಸ್ಸಿನಲ್ಲಿಯೇ ದಾಮೋದರ್ ಚಾಪೇಕರ್ ಅನೌಪಚಾರಿಕವಾಗಿಯೇ ಅಪಾರವಾದ ಜ್ಞಾನವನ್ನು ಪಡೆದಿದ್ದಲ್ಲದೇ ಆ ಜ್ಞಾನವನ್ನು ತನ್ನ ಸಹೋದರರಿಗೂ ಹಂಚಿದ್ದಲ್ಲದೇ ಸಮಾಜದಲ್ಲಿರುವ ತಮ್ಮ ಯವಸ್ಸಿನ ಇತರೇ ತಾರುಣ್ಯದ ಯುವಕರಿಗಳಿಗೂ ಕಲಿಸಿಕೊಡುವ ಸಲುವಾಗಿ ಚಾಪೇಕರ್ ಕ್ಲಬ್ ಒಂದನ್ನು ಸ್ಥಾಪಿಸಿ ಅಲ್ಲಿ ಆಟದ ಜೊತೆ ಜೊತೆಗೆ ಅನೇಕ ದೇಶಭಕ್ತ ವೀರರ ಹೋರಾಟದ ಕಥೆಗಳನ್ನು ಆ ತರುಣರಿಗೆ ಹೇಳುತ್ತಾ, ಅವರಲ್ಲಿ ಸ್ವಾತಂತ್ರ್ಯದ ಸ್ಫೂರ್ತಿಯನ್ನು ತುಂಬಿಸುವ ಮಹತ್ಕಾರ್ಯದಲ್ಲಿ ತೊಡಗಿರುತ್ತಾರೆ. ಅದಷ್ಟೇ ಅಲ್ಲದೇ, ಪುಣೆಯಲ್ಲಿದ ವಿವಿಧ ಶಾಲೆಗಳಿಗೆ ಭೇಟಿಕೊಟ್ಟು ಅಲ್ಲಿನ ಕ್ಞಾತ್ರಪವೃತ್ತಿಯ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ತಮ್ಮ ಕ್ಲಬ್ಗೆ ಸೇರಿಸಿ ಕೊಂಡು ಅವರೆಲ್ಲರಿಗೂ ದೇಶದ ಸ್ವಾತ್ರಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನಾದರೂ ಕೊಡುತ್ತೇವೆ ಎನ್ನುವಷ್ಟರ ಮಟ್ಟಿಗಿನ ಕೆಚ್ಚನ್ನು ಹಚ್ಚಿಸಿರುತ್ತಾರೆ.

chap

ಈ ಸಹೋದರರು ತಮ್ಮ ಊರು ಮತ್ತು ಅಕ್ಕ ಪಕ್ಕದ ಊರಿನಲ್ಲಿ ನಡೆಯುತ್ತಿದ್ದ ಶಿವಾಜಿ, ಗಣೇಶ ಉತ್ಸವಗಳಲ್ಲಿ ಪಾಲ್ಗೊಳ್ಳಲು ಸಾವಿರಾರು ಜನರು ಸೇರುತ್ತಿದ್ದೆಡೆ ಹೋಗಿ ಅಲ್ಲಿ ಭಾರತದ ಹಿರಿಮೆಯನ್ನು ಸಾರುವ, ಬ್ರಿಟಿಷರು ಹೇಗೆ ಕುಟಿಲತೆಯಿಂದ ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಂಡು ಭಾರತೀಯರನ್ನು ಹೇಗೆ ಗುಲಾಮರನ್ನಾಗಿ ಮಾಡಿಕೊಂಡಿದ್ದಾರೆ ಎಂಬುದರ ಕುರಿತಾಗಿ ಹಾಡಿನ ರೂಪದಲ್ಲಿ ಹೇಳುತ್ತಾ ಅಲ್ಲಿದ್ದ ಜನರಲ್ಲಿ ಸ್ವಾತ್ರಂತ್ರ್ಯ ಹೋರಾಟದ ಕಿಡಿಯನ್ನು ಹಚ್ಚುವುದರಲ್ಲಿ ಅಲ್ಪ ಸ್ವಲ್ಪ ಸಫಲರೂ ಆಗಿರುತ್ತಾರೆ. ತಮ್ಮೂರು ಪೂನಾದಲ್ಲಿ ನಡೆಯುತ್ತಿದ್ದ ರಾಷ್ಟ್ರೀಯವಾದಿ ಹೋರಾಟಗಳಲ್ಲಿ ಅಗ್ರಗಣ್ಯರಾಗಿದ್ದ ಈ ಸಹೋದರರಿಗೆ ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ಶ್ರೀ ವಾಸುದೇವ ಬಲವಂತ ಫಡ್ಕೆಯವರ ಬಲಿದಾನ ಪ್ರೇರಣೆದಾಯಕವಾಗಿರುತ್ತದೆ. ಈ ಮಧ್ಯೆ ಬಾಲ ಗಂಗಾಧರ ತಿಲಕರ ಪ್ರೆರಣಾದಾಯಿ ಭಾಷಣಗಳೂ ಸಹಾ ಅವರ ಕ್ರಾಂತಿಯ ಚಿಂತನೆಗೆ ಚೈತನ್ಯವಾಗಿದ್ದಲ್ಲದೇ, ಹೇಗಾದರೂ ಮಾಡಿ ಬ್ರಿಟಿಷರನ್ನು ಭಾರತದಿಂದ ಓಡಿಸಲೇ ಬೇಕೆಂಬ ಹಂಬಲ ಅವರದ್ದಾಗಿರುತ್ತದೆ.

ಭಾರತೀಯರನ್ನು ಬ್ರಿಟೀಷರು ಕೇವಲ ದಾಸ್ಯದಲ್ಲಿ ಮತ್ರ ಇಟ್ಟು ಕೊಳ್ಳದೇ, ನಮ್ಮ ದೇಶದ ಸಂಸ್ಕಾರ, ಸಂಪ್ರದಾಯ ಮತ್ತು ಸಂಸ್ಕೃತಿಗೆ ಮಾರಕವಾಗಿದ್ದಾರೆ ಎಂಬುದನ್ನು ಮನಗಂಡಿದ್ದಲ್ಲದೇ, ಇಂಗ್ಲಿಷ್ ಶಿಕ್ಷಣದ ಮೂಲಕ ಭಾರತೀಯರನ್ನು ತಮ್ಮ ಪರಂಪರಾಗತ ಧಾರ್ಮಿಕ ನಂಬಿಕೆಯಿಂದ ದೂರಗೊಳಿಸುತ್ತಾ ಸತ್ವಹೀನರನ್ನಾಗಿಸುತ್ತಿದ್ದಾರೆ. ಅದಲ್ಲದೇ ತಮ್ಮ ಸರ್ಕಾರೀ ಪ್ರಾಯೋಜಿತ ಮಿಶನರಿಗಳ ಮೂಲಕ ಮತಾಂತರ ಮಾಡುತ್ತಿದ್ದನ್ನು ತೀವ್ರವಾಗಿ ಖಂಡಿಸುತ್ತಲೇ ಇರುತ್ತಾರೆ. ಅದಕ್ಕಾಗಿ ಆ ಸಹೋದರರು, ಊರೂರು ಅಲೆಯುತ್ತಾ ನಡೆಸಿಕೊಂಡು ಹೋಗುತ್ತಿದ್ದ ಹರಿಕೀರ್ತನೆ ನಿಲ್ಲಿಸಿ ಭಾರತ ಮಾತೆಯ ಯಶೋಗಾನವನ್ನು ಹಾಡುತ್ತಾ ಜನರಲ್ಲಿ ದೇಶಭಕ್ತಿ ತುಂಬುವ ಕೆಲಸವನ್ನು ತೀವ್ರಗೊಳಿಸಿದ್ದಲ್ಲದೇ, ಬಿಸಿ ರಕ್ತದ ತರುಣನ್ನು ಸಂಘಟಿಸಿ ಊರ ಹೊರಗಿನ ದೇವಸ್ಥಾನಗಳಲ್ಲಿ ಕುಸ್ತಿ ತರಬೇತಿ, ಲಾಠಿ ಬೀಸುವುದು ಮತ್ತು ಪಿಸ್ತೂಲು ಉಪಯೋಗಿಸುವುದನ್ನು ಕಲಿಸಲು ಆರಂಭಿಸುತ್ತಾರೆ.

1896ರಷ್ಟರಲ್ಲಿ ಮುಂಬೈ ನಗರಕ್ಕೆ ಪ್ಲೇಗ್ ಎಂಬ ಮಹಾಮಾರಿ ಕಾಲಿಟ್ಟಿದ್ದಲ್ಲದೇ ನೋಡ ನೋಡುತ್ತಲೇ ನೂರಾರು ಜನರು ದೀಪದ ಹುಳದಂತೆ ಸಾಯುತ್ತಿರುವ ರೀತಿಯನ್ನು ನೋಡಿ ಇಡೀ ನಗರವೆಲ್ಲ ನಡುಗಿ, ಅದರ ಭೀತಿಯಿಂದ ಜನರು ದಿಕ್ಕಾಪಾಲಾಗಿ ವಲಸೆ ಹೊರಡಲು ಆರಂಭಿಸುತ್ತಾರೆ. ಹೀಗೆ ವಲಸ ಬಂದವರಿಂದಲೇ ಆ ಮಹಾಮಾರಿ ಪೂನಾ ನಗರಕ್ಕೂ ತೀವ್ರವಾಗಿ ಹರಡಿದಾಗ, ಆ ರೋಗವನ್ನು ತೊಡೆದುಹಾಕಲು ಬ್ರಿಟಿಷ್ ಸರ್ಕಾರ ರ್ಯಾಂಡ್ ಎಂಬ ಅಧಿಕಾರಿಯನ್ನು ನೇಮಿಸುತ್ತಾರೆ. ಸ್ವಭಾವತಃ ಭಾರತೀಯರನ್ನು ಕಂಡರೆ ಆಗದ ಆತ ದುಷ್ಟ ಮತ್ತು ಕ್ರೂರ ಮನಸ್ಸಿನ ಅಧಿಕಾರಿಯಾಗಿರುತ್ತಾನೆ. ಹಾಗಾಗಿ ಪ್ಲೇಗ್ ಹೊಡೆದೋಡಿಸಲು ಆತ ಕೇವಲ ಕಾಟಾಚಾರದ ಕ್ರಮಗಳನ್ನು ಕೈಗೊಂಡಿದ್ದಲ್ಲದೇ, ಭಾರತೀಯರನ್ನು ಹಿಂಸಿಸಲು ಮತ್ತು ಸೆದೆಬಡೆಯಲು ಇದೇ ಸುಸಂದರ್ಭ ಎಂದು ತಿಳಿದ ದರ್ಪಕ್ಕೆ, ದಬ್ಬಾಳಿಕೆಗೆ, ಕ್ರೌರ್ಯಕ್ಕೆ ಪ್ರಸಿದ್ಧನಾಗಿದ್ದ ಆ ರ್ಯಾಂಡ್ ಪ್ಲೇಗ್ ಬಂದ ಸಂಶಯದ ಮೇಲೆ ದೊಡ್ಡ ದೊಡ್ಡ ಶ್ರೀಮಂತರ ಮನೆಗಳಲ್ಲಿ ಪ್ಲೇಗ್ ರೋಗ ಬಂದಿರದಿದ್ದರೂ, ಇಲಿಗಳು ಸತ್ತು ಬೀಳುತ್ತಿವೆ ಎಂದು ಸುಳ್ಳು ಹೇಳಿ ಆ ಮನೆಗಳಿಗೆ ನುಗ್ಗುವುದು. ಮನೆಗಳನ್ನು ಒಡೆದು ಅಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಕೊಳ್ಳೆ ಹೊಡೆಯುವುದು. ಆ ಮನೆಗಳಲ್ಲಿರುವ ದೇವರ ಮನೆಗೆ ಬೂಟುಕಾಲಿನಲ್ಲಿ ನುಗ್ಗಿ ಅಲ್ಲಿದ್ದ ವಿಗ್ರಹಗಳನ್ನು ಒದೆಯುವುದು. ಆ ಮನೆಯ ಹೆಂಗಸರಿರುವ ಕೋಣೆಗಳಿಗೂ ವಿನಾಕಾರಣ ಹೋಗಿ ಶೋಧಿಸುವ ನೆಪದಲ್ಲಿ ಹೆಂಗಸರನ್ನು ಗೋಳು ಹುಯ್ದುಕೊಳ್ಳುವುದು ಕೆಲವು ಬಾರಿ ಅವರ ಮೇಲೆ ಅತ್ಯಾಚಾರ ಮಾಡಿರುವುದು ಉಂಟು. ಪ್ಲೇಗಿನಿಂದ ಸತ್ತಿರುವ ಮತ್ತು ಸಾಯುತ್ತಿರುವವರನ್ನು ಸಾಗಿಸುವ ನೆಪದಲ್ಲಿ ಪ್ರತ್ಯೇಕವಾಗಿ ಇಟ್ಟು ಉಪಚಾರ ಮಾಡುವ ಆಸ್ಪತ್ರೆ ಶಿಬಿರಗಳಿಗೆ ಬದುಕಿರುವವರನ್ನು ಬಲವಂತವಾಗಿ ಎಳೆದುಹಾಕುತ್ತಿದ್ದಲ್ಲದೇ, ರೋಗ ಪೀಡಿತ ಜನರನ್ನು ಸಾರ್ವಜನಿಕವಾಗಿ ಬೆಂಕಿಯಿಂದ ಸುಟ್ಟು ಹಾಕುವ ಮೂಲಕ ತನ್ನ ವಿಕೃತಿ ಮೆರೆದಿರುತ್ತಾನೆ. ಇದಷ್ಟೇ ಅಲ್ಲದೇ, ಆತ ಹಿಂದೂ ದೇಗುಲಗಳ ಒಳಗೆ ನುಗ್ಗಿ ಅಲ್ಲಿದ್ದ ವಿಗ್ರಹಗಳನ್ನು ಭಗ್ನಗೊಳಿಸಿ ದೇವಾಲಯದ ಪಾವಿತ್ರ್ಯತೆಯನ್ನು ಹಾಳುಮಾಡುವುದಲ್ಲದೇ ಅಲ್ಲಿದ್ದ ಧಾರ್ಮಿಕ ಗ್ರಂಥಗಳನ್ನು ಹರಿದು ಹಾಕುವುದೋ ಇಲ್ಲವೇ ಸುಟ್ಟು ಹಾಕುತ್ತಾ ನಿರಂತರವಾಗಿ ಭಾರತೀಯರನ್ನು ಹಿಂಸಿಸುತ್ತಾ ಹಿಂದೂ ವಿರೋಧಿಯಾಗಿರುತ್ತಾನೆ. ಈ ವಿಷಯವನ್ನು ತಿಳಿದ ಚಾಪೇಕರ್ ಸಹೋದರರ ಮನದಾಳದಲ್ಲಿ ಸ್ತುಪ್ತಾವಸ್ಥೆಯಲ್ಲಿದ್ದ ಕ್ರಾಂತಿಕಾರಿ ಭಾವನೆ ತೀವ್ರವಾಗಿ ಜಾಗೃತವಾಗಿ ಇವೆಲ್ಲದರ ಪ್ರತೀಕವಾಗಿ ದುಷ್ಟ ಬ್ರಿಟೀಷ್ ಅಧಿಕಾರಿ ರ್ಯಾಂಡ್ ನ ಹತ್ಯೆಮಾಡಿ ಜನರಿಗೆ ನೆಮ್ಮದಿ ತರಬೇಕೆಂದು ನಿಶ್ಚಯಿಸಿ ಅವರನ ಹತ್ಯೆಗೆ ಸಂಚು ರೂಪಿಸಿದ್ದಲ್ಲದೇ ಆ ಕಾರ್ಯವನ್ನು ಸ್ವತಃ ಚಾಪೇಕರ್ ಸಹೋದರರೇ ವಹಿಸಿಕೊಳ್ಳುತ್ತಾರೆ.

ರ್ಯಾಂಡ್ ನನ್ನು ಹತ್ಯೆ ಮಾಡುವ ಸಲುವಾಗಿ ಆತನಿಲ್ಲದ ಸಮಯವನ್ನು ನೋಡಿಕೊಂಡು ಪೂನಾದಲ್ಲಿ ಆತ ವಾಸಿಸುತ್ತಿದ್ದ ಹೊಟೇಲಿನ ಸುತ್ತಮುತ್ತಲೂ ಮಾರುವೇಷದಲ್ಲಿ ಹೋಗಿ ಅವನು ವಾಸಿಸುತ್ತಿದ್ದ ಕೊಠಡಿಯನ್ನೆಲ್ಲಾ ಗಮನಿಸಿಕೊಂಡು ಬಂದಿರುತ್ತಾರೆ. ಅದರ ಜೊತೆಗೆ ಅವನ ಕುದುರೆ ಸಾರೋಟಿನ ಬಣ್ಣ, ಅವರ ಚಲನವಲನ, ಅವನು ಪ್ರತೀ ದಿನ ಬಂದು ಹೋಗುತ್ತಿದ್ದ ಸಮಯ ಎಲ್ಲವನ್ನೂ ಚೆನ್ನಾಗಿ ಗಮನಿಸಿರುತ್ತಾರೆ.

dam1897 ರ ಜೂನ್ 22ರಂದು ಬ್ರಿಟಿಷ್ ಸಮ್ರಾಜ್ಯದ ಮಹಾರಾಣಿ ವಿಕ್ಟೋರಿಯ ಪಟ್ಟಕ್ಕೇರಿದ ವಜ್ರ ಮಹೋತ್ಸವದ ದಿನದ ಅಂಗವಾಗಿ ಪೂನಾದಲ್ಲೊಂದು ಸಮಾರಂಭವನ್ನು ಹಮ್ಮಿಕೊಳ್ಳುವ ವಿಷಯ ಚಾಪೇಕರ್ ಸಹೋದರರ ಗಮನಕ್ಕೆ ಬಂದು ಇದೇ ಸಂದರ್ಭದಲ್ಲಿಯೇ ದುಷ್ಟ ರ್ಯಾಂಡ್ನನ್ನು ಹತ್ಯೆ ಮಾಡಲು ಚಾಪೇಕರರು ನಿರ್ಧರಿಸುತ್ತಾರೆ. ಆಂದಿನ ಸಮಾರಂಭ ಮಧ್ಯರಾತ್ರಿಗೂ ಸಂಭ್ರಮದಿಂದ ನಡೆದು ಸಮಾರಂಭ ಮುಗಿದ ನಂತರ ಎಲ್ಲರೂ ಹೊರಡಲು ಸಿದ್ಧವಾಗಿ ತಮ್ಮ ಸಾರೋಟನ್ನು ಹತ್ತಲು ಸಿದ್ಧರಾಗುತ್ತಾರೆ. ಅದೇ ಕಾರ್ಯಕ್ರಮದಲ್ಲಿ ತನ್ನ ಪತ್ನಿಯೊಂದಿಗೆ ಭಾಗಿಯಾಗಿದ್ದ ಆಯಸ್ಟ್ ಎಂಬ ತರುಣ ಅಧಿಕಾರಿ ತನ್ನ ಮನೆಗೆ ಹೊರಡಲು ಕುದುರೆ ಗಾಡಿಯನ್ನೇರಿ ಕುಳಿತರೆ ಅವನ ಜೊತೆ ಇನ್ನೂ ಕೆಲವು ಬ್ರಿಟೀಷ್ ಅಧಿಕಾರಿಗಳು ಸಹಾ ಅವರವರ ಗಾಡಿಗಳಲ್ಲಿ ಕುಳಿತು ತಮ್ಮ ಮನೆಯ ಕಡೆ ಹೊರಡುತ್ತಾರೆ. ದುರಾದೃಷ್ಟವಶಾತ್ ಆಯಸ್ಟ್ ಕುಳಿತಿದ್ದ ಕುದುರೆ ಗಾಡಿಯು ನೋಡುವುದಕ್ಕೆ ರ್ಯಾಂಡ್ನ ಕುದುರೇ ಗಾಡಿಯಂತೆಯೇ ಇದ್ದ ಕಾರಣ ಆ ಗಾಡಿಯಲ್ಲಿ ಬರುತ್ತಿದ್ದವನು ರ್ಯಾಂಡ್ ಎಂದೇ ಭಾವಿಸಿ ಕತ್ತಲೆಯಲ್ಲಿ ಬಾಲಕೃಷ್ಣ ಚಾಪೇಕರ್ ಆ ಗಾಡಿಯನ್ನು ಅಡ್ಡಗಟ್ಟಿ ಆ ಗಾಡಿಯನ್ನು ಏರಿ ಆಯಸ್ಟ್ ತಲೆಗೆ ಸರಿಯಾಗಿ ಗುಂಡುಹಾರಿಸಿದ ನಂತರ ಆತ ರ್ಯಾಂಡ್ ಅಲ್ಲಾ ಎಂಬುದನ್ನು ತಿಳಿದು ಕೂಡಲೇ ಗೋಂದ್ಯಾ ಅಲಾರೇ ಎಂಬ ಸಂಕೇತ ವಾಕ್ಯವನ್ನು ಕೂಗಿ ಹೇಳಿದ ಕೂಡಲೇ ಅದನ್ನು ಅರಿತ ಅಣ್ಣನಾದ ದಾಮೋದರ ಕೂಡಲೇ ಮುನ್ನುಗಿ ರ್ಯಾಂಡ್ನ ಗಾಡಿಯನ್ನು ಹಿಂಬದಿಯಿಂದ ಏರಿ ಆತನ ಬೆನ್ನಿಗೆ ಗುಂಡು ಹಾರಿಸಿ ಗಾಡಿಯಿಂದ ಕೆಳಗೆ ಧುಮುಕಿ ಕತ್ತಲಲ್ಲಿ ಮಾಯಾವಾಗುತ್ತಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ರ್ಯಾಂಡ್ ಮತ್ತು ಆಯಸ್ಟ್ ಬಿದ್ದಿದ್ದರೆ, ಈ ದುರ್ಘಟನೆಯ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಆತನ ಹೆಂಡತಿ ಪ್ರಜ್ಞೆ ತಪ್ಪಿ ಬಿದ್ದಿರುತ್ತಾಳೆ. ಕೂಡಲೇ ಆ ಮೂವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸುತ್ತಾರೆ. ನೇರವಾಗಿ ತಲೆಗೇ ಗುಂಡು ತಗುಲಿದ್ದ ಕಾರಣ ಆಯಸ್ಟ್ ಕೆಲವೇ ಗಂಟೆಗಳಲ್ಲೆ ಮೃತಪಟ್ಟರೇ, ಹಿಂದೂಗಳನ್ನು ಹಿಂಸಿಸಿದ್ದ ದುಷ್ಟ ರ್ಯಾಂಡ್ 10 ದಿನಗಳ ಕಾಲ ನರಳೀ ನರಳೀ ನರಕಯಾತನೆಯನ್ನು ಅನುಭವಿಸಿ ಅಸುನೀಗುತ್ತಾನೆ. ಬ್ರಿಟೀಷ್ ಅಧಿಕಾರಿಗಳಾದ ಆಯಸ್ಟ್ ಮತ್ತು ರ್ಯಾಂಡ್ ಹತ್ಯೆಯ ಸುದ್ದಿ ದೇಶಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿದ್ದಲ್ಲದೇ ಅವರಿಬ್ಬರ ಹಂತಕರನ್ನು ಪತ್ತೆ ಹಚ್ಚಲು ಪೋಲೀಸರು ತಿಂಗಳಾನು ಗಟ್ಟಲೇ ಹರಸಾಹಸ ಪಟ್ಟರೂ ಯಾವುದೇ ಕುರುಹು ಸಿಗದೇ ಹತಾಶೆ ಪಡುತ್ತಿರುತ್ತಾರೆ.

balaಹೊರಗಿನ ಶತ್ರುಗಳನ್ನು ಗುರುತಿಸಿ ಅವರೊಂದಿಗೆ ಹೋರಾಟ ಮಾಡುವುದು ಸುಲಭ ಆದರೆ ನಮ್ಮೊಂದಿಗೆ ಮಿತ್ರರಾಗಿದ್ದು ಕೊಂಡು ಸಮಯ ಸಾಧಕರಾಗಿ ಅದೊಂದು ದಿನ ನಮಗೇ ಅರಿವಿಲ್ಲದಂತೆ ನಮ್ಮ ಬೆನ್ನಿಗೆ ಚೂರಿ ಇರಿಯುವ ಹಿತಶತ್ರುಗಳನ್ನು ಗುರುತಿಸುವುದು ಬಹಳ ಕಷ್ಟಕರವೇ ಸರಿ. ಚಾಪೇಕರ್ ಸಹೋದರ ವಿಷಯದಲ್ಲೂ ಇದೇ ರೀತಿಯಾಗಿ ಅವರ ಕ್ರಾಂತಿಕಾರಿ ತಂಡದ ಸದಸ್ಯನಾಗಿಯೇ ಇದ್ದ ಗಣೇಶ ಶಂಕರ ದ್ರಾವಿಡ ಎನ್ನುವವ ಬ್ರಿಟೀಷರ ಆಮಿಷಕ್ಕೆ ಒಳಗಾಗಿ ಆಯಸ್ಟ್ ಮತ್ತು ರ್ಯಾಂಡ್ ಹತ್ಯೆಗೈದಿದ್ದ ಚಾಪೇಕರ್ ಸಹೋದರನ್ನು ಹಿಡಿಯಲು ಬ್ರಿಟೀಷ್ ಅಧಿಕಾರಿಗಳಿಗೆ ಸಹಾಯ ಮಾಡಿದ ಪರಿಣಾಮವಾಗಿ ಬಾಲಕೃಷ್ಣ ಮತ್ತು ದಾಮೋದರರನ್ನು ಬಂಧಿಸಿ ಹೆಚ್ಚಿನ ವಿಚಾರಣೆ ಇಲ್ಲದೇ ಗಲ್ಲು ಶಿಕ್ಷೆಗೆ ಗುರಿಮಾಡಿದರು.

ranadeತಮ್ಮ ಜೊತೆಗೇ ಇದ್ದು ತಮ್ಮ ಸಹೋದರರನ್ನೇ ಬ್ರಿಟೀಷರಿಗೆ ಹಿಡಿದುಕೊಟ್ಟು ಮಿತ್ರದ್ರೋಹವನ್ನು ಮಾಡಿದ್ದ ಆ ಮಿತ್ರದ್ರೋಹಿ ದ್ರಾವಿಡನನ್ನು ಚಾಪೇಕರ್ ಸಹೋದರರಲ್ಲಿ ಕಿರಿಯವನಾದ ವಾಸುದೇವ ಮತ್ತು ಮತ್ತೊಬ್ಬ ಕ್ರಾಂತಿಕಾರಿ ಮಹದೇವ ರಾನಡೆ ರಾತ್ರೋರಾತ್ರಿ ಹತ್ಯೆಮಾಡುವ ಮೂಲಕ ಆ ದೇಶದ್ರೋಹಿಗೆ ತಕ್ಕ ಶಾಸ್ತಿ ಮಾಡುತ್ತಾರೆ. ಈ ಹತ್ಯೆಯ ಕಾರಣೀಭೂತರನ್ನು ಹಿಡಿಯಲು ಹರಸಾಹಸ ಪಟ್ಟ ಪೋಲಿಸರು ಅಂತಿಮವಾಗಿ ಅವರಿಬ್ಬರನ್ನೂ ಬಂಧಿಸಿ ಅವರಿಗೂ ಯಥಾ ಪ್ರಕಾರ ಮರಣದಂಡಣೆಯನ್ನು ವಿಧಿಸುತ್ತಾರೆ.

vasuಭಾರತೀಯರನ್ನು ಚಿತ್ರಹಿಂಸೆ ಮಾಡಿ ಕೊಲ್ಲುತ್ತಿದ್ದ ಹಿಂದೂ ವಿರೋಧಿ ರ್ಯಾಂಡ್ ನ ಹತ್ಯೆ ಮಾಡಿದ್ದಕ್ಕಾಗಿ ಮೇ 8 1898 ರಂದು ಶ್ರೀ ದಾಮೋದರ ಹರಿ ಚಾಪೇಕರ್, ಮೇ 10 1899ರಂದು ಶ್ರೀ ಬಾಲಕೃಷ್ಣ ಹರಿ ಚಾಪೇಕರ್ ಮತ್ತು ಕಿರಿಯವರಾದ ವಾಸುದೇವ್ ಹರಿ ಚಾಪೇಕರ್ ಅವರನ್ನು ಮೇ 12 1899ರಂದು ಗಲ್ಲಿಗೆ ಏರಿಸಲಾಗುತ್ತದೆ. ಭಾರತ ದೇಶದ ಸ್ವಾತ್ರಂತ್ರ್ಯಕ್ಕಾಗಿ ಮತ್ತು ಭಾರತೀಯರ ಮೇಲೆ ನಡೆಯುತ್ತಿದ್ದ ದಬ್ಬಾಳಿಕೆಯನ್ನು ತಡೆಯುವುದಕ್ಕಾಗಿ ಆ ಮೂವರು ಸಹೋದರರ ತ್ಯಾಗ ಮತ್ತು ಬಲಿದಾನ ಖಂಡಿತವಾಗಿಯೂ ವ್ಯರ್ಥವಾಗದೇ ಈ ಮೂವರ ಹೃತಾತ್ಮರ ಪ್ರೇರಣೆಯಿಂದಾಗಿ ದೇಶದಲ್ಲಿ ಬೇರೆ ಬೇರೆ ರೂಪದಲ್ಲಿ ಸಿಡಿದೆದ್ದು ಬ್ರಿಟೀಶರ ವಿರುದ್ದ ಹೋರಾಡಲು ಹಲವಾರು ಕ್ರಾಂತಿಕಾರಿಗಳು ಸ್ವಾತ್ರಂತ್ರ್ಯ ಹೋರಾಟದಲ್ಲಿ ಧುಮುಕಿದರು. ಹಾಗೆ ಈ ಮೂವರು ಸಹೋದರರಿಂದಲೇ ಪ್ರೇರಿತರಾದವರಲ್ಲಿ ವೀರ ಸಾವರ್ಕರ್‌ ಕೂಡಾ ಒಬ್ಬರು ಎನ್ನುವುದೂ ಮಹತ್ವವಾಗಿದೆ. ಸ್ವಾತ್ರಂತ್ರ್ಯ ಹೋರಾಟಕ್ಕಾಗಿ ಈ ದೇಶಕ್ಕಾಗಿ ಪ್ರಾಣ ತೆತ್ತ ಇಂತಹ ನಿಜವಾದ ಇತಿಹಾಸವನ್ನು ಇಂದಿನ ಯುವಜನರಿಗೆ ಪರಿಚಯಿಸುವ ಮಹತ್ತರ ಜವಾಬ್ಧಾರಿ ನಮ್ಮ ನಿಮ್ಮದೇ ಆಗಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

4 thoughts on “ಚಾಪೇಕರ್ ಸಹೋದರರು

  1. ಕ್ರಾಂತಿಕಾರಿ ಚಾಪೇಕರ್ ಸಹೋದರರ ಬದುಕು, ಬಲಿದಾನವನ್ನು ಕಣ್ಣಿಗೆ ಕಟ್ಟುವಂತೆ ಸ್ವಚ್ಛಂದವಾಗಿ ಚಿತ್ರಿಸಿದ್ದಕ್ಕಾಗಿ, ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣದ ಹಂಗು ತೊರೆದು ನಿಜವಾಗಿ ಹೋರಾಡಿದ ಅಮರ ನಾಯಕರನ್ನು ಸ್ಮರಿಸಿದ್ದಕ್ಕಾಗಿ ಅನಂತ ವಂದನೆಗಳು. ಈ ಮಹಾ ಕಥನಗಳೇ, ಮಾದರಿ ವ್ಯಕ್ತಿತ್ವಗಳೇ ವರ್ತಮಾನಕ್ಕೂ, ಭವಿಷ್ಯಕ್ಕೂ ರಾಷ್ಟ್ರ ಬೆಳಗಿಸುವ ದಾರಿದೀಪಗಳು. ಧನ್ಯವಾದ. ಜೈ ಹಿಂದ್. ಶ್ರೇಯಾಂಕ ಎಸ್ ರಾನಡೆ.

    Liked by 1 person

  2. ಚಾಪೇಕರ್ ಸಹೋದರರ ಧೈರ್ಯ ಸಾಹಸಗಳನ್ನು ಮೆಚ್ಚಬೇಕಾದ್ದೆ. ದೇಶದ ಇಂದಿನ ವಿಷಮ ಪರಿಸ್ಥಿತಿಯಲ್ಲಿ ಧೈರ್ಯದಿಂದ ಮುನ್ನುಗ್ಗಲು ಚಾಪೇಕರ್ ಸಹೋದರರ ಜೀವನ ಪ್ರೇರಣಾದಾಯಕವಾಗಿದೆ.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s