ಪ್ರಪಂಚದಲ್ಲಿ ಹೆಣ್ಣನ್ನು ಪರಮಪೂಜ್ಯಳೆಂದು ಗೌರವಿಸುವ ಯಾವುದಾದರೂ ದೇಶದಲ್ಲಿ ಅದು ಖಂಡಿತವಾಗಿಯೂ ನಮ್ಮ ಭಾರತದೇಶ ಎಂದು ಹೆಮ್ಮೆಯಾಗಿ ಹೇಳಬಹುದು. ಅದಕ್ಕಾಗಿಯೇ ನಮ್ಮ ಪೂರ್ವಜರು
ಯತ್ರ ನಾರ್ಯಂತು ಪೂಜ್ಯಂತೇ ರಮ್ಯಂತೇ ತತ್ರ ದೇವತಃ |
ಯತ್ರ ನಾರ್ಯಂತು ಪೀಡಂತೆ, ದೂಷಂತೆ ತತ್ರ ವಿನಾಶಃ ||
ಅಂದರೆ ಎಲ್ಲಿ ನಾರಿಯರು ಪೂಜಿಸಲ್ಪಡುವಳೋ ಅಲ್ಲಿ ದೇವತೆಗಳು ಪ್ರಸನ್ನರಾಗಿರುತ್ತಾರೆ. ಅದೇ ರೀತಿ ಎಲ್ಲಿ ಸ್ತ್ರೀಯರನ್ನು ದೂಷಣೆ ಮಾಡುತ್ತರೋ ಅಲ್ಲಿ ಸಮಾಜವು ನಾಶವಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಹಿಂದೆಲ್ಲಾ ಮನೆಯ ಗಂಡಸರು ಹೊರಗೆ ದುಡಿದು ಸಂಪತ್ತನ್ನು ಗಳಿಸಿ ತಂದರೆ ದ್ದರೆ, ಹೆಂಗಸರು ಮನೆಯಲ್ಲಿಯೇ ಕುಳಿತುಕೊಂಡು ಅವರಿಗಿಂತಲೂ ಹೆಚ್ಚಾಗಿಯೇ ದುಡಿಯುತ್ತಿದ್ದದ್ದಲ್ಲದೇ, ತಮ್ಮ ಮನೆಯ ಗಂಡಸರು ದುಡಿದು ತಂದ ಸಂಪತ್ತಿನ ಸಂಪೂರ್ಣ ನಿರ್ವಹಣೆ ಮನೆಯ ಹಿರಿಯ ಹೆಂಗಸಿನ ಕೈಯಲ್ಲಿಯೇ ಇರುತ್ತಿತ್ತು. ಹಾಗಾಗಿಯೇ ಭಾರತದ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ, ನೂರಾರು ರಾಜ್ಯಗಳನ್ನು ಸುಮಾರು ರಾಣಿಯರು ಆಳ್ವಿಕೆ ನಡೆಸಿದ್ದಾರೆ. ಹಾಗೆ ಭಾರತದ ಇತಿಹಾಸದಲ್ಲಿಯೇ ಅತಿ ಹೆಚ್ಚು ಕಾಲ ರಾಣಿಯಾಗಿ ರಾಜ್ಯವಾಳಿದ ಕೀರ್ತಿ ಸಾಳ್ವ ವಂಶದ ಕಾಳುಮೆಣಸಿನ ರಾಣಿ ಎಂದೇ ಹೆಸರಾಗಿದ್ದ ರಾಣಿ ಚೆನ್ನಭೈರಾದೇವಿಗೆ ಸಲ್ಲುತ್ತದೆ. ಆಕೆ ಕ್ರಿಶ 1552ರಿಂದ 1606 ರವರೆಗೆ ಬರೊಬ್ಬರಿ 54 ವರ್ಷಗಳಷ್ಟು ಕಾಲ ಸಂಪದ್ಭರಿತವಾಗಿ ತನ್ನ ರಾಜ್ಯವನ್ನು ಮುನ್ನಡೆಸಿದ್ದಳು.
ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಗೇರುಸೊಪ್ಪಾ ಆಗಿನ ನಗರಬಸ್ತಿಕೇರಿಯನ್ನು ರಾಜಧಾನಿಯಾಗಿಸಿಕೊಂಡಿದ್ದ ವಿಜಯನಗರ ಸಾಮ್ರಾಜ್ಯದ ಒಂದು ಮಹಾಮಂಡಳೇಶ್ವರರಾಗಿ, ಸಾಮಂತ ರಾಜರಾಗಿದ್ದರು. ತುಳುವಾ-ಸಾಳುವಾ ವಂಶದವಳಾಗಿದ್ದ ರಾಣಿ ಚೆನ್ನ ಭೈರಾದೇವಿ ಧಾರ್ಮಿಕವಾಗಿ ಜೈನಧರ್ಮವನ್ನು ಆಚರಿಸುತ್ತಿದ್ದದ್ದಲ್ಲದೇ, ಕಾನೂರು ಕೋಟೆಯನ್ನು ನಿರ್ಮಿಸುವುದರ ಜೊತೆಗೆ ತನ್ನ ಆಡಳಿತದ ಅವಧಿಯಲ್ಲಿ ನೂರಾರು ಜೈನ ಬಸದಿಗಳನ್ನು ನಿರ್ಮಿಸಿದರು.
ಅಂದಿನ ಕಾಲದಲ್ಲಿ ಉತ್ತರಕನ್ನಡ ಸಾಂಬಾರು ಪದಾರ್ಥಗಳಿಗೆ ಹೆಸರುವಾಸಿಯಾಗಿದ್ದ ಕಾರಣ ಯುರೋಪಿಯನ್ನರು ಇದೇ ಸಾಂಬಾರು ಪದಾರ್ಥಗಳನ್ನು ಕೊಳ್ಳುವ ಸಲುವಾಗಿ ಅರಬ್ಬೀ ಸಮುದ್ರದ ಮಾರ್ಗವಾಗಿ ಕರ್ನಾಟಕದ ಕರಾವಳಿ ಪ್ರದೇಶಕ್ಕೆ ಬಂದು ವ್ಯಾಪಾರ ನಡೆಸುತ್ತಿದ್ದರು. ಹಾಗೆ ವ್ಯಾಪಾರಕ್ಕೆ ಬಂದ ಪೋರ್ಚುಗೀಸರು ನಂತರ ಗೋವಾವನ್ನು ವಸಾಹತು ಮಾಡಿಕೊಂಡು ದಕ್ಷಿಣ ಕೊಂಕಣಕ್ಕೆ ತಮ್ಮ ಒಡೆತನವನ್ನು ಮತ್ತು ಮತಾಂತರ ಪ್ರಕ್ರಿಯೆಯನ್ನು ವಿಸ್ತರಿಸಲು ಅನುವಾಗಿದ್ದಲ್ಲದೇ, ತಮ್ಮ ನಾವೆಗಳ ನಿರ್ಮಾಣಕ್ಕೆ ಬೇಕಾದ ಮಾವು, ಗುಳಮಾವು, ಸುರಹೊನ್ನೆ, ಹೆಬ್ಬಲಸು ಮುಂತಾದ ಮರಗಳನ್ನು ಕಡಿದು ಕದ್ದೊಯ್ದು ಇಡೀ ಪಶ್ಚಿಮಘಟ್ಟದ ದಟ್ಟ ಅಡವಿಯನ್ನು ಅಂದೇ ಬೆತ್ತಲಾಗಿಸಲು ಮುಂದಾಗಿದ್ದ ಪೋರ್ಚುಗೀಸರ ಪ್ರಯತ್ನಕ್ಕೆ ಸಿಂಹಿಣಿಯಂತೆ ತಡೆಗೋಡೆಯಾಗಿ ಅಡ್ಡ ನಿಂತು ಇಡೀ ಕರಾವಳಿ ಪ್ರದೇಶವನ್ನು ಸಂರಕ್ಷಿಸಿದ ಕೀರ್ತಿ ಚೆನ್ನಭೈರಾದೇವಿಗೆ ಸಲ್ಲುತ್ತದೆ. ಪರಂಗಿಯವರೊಡನೆ ಅಗತ್ಯವಿದ್ದಾಗ ಸ್ನೇಹ, ಅನಿವಾರ್ಯವಾದಾಗ ಸಮರ ಎರಡಕ್ಕೂ ಸೈ ಎನ್ನಿಸಿಕೊಂಡಿದ್ದವಳು. ಅಪ್ಪಟ ರಾಷ್ಟ್ರಾಭಿಮಾನದ ಚಿಲುಮೆ, ಸ್ವಾಭಿಮಾನದ ಸಂಕೇತ, ಧೈರ್ಯ – ಸಾಹಸದ ರೂಪಕವಾಗಿದ್ದ ಚೆನ್ನ ಭೈರಾದೇವಿ. 1559 ರಿಂದ 1570 ರಲ್ಲಿ ಪೋರ್ಚುಗೀಸರ ಮೇಲಿನ ಯುದ್ಧದಲ್ಲಿ ತನ್ನ ಚಾಣಕ್ಯತನದಿಂದ ಪೋರ್ಚುಗೀಸರನ್ನು ಸೋಲಿದ್ದಲ್ಲದೇ ತನ್ನ ತನ್ನ ಜೀವನದುದ್ದಕ್ಕೂ ಪೋರ್ಚುಗೀಸರೊಂದಿಗೆ ಹೋರಾಡಿ ಒಮ್ಮೆಯೂ ಸೋಲದೇ ಸ್ವಾಭಿಮಾನಿಯಾಗಿಯೇ ಬದುಕಿ ಬಾಳಿದ್ದು ಆಕೆಯ ಮಹತ್ತರ ಸಾಧನೆಗಳಲ್ಲಿ ಒಂದಾಗಿದೆ.
ರಾಜಕೀಯವಾಗಿ ಪೋರ್ಚುಗೀಸರೊಂದಿಗೆ ವೈಮನಸ್ಯವಿದ್ದರೂ ವ್ಯಾವಹಾರಿಕವಾಗಿ ಅವರೊಂದಿಗೆ ಅಕ್ಕಿ, ಮೆಣಸು, ಏಲಕ್ಕಿ, ದಾಲ್ಚಿನ್ನಿ, ಬೆಲ್ಲ, ಬೆತ್ತ, ಗಂಧ, ಶುಂಠಿ, ಲವಂಗ, ದಂತ ಮುಂತಾದ ಪದಾರ್ಥಗಳ ವ್ಯಾಪಾರ ಮಾಡುತ್ತಿದ್ದರಿಂದಲೇ ಪೋರ್ಚುಗೀಸರು ಅವಳನ್ನು Rainha Da Pimenta- The Pepper Queen ಅರ್ಥಾತ್ ಕಾಳುಮೆಣಸಿನ ರಾಣಿ ಎಂದೇ ಕರೆಯುತ್ತಿದ್ದರು. ಕೇವಲ ಪೋರ್ಚುಗೀಸರೊಂದಿಗಷ್ಟೇ ಅಲ್ಲದೇ ಅನೇಕ ದೇಶ ವಿದೇಶಗಳೊಂದಿಗೆ ಸಾಂಬಾರ ಪದಾರ್ಥಗಳ ವ್ಯಾಪಾರವನ್ನು ಅತ್ಯಂತ ಚಾಣಾಕ್ಷತನದಿಂದ ಮಾಡುತ್ತಿದ್ದಳು.
ಗೇರುಸೊಪ್ಪೆಯನ್ನು ಕೇಂದ್ರವಾಗಿಟ್ಟುಕೊಂಡು ಆಡಳಿತ ನಡೆಸಿದರೂ ಪದೇ ಪದೇ ತನ್ನ ಮೇಲೆ ಪೋರ್ಚುಗೀಸರು ಧಾಳಿನಡೆಸುತ್ತಿದ್ದ ಕಾರಣ ತನ್ನ ಗುಪ್ತ ಧನ, ಗುಪ್ತ ದಳ ಮತ್ತು ಆಪತ್ತಿನ ಸಂದರ್ಭದಲ್ಲಿ ತನ್ನ ರಹಸ್ಯ ವಾಸ್ತವ್ಯಕ್ಕೆ ಆಕೆ ಅತ್ಯಂತ ಕಡಿದಾದ ಶಿಖರದ ತುದಿಯಲ್ಲಿದ್ದ ಮತ್ತು ಅತ್ಯಂತ ಸುರಕ್ಷಿತ ಎನಿಸಿಕೊಂಡಿದ್ದ ಕಾನೂರು ಕೋಟೆಯನ್ನು ತನ್ನ ಸಂಪತ್ತನ್ನು ಸಂಗ್ರಹಿಸಿಡಲು ಬಳಸಿಕೊಂಡಳು.
ಆಪತ್ಕಾಲದಲ್ಲಿ ನೆರವಾಗಲೆಂದು ಈ ಕೋಟೆಯಲ್ಲಿ ದವಸ ಧಾನ್ಯ, ಧನ ಕನಕಗಳ ಜೊತೆ ಮದ್ದು ಗುಂಡುಗಳನ್ನೂ ಈ ಕೋಟೆಯಲ್ಲಿ ಸಂಗ್ರಹಿಸಿಡಲಾಗಿತ್ತು ಎಂಬುದಕ್ಕೆ ಅನೇಕ ಸಾಕ್ಷಿಗಳು ಇಂದಿಗೂ ಲಭ್ಯವಿದೆ. ಮೂರು ದಿಕ್ಕಿನಲ್ಲಿಯೂ ಪ್ರಕೃತಿ ನಿರ್ಮಿತ ಸಾವಿರ ಅಡಿಗಳಿಗೂ ಆಳವಾದ ಕಣಿವೆಯನ್ನು ಹೊಂದಿರುವ, ಕಡಿದಾದ ಶಿಖರದೆತ್ತರದಲ್ಲಿ ಅತಿ ಸುರಕ್ಷಿತವಾಗಿದ ಕೋಟೆಯಾಗಿತ್ತು. ಆಕೆ ಮಲೆನಾಡಿನ ಪ್ರಾಂತ್ಯದಿಂದ ಕಾಳು ಮೆಣಸನ್ನು ಖರೀದಿಸಿ ಅದನ್ನು ಶರಾವತಿ ನದಿಯ ದಂಡೆಯ ಮೂಲಕ ಸಾಗಿಸುತ್ತಿದ್ದರಿಂದಲೇ ಆ ಪ್ರದೇಶಕ್ಕೆ ಮೆಣಸುಗಾರು ಎಂಬ ಹೆಸರು ಬಂದಿತ್ತು ಎಂದರೆ ಆಕೆಯ ಕಾಳು ಮೆಣಸಿನ ವ್ಯಾಪಾರ ಎಷ್ಟರ ಮಟ್ಟಿಗೆ ಉಚ್ಚ್ರಾಯ ಸ್ಥಿತಿಯಲ್ಲಿತ್ತು ಎಂಬುದರ ಅರಿವಾಗುತ್ತದೆ. ಹಾಗೆ ಸಂಗ್ರಹಿಸಿದ ಕಾಳುಮೆಣಸನ್ನು ಇದೇ ಕಾನೂರು ಕೋಟೇಯಲ್ಲಿಯೇ ಸುರಕ್ಷಿತವಾಗಿ ದಾಸ್ತಾನು ಮಾಡುತ್ತಿದ್ದಳು.
ಇದೇ ಸಾಂಬಾರು ಪದಾರ್ಥಗಳನ್ನು ಬೆನ್ನತ್ತಿಯೇ ಗೋವಾದಿಂದ ಬಂದ ಪೋರ್ಚುಗೀಸರ ಕ್ಯಾಪ್ಟನ್ ಲೂಯೀಸ್ ದೆ ಅಟಾಯ್ದೆ 1559ರಲ್ಲಿ 113 ನಾವೆ ಮತ್ತು 2500 ಯೋಧರೊಂದಿಗೆ ಹೊನ್ನಾವರವನ್ನು ಧ್ವಂಸಗೊಳಿಸಿ ಗೇರುಸೊಪ್ಪೆಯನ್ನು ಆಕ್ರಮಿಸಲು ಬಂದಾಗ ಅಲ್ಲಿನ ನಿರ್ಜನವಾದ ಪ್ರದೇಶವನ್ನು ಕಂಡು ಆಶ್ವರ್ಯ ಚಕಿತನಾಗಿ ಕಡೆಗೆ ರಾಣಿ ಚನ್ನಭೈರಾದೇವಿ ಕಾನೂರಿನಲ್ಲಿರುವುದನ್ನು ತಿಳಿದು ಅದನ್ನು ವಶಪದಿಸಿಕೊಳ್ಳಲು ತನ್ನ ಸೈನ್ಯದೊಂದಿಗೆ ಕಡಿದಾದ ಶಿಖರವನ್ನೇರಲು ತೊಡಗಿದಾಗ ರಾಣಿಯ ಸೈನಿಕರು ಶಿಖರದ ತುದಿಯಿಂದ ಉರುಳು ಗಲ್ಲುಗಳನ್ನು ಪೋರ್ಚುಗೀಸ್ ಸೈನಿಕರ ತಲೆಯ ಮೇಲೆ ಉರುಳಿಸತೊಡಗಿದ್ದನ್ನು ಕಂಡು ಬೆಚ್ಚಿಬಿದ್ದ ಪೋರ್ಚುಗೀಸ್ ಸೈನಿಕರು ಕಾನೂರು ಕೋಟೆಯನ್ನು ವಶಪಡಿಸಿಕೊಳ್ಳುವ ಯೋಚನೆಯನ್ನು ಕೈಬಿಟ್ಟು ತಮ್ಮ ಪ್ರಾಣ ಉಳಿಸಿಕೊಂಡರೆ ಸಾಕು ಎಂದು ದಿಕ್ಕಪಾಲಾಗಿ ಪರಾರಿಯಾಗಿ ಕಡಲ ತೀರ ಬಸ್ರೂರಿಗೆ ಮುತ್ತಿಗೆ ಹಾಕುತ್ತಾರೆ. ಆಗ ರಾಣಿ ಚೆನ್ನಭೈರಾದೇವಿ ಕಾನೂರಿನಿಂದಲೇ ಬಸ್ರೂರು ದೊರೆಗೆ ಬೆಂಬಲಿಸಿ ಪೋರ್ಚುಗಿಸರನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದಳು. ಉರುಳುಗಲ್ಲಿನ ಮೂಲಕ ಕಾನೂರು ಕೋಟೆಯನ್ನು ರಕ್ಷಿಸಿಕೊಂಡ ಕಾರಣ ಅಂದಿನಿಂದ ಆ ಪ್ರದೇಶ ಉರುಳುಗಲ್ಲು ಎಂದೇ ಹೆಸರಾಗಿದ್ದಲ್ಲದೇ, ಇಂದಿಗೂ ಆ ಕಾನೂರು ಕೋಟೆಯು ಉರುಳುಗಲ್ಲು ಗ್ರಾಮಕ್ಕೇ ಸೇರುತ್ತದೆ.
ಹೊರಗಿನ ಶತ್ರುಗಳನ್ನು ಗುರುತಿಸಿ ಅವರೊಂದಿಗೆ ಹೋರಾಟ ಮಾಡುವುದು ಸುಲಭ ಆದರೆ ತಮ್ಮೊಂದಿಗೆ ಮಿತ್ರರಾಗಿದ್ದು ಕೊಂಡು ಸಮಯ ಸಾಧಕರಾಗಿ ಅದೊಂದು ದಿನ ನಮಗೇ ಅರಿವಿಲ್ಲದಂತೆ ತಮ್ಮ ಬೆನ್ನಿಗೆ ಚೂರಿ ಇರಿಯುವ ಹಿತಶತ್ರುಗಳನ್ನು ಗುರುತಿಸುವುದು ಬಹಳ ಕಷ್ಟಕರವೇ ಸರಿ. ರಾಣಿ ಚನ್ನಬೈರಾದೇವಿಯ ವಿಷಯದಲ್ಲೂ ಇದೇ ರೀತಿಯಾಗಿ ಕಾಳುಮೆಣಸಿನ ವ್ಯಾಪಾರದಲ್ಲಿ ವಿದೇಶೀಯರೊಂದಿಗಿದ್ದ ರಾಣಿಯ ಏಕಸ್ವಾಮ್ಯವನ್ನು ಹತ್ತಿಕ್ಕಲು ಕೆಳದಿ ನಾಯಕರು ಮತ್ತು ಬಿಳಗಿ ಅರಸರು ಹರಸಾಹಸ ಪಡುತ್ತಿದ್ದರು. ಹಾಗಾಗಿ ಅವರು ವಿದೇಶಿಗರೊಂದಿಗಿನ ವ್ಯಾಪಾರದ ಕೊಂಡಿಯಾಗಿದ್ದ ಬೈಂದೂರು, ಹೊನ್ನಾವರ, ಮಿರ್ಜಾನ ಅಂಕೋಲ ಬಂದರುಗಳನ್ನು ವಶಪಡಿಸಿಕೊಳ್ಳಲು ಎಷ್ಟೇ ಪ್ರಯತ್ನ ಪಟ್ಟರೂ, ಕಾನೂರು ಕೋಟೆಯ ಭದ್ರತೆ ಮತ್ತು ಚೆನ್ನಭೈರಾದೇವಿಯ ಪ್ರತಾಪದೆದುರು ಸೋಲನ್ನಪ್ಪುತ್ತಿದ್ದರು.
ಹಾಗಾಗಿ ರಾಣಿಯನ್ನು ಮಣಿಸಲೆಂದೇ, 1606ರಲ್ಲಿ ಕೆಳದಿಯ ಅರಸು ಹಿರಿಯ ವೆಂಕಟಪ್ಪ ನಾಯಕ ಮತ್ತು ಬಿಳಿಗಿಯ ಅರಸರು ಇಬ್ಬರೂ ಪರಸ್ಪರ ಒಂದಾಗಿ ದಳವಾಯಿ ಲಿಂಗಣ್ಣ ಎನ್ನುವ ಸರದಾರನಿಗೆ ಆಮಿಷವೊಡ್ಡಿ ಅವನ ಮೂಲಕ ಮೋಸದಿಂದ ರಾಣಿಯನ್ನು ಸೆರೆ ಹಿಡಿಸಿ ಆಕೆಯನ್ನು ಹಳೆ ಇಕ್ಕೇರಿ ಕೋಟೆಯಲ್ಲಿ ಸುಮಾರು ಕಾಲ ಬಂಧನಲ್ಲಿ ಇಟ್ಟಿದ್ದಾಗಲೇ ಆಕೆ ಅಲ್ಲಿಯೇ ಕೊನೆಯುಸಿರೆಳೆಯುತ್ತಾಳೆ. ಕೆಳದಿಯ ನಾಯಕರು ಕಾನೂರು ಕೋಟೆಯನ್ನು ವಶಪಡಿಸಿಕೊಂಡ ನಂತರ ಆದಕ್ಕೆ ಮತ್ತಷ್ಟು ಜೀರ್ಣೋಧ್ದಾರ ಮಾಡಿಸಿದ ನಂತರ ಅದು ಕೆಳದಿ ಕೋಟೆ ಎಂದೇ ಪ್ರಸಿದ್ಧವಾಗುತ್ತದೆ.
ಇಂದು ಜನಸಾಮಾನ್ಯರಿಗೆ ಕಾನೂರು ಕೋಟೆಗೆ ಹೋಗಲು ಅರಣ್ಯ ಇಲಾಖೆಯ ಅಪ್ಪಣೆ ಬೇಕಿದ್ದರೂ, ಆ ವೀರ ಮಹಿಳೆಯ ಶಕ್ತಿಕೇಂದ್ರವಾಗಿ, ಪೋರ್ಚುಗೀಸರೊಂದಿಗಿನ ಯುದ್ಧದಲ್ಲಿ ರಾಣಿ ಚೆನ್ನಬೈರಾದೇವಿಯ ಪಾಲಿಗೆ ಗೆಲುವನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕಾನೂರು ಕೋಟೆ ಕಾಲದ ಹೊಡೆತದ ಜೊತೆಗೆ ಪುರಾತತ್ವ ಇಲಾಖೆಯಿಂದ ಅವಗಣನೆಗೊಳಗಾಗಿ ವಿನಾಶದ ಅಂಚನ್ನು ತಲುಪಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಅಲ್ಲೊಂದು ಭವ್ಯವಾದ ಕೋಟೆ ಇತ್ತು ಎನ್ನುವುದಕ್ಕೆ ಬಾವಿ, ಕಲ್ಲಿನ ದ್ವಜಸ್ಥಂಭ, ರಾಣಿವಾಸ, ಸುರಂಗ ಮಾರ್ಗಗಳು ಕುರುಹುಗಳಾಗಿ ಉಳಿದಿವೆ.
ಆ ಕೋಟೆಯಲ್ಲಿದ್ದ ಜಿನಮಂದಿರ ಮತ್ತು ಶಿವಾಲಯ ಇಂದು ಕಳ್ಳ ಖದೀಮರ ಕೈಗೆ ಸಿಕ್ಕು ದಯನೀಯ ಸ್ಥಿತಿ ತಲುಪಿದೆ. ನಿಧಿಯಾಸೆಗಾಗಿ ದ್ವಜಸ್ಥಂಭವನ್ನು ಉರುಳಿಸಿದ್ದರೆ ಅಲ್ಲಿನ ಶಿವಲಿಂಗವನ್ನು ಭಿನ್ನಗೊಳಿಸಿ ಹೊರಗೆ ಬಿಸಾಡಲಾಗಿದೆ. ಜಿನಮಂದಿರವು ಇಂದೋ ಇಲ್ಲವೇ ನಾಳೆಯೂ ಉರುಳಿ ಬೀಳಬಹುದಾದಂತಹ ದುಃಸ್ಥಿತಿಯಲ್ಲಿದ್ದರೆ ರಾಣೀ ಚನ್ನಭೈರಾದೇವಿಯ ವಾಸಸ್ಥಾನವಿಂದು ಹಾವು ಮತ್ತು ಹಾವುರಾಣಿಗಳ ವಾಸಸ್ಥಾನವಾಗಿದ್ದು ಅವುಗಳ ಮಧ್ಯದಲ್ಲಿ ದಟ್ಟವಾಗಿ ಮರ ಗಿಡಗಳು ಬೆಳೆದು ಅವುಗಳ ಬೇರಿನಿಂದಾಗಿ ಗೋಡೆಗಳಲ್ಲವೂ ಶಿಥಿಲವಾಗಿ ಉದುರಿ ಹೋಗಿದೆ. ರಾಣಿ ಚನ್ನಭೈರಾದೇವಿಯ ಕಾಲದಲ್ಲಿ ಸುವರ್ಣಾವಸ್ಥೆಯಲ್ಲಿದ್ದ ಈ ಕೋಟೆಯ ನಾನಾ ಭಾಗಗಳಲ್ಲಿ ಆಕೆ ಸಾಕಷ್ಟು ನಿಧಿಯನ್ನು ಅವಿತಿಟ್ಟಿರಬಹುದು ಎಂಬ ಅಸೆಯಿಂದಾಗಿ ಇಂದಿಗೂ ಆ ನಿಧಿಯಾಸೆಗಾಗಿ ಪುಂಡ ಪೋಕರಿಗಳು ರಾತ್ರೋರಾತ್ರಿ ಅನಧಿಕೃತವಾಗಿ ಎಗ್ಗಿಲ್ಲದ್ದೇ ಎಲ್ಲೆಂದರಲ್ಲಿ ಅಗೆದು ಬಿಸಾಡಿರುವುದನ್ನು ನೋಡಿದರೆ ಮನಸ್ಸಿಗೆ ಬೇಸರವಾಗುತ್ತದೆ.
ಪ್ರಸ್ತುತ ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ವಿನಾಶದಂಚಿನಲ್ಕಿ ನಿಂತಿರುವ ಕೋಟೆಯ ಹೆಬ್ಬಾಗಿಲು, ಶಿಥಿಲಾವಸ್ಥೆಯಲ್ಲಿದ್ದು ಬಹುತೇಕ ಉರುಳಿ ಹೋಗಿರುವ ಕೋಟೆಯ ಗೋಡೆಗಳು,ಬಹುತೇಕ ವಿನಾಶವಾಗಿರುವ ರಾಣೀವಾಸದ ಕಟ್ಟಡ ಮತ್ತು ಅಲ್ಲಿರುವ ಬಾವಿಗಳು, ಸುರಂಗ ಮಾರ್ಗಗಳ ರಕ್ಷಣೆಗೆ ಪುರಾತತ್ವ ಇಲಾಖೆಯಾಗಲೀ, ಸ್ಥಳೀಯ ಸಾಂಸ್ಕೃತಿಕ ಅಥವಾ ಇತಿಹಾಸ ಅಕಾಡಮಿಗಳಾಗಲೀ ಗಮನ ವಹಿಸದೇ ಇರುವುದು ನಿಜಕ್ಕೂ ದೌರ್ಭಾಗ್ಯದ ಸಂಗತಿಯಾಗಿದೆ. ಇದು ಈ ದೇಶದ ಚರಿತ್ರೆಗೆ ನಾವುಗಳು ಮಾಡುತ್ತಿರುವ ಚರಿತ್ರಾರ್ಹ ಅನ್ಯಾಯವೆಂದರೂ ತಪ್ಪಾಗದು.
ನಿಜ ಹೇಳಬೇಕೆಂದರೆ ಅಂತಹ ಕಗ್ಗಾಡಿನ ನಡುವಿನ ದುರ್ಗಮ ಪರ್ವತದ ನೆತ್ತಿಯಲ್ಲಿ ಇಂತಹ ಆಯಕಟ್ಟಿನ ಸ್ಥಳವೊಂದರಲ್ಲಿ ಅಭೇಧ್ಯ ಕೋಟೆಯನ್ನು ಕಟ್ಟಿ ಅದರಲ್ಲಿ ಸಾಕಷ್ಟು ಧನಕನಕಗಳನ್ನು ಆ ಕಾಲದಲ್ಲಿ ಸುರಕ್ಷಿತವಾಗಿ ಸಂಗ್ರಹಿಟ್ಟಿದ್ದರೆ, ಇಂದಿರುವ ಸಕಲ ಸೌಲಭ್ಯಗಳನ್ನು ಬಳಸಿಕೊಂಡು ಖಂಡಿತವಾಗಿಯೂ ಕಾನೂರು ಕೋಟೆಯ ಗತವೈಭವವನ್ನು ಮರಕಳಿಸಲು ಕೇವಲ ಇಚ್ಚಾಶಕ್ತಿಯ ಕೊರತೆಯಿದೆ ಅಷ್ಟೇ.
ಆಧುನಿಕ ಪ್ರವಾಸೋದ್ಯಮಕ್ಕೆ ಕೋಟಿ ಕೋಟಿ ಹಣವನ್ನು ಖರ್ಚುಮಾಡುತ್ತಿರುವ ಸರ್ಕಾರ, ಕಾನೂರು ಕೋಟೆಯಂತಹ ಐತಿಹಾಸಿಕ ಮಹತ್ವದ ತಾಣಗಳನ್ನು ಅಭಿವೃದ್ಧಿಪಡಿಸಿ ಪ್ರವಾಸೋದ್ಯಮಕ್ಕೆ ಅಣಿಗೊಳಿಸಿದಲ್ಲಿ ನಮ್ಮ ಭವ್ಯವಾದ ಪರಂಪರೆ ಮತ್ತು ಈ ನೆಲದ ಇತಿಹಾಸವನ್ನು ನಮ್ಮ ಮುಂದಿನ ಪೀಳಿಗೆಯವರಿಗೆ ಪರಿಚಯಿಸುವುದರ ಜೊತೆಗೆ ಪ್ರವಾಸಿಗರ ಮನಸ್ಸಿಗೂ ಮುದ ನೀಡಿದಂತಾಗುತ್ತದೆ ಅಲ್ಲವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಈ ಲೇಖನ ಸಂಪದ ಸಾಲು ಮಾಸ ಪತ್ರಿಕೆಯ 2022ರ ಮೇ ತಿಂಗಳಿನ ಸಂಚಿಕೆಯಲ್ಲಿ ಪ್ರಕಟವಾಗಿದೆ.
Nice write up – This fort falls in Sharvathi Wildlife Sanctuary and hence the Archaeological department has no authority on the fort. If you want to promote this into a tourism hub then it would disturb the serene environment of the Wildlife Area. The forest has taken care of this fort and will take care of it for another decade. The fort is now a favorite spot for Bear and interestingly their numbers have manipulated over the years.
LikeLiked by 1 person
ಸರ್ ಈ ಲೇಖನಕ್ಕೆ ನೀವೇ ಮೂಲಸ್ಪೂರ್ತಿ. ಕೆಲ ತಿಂಗಳ ಹಿಂದೆ ನಿಮ್ಮ ಲೇಖನ ಓದಿಯೇ ಕಾನೂರು ಕೋಟೆ ಮತ್ತು ರಾಣಿ ಚನ್ನಭೈರಾದೇವಿಯ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿತ್ತು.
ಕಳೆದ ತಿಂಗಳು ಉಜಿರೆಯಲ್ಲಿ ನಡೆದ ಅಖಿಲಭಾರತೀಯ ಸಾಹಿತ್ಯ ಪರಿಷತ್ತಿನ ಅಧಿವೇಶನದಲ್ಲಿಯೂ ರಾಣಿಯ ಬಗ್ಗೆ ವೇದಿಕೆಯಲ್ಲಿ ಹಲವಾರು ಗಣ್ಯರು ಧನಿ ಎತ್ತಿದ್ದರಿಂದ ಇದರ ಬಗ್ಗೆ ಮತ್ತೆ ಅಲ್ಪ ಸ್ವಲ್ಪ ಓದಿ ತಿಳಿದು ಈ ಲೇಖನ ಬರೆದಿದ್ದೇನೆ.
ಕಾಳುಮೆಣಸಿನ ರಾಣಿಯ ಬಗ್ಗೆ ಕುತೂಹಲ ಮೂಡಿಸಿದ ನಿಮಗೆ ಮತ್ತೊಮ್ಮೆ ಹೃದಯ ಪೂರ್ವಕ ಧನ್ಯವಾದಗಳು
LikeLike