ಶ್ರೀ ಉಗ್ರ ನರಸಿಂಹ ಸ್ವಾಮಿಯ ಕೋಪ ಶಮನ ಮಾಡಿದ ಶ್ರೀ ಶರಭೇಶ್ವರ

ಅಸುರರ ರಾಜ ಹಿರಣ್ಯಾಕ್ಷ ಭೂಲೋಕ, ಅತಳ, ವಿತಳ, ಸುತಳ, ಮಾಹಾತಳ, ಸಚಾತಳ, ತಳಾತಳ, ಪಾತಾಳ ಲೋಕದಲ್ಲೆಲ್ಲಾ, ತನ್ನ ರಾಕ್ಷಸೀ ಕೃತ್ಯಗಳಿಂದ ಕಂಟಕ ಪ್ರಾಯನಾಗಿ ನಾನಾ ರೀತಿಯ ಉಪಟಳಗಳನ್ನು ಕೊಡುತ್ತಿದ್ದಾಗ ದೇವಾನು ದೇವತೆಗಳ ಕೋರಿಕೆಯಂತೆ ಭಗವಾನ್ ವಿಷ್ಣು ತನ್ನ ದಶಾವತರದ ಮೂರನೇ ರೂಪವಾದ ವರಾಹ ರೂಪದಲ್ಲಿ ಸಂಹರಿಸಿದಾಗ, ಅವನ ತಮ್ಮ ಹಿರಣ್ಯಕಶಿಪುವು, ಕೋಪೋದ್ರಕ್ತನಾಗಿ ವಿಷ್ಣುವಿನ ಪರಮ ವೈರಿಯಾಗಿ, ಋಷಿ ಮುನಿಗಳ ಯಜ್ಞಯಾಗಾದಿಗಳಿಗೆ ಮತ್ತು ಭೂಲೋಕ ವಾಸಿಗಳಿಗೆ ನಾನಾ ರೀತಿಯ ತೊಂದರೆಗಳನ್ನು ಕೊಡಲು ಆರಂಭಿಸಿದ್ದಲ್ಲದೇ, ತನಗೆ ಸಾವೇ ಬಾರದಂತೆ ಅಮರನಾಗಬೇಕೆಂಬ ಆಸೆಯಿಂದಾಗಿ ಬ್ರಹ್ಮ ದೇವನನ್ನು ಕುರಿತು ತಪಸ್ಸು ಮಾಡಿ ತನಗೆ ಯಾವುದೇ ಮಾನವ ಜೀವಿ, ದೇವತೆ ಅಥವಾ ಪ್ರಾಣಿಗಳಿಂದ ಸಾವು ಬರಬಾರದು ಹಗಲು ಅಥವಾ ರಾತ್ರಿಯಲ್ಲಿ ಆಕಾಶ ಮತ್ತು ಭೂಮಿಯಲ್ಲಿ, ಮನೆಯ ಒಳಗೆ ಆಥವಾ ಹೊರಗೆ, ಯಾವುದೇ ಅಸ್ತ್ರದಿಂದಲೂ ಸಾವಾಗಬಾರದು ಎಂಬ ವಿಚಿತ್ರವಾದ ವರವನ್ನು ಪಡೆಯುತ್ತಾನೆ.

ugraಅಂತಹ ಅಭೂತ ಪೂರ್ವವಾದ ವರವನ್ನು ಪಡೆದ ಹಿರಣ್ಯಕಶಿಪು ತಾನು ಚಿರಂಜೀವಿ ತನಗೆ ಸಾವೇ ಇಲ್ಲ ಎಂಬ ಭ್ರಮೆಯಲ್ಲಿ ವಿಶ್ವದ ಮೇಲೆ ತನ್ನ ಅಧಿಪತ್ಯವನ್ನು ಸಾರಲು ಹೊರಡುತ್ತಾನೆ. ಇಡೀ ಭೂಮಿಯಲ್ಲಿ ದೇವರು ಎಂಬುವರೇ ಇಲ್ಲ. ಇಲ್ಲಿ ನಾನೇ ದೇವರು. ಇನ್ನು ಮುಂದೆ ಎಲ್ಲರೂ ತನ್ನನ್ನೇ ದೇವರು ಎಂದು ಪೂಜಿಸಬೇಕು ಹಾಗೆ ಪೂಜಿಸದವರಿಗೆ ಕಠಿಣ ರೀತಿಯಲ್ಲಿ ಶಿಕ್ಷೆಗೆ ಗುರಿಪಡಿಸುತ್ತಿರುವಾಗ ಅವನ ಮಗ ವಿಷ್ಣುವಿನ ಪರಮ ಭಕ್ತ ಪ್ರಹ್ಲಾದನೊಂದಿಗಿನ ವಾಗ್ವಾದದಲ್ಲಿ ನಿನ್ನ ಹರಿ ಎಲ್ಲಿರುವನು? ಎಂದು ಅಲ್ಲಿದ್ದ ಕಂಬವೊಂದಕ್ಕೆ ಕೋಪೋದ್ರಿತನಾಗಿ ತನ್ನ ಗಧೆಯಿಂದ ಹೊಡೆದಾಗ ಆ ಸೀಳಿದ ಕಂಬದಿಂದ ಅರ್ಧ ನರ, ಮತ್ತರ್ಧ ಸಿಂಹದ ರೂಪದ ನರಸಿಂಹ ಉಗ್ರ ಸ್ವರೂಪನಾಗಿ ಹೊರಬಂದು ಹಿರಣ್ಯಷಿಪುವಿನೊಂದಿಗೆ ಹೋರಾಡಿ, ಅವನನ್ನು ಎಳೆದು ಕೊಂಡು ಅತ್ತ ಹಗಲೂ ಅಲ್ಲದ ಇರುಳೂ ಅಲ್ಲದ ಗೋಧೂಳೀ ಸಮಯದಲ್ಲಿ ಮನೆಯ ಹೊರಗೂ ಅಲ್ಲದ, ಒಳಗೂ ಅಲ್ಲದ ಹೊಸಿಲಿನ ಮೇಲೆ ನಿಂತು, ಆಕಾಶವೂ ಅಲ್ಲದ, ಭೂಮಿಯೂ ಅಲ್ಲದೆ ಮಧ್ಯದಲ್ಲಿ ತನ್ನ ತೊಡೆಯ ಮೇಲೆ ಹಿರಣ್ಯಕಷುಪಿವಿನನ್ನು ಮಲಗಿಸಿಕೊಂಡು ಯಾವುದೇ ಆಯುಧವಿಲ್ಲದೇ ತನ್ನ ಉಗುರುಗಳಿಂದಲೇ ಆತನ ಹೊಟ್ಟೆಯನ್ನು ಬಗೆದು ಹಿರಣ್ಯಕಷುಪುವಿವನ್ನು ಸಂಹರಿಸಿರುವ ಕಥೆ ತಿಳಿದೇ ಇದೆ.

shb4ಹಾಗೆ ಕೋಪೋದ್ರಿಕ್ತನಾಗಿಯೇ ಹಿರಣ್ಯಕಷಪುವಿನ ಸಿಂಹಾಸನದಲ್ಲಿಯೇ ಆಸೀನನಾಗಿದ್ದ ಉಗ್ರ ನರಸಿಂಹನ ಕೋಪವನ್ನು ಶಮನಗೊಳಿಸಲು ಅವನ ತೊಡೆಯ ಮೇಲೆ ಆತನ ಧರ್ಮ ಪತ್ನಿ ಲಕ್ಷ್ಮಿಯನ್ನು ಕೂರಿಸಿ ಉಗ್ರ ನರಸಿಂಹನ ಕೋಪವನ್ನು ತಣಿಸಲು ದೇವಾನುದೇವತೆಗಳೆಲ್ಲಾಪ್ರಯತ್ನಿಸುತ್ತಾರಾದರೂ, ನಾರಸಿಂಹನ ಅವತಾರದ ಉಗ್ರತ್ವ ಕಡಿಮೆಯಾಗುವುದಿಲ್ಲ. ಇದರಿಂದ ಆತಂಕಗೊಂಡ ದೇವತೆಗಳು ನೃಸಿಂಹನ ಉಗ್ರತ್ವವನ್ನು ಕಡಿಮೆ ಮಾಡಿ ವಿಷ್ಣುವಿನ ಶಾಂತತೆಯನ್ನು ಮರಳಿಸಲು ಸಮುದ್ರಮಂಥನದ ಸಮಯದಲ್ಲಿ ಹಾಲಾಹಲವನ್ನು ಕುಡಿದು ಲೋಕವನ್ನೇ ರಕ್ಷಿಸಿದ್ದ ಶಿವನನ್ನು ಪ್ರಾರ್ಥಿಸುತ್ತಾರೆ. ಆಗ ಶಿವ ಲಯಕಾರಕ ಆದಿ ಇದ್ದ ಮೇಲೆ ಅಂತ್ಯವೂ ಇರಲೇ ಬೇಕೆಂಬ ನಿಯಮದಂತೆ ನರಸಿಂಹನ ಉಗ್ರತೆಯನ್ನು ಅಂತ್ಯಗೊಳಿಸಲು  ಶರಭೇಶ್ವರನಾಗಿ ಅವತರಿಸುತ್ತಾನೆ.

shab3ನರಸಿಂಹ ಅವತಾರದಲ್ಲಿ ವಿಷ್ಣು ಅರ್ಧ ನರ ಮತ್ತು ಮತ್ತರ್ಧ ಪ್ರಾಣಿಯ ರೂಪವಾದ ಸಿಂಹಾವತಾರಿಯಾಗಿ ಭೀಕರವಾಗಿ ಕಾಣಿಸಿಕೊಂಡರೆ, ಅದಕ್ಕಿಂತಲೂ ಭೀಕರವಾಗಿ ಮನುಷ್ಯ, ಪ್ರಾಣಿ, ಗರುಡ ಇವೆಲ್ಲವೂ ಸಮ್ಮಿಳಿತವಾದ ಶರಭೇಶ್ವರ ಅವತಾರದಲ್ಲಿ ಶಿವ ಪ್ರತ್ಯಕ್ಷನಾಗುವ ಮೂಲಕ ನರಸಿಂಹನ ಆರ್ಭಟವನ್ನು ತಗ್ಗಿಸುತ್ತಾನೆ ಎನ್ನುವ ಕಥೆ ಪುರಾಣದಲ್ಲಿ ಕಂಡು ಬರುತ್ತದೆ.

shab5ಪರಶಿವನ ಶರಭೇಶ್ವರ ಅವತಾರದಲ್ಲಿ ಸಿಂಹ, ಮನುಷ್ಯ ಮತ್ತು ಗರುಡಗಳ ಸಂಯುಕ್ತ ರೂಪದಲಿ ಎರಡು ರೆಕ್ಕೆ ನಾಲ್ಕು ಕೈ ಹಾಗೂ ಎಂಟು ಕಾಲುಗಳುಳ್ಳ ಉಗ್ರರೂಪ ತಾಳುತ್ತಾನೆ. ಹಿರಣ್ಯಕಶಿಪುವನ್ನು ವಧಿಸಿದ ನಂತರ ಆ ರಾಕ್ಷಸನ ರಕ್ತವು ನರಸಿಂಹನ ಮೈಮೇಲೆಲ್ಲ ಹರಡಿತ್ತಲ್ಲದೇ, ಆ ರಕ್ತದ ಹನಿಗಳು ಭೂಮಿಗೆ ಬಿದ್ದರೆ ಅವಿನಾಶಿ ರಾಕ್ಷಸರು ಜನ್ಮ ತಳೆಯಬಹುದಾದ ಪರಿಸ್ಥಿತಿ ಇದ್ದ ಕಾರಣ, ಶರಭ ರೂಪ ಮಹಾಶಿವ, ನರಸಿಂಹನನ್ನು ಗುರುತ್ವ ಕೇಂದ್ರದಿಂದ ಮೇಲೆ ಕರೆದೊಯ್ದು ಅವನ ಮೈಮೇಲಿರುವ ಎಲ್ಲ ರಕ್ತದ ಹನಿಗಳು ಆವಿಯಾಗುವಂತೆ ಮಾಡಿ, ನರಸಿಂಹನ ಕೋಪವನ್ನೆಲ್ಲಾ ತಣಿಸಿ ಆತನನ್ನು ಪ್ರಸನ್ನಚಿತ್ತನಾಗಿಸುತ್ತಾನೆ. ಇದರಿಂದ ಸಂತೃಷ್ಟರಾದ ಸಕಲ ದೇವಾನುದೇವತೆಗಳು ಮತ್ತು ವಿಷ್ಣು ಆದಿಯಾಗಿ ಎಲ್ಲರೂ ಆ ಪರಶಿವನಿಗೆ ಅತ್ಯಂತ ಶ್ರದ್ಥಾಭಕ್ತಿಗಳಿಂದ ಗೌರವಾದರಗಳನ್ನು ಸಲ್ಲಿಸುತ್ತಾರೆ.

sharb1ದೇಶಾದ್ಯಂತ ಸಾವಿರಾರು ನರಸಿಂಹ ದೇವರ ದೇವಾಲಯಗಳನ್ನು ಕಾಣಬಹುದಾದರೂ ಶರಭೇಶ್ವರ ದೇವಸ್ಥಾನಗಳ ಸಂಖ್ಯೆ ಅತ್ಯಂತ ವಿರಳವಾಗಿದೆ. ಅಂತಹದ್ದರಲ್ಲಿ ತಮಿಳುನಾಡಿನ ತಂಜಾವೂರು ಜಿಲ್ಲೆಯ ತಿರುವಿಡೈಮರಡೂರು ತಾಲೂಕಿನ ತಿರುಭುವನಂ ಗ್ರಾಮದಲ್ಲಿರುವ ಮೈಲಾಡುತುರೈ-ಕುಂಭಕೋಣಂ ರಸ್ತೆಯಲ್ಲಿರುವ ಕಂಪಾಹರೇಶ್ವರ ದೇವಾಲಯ ಎಂದೂ ಕರೆಯಲ್ಪಡುವ ಶರಭೇಶ್ವರನ ದೇವಸ್ಥಾನ ಅತ್ಯಂತ ಪ್ರಸಿದ್ಧವಾಗಿದೆ.

ಈ ದೇವಾಲಯದ ಸ್ಥಾಪನೆಯ ಹಿಂದೆಯೂ ಒಂದು ರೋಚಕವಾದ ಕಥೆ ಇದ್ದು, ಅದೊಮ್ಮೆ ಸ್ಥಳೀಯ ವರಗುಣ ಪಾಂಡಿಯನ್ ಎಂಬ ರಾಜ ತನ್ನ ಶತ್ರುಗಳನ್ನು ಸದೆ ಬಡಿಯಲೆಂದು ವೇಗವಾಗಿ ಮತ್ತು ಅಷ್ಟೇ ವ್ಯಾಘ್ರನಾಗಿ ತನ್ನ ಕುದುರೆಯ ಮೇಲೆ ತೆರಳುತ್ತಿದ್ದ ಸಮಯದಲ್ಲಿ ಅಕಸ್ಮಾತಾಗಿ ಅವನ ಹಾದಿಗೆ ಅಡ್ಡಬಂದ ಬ್ರಾಹ್ಮಣನೊಬ್ಬನೊಂದಿಗೆ ಅಪಘಾತ ಸಂಭವಿಸಿ ಬ್ರಾಹ್ಮಣ ಸ್ಥಳದಲ್ಲಿಯೇ ತೀರಿಕೊಂಡಾಗ ಆ ರಾಜನಿಗೆ ಬ್ರಾಹ್ಮಣ ಹತ್ಯಾ ದೋಷ ಉಂಟಾಗುತ್ತದೆ.

ಈ ರೀತಿಯಾಗಿ ಬ್ರಾಹ್ಮಣ ಹತ್ಯಾ ದೋಷದಿಂದಾಗಿ ಅಗ್ಗಿಂದ್ದಾಗೆ ರಾಜನ ಕೈ ಕಾಲುಗಳು ಕಂಪಿಸತೊಡಗುತ್ತದೆ. ಈ ರೋಗದಿಂದ ಮುಕ್ತವಾಗಲೂ ಪಡೆದ ನಾನಾ ರೀತಿಯ ಔಷಧೋಪಚಾರಗಳು ನೆರವಿಗೆ ಬಾರದೇ ಚಿಂತಿತನಾದ ರಾಜ, ಅಂತಿಮವಾಗಿ ಮಹಾಶಿವನ ಮೊರೆ ಹೊಕ್ಕು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಆರಾಧಿಸಿದ ಕಾರಣ, ಆ ಶಿವನನ ಕೃಪಾಶೀರ್ವಾದದಿಂದ ಕೆಲವೇ ದಿನಗಳಲ್ಲಿ ರಾಜನ ನಡುಕ ಸಂಪೂರ್ಣವಾಗಿ ನಿಂತು ಹೋಗುತ್ತದೆ.

sharb2ಹಾಗೆ ತನ್ನ ಕಂಪನ ರೋಗವನ್ನು ನಾಶಪಡಿಸಿದ ನೆನಪಿನಾರ್ಥ ರಾಜನು ಅಲ್ಲೊಂದು ಭವ್ಯವಾದ ದೇವಾಲಯವನ್ನು ನಿರ್ಮಿಸಿ ಅದಕ್ಕೆ ಕಂಪಾಹರೇಶ್ವರ ದೇವಾಲಯ ಎಂದು ಹೆಸರಿಸುತ್ತಾನೆ. ಯಾರು ಮಾನಸಿಕವಾಗಿ ಭಯದಿಂದ ಇಲ್ಲವೇ ತೊಳಲಾಟಗಳಿಂದ ಬಳಲುತ್ತಾರೋ ಅಂತಹವರು ಈ ಶಿವನ ದೇವಾಲಯಕ್ಕೆ ಭಕ್ತಿಯಿಂದ ಪೂಜಿಸಿದರೆ ಅವರ ಎಲ್ಲ ಭಯ ನಿವಾರಣೆಯಾಗುತ್ತದೆಂದು ಇಲ್ಲಿನ ಸಕಲ ಭಕ್ತರ ನಂಬಿಕೆಯಾಗಿದೆ. ಇದೇ ದೇವಾಲಯದಲ್ಲಿ ಕಂಪಾಹರೇಶ್ವರನ ಜೊತೆಯಲ್ಲಿಯೇ ಶರಭೇಶ್ವರನ ಸನ್ನಿಧಿಯೂ ಇದ್ದು ಸುಮಾರು ಏಳು ಅಡಿಗಳಷ್ಟು ಎತ್ತರದ ವಿಗ್ರಹ ಹೊಂದಿರುವ ಈ ಶರಭೇಶ್ವರನನ್ನು ಪೂಜಿಸಿದರೆ ಶಿವ, ವಿಷ್ಣು, ಪ್ರತ್ಯಂಗಿರಾ ದೇವಿ ಹಾಗೂ ದುರ್ಗೆ ಈ ನಾಲ್ಕು ಶಕ್ತಿಗಳನ್ನು ಪೂಜಿಸುವಷ್ಟರ ಫಲ ಪ್ರಾಪ್ತಿಯಾಗುತ್ತದೆ ಎನ್ನುವ ಕಾರಣ ದೇಶ ವಿದೇಶಗಳಿಂದ ಸಾವಿರಾರು ಭಕ್ತಾದಿಗಳು ಈ ದೇವಾಲಯಕ್ಕೆ ಬಂದು ಕಂಪಾಹರೇಶ್ವರನ ಜೊಗೆಗೆ ಶರಭೇಶ್ವರನ ದರ್ಶನವನ್ನು ಪಡೆದು ಕೃಪಾರ್ಥರಾಗುತ್ತಾರೆ.

ಹಿರಣ್ಯಕಶಿಪು ಪರಮ ಶಿವ ಭಕ್ತನಾಗಿದ್ದರೂ, ತನ್ನ ಅಹಂಕಾರದಿಂದ, ತನ್ನ ರಾಕ್ಷಸೀ ಗುಣಗಳಿಂದ ಪ್ರಜಾಪೀಡಕನಾಗಿ, ದೈವ ನಿಂದಕನಾಗಿದ್ದ ಕಾರಣ ದುಷ್ಟರ ಶಿಕ್ಷೆ, ಶಿಷ್ಟರ ರಕ್ಷೆ ಎಂಬ ತತ್ವದಡಿಯಲ್ಲಿ ಯಾವುದೇ ತಾರತಮ್ಯ ತೋರದೆ ಶಿಕ್ಷೆಗೆ ಗುರಿಪಡಿಸಿದ್ದು ಸದಾಕಾಲವೂ ತಮ್ಮವರ ಪರವಹಿಸಿಕೊಂಡು ಅವರು ಮಾಡುವ ತಪ್ಪುಗಳನ್ನು ಮುಚ್ಚಿಹಾಕಲು ಪ್ರಯತ್ನಿಸುವ ಇಂದಿನವರಿಗೆ ಮಾದರಿ ಆಗಬಹುದಲ್ಲವೇ? ಅದೇ ರೀತಿ ತಾನೇ ಹೆಚ್ಚು ತನ್ನನ್ನು ಬಿಟ್ಟರೆ ಮತ್ತೊಬ್ಬರಿಲ್ಲಾ ಎಂದು ಅಹಂಕಾರದಿಂದ ಮೆರೆಯುವರಿಗೆ ಸದಾಕಾಲವೂ ನಮಗಿಂತಲೂ ದೊಡ್ಡ ಮತ್ತೊಂದು ಶಕ್ತಿ ಇದ್ದೇ ಇರುತ್ತದೆ. ಅಷ್ಟೇ ಅಲ್ಲದೇ ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದ್ದು ಶಾಂತ ಚಿತ್ತದಿಂದ ಎಂತಹಾ ಸಮಸ್ಯೆಯನ್ನಾದರೂ ಪರಿಹರಿಸಿಕೊಳ್ಳಲು ಸಾಧ್ಯ ಎಂಬುದಕ್ಕಿ ಈ ಪ್ರಸಂಗ ಜ್ವಲಂತ ಸಾಕ್ಷಿಯಾಗಿದೆ.

ಇಷ್ಟೆಲ್ಲಾ ಮಾಹಿತಿಗಳನ್ನು ತಿಳಿದ ಮೇಲೆ ಇನ್ನೇಕೆ ತಡಾ. ಮುಂದೆ ಸ್ವಲ್ಪ ಸಮಯ ಮಾಡಿಕೊಂಡು ಆ ಶ್ರೀ ಕ್ಷೇತ್ರಕ್ಕೆ ಹೋಗಿ ಶ್ರೀ ಶರಭೇಶ್ವರನ ದರ್ಶನ ಪಡೆದು ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚ್ಕೋತೀರೀ ತಾನೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s