ಥಾಮಸ್ ಕಪ್ ಗೆದ್ದು ಬೀಗಿದ ಭಾರತ

ಭಾರತದಲ್ಲಿ ಕ್ರಿಕೆಟ್ ಒಂದು ರೀತಿಯ ಧರ್ಮ ಎಂಬತಾಗಿ  ಅದರ ಹೊರತಾಗಿ ಉಳಿದ ಕ್ರೀಡೆಗಳ ಬಗ್ಗೆ ಪ್ರೋತ್ಸಾಹ ಅಷ್ಟಕಷ್ಟೇ. ಬಹುತೇಕ ಪೋಷಕರು ತಮ್ಮ ಮಕ್ಕಳು ಡಾಕ್ಟರ್ ಇಲ್ಲವೇ ಇಂಜಿನೀಯರ್ ಆಗಿ ವಿದೇಶಗಳಿಗೆ ಹೋಗಿ ಲಕ್ಷ ಲಕ್ಷ ರೂಪಾಯಿ ಹಣ ಸಂಪಾದಿಸಿ ಐಶಾರಾಮ್ಯದ ಜೀವನವನ್ನು ನಡೆಸಿದರೆ ಸಾಕು ಎಂದು ಬಯಸುವವರೇ ಹೆಚ್ಚಾಗಿದ್ದಾರೆ. ಅಪರೂಪಕ್ಕೆ ಅಲ್ಲೊಂದು  ಇಲ್ಲೊಂದು ವಯಕ್ತಿಕ ಆಸಕ್ತಿಯುಳ್ಳವರು ಟಿನ್ನಿಸ್, ಶೂಟಿಂಗ್, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಈಜು, ಕುಸ್ತಿ, ವೇಯ್ಟ್ ಲಿಫ್ಟಿಂಗ್ ಮುಂತಾದ ಕ್ರೀಡೆಗಳಲ್ಲಿ ಅಷ್ಟೂ ಇಷ್ಟೋ ಸಾಧನೆಗಳನ್ನು ಮಾಡುವ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಅಗೊಮ್ಮೆ ಈಗೊಮ್ಮೆ  ಹಾರಿಸುವುದನ್ನು ಕಾಣಬಹುದಾಗಿದೆ.

prakash80ರ ದಶಕದಲ್ಲಿ ಕರ್ನಾಟಕದ ಪ್ರಕಾಶ್ ಪಡುಕೋಣೆ  ಆಲ್ ಇಂಗ್ಲೇಂಡ್ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ಮೊದಲ ಬಾರಿಗೆ ಮುಡಿಗೇರಿಸಿಕೊಂಡಾಗ ಆಶ್ಚರ್ಯ ಚಕಿತರಾಗಿ ಮೂಗಿನ ಮೇಲೆ ಬೆರಳಿಟ್ಟುಕೊಂಡ ಮಂದಿಗೇನು ಕಡಿಮೇ ಏನಿಲ್ಲ ಅದಾದ ನಂತರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪದಗಳನ್ನು ಗೆದ್ದು ಸ್ವಲ್ಪ ಭರವಸೆ ಮೂಡಿಸಿದ್ದ ಸೈಯ್ಯದ್ ಮೋದಿ ದುರಾದೃಷ್ಟವಷಾತ್ ಕೊಲೆಯಾಗಲ್ಪಟ್ಟ ನಂತರ ವಿಮಲ್ ಕುಮಾರ್ ಅಲ್ಪ ಸ್ವಲ್ಪ ಭರವಸೆಯನ್ನು ಮೂಡಿಸಿದ್ದರಾದರೂ 2000ರ ವರೆಗೂ ಭಾರತದ ಬ್ಯಾಡ್ಮಿಂಟನ್ ಒಂದು ರೀತಿಯ ಬೂದಿ ಮುಚ್ಚಿದ ಕೆಂಡದಂತಿತ್ತು.

opichandಭಾರತದಲ್ಲಿ ಬ್ಯಾಡ್ಮಿಂಟನ್ ಭಾರತದಲ್ಲಿ ಈ ಪ್ರಮಾಣದಲ್ಲಿ  ಮುಂದೆ ಬರಲು ಬೆಂಗಳೂರಿನ ಮಲ್ಲೇಶ್ವರದ ಕೆನರಾಯೂನಿಯನ್ನಿನಲ್ಲಿ ಪ್ರಕಾಶ್ ಪಡುಕೋಣೆ ಆರಂಭಿಸಿದ ಅಕಾಡೆಮಿಯ ಪಾತ್ರ ನಿಜಕ್ಕೂ ಅನನ್ಯ ಮತ್ತು ಅಭಿನಂದನಾರ್ಹ. ದೇಶದ ಉದಯೋನ್ಮುಖ  ಆಟಗಾರರನ್ನು ಗುರುತಿಸಿ ಅವರಿಗೆ ಸೂಕ್ತ ರೀತಿಯಲ್ಲಿ ತರಭೇತಿ ನೀಡುವ ಮೂಲಕ ಭಾರತದ  ಭವಿಷ್ಯದ ಬ್ಯಾಡ್ಮಿಂಟನ್ ತಾರೆಗಳನ್ನಾಗಿ ಮಾಡುವ ಕಾಯಕದಲ್ಲಿ ಪ್ರವರ್ಧಮಾನಕ್ಕೆ ಬಂದವರೇ ಪುಲ್ಲೇಲ ಗೋಪಿಚಂದ್. ಮೂಲತಃ ಆಂಧ್ರ ಪ್ರದೇಶದರಾದರೂ ಪ್ರಕಾಶ್ ಪಡುಕೋಣೆಯವರ ಗರುಡಿಯಲ್ಲಿ ಪಳಗಿ,  2001 ರಲ್ಲಿ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ ಗೆಲ್ಲುವ ಮೂಲಕ  ಪ್ರಕಾಶ್ ಪಡುಕೋಣೆ ನಂತರ ಈ ಸಾಧನೆ ಮಾಡಿದ ಎರಡನೇ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾಗಿದ್ದಲ್ಲದೇ ನಂತರ ದಿನಗಳಲ್ಲಿ ತಮ್ಮ ವಯಕ್ತಿಕ ಹಿತಾಸಕ್ತಿಗಳನ್ನು ಬದಿಗೊತ್ತಿ ಹೈದರಾಬಾದಿನಲ್ಲಿ ತಮ್ಮದೇ ಆದ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯನ್ನು  ಆರಂಭಿಸುವ ಮೂಲಕ ಅಪರ್ಣಾ ಪೋಪಟ್, ಜ್ವಾಲ ಗುಟ್ಟ, ಸೈನಾ ನೆಹ್ವಾಲ್, ಪಿ.ವಿ.ಸಿಂಧು,  ಅಶ್ವಿನಿ ಪೊನ್ನಪ್ಪ, ಪಾರುಪಲ್ಲಿ ಕಷ್ಯಪ್, ಶ್ರೀಕಾಂತ್ ಕಿಡಂಬಿ, ಬಿ. ಸಾಯಿ ಪ್ರಣೀತ್, ಲಕ್ಷ್ಯ ಸೇನ್ ಮುಂತಾದ ಉದಯೋನ್ಮುಖ ತಾರೆಯರು  ಭಾರತದ ಕೀರ್ತಿಪತಾಕೆಯನ್ನು ವಿಶ್ವಮಟ್ಟದಲ್ಲಿ  ಯಶಸ್ವಿಯಾಗಿ ಹಾರಿಸುವಂತಾಗಲೂ ಕಾರಣೀಭೂತರಾದರು  ಎಂದರೂ ತಪ್ಪಾಗದು.

BWF ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪ್ರಕಾಶ್ ಪಡುಕೋಣೆ 1982ರಲ್ಲಿ ಗೆದ್ದನಂತರ 2011 ರಲ್ಲಿ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಅವರು   ಡಬಲ್ಸ್ ಜೋಡಿ  ಕಂಚಿನ ಪದಕವನ್ನು ಗೆದ್ದ ನಂತರ ಭಾರತ ಬ್ಯಾಡ್ಮಿಂಟನ್ ಲೋಕದಲ್ಲಿ ಹಿಂದುರಿಗಿ ನೋಡುವ ಪ್ರಮೇಯವೇ ಬರಲಿಲ್ಲಸೈನಾ ನೆಹ್ವಾಲ್  2012 ರ ಲಂಡನ್ ಒಲಿಂಪಿಕ್ಸಿನಲ್ಲಿ  ವೈಯಕ್ತಿಕ ಮಹಿಳಾ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆಲ್ಲುವ ಮೂಲಕ ಬ್ಯಾಡ್ಮಿಂಟನ್‌ನಲ್ಲಿ ದೇಶಕ್ಕೆ ಮೊದಲ ಒಲಿಂಪಿಕ್ ಪದಕಗಳಿಸಿ ಕೊಟ್ಟರೆ, ನಂತರ ಪಿ.ವಿ.ಸಿಂಧು ಕ್ರಮವಾಗಿ 2016 ರಿಯೊ ಒಲಿಂಪಿಕ್ಸ್ ಮತ್ತು 2020 ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಮತ್ತು ಕಂಚಿನ ಪದಕವನ್ನು ಗೆಲ್ಲುವ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದರು.  ಸೈನಾ ನೆಹ್ವಾಲ್ 2015 ರ ಚಾಂಪಿಯನ್‌ಶಿಪ್‌ನಲ್ಲಿ ಮೊದಲಬಾರಿಗೆ ಬೆಳ್ಳಿಯನ್ನು ಗೆದ್ದರೆ 2017 ರಲ್ಲಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು. P. V. ಸಿಂಧು 2017 ಮತ್ತು 2018 ರಲ್ಲಿ ಸತತ ಆವೃತ್ತಿಗಳಲ್ಲಿ ಬೆಳ್ಳಿ ಗೆದ್ದರೆ, ಮತ್ತೆ 2019 BWF ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನವನ್ನು ಗೆದ್ದರು

ಇನ್ನು ಪುರುಷರ ವಿಭಾಗದಲ್ಲಿ 2019 BWF ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬಿ. ಸಾಯಿ ಪ್ರಣೀತ್ 36 ವರ್ಷಗಳ ನಂತರ ಪುರುಷರ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗೆದ್ದರೆ,  2021 ರಲ್ಲಿ,  ಶ್ರೀಕಾಂತ್ ಕಿಡಂಬಿ ಪುರುಷರ ಸಿಂಗಲ್ಸ್‌ನಲ್ಲಿ ಬೆಳ್ಳಿ ಮತ್ತು ಲಕ್ಷ್ಯ ಸೇನ್  ಕಂಚಿನ ಪದಕವನ್ನು ಗೆಲ್ಲುವ ಮೂಲಕ  ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತವು ಒಂದೇ ಆವೃತ್ತಿಯಲ್ಲಿ ಇಬ್ಬರು ಪದಕಗಳನ್ನು ಮೊದಲ ಬಾರಿಗೆ ಗೆದ್ದಿದ್ದಲ್ಲದೇ, ಭಾರತವು 2011 ರಿಂದ ವಿಶ್ವ ಚಾಂಪಿಯನ್‌ಶಿಪ್‌ನಿಂದ ಒಂದಲ್ಲಾ ಒಂದು ವಿಭಾಗದಲ್ಲಿ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ  ಬರಿಗೈಯಲ್ಲಿ ಹಿಂತಿರುಗುವ ಪ್ರಮೇಯವೇ ಬಾರದಿರುವುದು ಹೆಮ್ಮೆಯ ಸಂಗತಿಯಾಗಿದೆ.

ಹೀಗೆ ವಯಕ್ತಿಕ ಮಟ್ಟದಲ್ಲಿ ಪ್ರಶಸ್ತಿಗಳನ್ನು ಗೆಲ್ಲುವುದರಲ್ಲಿ ಸಫಲವಾಗುತ್ತಿದ್ದರೂ ತಂಡವಾಗಿ ಪ್ರಶಸ್ತಿಯನ್ನು ಗೆಲ್ಲಲು ವಿಫಲವಾಗಿತ್ತಿದ್ದ ಭಾರತದ ತಂಡ ಮೇ 15 2022  ಭಾನುವಾರ ಬ್ಯಾಂಕಾಕ್‌ನಲ್ಲಿ ನಡೆದ ಥಾಮಸ್ ಕಪ್ ಚಾಂಪಿಯನ್ ಶಿಪ್ಪಿನಲ್ಲಿ ಹಾಲಿ ಚಾಂಪಿಯನ್ ಇಂಡೋನೇಷ್ಯಾವನ್ನು  3-0 ಅಂತರದಿಂದ ಸೋಲಿಸುವ ಮೂಲಕ  ಮೊದಲ ಬಾರಿಗೆ ಭಾರತ ಥಾಮಸ್ ಕಪ್ ಗೆದ್ದು ಇತಿಹಾಸ ನಿರ್ಮಿಸಿದೆ. ಭಾರತೀಯ ಪುರುಷರು ಈ ಹಿಂದೆ 1952, 1955 ಮತ್ತು 1979 ರಲ್ಲಿ ಥಾಮಸ್ ಕಪ್ ಸೆಮಿಫೈನಲ್  ತಲುಪಿದ್ದೇ ಇದುವರೆಗಿನ ಸಾಧನೆಯಾಗಿತ್ತು.

ವಿಶ್ವಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಗಳಲ್ಲಿ ಉಬರ್ ಕಪ್ ಮತ್ತು  ಥಾಮಸ್ ಕಪ್ ಪಂದ್ಯಾವಳಿಗಳು ಅತ್ಯಂತ ಮಹತ್ವಪೂರ್ಣವಾಗಿವೆ.  ಈ  ಎರಡೂ ಪಂದ್ಯಾವಳಿಗಳು,  ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (BWF) ಸದಸ್ಯ ರಾಷ್ಟ್ರಗಳನ್ನು ಪ್ರತಿನಿಧಿಸುವ ತಂಡಗಳ ನಡುವಿನ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಸ್ಪರ್ಧೆಯಾಗಿದ್ದು ಪ್ರತೀ ಎರಡು ವರ್ಷಗಳಿಗೊಮ್ಮೆ ಪಂದ್ಯಾವಳಿಗಳನ್ನು ನಡೆಸಲಾಗುತ್ತಿದೆ.

george_thomas1900 ರ ದಶಕದ ಆರಂಭದಲ್ಲಿ ಅತ್ಯಂತ ಯಶಸ್ವಿ ಇಂಗ್ಲಿಷ್ ಬ್ಯಾಡ್ಮಿಂಟನ್ ಆಟಗಾರರಾಗಿದ್ದ ಸರ್ ಜಾರ್ಜ್ ಅಲನ್ ಥಾಮಸ್ ಅವರು ಟೆನ್ನಿಸ್‌ನ ಡೇವಿಸ್ ಕಪ್ ಮತ್ತು 1930ರಿಂದ  ಆರಂಭವಾದ ಫುಟ್‌ಬಾಲ್‌ನ  ವಿಶ್ವಕಪ್‌ನಿಂದ ಪ್ರೇರಿತರಾಗಿ ಬ್ಯಾಡ್ಮಿಂಟನ್ನಿನಲ್ಲಿಯೂ  ಅದೇ ರೀತಿಯ ಪಂದ್ಯಾವಳಿಯನ್ನು ನಡೆಸುವ ಇಚ್ಚೆಯಿಂದ ಮೊದಲ ಪಂದ್ಯಾವಳಿಯನ್ನು ಮೂಲತಃ 1941-1942 ಕ್ಕೆ ಯೋಜಿಸಲಾಗಿತ್ತಾದರೂ 2ನೇ ವಿಶ್ವ ಸಮರದಿಂದಾಗಿ ವಿಳಂಬವಾಗಿ 1948-1949 ರಲ್ಲಿ  ಮೊದಲ ಥಾಮಸ್ ಕಪ್ ಸ್ಪರ್ಧೆ ನಡೆದು ಅದರಲ್ಲಿ ಹತ್ತು ರಾಷ್ಟ್ರೀಯ ತಂಡಗಳು ಭಾಗವಹಿಸುವ ಮೂಲಕ ಸರ್ ಜಾರ್ಜ್ ಅವರ ಕನಸು ನನಸಾಯಿತು. ಈ ಪಂದ್ಯಾವಳಿಯನ್ನು ಅಧಿಕೃತವಾಗಿ ಇಂಟರ್ನ್ಯಾಷನಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಚಾಲೆಂಜ್ ಕಪ್ ಎಂದು ಕರೆಯಲಾಗುತ್ತದೆ. 8 ಇಂಚು ಎತ್ತರ ಮತ್ತು 16 ಇಂಚು ಅಗಲ ಹೊಂದಿರುವ ಒಂದು ಪೀಠ, ಅದರ ಮೇಲೆ ಕಪ್ ಮತ್ತದರ ಮೇಲೆ ಮುಚ್ಚಳ ಈ ರೀತಿ ಮೂರು ಭಾಗಗಳನ್ನು ಹೊಂದಿರುವ ಈ ಪಂದ್ಯವಳಿಯ ಪ್ರಶಸ್ತಿ  ಕಪ್ ನ್ನು  ಲಂಡನ್‌ನ ಅಟ್ಕಿನ್ ಬ್ರದರ್ಸ್ US$40,000 ವೆಚ್ಚದಲ್ಲಿ ನಿರ್ಮಿಸಿದ್ದಾರೆ

thimascup1948-1949 ರಿಂದ ಇದುವರೆವಿಗೂ ನಡೆದಿರುವ 30 ಥಾಮಸ್ ಕಪ್ ಪಂದ್ಯಾವಳಿಗಳಲ್ಲಿ, ಕೇವಲ 6 ದೇಶಗಳು ಮಾತ್ರ ಪ್ರಶಸ್ತಿಯನ್ನು ಗೆದ್ದಿದ್ದು 14 ಬಾರಿ ಪ್ರಶಸ್ತಿಯನ್ನು ಇಂಡೋನೇಷ್ಯಾ ದೇಶವೇ ಗೆಲ್ಲುವ ಮೂಲಕ ಧಾಮಸ್ ಕಪ್ಪಿನ ಅತ್ಯಂತ ಯಶಸ್ವಿ ತಂಡವಾಗಿದ್ದರೆ, 1982ರಿಂದ ಸ್ಪರ್ಥೆಯಲ್ಲಿ ಭಾಗವಹಿಸುತ್ತಿರುವ ಚೀನಾ, 10 ಬಾರಿ ಮತ್ತು ಮಲೇಷ್ಯಾ 5 ಬಾರಿ ಈ ಪ್ರಶಸ್ತಿಯನ್ನು ಅಲಂಕರಿಸಿವೆ. 2014 ರಲ್ಲಿ  ಜಪಾನ್ ದೇಶ ಒಮ್ಮೆ ಥಾಮಸ್ ಕಪ್ ಗೆದ್ದರೆ, 2016 ರಲ್ಲಿ  ಡೆನ್ಮಾರ್ಕ್ ಥಾಮಸ್ ಕಪ್ ಅನ್ನು ಗೆದ್ದ ಮೊದಲ ಯುರೋಪಿಯನ್  ದೇಶವಾಗಿತ್ತು. ಈಗ 2022 ರ ಆವೃತ್ತಿಯಲ್ಲಿ ಪ್ರಭಲ ಇಂಡೋನೇಷ್ಯಾವನ್ನು 3-0 ಅಂತರದಿಂದ ಸೋಲಿಸುವ ಮೂಲಕ  ಭಾರತವು ಚೊಚ್ಚಲಬಾರಿಗೆ ಧಾಮಸ್ ಕಪ್ ಗೆಲ್ಲುವ ಮೂಲಕ ಧಾಮಸ್ ಕಪ್ ಗೆದ್ದ 6ನೇ ರಾಷ್ಟವಾಗಿ ಹೊರಹೊಮ್ಮಿದೆ.

ಕಿಡಂಬಿ ಶ್ರೀಕಾಂತ್ ನೇತೃತ್ವದಲ್ಲಿ ಎಚ್.ಎಸ್. ಪ್ರಣಯ್ ಸಿಂಗಲ್ಸ್ ಮತ್ತು  ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ, ಚಿರಾಗ್ ಶೆಟ್ಟಿ ಡಬಲ್ಸ್ ಜೋಡಿಯಾಗಿ 8 ಮೇ 2022ರಂದು ಜರ್ಮನಿಯನ್ನು 5-0 ಅಂತರದಿಂದ ಸೋಲಿಸುವ ಮೂಲಕ ಪಂದ್ಯಾವಳಿಯಲ್ಲಿ ಶುಭಾರಂಭವನ್ನು ಪಡೆದು, ನಂತರ  9 ಮೇ 2022 ರಂದು ಕೆನಡಾ ದ ವಿರುದ್ಧ  5-0 ಅಂತರದಿಂದ ಗೆದ್ದರೆ, 11ನೇ ಮೇ 2022ದಲ್ಲಿ ನಡೆದ ತನ್ನ ಗುಂಪಿನ ಹಂತದದ ಅಂತಿಮ ಪಂದ್ಯದಲ್ಲಿ  ಚೈನೀಸ್ ತೈಪೆಯ  ವಿರುದ್ಧ 2-3 ಅಂತರದಿಂದ ಸೋತರೂ, ಕ್ವಾರ್ಟರ್-ಫೈನಲ್ ತಲುಪಿತು. ಅಲ್ಲಿಂದ ಮುಂದೆ ನಡೆದ್ದಲ್ಲೆವೂ ಇತಿಹಾಸವಾಗಿ ಮಾರ್ಪಟ್ಟಿತು.

ಕ್ವಾಟರ್ ಫೈನಲ್ಸಿನಲ್ಲಿ ಮಲೇಷ್ಯಾವನ್ನು 3-2 ಅಂತರದಿಂದ ಸೋಲಿಸುವ ಮೂಲಕ 43 ವರ್ಷಗಳ ಹಿಂದೆ 1979ರಲ್ಲಿ ಕಡೆಯಬಾರಿಗೆ ಸೆಮಿಫೈನಲ್ಸ್ ಪ್ರವೇಶಿಸಿದ್ದ ಭಾರತ ನಾಲ್ಕನೇ ಬಾರಿಗೆ  ಸೆಮಿಫೈನಲ್ಸ್  ಪ್ರವೇಶಿಸಿ ಕನಿಷ್ಠ ಪಕ್ಷ  ಕಂಚಿನ ಪದಕವನ್ನು ಖಚಿತಪಡಿಸಿತು ಎಂದೇ ಎಲ್ಲರೂ ಭಾವಿಸಿದ್ದಂತೂ ಸುಳ್ಳಲ್ಲ.

ಮೇ 13, ಶುಕ್ರವಾರ ಸಂಜೆಯಲ್ಲಿ ನಡೆದ ಸೆಮೀಸ್ ನಲ್ಲಿ ಪ್ರಭಲ ಡೆನ್ಮಾರ್ಕ್ ಅನ್ನು 3-2 ಅಂತರದಿಂದ ಸೋಲಿಸಿ  73 ವರ್ಷಗಳ ನಂತರ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ ಭಾರತ, ಅದಾಗಲೇ 14 ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ಇಂಡೋನೇಷ್ಯಾ ವಿರುದ್ದ ಗೆಲ್ಲುವುದು ಗಗನಕುಸುಮವೇ ಎಂದು ಭಾವಿಸಿ ಕನಿಷ್ಠ ಪಕ್ಷ ಬೆಳ್ಳಿಯ ಪದಕವಾದರೂ  ಸಿಗುತ್ತದೆ ಎಂದು ಭಾವಿಸಿದ್ದರೂ ಏನಾದರೂ ಚಮತ್ಕಾರ ಸಂಭವಿಸಿ ಭಾರತದ ಮಡಿಲಿಗೆ ಚಿನ್ನವೇರಬಹುದೇ ಎಂಬ ಆಶಯ ಸಕಲ ಭಾರತೀಯರದ್ದಾಗಿತ್ತು.

ತಾನೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವ ದೈವ ಸಂಕಲ್ಪದಂತೆ ಮತ್ತು ಸಕಲ ಭಾರತೀಯ ಶುಭ ಹಾರೈಕೆಗಳಿಂದ  ಮೇ 15 2022, ಭಾನುವಾರ ಸಂಜೆ  ಇಂಡೋನೇಷ್ಯಾದ ವಿರುದ್ದ  ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಲಕ್ಷ್ಯ ಸೇನ್,  ಆಂಥೋನಿ ಗಿಂಟಿಂಗ್ ಅವರನ್ನು ಸೋಲಿಸಿ  1-0 ಮುನ್ನಡೆಯನ್ನು ದೊರಕಿಸಿಕೊಟ್ಟರೆ, ನಂತರ ನಡೆದ ಡಬಲ್ಸ್ ಪಂದ್ಯಾವಳಿಯಲ್ಲಿ  ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ, ಮೊಹಮ್ಮದ್ ಅಹ್ಸಾನ್ ಮತ್ತು ಕೆವಿನ್ ಸುಕಮುಲ್ಜೊ ಅವರನ್ನು ಸೋಲಿಸುವ ಮೂಲಕ 2-0 ಮುನ್ನಡೆಯನ್ನು ದೊರಕಿಸಿಕೊಟ್ಟಾಗ ಭಾರತೀಯ ಹರ್ಷೋಧ್ಘಾರ ಮುಗಿಲು ಮುಟ್ಟಿತ್ತು.

ನಿರ್ಣಾಯಕ ಅಂತಿಮ ಪಂದ್ಯದಲ್ಲಿ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಮತ್ತು ವಿಶ್ವದ ಎಂಟನೇ ಶ್ರೇಯಾಂಕದ ಜೋನಾಥನ್ ಕ್ರಿಸ್ಟಿ ವಿರುದ್ಧ ಭಾರತ ತಂಡದ ನಾಯಕ ವಿಶ್ವದ 11 ನೇ ಶ್ರೇಯಾಂಕಿತ ಕಿಡಂಬಿ ಶ್ರೀಕಾಂತ್  ಮೊದಲ ಪಂದ್ಯವನ್ನು ಸುಲಭವಾಗಿ 21-15 ರಲ್ಲಿ ಮಣಿಸಿದರೂ, ಎರಡನೇ ಪಂದ್ಯ ಅತ್ಯಂತ ಹಣಾಹಣಿಯಿಂದ ಕೂಡಿ  ನೆರೆದಿದ್ದ ಮತ್ತು ಟಿವಿಯಲ್ಲಿ ಪಂದ್ಯವನ್ನು ವೀಕ್ಷಿಸುತ್ತಿದ್ದ ಎಲ್ಲರ ನರ ನಾಡಿಗಳನ್ನೂ ನಿಮಿರಿಸುವಂತೆ ಮಾಡಿ ಅಂತಿಮವಾಗಿ 23-21 ಅಂತರದಲ್ಲಿ 29ರ ಹರೆಯದ ಶ್ರೀಕಾಂತ್ ಕಿಡಾಂಬಿ ಪಂದ್ಯವನ್ನು ಗೆಲ್ಲುವ ಮೂಲಕ  ಥಾಮಸ್ ಕಪ್ ಪುರುಷರ ಟೀಮ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಬಾರಿಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಮೂಲಕ ಭಾರತದ ಕೀರ್ತಿಪತಾಕೆಯನ್ನು ವಿಶ್ವ ಮಟ್ಟದಲ್ಲಿ ಏರಿಸುವ ಮೂಲಕ ಇತಿಹಾಸವನ್ನು ನಿರ್ಮಿಸಿತು.

ಪ್ರಶಸ್ತಿಯನ್ನು ಮುಡಿಲಿಗೇರಿಸಿಕೊಂಡ ಸಂತಸದಲ್ಲಿ ನಾಯಕ  ಶ್ರೀಕಾಂತ್ ತಮ್ಮ ತಂಡದ ಆಟಗಾರರನ್ನು ವೈಯಕ್ತಿಕವಾಗಿ ಮತ್ತು ತಂಡವಾಗಿ ಅವರ ಪ್ರದರ್ಶನಕ್ಕಾಗಿ ಹೊಗಳಿದ್ದಲ್ಲದೇ, ಅವಶ್ಯಕವಾದಾಗ ಪ್ರತಿಯೊಬ್ಬರೂ ನಿಜವಾಗಿಯೂ ಹೆಜ್ಜೆ ಹಾಕಿದರು ಎಂದು ನಾನು ಭಾವಿಸುತ್ತೇನೆ. ಈ ಗೆಲುವು ಇಡೀ ತಂಡ, ಆಟಗಾರರು, ತರಬೇತುದಾರರು ಮತ್ತು ತಂಡವನ್ನು ಬೆಂಬಲ ಎಲ್ಲರಿಗೂ ಕ್ರೆಡಿಟ್ ಸಲ್ಲುತ್ತದೆ. ಚೊಚ್ಚಲ ಬಾರಿಗೆ ಥಾಮಸ್ ಕಪ್ ಗೆದ್ದ ತಂಡದ ಭಾಗವಾಗಿರುವುದು ಮತ್ತು ತಂಡದ ಗೆಲುವಿಗೆ ವಯಕ್ತಿಕವಾಗಿ ಕೊಡುಗೆ ನೀಡುವುದು ನನಗೆ ತುಂಬಾ ಸಂತೋಷವನ್ನು ನೀಡುತ್ತದೆ ಎಂದು ಹೇಳಿದರು.

ಭಾರತೀಯ ಬ್ಯಾಡ್ಮಿಂಟನ್ ತಂಡವು ಇತಿಹಾಸವನ್ನು ಬರೆದಿದೆ! ಭಾರತವು ಥಾಮಸ್ ಕಪ್ ಗೆಲ್ಲುವ ಮೂಲಕ ಇಡೀ ರಾಷ್ಟ್ರವು ಉತ್ಸುಕವಾಗಿದೆ! ನಮ್ಮ ನಿಪುಣ ತಂಡಕ್ಕೆ ಅಭಿನಂದನೆಗಳು ಮತ್ತು ಅವರ ಭವಿಷ್ಯದ ಪ್ರಯತ್ನಗಳಿಗಾಗಿ ಅವರಿಗೆ ಶುಭಾಶಯಗಳು. ಈ ಗೆಲುವು ಹಲವಾರು ಮುಂಬರುವ ಕ್ರೀಡಾಪಟುಗಳನ್ನು ಪ್ರೇರೇಪಿಸುತ್ತದೆ  ಎಂದು ಪ್ರಧಾನಿ ನರೇಂದ್ರ ಮೋದಿಯವರು ಅಭಿನಂದಿಸಿದರೆ, ದೇಶದ ಅನೇಕ ಕ್ರೀಡಾಪಟುಗಳು ಮತ್ತು ಗಣ್ಯರು ಸಹಾ ವಿಜಯೀ ತಂಡಕ್ಕೆ ಶುಭ ಕೋರಿದ್ದಾರೆ.

ಇದುವರೆವಿಗೂ ಭಾರತೀಯ ಶಟ್ಲರ್ಸ್ ಗಳು  ವೈಯಕ್ತಿಕವಾಗಿ ಚಾಂಪಿಯನ್‌ಗಳಾಗಿ ಹೊರಹೊಮ್ಮಿದ್ದರು ಮತ್ತು ತಂಡವಾಗಿ ಕೆಲವೊಂದು ಪದಗಳನ್ನು ಗೆದ್ದಿದ್ದರೂ, ವಿಶ್ವ ಕಪ್ ಎಂದೇ ಭಾವಿಸಲಾಗುವ ಥಾಮಸ್ ಕಪ್ ನಲ್ಲಿ ನಾವು ಗೆಲ್ತೀವೀ.. ನಾವು ಗೆಲ್ತೀವಿ… ನಾವು ಗೆದ್ದೇ ಗೆಲ್ತೀವೀ… ಒಂದು ದೀನಾ… ಎಂಬ ಹಾಡಿನಂತೆ ಮೊದಲ ಬಾರಿಗೆ ಥಾಮಸ್ ಕಪ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸುವ ಮೂಲಕ ಒಗ್ಗಟ್ಟಿನಲ್ಲಿ ಬಲವಿದೆ ಮತ್ತು ಛಲವಿದೆ ಎಂಬುದನ್ನು ಮತ್ತೊಮ್ಮೆ ಸಾಧಿಸಿ ತೋರಿಸಿದ  ಇಡೀ ತಂಡಕ್ಕೆ ನಮ್ಮ ನಿಮ್ಮೆಲ್ಲರ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸೋಣ.

ಥಾಮಸ್ ಕಪ್ ಮುಡಿಗೇರಿಸಿಕೊಳ್ಳುವ ಮೂಲಕ  ಭಾರತದಲ್ಲಿ ಕ್ರಿಕೆಟ್ ಹೊರತಾಗಿಯೂ ಇನ್ನೂ ಅನೇಕ ಕ್ರೀಡೆಗಳಿವೆ ಮತ್ತು ಆ ಕ್ರೀಡೆಗಳಲ್ಲಿಯೂ ನಮ್ಮ ಉದಯೋನ್ಮುಖ ಭಾರತೀಯರು ಮಿಂಚುತ್ತಿರುವ ಕಾರಣ ಅವರನ್ನೂ ಹೃದಯಪೂರ್ವಕವಾಗಿ ಬೆಂಬಲಿಸುವ ಮೂಲಕ ಭಾರತದ ಕೀರ್ತಿಪತಾಕೆ ವಿಶ್ವಾದಂತ ಹಾರಾಡುವಂತೆ ಮಾಡುವ ಜವಾಬ್ಧಾರಿ ನಮ್ಮ ನಿಮ್ಮೆಲ್ಲರದ್ದೇ ಆಗಿದೆ ಅಲ್ವೇ?

ಬೋಲೋ……….. ಭಾರತ್ ಮಾತಾಕೀ… ಜೈ….. ಜೈ ಹಿಂದ್ !

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s