ಭಗವಾನ್ ಗೌತಮ ಬುದ್ಧ

ನಮ್ಮ ಸನಾತದ ಧರ್ಮದ ಪ್ರಕಾರ ಭಗವಾನ್ ವಿಷ್ಣುವಿನ ದಶಾವತಾರದ 9ನೇ ಭಾಗವಾಗಿ ಬುದ್ಧ ಈ ಭೂಲೋಕದಲ್ಲಿ ಅವತರಿಸಿದ್ದಾನೆ ಎಂಬುದೇೆ ಎಲ್ಲರ ನಂಬಿಕೆಯಾಗಿದೆ. ಅಹಿಂಸಾ ಪರಮೋ ಧರ್ಮ. ಆಸೆಯೇ ಸಕಲ ದುಃಖಕ್ಕೆ ಮೂಲ. ಹಾಗಾಗಿ ಆಸೆಯ ಹೊರತಾಗಿ ಭಗವಂತನನ್ನು ಆರಾಧಿಸಿ ಮೋಕ್ಷ ಪಡೆಯಿರಿ ಎಂದು ಉಪದೇಶಿಸಿದ್ದಲ್ಲದೇ, ನಮ್ಮ ಗೆಲುವಿಗೆ ಮತ್ತೊಬ್ಬರನ್ನು ಆಶ್ರಯಿಸುವುದರ ಬದಲು, ಮೊದಲು ನಮ್ಮ ಮೇಲೇ ನಾವೇ ನಂಬಿಕೆ ಇಟ್ಟು ಶ್ರಮವಹಿಸಿ ದುಡಿದಲ್ಲಿ ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೇವೆ ಎಂದು ನೂರಾರು ವರ್ಷಗಳ ಹಿಂದೆಯೇ ಬೋಧಿಸಿದ ಮಹಾ ಗುರು ಬುದ್ಧ ಎಂದರೂ ತಪ್ಪಾಗದು.

ಹಿಂದೆ ಅಖಂಡಭಾರತದ ಭಾಗವಾಗಿದ್ದ ಸದ್ಯಕ್ಕೆ ನೇಪಾಳದ ಭಾಗವಾಗಿರುವ ಶಾಕ್ಯ ವಂಶದವರ ರಾಜ್ಯವಾದ ಕಪಿಲವಸ್ತುವಿನ ರಾಜನಾಗಿದ್ದ ಶುದ್ಧೋಧನನ ತುಂಬು ಬಸುರಿಯಾಗಿದ್ದ ಆತನ ಮಡದಿ ಮಾಯಾದೇವಿ ಹೆರಿಗೆಗಾಗಿ ತನ್ನ ತವರು ಮನೆಗೆ ಹೋಗುತ್ತಿದ್ದ ಮಾರ್ಗದ ಮಧ್ಯದಲ್ಲಿಯೇ ಲುಂಬಿನಿ ಎಂಬ ಗ್ರಾಮದಲ್ಲಿ ಪ್ರಸವ ವೇದನೆ ಕಾಣಿಸಿಕೊಂಡ ಪರಿಣಾಮ ಅಲ್ಲಿಯೇ ಸಮೀಪದ ಸಾಲ ವೃಕ್ಷಗಳ ನಡುವೆ ತಾತ್ಕಾಲಿಕವಾಗಿ ಹಾಕಿದ ಡೇರೆಯಲ್ಲಿ ಸುಂದರವಾದ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ಕ್ರಿ.ಪೂ. 623ರ ವೈಶಾಖ ಶುದ್ಧ ಪೂರ್ಣಿಮೆಯಲ್ಲಿ ಜನನವಾದ ಆ ಮಗುವಿಗೆ ಶುದ್ಧೋಧನ ದಂಪತಿಗಳು  ಗೌತಮ/ ಸಿದ್ಧಾರ್ಥ ಎಂದು ನಾಮಕರಣ ಮಾಡುತ್ತಾರೆ.

ರಾಜನು ವಿಧಿ ವಿಧಾನಗಳಂತೆ ತನ್ನ ಆಸ್ಥಾನದ ಜ್ಯೋತೀಷ್ಯರನ್ನು ಕರೆಯಿಸಿ ತಮ್ಮ ಮಗನ ಜಾತಕವನ್ನು ಬರೆಯಲು ಸೂಚಿಸುತ್ತಾರೆ. ಮಗುವಿನ ಜಾತಕದಲ್ಲಿ ಆತ ವಯಸ್ಕನಾದ ಮೇಲೆ ಇರುವ ಎಲ್ಲಾ ಆಸ್ತಿಗಳನ್ನೂ ತ್ಯಜಿಸಿ ಸನ್ಯಾಸಿಯಾಗುತ್ತಾನೆ ಎಂಬುದನ್ನು ತಿಳಿದ ರಾಜ ದುಃಖಿತನಾಗಿ, ತನ್ನ ಮಗನಿಗೆ ಬಾಹ್ಯ ಪ್ರಪಂಚವೇ ತಿಳಿಸ ಬಾರದೆಂದು ನಿರ್ಧರಿಸಿ ಆತನಿಗೆ ಸಕಲ ಐಶಾರಾಮದೊಂದಿಗೆ ತನ್ನ ಅರಮನೆಯಲ್ಲಿಯೇ ಕಳೆಯುವಂತೆ ಮಾಡುತ್ತಾನೆ.

budda5ಶಿಕ್ಷಣವೆಲ್ಲವೂ ಮುಗಿದು ವಯಸ್ಕನಾದ ನಂತರ ತನ್ನ ರಾಜಮನೆತನಕ್ಕೆ ಅನುರೂಪವಾದ ಯಶೋಧರಾ ಎಂಬ ರಾಜಕುಮಾರಿಯೊಂದಿಗೆ ಕಲ್ಯಾಣವಾಗಿ ಅವರಿಬ್ಬರ ಸುಃಖ ದಾಂಪತ್ಯದ ಕುರುಹಾಗಿ ರಾಹುಲನೆಂಬ ಮುದ್ದಾದ ಮಗುವಿನೊಂದಿಗೆ ಸಂಸಾರ ಸಾಗಿಸುತ್ತಿರುತ್ತಾನೆ.

budda3ಅದೊಮ್ಮೆ ತನ್ನ ಅರಮನೆಯ ಕಿಟಕಿಯಿಂದ ಊರ ಹೊರಗಿನ ಕಡೆ ನೋಡುತ್ತಿದ್ದಾಗ ಅಲ್ಲೊಂದು ಶವಯಾತ್ರೆ ನಡೆಯುತ್ತಿದ್ದು ಮೃತನ ಮನೆಯವರು ದುಃಖಿತರಾಗಿ ಅಳುತ್ತಾ ಹೋಗುತ್ತಿದ್ದದ್ದನ್ನು ಕಂಡು ತನ್ನ ಸೇವಕನೊಬ್ಬನನ್ನು ಕರೆದು ಅಲ್ಲೇನು ನಡೆಯುತ್ತಿದೆ? ಆ ಮಲಗಿರುವ ವ್ಯಕ್ತಿಯನ್ನು ಅವರೇಕೆ ಹೊತ್ತುಕೊಂಡು ಹೋಗುತ್ತಿದ್ದಾರೆ? ಆವನ ಸುತ್ತಾ ಜನರೇಕೆ ಅಳುತ್ತಿದ್ದಾರೆ? ಎಂಬ ಪ್ರಶ್ನೆಯನ್ನು ಕೇಳುತ್ತಾನೆ. ಪ್ರಭು, ಆ ಮೃತಪಟ್ಟ ವ್ಯಕ್ತಿಯನ್ನು ಚಟ್ಟದ ಮೇಲೆ ಹೊತ್ತು ಕೊಂಡು ಸ್ಮಶಾನದಲ್ಲಿ ಸುಟ್ಟು ಹಾಕಲು ತೆಗೆದುಕೊಂಡು ಹೋಗುತ್ತಿದ್ದಾರೆ. ಅವನ ಅಗಲಿಕೆಯ ದುಃಖದಿಂದಾಗಿ ಅವನ ಕುಟುಂಬದವರು ಅಳುತ್ತಿದ್ದಾರೆ ಎಂದು ಸರಳವಾಗಿ ವಿವರಿಸುತ್ತಾರೆ.

budda4ಹಾಗಾದರೆ ನಾನೂ ಒಂದು ದಿನ ಸಾಯುತ್ತೇನೆಯೇ? ನಾನು ಸತ್ತಾಗ ಹೀಗೆಯೇ ಮಾಡುತ್ತಾರೆಯೇ? ಎಂದು ಆಶ್ಚರ್ಯ ಚಕಿತನಾಗಿ ತನ್ನ ನೌಕರರನ್ನು ಪ್ರಶ್ನಿಸಿದಾಗ, ಹೌದು ಮಹಾ ಪ್ರಭು. ಈ ಪಪಂಚದಲ್ಲಿ ಜನಿಸಿರುವ ಪ್ರತಿಯೊಂದು ಜೀವರಾಶಿಗೂ ಅಂತ್ಯ ಎಂದು ಇದ್ದು ಜಾತಸ್ಯ ಮರಣಂ ಧೃವಂ. ಅಂದರೆ ಹುಟ್ಟಿದವನು ಒಂದಲ್ಲಾ ಒಂದು ದಿನ ಸಾಯಲೇ ಬೇಕು ಎನ್ನುವುದು ಈ ಜಗದ ನಿಯಮ ಎಂದು ತಿಳಿಸುತ್ತಾನೆ. ಆಗ ಬುದ್ದನಿಗೆ ಒಂದು ರೀತಿಯ ಜಿಜ್ಞಾಸೆಯುಂಟಾಗಿ ಅರೇ, ಒಂದಲ್ಲಾ ಒಂದು ದಿನ ಸಾಯಲೇ ಬೇಕಾದ ನಮಗೇಗೆ ಸಂಸಾರ? ನಮಗೇಕೆ ಈ ರೀತಿಯ ಐಶಾರಾಮ್ಯ? ಎಂದು ಯೋಚಿಸಿ ಅದೊಂದು ರಾತ್ರಿ ಮಲಗಿದ್ದ ತನ್ನ ಹೆಂಡತಿ ಮತ್ತು ಮಗನನ್ನು ಕಡೆಯ ಬಾರಿಗೆ ನೋಡಿ ರಾಜಮನೆತನದ ಅಷ್ಟೂ ಐಷಾರಾಮಗಳು ತೊರೆದು, ಜನರ ಸಂಕಷ್ಟಗಳು ಹಾಗೂ ಅಜ್ಞಾನಕ್ಕೆ ತನ್ನಿಂದೇನಾದರೂ ಮಾಡಲೇ ಬೇಕು ಎಂದು ನಿರ್ಧರಿಸಿ ಲೋಕೋದ್ಧಾರಕ್ಕಾಗಿ ಸತ್ಯದ ಹುಡುಕಾಟಕ್ಕೆ ಹೊರಟೇ ಹೋಗುತ್ತಾನೆ.

ಜೀವನದ ಸತ್ಯಾನ್ವೇಷಣೆಯಲ್ಲಿ ಅರಸೊತ್ತಿಗೆ, ಹೆಂಡತಿ. ಮಗ ಹಾಗೂ ರಾಜ್ಯವನ್ನು ರಾತ್ರೋ ರಾತ್ರಿ ತೊರೆದು ಅನ್ನ ನೀರಿನ ಹಂಗಿಲ್ಲದೆ ಕಾಡಿನಲ್ಲಿ ಸುಧೀರ್ಘವಾದ ಧ್ಯಾನದಲ್ಲಿ ಮುಳುಗಿದ್ದವನಿಗೆ ಸುಮಾರು 6 ವರ್ಷಗಳ ಕಾಲ ಕಳೆದದ್ದೇ ತಿಳಿದಿರಲಿಲ್ಲ. ಹೀಗೆ ಅನ್ನ ನೀರು ಇಲ್ಲದೇ ಧ್ಯಾನಸಕ್ತನಾದ ಕಾರಣ, ದೇಹವೆಲ್ಲಾ ಕೃಶವಾಗಿ ಅವನ ದೈಹಿಕ ಶಕ್ತಿಯೆಲ್ಲಾ ಕುಗ್ಗಿ, ಪ್ರಾಣಕ್ಕೇ ಸಂಚಕಾರವಾದರೂ ಛಲ ಬಿಡದ ತ್ರಿವಿಕ್ರಮನಂತೆ ಸತ್ಯದ ಹುಡುಕಾಟದತ್ತಲೇ ಹರಿದ್ದು ಸಿದ್ಧಾರ್ಥನ ಚಿತ್ತ. ಅದೊಮ್ಮೆ ಅವನು ಧ್ಯಾನ ಮಾಡುತ್ತಿದ್ದ ಜಾಗದಲ್ಲಿ ಬಳಿಯಲ್ಲೇ ಹಾಡಿ ಕೊಂಡು ಹೋಗುತ್ತಿದ್ದ ಹಳ್ಳಿಯೊಬ್ಬರ ಜಾನಪದ ಹಾಡು ಅವನ ಮನಸ್ಸಿಗೆ ತೀವ್ರವಾಗಿ ನಾಟಿತು. ಅತೀಯಾದರೆ ಅಮೃತವೂ ವಿಷ ಎನ್ನುವಂತೆ ಏನೇ ಮಾಡಿದರೂ ಅತಿಯಾಗಿ ಮಾಡದೇ, ಹಿತ-ಮಿತವಾಗಿ ಮಾಡಬೇಕು ಎನ್ನುವ ಆ ಹಾಡಿನ ಭಾವಾರ್ಥದಂತೆ, ತನ್ನ ನಿರಾಹಾರ ವ್ರತವನ್ನು ತ್ಯಜಿಸಿ ಜೀವನಕ್ಕೆ ಅವಶ್ಯಕವಾಗಿರುವಷ್ಟು ಆಹಾರವನ್ನು ಪರಿವ್ರಾಜಕತೆಯಿಂದ ಪಡೆಯಲು ನಿರ್ಧರಿಸಿದ.

budda6ಅದೇ ಸಮಯಕ್ಕೆ ಸರಿಯಾಗಿ ಸುಜಾತ ಎಂಬ ಹೆಣ್ಣುಮಗಳು ತನಗೆ ಮಗ ಹುಟ್ಟಿದ ಸಂತೋಷದಲ್ಲಿ ಊರಿನವರಿಗೆಲ್ಲರಿಗೂ ಸಿಹಿ ಪಾಯಸವನ್ನು (ಕ್ಷೀರಾನ್ನ) ಹಂಚುತ್ತಾ ಧ್ಯಾನದಲ್ಲಿ ಮಗ್ನನಾಗಿದ್ದ ಗೌತಮನಿಗೂ ಒಂದು ತಟ್ಟೆಯಲ್ಲಿ ಕ್ಷೀರಾನ್ನ ನೀಡಿದಾಗ ಅದನ್ನು ಗೌತಮರು ಸಂತೋಷದಿಂದ ಸ್ವೀಕರಿಸುತ್ತಾರೆ. ಇದು ಗೌತಮರು ಸ್ವೀಕರಿಸಿದ ಮೊದಲ ಭಿಕ್ಷಾಹಾರವಾಗಿತ್ತು. ಹಾಗೆ ಸ್ವೀಕರಿಸಿದ ಆಹಾರವನ್ನು ಸೇವಿಸುವಾಗ ಸತ್ಯದ ಸಾಕ್ಷಾತ್ಕಾರಕ್ಕೆಂದು ದೇಹ ದಂಡಿಸಿದರೆ ಅದರಿಂದ ಯಾವುದೇ ಉಪಯೋಗವಿಲ್ಲ. ಕಾಯಕ್ಲೇಶ, ನಿರಾಹಾರ ನಿಯಮಗಳು ಸಾಧನೆಗೆ ಸಹಾಯಕವಾಗಲಾರವು ಹಾಗಾಗಿ ಜೀವಿಸುವುದಕ್ಕೆ ಎಷ್ಟು ಅಗತ್ಯವೂ ಅಷ್ಟು ಆಹಾರವನ್ನು ಮಾತ್ರವೇ ಸ್ವೀಕರಿಸ ಬೇಕು ಎನ್ನುವುದು ಅವರ ಅರಿವಿಗೆ ಬಂದಿತು.

buda2ಈ ಘಟನೆ ನಡೆದ ಮುಂದಿನ ಏಳು ವಾರಗಳ ಕಾಲ ಗೌತಮರು ಪ್ರತಿನಿತ್ಯವೂ ಹತ್ತಿರದ ನದಿಯಲ್ಲಿ ಸ್ನಾನ ಮಾಡಿ ಶುಚಿರ್ಭೂತರಾಗಿ ಅಲ್ಲಿದ್ದ ಬೋಧಿ ವೃಕ್ಷದ (ಅರಳೀ ಮರ) ಕೆಳಗೆ ಧ್ಯಾನ ಮಾಡುತ್ತಾ ಹೊಟ್ಟೆ ಹಸಿದಾಗ ಮಾತ್ರಾ ಹತ್ತಿರದ ಹಳ್ಳಿಯಲ್ಲಿ ಭಿಕ್ಷಾಹಾರ ಮಾಡುತ್ತಾ ಧ್ಯಾನದಲ್ಲಿ ತಲ್ಲೀನನಾಗುತ್ತಾನೆ. ಹೀಗೆ ಏಳನೇ ವಾರ ವೈಶಾಖ ಶುದ್ಧ ಪೌರ್ಣಮಿಯಂದು (ಅವರ ಹುಟ್ಟಿದ ಹಬ್ಬದಂದೇ) ಅದುವರೆವಿಗೂ ತಾನು ಬಯಸುತ್ತಿದ್ದ ಸತ್ಯದ ಅರಿವು ಅವರಿಗೆ ಮೂಡಿದ್ದಲ್ಲದೇ, ಸೂರ್ಯೋದಯವಾಗುವುದರೊಳಗೆ ಗೌತಮನಿಗೆ ಈಗಿನ ಬಿಹಾರಕ್ಕೆ ಸೇರಿರುವ ಬೋಧಗಯಾ ಎಂಬ ಗ್ರಾಮದಲ್ಲಿ ಬೋಧಿವೃಕ್ಷದ ಕೆಳಗೆ ಜ್ಞಾನೋದಯವಾಗುತ್ತದೆ. ಹಾಗೆ ಜ್ಞಾನೋದಯವಾದ ನಂತರ ಗೌತಮ ಬುದ್ಧ ಎಂಬ ಹೆಸರನ್ನು ಪಡೆದನು. ಬುದ್ಧ ಎಂದರೆ ಜ್ಞಾನ ಪಡೆದವನು ಎಂದು ಅರ್ಥ. ಬುದ್ಧನನ್ನು ತಥಾಗಥಾ ಎಂದು ಕರೆಯುತ್ತಾರೆ. ಹಾಗೆಂದರೆ ಸತ್ಯವನ್ನು ಅರಿತವನು ಎಂಬ ಅರ್ಥ ಬರುತ್ತದೆ.

ಜನ ಸೇವೆ ಮತ್ತು ಜನ ಕಲ್ಯಾಣವೇ ಬುದ್ಧನ ಜೀವನದ ಉದ್ದೇಶವಾಗಿದ್ದ ಕಾರಣ ಬುದ್ಧನು ಮೊದಲ ಬಾರಿ ಸಾರನಾಥದ ಜಿಂಕೆ ವನದಲ್ಲಿ ತನ್ನ ಪ್ರಥಮ ಪ್ರವಚನ ನೀಡಿದ್ದನ್ನು ಧರ್ಮ ಚಕ್ರ ಪ್ರವರ್ತನ ಎಂದು ಕರೆದಿದ್ದಾರೆ. ಈ ಧರ್ಮ ಚಕ್ರವೇ ಬೌದ್ಧ ಧರ್ಮದ ಚಿನ್ಹೆಯಾಗಿದೆ. ಅಲ್ಲಿಂದ ಸುಮಾರು ನಲವತ್ತೈದು ವರ್ಷಗಳ ಕಾಲ ಏಷ್ಯಾ ಖಂಡದ ಬಹುತೇಕ ಭಾಗಗಳಾದ ಶ್ರೀಲಂಕಾ, ಚೈನಾ, ಜಪಾನ್, ಇಂಡೊನೇಷ್ಯಾ ಇನ್ನು ಹಲವು ಪ್ರದೇಶಗಳಲ್ಲಿ ಬುದ್ಧನು ಸಂಚರಿಸಿ ತನ್ನ ಬೌದ್ಧ ಧರ್ಮದ ಪ್ರಚಾರವನ್ನು ಮಾಡಿದ ಪರಿಣಾಮ ಆ ದೇಶದ ಬಹುತೇಕ ಜನರು ಬೌಧ್ಧ ಧರ್ಮದ ಅನುಯಾಯಿಗಳಾದರು.

ಯಾವುದೇ ಜಾತಿ, ಮತಗಳ ಬೇಧವಿಲ್ಲದೆ ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಬುದ್ಧನ ಪಂಚಶೀಲ ತತ್ವಗಳು ಹೀಗಿವೆ.

  • ಯಾವುದೇ ಜೀವಿಗಳನ್ನು ಕೊಲ್ಲದಿರುವುದು ಆಥವಾಹಿಂಸೆ ಮಾಡದಿರುವುದು.
  • ನಮ್ಮದಲ್ಲದಿರುವ ವಸ್ತುಗಳನ್ನು ತೆಗೆಯದಿರುವುದು ಅಥವಾ ಕದಿಯದಿರುವುದು
  • ಶೀಲ ಹರಣ ಮಾಡದಿರುವುದು
  • ಸುಳ್ಳನ್ನು ಹೇಳದಿರುವುದು.
  • ಮಾದಕ ಪಾನೀಯ ಅಥವಾ ಮಾದಕ ವಸ್ತುಗಳು ಸೇವಿಸದಿರುವುದು.

ಬೌದ್ಧ ಧರ್ಮದ ಅಷ್ಟಾಂಗ ಮಾರ್ಗಗಳು ಹೀಗಿವೆ.

  • ಒಳ್ಳೆಯ ನಂಬಿಕೆ
  • ಒಳ್ಳೆಯ ಆಲೋಚನೆ
  • ಒಳ್ಳೆಯ ನಡತೆ
  • ಒಳ್ಳೆಯ ಮಾತು
  • ಒಳ್ಳೆಯ ಧ್ಯಾನ
  • ಒಳ್ಳೆಯ ಪ್ರಯತ್ನ
  • ಒಳ್ಳೆಯ ವಿಚಾರ
  • ಒಳ್ಳೆಯ ಜೀವನೋಪಾಯ

ಗೌತಮ ಸಿದ್ಧಾರ್ಥ ಕೇವಲ ಸರ್ವ ಸಂಗ ಪರಿತ್ಯಾಗದಿಂದ ಬುದ್ಧನಾಗಲಿಲ್ಲ. ಬದಲಾಗಿ ತಾನು ಕಂಡ ಕೊಂಡ ಬದುಕಿನ ಸತ್ಯ ದರ್ಶನದಿಂದ ಆತ ಬುದ್ಧನಾಗಿ ಜಗದ್ವಿಖ್ಯಾತನಾದನು. ಪ್ರೀತಿ ಮತ್ತು ದಯೆ ಇವುಗಳೇ ಜಗತ್ತಿನಲ್ಲಿ ಪ್ರಮುಖವಾದವು ಹಾಗಾಗಿ ಬೇರೆಯವರತ್ತ ಬೆರಳು ತೋರುವ ಮನ್ನ ಮೊದಲು ನಮ್ಮನ್ನು ನಾವು ಅವಲೋಕಿಸಿಕೊಂಡಲ್ಲಿ ಎಲ್ಲವೂ ಸುಗಮವಾಗುವುದು ಎಂದು ಸಾವಿರಾರು ವರ್ಷಗಳ ಹಿಂದೆ ಹೇಳಿದ ಮಾತುಗಳು ಇಂದಿಗೂ ಪ್ರಸ್ತುತವಾಗುತ್ತಿದೆ ಎನ್ನುವುದು ಗಮನಾರ್ಹವಾದ ಅಂಶವಾಗಿದೆ.

ಸಮಾಜದಲ್ಲಿರುವ ಅಜ್ಞಾನದ ಕಾರಣದಿಂದಾಗಿಯೇ ಅನ್ಯಾಯ ಮತ್ತು ಹಿಂಸೆಗಳು ನಡೆಯುತ್ತಿರುವುದನ್ನು ಕರುಣೆಯ ಮೂಲಕ ಪರಿಹಾರವನ್ನು ಕಂಡು ಕೊಳ್ಳಬಹುದೇ ಹೊರತು, ದ್ವೇಷದಿಂದದಲ್ಲ. ಅಹಿಂಸೆಯ ತಳಹದಿಯಲ್ಲಿ ಪ್ರೀತಿಯಿಂದ ದ್ವೇಷವನ್ನು ಗೆಲ್ಲುವುದೇ ಬುದ್ಧನ ಸರಳ ತತ್ವವಾಗಿತ್ತು. ಬಡವನಾಗಿ ಹುಟ್ಟುವುದು ನಮ್ಮ ತಪ್ಪಲ್ಲ. ಆದರೆ ಬಡವನಾಗಿ ಸಾಯುವುದು ನಮ್ಮದೇ ತಪ್ಪು. ಹಾಗಾಗಿ ಬಡತನವೇ ದೊಡ್ಡ ರೋಗವೆಂದು ಭಾವಿಸಿದ್ದ ಬುದ್ಧ ಪ್ರತಿಯೊಬ್ಬರೂ ಆರ್ಥಿಕವಾಗಿ ಶಕ್ತರಾಗಬೇಕು ಮತ್ತು ಆ ರೀತಿಯ ಆರ್ಥಿಕ ಸಂಪತ್ತು ಸರಿಯಾದ ಮಾರ್ಗದಿಂದ ಗಳಿಸಿಕೊಳ್ಳಬೇಕು ಎಂಬುದೇ ಆತನ ತತ್ವವಾಗಿತ್ತು.

ಬುದ್ಧ ಪೂರ್ಣಿಮೆಯಂದು ಕೇವಲ ಬುದ್ಧನ ಪೋಟೋ ಅಥವಾ ಪ್ರತಿಮೆಯನ್ನು ಪೂಜಿಸಿ ಪ್ರಸಾದ ರೂಪದಲ್ಲಿ ಕ್ಷೀರಾನ್ನವನ್ನು ನೀಡಿದರೆ ಬುದ್ಧ ಪೌರ್ಣಿಮೆಯನ್ನು ಅಚರಿಸಿದಂತಾಗುವುದಿಲ್ಲ. ಅದರ ಬದಲಾಗಿ ವರ್ಷ ಪೂರ್ತಿಯೂ ಬುದ್ಧನು ಹೇಳಿದ ಪಂಚಶೀಲ ತತ್ವಗಳು ಮತ್ತು ಅಷ್ಟಾಂಗ ಮಾರ್ಗಗಳನ್ನು ಸರಿಯಾಗಿ ಅರ್ಥೈಸಿಕೊಂಡು ಅದನ್ನು ಜೀವನದಲ್ಲಿ ಅಳವಡಿಸಿಕೊಂಡಾಗಲೇ ಬುದ್ಧ ಪೂರ್ಣಿಮೆಯ ಆಚರಣೆ ಸಾರ್ಥಕವೆನಿಸುತ್ತದೆ ಅಲ್ಲವೇ?

ಏನಂತೀರಿ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s